30 ದಿನ ಜೈಲಲ್ಲಿದ್ದರೆ ಕಳೆದುಕೊಳ್ತಾರೆ ಮಂತ್ರಿ ಸ್ಥಾನ: ಸಚಿವರ ಹುದ್ದೆ ಕಳೆದುಕೊಳ್ಳುವ ಕಠಿಣ ಮಸೂದೆ ಸಿದ್ಧ
ಕೇಂದ್ರ-ರಾಜ್ಯ ಸಚಿವರು, ಪ್ರಧಾನಿ ಅಥವಾ ಮುಖ್ಯಮಂತ್ರಿಗಳು ಯಾವುದೇ ಗಂಭೀರ ಅಪರಾಧ ಪ್ರಕರಣದಲ್ಲಿ 30 ದಿನ ಜೈಲುವಾಸ ಅನುಭವಿಸಿದರೆ, ಸ್ವಯಂಚಾಲಿತವಾಗಿ ಸಚಿವ ಹುದ್ದೆ ಕಳೆದುಕೊಳ್ಳುವ 130ನೇ ಸಾಂವಿಧಾನಿಕ ತಿದ್ದುಪಡಿ ಮಸೂದೆ ಜಾರಿಗೆ ಸಿದ್ಧವಾಗಿದೆ. ಸಂಸದೀಯ ಸಮಿತಿ ವರದಿ ಅನುಮೋದನೆಗೆ ಸಿದ್ಧವಿದ್ದು, ರಾಜಕೀಯ ದುರ್ಬಳಕೆಯ ಭೀತಿಯ ನಡುವೆಯೂ ಈ ಕಠಿಣ ನಿಯಮ ಉಳಿಯಲಿದೆ. ಇದು ಸಾರ್ವಜನಿಕ ಜೀವನದಲ್ಲಿ ಹೊಣೆಗಾರಿಕೆ ಹೆಚ್ಚಿಸುತ್ತದೆ ಎಂದು ಬೆಂಬಲಿಗರು ವಾದಿಸಿದರೆ, ವಿರೋಧಿಗಳು ರಾಜಕೀಯ ಪ್ರೇರಿತ ದುರ್ಬಳಕೆ ಬಗ್ಗೆ ಆತಂಕ ವ್ಯಕ್ತಪಡಿಸಿದ್ದಾರೆ.

ನವದೆಹಲಿ, ಜುಲೈ 02: ಪ್ರಧಾನಿ, ಮುಖ್ಯಮಂತ್ರಿ(Chief Minister) ಅಥವಾ ಕೇಂದ್ರ ಮತ್ತು ರಾಜ್ಯ ಸಚಿವರು ಯಾವುದೇ ಗಂಭೀರ ಅಪರಾಧ ಪ್ರಕರಣಗಳಲ್ಲಿ ಬಂಧನಕ್ಕೊಳಗಾಗಿ ಸತತ 30 ದಿನಗಳ ಕಾಲ ಜೈಲಿನಲ್ಲಿದ್ದರೆ , ಅವರು ಸ್ವಯಂಚಾಲಿತವಾಗಿ ತಮ್ಮ ಸಚಿವ ಹುದ್ದೆಯನ್ನು ಕಳೆದುಕೊಳ್ಳುವ ಕಠಿಣ ಕಾನೂನೊಂದು ಜಾರಿಗೆ ಬರಲು ಸಿದ್ಧತೆಯಾಗಿದೆ. ಈ ನಿಬಂಧನೆಯನ್ನು ಒಳಗೊಂಡಿರುವ ವಿವಾದಾತ್ಮಕ ‘130ನೇ ಸಾಂವಿಧಾನಿಕ ತಿದ್ದುಪಡಿ ಮಸೂದೆ’ಯನ್ನು ಮುಂಬರುವ ಸಂಸತ್ತಿನ ಮಳೆಗಾಲದ ಅಧಿವೇಶನದಲ್ಲಿ ಸರ್ಕಾರ ಮಂಡಿಸುವ ಸಾಧ್ಯತೆಯಿದೆ.
ಈ ಪ್ರಸ್ತಾವಿತ ಮಸೂದೆಯನ್ನು ಕೂಲಂಕಷವಾಗಿ ಪರಿಶೀಲಿಸುತ್ತಿರುವ ಜಂಟಿ ಸಂಸದೀಯ ಸಮಿತಿಯು (JPC) ಜುಲೈ 17 ರಂದು ತನ್ನ ಅಂತಿಮ ವರದಿಯನ್ನು ಅನುಮೋದಿಸುವ ನಿರೀಕ್ಷೆಯಿದೆ. ಬುಧವಾರ ನಡೆದ ಸಮಿತಿಯ ಸಭೆಯ ಮೂಲಗಳ ಪ್ರಕಾರ, ದೇಶದ ಹಲವು ವಲಯಗಳಿಂದ ಈ 30 ದಿನಗಳ ಕಠಿಣ ನಿಯಮಕ್ಕೆ ತೀವ್ರ ಆಕ್ಷೇಪ ವ್ಯಕ್ತವಾಗಿದ್ದರೂ ಸಹ, ಜೆಪಿಸಿ ಸಮಿತಿಯು ಈ ವಿವಾದಾತ್ಮಕ ನಿಯಮವನ್ನು ಮಸೂದೆಯಿಂದ ತೆಗೆದುಹಾಕಲು ಶಿಫಾರಸು ಮಾಡುವುದಿಲ್ಲ ಎಂದು ತಿಳಿದುಬಂದಿದೆ. ಅಂದರೆ ಈ ನಿಯಮ ಮಸೂದೆಯಲ್ಲಿ ಹಾಗೇ ಉಳಿಯಲಿದೆ.
