AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

‘ಸಾಯುವುದಿದ್ದರೆ ಸಾಯಿರಿ, ಬಸ್ ನಿಲ್ಲಿಸಲ್ಲ’; ನೊಯ್ಡಾ ಬಸ್ ದುರಂತದ ವೇಳೆ ಚಾಲಕ, ಕಂಡಕ್ಟರ್‌ ಕ್ರೂರ ವರ್ತನೆ

ಉತ್ತರ ಪ್ರದೇಶದ ಗ್ರೇಟರ್ ನೋಯ್ಡಾದ ಯಮುನಾ ಎಕ್ಸ್‌ಪ್ರೆಸ್‌ವೇನಲ್ಲಿ ಸಂಭವಿಸಿದ ಭೀಕರ ಅಗ್ನಿ ಅನಾಹುತದಲ್ಲಿ ಸ್ಲೀಪರ್ ಬಸ್ ಸಂಪೂರ್ಣ ಭಸ್ಮಗೊಂಡು 9 ಜನ ಪ್ರಯಾಣಿಕರು ಸಜೀವ ದಹನಗೊಂಡಿದ್ದಾರೆ. ಈ ಘಟನೆಯ ಹಿಂದೆ ಬಸ್ ಚಾಲಕ ಮತ್ತು ಕಂಡಕ್ಟರ್ ಅವರ ತೀವ್ರ ಬೇಜವಾಬ್ದಾರಿ ಹಾಗೂ ಕ್ರೂರ ವರ್ತನೆ ಬಯಲಿಗೆ ಬಂದಿದ್ದು, ಪೊಲೀಸರು ಇಬ್ಬರನ್ನೂ ಬಂಧಿಸಿದ್ದಾರೆ. ಬಸ್ ಚಲಿಸುತ್ತಿದ್ದಾಗ ಚಾಲಕ ಮತ್ತು ಕಂಡಕ್ಟರ್ ಕ್ಯಾಬಿನ್‌ನಲ್ಲಿ ಸಿಗರೇಟ್ ಹಾಗೂ ಬೀಡಿಗಳನ್ನು ಸೇದುತ್ತಿದ್ದರು. ಪ್ರಯಾಣಿಕರು ಧೂಮಪಾನಕ್ಕೆ ಆಕ್ಷೇಪ ವ್ಯಕ್ತಪಡಿಸಿದಾಗ, ಇಬ್ಬರೂ ನಗುತ್ತಾ, ಸುಮ್ಮನಿರಲು ಬೆದರಿಕೆ ಹಾಕಿದ್ದರು.  

‘ಸಾಯುವುದಿದ್ದರೆ ಸಾಯಿರಿ, ಬಸ್ ನಿಲ್ಲಿಸಲ್ಲ’; ನೊಯ್ಡಾ ಬಸ್ ದುರಂತದ ವೇಳೆ ಚಾಲಕ, ಕಂಡಕ್ಟರ್‌ ಕ್ರೂರ ವರ್ತನೆ
Noida Fire Accident
ಸುಷ್ಮಾ ಚಕ್ರೆ
|

