ಭಾರತದಲ್ಲಿ ಶಿಶು ಮರಣ ಇಳಿಕೆ, ಅಪೌಷ್ಟಿಕತೆ ಹೆಚ್ಚಳ: ರಾಷ್ಟ್ರೀಯ ಕುಟುಂಬ ಆರೋಗ್ಯ ಸಮೀಕ್ಷೆ

18 ವರ್ಷದ ಮಹಿಳೆಯರ ಮೇಲಿನ ನಡುವಿನ ಲೈಂಗಿಕ ದೌರ್ಜನ್ಯಗಳ ಸಂಖ್ಯೆ ಕರ್ನಾಟಕ, ಪಶ್ಚಿಮ ಬಂಗಾಳ, ಮಹಾರಾಷ್ಟ್ರ ಮತ್ತು ಅಸ್ಸಾಂನಲ್ಲಿ ಜಾಸ್ತಿ ಇದೆ.

ಭಾರತದಲ್ಲಿ ಶಿಶು ಮರಣ ಇಳಿಕೆ, ಅಪೌಷ್ಟಿಕತೆ ಹೆಚ್ಚಳ: ರಾಷ್ಟ್ರೀಯ ಕುಟುಂಬ ಆರೋಗ್ಯ ಸಮೀಕ್ಷೆ
ಪ್ರಾತಿನಿಧಿಕ ಚಿತ್ರ
Rashmi Kallakatta

| Edited By: Ghanashyam D M | ಡಿ.ಎಂ.ಘನಶ್ಯಾಮ

Dec 14, 2020 | 3:20 PM

ನವದೆಹಲಿ: ಭಾರತದಲ್ಲಿ ಅಪೌಷ್ಟಿಕತೆಯ ಪ್ರಮಾಣ ಹೆಚ್ಚಿದೆ ಎಂದು 5ನೇ ರಾಷ್ಟ್ರೀಯ ಕುಟುಂಬ ಆರೋಗ್ಯ ಸಮೀಕ್ಷೆ (National Family Health Survey – NFHS-5) ಹೇಳಿದೆ. 2015-16ರ ಸಮೀಕ್ಷೆಗೆ ಹೋಲಿಸಿದರೆ 18 ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ಐದು ವರ್ಷಗಳಗಿಂತ ಕೆಳಗಿನ ವರ್ಷದ ಮಕ್ಕಳ ಮರಣ ಪ್ರಮಾಣ ಕಡಿಮೆಯಾಗಿದೆ.

ಎನ್​​ಎಫ್​ಎಚ್​ಎಸ್-5 ಸಮೀಕ್ಷೆ ಪ್ರಕಾರ ಗೋವಾ, ಗುಜರಾತ್, ಹಿಮಾಚಲ ಪ್ರದೇಶ, ಕೇರಳ, ಮಹಾರಾಷ್ಟ್ರ, ಮೇಘಾಲಯ, ಮಿಜೋರಾಂ, ನಾಗಾಲ್ಯಾಂಡ್, ತೆಲಂಗಾಣ, ತ್ರಿಪುರಾ, ಪಶ್ಚಿಮ ಬಂಗಾಳ, ಲಕ್ಷದ್ವೀಪ, ದಾದ್ರಾ ಮತ್ತು ನಾಗರ್ ಹವೇಲಿ, ದಮನ್ ಮತ್ತು ದಿಯುನಲ್ಲಿ ಶಿಶು ಮರಣ ಪ್ರಮಾಣ ಏರಿಕೆಯಾಗಿದೆ. ಅದೇ ವೇಳೆ ಮಹಾರಾಷ್ಟ್ರ ಮತ್ತು ಪಶ್ಚಿಮ ಬಂಗಾಳದಲ್ಲಿ ಶಿಶು ಮರಣ ಪ್ರಮಾಣ ಹಿಂದಿನಷ್ಟೇ ಇದೆ,

ಸಮೀಕ್ಷೆ ನಡೆಸಿದ 22 ರಾಜ್ಯಗಳ ಪೈಕಿ 16 ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ಕುಂಠಿತ ಬೆಳವಣಿಗೆ ಹೊಂದಿರುವ ಮಕ್ಕಳ ಪ್ರಮಾಣವು ಎನ್​​ಎಫ್​ಎಚ್​ಎಸ್-4ಕ್ಕೆ ಹೋಲಿಸಿದರೆ ಏರಿಕೆಯಾಗಿದೆ.

ಆಂಧ್ರ ಪ್ರದೇಶ, ಅಸ್ಸಾಂ, ಬಿಹಾರ, ಹಿಮಾಚಲ ಪ್ರದೇಶ, ಗುಜರಾತ್, ಮಹಾರಾಷ್ಟ್ರ, ಮಣಿಪುರ್, ಮಿಜೋರಾಂ , ನಾಗಾಲ್ಯಾಂಡ್, ಸಿಕ್ಕಿಂ, ತೆಲಂಗಾಣ, ತ್ರಿಪುರಾ, ಪಶ್ಚಿಮ ಬಂಗಾಳ, ಜಮ್ಮು ಮತ್ತು ಕಾಶ್ಮೀರ, ಲಡಾಕ್ ಮತ್ತು ಲಕ್ಷದ್ವೀಪದಲ್ಲಿ ಕುಂಠಿತ ಬೆಳವಣಿಗೆ ಹೊಂದಿರುವ ಮಕ್ಕಳ ಪ್ರಮಾಣವು ಏರಿಕೆಯಾಗಿದೆ.

ಎನ್​​ಎಫ್​ಎಚ್​ಎಸ್-4 ಸಮೀಕ್ಷೆ ಪ್ರಕಾರ 20 ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶದಲ್ಲಿ ಅಧಿಕ ತೂಕದ ಮಕ್ಕಳ ಪ್ರಮಾಣ ಏರಿಕೆ ಆಗಿದೆ. ಎನ್​​ಎಫ್​ಎಚ್​ಎಸ್ -5 ಸಮೀಕ್ಷೆ ಪ್ರಕಾರ (2019-20 )17 ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ಲಿಂಗಾನುಪಾತವೂ ಏರಿಕೆ ಆಗಿದೆ.

ಹಿಮಾಚಲ ಪ್ರದೇಶ, ಕೇರಳ, ಅಂಡಮಾನ್ ಮತ್ತು ನಿಕೊಬಾರ್ ದ್ವೀಪಗಳು, ಜಮ್ಮು ಮತ್ತು ಕಾಶ್ಮೀರ, ಲಡಾಕ್​ನಲ್ಲಿ ಲಿಂಗಾನುಪಾತ ಕುಸಿದಿದೆ. ನವಜಾತ ಶಿಶುಗಳ ಮರಣ ದರ (ಎನ್ಎಂಆರ್) 15 ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ಕಡಿಮೆಯಾಗಿದೆ.

ಮಹಾರಾಷ್ಟ್ರ, ಮಣಿಪುರ, ಮೇಘಾಲಯ, ಮಿಜೋರಾಂ, ತ್ರಿಪುರ, ಅಂಡಮಾನ್ ಮತ್ತು ನಿಕೋಬಾರ್ ದ್ಪೀಪ, ದಾದ್ರಾ ಮತ್ತು ನಾಗರ್ ಹವೇಸಿ, ದಮನ್ ಮತ್ತು ದಿಯು ನಲ್ಲಿ ಹಿಂದಿನ ಸಮೀಕ್ಷೆಗೆ ಹೋಲಿಸಿದರೆ ನವಜಾತ ಶಿಶು ಮರಣ ಏರಿಕೆಯಾಗಿದೆ. 6.1 ಲಕ್ಷ ಮನೆಗಳಲ್ಲಿನ ಮಾಹಿತಿ ಸಂಗ್ರಹಿಸಿ ಎನ್​​ಎಫ್​ಎಚ್​ಎಸ್ ಸಮೀಕ್ಷೆ ಮಾಡಲಾಗಿದೆ.

ಸಮೀಕ್ಷೆಯ ಮೊದಲ ಹಂತದಲ್ಲಿ ಅಸ್ಸಾಂ, ಬಿಹಾರ, ಮಣಿಪುರ, ಮೇಘಾಲಯ, ಸಿಕ್ಕಿಂ, ತ್ರಿಪುರಾ, ಆಂಧ್ರಪ್ರದೇಶ, ಅಂಡಮಾನ್ ಮತ್ತು ನಿಕೋಬಾರ್ ದ್ವೀಪ , ಗುಜರಾತ್, ಹಿಮಾಚಲ ಪ್ರದೇಶ , ಜಮ್ಮು ಮತ್ತು ಕಾಶ್ಮೀರ, ಲಡಾಕ್, ಕರ್ನಾಟಕ, ಗೋವಾ, ಮಹಾರಾಷ್ಟ್ರ, ತೆಲಂಗಾಣ, ಪಶ್ಚಿಮ ಬಂಗಾಳ, ಮಿಜೋರಾಂ, ಕೇರಳ, ಲಕ್ಷದ್ಪೀಪ, ದಾದರ್, ನಾಗರ್ ಹವೇಲಿ ಮತ್ತು ದಮನ್ ಮತ್ತು ದಿಯುನಲ್ಲಿನ ಮಾಹಿತಿ ಪ್ರಕಟಿಸಲಾಗಿದೆ.

ಎರಡನೇ ಹಂತದಲ್ಲಿ ಇನ್ನುಳಿದ 12 ರಾಜ್ಯ ಮತ್ತು 2 ಕೇಂದ್ರಾಡಳಿತ ಪ್ರದೇಶಗಳಲ್ಲಿ ಸಮೀಕ್ಷೆ ನಡೆಸಲಾಗುವುದು. ಕೋವಿಡ್ ಸಾಂಕ್ರಾಮಿಕದಿಂದಾಗಿ ಸಮೀಕ್ಷೆಯನ್ನು ಅರ್ಧಕ್ಕೆ ನಿಲ್ಲಿಸಿದ್ದು 2021ರ ಮೇ ತಿಂಗಳಲ್ಲಿ ಇದು ಪೂರ್ಣಗೊಳ್ಳಲಿದೆ ಎಂದು ಆರೋಗ್ಯ ಸಚಿವಾಲಯ ಹೇಳಿದೆ.

ಕಳೆದ ಸಮೀಕ್ಷೆಗೆ ಹೋಲಿಸಿದರೆ ಅಮ್ಮ ಮತ್ತು ಮಗುವಿನ ಆರೋಗ್ಯ ಸೂಚ್ಯಂಕದಲ್ಲಿ ಸುಧಾರಣೆಯಾಗಿದೆ. ಮೊದಲ ಹಂತದ ಸಮೀಕ್ಷೆ ಪ್ರಕಾರ ಗರ್ಭಧಾರಣೆ ಪ್ರಮಾಣ ಕುಸಿತ ಕಂಡಿದೆ. ಗರ್ಭ ನಿರೋಧಕ ಬಳಕೆ ಏರಿಕೆಯಾಗಿದೆ. ಕುಟುಂಬ ಯೋಜನೆಗಿರುವ ಅಕ್ಷೇಪಗಳು ಕಡಿಮೆಯಾಗಿವೆ.

ಎಲ್ಲ ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ 12 ವರ್ಷಗಳ ಕೆಳಗಿನ ಮಕ್ಕಳಿಗೆ ಲಸಿಕೆ ನೀಡುವ ಕಾರ್ಯದಲ್ಲಿ ಸುಧಾರಣೆ ಆಗಿದೆ. ಬ್ಯಾಂಕ್ ಖಾತೆ ಹೊಂದಿದ ಮಹಿಳೆಯರ ಸಂಖ್ಯೆ ಹೆಚ್ಚಾಗಿದ್ದು ಇದು ಮಹಿಳೆಯರ ಅಭಿವೃದ್ಧಿ ಕಾರ್ಯದಲ್ಲಿನ ಬೆಳವಣಿಗೆ ಎಂದು ಆರೋಗ್ಯ ಸಚಿವಾಲಯ ಹೇಳಿದೆ.

ಕರ್ನಾಟಕದಲ್ಲಿ ಲಿಂಗಾನುಪಾತ ಪ್ರಮಾಣ ಸುಧಾರಣೆ

ರಾಷ್ಟ್ರೀಯ ಕುಟುಂಬ ಆರೋಗ್ಯ ಸಮೀಕ್ಷೆ ಪ್ರಕಾರ ಕರ್ನಾಟಕದಲ್ಲಿ ಲಿಂಗಾನುಪಾತ ಪ್ರಮಾಣ ಏರಿಕೆ ಆಗಿದೆ. 2015-16ರ ಸಮೀಕ್ಷೆ ಪ್ರಕಾರ ರಾಜ್ಯದಲ್ಲಿ  1000 ಪುರುಷರಿಗೆ 979 ಮಹಿಳೆಯರು ಎಂದಿತ್ತು. ನೂತನ ಸಮೀಕ್ಷೆ ಪ್ರಕಾರ ಪ್ರತಿ ಸಾವಿರ ಪುರುಷರಿಗೆ 1,034 ಮಹಿಳೆಯರು ಇದ್ದಾರೆ. ನವಜಾತ ಶಿಶುಗಳ ಮರಣ ಪ್ರಮಾಣವು ಶೇಕಡಾ 18.5 ರಿಂದ ಶೇ. 15.8ಕ್ಕೆ ಇಳಿಯುವ ಮೂಲಕ ಸುಧಾರಿಸಿದೆ.

2015-16ರ ಸಮೀಕ್ಷೆ ಪ್ರಕಾರ ಕರ್ನಾಟಕದಲ್ಲಿ 18-49 ವಯಸ್ಸಿನ ಮಹಿಳೆಯರ ಮೇಲೆ ದೈಹಿಕ ಮತ್ತು ಲೈಂಗಿಕ ದೌರ್ಜನ್ಯ ಪ್ರಕರಣಗಳ ಪ್ರಮಾಣ ಶೇಕಡಾ 20.6 ಆಗಿತ್ತು. ಈಗ ದೌರ್ಜನ್ಯ ಪ್ರಕರಣಗಳ ಪ್ರಮಾಣ 44.4ಕ್ಕೇರಿದೆ. ಗರ್ಭಿಣಿಯರ ಮೇಲೆ ನಡೆಯುವ ದೈಹಿಕ ದೌರ್ಜನ್ಯ ಪ್ರಕರಣಗಳ ಪ್ರಮಾಣವ ಶೇಕಡಾ5.8 ಆಗಿದೆ. ನಗರ ಮತ್ತು ಹಳ್ಳಿಗಳಲ್ಲಿ ಮಹಿಳೆಯ ಮೇಲಿನ ದೌರ್ಜನ್ಯ ಪ್ರಕರಣಗಳಲ್ಲಿ ಬಹಳ ವ್ಯತ್ಯಾಸವೇನೂ ಕಂಡು ಬಂದಿಲ್ಲ.

18 ವರ್ಷದ ಮಹಿಳೆಯರ ಮೇಲಿನ ನಡುವಿನ ಲೈಂಗಿಕ ದೌರ್ಜನ್ಯಗಳ ಸಂಖ್ಯೆ ಕರ್ನಾಟಕ, ಪಶ್ಚಿಮ ಬಂಗಾಳ, ಮಹಾರಾಷ್ಟ್ರ ಮತ್ತು ಅಸ್ಸಾಂನಲ್ಲಿ ಜಾಸ್ತಿ ಇದೆ. 2019 -20ರ ಸಮೀಕ್ಷೆ ಪ್ರಕಾರ ಕರ್ನಾಟಕದಲ್ಲಿ ಈ ರೀತಿ ದೌರ್ಜನ್ಯದ ಪ್ರಮಾಣ ಶೇ.11 ಆಗಿದೆ. ಪಶ್ಚಿಮ ಬಂಗಾಳದಲ್ಲಿ ಶೇಕಡಾ 9.7, ಅಸ್ಸಾಂನಲ್ಲಿ ಶೇ.8 ಮತ್ತು ಮಹಾರಾಷ್ಟ್ರದಲ್ಲಿ ಶೇ. 6.2 ಆಗಿದೆ.

ಕರ್ನಾಟಕದಲ್ಲಿ 30,455 ಮಹಿಳೆಯರನ್ನು ಸಮೀಕ್ಷೆಗೊಳಪಡಿಸಿದ್ದು ಈ ಪೈಕಿ ಶೇ.88.7 ಮಂದಿ ಬ್ಯಾಂಕ್ ಖಾತೆ ಹೊಂದಿದ್ದಾರೆ. ಕಳೆದ ಸಮೀಕ್ಷೆಯಲ್ಲಿ ಬ್ಯಾಂಕ್ ಖಾತೆ ಹೊಂದಿದವರ ಪ್ರಮಾಣ ಶೇ.59.4 ಆಗಿತ್ತು. ಕುಟುಂಬಗಳಲ್ಲಿನ ನಿರ್ಧಾರ ತೆಗೆದುಕೊಳ್ಳುವಾಗ ಭಾಗಿಯಾಗುವ ವಿವಾಹಿತ ಮಹಿಳೆಯರ ಸಂಖ್ಯೆ ಶೇಕಡಾ 82.7 ಆಗಿದೆ. ಹಿಂದಿನ ಸಮೀಕ್ಷೆಗೆ ಹೋಲಿಸಿದರೆ ಸ್ವಂತ ಆಸ್ತಿ ಹೊಂದಿರುವ ಮಹಿಳೆಯರ ಸಂಖ್ಯೆ ಶೇಕಡಾ 47.1ರಿಂದ ಶೇಕಡಾ 61.8ಕ್ಕೆ ಏರಿಕೆ ಆಗಿದೆ.

15ರಿಂದ 24 ವರ್ಷದ ಮಧ್ಯೆ ಇರುವ ಮಹಿಳೆಯರು ಮುಟ್ಟಿನ ವೇಳೆ ಬಳಸು ಹೈಜೀನಿಕ್ ಉತ್ಪನ್ನಗಳ ಪ್ರಮಾಣವು ಶೇಕಡಾ 70.3ಕ್ಕಿಂತ ಶೇಕಡಾ 84.2ಕ್ಕೆ ಏರಿಕೆಯಾಗಿದೆ.

ಕರ್ನಾಟಕದ ಅರ್ಧದಷ್ಟು ಬಾಲಕಿಯರಿಗೆ ರಕ್ತಹೀನತೆ; ಏಕೆ ಹೀಗಾಯ್ತು?

ದೇಶದ ಆರ್ಥಿಕತೆ ಮೇಲೆ ಕೊರೊನಾ ಕರಿಛಾಯೆ: ತಾಂತ್ರಿಕ ಹಿಂಜರಿತದ ಸುಳಿಯಲ್ಲಿ ಭಾರತ

ತಾಜಾ ಸುದ್ದಿ

Follow us on

Related Stories

Most Read Stories

Click on your DTH Provider to Add TV9 Kannada