AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಇಷ್ಟು ದೂರ ಬರುತ್ತೇನೆಂದು ಕನಸಲ್ಲೂ ಅಂದುಕೊಂಡಿರಲಿಲ್ಲ; ಎನ್​ಡಿಎ ಸಭೆಯಲ್ಲಿ ಭಾವುಕರಾದ ಪ್ರಧಾನಿ ಮೋದಿ

ಕೇಂದ್ರದ ಆಡಳಿತಾರೂಢ ಮೈತ್ರಿಕೂಟವು ಅಧಿಕಾರದಲ್ಲಿ 12 ವರ್ಷಗಳನ್ನು ಪೂರೈಸಿದೆ. ಪ್ರಧಾನಿ ನರೇಂದ್ರ ಮೋದಿ ಅವರು ಭಾರತದ ಅತ್ಯಂತ ಸುದೀರ್ಘ ಅವಧಿಗೆ ಸತತವಾಗಿ ಚುನಾಯಿತರಾದ ಪ್ರಧಾನಿ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಈ ಐತಿಹಾಸಿಕ ಸಂದರ್ಭವನ್ನು ಆಚರಿಸಲು ಇಂದು ರಾಷ್ಟ್ರ ರಾಜಧಾನಿಯ 'ಭಾರತ್ ಮಂಟಪ'ದಲ್ಲಿ ಎನ್‌ಡಿಎ ಪಾಲುದಾರ ಪಕ್ಷಗಳ ಬೃಹತ್ ಸಮಾವೇಶ ನಡೆಯಿತು. ಈ ನಿರ್ಣಾಯಕ ಸಭೆಯಲ್ಲಿ ಮಾತನಾಡಿದ ಪ್ರಧಾನಿ ಮೋದಿ, ಬಿಜೆಪಿಯ ಹಿರಿಯ ನಾಯಕರು ಮತ್ತು ಎನ್​ಡಿಎ ಮೈತ್ರಿಕೂಟದ ಎಲ್ಲಾ ಪಾಲುದಾರ ಪಕ್ಷಗಳ ಪ್ರತಿನಿಧಿಗಳು ಭಾಗವಹಿಸಿದ್ದರು.

ಇಷ್ಟು ದೂರ ಬರುತ್ತೇನೆಂದು ಕನಸಲ್ಲೂ ಅಂದುಕೊಂಡಿರಲಿಲ್ಲ; ಎನ್​ಡಿಎ ಸಭೆಯಲ್ಲಿ ಭಾವುಕರಾದ ಪ್ರಧಾನಿ ಮೋದಿ
PM Modi In NDA Conclave
ಸುಷ್ಮಾ ಚಕ್ರೆ
|

Updated on: Jun 10, 2026 | 9:09 PM

Share

ನವದೆಹಲಿ, ಜೂನ್ 10: ಅತಿ ದೀರ್ಘಾವಧಿಗೆ ಪ್ರಧಾನಿಯಾಗಿ ಅಧಿಕಾರ ನಡೆಸಿದ ಪ್ರಧಾನಮಂತ್ರಿಯೆಂಬ ಹೆಗ್ಗಳಿಕೆಗೆ ಪಾತ್ರರಾಗಿರುವ ನರೇಂದ್ರ ಮೋದಿ (PM Narendra Modi) ಭಾರತದ ಮೊದಲ ಪ್ರಧಾನಿ ಜವಾಹರಲಾಲ್ ನೆಹರು ಅವರ ದಾಖಲೆಯನ್ನು ಮುರಿದಿದ್ದಾರೆ. ಈ ಸಂದರ್ಭವನ್ನು ಆಚರಿಸಲು ದೆಹಲಿಯ ಭಾರತ್ ಮಂಟಪದಲ್ಲಿ ಎನ್​ಡಿಎ ನಾಯಕರ ಸಮಾವೇಶವನ್ನು ಆಯೋಜಿಸಲಾಗಿತ್ತು. ಈ ಸಮಾವೇಶದಲ್ಲಿ ಎನ್​ಡಿಎ ಮೈತ್ರಿಕೂಟದ ಎಲ್ಲಾ ನಾಯಕರಲ್ಲದೆ, ಎನ್‌ಡಿಎ ಆಡಳಿತವಿರುವ ಎಲ್ಲಾ 22 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ ಮುಖ್ಯಮಂತ್ರಿಗಳು ಹಾಗೂ ಉಪ ಮುಖ್ಯಮಂತ್ರಿಗಳು ಕೂಡ ಉಪಸ್ಥಿತರಿದ್ದರು. ಈ ಸಮಾವೇಶದಲ್ಲಿ ಮಾತನಾಡಿದ ಪ್ರಧಾನಿ ಮೋದಿ, ನಾನು ಮುಂದೊಂದು ದಿನ ಈ ದಾಖಲೆ ನಿರ್ಮಿಸುತ್ತೇನೆಂದು ಕನಸಿನಲ್ಲೂ ಅಂದುಕೊಂಡಿರಲಿಲ್ಲ. 12 ವರ್ಷ ಭಾರತಮಾತೆಯ ಸೇವೆ ಸಲ್ಲಿಸುವ ಅವಕಾಶ ಸಿಕ್ಕಿದ್ದು ದೇವರು ನನಗೆ ಕಲ್ಪಿಸಿಕೊಟ್ಟ ಅವಕಾಶ ಎಂದಿದ್ದಾರೆ.