ವಿರೋಧ ಪಕ್ಷದ ನಾಯಕರನ್ನು ಗುರಿಯಾಗಿಸಿಕೊಂಡು, ಕೇವಲ ರಾಜಕೀಯ ದ್ವೇಷ ಅಥವಾ ಗುಪ್ತ ಉದ್ದೇಶಗಳಿಗಾಗಿ ಈ ಕಠಿಣ ನಿಯಮವನ್ನು ದುರುಪಯೋಗಪಡಿಸಿಕೊಳ್ಳುವ ಅಪಾಯ ಹೆಚ್ಚಿರುತ್ತದೆ. ಆದ್ದರಿಂದ, ಇಂತಹ ರಾಜಕೀಯ ಪ್ರೇರಿತ ಬಂಧನಗಳನ್ನು ತಡೆಯಲು ಮತ್ತು ಚುನಾಯಿತ ಸರ್ಕಾರಗಳನ್ನು ಅಸ್ಥಿರಗೊಳಿಸದಂತೆ ತೂಗಾಡಿಸಲು ಕೆಲವು ಅಗತ್ಯ ‘ಸುರಕ್ಷತಾ ಕ್ರಮಗಳನ್ನು’ ಈ ವರದಿಯಲ್ಲಿ ಸೇರಿಸಲು ಸಮಿತಿ ನಿರ್ಧರಿಸಿದೆ.
ಮತ್ತಷ್ಟು ಓದಿ: ಚಪ್ಪಲಿ ಎಸೆತ ಪ್ರಕರಣ: ಮಾಜಿ ಸಿಎಂ ಸಿದ್ದರಾಮಯ್ಯ ಎದುರು ಶಾಸಕ ಪ್ರದೀಪ್ ಈಶ್ವರ್ ಕಣ್ಣೀರು
ಈ ಪ್ರಸ್ತಾವಿತ ತಿದ್ದುಪಡಿಯು ಸದ್ಯ ದೇಶಾದ್ಯಂತ ತೀವ್ರ ರಾಜಕೀಯ ಚರ್ಚೆಯನ್ನು ಹುಟ್ಟುಹಾಕಿದೆ. ಈ ನಿಯಮ ಜಾರಿಗೆ ಬಂದರೆ ಸಾರ್ವಜನಿಕ ಜೀವನದಲ್ಲಿ ಮತ್ತು ಉನ್ನತ ರಾಜಕೀಯ ಹುದ್ದೆಗಳಲ್ಲಿ ಹೊಣೆಗಾರಿಕೆ, ಪಾರದರ್ಶಕತೆ ಹಾಗೂ ನೈತಿಕತೆ ಹೆಚ್ಚುತ್ತದೆ ಎಂದು ಮಸೂದೆಯನ್ನು ಬೆಂಬಲಿಸುವವರು ವಾದಿಸುತ್ತಿದ್ದಾರೆ.
ವಿಮರ್ಶಕರ ಆತಂಕ: ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ರಾಜಕೀಯ ಪ್ರೇರಿತ ಸುಳ್ಳು ಪ್ರಕರಣಗಳ ಮೂಲಕ ಚುನಾಯಿತ ಮುಖ್ಯಮಂತ್ರಿಗಳು ಅಥವಾ ಸಚಿವರನ್ನು 30 ದಿನಗಳ ಕಾಲ ಜೈಲಿಗೆ ದೂಡಿ, ಪ್ರಜಾಪ್ರಭುತ್ವದ ಮೂಲಕ ಆಯ್ಕೆಯಾದ ಸರ್ಕಾರಗಳನ್ನು ಬೀಳಿಸಲು ಈ ಕಾನೂನನ್ನು ಅಸ್ತ್ರವಾಗಿ ಬಳಸಬಹುದು ಎಂದು ವಿರೋಧಿಗಳು ಎಚ್ಚರಿಸಿದ್ದಾರೆ. ಜೆಪಿಸಿ ವರದಿ ಸಲ್ಲಿಕೆಯಾದ ಬಳಿಕ ಸಂಸತ್ತಿನಲ್ಲಿ ಈ ಮಸೂದೆಯ ಮೇಲೆ ಭಾರಿ ಹೈಡ್ರಾಮಾ ನಡೆಯುವ ಸಾಧ್ಯತೆಯಿದೆ.
ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ




