ಟಿವಿ9 ಸಂದರ್ಶನ: ಅಪೂರ್ಣವಾದ ಅಯೋಧ್ಯೆ ರಾಮಮಂದಿರದಲ್ಲಿ ಮೂರ್ತಿ ಪ್ರತಿಷ್ಠಾಪನೆ ಏಕೆ, ಶಾಸ್ತ್ರ ಏನು ಹೇಳುತ್ತದೆ?- ರವಿಶಂಕರ್ ಗುರೂಜಿ ಉತ್ತರ ಹೀಗಿದೆ
ಅಯೋಧ್ಯೆಯಲ್ಲಿ ಭವ್ಯ ರಾಮಮಂದಿರ ನಿರ್ಮಾಣವಾಗಿದೆ. ಈಗಾಗಲೆ ರಾಮಲಲ್ಲಾ (ಬಾಲ ರಾಮ)ನ ಮೂರ್ತಿ ಗರ್ಭಗುಡಿಯಲ್ಲಿ ಪ್ರತಿಷ್ಠಾಪಿಸಲಾಗಿದೆ. ಜನವರಿ 22 ರಂದು ಪ್ರಾಣ ಪ್ರತಿಷ್ಠೆ ನೆರವೇರಲಿದೆ. ಈ ಸಂದರ್ಭದಲ್ಲಿ ಟಿವಿ9 ಡಿಜಿಟಲ್ ಕನ್ನಡವು ಆರ್ಟ್ ಆಫ್ ಲಿವಿಂಗ್ನ ಮುಖ್ಯಸ್ಥರಾದ ಶ್ರೀ ಶ್ರೀ ರವಿಶಂಕರ್ ಗುರೂಜಿ ಅವರ ಸಂದರ್ಶನ ನಡೆಸಿದೆ. ಪ್ರಮುಖ ಅಂಶಗಳು ಇಲ್ಲಿವೆ..
ಬೆಂಗಳೂರು, ಜನವರಿ 20: ಅಯೋಧ್ಯೆಯಲ್ಲಿ (Ayodhya) ಭವ್ಯ ರಾಮಮಂದಿರ (Ram Mandir) ನಿರ್ಮಾಣವಾಗಿದೆ. ಈಗಾಗಲೆ ರಾಮಲಲ್ಲಾ (ಬಾಲ ರಾಮ)ನ ಮೂರ್ತಿ ಗರ್ಭಗುಡಿಯಲ್ಲಿ ಪ್ರತಿಷ್ಠಾಪಿಸಲಾಗಿದೆ. ಜನವರಿ 22 ರಂದು ಪ್ರಾಣ ಪ್ರತಿಷ್ಠೆ ನೆರವೇರಲಿದೆ. ಜಗತ್ತೇ ಬಾಲ ರಾಮನ ಪ್ರಾಣ ಪ್ರತಿಷ್ಠೆ ಕಾರ್ಯಕ್ರಮವನ್ನು ವೀಕ್ಷಿಸಲು ತುದಿಗಾಲಿನ ಮೇಲೆ ನಿಂತಿದೆ. ಈ ಸಂದರ್ಭದಲ್ಲಿ ಟಿವಿ9 ಡಿಜಿಟಲ್ ಕನ್ನಡವು ಆರ್ಟ್ ಆಫ್ ಲಿವಿಂಗ್ನ ಮುಖ್ಯಸ್ಥರಾದ ಶ್ರೀ ಶ್ರೀ ರವಿಶಂಕರ್ ಗುರೂಜಿ ಅವರ ಸಂದರ್ಶನ ನಡೆಸಿದೆ. ಸಂದರ್ಶನದ ಪ್ರಮುಖ ಅಂಶಗಳು ಇಲ್ಲಿವೆ…
ಟಿವಿ9: 500 ವರ್ಷಗಳ ಹೋರಾಟದ ಫಲ ಈಗ ಸಿಕ್ಕಿದೆ ಇದರ ಬಗ್ಗೆ ಏನು ಹೇಳುತ್ತೀರಿ
ರವಿಶಂಕರ್ ಗುರೂಜಿ: ಯಾವುದೇ ಧರ್ಮಕ್ಕೆ ರಾಜಾಶ್ರಯವಿಲ್ಲದಿದ್ದರೇ ಆ ಧರ್ಮಕ್ಕೆ ಮುಂದೆ ಬರಲು ಆಗುವುದಿಲ್ಲ. ರಾಜಾಶ್ರಯ ಇದ್ದಿದ್ದರಿಂದ ಜೈನ, ಬೌದ್ಧ ಪರಂಪರೆಗಳು ಬೆಳದು ಬಂದವು. ಹಾಗೇ ಜಗತ್ತಿನ ಪ್ರತಿಯೊಬ್ಬ ಹಿಂದೂವಿನ ಜೀವನದಲ್ಲೂ ರಾಮಾಯಣ ಮತ್ತು ಮಹಾಭಾರತ ಹಾಸುಹೊಕ್ಕಾಗಿವೆ. ಆ ಕ್ಷೇತ್ರಗಳು ಇಂದು ಕಂಗೊಳಿಸುತ್ತಿವೆ ಎಂಬುವುದು ಹೆಮ್ಮೆಯ ವಿಷಯ.
ಟಿವಿ9: ಮಂದಿರ ಯಾಕೆ ಬೇಕಿತ್ತು?
ರವಿಶಂಕರ್ ಗುರೂಜಿ: ಯಾಕೆಬೇಕಿತ್ತು ಎಂಬುವುದಕ್ಕೆ ಅರ್ಥವಿಲ್ಲ. ಈ ಪ್ರಶ್ನೆಯೇ ಅರ್ಥಹೀನವಾದದ್ದು. ನಮ್ಮ ಸಂಸ್ಕೃತಿಯ, ಆತ್ಮಬಲ ಹೆಚ್ಚು ಮಾಡಿಕೊಳ್ಳಲು ನಮ್ಮ ಧರ್ಮಕ್ಷೇತ್ರಗಳು ಮತ್ತು ಐತಿಹಾಸಿಕ ಕ್ಷೇತ್ರಗಳಿಗೆ ಮಹತ್ವ ಕೊಡಲೇಬೇಕು.
ಇದನ್ನೂ ಓದಿ: ಅಯೋಧ್ಯೆ ರಾಮಮಂದಿರದ ಮಂಡಲ ಪೂಜೆಗೆ ರಾಯಚೂರಿನ ಇಬ್ಬರು ಪಂಡಿತರು ಆಯ್ಕೆ
ಟಿವಿ9: ರಾಮ ಪ್ರಾಣ ಪ್ರತಿಷ್ಠೆಗೆ ಹೋಗಲ್ಲ ಅಂತ ಕೆಲ ಜನರು, ನಾಯಕರು ಹೇಳುತ್ತಿದ್ದಾರೆ
ರವಿಶಂಕರ್ ಗುರೂಜಿ: ಪ್ರತಿಯೊಬ್ಬರಿಗೂ ಅವರ ಅವರ ಅಭಿಪ್ರಾಯಗಳಿರುತ್ತವೆ. ಹೋಗಲ್ಲ ಅಂದ್ರೆ ಅವರ ಅಭಿಪ್ರಾಯ. ಕಡ್ಡಾಯವಾಗಿ ಈಗಲೇ ಹೋಗಬೇಕು ಎಂಬುವುದಿಲ್ಲ. ನಿಧಾನವಾಗಿ ಮುಂದಿನ ದಿನಗಳಲ್ಲಿ ಹೋಗಲಿ. ಹೋಗಲ್ಲ ಅಂತ ಹೇಳಬಹುದು, ಆದರೆ ರಾಮನಿಗೆ ಎದುರಾಗಿ ನಿಂತುಕೊಳ್ಳುತ್ತೇನೆ ಎಂದು ಹೇಳಲು ಆಗಲ್ಲ. ಅದಕ್ಕೆ ವಿರೋಧ ಮಾಡಲು ಆಗಲ್ಲ. ಇದು ಒಂದು ಪಕ್ಷ ಅಥವಾ ಒಂದು ಸಮುದಾಯ ಕಾರ್ಯಕ್ರಮ ಎಂದು ವಿರೋಧಿಸಲು ಮುಂದಾದರೆ ಅದು ಬುದ್ದಿವಂತಿಕೆಯಲ್ಲ.
ಟಿವಿ9: ಅಪೂರ್ಣವಾದ ದೇವಸ್ಥಾನವನ್ನು ತಾರಾತುರಿಯಲ್ಲಿ ಉದ್ಘಾಟಿಸುವ ಅವಶ್ಯಕತೆ ಏನಿತ್ತು? ಶಾಸ್ತ್ರ ಏನು ಹೇಳುತ್ತದೆ?
ರವಿಶಂಕರ್ ಗುರೂಜಿ: ಅದು ದೇವಸ್ಥಾನ ಪೂರ್ತಿಯಾಗಿ ನಿರ್ಮಾಣವಾದ ಮೇಲೆ ಶಿಖರ ಸ್ಥಾಪನೆ (ಕುಂಬಾಭಿಷೇಕ) ನಂತರ ಮೂರ್ತಿ ಪ್ರತಿಷ್ಠಾಪನೆ ಮಾಡುತ್ತೇವೆ. ಈ ಪದ್ದತಿ ಈಗ ಜಾರಿಯಲ್ಲಿದೆ. ಸದ್ಯ ಹೊಸ ಅಭಿಮತ ಎಲ್ಲಡೆ ಹರಡಿದೆ. ಆದರೆ ಸ್ವತಃ ಪ್ರಭು ಶ್ರೀರಾಮಚಂದ್ರ ರಾಮೇಶ್ವರಂನಲ್ಲಿ ಮೊದಲು ರಾಮಲಿಂಗ ಪ್ರತಿಷ್ಠಾಪಿಸಿದ ನಂತರ ದೇವಸ್ಥಾನ ನಿರ್ಮಾಣವಾಯಿತು. ಬದರಿನಾಥದ ಬದರಿಕಾಶ್ರಮದಲ್ಲಿ ಮೂರ್ತಿ ಮೊದಲು ಪ್ರತಿಷ್ಠಾಪನೆಯಾಯಿತು. ಆಮೇಲೆ ರಾಜ ಮಹಾರಾಜರು ದೇವಸ್ಥಾನ ನಿರ್ಮಿಸಿದರು. ಇದು ತಪ್ಪೇನಿಲ್ಲ. ಗರ್ಭಗುಡಿಯಲ್ಲಿ ಪೀಠ ಇದ್ದರೇ ಅಲ್ಲಿ ಮೂರ್ತಿ ಪ್ರತಿಷ್ಠಾಪಿಸಬಹುದು. ಇದರಲ್ಲಿ ಯಾವ ದೋಷವು ಇಲ್ಲ.
ಹಿಂದೂ ಪಂಚಾಗದ ಪ್ರಕಾರ, ಮುಂದಿನ ವರ್ಷ ಅಂದರೆ ಯುಗಾದಿ ನಂತರ ಬರುವ ವರ್ಷದ ಹೆಸರು ಕ್ರೋದಿನಾಮ ಸಂವತ್ಸರ. ಈ ವರ್ಷದ ಹೆಸರು ಶುಭಕೃತ ನಾಮ ಸಂವತ್ಸರ. ಶುಭಕೃತ ಅಂದರೆ ಒಳ್ಳೆಯದು ಅಂತ ಅರ್ಥ. ಹೀಗಾಗಿ ಮುಂದಿನ ವರ್ಷ ಕ್ರೋದದಲ್ಲಿ ಮಾಡುವುದಕ್ಕಿಂತ, ಒಳ್ಳೆಯ ವರ್ಷದಲ್ಲಿ ಪ್ರಾಣ ಪ್ರತಿಷ್ಠೆ ಮಾಡುವುದು ಒಳ್ಳೆಯದು.
ಟಿವಿ9: ಪ್ರಾಣ ಪ್ರತಿಷ್ಠೆಗೆ ಹೋಗುವ ವಿಚಾರದಲ್ಲಿ ಶಂಕರಾಚಾರ್ಯದ ನಾಲ್ಕು ಪೀಠಗಳಲ್ಲಿ ಬಿನ್ನಾಭಿಪ್ರಾಯ ಮೂಡಿದೆ ಇದಕ್ಕೆ ಏನಂತೀರಿ
ರವಿಶಂಕರ್ ಗುರೂಜಿ: ಈ ವಿಚಾರವಾಗಿ ಚರ್ಚಿಸಿ ಹೆಚ್ಚು ಸಮಯ ವ್ಯರ್ಥ ಮಾಡುವ ಅವಶ್ಯಕತೆ ಇಲ್ಲ. ಏಕೆಂದರೆ ನಾನು ಈ ಮೊದಲೆ ಹೇಳಿದ ಹಾಗೆ ಹಲವು ಜನ ಅವರ ಅಭಿಪ್ರಾಯ ಹೇಳುತ್ತಿರುತ್ತಾರೆ ಅಷ್ಟೇ. ಅಯೋಧ್ಯೆಗೂ ಕರ್ನಾಟಕಕ್ಕೂ ಬಹಳ ನಂಟಿದೆ. ಶಿಲೆಯೂ ನಮ್ಮ ರಾಜ್ಯದ್ದು. ಹನುಮಂತ ನಮ್ಮವನು. ಹೀಗೆ ಹಲವು ವಿಚಾರದಲ್ಲಿ ಕರ್ನಾಟಕಕ್ಕೂ ರಾಮನಿಗೂ ಬಹಳ ಹತ್ತಿರದ ನಂಟಿದೆ.
ಟಿವಿ9: ಅಯೋಧ್ಯೆ ನಂತರ ಮಥುರಾ, ಕಾಶಿ ಬೇಕೆ?
ರವಿಶಂಕರ್ ಗುರೂಜಿ: ಹಿಂದಿನಿಂದಲೂ ಮೂರು ಪ್ರದೇಶಗಳಿಗೆ ಬೇಡಿಕೆ ಇದೆ. ನಮ್ಮ ಐತಿಹಾಸಿಕ ಸ್ಥಾನಗಳನ್ನು ಧ್ವಂಸ ಮಾಡಿದ್ದರೋ, ಅವುಗಳನ್ನು ಸಂವಾದ, ಸೌಹಾರ್ಧರಿಂದ ಪುನರ್ ಸ್ಥಾಪನೆಯಾಗಬೇಕು ಎಂಬುವುದು ನಮ್ಮ ಅಭಿಪ್ರಾಯ.
ಟಿವಿ9: ಪ್ರಧಾನಿ ಮೋದಿಯವರ ಕಾಲದಲ್ಲಿ ಆಗುತ್ತಿದೆ ಇದಕ್ಕೆ ಏನು ಹೇಳುತ್ತೀರಿ
ರವಿಶಂಕರ್ ಗುರೂಜಿ: ಪ್ರಧಾನಿ ಮೋದಿಯವರು 32 ವರ್ಷಗಳಿಂದ ರಾಮಮಂದಿರಕ್ಕಾಗಿ ಹೋರಾಟ ನಡೆಸುತ್ತಿದ್ದಾರೆ. ಮತ್ತು ಅವರು ದೇಶಕ್ಕಾಗಿ, ಸಂಸ್ಕೃತಿಗಾಗಿ ಸಮರ್ಪಿತರಿರುವುದರಿಂದ ಮಂದಿರ ಆಗುತ್ತಿದೆ.
ಟಿವಿ9: ಅಯೋಧ್ಯೆಯಲ್ಲಿ ರಾಮಮಂದಿರ, ಪ್ರಾಣ ಪ್ರತಿಷ್ಠೆಯಾದ ಮೇಲೆ ಸಮಾಜದಲ್ಲಿ ಆಗುವ ಬದಲಾವಣೆಗಳೇನು?
ರವಿಶಂಕರ್ ಗುರೂಜಿ: ಸಮಾಜದಲ್ಲಿ ಬದಲಾವಣೆಗಳು ಆಗುತ್ತಿರುತ್ತವೆ. ಮಂದಿರವಾಗಿದ್ದು ಅದೊಂದು ಉತ್ಸವ. ಆದರೆ ಶ್ರೀರಾಮ ಹೇಳಿಕೊಟ್ಟ ಸಿದ್ಧಾಂತ ಮತ್ತು ಆತನ ನಡತೆಗಳನ್ನು ನಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕು. ಇದು ಬಹಳ ಮುಖ್ಯ. ಆಗ ಸಮಾಜದಲ್ಲಿ ಬದಲಾವಣೆಯಾಗುತ್ತದೆ.
ಟಿವಿ9: ಮಂದಿರ ಉದ್ಘಾಟನೆ ಜೊತೆಗೆ ಸಮುದಾಯ ಜಾಗೃತಾ ಆಗತ್ತಾ?
ರವಿಶಂಕರ್ ಗುರೂಜಿ: ಜಾಗತೀಕರಣ ಬೇಕು. ಸಮಾಜ ಎಚ್ಚತ್ತುಕೊಳ್ಳಬೇಕು. ಕೇವಲ ಒಂದು ದೇವಸ್ಥಾನ ಕಟ್ಟಿದರೇ ಎಲ್ಲವೂ ಆಗುತ್ತೆ ಅಂತ ಅಂದುಕೊಳ್ಳಬಾರದು. ಈ ರಾಮಮಂದಿರ ಹೆಮ್ಮೆ ತರುವ ವಿಷಯವಾಗಿದೆ. ಆದರೆ ಎಲ್ಲಿಯವರೆಗೆ ನಮ್ಮ ಜೀವನದಲ್ಲಿ ಮಾನವೀಯತೆ ಗುಣ ಅಳವಡಿಸಿಕೊಳ್ಳುವುದಿಲ್ಲ, ಅಲ್ಲಿಯವರೆಗೂ ಸಮಸ್ಯೆ ಇರುತ್ತದೆ.
Published On - 8:58 am, Sat, 20 January 24