ಎನ್‌ಡಿಎ ನಾಯಕರ ಸಭೆಯನ್ನುದ್ದೇಶಿಸಿ ಮಾತನಾಡಿದ ಪ್ರಧಾನಿ ಮೋದಿ, ದೇಶದ ಜನತೆ ಈಗ ರಾಜಕೀಯ ಸ್ಥಿರತೆಯ ಪ್ರಾಮುಖ್ಯತೆಯನ್ನು ಮತ್ತು ಸ್ಥಿರ ಸರ್ಕಾರದ ನಿರ್ಣಾಯಕ ನಿರ್ಧಾರಗಳ ಮಹತ್ವವನ್ನು ಅರ್ಥಮಾಡಿಕೊಂಡಿದ್ದಾರೆ ಎಂದು ಹೇಳಿದರು. ‘ವಿಕಸಿತ ಭಾರತ’ದ ಕನಸು ಯಾವುದೇ ಒಬ್ಬ ವ್ಯಕ್ತಿ ಅಥವಾ ಪಕ್ಷಕ್ಕೆ ಸೇರಿದ್ದಲ್ಲ, ಬದಲಿಗೆ ಅದು ದೇಶದ ಪ್ರತಿಯೊಬ್ಬ ನಾಗರಿಕನ ಸಂಕಲ್ಪವಾಗಿದೆ. ನನಗೆ ಜನರೇ ಜನಾರ್ದನ” ಎಂದರು.

“ರಾಷ್ಟ್ರ ಮಟ್ಟದಲ್ಲಿ ರಾಜಕೀಯ ಸ್ಥಿರತೆಯ ಪ್ರಾಮುಖ್ಯತೆಯನ್ನು ದೇಶದ ಜನತೆ ಚೆನ್ನಾಗಿ ಅರ್ಥಮಾಡಿಕೊಂಡಿದ್ದಾರೆ. ಅವರ ಪ್ರಬುದ್ಧತೆಯಿಂದಾಗಿಯೇ ನನಗೆ ಇಷ್ಟು ಸುದೀರ್ಘ ಕಾಲ ಸೇವೆ ಸಲ್ಲಿಸುವ ಅವಕಾಶ ಸಿಕ್ಕಿದೆ” ಎಂದು ಪ್ರಧಾನಿ ಮೋದಿ ಹೇಳಿದರು.

ಇದನ್ನೂ ಓದಿ: PM Modi Speech Live: ಪ್ರಧಾನಮಂತ್ರಿ ನರೇಂದ್ರ ಮೋದಿ ಭಾಷಣ; ಲೈವ್​​ ವಿಡಿಯೋ ಇಲ್ಲಿದೆ ನೋಡಿ

