ಅಣೆಕಟ್ಟುಗಳ ಸುರಕ್ಷತೆಗೆ ಮುಂಗಾರು ಮುನ್ನವೇ ಸಿದ್ಧತೆ, ಶಾಲಾ ಪಠ್ಯದಲ್ಲೂ ಪಾಠ: ಜಲ ಭದ್ರತೆಗೆ ಪ್ರಧಾನಿಯಿಂದ ಹೊಸ ಮಾರ್ಗಸೂಚಿ
ಪ್ರಧಾನಿ ನರೇಂದ್ರ ಮೋದಿ ಅವರು ನೀರು ಸಂರಕ್ಷಣೆಯನ್ನು ಕೇವಲ ಸರ್ಕಾರದ ಕೆಲಸವಾಗಿರದೆ, ಜನಾಂದೋಲನವಾಗಿ ರೂಪಿಸಲು ಕರೆ ನೀಡಿದ್ದಾರೆ. ರಾಷ್ಟ್ರೀಯ ಜಲ ಶೃಂಗದಲ್ಲಿ ಮಾತನಾಡಿದ ಅವರು, ನೀರಿನ ಭವಿಷ್ಯದ ಬಿಕ್ಕಟ್ಟು ನಿವಾರಿಸಲು ಆಧುನಿಕ ತಂತ್ರಜ್ಞಾನ, ಕೃತಕ ಬುದ್ಧಿಮತ್ತೆ (AI) ಮತ್ತು ಅಣೆಕಟ್ಟುಗಳ ಸುರಕ್ಷತೆಗೆ ಒತ್ತು ನೀಡಲು ಸೂಚಿಸಿದರು. ಶಾಲಾ ಪಠ್ಯಕ್ರಮದಲ್ಲಿ ಜಲ ಸಾಕ್ಷರತೆಯನ್ನು ಅಳವಡಿಸುವುದು ಪ್ರಮುಖವಾಗಿದೆ ಎಂದರು.

ನವದೆಹಲಿ, ಸೆಪ್ಟೆಂಬರ್ 03: ದೇಶದ ಭವಿಷ್ಯದ ನೀರಿನ ಬಿಕ್ಕಟ್ಟನ್ನು ಎದುರಿಸಲು ಆಧುನಿಕ ತಂತ್ರಜ್ಞಾನ ಹಾಗೂ ಕೃತಕ ಬುದ್ಧಿಮತ್ತೆ ಬಳಕೆ ಅನಿವಾರ್ಯ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ. ಕೇಂದ್ರ ಜಲಶಕ್ತಿ ಸಚಿವಾಲಯ ಆಯೋಜಿಸಿದ್ದ ರಾಷ್ಟ್ರೀಯ ಸಮ್ಮೇಳನದಲ್ಲಿ ಮಾತನಾಡಿದ ಅವರು, ನೀರಿನ ಸಂರಕ್ಷಣೆ ಕೇವಲ ಸರ್ಕಾರಿ ಕೆಲಸವಾಗದೆ ಜನರ ಸಹಭಾಗಿತ್ವದ ಚಳವಳಿಯಾಗಬೇಕು ಎಂದು ಕರೆ ನೀಡಿದರು.
ನಗರಗಳ ಜನಸಂಖ್ಯೆ ಹೆಚ್ಚುತ್ತಿರುವ ಕಾರಣ ಭವಿಷ್ಯದ ನೀರಿನ ಬೇಡಿಕೆಯನ್ನು ನಿಭಾಯಿಸಲು ಸ್ಥಳೀಯ ಸಂಸ್ಥೆಗಳು ಸಜ್ಜಾಗಬೇಕು ಎಂದು ಪ್ರಧಾನಿ ಹೇಳಿದರು. ನೀರಿನ ವ್ಯರ್ಥ ಹರಿವನ್ನು ತಡೆಯಲು, ಲಭ್ಯತೆಯನ್ನು ನಿಖರವಾಗಿ ಅಂದಾಜಿಸಲು ಮತ್ತು ಸಂಸ್ಕರಿಸಿದ ನೀರನ್ನು ಕೃಷಿ ಹಾಗೂ ಕೈಗಾರಿಕೆಗೆ ಬಳಸಲು ಎಐ ಆಧಾರಿತ ದತ್ತಾಂಶ ವ್ಯವಸ್ಥೆ ಅತಿ ಮುಖ್ಯ ಎಂದರು.
