AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮೋದಿಯನ್ನು ಬೆಂಬಲಿಸುವ ಮೂಲಕ ರಾಹುಲ್ ಗಾಂಧಿಗೆ ಶಶಿ ತರೂರ್​​ ಜನ್ಮದಿನದ ಗಿಫ್ಟ್ ನೀಡಿದ್ದಾರೆ; ಬಿಜೆಪಿ ಲೇವಡಿ

ಫ್ರಾನ್ಸ್​ನಲ್ಲಿ ಪ್ರಧಾನಿ ನರೇಂದ್ರ ಮೋದಿ ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಜೊತೆ ನಡೆಸಿದ ಮಾತುಕತೆಗೆ ಕಾಂಗ್ರೆಸ್ ಸಂಸದ ಶಶಿ ತರೂರ್ ಬೆಂಬಲ ವ್ಯಕ್ತಪಡಿಸಿದ್ದರು. ಈ ಹಿನ್ನೆಲೆಯಲ್ಲಿ ಬಿಜೆಪಿ ನಾಯಕರು ರಾಹುಲ್ ಗಾಂಧಿಗೆ ಲೇವಡಿ ಮಾಡಿದ್ದಾರೆ. ಶಶಿ ತರೂರ್ ಅವರ ಈ ಹೇಳಿಕೆಗಳು ಪ್ರಧಾನಿ ಮೋದಿಯವರ ನಾಯಕತ್ವಕ್ಕೆ ಸಿಗುತ್ತಿರುವ ಬೆಳೆಯುತ್ತಿರುವ ಮನ್ನಣೆಯನ್ನು ಪ್ರತಿಬಿಂಬಿಸುತ್ತವೆ ಎಂದು ಪ್ರತಿಪಾದಿಸಿದ್ದಾರೆ.

ಮೋದಿಯನ್ನು ಬೆಂಬಲಿಸುವ ಮೂಲಕ ರಾಹುಲ್ ಗಾಂಧಿಗೆ ಶಶಿ ತರೂರ್​​ ಜನ್ಮದಿನದ ಗಿಫ್ಟ್ ನೀಡಿದ್ದಾರೆ; ಬಿಜೆಪಿ ಲೇವಡಿ
Shashi Tharoor With Pm ModiImage Credit source: PTI
ಸುಷ್ಮಾ ಚಕ್ರೆ
|

Updated on:Jun 20, 2026 | 5:22 PM

Share

ನವದೆಹಲಿ, ಜೂನ್ 20: ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ (Donald Trump) ಅವರೊಂದಿಗಿನ ಪ್ರಧಾನಿ ನರೇಂದ್ರ ಮೋದಿ ಅವರ ಭೇಟಿಯನ್ನು ಕಾಂಗ್ರೆಸ್ ಪಕ್ಷವು ತೀವ್ರವಾಗಿ ಟೀಕಿಸಿದ್ದರೆ, ಅದೇ ಪಕ್ಷದ ಹಿರಿಯ ನಾಯಕ ಶಶಿ ತರೂರ್ (Shashi Tharoor) ಮಾತ್ರ ಪ್ರಧಾನಿ ಮೋದಿಯವರ ನಿಲುವನ್ನು ಬಹಿರಂಗವಾಗಿ ಬೆಂಬಲಿಸಿದ್ದಾರೆ. ಶಶಿ ತರೂರ್ ಅವರ ಈ ಹೇಳಿಕೆಯನ್ನು ಅಸ್ತ್ರವಾಗಿ ಬಳಸಿಕೊಂಡಿರುವ ಬಿಜೆಪಿ, ರಾಹುಲ್ ಗಾಂಧಿ ಮತ್ತು ಕಾಂಗ್ರೆಸ್ ನಾಯಕತ್ವದ ವಿರುದ್ಧ ಕಟು ವಾಗ್ದಾಳಿ ನಡೆಸಿದೆ.

ಬಿಜೆಪಿ ವಕ್ತಾರ ಶೆಹಜಾದ್ ಪೂನಾವಾಲಾ ಅವರು ಎಕ್ಸ್​ (ಟ್ವಿಟರ್) ನಲ್ಲಿ ಪೋಸ್ಟ್ ಒಂದನ್ನು ಹಂಚಿಕೊಂಡಿದ್ದು, ಶಶಿ ತರೂರ್ ಅವರ ಹೇಳಿಕೆಗಳು ರಾಹುಲ್ ಗಾಂಧಿಗೆ ಸಿಕ್ಕ ಜನ್ಮದಿನದ ಉಡುಗೊರೆ ಯಾಗಿದೆ. ಈ ಹೇಳಿಕೆ ಕಾಂಗ್ರೆಸ್​ ಹಾಗೂ ರಾಹುಲ್ ಗಾಂಧಿಯ ಸುಳ್ಳು ನಿರೂಪಣೆಯನ್ನು ಧ್ವಂಸಗೊಳಿಸಿದೆ ಎಂದು ಹೇಳಿದ್ದಾರೆ. “ನಿನ್ನೆ ರಾಹುಲ್ ಗಾಂಧಿ ಅವರ ಜನ್ಮದಿನವಾಗಿತ್ತು. ಸಂಸದ ಶಶಿ ತರೂರ್ ಅವರು ರಾಹುಲ್ ಗಾಂಧಿಯವರ ಸುಳ್ಳು ನಿರೂಪಣೆಯನ್ನು ಬಯಲು ಮಾಡುವ ಮೂಲಕ ಜನ್ಮದಿನದ ಉಡುಗೊರೆಯನ್ನು ನೀಡಿದ್ದಾರೆ” ಎಂದು ಪೂನಾವಾಲಾ ಬರೆದಿದ್ದಾರೆ. ಹಾಗೇ, “ರಾಹುಲ್ ಗಾಂಧಿ ಅವರು ಶಶಿ ತರೂರ್ ಅವರನ್ನು ಪಕ್ಷದಿಂದ ವಜಾ ಮಾಡುವುದಿಲ್ಲ ಎಂದು ಭಾವಿಸುತ್ತೇನೆ!” ಎಂದು ಪೂನಾವಾಲಾ ವ್ಯಂಗ್ಯವಾಡಿದ್ದಾರೆ.

ಇದನ್ನೂ ಓದಿ: ಸಂಸದ ಶಶಿ ತರೂರ್ ಬೆಂಗಾವಲು ಪಡೆ ತಡೆದು ಭದ್ರತಾ ಸಿಬ್ಬಂದಿ ಮೇಲೆ ಹಲ್ಲೆ

“ನಿನ್ನೆ ರಾಹುಲ್ ಗಾಂಧಿ ಅವರ ಜನ್ಮದಿನವಾಗಿದ್ದರೂ ಅವರಿಗೆ ಯಾವುದೇ ಉಡುಗೊರೆಗಳು ಸಿಗದಿರುವುದು ಮುಜುಗರದ ಸಂಗತಿ. ಕಾಂಗ್ರೆಸ್ ಸಂಸದ ಶಶಿ ತರೂರ್ ಅವರೇ ಪ್ರಧಾನಿ ಮೋದಿಯವರನ್ನು ಶ್ಲಾಘಿಸುವ ನಿಲುವು ತಳೆದಿದ್ದಾರೆ. ಇದು ರಾಹುಲ್ ಗಾಂಧಿ ಸಾರ್ವಜನಿಕ ಬೆಂಬಲವನ್ನು ಕಳೆದುಕೊಂಡಿರುವುದನ್ನು ತೋರಿಸುತ್ತದೆ ಎಂದು ಪೂನಾವಾಲಾ ಹೇಳಿದ್ದಾರೆ.

ಬಿಜೆಪಿ ವಕ್ತಾರ ಪ್ರದೀಪ್ ಭಂಡಾರಿ ಕೂಡ ಈ ಬಗ್ಗೆ ಪ್ರತಿಕ್ರಿಯಿಸಿದ್ದು, ರಾಷ್ಟ್ರೀಯ ಹಿತಾಸಕ್ತಿಗೆ ಸಂಬಂಧಿಸಿದ ವಿಷಯಗಳಲ್ಲಿ ಕಾಂಗ್ರೆಸ್ ಸಂಸದ ತರೂರ್ ಮತ್ತು ರಾಹುಲ್ ಗಾಂಧಿ ನಡುವಿನ ವ್ಯತ್ಯಾಸವನ್ನು ಶಶಿ ತರೂರ್ ಅವರ ಮಾತುಗಳು ಬಹಿರಂಗಪಡಿಸಿವೆ ಎಂದು ಹೇಳಿದ್ದಾರೆ. “ಕಾಂಗ್ರೆಸ್ ನಾಯಕರೇ ಪ್ರಧಾನಿ ನರೇಂದ್ರ ಮೋದಿ ಅವರ ರಾಜತಾಂತ್ರಿಕತೆಯನ್ನು ಶ್ಲಾಘಿಸುತ್ತಿದ್ದಾರೆ. ಭಾರತದ ರಾಷ್ಟ್ರೀಯ ಹಿತಾಸಕ್ತಿಯನ್ನು ರಕ್ಷಿಸುವ ವಿಷಯ ಬಂದಾಗ ಪ್ರಧಾನಿ ಮೋದಿ ಮೊದಲಿಗರಾಗಿ ನಿಲ್ಲುತ್ತಾರೆ. ಅದೇ ಭಾರತದ ರಾಷ್ಟ್ರೀಯ ಹಿತಾಸಕ್ತಿಯ ವಿರುದ್ಧ ಮಾತನಾಡುವ ವಿಷಯ ಬಂದಾಗ ರಾಹುಲ್ ಗಾಂಧಿ ಎಲ್ಲರಿಗಿಂತ ಮುಂದೆ ಇರುತ್ತಾರೆ” ಎಂದು ಭಂಡಾರಿ ತಮ್ಮ ಎಕ್ಸ್ ಪೋಸ್ಟ್‌ನಲ್ಲಿ ಬರೆದಿದ್ದಾರೆ.

ಇದನ್ನೂ ಓದಿ: ಕ್ಷಮೆ ಕೇಳುವುದಿಲ್ಲ, ಕಾಂಗ್ರೆಸ್​​​​​ ನಿಯಮವನ್ನು ಉಲ್ಲಂಘಿಸಿಲ್ಲ: ಈ ವಿಚಾರದಲ್ಲಿ ಕೇಂದ್ರವನ್ನು ಬೆಂಬಲಿಸುವೆ ಎಂದ ಶಶಿ ತರೂರ್

ಪ್ರಧಾನಿ ನರೇಂದ್ರ ಮೋದಿ ಅವರು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರನ್ನು ಭೇಟಿಯಾದ ಸಂದರ್ಭದಲ್ಲಿ ಪ್ರಮುಖ ವಿಷಯಗಳನ್ನು ಪ್ರಸ್ತಾಪಿಸಲು ವಿಫಲರಾಗಿದ್ದಾರೆ ಮತ್ತು ಅತ್ಯಂತ ಮುಜುಗರದ ರೀತಿಯಲ್ಲಿ ವರ್ತಿಸಿದ್ದಾರೆ ಎಂದು ಕಾಂಗ್ರೆಸ್ ಪಕ್ಷವು ಆರೋಪಿಸಿತ್ತು. ಭಾರತೀಯ ಪ್ರಜೆಗಳ ಸಾವಿನ ಬಗ್ಗೆ ಸರ್ಕಾರ ಮೌನ ವಹಿಸಿದೆ ಎಂದು ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಆರೋಪಿಸಿದ್ದರು.

ಸಂಘರ್ಷ ಪೀಡಿತ ಪಶ್ಚಿಮ ಏಷ್ಯಾ ವಲಯದಲ್ಲಿ ಭಾರತೀಯ ನಾವಿಕರ ಸಾವುಗಳ ಕುರಿತು ಮೋದಿ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿದ್ದ ಮತ್ತು ಈ ವಿಷಯದಲ್ಲಿ ಪ್ರಧಾನಮಂತ್ರಿಯವರ ಪ್ರತಿಕ್ರಿಯೆಯನ್ನು ಪ್ರಶ್ನಿಸಿದ್ದ ಕಾಂಗ್ರೆಸ್ ಹೈಕಮಾಂಡ್ ನಿಲುವಿಗೆ ತದ್ವಿರುದ್ಧವಾಗಿ ಶಶಿ ತರೂರ್ ಅವರ ಈ ಹೇಳಿಕೆಗಳು ಹೊರಬಂದಿವೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 4:48 pm, Sat, 20 June 26

Follow Us