ಪ್ರಧಾನಿ ಮೋದಿ ಅವರು ಬುಧವಾರ ಭಾರತದ ಮೊದಲ ಪ್ರಧಾನಿ ಜವಾಹರಲಾಲ್ ನೆಹರು ಅವರ ದಾಖಲೆಯನ್ನು ಮುರಿದರು. 1952ರ ಸಾರ್ವತ್ರಿಕ ಚುನಾವಣೆಯ ನಂತರ ಚುನಾಯಿತ ಪ್ರಧಾನಿಯಾಗಿ ನೆಹರು ಅವರು ಹೊಂದಿದ್ದ 4,398 ದಿನಗಳ ನಿರಂತರ ಅಧಿಕಾರಾವಧಿಯ ದಾಖಲೆಯನ್ನು ಮೋದಿ ಹಿಂದಿಕ್ಕಿದ್ದಾರೆ. ನೆಹರು ಅವರ 1947ರಿಂದ 1952ರವರೆಗಿನ ಅವಧಿಯು ಮಧ್ಯಂತರ ಸರ್ಕಾರದ ಮುಖ್ಯಸ್ಥರಾಗಿದ್ದ ಅವಧಿಯಾಗಿತ್ತು. ಏಕೆಂದರೆ 1952ರವರೆಗೆ ದೇಶದಲ್ಲಿ ಚುನಾವಣೆಗಳು ನಡೆದಿರಲಿಲ್ಲ. ಮಾಜಿ ಪ್ರಧಾನಿ ಇಂದಿರಾ ಗಾಂಧಿ ಅವರು ಒಟ್ಟು 14 ವರ್ಷಗಳಿಗಿಂತ ಹೆಚ್ಚು ಕಾಲ ಪ್ರಧಾನಿಯಾಗಿ ಸೇವೆ ಸಲ್ಲಿಸಿದ್ದಾರೆಯಾದರೂ ಅವರ ಅಧಿಕಾರಾವಧಿಯು ನಿರಂತರವಾಗಿರಲಿಲ್ಲ. ಇದೀಗ ಸಚಿವ ಸಂಪುಟದಲ್ಲಿ ಸತತ 4,399 ದಿನಗಳನ್ನು ಪೂರೈಸುವ ಮೂಲಕ ಮೋದಿ ಭಾರತದ ಇತಿಹಾಸದಲ್ಲೇ ಅತ್ಯಂತ ಸುದೀರ್ಘ ಅವಧಿಗೆ ಸತತವಾಗಿ ಚುನಾಯಿತರಾದ ಪ್ರಧಾನ ಮಂತ್ರಿಯಾಗಿದ್ದಾರೆ.

ಈ ಹಿನ್ನೆಲೆಯಲ್ಲಿ ಇಂದು ಎನ್‌ಡಿಎ ನಾಯಕರ ಸಭೆಯನ್ನುದ್ದೇಶಿಸಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ, “2014ರಲ್ಲಿ ಭಾರತವು ತನಗೆ ಅಗತ್ಯವಿದ್ದ ಬಹುಪಾಲು ಮೊಬೈಲ್ ಫೋನ್‌ಗಳನ್ನು ವಿದೇಶಗಳಿಂದ ಆಮದು ಮಾಡಿಕೊಳ್ಳುತ್ತಿತ್ತು. ಆದರೆ ಇಂದು, ಭಾರತವು ದೇಶೀಯವಾಗಿಯೇ 33 ಕೋಟಿಗೂ (330 ಮಿಲಿಯನ್) ಹೆಚ್ಚು ಮೊಬೈಲ್ ಹ್ಯಾಂಡ್‌ಸೆಟ್‌ಗಳನ್ನು ತಯಾರಿಸುತ್ತಿದೆ. 2014ರಲ್ಲಿ ದೇಶದ ಸೌರಶಕ್ತಿ ಸಾಮರ್ಥ್ಯವು ಕೇವಲ 2.5 ಗಿಗಾವ್ಯಾಟ್ ಆಗಿತ್ತು. ಇಂದು ಅದು 150 ಗಿಗಾವ್ಯಾಟ್‌ಗಳನ್ನು ಮೀರಿದೆ. ಎಥೆನಾಲ್ ಮಿಶ್ರಣವು 2014ರಲ್ಲಿ ಕೇವಲ 1.5%ರಷ್ಟಿತ್ತು, ಆದರೆ ಇಂದು ಅದು 20% ತಲುಪಿದೆ. 2014ರಲ್ಲಿ ದೇಶದಲ್ಲಿ ಒಂದೇ ಒಂದು ಸೆಮಿಕಂಡಕ್ಟರ್ ಘಟಕ ಇರಲಿಲ್ಲ. ಇಂದು ನಿರ್ಮಾಣ ಹಂತದಲ್ಲಿರುವ 10ಕ್ಕೂ ಹೆಚ್ಚು ಸೆಮಿಕಂಡಕ್ಟರ್ ಘಟಕಗಳು ಭಾರತವನ್ನು ಆಧುನಿಕತೆಯತ್ತ ಮುನ್ನಡೆಸುತ್ತಿವೆ” ಎಂದು ವಿವರಿಸಿದರು.