Updated on: Sep 24, 2026 | 3:25 PM

Share

ನವದೆಹಲಿ, ಸೆಪ್ಟೆಂಬರ್ 24: ಉತ್ತರ ಪ್ರದೇಶದ ಗ್ರೇಟರ್ ನೋಯ್ಡಾದ ಯಮುನಾ ಎಕ್ಸ್‌ಪ್ರೆಸ್‌ವೇನಲ್ಲಿ ಬುಧವಾರ ತಡರಾತ್ರಿ ಸಂಭವಿಸಿದ ಭೀಕರ ಬಸ್ ಅಗ್ನಿ ಅವಘಡದಲ್ಲಿ 9 ಮಂದಿ ಪ್ರಯಾಣಿಕರು ದುರಂತ ಅಂತ್ಯ ಕಂಡಿದ್ದಾರೆ. ದೆಹಲಿಯ ಕಾಶ್ಮೀರಿ ಗೇಟ್‌ನಿಂದ ಉತ್ತರ ಪ್ರದೇಶದ ಮಹೋಬಾಕ್ಕೆ ತೆರಳುತ್ತಿದ್ದ ಬಿಹಾರ ಮೂಲದ ‘ರಾಜ್ ಕಲ್ಪನಾ ಟ್ರಾವೆಲ್ಸ್’ ಬಸ್‌ನಲ್ಲಿ ರಾತ್ರಿ ಸುಮಾರು 11 ಗಂಟೆಗೆ ಈ ದುರಂತ ಸಂಭವಿಸಿದೆ. ಪ್ರಯಾಣಿಕರೊಬ್ಬರು ನೀಡಿದ ದೂರಿನ ಆಧಾರದ ಮೇಲೆ ಜೇವರ್ ಪೊಲೀಸ್ ಠಾಣೆಯಲ್ಲಿ ದಾಖಲಾಗಿರುವ ಎಫ್‌ಐಆರ್ ಪ್ರಕಾರ, ಬಸ್ ಚಾಲಕ ಮತ್ತು ಕಂಡಕ್ಟರ್ ಇಬ್ಬರ ನಿರ್ಲಕ್ಷ್ಯವೇ ಈ ದುರಂತಕ್ಕೆ ಕಾರಣ ಎಂಬುದು ಸ್ಪಷ್ಟವಾಗಿದೆ.

ಸಾಯುವುದಿದ್ದರೆ ಸಾಯಿರಿ ಎಂದಿದ್ದ ಡ್ರೈವರ್:

ಹಮೀರ್‌ಪುರ ಜಿಲ್ಲೆಯ ಪ್ರಯಾಣಿಕ ಸುನೀಲ್ ಕುಮಾರ್ ಎಂಬುವವರು ನೀಡಿದ ದೂರಿನ ಆಧಾರದ ಮೇಲೆ ಜೇವರ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಘಟನೆಯ ಸತ್ಯಾಸತ್ಯತೆಗಳನ್ನು ಬಹಿರಂಗಪಡಿಸಿದೆ. ದೆಹಲಿಯಿಂದ ರಾತ್ರಿ 9 ಗಂಟೆಗೆ ಹೊರಟ ಬಸ್ ಯಮುನಾ ಎಕ್ಸ್‌ಪ್ರೆಸ್‌ವೇಯ 33 ಕಿ.ಮೀ ಮಾರ್ಗ ತಲುಪುತ್ತಿದ್ದಂತೆ ಚಾಲಕನ ಕ್ಯಾಬಿನ್‌ನಿಂದ ಏನೋ ಸುಟ್ಟ ವಾಸನೆ ಬರಲಾರಂಭಿಸಿತ್ತು. ಚಾಲಕ ಮತ್ತು ಕಂಡಕ್ಟರ್ ಕ್ಯಾಬಿನ್‌ನಲ್ಲಿ ನಿರಂತರವಾಗಿ ಬೀಡಿ ಮತ್ತು ಸಿಗರೇಟ್ ಸೇದುತ್ತಿದ್ದರು. ಸುಟ್ಟ ವಾಸನೆ ಬರುವ ಬಗ್ಗೆ ಪ್ರಯಾಣಿಕರು ಎಚ್ಚರಿಸಿದಾಗ, ಅವರಿಬ್ಬರೂ”ಬಸ್‌ನಲ್ಲಿ ಇದು ದಿನವೂ ಬರುವ ವಾಸನೆಯೇ, ನಾವೇನೂ ಬಸ್ ನಿಲ್ಲಿಸುವುದಿಲ್ಲ” ಎಂದು ನಿರ್ಲಕ್ಷ್ಯದಿಂದ ಉತ್ತರಿಸಿದ್ದರು.

ಇದನ್ನೂ ಓದಿ: ಯಮುನಾ ಎಕ್ಸ್‌ಪ್ರೆಸ್‌ವೇಯಲ್ಲಿ ಬೆಚ್ಚಿಬೀಳಿಸೊ ದುರಂತ: ಸ್ಲೀಪರ್ ಬಸ್‌ಗೆ ಬೆಂಕಿ ಹೊತ್ತಿಕೊಂಡು 9 ಮಂದಿ ಸಜೀವ ದಹನ

ಅದಾದ ಕೆಲವೇ ಕ್ಷಣಗಳಲ್ಲಿ ಚಾಲಕನ ಸೀಟಿನ ಬಳಿ ಬೆಂಕಿಯ ಜ್ವಾಲೆಗಳು ಕಾಣಿಸಿಕೊಂಡಾಗ ಪ್ರಯಾಣಿಕರು ಗಾಬರಿಯಿಂದ ಕಿರುಚಾಡಿದರು. ಆಗ ಚಾಲಕ ಮತ್ತು ಕಂಡಕ್ಟರ್, “ನೀವು ಸಾಯುವುದಿದ್ದರೆ ಸಾಯಿರಿ, ನಾವು ಬಸ್ ನಿಲ್ಲಿಸುವುದಿಲ್ಲ” ಎಂದು ಹೇಳುತ್ತಾ ಮುಂದೆ ಹೋಗುತ್ತಲೇ ಇದ್ದರು. ಕೊನೆಗೆ ಬಸ್ ತೀವ್ರವಾಗಿ ಹರಡಿದಾಗ ಬಸ್ ನಿಲ್ಲುವಷ್ಟರಲ್ಲಿ ಬೆಂಕಿ ಇಡೀ ವಾಹನವನ್ನು ವ್ಯಾಪಿಸಿ ದಟ್ಟ ಹೊಗೆ ತುಂಬಿಕೊಂಡಿತ್ತು. ದೂರುದಾರ ಸುನೀಲ್ ಸೇರಿದಂತೆ ಹಲವು ಪ್ರಯಾಣಿಕರು ಕಿಟಕಿಗಳಿಂದ ಹೊರಜಿಗಿಜಿ ಜೀವ ಉಳಿಸಿಕೊಂಡರೆ, ಮಹಿಳೆ ಸೇರಿದಂತೆ 9 ಪ್ರಯಾಣಿಕರು ಹೊರಬರಲಾಗದೆ ಬಸ್​​ನೊಳಗೇ ಸುಟ್ಟು ಕರಕಲಾದರು.

ಗ್ರೇಟರ್ ನೋಯ್ಡಾ ಪೊಲೀಸರ ಅಧಿಕೃತ ಹೇಳಿಕೆಯ ಪ್ರಕಾರ, ಜೇವರ್‌ನ ದಯಾನಂದಪುರ ಗ್ರಾಮದ ಬಳಿ ಈ ದುರಂತ ನಡೆದಿದೆ. ಬಸ್‌ನ ಏರ್ ಕಂಡಿಷನಿಂಗ್ (ಎಸಿ) ಸಿಸ್ಟಮ್‌ನಲ್ಲಿ ಉಂಟಾದ ಸ್ಪಾರ್ಕ್ ಅಥವಾ ಸ್ಫೋಟದಿಂದ ಎಂಜಿನ್‌ನ ಲೂಬ್ರಿಕೇಟಿಂಗ್ ಆಯಿಲ್‌ಗೆ ಬೆಂಕಿ ಹೊತ್ತಿಕೊಂಡಿದೆ. ಇದರಿಂದ ಕೆಲವೇ ನಿಮಿಷಗಳಲ್ಲಿ ಇಡೀ ಬಸ್ ಬೆಂಕಿಯ ಕೆನ್ನಾಲಿಗೆಗೆ ತುತ್ತಾಗಿದೆ. ಗಾಯಗೊಂಡ ಹಲವು ಪ್ರಯಾಣಿಕರನ್ನು ಜೇವರ್‌ನ ಕೈಲಾಶ್ ಆಸ್ಪತ್ರೆಗೆ ದಾಖಲಿಸಲಾಗಿದ್ದು, 9 ಜನರು ಮೃತಪಟ್ಟಿರುವುದಾಗಿ ವೈದ್ಯರು ದೃಢಪಡಿಸಿದ್ದಾರೆ.