ಜತೆಗೆ, ಪ್ರತಿ ಮಳೆಗಾಲಕ್ಕೂ ಮುನ್ನ ಅಣೆಕಟ್ಟುಗಳ ಸುರಕ್ಷತೆ ಪರಿಶೀಲಿಸುವುದು, ಕೆರೆ-ಜಲಾಶಯಗಳಲ್ಲಿ ಹೂಳು ತೆಗೆಯುವುದು ಮತ್ತು ಶಾಲಾ ಪಠ್ಯಗಳಲ್ಲಿ ಜಲ ಸಾಕ್ಷರತೆ ಸೇರಿಸುವುದನ್ನು ಕಡ್ಡಾಯಗೊಳಿಸಲು ಸಲಹೆ ನೀಡಿದರು. ಗುಜರಾತ್ ಅನುಭವವನ್ನು ಸ್ಮರಿಸಿದ ಅವರು, ಸರಿಯಾದ ಯೋಜನೆ ಮತ್ತು ಇಚ್ಛಾಶಕ್ತಿ ಇದ್ದರೆ ನೀರಿನ ಕೊರತೆಯನ್ನೂ ಸಮೃದ್ಧಿಯನ್ನಾಗಿ ಬದಲಿಸಬಹುದು ಎಂದು ವಿವರಿಸಿದರು.
ಮತ್ತಷ್ಟು ಓದಿ: ಪಾಕ್ ಪ್ರಧಾನಿ ಎದುರಲ್ಲೇ ಭಯೋತ್ಪಾದನೆ ವಿರುದ್ಧ ಗುಡುಗಿದ ಮೋದಿ:ಟೆರರಿಸಂ ಯಾರಿಗೂ ಆಸ್ತಿಯಾಗಲ್ಲ, ಎರಡು ನಿಲುವು ಬಿಡಿ ಎಂದು ಖಡಕ್ ಎಚ್ಚರಿಕೆ
ಪ್ರಧಾನಿ ಮೋದಿ ನೀಡಿದ ಪ್ರಮುಖ 5 ಜಲ ಸೂತ್ರಗಳು
ದತ್ತಾಂಶ ಸಂಗ್ರಹಕ್ಕೆ ಕೃತಕ ಬುದ್ಧಿಮತ್ತೆ : ನೀರಿನ ಲಭ್ಯತೆ, ಬಳಕೆ, ವ್ಯರ್ಥವಾಗುವ ಪ್ರಮಾಣ ಮತ್ತು ಭವಿಷ್ಯದ ಕೊರತೆಯನ್ನು ನಿಖರವಾಗಿ ಅಂದಾಜಿಸಲು ಏಕರೂಪದ ವ್ಯವಸ್ಥೆಯಡಿ ದತ್ತಾಂಶ ಸಂಗ್ರಹಣೆ ಹಾಗೂ ವಿಶ್ಲೇಷಣೆಗೆ ಎಐ ತಂತ್ರಜ್ಞಾನವನ್ನು ಕಡ್ಡಾಯವಾಗಿ ಬಳಸಬೇಕು.
ಸಂಸ್ಕರಿಸಿದ ನೀರಿನ ಮರುಬಳಕೆ : ಕೃಷಿ ಮತ್ತು ಕೈಗಾರಿಕಾ ಉದ್ದೇಶಗಳಿಗೆ ಶುದ್ಧ ಕುಡಿಯುವ ನೀರನ್ನು ಬಳಸುವ ಬದಲು, ತ್ಯಾಜ್ಯ ನೀರನ್ನು ವೈಜ್ಞಾನಿಕವಾಗಿ ಸಂಸ್ಕರಿಸಿ ಮರುಬಳಕೆ ಮಾಡುವ ಸಮಗ್ರ ನೀಲನಕ್ಷೆ ಸಿದ್ಧಪಡಿಸಬೇಕು.