“ನಾವು ದೇಶದ ಅಗತ್ಯತೆಗಳನ್ನೇ ನಮ್ಮ ನೀತಿಗಳು ಮತ್ತು ನಿರ್ಧಾರಗಳ ಅಡಿಪಾಯವನ್ನಾಗಿ ಮಾಡಿಕೊಂಡೆವು. ಹೊಸ ಉಪಕ್ರಮಗಳನ್ನು ಕೈಗೊಳ್ಳಲು ಹೊಸ ಆಲೋಚನಾ ಶೈಲಿಯನ್ನು ಅಳವಡಿಸಿಕೊಂಡೆವು. ಯುವಕರಿಗಾಗಿ ನಾವು ಪ್ರತ್ಯೇಕ ಕೌಶಲ್ಯಾಭಿವೃದ್ಧಿ ಸಚಿವಾಲಯವನ್ನು ಸ್ಥಾಪಿಸಿದೆವು. ಸಹಕಾರ ವಲಯವನ್ನು ಬಲಪಡಿಸಲು ಪ್ರತ್ಯೇಕ ಸಹಕಾರ ಸಚಿವಾಲಯವನ್ನು ರಚಿಸಲಾಯಿತು ಮತ್ತು ನಮ್ಮ ಮೀನುಗಾರರಿಗಾಗಿ ಮೀಸಲಾದ ಮೀನುಗಾರಿಕೆ ಸಚಿವಾಲಯವನ್ನು ಸ್ಥಾಪಿಸಲಾಯಿತು. ಅಭಿವೃದ್ಧಿಯ ಈ ಓಟದಲ್ಲಿ ಯಾರೂ ಹಿಂದೆ ಉಳಿಯಬಾರದು ಎಂಬುದು ನಮ್ಮ ಸ್ಪಷ್ಟ ಗುರಿಯಾಗಿತ್ತು. ನಾವು ದಿವ್ಯಾಂಗರಿಗಾಗಿ (ವಿಕಲಚೇತನರು) ಕಾನೂನುಗಳನ್ನು ರೂಪಿಸಿದೆವು. ಬುಡಕಟ್ಟು ಜನಾಂಗದವರಿಗಾಗಿ ‘ಜನ್ಮನ್’ನಂತಹ ಯೋಜನೆಗಳನ್ನು ಪ್ರಾರಂಭಿಸಿದೆವು” ಎಂದು ತಮ್ಮ ಸರ್ಕಾರದ ಸಾಧನೆಗಳನ್ನು ಪಟ್ಟಿ ಮಾಡಿದರು.

ಇದನ್ನೂ ಓದಿ: ನೆಹರು ದಾಖಲೆ ಮುರಿದ ಪ್ರಧಾನಿ ಮೋದಿಗೆ ಸಂಪುಟ ಸಚಿವರಿಂದ ಎದ್ದು ನಿಂತು ಚಪ್ಪಾಳೆಯ ಗೌರವ

