ಅತ್ಯಾಚಾರ ಪ್ರಕರಣಗಳ ಇತ್ಯರ್ಥಕ್ಕೆ ಪತ್ನಿ ಜೊತೆ ಸೇರಿ ಪಂಜಾಬ್ ಸಿಎಂ ಲಂಚದ ದಂಧೆ; ಬಿಜೆಪಿ ಗಂಭೀರ ಆರೋಪ
ಪಂಜಾಬ್‌ನ ಆಮ್ ಆದ್ಮಿ ಪಕ್ಷ ನೇತೃತ್ವದ ಸರ್ಕಾರದ ವಿರುದ್ಧ ಬಿಜೆಪಿ ಗಂಭೀರ ಆರೋಪ ಮಾಡಿದೆ. ಮುಖ್ಯಮಂತ್ರಿ ಭಗವಂತ್ ಮಾನ್, ಆಪ್ ಅಧ್ಯಕ್ಷ ಅರವಿಂದ್ ಕೇಜ್ರಿವಾಲ್ ಮತ್ತು ಭಗವಂತ್ ಮಾನ್ ಅವರ ಪತ್ನಿ ಸೇರಿ ಅತ್ಯಾಚಾರ ಪ್ರಕರಣವನ್ನು ಇತ್ಯರ್ಥಗೊಳಿಸಲು ಮಧ್ಯವರ್ತಿಗಳ ಮೂಲಕ 5 ಕೋಟಿ ರೂ. ಲಂಚ ಸ್ವೀಕರಿಸಿದ್ದಾರೆ ಎಂದು ಬಿಜೆಪಿ ವಕ್ತಾರ ಪ್ರದೀಪ್ ಭಂಡಾರಿ ಆರೋಪಿಸಿದ್ದಾರೆ. ಅವರು ಆಡಿಯೋ ರೆಕಾರ್ಡಿಂಗ್ ಅನ್ನು ಪ್ಲೇ ಮಾಡಿ ಸುದ್ದಿಗೋಷ್ಠಿಯಲ್ಲಿ ಈ ಆರೋಪ ಮಾಡಿದ್ದಾರೆ. ಬಿಜೆಪಿಯ ಈ ಆರೋಪಕ್ಕೆ ಆಮ್ ಆದ್ಮಿ ಪಕ್ಷ ತಿರುಗೇಟು ನೀಡಿದೆ.

ನವದೆಹಲಿ, ಸೆಪ್ಟೆಂಬರ್ 3: ಪಂಜಾಬ್ ಮುಖ್ಯಮಂತ್ರಿ ಭಗವಂತ್ ಮಾನ್ ಮತ್ತು ಅವರ ಪತ್ನಿ ಡಾ. ಗುರುಪ್ರೀತ್ ಕೌರ್ ಸೇರಿಕೊಂಡು ಲೈಂಗಿಕ ದೌರ್ಜನ್ಯ ಹಾಗೂ ಅತ್ಯಾಚಾರ ಪ್ರಕರಣಗಳನ್ನು ಇತ್ಯರ್ಥಗೊಳಿಸಲು ಹಣ ಪಡೆದುಕೊಂಡು, ರಾಜಿ ದಂಧೆ ನಡೆಸುತ್ತಿದ್ದಾರೆ ಎಂದು ಬಿಜೆಪಿ ಗಂಭೀರ ಆರೋಪ ಮಾಡಿದೆ. ಆದರೆ, ಈ ಆರೋಪಗಳನ್ನು ತಳ್ಳಿಹಾಕಿರುವ ಆಮ್ ಆದ್ಮಿ ಪಾರ್ಟಿ ಇದು ಬಿಜೆಪಿ ಸೃಷ್ಟಿಸಿರುವ ಸುಳ್ಳು ಹಾಗೂ ರಾಜಕೀಯ ದುರುದ್ದೇಶಪೂರಿತ ತಂತ್ರ ಎಂದು ತಿರುಗೇಟು ನೀಡಿದೆ.
ಇಂದು ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಬಿಜೆಪಿ ರಾಷ್ಟ್ರೀಯ ವಕ್ತಾರ ಪ್ರದೀಪ್ ಭಂಡಾರಿ, ಪಂಜಾಬ್ ಮುಖ್ಯಮಂತ್ರಿ ಭಗವಂತ್ ಮಾನ್ ಮತ್ತು ಅವರ ಪತ್ನಿ ವಿರುದ್ಧ ಅತ್ಯಾಚಾರ ಪ್ರಕರಣಗಳನ್ನು ರಾಜಿ ಮಾಡುವ ದಂಧೆ ನಡೆಸುತ್ತಿದ್ದಾರೆ ಎಂದು ಆರೋಪ ಮಾಡಿದ್ದಾರೆ. “ಪಂಜಾಬ್‌ನ ಆಡಳಿತಾರೂಢ ಆಪ್ ಸರ್ಕಾರದ ಪ್ರಭಾವಿ ನಾಯಕರು ಹಾಗೂ ಸಿಎಂ ಕುಟುಂಬವು ಪೊಲೀಸ್ ಅಧಿಕಾರವನ್ನು ದುರ್ಬಳಕೆ ಮಾಡಿಕೊಂಡು, ಗಂಭೀರ ಅತ್ಯಾಚಾರ ಮತ್ತು ಲೈಂಗಿಕ ಕಿರುಕುಳ ಪ್ರಕರಣಗಳಲ್ಲಿ ಆರೋಪಿಗಳಿಂದ ಕೋಟ್ಯಂತರ ರೂ. ಹಣ ಪಡೆದು ಪ್ರಕರಣಗಳನ್ನು ರದ್ದುಗೊಳಿಸುವ ‘ಸೆಟಲ್‌ಮೆಂಟ್ ರಾಕೆಟ್’ ನಡೆಸುತ್ತಿದ್ದಾರೆ” ಎಂದು ಬಿಜೆಪಿ ಮುಖಂಡ ಪ್ರದೀಪ್ ಭಂಡಾರಿ ಆರೋಪಿಸಿದ್ದಾರೆ.
ಇದನ್ನೂ ಓದಿ: ದೆಹಲಿಯಲ್ಲಿ ಒಳ್ಳೆ ಕೆಲಸ ಮಾಡಿದ ಆಮ್ ಆದ್ಮಿ ಸಚಿವರನ್ನು ಬಿಜೆಪಿ ಜೈಲಿಗೆ ತಳ್ಳಿದೆ; ಸಿಎಂ ಭಗವಂತ್ ಮಾನ್ ಆರೋಪ
ಇನ್‌ಸ್ಟಾಗ್ರಾಮ್ ಇನ್ಫ್ಲುಯೆನ್ಸರ್ ಗುರ್ವಿಂದರ್ ಸಿಂಗ್ ಚಹಾಲ್ ಎಂಬಾತ ಮಹಿಳೆಯ ಅಪಹರಣ ಮತ್ತು ಅತ್ಯಾಚಾರದ ಆರೋಪದ ಮೇಲೆ ಬಂಧನಕ್ಕೊಳಗಾದ ಕೇವಲ ಎರಡೇ ತಿಂಗಳಲ್ಲಿ ಬಿಡುಗಡೆಯಾದ ಪ್ರಕರಣಕ್ಕೆ ಸಂಬಂಧಿಸಿದಂತೆ ಬಿಜೆಪಿ ಈ ಆರೋಪಗಳನ್ನು ಮಾಡಿದೆ.
Punjab CM Bhagwant Mann is facing serious allegations of running a racket, with his wife accused of using middlemen to settle legitimate rape cases in exchange for ₹5 crore.
This video prima facie raises serious questions about whether the CM is personally intervening to end a… pic.twitter.com/7u72J0nZV8
— BJP (@BJP4India) September 3, 2026
ಪ್ರದೀಪ್ ಭಂಡಾರಿ ಇಂದು ಸುದ್ದಿಗೋಷ್ಠಿಯಲ್ಲಿ ರಾಜಕೀಯ ಪ್ರಭಾವ ಬಳಸಿ ಅತ್ಯಾಚಾರ ಮತ್ತು ಅಪರಾಧ ಪ್ರಕರಣಗಳನ್ನು ಇತ್ಯರ್ಥಪಡಿಸಿಕೊಳ್ಳುವ ಮಾತುಕತೆಯ ಆಡಿಯೋ ಕ್ಲಿಪ್‌ಗಳನ್ನು ಬಿಡುಗಡೆ ಮಾಡಿದರು. ಆದರೆ, ಈ ಆಡಿಯೋ ಕ್ಲಿಪ್‌ನಲ್ಲಿ ಎಲ್ಲೂ ಭಗವಂತ್ ಮಾನ್ ಅಥವಾ ಅವರ ಪತ್ನಿ ಗುರುಪ್ರೀತ್ ಕೌರ್ ಅವರ ಹೆಸರನ್ನು ಉಲ್ಲೇಖಿಸಲಾಗಿಲ್ಲ. “ಪ್ರಕರಣವನ್ನು ಅಂತ್ಯಗೊಳಿಸಲು ಸಿಎಂ ಸ್ವತಃ ಮಧ್ಯಪ್ರವೇಶಿಸುತ್ತಿದ್ದಾರೆಯೇ ಎಂಬ ಗಂಭೀರ ಪ್ರಶ್ನೆಗಳನ್ನು ಈ ಕ್ಲಿಪ್‌ಗಳು ಮೇಲ್ನೋಟಕ್ಕೆ ಎತ್ತುತ್ತವೆ. ಸಿಎಂ ನಿವಾಸವು ಡೀಲ್ ಕುದುರಿಸುವ ಮತ್ತು ಪಂಜಾಬ್‌ನ ‘ಸೂಪರ್ ಸಿಎಂ’ ಅರವಿಂದ್ ಕೇಜ್ರಿವಾಲ್‌ಗೆ ಕಮಿಷನ್ ಹಣ ತಲುಪಿಸುವ ಸ್ಥಳವಾಗಿದೆಯೇ?” ಎಂದು ಪ್ರದೀಪ್ ಪ್ರಶ್ನಿಸಿದ್ದಾರೆ.
ಇದನ್ನೂ ಓದಿ: WITT Summit 2026: ಪಂಜಾಬ್‌ನಲ್ಲಿ ದ್ವೇಷದ ಬೀಜ ಮೊಳಕೆಯೊಡುವುದಿಲ್ಲ; ವಿಟ್ ಶೃಂಗಸಭೆಯಲ್ಲಿ ಸಿಎಂ ಭಗವಂತ್ ಮಾನ್
ಆಮ್ ಆದ್ಮಿ ಪಾರ್ಟಿ ತಿರುಗೇಟು:
ಬಿಜೆಪಿಯ ಆರೋಪಗಳಿಗೆ ತೀವ್ರ ಆಕ್ರೋಶ ವ್ಯಕ್ತಪಡಿಸಿರುವ ಆಪ್ ವಕ್ತಾರರು, “ಪಂಜಾಬ್‌ನಲ್ಲಿ ಆಪ್ ಸರ್ಕಾರದ ಜನಪ್ರಿಯತೆ ಮತ್ತು ಆಡಳಿತವನ್ನು ಸಹಿಸದೆ ಬಿಜೆಪಿ ನಾಯಕರು ಆಧಾರರಹಿತ ಹಾಗೂ ಕೀಳುಮಟ್ಟದ ಆರೋಪಗಳನ್ನು ಮಾಡುತ್ತಿದ್ದಾರೆ. ಸಿಎಂ ಕುಟುಂಬದ ವರ್ಚಸ್ಸಿಗೆ ಧಕ್ಕೆ ತರಲು ಮಾಡಿರುವ ಈ ಸುಳ್ಳು ಆರೋಪಗಳ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುವುದು” ಎಂದು ಎಚ್ಚರಿಸಿದ್ದಾರೆ.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 6:50 pm, Thu, 3 September 26




