Supreme Court: ವಿಕ್ಟೋರಿಯಾ ಗೌರಿ ನೇಮಕಾತಿ ಪ್ರಶ್ನಿಸಿ ಸಲ್ಲಿಸಿದ್ದ ಅರ್ಜಿ ಸುಪ್ರೀಂಕೋರ್ಟ್​ನಲ್ಲಿ ವಜಾ

Petition Against Victoria Gowri Dismissed: ಮದ್ರಾಸ್ ಹೈಕೋರ್ಟ್​ನ ಹೆಚ್ಚುವರಿ ನ್ಯಾಯಾಧೀಶೆಯಾಗಿ ವಿಕ್ಟೋರಿಯಾ ಗೌರಿ ಪ್ರಮಾಣವಚನ ಪಡೆಯುತ್ತಿರುವ ಹೊತ್ತಿನಲ್ಲೇ ಸುಪ್ರೀಂಕೋರ್ಟ್​ನಲ್ಲಿ ಅವರ ವಿರುದ್ಧ ಸಲ್ಲಿಕೆಯಾಗಿದ್ದ ರಿಟ್ ಅರ್ಜಿ ವಜಾಗೊಂಡಿದೆ.

Supreme Court: ವಿಕ್ಟೋರಿಯಾ ಗೌರಿ ನೇಮಕಾತಿ ಪ್ರಶ್ನಿಸಿ ಸಲ್ಲಿಸಿದ್ದ ಅರ್ಜಿ ಸುಪ್ರೀಂಕೋರ್ಟ್​ನಲ್ಲಿ ವಜಾ
ವಿಕ್ಟೋರಿಯಾ ಗೌರಿ
Follow us
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Feb 07, 2023 | 12:17 PM

ನವದೆಹಲಿ: ಮದ್ರಾಸ್ ಹೈಕೋರ್ಟ್​ಗೆ ನ್ಯಾಯಾಧೀಶರಾಗಿ ವಕೀಲೆ ವಿಕ್ಟೋರಿಯಾ ಗೌರಿ ನೇಮಕಾತಿ (Victoria Gowri) ಪ್ರಶ್ನಿಸಿ ಸಲ್ಲಿಕೆಯಾಗಿದ್ದ ಅರ್ಜಿಯನ್ನು ಸುಪ್ರೀಂಕೋರ್ಟ್ ತಿರಸ್ಕರಿಸಿದೆ. ನ್ಯಾಯಮೂರ್ತಿಗಳಾದ ಸಂಜೀವ್ ಖನ್ನ, ಭೂಷಣ್ ಗವೈ ಅವರಿರುವ ಸುಪ್ರೀಂ ನ್ಯಾಯಪೀಠ ಇಂದು ಈ ರಿಟ್ ಅರ್ಜಿಯ (Writ Petition) ವಿಚಾರಣೆ ನಡೆಸಿ, ಅಂತಿಮವಾಗಿ ಪುರಸ್ಕರಿಸದಿರಲು ತೀರ್ಮಾನಿಸಿದೆ.

ಇತ್ತ ಸುಪ್ರೀಂಕೋರ್ಟ್​ನಲ್ಲಿ ಈ ಅರ್ಜಿಯ ವಿಚಾರಣೆ ನಡೆಯುತ್ತಿರುವ ಹೊತ್ತಿನಲ್ಲೇ ಅತ್ತ ಚೆನ್ನೈನಲ್ಲಿ ವಿಕ್ಟೋರಿಯಾ ಗೌರಿ ಅವರು ಮದ್ರಾಸ್ ಹೈಕೋರ್ಟ್​ನ ಹೆಚ್ಚುವರಿ ನ್ಯಾಯಾಧೀಶೆಯಾಗಿ (Madras HC Additional Judge) ಪ್ರಮಾಣವಚನ ಸ್ವೀಕರಿಸಿದರು. ಇವರ ನೇಮಕಾತಿ ಪ್ರಶ್ನಿಸಿ ಕೆಲ ವಕೀಲರು ಸುಪ್ರೀಂಕೋರ್ಟ್ ಮುಂದೆ ತುರ್ತು ವಿಚಾರಣೆ ಪಟ್ಟಿಗೆ ಸೇರಿಸುವಂತೆ ಕೋರಿದ್ದರು. ಅದರಂತೆ ಸುಪ್ರೀಂಕೋರ್ಟ್ ಇಂದು ಅರ್ಜಿಯ ವಿಚಾರಣೆ ನಡೆಸಿ, ಅದನ್ನು ಕೈಬಿಡಲು ಅಂತಿಮವಾಗಿ ನಿರ್ಧರಿಸಿತು. ಇದರೊಂದಿಗೆ, ವಿಕ್ಟೋರಿಯಾ ಗೌರಿ ಮದ್ರಾಸ್ ಹೈಕೋರ್ಟ್ ನ್ಯಾಯಾಧೀಶೆ ಸ್ಥಾನ ಅಬಾಧಿತವಾಗಿರಲಿದೆ.

ಸುಪ್ರೀಂಕೋರ್ಟ್​ನಲ್ಲಿ ವಿಕ್ಟೋರಿಯಾ ಗೌರಿ ವಿರುದ್ಧ ಸಲ್ಲಿಕೆಯಾದ ಅರ್ಜಿಯಲ್ಲಿ ದೂರುದಾರರ ಪರ ಹಿರಿಯ ವಕೀಲ ರಾಜು ರಾಮಚಂದ್ರನ್ ವಕಾಲತು ವಹಿಸಿದರು. ಗೌರಿ ವಕೀಲೆಯಾಗಿ ಬಹಳ ವಿವಾದಾತ್ಮಕವಾಗಿದ್ದಾರೆ. ಜೊತೆಗೆ ಇವರು ಮಾಜಿ ಬಿಜೆಪಿ ನಾಯಕಿಯೂ ಹೌದು. ನಿರ್ದಿಷ್ಟ ಸಮುದಾಯದ ವಿರುದ್ಧ ಇವರ ದ್ವೇಷ ಭಾವನೆ ಜಗಜ್ಜಾಹೀರಾಗಿವೆ. ಇಂಥವರು ನ್ಯಾಯಾಧೀಶ ಸ್ಥಾನ ಅಲಂಕರಿಸುವುದು ಶೋಭೆ ತರುವುದಿಲ್ಲ ಎಂಬುದು ದೂರುದಾರರ ಪರ ವಕೀಲರ ವಾದವಾಗಿತ್ತು.

ಇದನ್ನೂ ಓದಿ: Victoria Gowri: ಮದ್ರಾಸ್ ಹೈಕೋರ್ಟ್ ನ್ಯಾಯಾಧೀಶೆಯಾಗಿ ವಿಕ್ಟೋರಿಯಾ ಗೌರಿ ಪ್ರಮಾಣವಚನ

ಆದರೆ, ವಿಕ್ಟೋರಿಯಾ ಗೌರಿ ವಕೀಲ ವೃತ್ತಿಯಲ್ಲಿ ಶುದ್ಧಹಸ್ತ ಎನಿಸಿದ್ದಾರೆ. ಬಹಳ ಶ್ರಮಪಟ್ಟು ಮುಂದೆ ಬಂದಿದ್ದಾರೆ. ಇವರು ನ್ಯಾಯಾಧೀಶೆಯಾಗಲು ಅರ್ಹರಾಗಿದ್ದಾರೆ ಎಂಬುದು ಅವರ ಪರ ವಕೀಲರ ಸಮರ್ಥನೆ. ಕೊನೆಗೆ, ದೂರುದಾರರ ಅರ್ಜಿಯನ್ನು ಸುಪ್ರೀಂಕೋರ್ಟ್ ಪುರಸ್ಕರಿಸಲಿಲ್ಲ. ಅದರೆ, ಅರ್ಜಿ ತಿರಸ್ಕರಿಸಲು ನ್ಯಾಯಪೀಠ ಯಾವ ಕಾರಣ ತಿಳಿಸಿತು ಎಂಬ ಮಾಹಿತಿ ಸದ್ಯ ಗೊತ್ತಾಗಿಲ್ಲ.

ಹಿಂದೊಮ್ಮೆ ನೇಮಕಾತಿ ರದ್ದಾದ ಒಂದು ಪ್ರಕರಣ

ಸಾಮಾನ್ಯವಾಗಿ ಹೈಕೋರ್ಟ್ ನ್ಯಾಯಾಧೀಶರು ನೇಮಕವಾಗಿ ಅವರು ಪ್ರಮಾಣವಚನ ಸ್ವೀಕರಿಸುವ ಮುನ್ನವೇ ವಜಾಗೊಂಡ ಒಂದೇ ಒಂದು ಪ್ರಕರಣ 1992ರಲ್ಲಿ ದಾಖಲಾಗಿದೆ. ಅದು ಕುಮಾರ್ ಪದ್ಮ ಪ್ರಸಾದ್ ಪ್ರಕರಣ. ಶ್ರೀವಾಸ್ತವ ಎಂಬ ವಕೀಲರನ್ನು ಹೈಕೋರ್ಟ್ ನ್ಯಾಯಾಧೀಶರಾಗಿ ಆಯ್ಕೆ ಮಾಡಿದ ಕ್ರಮವನ್ನು ಕೆಲ ವಕೀಲರು ಪ್ರಶ್ನಿಸಿ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದರು. ಶ್ರೀವಾಸ್ತವ ಆಗ ಮಿಝೋರಾಂ ಸರ್ಕಾರದಲ್ಲಿ ಕಾನೂನು ಇಲಾಖೆಯಲ್ಲಿ ಕಾರ್ಯದರ್ಶಿ ಮಟ್ಟದ ಅಧಿಕಾರಿಯಾಗಿದ್ದರು. ಅವರ ವಿರುದ್ಧ ಬಹಳಷ್ಟು ಭ್ರಷ್ಟಾಚಾರ ಆರೋಪಗಳು ಬಂದಿದ್ದವು. ಅವರೆಂದೂ ವಕೀಲ ವೃತ್ತಿ ಹಿಡಿದಿಲ್ಲ, ನ್ಯಾಯ ಅಧಿಕಾರಿ ಸ್ಥಾನವನ್ನೂ ಅಲಂಕರಿಸಲಿಲ್ಲ ಎಂಬ ಕಾರಣಕ್ಕೆ ಅವರ ನೇಮಕಾತಿಯನ್ನು ರದ್ದು ಮಾಡಲಾಯಿತು.

ಇದೇ ಪ್ರಕರಣವನ್ನು ಇಂದು ವಿಕ್ಟೋರಿಯ ಗೌರಿ ವಿರುದ್ಧ ಸಲ್ಲಿಕೆಯಾಗಿದ್ದ ರಿಟ್ ಅರ್ಜಿಯಲ್ಲಿ ಉಲ್ಲೇಖಿಸಲಾಗಿತ್ತು.