“ಇಂದು, ಈ ಸುದೀರ್ಘ ಪಯಣದ ಭಾಗವಾಗಿರುವ ಎಲ್ಲಾ ಸಹೋದ್ಯೋಗಿಗಳಿಗೆ ನಾನು ನನ್ನ ಕೃತಜ್ಞತೆಗಳನ್ನು ಸಲ್ಲಿಸುತ್ತೇನೆ. ಈ ಸಂದರ್ಭದಲ್ಲಿ ಎನ್‌ಡಿಎ ಕುಟುಂಬದ ಸದಸ್ಯರು ಅಭಿನಂದನಾ ನಿರ್ಣಯವನ್ನು ಮಂಡಿಸಿದ್ದಾರೆ. ಇದು ನಿಮ್ಮ ಪ್ರೀತಿ ಮತ್ತು ಉದಾರತೆಯನ್ನು ಪ್ರತಿಬಿಂಬಿಸುತ್ತದೆ. ಆದರೆ ನಾನು ಈ ಪಯಣವನ್ನು ನನ್ನ ವೈಯಕ್ತಿಕ ಸಾಧನೆ ಎಂದು ಪರಿಗಣಿಸುವುದಿಲ್ಲ. ಇದು ಪ್ರತಿಯೊಂದು ವಿಷಯದಲ್ಲೂ ನಮ್ಮ ಸಾಮೂಹಿಕ ಸಾಧನೆಯಾಗಿದೆ. ಎನ್‌ಡಿಎಯ ಪ್ರತಿಯೊಂದು ಪಾಲುದಾರ ಪಕ್ಷದ ಜಂಟಿ ಯಶಸ್ಸಾಗಿದೆ. ಆದ್ದರಿಂದ, ನಾನು ಈ ನಿರ್ಣಯವನ್ನು ನಿಮಗೆ ಮತ್ತು ಬಿಜೆಪಿ ಸೇರಿದಂತೆ ನಮ್ಮ ಎನ್‌ಡಿಎ ಕುಟುಂಬದ ಪ್ರತಿಯೊಬ್ಬ ಕಾರ್ಯಕರ್ತನಿಗೆ ಅರ್ಪಿಸುತ್ತೇನೆ. ಭಾರತದ ಜನರ ಸಹಜ ಬುದ್ಧಿವಂತಿಕೆ ಯಾವಾಗಲೂ ಅಪಾರವಾದದ್ದು.” ಎಂದು ಮೋದಿ ಹೇಳಿದರು.

“ಭಾರತ ಮಾತೆಗೆ ಇಷ್ಟು ಸುದೀರ್ಘ ಕಾಲ ಸೇವೆ ಸಲ್ಲಿಸುವುದು, ಆಕೆಯ ಸೇವೆ ಮಾಡುವ ಸೌಭಾಗ್ಯ ಸಿಗುವುದು ದೇವರ ವಿಶೇಷ ಕೃಪೆಯಿಂದ ಮಾತ್ರ ಸಾಧ್ಯ. ಮತ್ತು ನನಗೆ, ಜನರೇ ದೇವರ ಸ್ವರೂಪ. ಅದಕ್ಕಾಗಿಯೇ ನಾನು ಈ ಸೇವೆಯನ್ನು ಯಾವಾಗಲೂ ಒಂದು ಆಧ್ಯಾತ್ಮಿಕ ಸಾಧನೆ ಅಥವಾ ತಪಸ್ಸು ಎಂದು ಭಾವಿಸಿದ್ದೇನೆ. ಈ ಆಧ್ಯಾತ್ಮಿಕ ಸಾಧನೆ ಎಂದಿಗೂ ಏಕಾಂಗಿಯಾಗಿರಲಿಲ್ಲ. ಇದೊಂದು ಸಾಮೂಹಿಕ ‘ಯಜ್ಞ’ವಾಗಿದ್ದು, ಇದರಲ್ಲಿ ನೀವೆಲ್ಲರೂ ಮತ್ತು ಇತರ ಅನೇಕ ಸಹೋದ್ಯೋಗಿಗಳು ಕರ್ತವ್ಯ ಪ್ರಜ್ಞೆಯಿಂದ ತಮ್ಮ ಸೇವೆಯನ್ನು ಕೊಡುಗೆಯಾಗಿ ನೀಡಿದ್ದೀರಿ” ಎಂದು ಪ್ರಧಾನಿ ಮೋದಿ ಭಾವುಕರಾದರು.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Follow Us
ಸುಷ್ಮಾ ಚಕ್ರೆ
ಸುಷ್ಮಾ ಚಕ್ರೆ

ಮೂಲತಃ ಮಲೆನಾಡ ಹೆಬ್ಬಾಗಿಲು ಶಿವಮೊಗ್ಗದವಳು. ಬೆಂಗಳೂರಿನಲ್ಲಿ ವಾಸ. ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದೇನೆ. 10 ವರ್ಷಗಳಿಂದ ಸಂಯುಕ್ತ ಕರ್ನಾಟಕ, ವಿಜಯವಾಣಿ, ನ್ಯೂಸ್18 ಕನ್ನಡ, ಟಿವಿ9 ಡಿಜಿಟಲ್ ವಿಭಾಗದಲ್ಲಿ ಕೆಲಸ ಮಾಡಿದ ಅನುಭವವಿದೆ. ಸಾಹಿತ್ಯ, ಸಂಗೀತ, ಸಿನಿಮಾ, ಬರವಣಿಗೆಯಲ್ಲಿ ಆಸಕ್ತಿ.

Read More