
ನವದೆಹಲಿ, ಸೆಪ್ಟೆಂಬರ್ 18: ನೀಟ್-ಯುಜಿ ಪರೀಕ್ಷೆಯಲ್ಲಿ ನಡೆದ ಅಕ್ರಮ ಮತ್ತು ಪ್ರಶ್ನೆಪತ್ರಿಕೆ ಸೋರಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್ ಕಠಿಣ ನಿಲುವು ತಳೆದಿದೆ. ರಾಷ್ಟ್ರೀಯ ಪರೀಕ್ಷಾ ಸಂಸ್ಥೆಯ (ಎನ್‌ಟಿಎ) ಆಡಳಿತ ಶೈಲಿ ಮತ್ತು ಪರೀಕ್ಷಾ ಸುರಕ್ಷತೆಯನ್ನು ಖುದ್ದಾಗಿ ಪರಿಶೀಲಿಸಲು, ಸುಪ್ರೀಂ ಕೋರ್ಟ್ ಎನ್‌ಟಿಎ ಕಚೇರಿಗೆ ಸ್ವತಃ ಭೇಟಿ ನೀಡುವ ಚಿಂತನೆ ನಡೆಸಿದೆ. ಇದರ ಜೊತೆಗೆ, ಸಂಸ್ಥೆಯ ಮೂಲಭೂತ ಸುಧಾರಣೆಗಾಗಿ ಇನ್ಫೋಸಿಸ್ ಸಹ-ಸಂಸ್ಥಾಪಕ ನಂದನ್ ನಿಲೇಕಣಿ ನೇತೃತ್ವದ ಉನ್ನತ ಮಟ್ಟದ ಸಮಿತಿಗೆ ಇದುವರೆಗಿನ ಸುಧಾರಣಾ ಪ್ರಗತಿಯ ಕುರಿತು ಪ್ರಮಾಣಪತ್ರ ಸಲ್ಲಿಸುವಂತೆ ನ್ಯಾಯಪೀಠ ನಿರ್ದೇಶಿಸಿದೆ.
ಎನ್‌ಟಿಎ ಕಚೇರಿಗೆ ಸದ್ಯದಲ್ಲೇ ಭೇಟಿ:
ಎನ್‌ಟಿಎ ಪರೀಕ್ಷೆಗಳನ್ನು ನಡೆಸುವ ವಿಧಾನ, ತಂತ್ರಜ್ಞಾನ ವ್ಯವಸ್ಥೆ ಮತ್ತು ದತ್ತಾಂಶ ಭದ್ರತೆಯ ನೈಜ ಸ್ಥಿತಿಯನ್ನು ಪರಿಶೀಲಿಸಲು ತನಿಖಾಧಿಕಾರಿಗಳು ಹಾಗೂ ನ್ಯಾಯಪೀಠದ ಪ್ರತಿನಿಧಿಗಳು ಕಚೇರಿಗೆ ನೇರವಾಗಿ ಭೇಟಿ ನೀಡುವ ಕುರಿತು ಸುಪ್ರೀಂ ಕೋರ್ಟ್ ಸುಳಿವು ನೀಡಿದೆ. ಪರೀಕ್ಷೆಯನ್ನು ನಡೆಸಲು ಮಾಡಿದ ಸುಧಾರಣೆಗಳನ್ನು ನಿಜವಾಗಿಯೂ ಅನುಷ್ಠಾನಗೊಳಿಸಲಾಗಿದೆಯೇ ಎಂದು ನೋಡಲು ನ್ಯಾಯಮೂರ್ತಿಗಳಾದ ಪಿಎಸ್ ನರಸಿಂಹ ಮತ್ತು ಅಲೋಕ್ ಆರಾಧೆ ಅವರ ಪೀಠವು ಎನ್‌ಟಿಎ ಕಚೇರಿಗೆ ವೈಯಕ್ತಿಕವಾಗಿ ಭೇಟಿ ನೀಡುವ ಸಾಧ್ಯತೆಯಿದೆ ಎಂದು ಸೂಚಿಸಿದೆ. ವಿಚಾರಣೆಯ ಸಮಯದಲ್ಲಿ, ಪರೀಕ್ಷೆಯನ್ನು ನಡೆಸಲು ವಿನ್ಯಾಸಗೊಳಿಸಲಾದ ವ್ಯವಸ್ಥೆಯು ನಿಜವಾಗಿಯೂ ಅಸ್ತಿತ್ವದಲ್ಲಿದೆಯೇ, ಸರಿಯಾಗಿ ಕಾರ್ಯನಿರ್ವಹಿಸುತ್ತಿದೆಯೇ ಮತ್ತು ಅದಕ್ಕೆ ಸಾಕಷ್ಟು ಮಾನವಶಕ್ತಿ ಮತ್ತು ಇತರ ಅಗತ್ಯ ವ್ಯವಸ್ಥೆಗಳು ಲಭ್ಯವಿದೆಯೇ ಎಂದು ನೋಡಲು ಬಯಸುವುದಾಗಿ ನ್ಯಾಯಪೀಠ ಹೇಳಿದೆ.
ಎನ್‌ಟಿಎ ತಾಂತ್ರಿಕ ಹಾಗೂ ಕಾರ್ಯಾಚರಣೆಯ ಸುಧಾರಣೆಗಾಗಿ ರಚಿಸಲಾದ ನಂದನ್ ನಿಲೇಕಣಿ ಸಮಿತಿಯು, ಪರೀಕ್ಷಾ ಭದ್ರತೆಯನ್ನು ಬಲಪಡಿಸಲು ಕೈಗೊಂಡಿರುವ ಕ್ರಮಗಳ ವಿವರವಾದ ಪ್ರಗತಿ ವರದಿಯನ್ನು ಸಲ್ಲಿಸಲು ಕೋರ್ಟ್ ಸೂಚಿಸಿದೆ. ಹಾಗೇ, ಈ ಶಿಫಾರಸುಗಳು ಕೇವಲ ವರದಿಗೆ ಸೀಮಿತವಾಗಿರಬಾರದು, ಇದನ್ನು ಅನುಷ್ಠಾನಕ್ಕೂ ತರಬೇಕು ಎಂದು ಕೋರ್ಟ್ ಹೇಳಿದೆ.
ಎನ್‌ಟಿಎ ತನ್ನ ಸುಧಾರಣಾ ವರದಿಗಳು ಮತ್ತು ಅಫಿಡವಿಟ್‌ಗಳನ್ನು ತನ್ನ ಅಧಿಕೃತ ವೆಬ್‌ಸೈಟ್‌ನಲ್ಲಿ ಪ್ರಕಟಿಸಬೇಕು, ಇದರಿಂದಾಗಿ ವಿದ್ಯಾರ್ಥಿಗಳು ಹಾಗೂ ಪೋಷಕರಿಗೆ ಮುಂಬರುವ ಪರೀಕ್ಷೆಗಳ ಭದ್ರತೆಯ ಕುರಿತು ವಿಶ್ವಾಸ ಮೂಡುತ್ತದೆ ಎಂದು ಕೋರ್ಟ್ ತಿಳಿಸಿದೆ.
ಇದನ್ನೂ ಓದಿ: NEET-PG 2026: ನೀಟ್–ಪಿಜಿ ಪರೀಕ್ಷೆಯ ವೇಳೆ ವಿದ್ಯುತ್ ಕಡಿತ; ಸೆಪ್ಟೆಂಬರ್ 5ಕ್ಕೆ ಮರುಪರೀಕ್ಷೆ ನಡೆಸಲು ನಿರ್ಧಾರ!
ಹಂತ-ಹಂತದ ಅನುಷ್ಠಾನ:
ಕೇವಲ ವರದಿಗಳನ್ನು ಸಿದ್ಧಪಡಿಸುವುದಷ್ಟೇ ಸಾಲದು, ಮುಂದಿನ ವರ್ಷದ ನೀಟ್-ಯುಜಿ ಮತ್ತು ಇತರ ಸ್ಪರ್ಧಾತ್ಮಕ ಪರೀಕ್ಷೆಗಳು ಆರಂಭವಾಗುವ ಮೊದಲೇ ಎಲ್ಲಾ ಡಿಜಿಟಲ್ ಹಾಗೂ ಭದ್ರತಾ ಸುಧಾರಣೆಗಳು ಸಂಪೂರ್ಣವಾಗಿ ಜಾರಿಗೆ ಬರಬೇಕು ಎಂದು ಸುಪ್ರೀಂ ಕೋರ್ಟ್ ಸ್ಪಷ್ಟಪಡಿಸಿದೆ.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