ಭಾರತದಲ್ಲಿ 1 ಲಕ್ಷಕ್ಕೂ ಹೆಚ್ಚು ಮಕ್ಕಳಿಗೆ ಶಿಕ್ಷಣ: ಇವರೇ ನೋಡಿ ಶಾಂತ ಕ್ರಾಂತಿಕಾರಿ ಮಹಿಳಾ ನಾಯಕಿ
ಭಾನುಮತಿ ನರಸಿಂಹನ್ ಅವರು ಭಾರತದಾದ್ಯಂತ ಒಂದು ಲಕ್ಷಕ್ಕೂ ಅಧಿಕ ಮಕ್ಕಳಿಗೆ ಉಚಿತ ಶಿಕ್ಷಣವನ್ನು ಒದಗಿಸುವ ಮೂಲಕ ಶೈಕ್ಷಣಿಕ ಕ್ರಾಂತಿಯನ್ನು ಮಾಡಿದ್ದಾರೆ. ನಕ್ಸಲ್ ಪ್ರದೇಶಗಳು ಸೇರಿದಂತೆ ಸವಾಲಿನ ಪರಿಸರದಲ್ಲಿರುವ ಮಕ್ಕಳಿಗೆ ಶಾಲೆಗಳನ್ನು ಸ್ಥಾಪಿಸಿ, ಅವರ ಜೀವನವನ್ನು ಬದಲಾಯಿಸುತ್ತಿದ್ದಾರೆ. ಶೈಕ್ಷಣಿಕ ಜ್ಞಾನದ ಜೊತೆಗೆ, ಧ್ಯಾನ ಮತ್ತು ಉಸಿರಾಟ ತಂತ್ರಗಳ ಮೂಲಕ ಭಾವನಾತ್ಮಕ ಬಲವರ್ಧನೆಯ ಮೇಲೆ ಒತ್ತು ನೀಡಲಾಗುತ್ತದೆ.

ದೆಹಲಿ, ಮಾರ್ಚ್ 08: ಜಾರ್ಖಂಡ್‌ನ ನಕ್ಸಲ್ ಪ್ರದೇಶದ ಎರಡು ಪ್ರತಿಸ್ಪರ್ಧಿ ಗುಂಪುಗಳು, ತಮ್ಮ ಗ್ರಾಮಗಳಲ್ಲಿ ನಿರಂತರ ಹಿಂಸೆಯನ್ನು ಕೊನೆಗಾಣಿಸಲು ಒಂದು ಮಾರ್ಗವನ್ನು ಹುಡುಕುತ್ತಾ, ಗುರುದೇವ ಶ್ರೀ ಶ್ರೀ ರವಿ ಶಂಕರ ರವರ (Sri Ravi Shankar) ಮುಂದೆ ಕುಳಿತರು. ಬಲಿಷ್ಠ ಶರೀರ ಮತ್ತು ನಿರ್ಧಾರಶೀಲ ಮನಸ್ಸು ಹೊಂದಿದ ಈ ಪುರುಷರು ಮತ್ತು ಮಹಿಳೆಯರು 2,000 ಕಿಲೋಮೀಟರ್ ದೂರ ಪ್ರಯಾಣಿಸುತ್ತಾ ಶಾಂತಿಯ ಆಶಯವನ್ನು ತಮ್ಮೊಂದಿಗೆ ತಂದಿದ್ದರು. ಅವರು ಹೇಳಿದ್ದನ್ನು ತಾಳ್ಮೆಯಿಂದ ಆಲಿಸಿದ ಗುರುದೇವರು ಒಂದು ಸರಳವಾದ ಆದರೆ ಶಕ್ತಿಯುತವಾದ ಪರಿಹಾರವನ್ನು ನೀಡಿದರು
“ಅಲ್ಲಿ ಒಂದು ಶಾಲೆಯನ್ನು ಆರಂಭಿಸಿ. ಎರಡೂ ಗ್ರಾಮಗಳ ಮಕ್ಕಳು ಓದಲು ಅಲ್ಲಿಗೆ ಬರುವರು. ಈ ಶಾಲೆಯು ಸುರಕ್ಷಿತ ವಲಯವಾಗಿರುತ್ತದೆ.” ಆ ಸಂಭಾಷಣೆಯನ್ನು ಶಾಂತವಾಗಿ ಗಮನಿಸುತ್ತಾ ಕುಳಿತಿದ್ದವರು ಆರ್ಟ್ ಆಫ್ ಲಿವಿಂಗ್‌ನ ಶಿಕ್ಷಣ ಮತ್ತು ಮಕ್ಕಳ ಕಲ್ಯಾಣ ಕಾರ್ಯಕ್ರಮಗಳ ನಿರ್ದೇಶಕಿ ಶ್ರೀಮತಿ ಭಾನುಮತಿ ನರಸಿಂಹನ್. ಮೆರೂನ್ ಬಣ್ಣದ ಮೈಸೂರು ರೇಷ್ಮೆ ಸೀರೆಯನ್ನುಟ್ಟಿದ್ದ ಅವರು, ಮಲ್ಲಿಗೆ ಹೂಗಳನ್ನು ಮುಡಿದಿದ್ದು, ಆತ್ಮೀಯತೆ ಮತ್ತು ಶಾಂತವಾದ ದೃಢ ಸಂಕಲ್ಪವನ್ನು ಪಸರಿಸುತ್ತಿದ್ದರು. ಅದೊಂದು ನಿರ್ಣಾಯಕ ಕ್ಷಣವಾಗಿತ್ತು, ಆದರೆ ಅವರಿಗೆ ಅದು ಕೇವಲ ಇನ್ನೊಂದು ಹೆಜ್ಜೆಯಷ್ಟೇ. ಭಾರತದ ಅತ್ಯಂತ ದೂರದ ಪ್ರದೇಶಗಳಲ್ಲಿ 1,00,000 ಕ್ಕೂ ಹೆಚ್ಚು ಮಕ್ಕಳ ಬದುಕನ್ನು ಬದಲಾಯಿಸಿರುವ ಪಯಣದ ಒಂದು ಭಾಗ.
ಆಂದೋಲನ ಆರಂಭ
ಅವರು “ಕುಟೀರ” ಎಂದು ಕರೆಯುವ ತಮ್ಮ ಸಭಾಕೋಣೆಯಲ್ಲಿ, ಭಾರತ ದೇಶದ ದೊಡ್ಡ ನಕ್ಷೆಯ ಮೇಲೆ ನೂರಾರು ಬಿಂದಿಗಳನ್ನು ಹಚ್ಚಲಾಗಿತ್ತು. “ಇವೆಲ್ಲಾ ನಮ್ಮ ಶಾಲೆಗಳು” ಎಂದು ಅವರು ನಗುತ್ತಾ ಹೇಳುತ್ತಾರೆ. ಇನ್ನೊಂದು ಶೀಘ್ರದಲ್ಲೇ ಪಟಮಡದಲ್ಲಿ ಆರಂಭವಾಗಲಿದೆಯೆಂದೂ, ಅದು ನಕ್ಸಲ್ ಪ್ರಭಾವಿತ ಪ್ರದೇಶವೆಂದೂ ಅವರು ತಿಳಿಸಿದರು.
ಭಾರತದ 22 ರಾಜ್ಯಗಳಲ್ಲಿ 1327 ಶಾಲೆಗಳು, 1 ಲಕ್ಷಕ್ಕೂ ಹೆಚ್ಚು ಮಕ್ಕಳಿಗೆ ಶಿಕ್ಷಣ
ಈ ಶಾಲೆಗಳಲ್ಲಿ ಪ್ರತಿಯೊಂದೂ ತನ್ನದೇ ಆದ ಕಥೆ ಹೊಂದಿದೆ. ಹಿಂಸಾಚಾರ ಹಾಗೂ ನಕ್ಸಲಿಸಂನಿಂದ ಕಂಗೆಟ್ಟ ಪ್ರದೇಶಗಳಿಂದ ಹಿಡಿದು ದೂರದ ಬುಡಕಟ್ಟು ಜನಾಂಗಗಳ ಹಳ್ಳಿಗಳವರೆಗೂ, ಈ ಶಾಲೆಗಳು ಕೇವಲ ವಿದ್ಯಾಲಯಗಳಲ್ಲ—ಮಕ್ಕಳ ಭವಿಷ್ಯವನ್ನು ಬೆಳಗಿಸುವ ಸುರಕ್ಷಿತ ತಾಣಗಳಾಗಿವೆ. ಇಲ್ಲಿ ಕಲಿಯುವವರು ತಮ್ಮ ಕುಟುಂಬದಲ್ಲಿ ಶಿಕ್ಷಣ ಪಡೆಯುತ್ತಿರುವ ಮೊದಲ ತಲೆಮಾರಿನವರು.
ಇದೆಲ್ಲ ಎಲ್ಲಿಂದ ಪ್ರಾರಂಭವಾಯಿತು?
ಭಾನುಮತಿ ನರಸಿಂಹನ್ ಅವರ ಶಿಕ್ಷಣ ಪ್ರೇಮವು ಬಾಲ್ಯದಲ್ಲಿಯೇ ಬೇರೂರಿತ್ತು. ದಕ್ಷಿಣ ಭಾರತದಲ್ಲಿ, ಸರಳ ಜೀವನ ಮತ್ತು ಉನ್ನತ ಚಿಂತನೆಯಲ್ಲಿ ನಂಬಿಕೆ ಇಟ್ಟ ಕುಟುಂಬದಲ್ಲಿ ಬೆಳೆದ ಅವರು, ಶಿಕ್ಷಣ ಅಥವಾ ಅದರ ಕೊರತೆಯಿಂದ ಮಕ್ಕಳ ಜೀವನ ಹೇಗೆ ನಿರ್ಧಾರವಾಗುತ್ತದೆ ಎಂಬುದನ್ನು ಹತ್ತಿರದಿಂದ ಕಂಡಿದ್ದರು. ಬೆಂಗಳೂರಿನಲ್ಲಿನ ಅವರ ಮನೆ ಕೆಲಸದವರ ಮಗಳು ಶಾಲೆಗೆ ಹೋಗುತ್ತಿರಲಿಲ್ಲ. ಇದನ್ನು ಅವರ ಸಹೋದರರಾದ ಗುರುದೇವರು ಪ್ರಶ್ನಿಸಿದರು.
ಇದನ್ನೂ ಓದಿ: ಆರ್ಟ್ ಆಫ್ ಲಿವಿಂಗ್ ಪಾರಂಪರಿಕ ಶಾಲೆಯಿಂದ 48 ವಿದ್ಯಾರ್ಥಿಗಳಿಗೆ ಶಿವಾಗಮ ವಿದ್ಯಾನಿಧಿ ಪ್ರಶಸ್ತಿ ಪ್ರದಾನ
“ಭಾನು ಶಾಲೆಗೆ ಹೋಗಬಹುದಾದರೆ, ಅವಳು ಏಕೆ ಹೋಗಬಾರದು?” ಎಂದು ಅವರು ತಮ್ಮ ತಂದೆ-ತಾಯಿಯರಲ್ಲಿ ಕೇಳುತ್ತಿದ್ದರು. ಈ ಪ್ರಶ್ನೆಯು ಅವರ ಮನಸ್ಸಿನಲ್ಲಿ ಬೀಜವನ್ನು ಬಿತ್ತಿತು. 1980ರ ದಶಕದಲ್ಲಿ, ಆರ್ಟ್ ಆಫ್ ಲಿವಿಂಗ್ ಆಶ್ರಮ ನಿರ್ಮಾಣವಾಗುತ್ತಿದ್ದಾಗ, ಕಟ್ಟಡ ಕಾಮಗಾರಿ ಮಾಡುತ್ತಿದ್ದ ಕಾರ್ಮಿಕರ ಮಕ್ಕಳು ಮಣ್ಣಿನಲ್ಲಿ ಆಡುತ್ತಿದ್ದರಲ್ಲದೆ, ಶಿಕ್ಷಣ ಪಡೆಯುತ್ತಿರಲಿಲ್ಲ. ಅವರನ್ನು ತಮ್ಮ ಸ್ಥಿತಿಗೆ ಬಿಟ್ಟುಬಿಡುವ ಬದಲು, ತಕ್ಷಣವೇ ಓದುವ, ಬರೆಯುವ ಹಾಗೂ ಸ್ವಚ್ಛತೆಯ ಅರಿವು ಮೂಡಿಸುವ ಪ್ರಯತ್ನ ಪ್ರಾರಂಭವಾಯಿತು. ಇದು ಶೀಘ್ರದಲ್ಲೇ ಪೂರ್ಣ ಪ್ರಮಾಣದ ಶಾಲೆಯಾಗಿ ಬೆಳೆದು, ಪಠ್ಯಪುಸ್ತಕಗಳು, ಉಚಿತ ಮಧ್ಯಾಹ್ನ ಊಟ, ಸಮವಸ್ತ್ರಗಳು ಹಾಗೂ ಮಕ್ಕಳನ್ನು ಕರೆದೊಯ್ಯುವ ಹಳದಿ ಶಾಲಾ ಬಸ್ಸುಗಳೊಂದಿಗೆ ಪೂರ್ಣವಾಗಿ ಬೆಳೆಯಿತು. ಇಂದು, ಆರ್ಟ್ ಆಫ್ ಲಿವಿಂಗ್ 22 ರಾಜ್ಯಗಳಲ್ಲಿ 1,327 ಉಚಿತ ಶಾಲೆಗಳನ್ನು ಸ್ಥಾಪಿಸಿದೆ, 1,00,000 ಕ್ಕೂ ಹೆಚ್ಚು ಮಕ್ಕಳಿಗೆ ಶಿಕ್ಷಣ ನೀಡಿದೆ. ಅವರಲ್ಲಿ ಬಹುತೇಕರು ಮೊದಲ ತಲೆಮಾರಿನ ಓದುಗರು.
ಶೈಕ್ಷಣಿಕತೆಯನ್ನು ಮೀರಿ, ಜೀವನ ಪಾಠ
ಈ ಶಾಲೆಗಳು ಕೇವಲ ಪಾಠ ಶಾಲೆಗಳಲ್ಲ, ಇವು ಭಾವನಾತ್ಮಕ ಶಕ್ತಿ ಮತ್ತು ಆಂತರಿಕ ಯೋಗಕ್ಷೇಮದ ಮೇಲೆ ಗಮನ ನೀಡುತ್ತವೆ. ನಕಾರಾತ್ಮಕ ಭಾವನೆಗಳನ್ನು ಹೇಗೆ ನಿರ್ವಹಿಸಬೇಕೆಂದು ನಾವು ಅವರಿಗೆ ಕಲಿಸುತ್ತೇವೆ ಎಂದು ಶ್ರೀಮತಿ ಭಾನುಮತಿ ನರಸಿಂಹನ್ ವಿವರಿಸುತ್ತಾರೆ. ಶೈಕ್ಷಣಿಕ ಪಠ್ಯಕ್ರಮದ ಜೊತೆಗೆ ಪ್ರತಿ ವಿದ್ಯಾರ್ಥಿಗೂ ಉಸಿರಾಟ ತಂತ್ರಗಳು ಮತ್ತು ಧ್ಯಾನ ಕಲಿಸಲಾಗುತ್ತದೆ. ಈ ಅಭ್ಯಾಸಗಳು ಅವರ ಭಾವನಾತ್ಮಕ ಶಕ್ತಿಯನ್ನು, ಆತ್ಮವಿಶ್ವಾಸವನ್ನು ಮತ್ತು ಮನಸ್ಸಿನ ಸ್ಪಷ್ಟತೆಯನ್ನು ಹೆಚ್ಚಿಸುತ್ತವೆ. ಸಾಮಾನ್ಯವಾಗಿ ಶಿಕ್ಷಣದಲ್ಲಿ ಈ ಕುಶಲತೆಗಳನ್ನು ನಿರ್ಲಕ್ಷಿಸಲಾಗುತ್ತದೆ.
ಒಮ್ಮೆ ಒಬ್ಬ ಜಪಾನಿ ಶಿಕ್ಷಣ ತಜ್ಞ, ಬೆಂಗಳೂರಿನ ಶಾಲೆಗೆ ಭೇಟಿ ನೀಡಿದಾಗ, ಮೊದಲ ತಲೆಮಾರಿನ ಓದುಗರ ಶೈಕ್ಷಣಿಕ ಪ್ರಾವೀಣ್ಯತೆಯನ್ನು ನೋಡಿ ಅಚ್ಚರಿಗೊಂಡರು. ಆದರೆ ಅವರನ್ನು ಹೆಚ್ಚು ಆಕರ್ಷಿಸಿದುದು ಆ ಮಕ್ಕಳಲ್ಲಿದ್ದ ಸಂತೋಷ!
“ಜಪಾನಿನ ಮಕ್ಕಳಿಗಿರುವ ಸೌಕರ್ಯಗಳಿಗೆ ಹೋಲಿಸಿದರೆ ಈ ಮಕ್ಕಳಿಗೆ ಏನೂ ಇಲ್ಲ, ಆದರೂ ಅವರು ತುಂಬಾ ಸಂತೋಷವಾಗಿದ್ದಾರೆ! ಇದನ್ನು ನೀವು ಹೇಗೆ ಸಾಧಿಸಿದಿರಿ?” ಎಂದು ಅವರು ಕೇಳಿದರು. ಉತ್ತರವು, ಬುದ್ಧಿಶಕ್ತಿ ಮಾತ್ರವಲ್ಲದೆ ಆತ್ಮವನ್ನು ಪೋಷಿಸುವ ಶಿಕ್ಷಣದಲ್ಲಿ ಅಡಗಿದೆ – ಇದು ಗುರುದೇವರ ಮಾತುಗಳಲ್ಲಿ ಪ್ರತಿಧ್ವನಿಸುವ ತತ್ವ: “ಅಂತರ್ಗತ ಸದ್ಗುಣಗಳನ್ನು ಪೋಷಿಸುವ ಶಿಕ್ಷಣ ಮಾತ್ರ ನಿಜವಾದ ಬುದ್ಧಿವಂತಿಕೆಯನ್ನು ನೀಡುತ್ತದೆ.”
ಭಾನುಮತಿಯವರ ದೃಷ್ಟಿಯಲ್ಲಿ, ನಿಜವಾದ ಯಶಸ್ಸನ್ನು ಕೇವಲ ಪರೀಕ್ಷಾ ಅಂಕಗಳಿಂದ ಅಲ್ಲ, ಬದಲಾಗಿ ಕೊಡುಗೆ ನೀಡುವ ಮನೋಭಾವದಿಂದ ಅಳೆಯಲಾಗುತ್ತದೆ. “ನಿಮ್ಮಲ್ಲಿ ಶಾಶ್ವತವಾದ ನಗು ಇದ್ದರೆ, ಅದೇ ನಿಜವಾದ ಯಶಸ್ಸು ಎಂದು ಗುರುದೇವ್ ಹೇಳುತ್ತಾರೆ.”
ಶಿಕ್ಷಣ: ಶಾಂತಿಯ ಕಡೆಗಿನ ಹಾದಿ
ಶಾಲೆಗಳು ಹೆಚ್ಚಾಗಿ ಕೊಳೆಗೇರಿಗಳು, ದೂರದ ಬುಡಕಟ್ಟು ಪ್ರದೇಶಗಳು ಮತ್ತು ಭಯೋತ್ಪಾದನೆ ಹಾಗೂ ನಕ್ಸಲ್ ಪ್ರಭಾವದಿಂದ ಹಾನಿಗೊಳಗಾದ ಪ್ರದೇಶಗಳಂತಹ ಅತ್ಯಂತ ಸವಾಲಿನ ಪರಿಸರದಲ್ಲಿ ಏಳುತ್ತವೆ. ತ್ರಿಪುರದಲ್ಲಿ ಮಾತ್ರವಾಗಿ, 137 ಶಾಲೆಗಳು ಅರಣ್ಯ ಮತ್ತು ದೂರದ ಹಳ್ಳಿಗಳಲ್ಲಿ ಕಾರ್ಯನಿರ್ವಹಿಸುತ್ತಿವೆ. 36 ಶಾಲೆಗಳು ಭಯೋತ್ಪಾದನೆ ಪೀಡಿತ ಬುಡಕಟ್ಟು ಪ್ರದೇಶಗಳಲ್ಲಿವೆ. ಛತ್ತೀಸ್‌ಗಢ, ಉತ್ತರ ಪ್ರದೇಶ ಮತ್ತು ಆಂಧ್ರಪ್ರದೇಶದ ಶಾಲೆಗಳು, ಒಂದು ಕಾಲದಲ್ಲಿ ಕಲಿಕೆಗೆ ಅಪಾಯಕಾರಿ ಎಂದು ಪರಿಗಣಿಸಲಾದ ಪ್ರದೇಶಗಳಲ್ಲಿ ಶಿಕ್ಷಣವನ್ನು ಒದಗಿಸುತ್ತಿವೆ. ನಾಗಾಲ್ಯಾಂಡ್, ಅಸ್ಸಾಂ, ಮತ್ತು ಮಣಿಪುರದ 214 ಮಕ್ಕಳು ನಿರಂತರ ಭಯದಲ್ಲಿ ವಾಸಿಸುತ್ತಿದ್ದ ಮನೆಗಳಿಂದ ದೂರದಲ್ಲಿ, ಆರ್ಟ್ ಆಫ್ ಲಿವಿಂಗ್ ಬೆಂಗಳೂರು ಆಶ್ರಮದಲ್ಲಿ ವಾಸಿಸುತ್ತಿದ್ದಾರೆ ಮತ್ತು ಅಧ್ಯಯನ ಮಾಡುತ್ತಿದ್ದಾರೆ. ಈ ಶಾಲೆಗಳು ಕೇವಲ ಕಲಿಕೆಯ ಕೇಂದ್ರಗಳಲ್ಲ – ಅವು ದೀರ್ಘಕಾಲೀನ ಶಾಂತಿಗೆ ವೇಗವರ್ಧಕಗಳಾಗಿವೆ. ಶಿಕ್ಷಣದ ಮೂಲಕ ಹಿಂಸೆ ಮತ್ತು ಹತಾಶೆಯ ಚಕ್ರಗಳನ್ನು ಮುರಿಯುತ್ತವೆ.
ಮಹಿಳಾ ಸಬಲೀಕರಣದ ಪ್ರತೀಕ
ಶ್ರೀಮತಿ ಭಾನುಮತಿಯವರ ದೃಷ್ಟಿಯಲ್ಲಿ, ಮಹಿಳಾ ಸಬಲೀಕರಣವೆಂದರೆ ಪುರುಷರ ವಿರುದ್ಧ ಹೋರಾಡುವುದಲ್ಲ – ಸಾಮರ್ಥ್ಯ ಮತ್ತು ಅವಕಾಶದ ನಡುವಿನ ಅಂತರವನ್ನು ಕಡಿಮೆ ಮಾಡುವುದು. “ನಾವು ಹುಡುಗಿಯರಿಗೆ ಅವಕಾಶಗಳನ್ನು ಸೃಷ್ಟಿಸುತ್ತೇವೆ – ಮತ್ತು ಇದಕ್ಕೆ ಆಧಾರ ಶಿಕ್ಷಣ.” ಇಂದು, ಈ ಉಚಿತ ಶಾಲೆಗಳಲ್ಲಿರುವ ವಿದ್ಯಾರ್ಥಿಗಳಲ್ಲಿ 48% ಹೆಣ್ಣು ಮಕ್ಕಳು. ರಾಜಸ್ಥಾನದ ಪರೋಲಾದಲ್ಲಿ ವಿಶೇಷವಾಗಿ, ಸುರಕ್ಷತೆ ನೀಡುವ ದೃಷ್ಟಿಯಿಂದ ಹೆಣ್ಣು ಮಕ್ಕಳಿಗೆ ಮಾತ್ರವಾಗಿ ಶಾಲೆ ಸ್ಥಾಪಿಸಲಾಗಿದೆ. ಸಹ-ಶಿಕ್ಷಣವಿರುವ ಶಾಲೆಗಳಿಗೆ ಕಳುಹಿಸಲು ಅವರ ಪೋಷಕರು ಒಪ್ಪದೇ ಇದ್ದ ಕಾರಣಕ್ಕಾಗಿ ಈ ಹುಡುಗಿಯರು ಶಿಕ್ಷಣದಿಂದ ವಂಚಿತರಾಗಿದ್ದರು. ಶಿಕ್ಷಣವು ಅವರಲ್ಲಿನ ಸಾಮರ್ಥ್ಯವನ್ನು ಹೊರತಂದಿದೆ, ಸಾಮಾಜಿಕ ಮಿತಿಗಳನ್ನು ಮೀರಿ ಕನಸು ಕಾಣಲು ಅವರಿಗೆ ಅನುವು ಮಾಡಿಕೊಟ್ಟಿದೆ.
ಆಧ್ಯಾತ್ಮಿಕತೆ: ಶಿಕ್ಷಣದಲ್ಲಿ ಮರೆಯಾದ ತುಣುಕು
ಜಾತಿ, ವರ್ಗ ಅಥವಾ ಧರ್ಮದಿಂದ ಗುರುತನ್ನು ವ್ಯಾಖ್ಯಾನಿಸುವ ಜಗತ್ತಿನಲ್ಲಿ, ಆಧ್ಯಾತ್ಮಿಕತೆಯು ಇನ್ನೂ ಆಳವಾದದ್ದನ್ನು ನೀಡುತ್ತದೆ – ಮಾನವನಾಗಿ ಗುರುತಿಸುವುದು. ಆಧ್ಯಾತ್ಮಿಕತೆಯು ಮನುಷ್ಯನಾಗಿ ಗುರುತನ್ನು ಬಲಪಡಿಸುತ್ತದೆ ಮತ್ತು ಜನರ ಹೃದಯ ಮತ್ತು ಮನಸ್ಸುಗಳನ್ನು ಒಂದುಗೂಡಿಸುತ್ತದೆ ಎಂದು ಅವರು ವಿವರಿಸುತ್ತಾರೆ.
ಅವರ ಪ್ರಕಾರ, ಇದು ರಾಷ್ಟ್ರ ನಿರ್ಮಾಣ ಮತ್ತು ಸಾಮಾಜಿಕ ಪರಿವರ್ತನೆಗೆ ಪ್ರಮುಖವಾಗಿದೆ. ಮಕ್ಕಳು ಆಂತರಿಕ ಶಕ್ತಿ ಮತ್ತು ಮಾನವೀಯ ಮೌಲ್ಯಗಳನ್ನು ಬೆಳೆಸಿಕೊಂಡಾಗ, ಅವರು ತಾವಿರುವ ಸನ್ನಿವೇಶಗಳನ್ನು ಲೆಕ್ಕಿಸದೆ ಮುಂದುವರಿಯುವ ಮಾರ್ಗವನ್ನು ಕಂಡುಕೊಳ್ಳುತ್ತಾರೆ.
ಶಿಕ್ಷಣದ ಉದ್ದೇಶ
ಒಂದು ಹುಣ್ಣಿಮೆಯ ಸಂಜೆಯಂದು, 5,000 ಜನರ ಸಭೆಯಲ್ಲಿ ಒಬ್ಬ ಹುಡುಗ ಗುರುದೇವರನ್ನು ಕೇಳಿದನು, “ಶಿಕ್ಷಣದ ಉದ್ದೇಶ ಏನಾಗಿರಬೇಕು ಎಂದು ನೀವು ಭಾವಿಸುತ್ತೀರಿ?” ಗುರುದೇವ್ ಉತ್ತರಿಸಿದ್ದು, ದೃಢ ವ್ಯಕ್ತಿತ್ವವನ್ನು ನಿರ್ಮಿಸುವುದು. ಇದು ಮಗುವಿನ ಮನಸ್ಸನ್ನು ಮಾಹಿತಿಯಿಂದ ತುಂಬಿಸುವುದಲ್ಲ. ನಿಜವಾದ ಶಿಕ್ಷಣವು ನಮ್ಮನ್ನು ಹೊಂದಿಕೊಳ್ಳುವವರಾಗಿ ಮಾಡಬೇಕು, ಕಠೋರರನ್ನಾಗಿ ಅಲ್ಲ; ನಾವೀನ್ಯತೆಯನ್ನು ಹೊಂದಿದವರಾಗಿ ಮಾಡಬೇಕು, ಗೀಳು ಉಂಟುಮಾಡುವುದಲ್ಲ; ನಿಷ್ಠಾವಂತರನ್ನಾಗಿ ಮಾಡಬೇಕು, ಮತಾಂಧರನ್ನಾಗಿಯಲ್ಲ; ಮತ್ತು ಎಲ್ಲರನ್ನೂ ಸೇರಿಸಿಕೊಳ್ಳುವವರನ್ನಾಗಿ ಮಾಡಬೇಕು.”
ಭಾನುಮತಿಯವರು ಸೃಷ್ಟಿಸಲು ಸಹಾಯ ಮಾಡಿದ ಪ್ರತಿಯೊಂದು ಶಾಲೆಯಲ್ಲಿ ಈ ಪದಗಳು ಆಳವಾಗಿ ಪ್ರತಿಧ್ವನಿಸುತ್ತವೆ. ಶಾಂತವಾಗಿ, ದೃಢನಿಶ್ಚಯದಿಂದ ಕೆಲಸ ಮಾಡುವ ಮೂಲಕ ಅವರು ಶಿಕ್ಷಣದಲ್ಲಿ ಕ್ರಾಂತಿಯನ್ನುಂಟು ಮಾಡುತ್ತಿದ್ದಾರೆ, ಜೋರಾಗಿ ಘೋಷಣೆಗಳನ್ನು ಮಾಡುವ ಮೂಲಕವಲ್ಲ, ಬದಲಾಗಿ ಪರಿವರ್ತನಾಶೀಲ ಕಾರ್ಯದ ಮೂಲಕ. ನಮ್ಮ ಮುಂದಿನ ಪೀಳಿಗೆಗೆ ಹೊಸ ಭವಿಷ್ಯ ಕಟ್ಟುತ್ತಿರುವ ಶ್ರೀಮತಿ ಭಾನುಮತಿ ನರಸಿಂಹನ್ ರವರ ಶ್ರದ್ಧೆಗೆ ನಮನ.
ಮತ್ತಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.