Delhi Chalo ಕೃಷಿ ಕಾಯ್ದೆಗಳಿಗೆ ತಾತ್ಕಾಲಿಕ ತಡೆ ನೀಡಿ ಸಮಿತಿ ನೇಮಿಸಿದ ಸುಪ್ರೀಂ ಕೋರ್ಟ್; ಸಮಿತಿ ಸದಸ್ಯರ ಹಿನ್ನೆಲೆ ಏನು?
ಕೃಷಿ ಕಾಯ್ದೆಗಳಿಗೆ ತಾತ್ಕಾಲಿಕ ತಡೆ ನೀಡಿರುವ ಸುಪ್ರೀಂ ಕೋರ್ಟ್ ಒಂದು ನಿರ್ಧಾರ ತಳೆಯಲು ಸಮಿತಿ ರಚಿಸಿದೆ. ಹಾಗಾದರೆ, ಸಮಿತಿಯ ಸದಸ್ಯರಾರು? ಅವರು ಕೃಷಿ ಕಾಯ್ದೆಗಳ ಕುರಿತು ಈವರೆಗೆ ಏನೆಲ್ಲ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ? ಇಲ್ಲದೆ ವಿವರ...
ದೆಹಲಿ: ಕೃಷಿ ಕಾಯ್ದೆಗಳಿಗೆ ತಾತ್ಕಾಲಿಕವಾಗಿ ತಡೆ ನೀಡಿರುವ ಸುಪ್ರೀಂ ಕೋರ್ಟ್, ನಾಲ್ವರು ಸದಸ್ಯರ ಸಮಿತಿಯನ್ನು ರಚಿಸಿದೆ. ಆದರೆ ಆ ಸದಸ್ಯರ ಕುರಿತು ರೈತ ಸಂಘಟನೆಗಳು ಅಪಸ್ವರ ಎತ್ತಿವೆ. ಸಮಿತಿಯ ನಾಲ್ಕು ಸದಸ್ಯರು ಸಹ ಕೃಷಿ ಕಾಯ್ದೆಗಳ ಪರ ಒಲವುಳ್ಳವರೇ ಎಂಬುದು ಪಂಜಾಬ್ ರೈತರ ವಾದವಾಗಿದೆ.
ಕೃಷಿ ಕಾನೂನುಗಳು ಮತ್ತು ಸರ್ಕಾರದ ಅಭಿಪ್ರಾಯಗಳಿಗೆ ಸಂಬಂಧಿಸಿ ಶಿಫಾರಸುಗಳನ್ನು ಮಾಡಲು ಸುಪ್ರೀಂ ಕೋರ್ಟ್ ಈ ಸಮಿತಿಗೆ ಸೂಚಿಸಿದೆ. ಹಾಗಾದರೆ ಈ ಸಮಿತಿಯ ಸದಸ್ಯರು ಕೃಷಿ ಕಾಯ್ದೆಗಳ ಕುರಿತು ಈವರೆಗೆ ವ್ಯಕ್ತಪಡಿಸಿರುವ ಅಭಿಪ್ರಾಯಗಳ ಕುರಿತು ಚರ್ಚೆಯಾಗುತ್ತಿದೆ.
1. ಭಾರತೀಯ ಕಿಸಾನ್ ಯೂನಿಯನ್ ಅಧ್ಯಕ್ಷ ಮತ್ತು ಆಲ್ ಇಂಡಿಯಾ ಕಿಸಾನ್ ಕೋ ಆರ್ಡಿನೇಶನ್ ಸಮಿತಿಯ ಭೂಪೇಂದರ್ ಸಿಂಗ್ ಮನ್ ಕೇಂದ್ರ ಕೃಷಿ ಸಚಿವ ನರೇಂದ್ರ ಸಿಂಗ್ ತೋಮರ್ ಡಿಸೆಂಬರ್ನಲ್ಲಿ ಕೃಷಿ ಕಾಯ್ದೆಗಳ ಪರ ಒಲವು ಮೂಡಿಸಲು ರಚಿಸಿದ ಸಮಿತಿಯಲ್ಲಿ ಭೂಪೇಂದರ್ ಸಿಂಗ್ ಮನ್ ಸಹ ಇದ್ದರು. ಹೀಗಾಗಿ, ಅವರು ಕೃಷಿ ಕಾಯ್ದೆಗಳ ಪರ ಒಲವು ಹೊಂದಿದ್ದಾರೆ ಎಂದು ಹೇಳಲಾಗುತ್ತಿದೆ.
2. ಕೃಷಿ ಆರ್ಥಿಕ ತಜ್ಞ ಮತ್ತು ಕಮಿಶನ್ ಫಾರ್ ಅಗ್ರಿಕಲ್ಚರಲ್ ಕೋಸ್ಟ್ ಆ್ಯಂಡ್ ಪ್ರೈಸಸ್ನ ಮಾಜಿ ಅಧ್ಯಕ್ಷ ಅಶೋಕ್ ಗುಲಾಟಿ ಅಶೋಕ್ ಗುಲಾಟಿ 1999 ರಿಂದ 2001 ರವರೆಗೆ ಪ್ರಧಾನ ಮಂತ್ರಿಯವರ ಆರ್ಥಿಕ ಸಲಹಾ ಸಮಿತಿಯ ಸದಸ್ಯರಾಗಿಯೂ ಸೇವೆ ಸಲ್ಲಿಸಿದ್ದರು. ಅವರು ಈಗಾಗಲೇ ಮಾಧ್ಯಮಗಳಲ್ಲಿ ಕೃಷಿ ಕಾಯ್ದೆಗಳ ಪರ ಹೇಳಿಕೆ ನೀಡಿದ್ದಲ್ಲದೇ, ಲೇಖನಗಳನ್ನು ಬರೆದಿದ್ದಾರೆ ಎಂದು ರೈತ ಸಂಘಟನೆಗಳು ಹೇಳಿವೆ.
ಆಂಗ್ಲ ಪತ್ರಿಕೆ ಇಂಡಿಯನ್ ಎಕ್ಸ್ಪ್ರೆಸ್ನಲ್ಲಿ ‘Challenges to Farm Bills Harken Socialist Era, Attempt to undo Agriculture’ 1991 Moment ಮತ್ತು “We Need Laws that Give Farmers More Space to Sell Their Produce -New Farm Laws Fit This Bill” ಎಂಬ ಬರಹಗಳನ್ನು ಬರೆದಿದ್ದಾರೆ. ಜತೆಗೆ, ಖಾಸಗಿ ಆಂಗ್ಲ ಸುದ್ದಿ ವಾಹಿನಿಗೆ ಕೃಷಿ ಕಾಯ್ದೆಗಳ ಪರ ಹೇಳಿಕೆಯನ್ನೂ ನೀಡಿದ್ದಾರೆ.
3. ಶೇತ್ಕಾರಿ ಸಂಘಟನೆಯ ಅನಿಲ್ ಘಾನ್ವಾಟ್ ಮಹಾರಾಷ್ಟ್ರ ಮೂಲದ ಶೇತ್ಕಾರಿ ಸಂಘಟನೆ ನೂತನ ಕೃಷಿ ಕಾಯ್ದೆಗಳನ್ನು ಕೇಂದ್ರ ಸರ್ಕಾರ ಜಾರಿಗೊಳಿಸಲು ಪ್ರಯತ್ನಿಸಿದಾಗ ಸಂಭ್ರಮಿಸಿತ್ತು. ಅಲ್ಲದೇ ಖಾಸಗಿ ಆಂಗ್ಲ ಸುದ್ದಿವಾಹಿನಿಗೆ ಕೃಷಿಯಲ್ಲಿ ಗಮನಾರ್ಹ ಬದಲಾವಣೆ ಅಗತ್ಯವಿದ್ದು, ಕೃಷಿ ಕಾಯ್ದೆಗಳನ್ನು ಸಂಪೂರ್ಣ ರದ್ದುಗೊಳಿಸುವ ಅಗತ್ಯತೆಯಿಲ್ಲವೆಂದು ಅವರು ಹೆಳಿಕೆ ನೀಡಿದ್ದಾರೆ. ಕೃಷಿ ಕಾಯ್ದೆಗಳ ಕುರಿತು ತಪ್ಪು ಮಾಹಿತಿಯೇ ಪ್ರಸಾರವಾದ ಕಾರಣ, ಸ್ಪಷ್ಟವಾಗಿ ಸಂವಾದ ನಡೆಸಲು ಸಾಧ್ಯವಾಗಿಲ್ಲ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.
4. ಡಾ.ಪ್ರಮೋದ್ ಕುಮಾರ್ ಜೋಶಿ ಕೃಷಿ ಆರ್ಥಿಕ ತಜ್ಞ ಮತ್ತು ಸೌತ್ ಏಷಿಯಾ ಇಂಟರ್ನ್ಯಾಷನಲ್ ಫುಡ್ ಪಾಲಿಸಿ ರಿಸರ್ಚ್ ಇನ್ಸ್ಟಿಸ್ಟೂಟ್ನ ನಿರ್ದೇಶಕ ಡಾ.ಪ್ರಮೋದ್ ಕುಮಾರ್ ಜೋಶಿ. ಅವರು ಸಹ ಕೃಷಿ ಕಾಯ್ದೆಗಳ ಪರ ಅಭಿಪ್ರಾಯಗಳನ್ನು ಆಂಗ್ಲ ಪತ್ರಿಕೆಗಳಲ್ಲಿ ಪ್ರಕಟಿಸಿದ್ದಾರೆ ಎಂದು ಆಂಗ್ಲ ಖಾಸಗಿ ಸುದ್ದಿವಾಹಿನಿಯೊಂದು ವರದಿ ಮಾಡಿದೆ.
ಸರ್ವೋಚ್ಛ ನ್ಯಾಯಾಲಯ ನೇಮಿಸಿದ ಸಮಿತಿಯ ಸದಸ್ಯರು ಕೃಷಿ ಕಾಯ್ದೆಗಳ ಪರ ಒಲವುಳ್ಳವರು ಎಂಬ ಮಾತು ರೈತ ಸಂಘಟನೆಗಳಲ್ಲಿದೆ. ಹೀಗಾಗಿ, ನ್ಯಾಯಾಂಗದ ಪ್ರವೇಶವಿಲ್ಲದೇ ಸರ್ಕಾರದ ಮೂಲಕವೇ ತಮ್ಮ ಬೇಡಿಕೆ ಈಡೇರಿಸಿಕೊಳ್ಳಬೇಕೆಂಬುದು ರೈತರು ಪಟ್ಟು ಹಿಡಿದಿದ್ದರು.
3 ಕೃಷಿ ಕಾಯ್ದೆಗಳ ಅನುಷ್ಠಾನಕ್ಕೆ ಸುಪ್ರೀಂಕೋರ್ಟ್ನಿಂದ ತಡೆ; ನಾಲ್ವರು ತಜ್ಞರನ್ನೊಳಗೊಂಡ ಸಮಿತಿ ರಚನೆ