ಜವಾಹರಲಾಲ್ ನೆಹರು- ನರೇಂದ್ರ ಮೋದಿ ಅವಧಿಯ ವ್ಯತ್ಯಾಸಗಳೇನು? ಇಬ್ಬರ ನಾಯಕತ್ವದ ಅವಲೋಕನ ಇಲ್ಲಿದೆ
ಈ ಹಿಂದೆ ಸರ್ಕಾರದ ಮೇಲಿದ್ದ ಜನರ ನಿರೀಕ್ಷೆಗಳು ಅತ್ಯಂತ ಸೀಮಿತವಾಗಿದ್ದವು. ಆದರೆ ಇಂದು ಜಾಗತಿಕ ಮಟ್ಟದ ಮೂಲಸೌಕರ್ಯ, ಉದ್ಯೋಗ, ಬಲಿಷ್ಠ ರಾಜತಾಂತ್ರಿಕತೆ, ರಕ್ಷಣೆ ಮತ್ತು ಡಿಜಿಟಲ್ ಸೇವೆಗಳನ್ನು ಜನರು ಬಯಸುತ್ತಿದ್ದಾರೆ. ಈ ಎಲ್ಲಾ ಗರಿಷ್ಠ ನಿರೀಕ್ಷೆಗಳನ್ನು ಈಡೇರಿಸುತ್ತಾ ಪ್ರಧಾನಿ ಮೋದಿ ಯಶಸ್ವಿಯಾಗಿ ಮುನ್ನಡೆಯುತ್ತಿದ್ದಾರೆ. ಪ್ರಧಾನಿ ಮೋದಿ ಮತ್ತು ಜವಾಹರಲಾಲ್ ನೆಹರು ಅಧಿಕಾರಾವಧಿಯ ವ್ಯತ್ಯಾಸಗಳೇನು? ಎಂಬುದರ ಸಣ್ಣ ಅವಲೋಕನ ಇಲ್ಲಿದೆ.

ನವದೆಹಲಿ, ಜೂನ್ 5: ಬರುವ ಜೂನ್ 10ರಂದು ಭಾರತದ ರಾಜಕಾರಣದಲ್ಲಿ ಹಳೇ ದಾಖಲೆಯೊಂದು ಇತಿಹಾಸ ಪುಟ ಸೇರಲಿದೆ. ಪ್ರಧಾನಿ ನರೇಂದ್ರ ಮೋದಿ (PM Modi) ಅವರು ಸತತವಾಗಿ ಅತಿ ಹೆಚ್ಚು ದಿನಗಳ ಕಾಲ ಪ್ರಜಾಸತ್ತಾತ್ಮಕವಾಗಿ ಆಡಳಿತ ನಡೆಸಿದ ಭಾರತದ ಮೊದಲ ಪ್ರಧಾನಿ ಎಂಬ ಹೆಗ್ಗಳಿಕೆಗೆ ಪಾತ್ರರಾಗಲಿದ್ದಾರೆ. ಈ ಮೂಲಕ ಅವರು ದೇಶದ ಪ್ರಥಮ ಪ್ರಧಾನಿ ಪಂಡಿತ್ ಜವಾಹರಲಾಲ್ ನೆಹರು ಅವರ (4,398 ದಿನಗಳು) ದಾಖಲೆಯನ್ನು ದಾಟಲಿದ್ದಾರೆ. ಈ ಐತಿಹಾಸಿಕ ಸಂದರ್ಭದಲ್ಲಿ, ನೆಹರು ಮತ್ತು ಮೋದಿ ಯುಗದ ಆಡಳಿತ ಹಾಗೂ ಭಾರತದ ಬದಲಾದ ಸ್ವರೂಪದ ಪ್ರಮುಖ ಮುಖ್ಯಾಂಶಗಳು ಇಲ್ಲಿವೆ.
