ಪಂಜಾಬ್ನಲ್ಲಿ ಬಿಜೆಪಿಯೊಂದಿಗೆ ಮೈತ್ರಿಯಿಲ್ಲ: ಸ್ಪಷ್ಟ ನಿರ್ಧಾರ ಪ್ರಕಟಿಸಿದ ಅಕಾಲಿ ದಳ ಮುಖ್ಯಸ್ಥ
ಕೃಷಿಕಾಯ್ದೆಗಳಿಗೆ ವಿರೋಧ ವ್ಯಕ್ತಪಡಿಸಿ ಕಳೆದ ವರ್ಷ ಅಕಾಲಿ ದಳವು ಎನ್ಡಿಎ ಸರ್ಕಾರದಲ್ಲಿದ್ದ ತನ್ನ ಪಕ್ಷದ ಏಕೈಕ ಸಚಿವೆ ಹರ್ಸಿಮ್ರತ್ ಕೌರ್ ಬಾದಲ್ ಅವರಿಂದ ರಾಜೀನಾಮೆ ಕೊಡಿಸಿತ್ತು.
ಚಂಡೀಗಡ: ವಿವಾದಿತ ಕೃಷಿ ಕಾಯ್ದೆಗಳನ್ನು ಹಿಂಪಡೆಯುವ ಕೇಂದ್ರ ಸರ್ಕಾರದ ನಿರ್ಧಾರಕ್ಕೆ ಪ್ರತಿಪಕ್ಷಗಳು ‘ನಾವು ಈ ಮೊದಲೇ ಹೇಳಿರಲಿಲ್ಲವೇ’ ಎನ್ನುವ ಧಾಟಿಯಲ್ಲಿ ಪ್ರತಿಕ್ರಿಯಿಸಿವೆ. ಬಿಜೆಪಿಯ ಒಂದು ಕಾಲದ ಮಿತ್ರಪಕ್ಷ ಶಿರೋಮಣಿ ಅಕಾಲಿ ದಳ ಸಹ ಇದಕ್ಕೆ ಹೊರತಾಗಿಲ್ಲ. ಕೃಷಿಕಾಯ್ದೆಗಳಿಗೆ ವಿರೋಧ ವ್ಯಕ್ತಪಡಿಸಿ ಕಳೆದ ವರ್ಷ ಅಕಾಲಿ ದಳವು ಎನ್ಡಿಎ ಸರ್ಕಾರದಲ್ಲಿದ್ದ ತನ್ನ ಪಕ್ಷದ ಏಕೈಕ ಸಚಿವೆ ಹರ್ಸಿಮ್ರತ್ ಕೌರ್ ಬಾದಲ್ ಅವರಿಂದ ರಾಜೀನಾಮೆ ಕೊಡಿಸಿತ್ತು. ಪ್ರಧಾನಿ ನರೇಂದ್ರ ಮೋದಿ ಅವರು ಶುಕ್ರವಾರ (ನ.19) ಕೃಷಿಕಾಯ್ದೆಗಳನ್ನು ಹಿಂಪಡೆಯುವ ಕುರಿತು ನಿರ್ಧಾರ ಪ್ರಕಟಿಸಿದ್ದರು. ಈ ಬೆಳವಣಿಗೆ ನಂತರ ಪಂಜಾಬ್ನಲ್ಲಿ ಅಕಾಲಿದಳದ ಮುಖ್ಯಸ್ಥರು ಪ್ರತಿಕ್ರಿಯಿಸಿದ್ದಾರೆ. ಚುನಾವಣೆ ಹೊಸಿಲಲ್ಲಿರುವ ಪಂಜಾಬ್ನಲ್ಲಿ ಅಧಿಕಾರಕ್ಕೆ ಮರಳುವ ಕನಸು ಕಾಣುತ್ತಿರುವ ಅಕಾಲಿದಳವು ಬಿಜೆಪಿಯೊಂದಿಗೆ ಮೈತ್ರಿ ಸಾಧ್ಯತೆಯನ್ನು ಸ್ಪಷ್ಟವಾಗಿ ತಳ್ಳಿಹಾಕಿದೆ. ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅಕಾಲಿದಳದ ನಾಯಕ ಸುಖ್ಬಿರ್ ಸಿಂಗ್ ಬಾದಲ್, ‘ಪ್ರಧಾನಿ ನರೇಂದ್ರ ಮೋದಿ ಅವರಿಗೆ ಈ ಕರಾಳ ಕಾಯ್ದೆಯ ಅಪಾಯಗಳ ಬಗ್ಗೆ ಮೊದಲೇ ಹೇಳಿದ್ದೆ’ ಎಂದು ನೆನಪಿಸಿಕೊಂಡರು.
‘ಕಾಯ್ದೆಗಳನ್ನು ವಿರೋಧಿಸಿ ಪ್ರತಿಭಟನೆ ನಡೆಸುತ್ತಿದ್ದವರ ಪೈಕಿ 700 ಮಂದಿ ಜೀವ ಕಳೆದುಕೊಂಡಿದ್ದಾರೆ. ದೇಶವು ಈ ಹುತಾತ್ಮರ ತ್ಯಾಗವನ್ನು ಗಮನಿಸಿದೆ. ಈ ಕಾಯ್ದೆಗಳನ್ನು ರೈತರು ಒಪ್ಪಿಕೊಳ್ಳುವುದಿಲ್ಲ ಎಂದು ನಾನು ಬಹಳ ಹಿಂದೆಯೇ ಪ್ರಧಾನಿಗೆ ಕಿವಿಮಾತು ಹೇಳಿದ್ದೆ. ನಮ್ಮ ಮಾತು ನಿಜವಾಯಿತು’ ಎಂದು ಅವರು ಹೇಳಿದರು. ಎನ್ಡಿಎ ಮೈತ್ರಿಕೂಟದ ಹಳೆಯ ಮಿತ್ರಪಕ್ಷವಾಗಿರುವ ಶಿರೋಮಣಿ ಅಕಾಲಿ ದಳವು ಕಳೆದ ವರ್ಷ ಮೈತ್ರಿಕೂಟದಿಂದ ಹಿಂದೆ ಸರಿಯುವಂತೆ ಮಾಡಿದ ಕಾರಣಗಳನ್ನು ಅವರು ವಿವರಿಸಿದರು.
ಮೋದಿ ಅವರ ನಿರ್ಧಾರದ ಬಗ್ಗೆ ಪ್ರತಿಕ್ರಿಯಿಸಿದ್ದ ಅಕಾಲಿ ದಳದ ಹಿರಿಯ ನಾಯಕ ಪ್ರಕಾಶ್ ಸಿಂಗ್ ಬಾದಲ್, ಪಂಜಾಬ್ನ, ದೇಶದ ಮತ್ತು ವಿಶ್ವದ ರೈತರನ್ನು ನಾನು ಅಭಿನಂದಿಸುತ್ತೇನೆ. ಈ ಮಹತ್ವದ ಹೋರಾಟದಲ್ಲಿ ಹುತಾತ್ಮರಾದ 700 ರೈತರ ಕುಟುಂಬಗಳ ಬಗ್ಗೆ ನಾನು ಯೋಚಿಸುತ್ತಿದ್ದೇನೆ. ಅವರ ಆತ್ಮಾಹುತಿ ಮತ್ತು ಲಖಿಂಪುರ್ ಖೇರಿಯಂಥ ದುರ್ಘಟನೆಗಳು ಈ ಸರ್ಕಾರದ ಮುಖದ ಮೇಲೆ ಕಪ್ಪುಚುಕ್ಕೆಗಳಾಗಿ ಉಳಿಯುತ್ತವೆ ಎಂದರು. ಲಖಿಂಪುರ್ ಖೇರಿಯಲ್ಲಿ ನಾಲ್ವರು ರೈತರೂ ಸೇರಿದಂತೆ 8 ಮಂದಿ ಕಳೆದ ತಿಂಗಳು ಕೇಂದ್ರ ಸಚಿವ ಅಜಯ್ಮಿಶ್ರಾ ಅವರ ಮಗನ ಕಾರಿಗೆ ಸಿಲುಕಿ ಸಾವನ್ನಪ್ಪಿದ್ದರು. ಈ ಪ್ರಕರಣಕ್ಕೆ ದೇಶಾದ್ಯಂತ ಖಂಡನೆ ವ್ಯಕ್ತವಾಗಿತ್ತು.
#WATCH | Punjab: Shiromani Akali Dal chief Sukhbir Singh Badal denies possibilities of allying with BJP after the repeal of three #FarmLaws pic.twitter.com/qclGIEyNq9
— ANI (@ANI) November 19, 2021
‘ರೈತರಿಗೆ ನ್ಯಾಯ ಸಿಗಲೆಂದು ಈ ಧೈರ್ಯಶಾಲಿ ಮಣ್ಣಿನ ಮಕ್ಕಳು ಹುತಾತ್ಮರಾಗಬೇಕಾಯಿತು. ನನ್ನ ಇಡೀ ಬದುಕನ್ನು ನಾನು ಇವರ ಕಲ್ಯಾಣಕ್ಕೆಂದು ಮುಡಿಪಾಗಿಟ್ಟಿದ್ದೆ. ಪ್ರಜಾಪ್ರಭುತ್ವದ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಇಂಥ ಅಸ್ಪಷ್ಟ ಮತ್ತು ಕ್ರೂರ ಕಾನೂನುಗಳನ್ನು ಪಾಲುದಾರರೊಂದಿಗೆ ಸಮಾಲೋಚನೆಯನ್ನೇ ನಡೆಸದೆ ರೂಪಿಸಲಾಗಿದೆ’ ಎಂದು ಪಂಜಾಬ್ನ ಮಾಜಿ ಮುಖ್ಯಮಂತ್ರಿಯೂ ಆಗಿರುವ ಪ್ರಕಾಶ್ ಸಿಂಗ್ ಬಾದಲ್ ವಿಶ್ಲೇಷಿಸಿದರು. ದೆಹಲಿಯ ಗಡಿಯಲ್ಲಿ ಶಿಬಿರ ಸ್ಥಾಪಿಸಿಕೊಂಡು ಪ್ರತಿಭಟನೆ ನಡೆಸುತ್ತಿದ್ದ ರೈತರೊಂದಿಗೆ ಮಾತುಕತೆ ನಡೆಸುವಂತೆ ಕಳೆದ ಒಂದು ವರ್ಷದಿಂದ ಅಕಾಲಿ ದಳವು ಕೇಂದ್ರ ಸರ್ಕಾರವನ್ನು ಒತ್ತಾಯಿಸುತ್ತಲೇ ಇತ್ತು. ಹಿರಿಯ ನಾಯಕರಾದ ಸುಖ್ಬಿರ್ ಸಿಂಗ್ ಬಾದಲ್ ಮತ್ತು ಅವರ ಪತ್ನಿ ಹರ್ಸಿಮ್ರತ್ ಕೌರ್ ಹಲವು ಬಾರಿ ಜಾಥಾ ನಡೆಸಿ ಸರ್ಕಾರದ ಗಮನ ಸೆಳೆಯಲು ಯತ್ನಿಸಿದ್ದರು.
ಕೃಷಿಕಾಯ್ದೆ ಹಿಂಪಡೆದ ಕುರಿತು ಪ್ರತಿಕ್ರಿಯಿಸಿರುವ ಕೇಂದ್ರದ ಮಾಜಿ ಸಚಿವೆ ಹರ್ಸಿಮ್ರತ್ ಕೌರ್ ಸಹ ಕೃಷಿ ಕಾಯ್ದೆಗಳ ವಿಚಾರವಾಗಿ ಕೇಂದ್ರ ಸರ್ಕಾರವನ್ನು ಕಟುವಾಗಿ ಟೀಕಿಸಿ ವಿಡಿಯೊ ಒಂದನ್ನು ಟ್ವೀಟ್ ಮಾಡಿದ್ದಾರೆ. ಕನಿಷ್ಠ ಬೆಂಬಲ ಬೆಲೆಯನ್ನು ರೈತರ ಕಾನೂನು ಬದ್ಧ ಹಕ್ಕಾಗಿ ಪರಿಗಣಿಸಬೇಕು ಎಂದು ಅವರು ವಿನಂತಿಸಿದ್ದಾರೆ.
We have received ‘apaar baksheesh’ of Sri Guru Nanak Dev Ji on his Parkash Purab by the repeal of 3 farm laws. It’s a victory of farmers who withstood inclement weather, repression & defamation but stood strong. I salute the 700 farmers who sacrificed their lives for this cause. pic.twitter.com/036Guevl9e
— Harsimrat Kaur Badal (@HarsimratBadal_) November 19, 2021
ಇದನ್ನೂ ಓದಿ: ಕೃಷಿ ಕಾನೂನುಗಳನ್ನು ರದ್ದುಗೊಳಿಸುವುದಾಗಿ ಪ್ರಧಾನಿ ನರೇಂದ್ರ ಮೋದಿ ಘೋಷಣೆ: ಮುಂದೇನು? ಇದನ್ನೂ ಓದಿ: Farm Laws Timeline ಕೃಷಿ ಕಾನೂನು ಅಂಗೀಕಾರದಿಂದ ರದ್ದತಿ ನಿರ್ಧಾರವರೆಗೆ ಏನೆಲ್ಲಾ ನಡೆಯಿತು?
Published On - 7:39 pm, Fri, 19 November 21