ದ್ರೌಪದಿ ಬದಲು ಸೀತೆಗೆ ವಸ್ತ್ರಾಪಹರಣ ಮಾಡಿಸಿದ ರಣದೀಪ್ ಸುರ್ಜೇವಾಲಾ; ಕಾಂಗ್ರೆಸ್ ನಾಯಕನ ಎಡವಟ್ಟಿಗೆ ಬಿಜೆಪಿ ಟೀಕೆ
ಕೇಂದ್ರ ಸರ್ಕಾರವನ್ನು ಟೀಕಿಸಿರುವ ರಣದೀಪ್ ಸುರ್ಜೆವಾಲಾ ಅಂದು ಸೀತಾ ಮಾತೆಯ ವಸ್ತ್ರಾಪಹರಣ ಮಾಡಿದಂತೆ ಇಂದು ಬಿಜೆಪಿಯವರು ಪ್ರಜಾಪ್ರಭುತ್ವವನ್ನು ಬೆತ್ತಲೆಗೊಳಿಸಲು ಹೊರಟಿದ್ದಾರೆ ಎಂದಿದ್ದಾರೆ.
ನವದೆಹಲಿ: ರಾಮಾಯಣ, ಮಹಾಭಾರತ ಎರಡನ್ನೂ ಅದಲು ಬದಲು ಮಾಡಿಕೊಂಡ ಹಿರಿಯ ಕಾಂಗ್ರೆಸ್ ನಾಯಕ ರಣದೀಪ್ ಸಿಂಗ್ ಸುರ್ಜೆವಾಲಾ (Randeep Surjewala) ದ್ರೌಪದಿಯ ಬದಲಿಗೆ ಸೀತಾ ಮಾತೆಗೆ ವಸ್ತ್ರಾಪಹರಣ ಮಾಡಿಸಿದ್ದಾರೆ! ಬಿಜೆಪಿಯನ್ನು ಟೀಕಿಸುವ ಭರದಲ್ಲಿ ದ್ರೌಪದಿ (Draupadi) ವಸ್ತ್ರಾಪಹರಣ ಎನ್ನುವ ಬದಲು ಸೀತೆಯ (Sita) ವಸ್ತ್ರಾಪಹರಣ ಎನ್ನುವ ಮೂಲಕ ಟೀಕೆಗೆ ಗುರಿಯಾಗಿದ್ದಾರೆ. ರಾಜ್ಯಸಭಾ ಚುನಾವಣೆ ಹಿನ್ನೆಲೆಯಲ್ಲಿ ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸುವಾಗ ನಾಲಿಗೆ ಹೊರಳಿ ಸುರ್ಜೇವಾಲಾ ಈ ಎಡವಟ್ಟು ಮಾಡಿಕೊಂಡಿದ್ದಾರೆ.
ಪ್ರಜಾಸತ್ತಾತ್ಮಕ ಸಂಸ್ಥೆಗಳು ಮತ್ತು ಇಡಿ, ಸಿಬಿಐ ಮತ್ತು ಆದಾಯ ತೆರಿಗೆಯಂತಹ ತನಿಖಾ ಸಂಸ್ಥೆಗಳನ್ನು ಅಪಖ್ಯಾತಿಗೊಳಿಸಿದೆ ಎಂದು ಕೇಂದ್ರ ಸರ್ಕಾರವನ್ನು ಟೀಕಿಸಿರುವ ರಣದೀಪ್ ಸುರ್ಜೆವಾಲಾ ಅಂದು ಸೀತಾ ಮಾತೆಯ ವಸ್ತ್ರಾಪಹರಣ ಮಾಡಿದಂತೆ ಇಂದು ಬಿಜೆಪಿಯವರು ಪ್ರಜಾಪ್ರಭುತ್ವವನ್ನು ಬೆತ್ತಲೆಗೊಳಿಸಲು ಹೊರಟಿದ್ದಾರೆ ಎಂದಿದ್ದಾರೆ.
ರಾಜ್ಯಸಭಾ ಚುನಾವಣೆ ಹಿನ್ನೆಲೆಯಲ್ಲಿ ನಿನ್ನೆ ಪ್ರತಿಕ್ರಿಯೆ ನೀಡಿದ್ದ ಅವರು, ಹಿಂದಿನ ಚುನಾವಣೆಯಲ್ಲಿ ಬಿಜೆಪಿ ಹೀನಾಯವಾಗಿ ಸೋತಿತ್ತು. ಸತ್ಯ, ಪ್ರಜಾಪ್ರಭುತ್ವ, ಕಾನೂನು ಮತ್ತು ನೈತಿಕತೆ ಸದಾ ಗೆಲ್ಲುತ್ತದೆ. ಸೀತಾ ದೇವಿಯ ವಸ್ತ್ರಾಪಹರಣದಂತೆ ಬಿಜೆಪಿ ಪ್ರಜಾಪ್ರಭುತ್ವದ ವಸ್ತ್ರಾಪಹರಣ ಮಾಡಲು ಬಯಸಿದೆ. ಆದರೆ ಅವರು ರಾಜ್ಯಸಭಾ ಚುನಾವಣೆಯಲ್ಲಿ ಸೋಲುತ್ತಾರೆ. ಅವರ ಮುಖವಾಡಗಳು ಕಳಚಿ ಬೀಳುತ್ತವೆ ಎಂದು ರಾಜ್ಯಸಭಾ ಚುನಾವಣೆಗೆ ಮುನ್ನ ನಡೆದ ಪತ್ರಿಕಾಗೋಷ್ಠಿಯಲ್ಲಿ ಸುರ್ಜೇವಾಲಾ ಹೇಳಿದ್ದಾರೆ.
ಇದನ್ನೂ ಓದಿ: Rajya Sabha Election 2022 ರಾಜ್ಯಸಭಾ ಚುನಾವಣೆ ನಾಳೆ; ಯಾವ ರಾಜ್ಯದಲ್ಲಿ ಎಷ್ಟು ಸೀಟುಗಳಿವೆ? ಹೀಗಿರಲಿದೆ ಚುನಾವಣಾ ಪ್ರಕ್ರಿಯೆ
ರಣದೀಪ್ ಸುರ್ಜೇವಾಲಾ ಅವರ ಹೇಳಿಕೆಯನ್ನು ಟೀಕಿಸಿರುವ ಬಿಜೆಪಿ ನಾಯಕರು, ಕಾಂಗ್ರೆಸ್ ನಾಯಕ ರಣದೀಪ್ ಸುರ್ಜೆವಾಲಾ ಅವರು ಸೀತಾ ದೇವಿಯನ್ನು ಅವಮಾನಿಸಿದ್ದಾರೆ ಎಂದು ಆರೋಪಿಸಿದ್ದಾರೆ. ಕಾಂಗ್ರೆಸ್ ಯಾಕೆ ಯಾವಾಗಲೂ ಹಿಂದೂಗಳ ಭಾವನೆಗಳನ್ನು, ಹಿಂದೂ ಧರ್ಮವನ್ನು ದ್ವೇಷಿಸುತ್ತದೆ? ಎಂದು ಪ್ರಶ್ನಿಸಿದ್ದಾರೆ.
ರಾಜಸ್ಥಾನದಿಂದ ರಾಜ್ಯಸಭಾ ಚುನಾವಣೆಗೆ ಕಾಂಗ್ರೆಸ್ ಕಣಕ್ಕಿಳಿದಿರುವ ಮೂವರು ಅಭ್ಯರ್ಥಿಗಳಲ್ಲಿ ಸುರ್ಜೇವಾಲಾ ಕೂಡ ಒಬ್ಬರು. 15 ರಾಜ್ಯಗಳಲ್ಲಿರುವ 57 ರಾಜ್ಯ ಸಭಾ ಸೀಟುಗಳಿಗೆ ಇಂದು ಚುನಾವಣೆ ನಡೆಯಲಿದ್ದು, ಇಂದೇ ಫಲಿತಾಂಶ ಪ್ರಕಟವಾಗಲಿದೆ. ಜೂನ್ ಮತ್ತು ಆಗಸ್ಟ್ ನಡುವೆ ವಿವಿಧ ದಿನಾಂಕಗಳಲ್ಲಿ ಸದಸ್ಯರ ನಿವೃತ್ತಿಯಿಂದಾಗಿ ಖಾಲಿಯಾಗಿ ಉಳಿದಿರುವ ಸ್ಥಾನಗಳಿಗೆ ಚುನಾವಣೆ ನಡೆಯಲಿದೆ.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 8:33 am, Fri, 10 June 22