ತಡರಾತ್ರಿ ಇಲಿ ಪಾಷಾಣ ಆರ್ಡರ್ ಮಾಡಿದ ಮಹಿಳೆಯ ಜೀವ ಉಳಿಸಿದ ಡೆಲಿವರಿ ಬಾಯ್!
ತಮಿಳುನಾಡಿನ ಮಹಿಳೆಯೊಬ್ಬರು ತಡರಾತ್ರಿ 3 ಪ್ಯಾಕೆಟ್ ಇಲಿ ಪಾಷಾಣ ಆರ್ಡರ್ ಮಾಡಿದ್ದರು. ಆದರೆ, ಇಷ್ಟು ರಾತ್ರಿ ವೇಳೆ ಇಲಿ ಪಾಷಾಣ ಆರ್ಡರ್ ಮಾಡಿದ್ದರಿಂದ ಅನುಮಾನಗೊಂಡ ಬ್ಲಿಂಕಿಟ್ ಡೆಲಿವರಿ ಬಾಯ್ ಆ ಆರ್ಡರ್ ಅನ್ನು ಡೆಲಿವರಿ ಮಾಡಲು ನಿರಾಕರಿಸಿದರು. ಇದರಿಂದ ಆ ಮಹಿಳೆಯ ಜೀವ ಉಳಿದಿದೆ. ಅಷ್ಟಕ್ಕೂ ಆಕೆ ಇಲಿ ಪಾಷಾಣ ಆರ್ಡರ್ ಮಾಡಿದ್ದೇಕೆ? ರಾತ್ರೋರಾತ್ರಿ ಡೆಲಿವರಿ ಬಾಯ್ ಹೀರೋ ಆಗಿದ್ದು ಹೇಗೆ? ಎಂಬುದರ ಮಾಹಿತಿ ಇಲ್ಲಿದೆ.

ಚೆನ್ನೈ, ಜನವರಿ 9: ಕೆಲವೊಮ್ಮೆ ನಮ್ಮ ಬದುಕಿನಲ್ಲಿ ಒಬ್ಬೊಬ್ಬರು ನಾನಾ ರೀತಿಯಲ್ಲಿ ಹೀರೋಗಳಾಗಿ ಪ್ರವೇಶ ಮಾಡುತ್ತಾರೆ. ಹೀರೋ ಎಂದರೆ ಹೀಗೇ ಇರಬೇಕು ಎಂಬುದು ಸಿನಿಮಾಗೆ ಮಾತ್ರ ಸೀಮಿತ. ನಿಜ ಜೀವನದ ಹೀರೋಗಳು ಯಾವ ರೂಪದಲ್ಲಿ ಬೇಕಾದರೂ ಇರಬಹುದು. ತಮಿಳುನಾಡಿನ ಮಹಿಳೆಯೊಬ್ಬರ ಪಾಲಿಗೆ ಬ್ಲಿಂಕಿಟ್ ಡೆಲಿವರಿ ಬಾಯ್ ಹೀರೋ ರೂಪದಲ್ಲಿ ಬಂದು ಕಾಪಾಡಿದ್ದಾರೆ. ಆಕೆ ತಡರಾತ್ರಿ ಬ್ಲಿಂಕಿಟ್ನಲ್ಲಿ 3 ಇಲಿ ಪಾಷಾಣದ ಪ್ಯಾಕೆಟ್ ಆರ್ಡರ್ ಮಾಡಿದ್ದರು. ಇದನ್ನು ನೋಡಿದಾಗ ಆ ಡೆಲಿವರಿ ಬಾಯ್ಗೆ ವಿಚಿತ್ರವೆನಿಸಿತ್ತು. ಆಕೆ ಆತ್ಮಹತ್ಯೆ ಮಾಡಿಕೊಳ್ಳಲು ಈ ಪಾಷಾಣ ಆರ್ಡರ್ ಮಾಡಿರಬಹುದಾ? ಎಂಬ ಅನುಮಾನ ಅವರನ್ನು ಕಾಡಿತ್ತು. ಹೀಗಾಗಿ, ಅವರು ಆ ಪಾಷಾಣವನ್ನು ಆಕೆಗೆ ಡೆಲಿವರಿ ನೀಡಲಿಲ್ಲ. ಅವರು ತೆಗೆದುಕೊಂಡ ಆ ಒಂದು ನಿರ್ಧಾರದಿಂದಾಗಿ ಆ ಮಹಿಳೆಯ ಪ್ರಾಣ ಉಳಿಯಿತು!
ಆ ಡೆಲಿವರಿ ಬಾಯ್ ತನಗೇ ಅರಿವಿಲ್ಲದಂತೆ ಒಂದು ದುರಂತವನ್ನು ತಪ್ಪಿಸಿದ್ದಾರೆ. ತಡರಾತ್ರಿಯಲ್ಲಿ ಯಾರೂ 3 ಪ್ಯಾಕೆಟ್ ಇಲಿ ಪಾಷಾಣ ಆರ್ಡರ್ ಮಾಡುತ್ತಾರೆ ಎಂಬ ಅನುಮಾನ ಬಂದಿದ್ದರಿಂದಾಗಿಯೇ ಆಕೆಯ ಪ್ರಾಣ ಉಳಿದಿದೆ. ಆ ಪಾಷಾಣವನ್ನು ಡೆಲಿವರಿ ನೀಡಲು ಆಕೆಯ ಮನೆಗೆ ಹೋದಾಗ ಅಲ್ಲಿನ ಪರಿಸ್ಥಿತಿ ನೋಡಿ ಡೆಲಿವರಿ ಬಾಯ್ಗೆ ಏನೋ ಸರಿಯಿಲ್ಲ ಎನಿಸಿತ್ತು. ಹೀಗಾಗಿ, ಪಾಷಾಣವನ್ನು ನೀಡದೆ ವಾಪಾಸ್ ಬಂದಿದ್ದರು.
View this post on Instagram
ಇದನ್ನೂ ಓದಿ: ಪ್ರೇಯಸಿಯನ್ನು ಮದುವೆಯಾಗಲು ಅಪಘಾತದ ನಾಟಕವಾಡಿದ ಯುವಕನ ಪ್ಲಾನ್ ಉಲ್ಟಾ ಆಗಿದ್ದು ಹೇಗೆ?
ಕೊನೆಗೆ ಅವರು ಈ ಘಟನೆಯನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡರು. “ಒಟ್ಟು 3 ಇಲಿ ಪಾಯ್ಸನ್ ಪ್ಯಾಕೆಟ್ ಆರ್ಡರ್ ಮಾಡಿದ್ದರು. ಅವರು ಅದನ್ನು ಆರ್ಡರ್ ಮಾಡಿದಾಗ ಅವರು ಏನು ಯೋಚಿಸುತ್ತಿದ್ದರು ಎಂದು ನನಗೆ ತಿಳಿದಿರಲಿಲ್ಲ. ಆದರೆ ಅವರು ತುಂಬಾ ಅಳುತ್ತಿರುವುದನ್ನು ನೋಡಿ ಅವರಿಗೆ ಏನೋ ಸಮಸ್ಯೆ ಆಗಿದೆ ಎಂದು ನನಗೆ ಅನಿಸಿತು. ಅದೇ ಕಾರಣಕ್ಕೆ ನಾನು ಆ ಆರ್ಡರ್ ಅನ್ನು ಅವರಿಗೆ ನೀಡಲಿಲ್ಲ. ನಾನು ಆ ಮಹಿಳೆಯ ಬಳಿ ನಿಮಗೇನೇ ಸಮಸ್ಯೆಯಿದ್ದರೂ ಆತ್ಮಹತ್ಯೆ ಮಾಡಿಕೊಳ್ಳಬೇಡಿ ಎಂದು ಹೇಳಿದೆ” ಎಂದು ಅವರು ಹೇಳಿದ್ದಾರೆ.
ಇದನ್ನೂ ಓದಿ: ದಂಪತಿ ಸರಸದಲ್ಲಿದ್ದಾಗ ಮಾಸ್ಟರ್ ಕೀ ಬಳಸಿ ರೂಂಗೆ ಬಂದ ಸಿಬ್ಬಂದಿ; ಲೀಲಾ ಪ್ಯಾಲೇಸ್ ಹೋಟೆಲ್ಗೆ 10 ಲಕ್ಷ ರೂ. ದಂಡ!
ಡೆಲಿವರಿ ನೀಡಲು ಹೋದಾಗ ‘ನೀವು ಆತ್ಮಹತ್ಯೆ ಮಾಡಿಕೊಳ್ಳಲು ಇದನ್ನು ಆರ್ಡರ್ ಮಾಡಿದ್ದೀರಾ?’ ಎಂದು ಕೇಳಿದೆ. ಅವರು ‘ಇಲ್ಲ, ಬ್ರದರ್ ಹಾಗಲ್ಲ’ ಎಂದು ತಡವರಿಸಿದರು. ಅದಕ್ಕೆ ನಾನು ‘ಇಲ್ಲ, ಸುಳ್ಳು ಹೇಳಬೇಡಿ. ನೀವು ಆತ್ಮಹತ್ಯೆ ಮಾಡಿಕೊಳ್ಳಲು ಯೋಚಿಸಿದ್ದೀರಿ ಅಲ್ಲವೇ? ನಿಮಗೆ ನಿಜಕ್ಕೂ ಮನೆಯಲ್ಲಿ ಇಲಿಯ ಸಮಸ್ಯೆ ಇದ್ದರೆ ನೀವು ಅದನ್ನು ಸಂಜೆಯೇ ಆರ್ಡರ್ ಮಾಡಬಹುದಿತ್ತು. ನಾಳೆ ಬೆಳಗ್ಗೆಯೂ ಮಾಡಬಹುದಿತ್ತು. ಇಷ್ಟು ರಾತ್ರಿ ವೇಳೆ ಯಾಕೆ ಆರ್ಡರ್ ಮಾಡಿದಿರಿ?’ ಎಂದು ಕೇಳಿದೆ. ಕೊನೆಗೆ ನಾನು ಅವರ ಮನವೊಲಿಸಿ ಆರ್ಡರ್ ಅನ್ನು ಕ್ಯಾನ್ಸಲ್ ಮಾಡಿಸಿದೆ. ಆಕೆಯ ಜೀವ ಉಳಿಸಿದ ತೃಪ್ತಿ ನನಗಿದೆ” ಎಂದು ಆ ಡೆಲಿವರಿ ಬಾಯ್ ಹೇಳಿದ್ದಾರೆ. ಅವರ ಈ ಕಾರ್ಯಕ್ಕೆ ಸೋಷಿಯಲ್ ಮೀಡಿಯಾದಲ್ಲಿ ಭಾರೀ ಮೆಚ್ಚುಗೆ ವ್ಯಕ್ತವಾಗಿದೆ.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
