ಅಕ್ರಮ ಹಣ ವರ್ಗಾವಣೆ ಪ್ರಕರಣ: ಜಾರ್ಖಂಡ್ ಸಚಿವ ಆಲಂಗೀರ್ ಆಲಂ 6 ದಿನಗಳ ಇಡಿ ವಶಕ್ಕೆ

ಮಂಗಳವಾರ ರಾಂಚಿಯಲ್ಲಿರುವ ಜಾರಿ ನಿರ್ದೇಶನಾಲಯದ ಕಚೇರಿಯಲ್ಲಿ ಜಾರ್ಖಂಡ್ ಸಚಿವ ಆಲಂಗೀರ್ ಆಲಂ ಅವರನ್ನು 9 ಗಂಟೆಗಳ ಕಾಲ ವಿಚಾರಣೆ ನಡೆಸಲಾಯಿತು. ಬುಧವಾರ ಅವರನ್ನು ಮತ್ತೆ ವಿಚಾರಣೆಗೆ ಕರೆಯಲಾಗಿತ್ತು. ಆದರೆ ತನಿಖೆಗೆ ಸಹಕರಿಸದ ಹಿನ್ನೆಲೆಯಲ್ಲಿ ಅವರನ್ನು ಬಂಧಿಸಲಾಗಿತ್ತು.

ಅಕ್ರಮ ಹಣ ವರ್ಗಾವಣೆ ಪ್ರಕರಣ: ಜಾರ್ಖಂಡ್ ಸಚಿವ ಆಲಂಗೀರ್ ಆಲಂ 6 ದಿನಗಳ ಇಡಿ ವಶಕ್ಕೆ
ಆಲಂಗೀರ್ ಆಲಂ
Follow us
ಸುಷ್ಮಾ ಚಕ್ರೆ
|

Updated on: May 16, 2024 | 3:38 PM

ನವದೆಹಲಿ: ಮನಿ ಲಾಂಡರಿಂಗ್ (Money Laundering) ಪ್ರಕರಣದಲ್ಲಿ ತನಿಖೆಗೆ ಸರಿಯಾಗಿ ಸ್ಪಂದಿಸದ ಕಾರಣ ನೀಡಿ ಇಡಿ ಜಾರ್ಖಂಡ್ ಸಚಿವ ಆಲಂಗೀರ್ ಆಲಂ (Alamgir Alam) ಅವರನ್ನು ನಿನ್ನೆ ಬಂಧಿಸಿತ್ತು. ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಬಂಧಿಸಲ್ಪಟ್ಟ ಒಂದು ದಿನದ ನಂತರ, ಜಾರ್ಖಂಡ್ ಸಚಿವ ಅಲಂಗೀರ್ ಆಲಂ ಅವರನ್ನು ಇಂದು (ಗುರುವಾರ) 6 ದಿನಗಳ ಕಾಲ ಇಡಿ ವಶಕ್ಕೆ ನೀಡಲಾಗಿದೆ. ವಕೀಲರ ಪ್ರಕಾರ, ಬಿಗಿ ಭದ್ರತೆಯ ನಡುವೆ ಸಚಿವರನ್ನು ರಾಂಚಿಯ ಅಕ್ರಮ ಹಣ ವರ್ಗಾವಣೆ ತಡೆ ಕಾಯ್ದೆ (ಪಿಎಂಎಲ್‌ಎ) ನ್ಯಾಯಾಲಯಕ್ಕೆ ಹಾಜರುಪಡಿಸಲಾಯಿತು.

ಇದಕ್ಕೂ ಮುನ್ನ ಬುಧವಾರ ಜಾರ್ಖಂಡ್ ಗ್ರಾಮೀಣ ಸಚಿವರನ್ನು ಪಿಎಂಎಲ್‌ಎಯ ನಿಬಂಧನೆಗಳ ಅಡಿಯಲ್ಲಿ ರಾಂಚಿಯಲ್ಲಿರುವ ಏಜೆನ್ಸಿಯ ವಲಯ ಕಚೇರಿಯಲ್ಲಿ ವಶಕ್ಕೆ ತೆಗೆದುಕೊಳ್ಳಲಾಯಿತು. ಎರಡನೇ ದಿನದ ವಿಚಾರಣೆಯಲ್ಲಿ ಸುಮಾರು 6 ಗಂಟೆಗಳ ಕಾಲ ಅವರನ್ನು ವಿಚಾರಣೆ ನಡೆಸಲಾಯಿತು. ಮಂಗಳವಾರ ಫೆಡರಲ್ ಏಜೆನ್ಸಿ ಅವರನ್ನು 9 ಗಂಟೆಗಳ ಕಾಲ ಗ್ರಿಲ್ ಮಾಡಿತು. ಅವರ ಹೇಳಿಕೆಯನ್ನು ಸಹ ದಾಖಲಿಸಲಾಗಿದೆ. ಆಲಂ ಅವರು ಜಾರ್ಖಂಡ್ ವಿಧಾನಸಭೆಯಲ್ಲಿ ಪಾಕುರ್ ಕ್ಷೇತ್ರದ ಶಾಸಕರಾಗಿದ್ದಾರೆ ಮತ್ತು ಸಂಸದೀಯ ವ್ಯವಹಾರಗಳ ಸಚಿವರೂ ಆಗಿದ್ದಾರೆ.

ಇದನ್ನೂ ಓದಿ: 30 ಕೋಟಿ ರೂ. ನಗದು ಪತ್ತೆ: ಜಾರ್ಖಂಡ್​ ಸಚಿವ ಆಲಂಗೀರ್​ ಆಲಂ ಆಪ್ತ ಸಂಜೀವ್​ ಲಾಲ್ ಬಂಧನ

ಕಳೆದ ವಾರ ರಾಂಚಿಯಲ್ಲಿ ಸಚಿವರ ಆಪ್ತ ಕಾರ್ಯದರ್ಶಿ ಸಂಜೀವ್ ಲಾಲ್ ಅವರ ಮನೆ ಸಹಾಯಕ ಜಹಾಂಗೀರ್ ಆಲಂ ವಾಸವಿದ್ದ ಮನೆಯೊಂದರ ಮೇಲೆ ದಾಳಿ ನಡೆಸಿದ ಜಾರಿ ನಿರ್ದೇಶನಾಲಯದ ಅಧಿಕಾರಿಗಳು ಅಲ್ಲಿಂದ 32 ಕೋಟಿ ರೂ. ಹಾಗೂ ಇತರ ನಿವೇಶನಗಳಿಂದ 3 ಕೋಟಿ ರೂ.ಗೂ ಹೆಚ್ಚು ಹಣವನ್ನು ವಶಪಡಿಸಿಕೊಂಡಿದ್ದರು. ಸಂಜೀವ್ ಲಾಲ್ ಮತ್ತು ಜಹಾಂಗೀರ್ ಆಲಂ ಅವರನ್ನು ಮರುದಿನ ಅಕ್ರಮ ಹಣ ವರ್ಗಾವಣೆ ಕಾಯ್ದೆ (ಪಿಎಂಎಲ್‌ಎ) ಅಡಿಯಲ್ಲಿ ಬಂಧಿಸಲಾಯಿತು.

ಆಲಂಗೀರ್ ಆಲಂ ಮತ್ತು ಅವರ ಸಹಾಯಕರ ವಿರುದ್ಧದ ಪ್ರಕರಣವು ಜಾರ್ಖಂಡ್ ಟೆಂಡರ್ ಹಗರಣಕ್ಕೆ ಸಂಬಂಧಿಸಿದೆ. ಗ್ರಾಮೀಣ ಭಾಗದಲ್ಲಿ ರಸ್ತೆ ನಿರ್ಮಾಣಕ್ಕೆ ಟೆಂಡರ್‌ಗೆ ಬದಲಾಗಿ ಕಮಿಷನ್‌ನಿಂದ ಬಂದ ಹಣ ಇದಾಗಿದೆ ಎಂದು ಆರೋಪಿಸಲಾಗಿದೆ. ಮೇ 6ರಂದು, ಇಡಿ ಅಲಂಗೀರ್ ಆಲಂ ಅವರ ಪಿಎಸ್ ಮತ್ತು ಇತರ ನಿಕಟ ಸಹಚರರ ನಿವಾಸಗಳ ಮೇಲೆ ದಾಳಿ ನಡೆಸಿತು. ವಶಪಡಿಸಿಕೊಂಡ ಕರೆನ್ಸಿ ನೋಟುಗಳ ಎಣಿಕೆ ವೇಳೆ ಒಟ್ಟು 35.23 ಕೋಟಿ ರೂ. ಪತ್ತೆಯಾಗಿತ್ತು.

ಇದನ್ನೂ ಓದಿ: Alamgir Alam: ಅಕ್ರಮ ಹಣ ವರ್ಗಾವಣೆ ಪ್ರಕರಣ; ಇಡಿಯಿಂದ ಜಾರ್ಖಂಡ್ ಸಚಿವ ಆಲಂಗೀರ್ ಆಲಂ ಬಂಧನ

ಅಧಿಕಾರಿಗಳ ಪ್ರಕಾರ, ಜಹಾಂಗೀರ್ ಆಲಂ ಅವರು ಪ್ರಾಥಮಿಕ ವಿಚಾರಣೆಯಲ್ಲಿ ಕಮಿಷನ್ ಮತ್ತು ಲಂಚದಿಂದ ಸಂಪಾದಿಸಿದ ಹಣ ಅದು ಎಂದು ಒಪ್ಪಿಕೊಂಡರು. ಸಚಿವ ಅಲಂಗೀರ್ ಅವರು ತಮ್ಮ ಪಿಎಸ್ ಸಂಜೀವ್ ಕುಮಾರ್ ಲಾಲ್ ಅವರ ನಿವಾಸದಲ್ಲಿ ಜಹಾಂಗೀರ್ ಅವರನ್ನು ಸೇವಕರಾಗಿ ನೇಮಿಸಿಕೊಂಡಿದ್ದರು, ಇದಕ್ಕೂ ಮೊದಲು ಅವರು ಕೆಲವು ದಿನಗಳ ಕಾಲ, ಸಚಿವರ ನಿವಾಸದಲ್ಲಿಯೂ ಕೆಲಸ ಮಾಡಿದ್ದರು ಎಂದು ಮೂಲಗಳು ತಿಳಿಸಿವೆ.

ಸಂಜೀವ್ ಅವರ ನಿವಾಸದಿಂದ 10 ಲಕ್ಷ ರೂಪಾಯಿ ಮತ್ತು ಅವರ ಪತ್ನಿಯ ನಿರ್ಮಾಣ ಕಂಪನಿ ಪಾಲುದಾರ ಬಿಲ್ಡರ್ ಮುನ್ನಾ ಸಿಂಗ್ ಅವರ ನಿವಾಸದಿಂದ 2.93 ಕೋಟಿ ರೂಪಾಯಿಗಳನ್ನು ಇಡಿ ವಶಪಡಿಸಿಕೊಂಡಿತ್ತು.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