ಇದನ್ನೂ ಓದಿ: ತಿರುಚ್ಚಿ-ಚೆನ್ನೈ ಹೆದ್ದಾರಿಯಲ್ಲಿ ಭೀಕರ ರಸ್ತೆ ಅಪಘಾತ: ಬಸ್‌ ಹಿಂಭಾಗಕ್ಕೆ ಕಾರು ಡಿಕ್ಕಿ, ಮದುವೆ ಮುಗಿಸಿ ಮರಳುತ್ತಿದ್ದ ಮೂವರ ಸಾವು

ಚಾಲಕ, ಕಂಡಕ್ಟರ್ ವಿರುದ್ಧ ಕ್ರಿಮಿನಲ್ ಪ್ರಕರಣ:

ಅಪಘಾತ ಸಂಭವಿಸುತ್ತಿದ್ದಂತೆಯೇ ಚಾಲಕ ಮತ್ತು ಕಂಡಕ್ಟರ್ ಸ್ಥಳದಿಂದ ಓಡಿಹೋದರು. ಚಾಲಕ ಮತ್ತು ಕಂಡಕ್ಟರ್ ಅವರ ಉದ್ದೇಶಪೂರ್ವಕ ತೀವ್ರ ನಿರ್ಲಕ್ಷ್ಯ, ಬೇಜವಾಬ್ದಾರಿಯೇ ಈ ಸಾವುಗಳಿಗೆ ನೇರ ಕಾರಣ ಎಂದು ಎಫ್‌ಐಆರ್‌ನಲ್ಲಿ ಆರೋಪಿಸಲಾಗಿದೆ. ಪರಾರಿಯಾಗಿರುವ ಇಬ್ಬರ ಬಂಧನಕ್ಕೆ ವಿಶೇಷ ಪೊಲೀಸ್ ಪಡೆಗಳನ್ನು ನಿಯೋಜಿಸಲಾಗಿದೆ.

ಪ್ರಧಾನಿ ಮೋದಿ ಹಾಗೂ ಸಿಎಂ ಯೋಗಿ ಸಂತಾಪ:

ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಈ ಭೀಕರ ದುರಂತಕ್ಕೆ ತೀವ್ರ ಕಂಬನಿ ಮಿಡಿದಿದ್ದು, ಮೃತರ ಕುಟುಂಬಸ್ಥರಿಗೆ 2 ಲಕ್ಷ ರೂ. ಹಾಗೂ ಗಾಯಗೊಂಡವರಿಗೆ 50,000 ರೂ. ಪರಿಹಾರ ಘೋಷಿಸಿದ್ದಾರೆ. ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರೂ ಸಹ ಮೃತರ ಕುಟುಂಬಕ್ಕೆ 2 ಲಕ್ಷ ರೂ. ಪರಿಹಾರ ಪ್ರಕಟಿಸಿದ್ದು, ಗಾಯಾಳುಗಳಿಗೆ ಜೇವರ್‌ನ ಕೈಲಾಶ್ ಆಸ್ಪತ್ರೆಯಲ್ಲಿ ಉಚಿತ ಮತ್ತು ಸೂಕ್ತ ಚಿಕಿತ್ಸೆ ನೀಡಲು ಅಧಿಕಾರಿಗಳಿಗೆ ಸೂಚಿಸಿದ್ದಾರೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ 

Follow Us
ಸುಷ್ಮಾ ಚಕ್ರೆ
ಸುಷ್ಮಾ ಚಕ್ರೆ

ಮೂಲತಃ ಮಲೆನಾಡ ಹೆಬ್ಬಾಗಿಲು ಶಿವಮೊಗ್ಗದವಳು. ಬೆಂಗಳೂರಿನಲ್ಲಿ ವಾಸ. ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದೇನೆ. 10 ವರ್ಷಗಳಿಂದ ಸಂಯುಕ್ತ ಕರ್ನಾಟಕ, ವಿಜಯವಾಣಿ, ನ್ಯೂಸ್18 ಕನ್ನಡ, ಟಿವಿ9 ಡಿಜಿಟಲ್ ವಿಭಾಗದಲ್ಲಿ ಕೆಲಸ ಮಾಡಿದ ಅನುಭವವಿದೆ. ಸಾಹಿತ್ಯ, ಸಂಗೀತ, ಸಿನಿಮಾ, ಬರವಣಿಗೆಯಲ್ಲಿ ಆಸಕ್ತಿ.

Read More