ಕಾರ್ಪೊರೇಟ್ ವಲಯದ ವಿರುದ್ಧದ ಪ್ರಧಾನಿ ಮೋದಿ ಟೀಕೆಗೆ ಶಶಿ ತರೂರ್ ಬೆಂಬಲ

ಕಾರ್ಪೊರೇಟ್ ತೆರಿಗೆ ಕಡಿತದ ನಂತರವೂ ಕಂಪನಿಗಳು ಉದ್ಯೋಗ ಸೃಷ್ಟಿ ಮತ್ತು ನೌಕರರ ವೇತನ ಹೆಚ್ಚಳಕ್ಕೆ ಮುಂದಾಗದಿರುವ ಕುರಿತು ಪ್ರಧಾನಮಂತ್ರಿ ನರೇಂದ್ರ ಮೋದಿ ವ್ಯಕ್ತಪಡಿಸಿದ್ದ ಅಸಮಾಧಾನಕ್ಕೆ ಕಾಂಗ್ರೆಸ್ ಸಂಸದ ಶಶಿ ತರೂರ್ ಸಹಮತ ವ್ಯಕ್ತಪಡಿಸಿದ್ದಾರೆ. ಆದರೆ, ಇದೇ ವೇಳೆ ದೇಶದಲ್ಲಿ ವ್ಯಾಪಾರ ನಡೆಸುವ ಸುಗಮ ವಾತಾವರಣ, ನಿರುದ್ಯೋಗ ಮತ್ತು ಭ್ರಷ್ಟಾಚಾರದ ವಿಚಾರಗಳನ್ನು ಮುಂದಿಟ್ಟುಕೊಂಡು ಶಶಿ ತರೂರ್ ಕೇಂದ್ರ ಸರ್ಕಾರದ ವಿರುದ್ಧ ವ್ಯಂಗ್ಯವಾಡಿದ್ದಾರೆ. ನವೆಂಬರ್ 19ರಂದು ನವದೆಹಲಿಯಲ್ಲಿ ನಡೆದ ಫಿಕ್ಕಿ ಕಾರ್ಯಕ್ರಮದಲ್ಲಿ ಮಾತನಾಡಿದ್ದ ಪ್ರಧಾನಿ ನರೇಂದ್ರ ಮೋದಿ ಉದ್ಯಮ ವಲಯವನ್ನು ತರಾಟೆಗೆ ತೆಗೆದುಕೊಂಡಿದ್ದರು.

ಕಾರ್ಪೊರೇಟ್ ವಲಯದ ವಿರುದ್ಧದ ಪ್ರಧಾನಿ ಮೋದಿ ಟೀಕೆಗೆ ಶಶಿ ತರೂರ್ ಬೆಂಬಲ
ಶಶಿ ತರೂರ್
Image Credit source: PTI

Updated on: Nov 23, 2026 | 5:53 PM

ತಿರುವನಂತಪುರಂ, ನವೆಂಬರ್ 23: ತೆರಿಗೆ ಕಡಿತದ ಹೊರತಾಗಿಯೂ ಉದ್ಯೋಗ ಸೃಷ್ಟಿಸುವಲ್ಲಿ ಮತ್ತು ವೇತನ ಹೆಚ್ಚಿಸುವಲ್ಲಿ ವಿಫಲವಾಗಿರುವ ಭಾರತೀಯ ಕಾರ್ಪೊರೇಟ್ ವಲಯದ ವಿರುದ್ಧ ಪ್ರಧಾನಮಂತ್ರಿ ನರೇಂದ್ರ ಮೋದಿ ನಡೆಸಿದ ಟೀಕೆಯನ್ನು ಕಾಂಗ್ರೆಸ್ ಸಂಸದ ಶಶಿ ತರೂರ್ ಬೆಂಬಲಿಸಿದ್ದಾರೆ. ದೇಶದಲ್ಲಿ ಉದ್ಯೋಗದ ಈಗಿನ ಪರಿಸ್ಥಿತಿಯು, ಅದರಲ್ಲೂ ವಿಶೇಷವಾಗಿ ಪದವೀಧರರಿಗೆ ಅತ್ಯಂತ ಗಂಭೀರವಾಗಿದೆ ಎಂದು ಅವರು ಹೇಳಿದ್ದಾರೆ. ಇದೇ ವೇಳೆ ಸರ್ಕಾರದ ವಿರುದ್ಧ ಟೀಕೆಯನ್ನೂ ಮಾಡಿರುವ ಶಶಿ ತರೂರ್, ಭ್ರಷ್ಟಾಚಾರ ಮತ್ತಷ್ಟು ಹದಗೆಟ್ಟಿದೆ ಎಂದು ಆರೋಪಿಸಿದ್ದಾರೆ. ಪ್ರಧಾನಿ ಮೋದಿ ಅವರ “ನಾ ಖಾವೂಂಗಾ, ನಾ ಖಾನೇ ದೂಂಗಾ” ಘೋಷಣೆಯ ವಿರುದ್ಧ ವ್ಯಂಗ್ಯವಾಡಿದ್ದಾರೆ.

ಕೇರಳದ ತಿರುವನಂತಪುರಂನಲ್ಲಿ ಮಾತನಾಡಿದ ಶಶಿ ತರೂರ್, ತೆರಿಗೆ ವಿನಾಯಿತಿ ಪಡೆದ ನಂತರವೂ ಉದ್ಯಮಗಳು ತಮ್ಮ ಬದ್ಧತೆಯನ್ನು ಪೂರೈಸಲು ವಿಫಲವಾಗಿವೆ ಎಂಬ ಪ್ರಧಾನಿ ಮೋದಿಯವರ ಹೇಳಿಕೆಯು ದೇಶದ ಆರ್ಥಿಕ ಪರಿಸ್ಥಿತಿಯ ವಾಸ್ತವವನ್ನು ಪ್ರತಿಬಿಂಬಿಸುತ್ತದೆ ಎಂದು ಹೇಳಿದ್ದಾರೆ.

Loading...

“ಪ್ರಧಾನಮಂತ್ರಿ ನರೇಂದ್ರ ಮೋದಿ ಹೇಳಿರುವುದು ವಾಸ್ತವ ಎಂದು ನಾನು ಭಾವಿಸುತ್ತೇನೆ. ಕಾರ್ಪೊರೇಟ್ ಕಂಪನಿಗಳು ಇದಕ್ಕೆ ತಮ್ಮದೇ ಆದ ಸಮರ್ಥನೆಗಳನ್ನು ಹೊಂದಿರಬಹುದು; ಆದರೆ ನನಗೆ ಅರ್ಥವಾದಂತೆ ಅವರ ವಾದವೆಂದರೆ, ಕಂಪನಿಗಳು ಹೆಚ್ಚಿನ ಹೂಡಿಕೆ ಮಾಡಲು, ಹೆಚ್ಚಿನ ಉದ್ಯೋಗಗಳನ್ನು ಸೃಷ್ಟಿಸಲು ಮತ್ತು ವೇತನವನ್ನು ಹೆಚ್ಚಿಸಲು ಸರ್ಕಾರ ತೆರಿಗೆಗಳನ್ನು ಕಡಿಮೆ ಮಾಡಿದೆ, ಆದರೆ ಕಂಪನಿಗಳು ತಮ್ಮ ಪಾಲಿನ ಒಪ್ಪಂದವನ್ನು ಉಳಿಸಿಕೊಂಡಿಲ್ಲ” ಎಂದು ಶಶಿ ತರೂರ್ ಅಭಿಪ್ರಾಯಪಟ್ಟಿದ್ದಾರೆ.


ಉದ್ಯೋಗಾಕಾಂಕ್ಷಿಗಳು, ಅದರಲ್ಲೂ ವಿಶೇಷವಾಗಿ ಕಾಲೇಜು ಪದವೀಧರರು ಎದುರಿಸುತ್ತಿರುವ ತೊಂದರೆಗಳನ್ನು ಎತ್ತಿ ತೋರಿಸಿದ ಶಶಿ ತರೂರ್, ಉದ್ಯೋಗದ ಪರಿಸ್ಥಿತಿಯ ಬಗ್ಗೆ ಹೆಚ್ಚಿನ ಗಮನ ಹರಿಸುವ ಅಗತ್ಯವಿದೆ ಎಂದಿದ್ದಾರೆ. “ಉದ್ಯೋಗ ಪಡೆಯುವುದು ತುಂಬಾ ಕಷ್ಟಕರವಾಗಿದೆ ಎಂದು ಸಾರ್ವಜನಿಕರು ನಮಗೆ ಹೇಳುತ್ತಿದ್ದಾರೆ. ಮೊದಲ ಬಾರಿಗೆ ಐಐಟಿ ಪದವೀಧರರಿಗೂ ಕ್ಯಾಂಪಸ್ ಆಯ್ಕೆ ಸಿಗಲಿಲ್ಲ. ಈ ರೀತಿಯ ಸಂಗತಿಗಳು ಹಿಂದೆಂದೂ ಕೇಳಿರಲಿಲ್ಲ. ಆದ್ದರಿಂದ ಉದ್ಯೋಗದ ವಾತಾವರಣ, ವಿಶೇಷವಾಗಿ ಕಾಲೇಜು ಪದವೀಧರರ ಉದ್ಯೋಗಾವಕಾಶಗಳು ಸಾಕಷ್ಟು ಗಂಭೀರವಾಗಿವೆ ಎಂಬುದನ್ನು ಇದು ಸೂಚಿಸುತ್ತದೆ” ಎಂದು ಅವರು ಹೇಳಿದ್ದಾರೆ.

ಇದನ್ನೂ ಓದಿ: ‘ನಾನೇನೂ ಟ್ರಾವೆಲ್ ಏಜೆಂಟ್ ಅಲ್ಲ’; ರಾಹುಲ್ ಗಾಂಧಿಯ ವಿಯೆಟ್ನಾಂ ಪ್ರವಾಸದ ಪ್ರಶ್ನೆಗೆ ಶಶಿ ತರೂರ್ ಖಡಕ್ ಉತ್ತರ

ಹಾಗೇ, ಆರ್ಥಿಕ ಬೆಳವಣಿಗೆಯ ಜವಾಬ್ದಾರಿಯ ಕುರಿತು ಸರ್ಕಾರ ಮತ್ತು ಕಾರ್ಪೊರೇಟ್ ಭಾರತದ ನಡುವಿನ ಚರ್ಚೆಯನ್ನು ಸೂಕ್ಷ್ಮವಾಗಿ ಗಮನಿಸಬೇಕು ಎಂದು ಶಶಿ ತರೂರ್ ಸಲಹೆ ನೀಡಿದ್ದಾರೆ. “ಪ್ರಧಾನಮಂತ್ರಿಯವರು ಕಂಪನಿಗಳತ್ತ ಬೊಟ್ಟು ಮಾಡುತ್ತಿದ್ದರೆ ಮತ್ತು ಕಂಪನಿಗಳು ಸರ್ಕಾರದ ನೀತಿಗಳತ್ತ ಬೊಟ್ಟು ಮಾಡಲು ಬಯಸಿದರೆ, ಅದು ನಾವು ಗಮನಿಸಬಹುದಾದ ವಿಷಯವಾಗಿದೆ. ಸರ್ಕಾರವು ಇನ್ನೂ ಉತ್ತಮವಾಗಿ ಮಾಡಬಹುದಾದ ಕೆಲಸಗಳಿವೆ ಎಂಬುದನ್ನು ಮರೆಯಬಾರದು” ಎಂದು ತರೂರ್ ಹೇಳಿದ್ದಾರೆ.

ಸರ್ಕಾರದ ಭ್ರಷ್ಟಾಚಾರದ ವಿರುದ್ಧ ಟೀಕೆ:

ಭ್ರಷ್ಟಾಚಾರದ ವಿಚಾರದಲ್ಲಿ ಸರ್ಕಾರದ ದಾಖಲೆಯನ್ನು ಟೀಕಿಸಿದ ಪ್ರಧಾನಿ ಮೋದಿ, ತಾವು ಮಾತನಾಡಿಸಿದ ಉದ್ಯಮಿಗಳ ಪ್ರಕಾರ ಪರಿಸ್ಥಿತಿ ಮತ್ತಷ್ಟು ಹದಗೆಟ್ಟಿದೆ ಎಂದು ಹೇಳಿದ್ದಾರೆ. “ನಾನು ಮಾತನಾಡಿಸುವ ಪ್ರತಿಯೊಬ್ಬ ಉದ್ಯಮಿಯ ಪ್ರಕಾರವೂ, ಭ್ರಷ್ಟಾಚಾರವು ಹಿಂದೆಂದಿಗಿಂತಲೂ ತೀರಾ ಕೆಟ್ಟದಾಗಿದೆ ಎಂದು ಹೇಳಲು ನನಗೆ ವಿಷಾದವಾಗುತ್ತಿದೆ” ಎಂದಿದ್ದಾರೆ.


ಭ್ರಷ್ಟಾಚಾರಕ್ಕೆ ಕಡಿವಾಣ ಹಾಕುವುದಾಗಿ ಮೋದಿ ಈ ಹಿಂದೆ ನೀಡಿದ್ದ ಭರವಸೆಯನ್ನು ಲೇವಡಿ ಮಾಡಿದ ಶಶಿ ತರೂರ್, ಪ್ರಧಾನಿಯವರ ಜನಪ್ರಿಯ ಘೋಷಣೆಯಾದ “ನಾ ಖಾವೂಂಗಾ, ನಾ ಖಾನೇ ದೂಂಗಾ” (ನಾನು ಲಂಚ ತಿನ್ನುವುದಿಲ್ಲ ಮತ್ತು ಬೇರೆಯವರಿಗೂ ತಿನ್ನಲು ಬಿಡುವುದಿಲ್ಲ) ಎಂಬುದನ್ನು ಉಲ್ಲೇಖಿಸಿದ್ದಾರೆ. “‘ನಾ ಖಾವೂಂಗಾ, ನಾ ಖಾನೇ ದೂಂಗಾ’ ಎಂಬುದು ಪ್ರಧಾನಮಂತ್ರಿ ಮೋದಿ ಪ್ರಾಮಾಣಿಕವಾಗಿ ಮತ್ತು ಪ್ರಸಿದ್ಧವಾಗಿ ಹೇಳಿದ್ದ ಮಾತು. ಆದರೆ, ಅವರು ಕೇವಲ ಗೋಮಾಂಸದ ಬಗ್ಗೆ ಮಾತ್ರ ಹಾಗೆ ಹೇಳಿದ್ದರು ಎಂಬುದು ಈಗ ನಮಗೆ ಅರ್ಥವಾಗುತ್ತಿದೆ” ಎಂದು ಶಶಿ ತರೂರ್ ವ್ಯಂಗ್ಯವಾಗಿ ಹೇಳಿದ್ದಾರೆ.

ಇದನ್ನೂ ಓದಿ: ಮೋದಿಯನ್ನು ಬೆಂಬಲಿಸುವ ಮೂಲಕ ರಾಹುಲ್ ಗಾಂಧಿಗೆ ಶಶಿ ತರೂರ್​​ ಜನ್ಮದಿನದ ಗಿಫ್ಟ್ ನೀಡಿದ್ದಾರೆ; ಬಿಜೆಪಿ ಲೇವಡಿ

ನವೆಂಬರ್ 19ರಂದು ನವದೆಹಲಿಯಲ್ಲಿ ಭಾರತೀಯ ವಾಣಿಜ್ಯ ಮತ್ತು ಕೈಗಾರಿಕಾ ಮಹಾಸಂಘಗಳ ಒಕ್ಕೂಟ (FICCI) ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಪ್ರಧಾನಿ ನರೇಂದ್ರ ಮೋದಿ ಕಾರ್ಪೊರೇಟ್ ನಾಯಕರನ್ನು ಟೀಕಿಸಿದ್ದರು. ಸರ್ಕಾರದ ತೆರಿಗೆ ವಿನಾಯಿತಿ ಕ್ರಮಗಳ ಹೊರತಾಗಿಯೂ ಕಂಪನಿಗಳು ವೇತನ ಹೆಚ್ಚಿಸಿವೆಯೇ ಅಥವಾ ಉದ್ಯೋಗಿಗಳ ಸಂಖ್ಯೆಯನ್ನು ವಿಸ್ತರಿಸಿವೆಯೇ? ಎಂದು ಪ್ರಶ್ನಿಸಿದ್ದರು. ವ್ಯಾಪಾರ ನಡೆಸಲು ಸುಗಮ ವಾತಾವರಣ ಕಲ್ಪಿಸುವ ಸರ್ಕಾರದ ಉಪಕ್ರಮಗಳ ಬಗ್ಗೆ ಮಾತನಾಡುತ್ತಾ ಪ್ರಧಾನಿ ಮೋದಿ ಉದ್ಯಮದ ನಾಯಕರಿಗೆ ಹೀಗೆ ಹೇಳಿದ್ದರು; “ನೀವು ಚಪ್ಪಾಳೆ ತಟ್ಟುವುದಿಲ್ಲ ಎಂದು ನನಗೆ ತಿಳಿದಿದೆ. ನಿಮ್ಮ ಹಸಿವು ಎಷ್ಟು ದೊಡ್ಡದಿದೆಯೆಂದರೆ, ಎಷ್ಟೇ ತಿನ್ನಿಸಿದರೂ ಹೊಟ್ಟೆ ತುಂಬುವುದಿಲ್ಲ ಎಂಬುದು ನನಗೆ ಚೆನ್ನಾಗಿ ತಿಳಿದಿದೆ. ನೀವು ನಿಮ್ಮ ಉದ್ಯೋಗಿಗಳ ವೇತನವನ್ನು ಹೆಚ್ಚಿಸಿದ್ದೀರಾ? ನೀವು ನೇಮಿಸಿಕೊಳ್ಳುವ ಜನರ ಸಂಖ್ಯೆಯನ್ನು ಹೆಚ್ಚಿಸಿದ್ದೀರಾ? ಇಲ್ಲ” ಎಂದು ಪ್ರಧಾನಿ ಮೋದಿ ಹೇಳಿದ್ದರು.

ಸರ್ಕಾರವು ಕಾರ್ಪೊರೇಟ್ ತೆರಿಗೆ ದರಗಳನ್ನು ಕಡಿಮೆ ಮಾಡಿದೆ ಮತ್ತು ವೈಯಕ್ತಿಕ ತೆರಿಗೆದಾರರಿಗೆ ಪರಿಹಾರ ನೀಡಿದೆ, ಆದರೆ ಭಾರತೀಯ ಉದ್ಯಮ ವಲಯವು ಉದ್ಯೋಗ ಸೃಷ್ಟಿಸುವ ಮತ್ತು ವೇತನ ಸುಧಾರಿಸುವ ಮೂಲಕ ಅದಕ್ಕೆ ಪ್ರತಿಯಾಗಿ ಸ್ಪಂದಿಸಿದೆಯೇ? ಎಂದು ಪ್ರಧಾನಿ ಪ್ರಶ್ನಿಸಿದ್ದರು. ಉದ್ಯೋಗ ಸೃಷ್ಟಿ ಮತ್ತು ಆರ್ಥಿಕ ಬೆಳವಣಿಗೆಗೆ ಸಾಕಷ್ಟು ಕೊಡುಗೆ ನೀಡದೆ ಉದ್ಯಮಗಳು ಸರ್ಕಾರದ ನೀತಿಗಳಿಂದ ಲಾಭ ಪಡೆಯುತ್ತಿವೆ ಎಂದೂ ಮೋದಿ ಆರೋಪಿಸಿದ್ದರು.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ 

 

ಸುಷ್ಮಾ ಚಕ್ರೆ

ಸುಷ್ಮಾ ಚಕ್ರೆ ಮೂಲತಃ ಮಲೆನಾಡ ಹೆಬ್ಬಾಗಿಲು ಶಿವಮೊಗ್ಗದವರು. ಬೆಂಗಳೂರಿನಲ್ಲಿ ವಾಸ. ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. 10 ವರ್ಷಗಳಿಂದ ಸಂಯುಕ್ತ ಕರ್ನಾಟಕ, ವಿಜಯವಾಣಿ, ನ್ಯೂಸ್18 ಕನ್ನಡ, ಟಿವಿ9 ಡಿಜಿಟಲ್ ವಿಭಾಗದಲ್ಲಿ ಕೆಲಸ ಮಾಡಿದ ಅನುಭವವಿದೆ. ಸಾಹಿತ್ಯ, ಸಂಗೀತ, ಸಿನಿಮಾ, ಬರವಣಿಗೆಯಲ್ಲಿ ಆಸಕ್ತಿ ಹೊಂದಿದ್ದಾರೆ.

Read More
Loading...
Unable to load recommendations.
Follow Us