‘ಜಲ ಉತ್ಸವ‘: ನೀರು ಕೇವಲ ಸರ್ಕಾರದ ಜವಾಬ್ದಾರಿಯಲ್ಲ, ಅದು ಸಾರ್ವಜನಿಕರ ಸಹಭಾಗಿತ್ವದೊಂದಿಗೆ ನಡೆಯುವ ‘ಜನಾಂದೋಲನ’ವಾಗಬೇಕು. ಜನರಲ್ಲಿ ನೀರಿನ ಮೌಲ್ಯವನ್ನು ಹೆಚ್ಚಿಸಲು ಜಲ ಉತ್ಸವ ಆಚರಣೆಗಳನ್ನು ವಿಸ್ತರಿಸಬೇಕು.
ಹೂಳು ತೆಗೆಯಲು ಎಸ್‌ಒಪಿ : ಜಲಾಶಯಗಳು, ಕೆರೆ-ಕಟ್ಟೆಗಳಲ್ಲಿ ಹೂಳು ತೆಗೆಯುವುದನ್ನು ನಿಯಮಿತ ವಾರ್ಷಿಕ ಕಾರ್ಯಕ್ರಮವನ್ನಾಗಿ ಮಾಡಬೇಕು ಮತ್ತು ಇದಕ್ಕಾಗಿ ಪ್ರಮಾಣಿತ ಕಾರ್ಯಾಚರಣಾ ವಿಧಾನವನ್ನು (SOP) ರೂಪಿಸಬೇಕು.
ಪೋಸ್ಟ್
ನವದೆಹಲಿಯಲ್ಲಿಂದು ಸನ್ಮಾನ್ಯ ಪ್ರಧಾನಿ ಶ್ರೀ ನರೇಂದ್ರ ಮೋದಿಜೀ ಅವರ ಘನ ಉಪಸ್ಥಿತಿಯಲ್ಲಿ ಜರುಗಿದ ನೀರಿಗೆ ಸಂಬಂಧಿಸಿದ ಎರಡು ದಿನಗಳ ರಾಷ್ಟ್ರೀಯ ಇಲಾಖಾ ಶೃಂಗಸಭೆಯ ಸಮಾರೋಪ ಸಮಾರಂಭದಲ್ಲಿ ಪಾಲ್ಗೊಳ್ಳಲಾಯಿತು.
ಸಮ್ಮೇಳನದಲ್ಲಿ ಹೊರಹೊಮ್ಮಿದ ಚರ್ಚೆಗಳ ಸಾರಾಂಶ ಮತ್ತು ಕಾರ್ಯಸಾಧ್ಯ ಅಂಶಗಳನ್ನು ಎಚ್ಚರಿಕೆಯಿಂದ ಆಲಿಸಿದ ನಂತರ, ಸನ್ಮಾನ್ಯ… pic.twitter.com/kpvvwNzuTl
— V. Somanna (@VSOMANNA_BJP) September 2, 2026
ಅಣೆಕಟ್ಟು ಸುರಕ್ಷತೆ ಹಾಗೂ ಶಾಲಾ ಪಠ್ಯ: ಪ್ರತಿ ಮಳೆಗಾಲಕ್ಕೂ ಮುನ್ನ ಡ್ಯಾಮ್‌ಗಳ ಸುರಕ್ಷತಾ ಆಡಿಟ್ ಕಡ್ಡಾಯವಾಗಿ ನಡೆಯಬೇಕು. ಮಕ್ಕಳಲ್ಲಿ ನೀರಿನ ಸಂರಕ್ಷಣೆಯ ಜಾಗೃತಿ ಮೂಡಿಸಲು ಶಾಲಾ-ಕಾಲೇಜು ಪಠ್ಯಕ್ರಮಗಳಲ್ಲಿ ಜಲ ನಿರ್ವಹಣಾ ವಿಷಯಗಳನ್ನು ಸೇರಿಸಬೇಕು.
ತ್ವರಿತ ಪೂರ್ಣಗೊಳಿಸುವಿಕೆ: ಅಪೂರ್ಣಗೊಂಡಿರುವ ಪ್ರಮುಖ ನೀರಾವರಿ ಹಾಗೂ ನೀರಿನ ಮೂಲಸೌಕರ್ಯ ಯೋಜನೆಗಳನ್ನು ನಿಗದಿತ ಸಮಯದೊಳಗೆ ಪೂರ್ಣಗೊಳಿಸುವುದು.
ಜನಾಂದೋಲನವಾಗಿ ರೂಪಾಂತರ: ನೀರು ಸಂರಕ್ಷಣೆಯನ್ನು ನಿರಂತರ ಸಾರ್ವಜನಿಕ ಅಭಿಯಾನವನ್ನಾಗಿ ಮುನ್ನಡೆಸುವುದು.
ಕುಡಿಯುವ ನೀರಿನ ದೀರ್ಘಕಾಲೀನ ಸುಸ್ಥಿರತೆ: ಭವಿಷ್ಯದ ನಗರೀಕರಣದ ಬೇಡಿಕೆಗಳಿಗೆ ತಕ್ಕಂತೆ ಅಂತರ್ಜಲ ಮರುಪೂರಣ ಮತ್ತು ನೈಸರ್ಗಿಕ ಜಲಮೂಲಗಳನ್ನು ರಕ್ಷಿಸುವುದು.
ಪೋಸ್ಟ್
#WATCH | Delhi: Prime Minister Narendra Modi addresses the Departmental Summit on Water of the Ministry of Jal Shakti.
(Video: DD) pic.twitter.com/fXU3rWxEzq
— ANI (@ANI) September 2, 2026
ಗ್ರಾಮೀಣ ಜಲ ಯೋಜನೆಗಳ ದಕ್ಷ ನಿರ್ವಹಣೆ: ಗ್ರಾಮೀಣ ಭಾಗದ ನಳ-ನೀರು ಯೋಜನೆಗಳ ನಿರ್ವಹಣೆಗೆ ಪಂಚಾಯತ್ ಮಟ್ಟದಲ್ಲಿ ಸಾಂಸ್ಥಿಕ ಬಲ ನೀಡುವುದು.
ಕ್ಯಾಚ್ ದಿ ರೇನ್: ಕೇಂದ್ರ ಸರ್ಕಾರದ ‘ಜಲಶಕ್ತಿ ಅಭಿಯಾನ: ಕ್ಯಾಚ್ ದಿ ರೇನ್’ ಅಭಿಯಾನದ ಭಾಗವಾಗಿ ಮಳೆನೀರನ್ನು ಸ್ಥಳದಲ್ಲೇ ಇಂಗಿಸುವ ಯೋಜನೆಗಳು ದೇಶಾದ್ಯಂತ ಜಾರಿಯಲ್ಲಿವೆ.
ಗುಜರಾತ್ ಮಾದರಿ ಉಲ್ಲೇಖಿಸಿದ ಮೋದಿ: ಗುಜರಾತ್ ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ ಜಾರಿಗೆ ತಂದ ಚೆಕ್ ಡ್ಯಾಮ್‌ಗಳು ಮತ್ತು ‘ಸುಜಲಾಂ ಸುಫಲಾಂ’ ಜಲ ಅಭಿಯಾನದ ಅನುಭವವನ್ನು ಹಂಚಿಕೊಂಡ ಪ್ರಧಾನಿ, ಸರಿಯಾದ ರಾಜಕೀಯ ಇಚ್ಛಾಶಕ್ತಿ ಮತ್ತು ತಂತ್ರಜ್ಞಾನದ ಬಳಕೆಯಿದ್ದರೆ ನೀರಿನ ಕೊರತೆಯನ್ನು ಸಮೃದ್ಧಿಯ ಅವಕಾಶವಾಗಿ ಪರಿವರ್ತಿಸಬಹುದು ಎಂದು ನಿದರ್ಶನ ನೀಡಿದರು.
ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ




