ಪೊಲೀಸರ ಎದುರೇ ಕರ್ತವ್ಯನಿರತ ವೈದ್ಯೆಗೆ ಆರೋಪಿಯಿಂದ ಕಪಾಳಮೋಕ್ಷ: ಆಸ್ಪತ್ರೆಯ ಸಿಸಿಟಿವಿ ವಿಡಿಯೋ ವೈರಲ್
ವಾರ್ಧಾದಲ್ಲಿ ವೈದ್ಯಕೀಯ ತಪಾಸಣೆ ವೇಳೆ ಪೊಲೀಸರ ಎದುರೇ ವೈದ್ಯೆಯ ಮೇಲೆ ಆರೋಪಿ ಹಲ್ಲೆ ಮಾಡಿದ್ದಾನೆ. ಈ ಘಟನೆ ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ವೈರಲ್ ಆಗಿದೆ. ಕರ್ತವ್ಯನಿರತ ವೈದ್ಯರ ಸುರಕ್ಷತೆ ಕುರಿತು ಗಂಭೀರ ಪ್ರಶ್ನೆಗಳು ಎದ್ದಿವೆ. ಆರೋಪಿ ಹಾಗೂ ನಿರ್ಲಕ್ಷ್ಯ ತೋರಿದ ಪೊಲೀಸರ ವಿರುದ್ಧ ಕಠಿಣ ಕ್ರಮಕ್ಕೆ ವೈದ್ಯ ಸಂಘಟನೆಗಳು ಒತ್ತಾಯಿಸಿವೆ. ಬೇಡಿಕೆ ಈಡೇರದಿದ್ದರೆ ಒಪಿಡಿ ಸೇವೆ ಸ್ಥಗಿತಗೊಳಿಸುವುದಾಗಿ ಎಚ್ಚರಿಕೆ ನೀಡಿವೆ.

ವಾರ್ಧಾ , ಅಕ್ಟೋಬರ್ 23: ಮಹಾರಾಷ್ಟ್ರದ ವಾರ್ಧಾ ಜಿಲ್ಲೆಯ ಪ್ರಾಥಮಿಕ ಆರೋಗ್ಯ ಕೇಂದ್ರವೊಂದರಲ್ಲಿ ವೈದ್ಯಕೀಯ ತಪಾಸಣೆಗಾಗಿ ಪೊಲೀಸರು ಕರೆತಂದಿದ್ದ ಆರೋಪಿಯೊಬ್ಬ ಕರ್ತವ್ಯದಲ್ಲಿದ್ದ ವೈದ್ಯೆಯ ಕೆನ್ನೆಗೆ ಬಾರಿಸಿರುವ ಆಘಾತಕಾರಿ ಘಟನೆ ನಡೆದಿದೆ. ಅರ್ವಿ ತಾಲೂಕಿನ ತಲೆಗಾಂವ್ ಶ್ಯಾಮ್‌ಜಿ ಪಂತ್ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಈ ಕೃತ್ಯ ನಡೆದಿದ್ದು, ಆಸ್ಪತ್ರೆಯಲ್ಲಿದ್ದ ಐವರು ಪೊಲೀಸ್ ಸಿಬ್ಬಂದಿಯ ಕಣ್ಮುಂದೆಯೇ ನಡೆದ ಈ ದಾಳಿಯ ದೃಶ್ಯಗಳು ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ. ಈ ಘಟನೆಯಿಂದಾಗಿ ಮಹಾರಾಷ್ಟ್ರದಾದ್ಯಂತ ಸರ್ಕಾರಿ ವೈದ್ಯಕೀಯ ವಲಯದಲ್ಲಿ ತೀವ್ರ ಆಕ್ರೋಶ ಭುಗಿಲೆದ್ದಿದ್ದು, ಕರ್ತವ್ಯನಿರತ ವೈದ್ಯರ ಸುರಕ್ಷತೆಯ ಕುರಿತು ಮತ್ತೊಮ್ಮೆ ಗಂಭೀರ ಪ್ರಶ್ನೆಗಳು ಎದ್ದಿವೆ.
ಸ್ಥಳೀಯವಾಗಿ ಹಲವು ಅಪರಾಧ ಚಟುವಟಿಕೆಗಳ ಹಿನ್ನೆಲೆ ಹೊಂದಿರುವ ಆರೋಪಿ ಖಾದಿರ್ ಅಲಿ ರಜಾಕ್ ಅಲಿಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸುವ ಮುನ್ನ ವೈದ್ಯಕೀಯ ತಪಾಸಣೆ ನಡೆಸಲು ಐವರು ಪೊಲೀಸರು ತಲೆಗಾಂವ್ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಕರೆತಂದಿದ್ದರು.
ಆಸ್ಪತ್ರೆಯಲ್ಲಿ ಕರ್ತವ್ಯದಲ್ಲಿದ್ದ ಮಹಿಳಾ ವೈದ್ಯಾಧಿಕಾರಿ ಡಾ. ಶ್ರದ್ಧಾ ಭೂಮ್ರೆ ಅವರು ಆರೋಪಿಯ ತಪಾಸಣೆ ಪೂರ್ಣಗೊಳಿಸಿ ಸಂಬಂಧಿತ ಮೆಡಿಕಲ್ ಕಾಗದಪತ್ರಗಳಿಗೆ ಸಹಿ ಹಾಕುವಂತೆ ಸೂಚಿಸಿದರು. ಕಾಗದಕ್ಕೆ ಸಹಿ ಹಾಕಿದ ಮರುಕ್ಷಣವೇ ಆತ ಹಠಾತ್ತನೆ ಡಾ. ಶ್ರದ್ಧಾ ಅವರ ಕೆನ್ನೆಗೆ ಜೋರಾಗಿ ಬಾರಿಸಿದ್ದಾನೆ.
ವಿಡಿಯೋ
SHOCKING: Accused Slaps Lady Doctor Inside Police Presence
In Wardha Maharashtra, an accused named Qadir Ali slapped Dr. Shraddha Bhumre right inside a primary health center during medical examination.
Caught on CCTV this outrageous incident has sparked massive outrage among doctors, who are now demanding strict security and threatening to shut down OPD services
— Ramesh Speaks (@rameshofficial0) October 22, 2026
ಆರೋಪಿಯ ಅನಿರೀಕ್ಷಿತ ವರ್ತನೆಯಿಂದ ಅಲ್ಲಿದ್ದ ಇತರ ರೋಗಿಗಳು ಮತ್ತು ಆಸ್ಪತ್ರೆ ಸಿಬ್ಬಂದಿ ಬೆಚ್ಚಿಬಿದ್ದಿದ್ದು, ತಕ್ಷಣವೇ ಎಚ್ಚೆತ್ತ ಪೊಲೀಸರು ಆರೋಪಿಯನ್ನು ಹಿಡಿದು ನಿಯಂತ್ರಣಕ್ಕೆ ತೆಗೆದುಕೊಂಡರು. ಈ ಘಟನೆಯನ್ನು ತೀವ್ರವಾಗಿ ಖಂಡಿಸಿರುವ ಗೆಜೆಟೆಡ್ ವೈದ್ಯಕೀಯ ಅಧಿಕಾರಿಗಳ ಸಂಘದ ನಿಯೋಗವು ವಾರ್ಧಾ ಜಿಲ್ಲಾಧಿಕಾರಿ ವನಮತಿ ಸಿ. ಅವರನ್ನು ಭೇಟಿ ಮಾಡಿ ಮನವಿ ಸಲ್ಲಿಸಿದೆ. ಆರೋಪಿಯ ಜೊತೆಯಲ್ಲಿದ್ದ ಐವರು ಪೊಲೀಸ್ ಸಿಬ್ಬಂದಿ ಕಸ್ಟಡಿಯಲ್ಲಿದ್ದ ವ್ಯಕ್ತಿಯ ಮೇಲೆ ಸೂಕ್ತ ನಿಗಾ ವಹಿಸದೆ ನಿರ್ಲಕ್ಷ್ಯ ತೋರಿದ್ದಾರೆ ಎಂದು ಸಂಘಟನೆ ಗಂಭೀರ ಆರೋಪ ಮಾಡಿದೆ.
ವಿಡಿಯೋ
ಮಲಗಿದ್ದ ಮಕ್ಕಳ ನಡುವೆಯೇ ಚಾಪೆಯಲ್ಲಿತ್ತು 5 ಅಡಿಯ ಬೃಹತ್ ನಾಗರಹಾವು! ಪ್ರಾಣಾಪಾಯದಿಂದ ಪುಟ್ಟ ಮಕ್ಕಳು ಜಸ್ಟ್ ಮಿಸ್
ಪ್ರಮುಖ ಬೇಡಿಕೆಗಳು
ವೈದ್ಯೆಯ ಮೇಲೆ ಹಲ್ಲೆ ನಡೆಸಿದ ಆರೋಪಿ ಖಾದಿರ್ ಅಲಿ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು
ಆತನ ಜೊತೆಗಿದ್ದು ನಿರ್ಲಕ್ಷ್ಯ ತೋರಿದ ಪೊಲೀಸರ ವಿರುದ್ಧವೂ ಸೂಕ್ತ ಇಲಾಖಾ ಕ್ರಮ ಜರುಗಿಸಬೇಕು
ಸರ್ಕಾರಿ ಆಸ್ಪತ್ರೆಗಳಲ್ಲಿ ವೈದ್ಯರಿಗೆ ಸೂಕ್ತ ಭದ್ರತೆ ಕಲ್ಪಿಸಬೇಕು
ಒಪಿಡಿ ಸೇವೆ ಸ್ಥಗಿತದ ಎಚ್ಚರಿಕೆ: ಈ ಬೇಡಿಕೆಗಳನ್ನು ಈಡೇರಿಸದಿದ್ದರೆ ಹೊರರೋಗಿ ವಿಭಾಗದ (OPD) ಸೇವೆಗಳನ್ನು ಸಂಪೂರ್ಣವಾಗಿ ಸ್ಥಗಿತಗೊಳಿಸುವುದಾಗಿ ವೈದ್ಯರಾದ ಡಾ. ಸ್ನೇಹಲ್ ರಾಥೋಡ್, ಡಾ. ಅಮೋಲ್ ಯೆಲಾನೆ ಹಾಗೂ ಡಾ. ಶ್ರೀಧರ್ ತಮ್ಹಂಕರ್ ಎಚ್ಚರಿಸಿದ್ದಾರೆ. ಮಹಾರಾಷ್ಟ್ರ ಗೆಜೆಟೆಡ್ ವೈದ್ಯಾಧಿಕಾರಿಗಳ ಸಂಘಕ್ಕೂ (MAGMO) ಮಾಹಿತಿ ರವಾನಿಸಲಾಗಿದ್ದು, ರಾಜ್ಯವ್ಯಾಪಿ ಪ್ರತಿಭಟನೆ ನಡೆಸುವ ಎಚ್ಚರಿಕೆ ನೀಡಲಾಗಿದೆ.
ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ




