ಕೊವಿಶೀಲ್ಡ್ & ಕೊವ್ಯಾಕ್ಸಿನ್: ಎರಡೂ ಲಸಿಕೆಗಳ ನಡುವಿನ ಸಾಮ್ಯತೆ ಮತ್ತು ಭಿನ್ನತೆಯ ವಿವರ ಇಲ್ಲಿದೆ ನೋಡಿ
ಎರಡು ಲಸಿಕೆಗಳ ನಡುವಿನ ವ್ಯತ್ಯಾಸ ಹಾಗೂ ಅವುಗಳ ಗುಣಮಟ್ಟದ ಬಗ್ಗೆ ಎದ್ದಿರುವ ಗೊಂದಲಕ್ಕೆ ತೆರೆ ಎಳೆಯುವ ಪ್ರಯತ್ನ ಮಾಡಿರುವ ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಕೊವಿಶೀಲ್ಡ್ ಮತ್ತು ಕೊವ್ಯಾಕ್ಸಿನ್ ಲಸಿಕೆಗಳ ಕುರಿತು ವಿವರಣೆ ನೀಡಿದೆ.
ದೆಹಲಿ: ದೇಶದೆಲ್ಲೆಡೆ ಕೊರೊನಾ ಲಸಿಕೆ ವಿತರಣೆಗೆ ಕ್ಷಣಗಣನೆ ಆರಂಭವಾಗಿದೆ. ಜ.16ರಿಂದ ಎಲ್ಲಾ ರಾಜ್ಯಗಳಲ್ಲಿ ಕೊರೊನಾ ಲಸಿಕೆ ನೀಡಲು ಕೇಂದ್ರ ಸರ್ಕಾರ ಈಗಾಗಲೇ ಸೂಚನೆ ನೀಡಿದೆ. ಸದ್ಯ ದೇಶದಲ್ಲಿ ಸೆರಮ್ ಇನ್ಸ್ಟಿಟ್ಯೂಟ್ ಆಫ್ ಇಂಡಿಯಾ ಸಂಸ್ಥೆಯ ಕೊವಿಶೀಲ್ಡ್ ಮತ್ತು ಭಾರತ್ ಬಯೋಟೆಕ್ ಸಂಸ್ಥೆಯ ಕೊವ್ಯಾಕ್ಸಿನ್ ಲಸಿಕೆಗಳು ಲಭ್ಯವಿದ್ದು, ಇವೆರಡರಲ್ಲಿ ಯಾವುದು ಉತ್ತಮ ಎನ್ನುವ ಚರ್ಚೆ ಅನೇಕ ದಿನಗಳಿಂದ ನಡೆಯುತ್ತಿದೆ.
ಎರಡು ಲಸಿಕೆಗಳ ನಡುವಿನ ವ್ಯತ್ಯಾಸ ಹಾಗೂ ಅವುಗಳ ಗುಣಮಟ್ಟದ ಬಗ್ಗೆ ಎದ್ದಿರುವ ಗೊಂದಲಕ್ಕೆ ತೆರೆ ಎಳೆಯುವ ಪ್ರಯತ್ನ ಮಾಡಿರುವ ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಕೊವಿಶೀಲ್ಡ್ ಮತ್ತು ಕೊವ್ಯಾಕ್ಸಿನ್ ಲಸಿಕೆಗಳ ಕುರಿತು ವಿವರಣೆ ನೀಡಿದೆ. ಈ ಕುರಿತು 4 ಪುಟಗಳ ಪ್ರಕಟಣೆ ಹೊರಡಿಸಿರುವ ಆರೋಗ್ಯ ಇಲಾಖೆ ಎರಡೂ ಲಸಿಕೆಗಳ ವಿಶೇಷತೆ, ಅವುಗಳನ್ನು ಶೇಖರಣೆ ಮಾಡಬೇಕಾದ ಬಗೆ, ಡೋಸೇಜ್ ಮತ್ತು ಅವುಗಳ ನಡುವಿನ ಅಂತರವನ್ನು ಪಟ್ಟಿ ಮಾಡಿದೆ.
ಎರಡೂ ಲಸಿಕೆಗಳಿಗೆ ಅನ್ವಯಿಸುವ ಸಾಮಾನ್ಯ ನಿಯಮಗಳು 1. ತುರ್ತು ಬಳಕೆಗೆ ಅನುಮತಿ ಪಡೆದಿರುವ ಕೊರೊನಾ ಲಸಿಕೆಗಳನ್ನು 18 ವರ್ಷಕ್ಕಿಂತ ಮೇಲ್ಪಟ್ಟವರಿಗೆ ಮಾತ್ರ ನೀಡಬೇಕು 2. ಕೊರೊನಾ ಲಸಿಕೆ ಪಡೆದ 14 ದಿನಗಳ ಅಂತರದಲ್ಲಿ ಬೇರಾವ ಲಸಿಕೆಯನ್ನೂ ಪಡೆಯದಂತೆ ಎಚ್ಚರವಹಿಸಬೇಕು 3. ಎರಡು ಡೋಸ್ಗಳಲ್ಲಿ ನೀಡಲಾಗುವ ಕೊರೊನಾ ಲಸಿಕೆಯಲ್ಲಿ ಎರಡೂ ಬಾರಿ ಒಂದೇ ಸಂಸ್ಥೆಯ ಲಸಿಕೆಯನ್ನು ಪಡೆಯುವುದು ಕಡ್ಡಾಯ.ಅಂದರೆ ಮೊದಲು ಕೊವ್ಯಾಕ್ಸಿನ್ ಪಡೆದಿದ್ದರೆ ಎರಡನೇ ಬಾರಿಯೂ ಕೊವ್ಯಾಕ್ಸಿನ್ ಲಸಿಕೆಯನ್ನೇ ಪಡೆಯಬೇಕು 4. ಲಸಿಕೆ ಪಡೆಯುವ ವ್ಯಕ್ತಿಗೆ ಯಾವುದೇ ಅಲರ್ಜಿ ಸಮಸ್ಯೆ ಇದೆಯೇ ಅಥವಾ ಇತರ ಲಸಿಕೆಗಳಿಂದ ತೊಂದರೆ ಅನುಭವಿಸುವವರೇ ಎಂದು ಪರಿಶೀಲಿಸಬೇಕು 5. ಗರ್ಭಿಣಿಯರು ಮತ್ತು ಬಾಣಂತಿಯರು ಕೊರೊನಾ ಲಸಿಕೆಯನ್ನು ಸ್ವೀಕರಿಸುವಂತಿಲ್ಲ 6. ಸಕ್ರಿಯ ಕೊರೊನಾ ಸೋಂಕು ಉಳ್ಳವರು ಅಥವಾ ಸೋಂಕಿಗೆ ಚಿಕಿತ್ಸೆ ಪಡೆಯುತ್ತಿರುವವರು ಮತ್ತು ಬೇರೆ ರೀತಿಯ ಅನಾರೋಗ್ಯಕ್ಕೆ ಒಳಗಾದವರು ಗುಣಮುಖರಾದ 4ರಿಂದ 8ವಾರಗಳ ನಂತರವಷ್ಟೇ ಕೊರೊನಾ ಲಸಿಕೆ ಪಡೆಯಬಹುದು 7. ರಕ್ತಸ್ರಾವ ಅಥವಾ ಇನ್ಯಾವುದೇ ತೆರನಾದ ಸಮಸ್ಯೆ ಹೊಂದಿರುವವರು ಕೊರೊನಾ ಲಸಿಕೆ ಪಡೆಯುವ ಮುನ್ನ ಸೂಕ್ತ ಪರೀಕ್ಷೆಗೆ ಒಳಪಡಬೇಕು
ಈ ಸಂದರ್ಭಗಳಲ್ಲಿ ಕೊರೊನಾ ಲಸಿಕೆ ನೀಡಬಹುದು 1. ಕೊರೊನಾ ಸೋಂಕಿನಿಂದ ಸಂಪೂರ್ಣ ಗುಣಮುಖರಾದವರಿಗೆ ಲಸಿಕೆ ನೀಡಬಹುದು 2. ದೀರ್ಘಕಾಲದ ಕಾಯಿಲೆ ಅಥವಾ ಬೇರೆ ಬೇರೆ ಸಮಸ್ಯೆ ಹೊಂದಿರುವವರು ಸೂಕ್ತ ಮಾರ್ಗದರ್ಶನದಲ್ಲಿ ಲಸಿಕೆ ಪಡೆಯಬಹುದು 3. ರೋಗ ನಿರೋಧಕ ಶಕ್ತಿಯ ಕೊರತೆ ಉಳ್ಳವರು, HIVಯಿಂದ ಬಳಲುತ್ತಿರುವವರು ಕೊರೊನಾ ಲಸಿಕೆ ಪಡೆಯಬಹುದು. ಆದರೆ, ಅವರಲ್ಲಿ ಲಸಿಕೆಯ ಪರಿಣಾಮ ಕಡಿಮೆ ಇರುವ ಸಾಧ್ಯತೆ ಇದೆ
ಕೊವಿಶೀಲ್ಡ್ ಮತ್ತು ಕೊವ್ಯಾಕ್ಸಿನ್ ಲಸಿಕೆಗಳ ನಡುವೆ ಇರುವ ಸಾಮ್ಯತೆ/ಭಿನ್ನತೆ A. ಪ್ರಮಾಣ ಕೊವಿಶೀಲ್ಡ್: ಒಂದು ಸೀಸೆಯಲ್ಲಿ 10 ಡೋಸ್ ಕೊವ್ಯಾಕ್ಸಿನ್: ಒಂದು ಸೀಸೆಯಲ್ಲಿ 5 ಡೋಸ್
B.ಒಂದು ಡೋಸ್ನಲ್ಲಿ ಇರಲಿರುವ ಲಸಿಕೆ ಪ್ರಮಾಣ ಕೊವಿಶೀಲ್ಡ್: 0.5ಮಿ.ಲೀ (ಒಬ್ಬರಿಗೆ 2 ಡೋಸ್) ಕೊವ್ಯಾಕ್ಸಿನ್: 0.5 ಮಿ.ಲೀ (ಒಬ್ಬರಿಗೆ 2 ಡೋಸ್)
C.ಕಾಲಾವಧಿ ಕೊವಿಶೀಲ್ಡ್: 6 ತಿಂಗಳು ಕೊವ್ಯಾಕ್ಸಿನ್: 6 ತಿಂಗಳು
D. ವಾಯಿದೆ ಮುಗಿಯುವ ದಿನಾಂಕದ ಉಲ್ಲೇಖ ಕೊವಿಶೀಲ್ಡ್: ಇರಲಿದೆ ಕೊವ್ಯಾಕ್ಸಿನ್: ಇರಲಿದೆ
E. ಶೇಖರಣೆಗೆ ಬೇಕಾದ ಉಷ್ಣಾಂಶ ಕೊವಿಶೀಲ್ಡ್: 2ರಿಂದ 8ಡಿಗ್ರಿ ಸೆಲ್ಸಿಯಸ್ ಕೊವ್ಯಾಕ್ಸಿನ್: 2ರಿಂದ 8ಡಿಗ್ರಿ ಸೆಲ್ಸಿಯಸ್
F. ನೀಡುವ ಬಗೆ ಕೊವಿಶೀಲ್ಡ್: ಚುಚ್ಚುಮದ್ದು ಕೊವ್ಯಾಕ್ಸಿನ್: ಚುಚ್ಚುಮದ್ದು