ಮೊದಲೆಲ್ಲ ರಾಜಕೀಯ ಎಂಬುದು ಕೇವಲ ರ‍್ಯಾಲಿ ಮತ್ತು ಚುನಾವಣೆಗಳಿಗೆ ಸೀಮಿತವಾಗಿತ್ತು. ಆದರೆ, ಇಂದಿನ ಸೋಷಿಯಲ್ ಮೀಡಿಯಾ ಯುಗದಲ್ಲಿ ರಾಜಕೀಯ ನಾಯಕರ ಪ್ರತಿ ಹೆಜ್ಜೆಯನ್ನೂ ಗಮನಿಸುತ್ತಲೇ ಇರುತ್ತಾರೆ. ಇಂತಹ ಕಠಿಣ ಸನ್ನಿವೇಶದಲ್ಲೂ ಪ್ರಧಾನಿ ಮೋದಿ ಅತ್ಯುತ್ತಮವಾಗಿ ಕಾರ್ಯನಿರ್ವಹಿಸಲು ಶ್ರಮಿಸುತ್ತಿದ್ದಾರೆ. ಜೂನ್ 10ಕ್ಕೆ ಜವಾಹರಲಾಲ್ ನೆಹರು ಅವರ ದಾಖಲೆಯನ್ನು ಪ್ರಧಾನಿ ಮುರಿಯಲಿದ್ದಾರೆ.
ತಲೆಮಾರುಗಳ ನಡುವಿನ ಸಮನ್ವಯತೆ:
ಬದಲಾಗುತ್ತಿರುವ ತಲೆಮಾರುಗಳ ನಡುವೆಯೂ ತಮ್ಮ ರಾಜಕೀಯ ಮತ್ತು ಭಾವನಾತ್ಮಕ ಪ್ರಸ್ತುತತೆಯನ್ನು ಕಾಯ್ದುಕೊಳ್ಳುವ ನಾಯಕರು ಬಹಳ ಅಪರೂಪ. ಆದರೆ, ಪ್ರಧಾನಿ ಮೋದಿ ಅವರು ಒಂದೇ ಕುಟುಂಬದ ಮೂರು ವಿಭಿನ್ನ ತಲೆಮಾರುಗಳಿಗೆ ಕನೆಕ್ಟ್ ಆಗಿದ್ದಾರೆ. ನರೇಂದ್ರ ಮೋದಿ ಅವರು ಗುಜರಾತ್ ಮುಖ್ಯಮಂತ್ರಿಯಾಗಿದ್ದಾಗ ವೋಟ್ ಮಾಡಿದ್ದ ಒಬ್ಬ ಹಿರಿಯ ವ್ಯಕ್ತಿ ಮತ್ತು ಆತನ ಮಗ, ಹಾಗೂ ಅದೇ ಕುಟುಂಬದ ಮೊಮ್ಮಗ 2024ರ ಲೋಕಸಭಾ ಚುನಾವಣೆಯಲ್ಲಿ ಮೋದಿಯವರಿಗೆ ಮತ ಹಾಕಿರುತ್ತಾರೆ. ಈ ಮೂಲಕ ಅವರು ಮೂರೂ ತಲೆಮಾರುಗಳ ನೆಚ್ಚಿನ ನಾಯಕರಾಗಿದ್ದಾರೆ.
ಇದನ್ನೂ ಓದಿ: ಇಡೀ ನೆಹರು-ಗಾಂಧಿ ಕುಟುಂಬವೇ ದೇಶದ ಹಿತಾಸಕ್ತಿಯೊಂದಿಗೆ ರಾಜಿ ಮಾಡಿಕೊಂಡಿದೆ; ಪಿಯೂಷ್ ಗೋಯಲ್ ಆರೋಪ
ಸವಾಲುಗಳ ಯುಗದ ನಾಯಕ:
ಕೊವಿಡ್-19 ಜಾಗತಿಕ ಸಾಂಕ್ರಾಮಿಕ, ಅಂತಾರಾಷ್ಟ್ರೀಯ ಯುದ್ಧಗಳು, ಭಯೋತ್ಪಾದನೆ, ಆರ್ಥಿಕ ಆಘಾತಗಳು ಮತ್ತು ಜಾಗತಿಕ ರಾಜತಾಂತ್ರಿಕ ಸಮತೋಲನ ಕಾಯ್ದುಕೊಳ್ಳುವಿಕೆಯಂತಹ ಸಾಲು ಸಾಲು ಬಿಕ್ಕಟ್ಟುಗಳ ನಡುವೆ ಪ್ರಧಾನಿ ಮೋದಿ ದೇಶವನ್ನು ಮುನ್ನಡೆಸುತ್ತಿದ್ದಾರೆ. ನೆಹರು ಅವರ ಕಾಲಕ್ಕೆ ಹೋಲಿಸಿದರೆ, ಪ್ರಸ್ತುತ ಮೋದಿ ಅವರು ಎದುರಿಸುತ್ತಿರುವ ಸವಾಲುಗಳ ತೀವ್ರತೆ ಮತ್ತು ಸ್ವರೂಪ ಅತ್ಯಂತ ಕಠಿಣ ಹಾಗೂ ಸಂಪೂರ್ಣ ಭಿನ್ನವಾಗಿದೆ.
ಜನ ಚಳುವಳಿಯಾದ ಆಡಳಿತ:
ಜವಾಹರಲಾಲ್ ನೆಹರು ಅವರ ಆಡಳಿತ ಮಾದರಿಯು ಹೆಚ್ಚಾಗಿ ‘ಟಾಪ್-ಡೌನ್’ (ಮೇಲಿಂದ ಕೆಳಕ್ಕೆ) ಆಗಿತ್ತು. ಅಲ್ಲಿ ನಿರ್ಧಾರಗಳನ್ನು ರಾಜಕೀಯ ಗಣ್ಯರು ಮತ್ತು ಅಧಿಕಾರಶಾಹಿಯೇ ತೆಗೆದುಕೊಳ್ಳುತ್ತಿದ್ದರು. ಆದರೆ, ಪ್ರಧಾನಿ ಮೋದಿ ಅವರ “ಸಬ್ ಕಾ ಸಾಥ್, ಸಬ್ ಕಾ ವಿಕಾಸ್, ಸಬ್ ಕಾ ವಿಶ್ವಾಸ್, ಸಬ್ ಕಾ ಪ್ರಯಾಸ್” ತತ್ವವು ಸಾರ್ವಜನಿಕರ ಸಾಮೂಹಿಕ ಭಾಗವಹಿಸುವಿಕೆಗೆ ಒತ್ತು ನೀಡುವ ಮೂಲಕ ಆಡಳಿತವನ್ನು ಒಂದು ‘ಜನ ಚಳುವಳಿ’ಯನ್ನಾಗಿ ಮಾರ್ಪಡಿಸಿದೆ.
ಇದನ್ನೂ ಓದಿ: ಜೂನ್ 10 ಕ್ಕೆ ಪ್ರಧಾನಿ ಮೋದಿ ಹೆಸರಿಗೆ ಹೊಸ ದಾಖಲೆ, ನೆಹರು ಅಧಿಕಾರಾವಧಿ ಹಿಂದಿಕ್ಕಲಿರುವ ನವ ಭಾರತದ ಸಾರಥಿ
ಸಾಮಾನ್ಯರ ಸಾಮರ್ಥ್ಯದ ಮೇಲೆ ನಂಬಿಕೆ:
ನೆಹರು ಅವರ ಸಮಾಜವಾದಿ ನೀತಿಯು ಸರ್ಕಾರದ ನಿಯಂತ್ರಣ ಮತ್ತು ಅಧಿಕಾರಶಾಹಿಯ ನಿರ್ವಹಣೆಗೆ ಪ್ರಾಮುಖ್ಯತೆ ನೀಡಿತ್ತು. ಆದರೆ, ಪ್ರಧಾನಿ ಮೋದಿ ಅವರ ಆಡಳಿತವು ಸಾಮಾನ್ಯ ಭಾರತೀಯರ ಸಾಮರ್ಥ್ಯದ ಮೇಲೆ ನಂಬಿಕೆ ಇಟ್ಟು, ಅವರ ಸಬಲೀಕರಣಕ್ಕೆ ಒತ್ತು ನೀಡುತ್ತಿದೆ.
ಸಾಮೂಹಿಕ ರಾಷ್ಟ್ರೀಯ ಮಿಷನ್:
ನೆಹರು ಕಾಲದಲ್ಲಿ ದೇಶದ ಅಭಿವೃದ್ಧಿ ಎನ್ನುವುದು ಕೇವಲ ಸರ್ಕಾರದ ಜವಾಬ್ದಾರಿ ಎಂದು ಬಿಂಬಿತವಾಗಿತ್ತು. ಆದರೆ, ಪ್ರಸ್ತುತ ಮೋದಿಯವರ ಯುಗದಲ್ಲಿ ದೇಶದ ಪ್ರಗತಿಯನ್ನು ಪ್ರತಿಯೊಬ್ಬ ನಾಗರಿಕನ ಕೊಡುಗೆಯನ್ನು ಬಯಸುವ ಒಂದು ‘ಸಾಮೂಹಿಕ ರಾಷ್ಟ್ರೀಯ ಮಿಷನ್’ (ಸಬ್ ಕಾ ಪ್ರಯಾಸ್) ಆಗಿ ರೂಪಿಸಲಾಗಿದೆ.
ಜನಸಂಖ್ಯೆಯ ಹೆಚ್ಚಳ:
ನೆಹರು ಅಧಿಕಾರ ವಹಿಸಿಕೊಂಡಾಗ ದೇಶದ ಜನಸಂಖ್ಯೆ 34 ಕೋಟಿ ಇತ್ತು. ಆದರೆ ಇಂದು ಪ್ರಧಾನಿ ಮೋದಿ ಮುನ್ನಡೆಸುತ್ತಿರುವ ಭಾರತದ ಜನಸಂಖ್ಯೆ 146 ಕೋಟಿಗೂ ಅಧಿಕವಾಗಿದೆ. 1951ರ ಮೊದಲ ಚುನಾವಣೆಯಲ್ಲಿ ಕೇವಲ 53 ಪಕ್ಷಗಳು ಸ್ಪರ್ಧಿಸಿದ್ದರೆ, 2024ರ ಚುನಾವಣೆಯಲ್ಲಿ ಭೀಕರ ಸ್ಪರ್ಧೆಯ ನಡುವೆ ದಾಖಲೆಯ 744 ಪಕ್ಷಗಳು ಕಣಕ್ಕಿಳಿದಿದ್ದವು. ನೆಹರು ಕಾಲದ ಏಕಪಕ್ಷೀಯ ಪ್ರಾಬಲ್ಯದ ಜಾಗದಲ್ಲಿ ಇಂದು ಪ್ರಾದೇಶಿಕ ಪಕ್ಷಗಳ ಪ್ರಬಲ ಪೈಪೋಟಿ ಇದೆ.
ಆರ್ಥಿಕತೆ ಮತ್ತು ಜಾಗತಿಕ ಮುನ್ನಡೆ:
ನೆಹರು ಕಾಲದಲ್ಲಿ ಭಾರತದ ಜಿಡಿಪಿ (GDP) ಬೆಳವಣಿಗೆ ಕೇವಲ 3.5%ರಷ್ಟಿತ್ತು. ಆದರೆ, ಇಂದು ಕೋವಿಡ್ ಜಾಗತಿಕ ಬಿಕ್ಕಟ್ಟಿನ ನಡುವೆಯೂ ಮೋದಿ ನೇತೃತ್ವದಲ್ಲಿ ಭಾರತ 6.5-7% ಬೆಳವಣಿಗೆಯೊಂದಿಗೆ ವಿಶ್ವದ ಅತ್ಯಂತ ವೇಗವಾಗಿ ಬೆಳೆಯುತ್ತಿರುವ ಆರ್ಥಿಕತೆಯಾಗಿದೆ. ಭಾರತವು 2014ರಲ್ಲಿದ್ದ 10ನೇ ಸ್ಥಾನದಿಂದ 2025-26 ರಲ್ಲಿ ವಿಶ್ವದ 4ನೇ ಅತಿದೊಡ್ಡ ಆರ್ಥಿಕತೆಯಾಗಿ ಹೊರಹೊಮ್ಮಿದೆ.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ




