ರಾಜತಾಂತ್ರಿಕ ಪಾಸ್‌ಪೋರ್ಟ್ ಎಂದರೇನು? ಇದನ್ನು ಯಾರೆಲ್ಲ ಪಡೆಯಬಹುದು?: ಇಲ್ಲಿದೆ ಸಂಪೂರ್ಣ ಮಾಹಿತಿ
ಭಾರತ ಸರ್ಕಾರವು ತನ್ನ ನಾಗರಿಕರಿಗೆ ಅವರ ಉದ್ಯೋಗ, ಹುದ್ದೆ ಮತ್ತು ಪ್ರಯಾಣದ ಉದ್ದೇಶವನ್ನು ಆಧರಿಸಿ ಪ್ರಮುಖವಾಗಿ ನಾಲ್ಕು ವಿಧದ ಪಾಸ್‌ಪೋರ್ಟ್‌ಗಳನ್ನು ವಿತರಿಸುತ್ತದೆ. ಅದರಲ್ಲಿ ರಾಜತಾಂತ್ರಿಕ ಪಾಸ್‌ಪೋರ್ಟ್ (Diplomatic Passport) ಎಂದರೆ ಏನು? ಅದನ್ನು ಯಾರು ಪಡೆಯಬಹುದು? ಇದರ ವಿಶೇಷ ಸೌಲಭ್ಯಗಳು ಹಾಗೂ ಸಿಂಧುತ್ವದ ಕುರಿತಾದ ಸಂಪೂರ್ಣ ಮಾಹಿತಿ ಇಲ್ಲಿದೆ.

ದೇಶದ ಗಡಿಯನ್ನು ದಾಟಿ ಮತ್ತೊಂದು ದೇಶಕ್ಕೆ ಹೋಗಲು ಅತ್ಯಗತ್ಯವಾಗಿರುವ ಪಾಸ್‌ಪೋರ್ಟ್‌ಗಳು, ಅಂತಾರಾಷ್ಟ್ರೀಯ ಮಟ್ಟದಲ್ಲಿ ಪ್ರಯಾಣಿಸಲು ಸರ್ಕಾರ ನೀಡುವ ಅತ್ಯಂತ ಅಧಿಕೃತ ಗುರುತಿನ ಚೀಟಿಯಾಗಿವೆ. ಭಾರತ ಸರ್ಕಾರವು ತನ್ನ ನಾಗರಿಕರಿಗೆ ಅವರ ಉದ್ಯೋಗ, ಹುದ್ದೆ ಮತ್ತು ಪ್ರಯಾಣದ ಉದ್ದೇಶವನ್ನು ಆಧರಿಸಿ ಪ್ರಮುಖವಾಗಿ ನಾಲ್ಕು ವಿಧದ ಪಾಸ್‌ಪೋರ್ಟ್‌ಗಳನ್ನು ವಿತರಿಸುತ್ತದೆ. ಆ ಪೈಕಿ ರಾಜತಾಂತ್ರಿಕ ಪಾಸ್‌ಪೋರ್ಟ್ ಕೂಡ ಒಂದು. ರಾಜತಾಂತ್ರಿಕ ಪಾಸ್‌ಪೋರ್ಟ್ ಅನ್ನು ಎಲ್ಲರಿಗೂ ನೀಡಲಾಗುವುದಿಲ್ಲ. ಹಾಗಿದ್ದರೆ ಯಾರು ಇದನ್ನು ಪಡೆಯಬಹುದು? ಇದರ ಪ್ರಯೋಜನ ಏನು? ಎಂಬುದರ ಸಂಪೂರ್ಣ ಮಾಹಿತಿ ಇಲ್ಲಿದೆ.
ರಾಜತಾಂತ್ರಿಕ ಪಾಸ್‌ಪೋರ್ಟ್ ಎಂಬುದು ಅಧಿಕೃತ ಸರ್ಕಾರಿ ಕೆಲಸಗಳಿಗಾಗಿ ವಿದೇಶಕ್ಕೆ ಪ್ರಯಾಣಿಸುವ ರಾಜತಾಂತ್ರಿಕರು, ರಾಯಭಾರಿಗಳು ಮತ್ತು ಉನ್ನತ ಮಟ್ಟದ ಸರ್ಕಾರಿ ಅಧಿಕಾರಿಗಳಿಗೆ ನೀಡಲಾಗುವ ಒಂದು ವಿಶೇಷ ಪ್ರಯಾಣ ದಾಖಲೆಯಾಗಿದೆ. ಸಾಮಾನ್ಯ ನಾಗರಿಕರಿಗೆ ನೀಡುವ ನವಿಲು ನೀಲಿ (Navy Blue) ಬಣ್ಣದ ಪಾಸ್‌ಪೋರ್ಟ್‌ಗೆ ಹೋಲಿಸಿದರೆ, ಭಾರತದ ರಾಜತಾಂತ್ರಿಕ ಪಾಸ್‌ಪೋರ್ಟ್ ಗಾಢ ಕೆಂಪು ಅಥವಾ ಮರೂನ್ (Maroon) ಬಣ್ಣದ ಮುಖಪುಟವನ್ನು ಹೊಂದಿರುತ್ತದೆ. ಭಾರತ ಸರ್ಕಾರದ ವಿದೇಶಾಂಗ ವ್ಯವಹಾರಗಳ ಸಚಿವಾಲಯವು (MEA) ಇದನ್ನು ವಿತರಿಸುತ್ತದೆ.
ಇದನ್ನೂ ಓದಿ: ಹಾರ್ಮುಜ್ ಜಲಸಂಧಿ ಮೂಲಕ ಸಾಗಲು ಭಾರತ ಸೇರಿ 4 ದೇಶಗಳ ಹಡಗುಗಳಿಗೆ ಇರಾನ್ ಅನುಮತಿ
ಯಾರೆಲ್ಲ ಈ ಪಾಸ್‌ಪೋರ್ಟ್ ಪಡೆಯಬಹುದು?
ವಿದೇಶಗಳಲ್ಲಿ ಭಾರತವನ್ನು ಪ್ರತಿನಿಧಿಸುವ ಅಧಿಕಾರಿಗಳು, ವಿದೇಶಾಂಗ ಇಲಾಖೆಯ ಉನ್ನತ ಅಧಿಕಾರಿಗಳು ಮತ್ತು ಅವರ ಉದ್ಯೋಗದ ನಿಮಿತ್ತ ವಿದೇಶಕ್ಕೆ ಜೊತೆಯಲ್ಲಿ ಹೋಗುವ ಅವರ ಕುಟುಂಬದ ನಿಕಟ ಸದಸ್ಯರು, ಸರ್ಕಾರಿ ಕಾರ್ಯಗಳ ನಿಮಿತ್ತ ಅಥವಾ ದೇಶದ ಪರವಾಗಿ ವಿದೇಶ ಪ್ರವಾಸ ಕೈಗೊಳ್ಳುವ ಸಂಸತ್ ಸದಸ್ಯರು ಮತ್ತು ಕೇಂದ್ರ ಸಚಿವರು, ಸರ್ಕಾರದ ಪರವಾಗಿ ಅಧಿಕೃತ ಕಾರ್ಯಗಳಿಗಾಗಿ ವಿದೇಶಕ್ಕೆ ಪ್ರಯಾಣಿಸಲು ಅನುಮತಿ ಪಡೆದ ವಿಶೇಷ ವ್ಯಕ್ತಿಗಳು ಈ ಪಾಸ್‌ಪೋರ್ಟ್ ಪಡೆಯಲು ಅರ್ಹರಾಗಿರುತ್ತಾರೆ.
ರಾಜತಾಂತ್ರಿಕ ಪಾಸ್ಪೋರ್ಟ್ನಿಂದ ಪ್ರಯೋಜನವೇನು?
ಅಂತಾರಾಷ್ಟ್ರೀಯ ನಿಯಮಗಳ ಪ್ರಕಾರ, ಈ ಪಾಸ್‌ಪೋರ್ಟ್ ಹೊಂದಿರುವವರಿಗೆ ವಿದೇಶಿ ಪ್ರಯಾಣದ ಸಂದರ್ಭದಲ್ಲಿ ಕೆಲವು ವಿಶೇಷ ಹಕ್ಕುಗಳು ದೊರೆಯುತ್ತವೆ. ವಿಮಾನ ನಿಲ್ದಾಣಗಳಲ್ಲಿ ಇವರಿಗಾಗಿ ಪ್ರತ್ಯೇಕ ಇಮಿಗ್ರೇಷನ್ ಕೌಂಟರ್‌ಗಳು ಇರುತ್ತವೆ. ಇದರಿಂದಾಗಿ ತಪಾಸಣೆಯ ಪ್ರಕ್ರಿಯೆಗಳು ವೇಗವಾಗಿ ಮುಗಿಯುತ್ತವೆ. ಜಗತ್ತಿನ ಹಲವು ದೇಶಗಳು ರಾಜತಾಂತ್ರಿಕ ಪಾಸ್‌ಪೋರ್ಟ್ ಹೊಂದಿರುವವರಿಗೆ ವೀಸಾ ಇಲ್ಲದೆಯೇ ಪ್ರವೇಶ ನೀಡುತ್ತವೆ ಅಥವಾ ವೀಸಾ ಪ್ರಕ್ರಿಯೆಯನ್ನು ಸುಲಭಗೊಳಿಸುತ್ತವೆ. 1961ರ ವಿಯೆನ್ನಾ ಕನ್ವೆನ್ಷನ್ ನಿಯಮಾವಳಿಗಳ ಅನ್ವಯ, ಈ ಪಾಸ್‌ಪೋರ್ಟ್ ಹೊಂದಿರುವ ಅಧಿಕಾರಿಗಳಿಗೆ ಅವರು ಭೇಟಿ ನೀಡುವ ದೇಶದಲ್ಲಿ ಬಂಧನ ಅಥವಾ ಕೆಲವು ನಿರ್ದಿಷ್ಟ ಕಾನೂನು ಕ್ರಮಗಳಿಂದ ವಿನಾಯಿತಿ ಇರುತ್ತದೆ.
ರಾಜತಾಂತ್ರಿಕ ಪಾಸ್ಪೋರ್ಟ್ನ ಸಿಂಧುತ್ವದ ಅವಧಿ ಎಷ್ಟು?
ಸಾಮಾನ್ಯ ಪಾಸ್‌ಪೋರ್ಟ್‌ಗಳು 10 ವರ್ಷಗಳ ಅವಧಿಗೆ ಸಿಕ್ಕರೆ, ರಾಜತಾಂತ್ರಿಕ ಪಾಸ್‌ಪೋರ್ಟ್‌ಗಳ ಸಿಂಧುತ್ವವು 5 ವರ್ಷಗಳು ಅಥವಾ ಅದಕ್ಕಿಂತ ಕಡಿಮೆ ಇರುತ್ತದೆ. ಸಂಸದರು ಅಥವಾ ಸಚಿವರ ಸಂದರ್ಭದಲ್ಲಿ, ಅವರ ಅಧಿಕಾರದ ಅವಧಿ ಇರುವವರೆಗೆ ಮಾತ್ರ ಇದು ಜಾರಿಯಲ್ಲಿರುತ್ತದೆ.
ರಾಜತಾಂತ್ರಿಕ ಪಾಸ್‌ಪೋರ್ಟ್ ರದ್ದುಪಡಿಸಲು ಸಾಧ್ಯವೇ?
ಪಾಸ್‌ಪೋರ್ಟ್ ಹೊಂದಿರುವವರು ತಪ್ಪು ಮಾಹಿತಿ ನೀಡಿದ್ದರೆ, ಕ್ರಿಮಿನಲ್ ಪ್ರಕರಣದಲ್ಲಿ ಶಿಕ್ಷೆಗೆ ಒಳಗಾಗಿದ್ದರೆ, ಭಾರತೀಯ ನ್ಯಾಯಾಲಯದಲ್ಲಿ ಅವರ ವಿರುದ್ಧ ಕ್ರಿಮಿನಲ್ ವಿಚಾರಣೆ ಬಾಕಿ ಇದ್ದರೆ ಅಥವಾ ರಾಷ್ಟ್ರೀಯ ಹಿತಾಸಕ್ತಿಯ ದೃಷ್ಟಿಯಿಂದ ಅಗತ್ಯವಿದ್ದರೆ ಪಾಸ್‌ಪೋರ್ಟ್ ಪ್ರಾಧಿಕಾರವು ಪಾಸ್‌ಪೋರ್ಟ್ ಅನ್ನು ವಶಕ್ಕೆ ಪಡೆಯಬಹುದು ಅಥವಾ ರದ್ದುಪಡಿಸಬಹುದು. 1967ರ ಪಾಸ್‌ಪೋರ್ಟ್ ಕಾಯ್ದೆಯ ಸೆಕ್ಷನ್ 10(3)ರಲ್ಲಿ ಪಾಸ್‌ಪೋರ್ಟ್ ಮತ್ತು ಪ್ರಯಾಣ ದಾಖಲೆಗಳ ‘ಬದಲಾವಣೆ, ವಶಪಡಿಸಿಕೊಳ್ಳುವಿಕೆ ಮತ್ತು ರದ್ದತಿ’ಗೆ ಸಂಬಂಧಿಸಿದ ಸಂದರ್ಭಗಳನ್ನು ವಿವರಿಸಲಾಗಿದೆ.
ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ.




