ಅಮೆರಿಕದ ವೀಸಾ ಸಮಸ್ಯೆ ಬಗ್ಗೆ ಸಚಿವ ಜೈಶಂಕರ್ ಕಳವಳ; ಭಾರತವನ್ನು ಟಾರ್ಗೆಟ್ ಮಾಡಿಲ್ಲ ಎಂದ ರೂಬಿಯೊ
ಭಾರತದ ಸಚಿವ ಜೈಶಂಕರ್ ಮತ್ತು ಅಮೆರಿಕ ವಿದೇಶಾಂಗ ಕಾರ್ಯದರ್ಶಿ ಮಾರ್ಕೊ ರೂಬಿಯೊ ದೆಹಲಿಯಲ್ಲಿ ಜಂಟಿ ಪತ್ರಿಕಾಗೋಷ್ಠಿಯನ್ನು ನಡೆಸಿದ್ದಾರೆ. ಈ ಭೇಟಿಯ ವೇಳೆ ಹಾರ್ಮುಜ್ ಜಲಸಂಧಿಯ ಬಿಕ್ಕಟ್ಟಿನ ಹಿನ್ನೆಲೆಯಲ್ಲಿ ಜಾಗತಿಕ ಇಂಧನ ಭದ್ರತೆ, ಹಡಗು ಸಂಚಾರದ ರಕ್ಷಣೆ ಮತ್ತು ರಕ್ಷಣಾ ತಂತ್ರಜ್ಞಾನ ಸಹಕಾರದ ಬಗ್ಗೆ ಮಾತುಕತೆ ನಡೆಸಲಾಯಿತು. ಇದಕ್ಕೂ ಮುನ್ನ ಪ್ರವಾಸದ ಮೊದಲ ದಿನ ಮಾರ್ಕೊ ರೂಬಿಯೋ ಅವರು ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿಯಾಗಿ ಮಾತುಕತೆ ನಡೆಸಿದ್ದರು.

ನವದೆಹಲಿ, ಮೇ 24: ಭಾರತಕ್ಕೆ 4 ದಿನಗಳ ಅಧಿಕೃತ ಪ್ರವಾಸ ಕೈಗೊಂಡಿರುವ ಅಮೆರಿಕದ ವಿದೇಶಾಂಗ ಕಾರ್ಯದರ್ಶಿ ಮಾರ್ಕೊ ರೂಬಿಯೋ (Marco Rubio) ಅವರು ಇಂದು ನವದೆಹಲಿಯ ಹೈದರಾಬಾದ್ ಹೌಸ್‌ನಲ್ಲಿ ಭಾರತದ ವಿದೇಶಾಂಗ ಸಚಿವ ಡಾ. ಎಸ್. ಜೈಶಂಕರ್ (S Jaishankar) ಅವರೊಂದಿಗೆ ಉನ್ನತ ಮಟ್ಟದ ನಿಯೋಗ ಮಟ್ಟದ ಮಾತುಕತೆ ನಡೆಸಿದ್ದಾರೆ. ಡೊನಾಲ್ಡ್ ಟ್ರಂಪ್ ಅವರ ಸುಂಕದ ನೀತಿಗಳಿಂದಾಗಿ ಕಳೆದ ಕೆಲವು ತಿಂಗಳುಗಳಿಂದ ಭಾರತ ಮತ್ತು ಅಮೆರಿಕ ನಡುವೆ ಉಂಟಾಗಿದ್ದ ರಾಜತಾಂತ್ರಿಕ ಹಾಗೂ ವ್ಯಾಪಾರ ಉದ್ವಿಗ್ನತೆಯನ್ನು ತಿಳಿಗೊಳಿಸುವ ನಿಟ್ಟಿನಲ್ಲಿ ಈ ಭೇಟಿ ಅತ್ಯಂತ ಮಹತ್ವದ್ದಾಗಿದೆ.
ನವದೆಹಲಿಯಲ್ಲಿ ಇಂದು ಅಮೆರಿಕದ ವಿದೇಶಾಂಗ ಕಾರ್ಯದರ್ಶಿ ಮಾರ್ಕೊ ರೂಬಿಯೊ ಜೊತೆ ಭಾರತದ ವಿದೇಶಾಂಗ ಸಚಿವ ಎಸ್. ಜೈಶಂಕರ್ ಜಂಟಿ ಸುದ್ದಿಗೋಷ್ಠಿ ನಡೆಸಿದ್ದಾರೆ. ಈ ವೇಳೆ ಮಾತನಾಡಿದ ಸಚಿವ ಎಸ್. ಜೈಶಂಕರ್ ಅಮೆರಿಕದ ವೀಸಾ ಪಡೆಯುವಲ್ಲಿ ಭಾರತೀಯ ಪ್ರಯಾಣಿಕರು ಎದುರಿಸುತ್ತಿರುವ ತೊಂದರೆಗಳ ಬಗ್ಗೆ ಕಳವಳ ವ್ಯಕ್ತಪಡಿಸಿದರು. ಅಕ್ರಮ ವಲಸೆಯ ವಿರುದ್ಧ ಕ್ರಮ ಕೈಗೊಳ್ಳುವುದರಿಂದ ವಿದ್ಯಾರ್ಥಿಗಳು ಮತ್ತು ವೃತ್ತಿಪರರು ತೊಂದರೆ ಅನುಭವಿಸಬಾರದು ಎಂದು ಭಾರತ ನಿರೀಕ್ಷಿಸುತ್ತದೆ ಎಂದು ಹೇಳಿದರು.
ಇದನ್ನೂ ಓದಿ: ಪ್ರಧಾನಿ ಮೋದಿ ಭೇಟಿಯಾದ ಮಾರ್ಕೊ ರುಬಿಯೋ: ಅಮೆರಿಕಕ್ಕೆ ಭೇಟಿ ನೀಡುವಂತೆ ಆಹ್ವಾನ
EAM Dr Jaishankar points to challenges over US visa issuance, says legal mobility should not be impact pic.twitter.com/PTWwVOPpo2
— Sidhant Sibal (@sidhant) May 24, 2026
ವೀಸಾ ಪ್ರಕ್ರಿಯೆಗೆ ಸಂಬಂಧಿಸಿದ ಸಮಸ್ಯೆಗಳು ಎರಡೂ ದೇಶಗಳ ನಡುವಿನ ವ್ಯವಹಾರ, ತಂತ್ರಜ್ಞಾನ ಮತ್ತು ಸಂಶೋಧನಾ ಸಹಕಾರದ ಮೇಲೆ ನೇರವಾಗಿ ಪರಿಣಾಮ ಬೀರುತ್ತವೆ. ಅಕ್ರಮ ಮತ್ತು ಅನಿಯಮಿತ ವಲಸೆಯನ್ನು ನಿಭಾಯಿಸುವಲ್ಲಿ ಭಾರತ ಅಮೆರಿಕದೊಂದಿಗೆ ಸಹಕರಿಸುವುದನ್ನು ಮುಂದುವರೆಸಿದೆ. ಆದರೆ, ನಿಜವಾದ ಪ್ರಯಾಣಿಕರು ಅನಗತ್ಯ ಅಡೆತಡೆಗಳನ್ನು ಎದುರಿಸಬಾರದು ಎಂದು ಸಚಿವ ಜೈಶಂಕರ್ ಒತ್ತಿ ಹೇಳಿದರು.
#WATCH | Delhi: At the joint press conference with US Secretary of State Marco Rubio, EAM Dr S Jaishankar says, “There has been a very significant uptick in our energy imports from the United States. It’s not new. It started out many, many years ago, but I think it’s really… pic.twitter.com/M02thZji1m
— ANI (@ANI) May 24, 2026
ವೀಸಾ ವಿಳಂಬ ಮತ್ತು ಕಠಿಣ ಕಾರ್ಯವಿಧಾನಗಳ ಬಗ್ಗೆ ಅನೇಕ ಭಾರತೀಯ ವಿದ್ಯಾರ್ಥಿಗಳು, ವೃತ್ತಿಪರರು ಮತ್ತು ಪ್ರಯಾಣಿಕರು ಕಳವಳ ವ್ಯಕ್ತಪಡಿಸಿರುವ ಸಮಯದಲ್ಲಿ ಅವರ ಹೇಳಿಕೆಗಳು ಬಂದಿವೆ.
ಇದನ್ನೂ ಓದಿ: ಸಂಸ್ಕರಿತ ಯುರೇನಿಯಂ ಬಿಟ್ಟುಕೊಡಲು ಇರಾನ್ ಒಪ್ಪಿಗೆ; ಅಮೆರಿಕದ ಹೊಸ ಒಪ್ಪಂದದಲ್ಲೇನಿದೆ?
ಇದಕ್ಕೆ ಪ್ರತಿಕ್ರಿಯಿಸಿದ ಯುಎಸ್ ವಿದೇಶಾಂಗ ಕಾರ್ಯದರ್ಶಿ ರೂಬಿಯೊ, ಅಮೆರಿಕ ಮಾಡಿರುವ ಈ ಬದಲಾವಣೆಗಳು ಭಾರತವನ್ನು ಗುರಿಯಾಗಿಸಿಕೊಂಡಿಲ್ಲ ಎಂದು ಸ್ಪಷ್ಟಪಡಿಸಿದರು. “ಇದು ಭಾರತವನ್ನು ಗುರಿಯಾಗಿಸಿಕೊಂಡ ವ್ಯವಸ್ಥೆಯಲ್ಲ. ಇದನ್ನು ಜಾಗತಿಕವಾಗಿ ಅನ್ವಯಿಸಲಾಗುತ್ತಿದೆ. ನೀವು ಯಾವುದಾದರೂ ಹೊಸ ಸುಧಾರಣೆಗಳನ್ನು ಕೈಗೊಂಡಾಗ, ಪರಿವರ್ತನೆ ಮತ್ತು ಘರ್ಷಣೆಗಳೆರಡೂ ಇರುತ್ತವೆ. ಆದರೆ, ಭವಿಷ್ಯಕ್ಕಾಗಿ ತನ್ನ ವಲಸೆ ವ್ಯವಸ್ಥೆಯನ್ನು ಆಧುನೀಕರಿಸಲು ಮತ್ತು ಅದನ್ನು ಹೆಚ್ಚು ಪರಿಣಾಮಕಾರಿಯಾಗಿಸಲು ಅಮೆರಿಕ ಹೆಚ್ಚು ಆದ್ಯತೆ ನೀಡುತ್ತಿದೆ. ನಾವು 21ನೇ ಶತಮಾನಕ್ಕಾಗಿ ಯುಎಸ್ ವಲಸೆ ವ್ಯವಸ್ಥೆಯನ್ನು ಆಧುನೀಕರಿಸುತ್ತಿದ್ದೇವೆ” ಎಂದು ರುಬಿಯೊ ಹೇಳಿದರು.
ಅಕ್ರಮ ವಲಸೆಯ ಬಗ್ಗೆ ಮಾತನಾಡಿದ ರುಬಿಯೊ, “ಇತ್ತೀಚಿನ ವರ್ಷಗಳಲ್ಲಿ ಅಮೆರಿಕವು ಪ್ರಮುಖ ಸವಾಲುಗಳನ್ನು ಎದುರಿಸಿದೆ. 20 ಮಿಲಿಯನ್ ಜನರನ್ನು ಅಕ್ರಮವಾಗಿ ಅಮೆರಿಕಕ್ಕೆ ಪ್ರವೇಶಿಸಿದ್ದಾರೆ. ಹೀಗಾಗಿ, ಈ ನಿಟ್ಟಿನಲ್ಲಿ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುವುದು ಅನಿವಾರ್ಯವಾಗಿತ್ತು” ಎಂದು ಹೇಳಿದರು.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ





