ಕುಳಿತುಕೊಳ್ಳುವ ಹಕ್ಕುಗಳಿಗಾಗಿ ದನಿಯೆತ್ತಿದ ಕೇರಳ, ತಮಿಳುನಾಡಿನ ಕಾರ್ಮಿಕರು; ಏನಿದು ಕುಳಿತುಕೊಳ್ಳುವ ಹಕ್ಕು?

Right to sit: ತಮಿಳುನಾಡಿನಲ್ಲಿ ಅಂಗೀಕರಿಸಿದ ಕಾಯ್ದೆಯು ಜನವರಿ 2019 ರಲ್ಲಿ ಕೇರಳದ ಅಂಗಡಿಗಳು ಮತ್ತು ವಾಣಿಜ್ಯ ಸ್ಥಾಪನೆ ಕಾಯ್ದೆಯಲ್ಲಿನ ತಿದ್ದುಪಡಿಯನ್ನು ನಿಕಟವಾಗಿ ಪ್ರತಿಬಿಂಬಿಸುತ್ತದೆ. ಕುಳಿತುಕೊಳ್ಳುವ ಹಕ್ಕನ್ನು ಕಡ್ಡಾಯಗೊಳಿಸಿದ ಮೊದಲನೇ ರಾಜ್ಯವಾಗಿದೆ ಕೇರಳ.

ಕುಳಿತುಕೊಳ್ಳುವ ಹಕ್ಕುಗಳಿಗಾಗಿ ದನಿಯೆತ್ತಿದ ಕೇರಳ, ತಮಿಳುನಾಡಿನ ಕಾರ್ಮಿಕರು; ಏನಿದು ಕುಳಿತುಕೊಳ್ಳುವ ಹಕ್ಕು?
ಪ್ರಾತಿನಿಧಿಕ ಚಿತ್ರ (ಪಿಟಿಐ)

ತಿರುವನಂತಪುರಂ: ಆಕೆಯ ಹಿಮ್ಮಡಿಗಳು ಬಿರುಕು ಬಿಟ್ಟಿವೆ. ಅವಳ ಎರಡೂ ಕಾಲುಗಳ ಪಾದದಲ್ಲಿ ಚೂಪಾದ, ಆಳವಾದ, ಗಟ್ಟಿಯಾದ ಬಿರುಕುಗಳಿದ್ದು ಚರ್ಮ ಕಿತ್ತುಬಂದಿದೆ. ಹಿಮ್ಮಡಿಯಲ್ಲಿ ಅಸಾಧ್ಯ ನೋವು ಇದ್ದರೂ ಓಡಾಡಿ ಸುಸ್ತಾಗುತ್ತದೆ. ಹೀಗಿದ್ದರೂ ವಿ.ಸರಸ್ವತಿ ಆ ನೋವನ್ನು ಲೆಕ್ಕಿಸದೆ ಕೆಲಸ ಮಾಡುತ್ತಾರೆ . ನೋವು ಅವರ ಜೀವನದ ಭಾಗವಾಗಿ ಬಿಟ್ಟಿದೆ. ನಮ್ಮನ್ನು ಯಂತ್ರಗಳಂತೆ ಪರಿಗಣಿಸಲಾಗುತ್ತದೆ. ಮಹಿಳೆಯರಂತೆ ಅಲ್ಲ, ಮನುಷ್ಯರಂತೆ ಅಲ್ಲ. ಯಂತ್ರಗಳಂತೆ ಎಂದು ಆಕೆ ಹೇಳುತ್ತಾಳೆ. ಈ ತಿಂಗಳ ಆರಂಭದಲ್ಲಿ ತಮಿಳುನಾಡು ಸರ್ಕಾರವು ವಾಣಿಜ್ಯ ಸಂಸ್ಥೆಗಳಲ್ಲಿ ಕೆಲಸಗಾರರಿಗೆ ಅತ್ಯಂತ ಮೂಲಭೂತ ಹಕ್ಕುಗಳನ್ನು, ಕುಳಿತುಕೊಳ್ಳುವ ಹಕ್ಕನ್ನು ಕಡ್ಡಾಯಗೊಳಿಸಿದ ದೇಶದ ಎರಡನೇ ರಾಜ್ಯವಾಯಿತು. ಸರಸ್ವತಿ ಈ ನಿರ್ಧಾರವನ್ನು ಶ್ಲಾಘಿಸಿದ್ದರು. ಆದರೆ ಮಾಲೀಕರು ಎಂದಿಗೂ ಇದನ್ನು ಅನುಸರಿಸುವುದಿಲ್ಲ ಎಂದು ಆಕೆ ನಿರಾಶೆಯಿಂದ ಹೇಳಿದಳು.

ಸರಸ್ವತಿ ಚೆನ್ನೈನ ಪೂರ್ವ ಕರಾವಳಿ ರಸ್ತೆಯ ಜವಳಿ ಅಂಗಡಿಯಲ್ಲಿ ಕೆಲಸ ಮಾಡುತ್ತಾಳೆ. ಅಂಗಡಿ ಚಿಕ್ಕದಾಗಿದೆ, ಕಟ್ಟಡದ ನೆಲಮಾಳಿಗೆಯಲ್ಲಿ ಇಬ್ಬರು ಮಾರಾಟಗಾರರಿದ್ದಾರೆ. ಆದರೆ ಇರುವುದು ಒಂದೇ ಒಂದು ಸ್ಟೂಲ್ ಇದು ಕೂಡಾ ಒಂದು ರೀತಿಯ ಬದಲಾವಣೆಯೇ. “ಇದು ಸಣ್ಣ ಅಂಗಡಿಯಾಗಿರುವುದರಿಂದ, ಇಬ್ಬರು ಮಾರಾಟಗಾರರು ಒಂದೇ ಸಮಯದಲ್ಲಿ ಕೆಲಸ ಮಾಡುತ್ತಾರೆ, ಆದ್ದರಿಂದ ನಾವು ಸ್ಟೂಲ್​​ನಲ್ಲಿ ಒಬ್ಬರು ಸ್ವಲ್ಪ ಹೊತ್ತು ಕುಳಿತು ಅವರು ಎದ್ದು ನಿಂತ ಮೇಲೆ ಇನ್ನೊಬ್ಬರು ಕುಳಿತುಕೊಳ್ಳುತ್ತೇವೆ. ಆದರೂ ನಮಗೆ ವಿಶ್ರಾಂತಿ ಸಿಗುವುದಿಲ್ಲ.

ಮದುವೆಯಾದ ನಂತರ ಕೆಲವು ವರ್ಷಗಳ ಹಿಂದೆ ಚೆನ್ನೈಗೆ ತೆರಳುವ ಮೊದಲು ಸರಸ್ವತಿ ಮೊದಲು ಪುದುಚೇರಿಯ ಸೀರೆ ಅಂಗಡಿಯಲ್ಲಿ ಕೆಲಸ ಮಾಡಿದರು. “ಆ ವರ್ಷಗಳಲ್ಲಿ ಪುದುಚೇರಿಯಲ್ಲಿ ನಾನು ಪ್ರತಿದಿನ ಎಂಟು ಗಂಟೆಗಳ ಕಾಲ ನಿಲ್ಲುತ್ತಿದ್ದೆ. ಅಂಗಡಿಯಲ್ಲಿ ನಾವೆಲ್ಲರೂ ಮಹಿಳಾ ಕೆಲಸಗಾರರಾಗಿದ್ದು, ನಾವು ಯಾರಿಗೂ ತಿಳಿಯದಂತೆ ಕೆಲವು ನಿಮಿಷಗಳ ಕಾಲ ಶೌಚಾಲಯದಲ್ಲಿ ವಿಶ್ರಾಂತಿ ಪಡೆಯುತ್ತಿದ್ದೆವು. ಗ್ರಾಹಕರು ಇಲ್ಲದಿದ್ದರೂ ಕುಳಿತುಕೊಳ್ಳದಂತೆ ಮಾಲೀಕರು ನಮಗೆ ಕಟ್ಟುನಿಟ್ಟಾಗಿ ಸೂಚನೆ ನೀಡಿದ್ದರು. ದೊಡ್ಡ ಅಂಗಡಿಗಳಲ್ಲಿ, ಹೆಚ್ಚು ಜನದಟ್ಟಣೆ ಇರುತ್ತದೆ, ಮತ್ತು ಸೌಲಭ್ಯವಿಲ್ಲದೆ ಕುಳಿತುಕೊಳ್ಳುವುದು ಅಸಾಧ್ಯ. ಆದರೆ ನಮ್ಮಲ್ಲಿ ಯಾರೂ ಮಾತನಾಡಲು ಸಾಧ್ಯವಿಲ್ಲ ಹಾಗೆ ಮಾತನಾಡಿದರೆ ಉದ್ಯೋಗವನ್ನು ಕಳೆದುಕೊಳ್ಳುತ್ತೇವೆ, ನಮಗೆ ಬದುಕಲು ಕೆಲಸ ಬೇಕು. ಹೀಗೆ ನಿಂತುಕೊಂಡೇ ಕೆಲಸ ಮಾಡುವುದರಿಂದ ಹಲವಾರು ಆರೋಗ್ಯ ಸಮಸ್ಯೆಗಳು ಕಾಣಿಸಿಕೊಳ್ಳುತ್ತಿವೆ. ನಾವು ನೋವಿನೊಂದಿಗೆ ಬದುಕುವುದನ್ನು ಕಲಿತಿದ್ದೇವೆ ಎಂದು ಸರಸ್ವತಿ ಹೇಳಿರುವುದಾಗಿ ಹಿಂದೂಸ್ತಾನ್ ಟೈಮ್ಸ್ ವರದಿ ಮಾಡಿದೆ.

ಸೆಪ್ಟೆಂಬರ್ 6 ರಂದು ತಮಿಳುನಾಡು ವಿಧಾನಸಭೆಯಲ್ಲಿ ಮಸೂದೆಯೊಂದನ್ನು ಮಂಡಿಸಿದ್ದು ಇದು ತಮಿಳುನಾಡು ಅಂಗಡಿಗಳು ಮತ್ತು ಸ್ಥಾಪನೆ ಕಾಯ್ದೆಗೆ ತಿದ್ದುಪಡಿ ತರಲು ಪ್ರಸ್ತಾಪಿಸುತ್ತದೆ. ಮಸೂದೆ ಪ್ರಕಾರ “ಅಂಗಡಿಗಳು, ವಾಣಿಜ್ಯ ಸಂಸ್ಥೆಗಳು, ರೆಸ್ಟೋರೆಂಟ್‌ಗಳು, ಚಿತ್ರಮಂದಿರಗಳು ಮತ್ತು ಇತರ ಸಂಸ್ಥೆಗಳಲ್ಲಿ ಕೆಲಸದ ಪರಿಸ್ಥಿತಿಗಳ ನಿಯಂತ್ರಣವನ್ನು” ಒದಗಿಸುತ್ತದೆ. ಈ ಮಸೂದೆಯನ್ನು ಸೆಪ್ಟೆಂಬರ್ 13 ರಂದು ಧ್ವನಿ ಮತದಲ್ಲಿ ಯಾವುದೇ ವಿರೋಧವಿಲ್ಲದೆ ರಾಜ್ಯ ವಿಧಾನಸಭೆಯು ಅಂಗೀಕರಿಸಿತು.

ಹೊಸದಾಗಿ ಪರಿಚಯಿಸಿದ ಸೆಕ್ಷನ್ 21 ಬಿ ಕಡ್ಡಾಯವಾಗಿ ಪ್ರತಿ ಅಂಗಡಿ ಮತ್ತು ಸಂಸ್ಥೆಗಳಲ್ಲಿ ಎಲ್ಲಾ ಕಾರ್ಮಿಕರು ಕುಳಿತುಕೊಳ್ಳಲು ಸೂಕ್ತವಾದ ವ್ಯವಸ್ಥೆಯನ್ನು ಒದಗಿಸಬೇಕು. ಇದರಿಂದ ಅವರು ಕರ್ತವ್ಯದ ಸಮಯದಲ್ಲಿ ಕಾಲು ನೋಯುವ ಪರಿಸ್ಥಿತಿಯನ್ನು ತಪ್ಪಿಸಬಹುದು. ಕಾರ್ಮಿಕರು ಅವರ ಕೆಲಸದ ಸಮಯದಲ್ಲಿ ಕುಳಿತುಕೊಳ್ಳುವ ಯಾವುದೇ ಅವಕಾಶವನ್ನು ತಪ್ಪಿಸಿಕೊಳ್ಳಬಾರದು ಎಂದು ಮಸೂದೆಯಲ್ಲಿ ಹೇಳಲಾಗಿದೆ.

ತಮಿಳುನಾಡಿನಲ್ಲಿ ಅಂಗೀಕರಿಸಿದ ಕಾಯ್ದೆಯು ಜನವರಿ 2019 ರಲ್ಲಿ ಕೇರಳದ ಅಂಗಡಿಗಳು ಮತ್ತು ವಾಣಿಜ್ಯ ಸ್ಥಾಪನೆ ಕಾಯ್ದೆಯಲ್ಲಿನ ತಿದ್ದುಪಡಿಯನ್ನು ನಿಕಟವಾಗಿ ಪ್ರತಿಬಿಂಬಿಸುತ್ತದೆ. ಕುಳಿತುಕೊಳ್ಳುವ ಹಕ್ಕನ್ನು ಕಡ್ಡಾಯಗೊಳಿಸಿದ ಮೊದಲನೇ ರಾಜ್ಯವಾಗಿದೆ ಕೇರಳ.

ಕುಳಿತುಕೊಳ್ಳುವ ಹಕ್ಕಿಗಾಗಿ ದನಿಯೆತ್ತಿದ ವಿಜಿ ಪೆಣ್​​ಕೂಟ್ಟ್
ಕೇರಳದಲ್ಲಿ ಕುಳಿತುಕೊಳ್ಳುವ ಹಕ್ಕಿನ ಹೋರಾಟಕ್ಕೆ ದನಿಯಾಗಿದ್ದು 53ರ ಹರೆಯದ ಪಳ್ಳಿತ್ತೋಡಿ ವಿಜಿ. 2007 ರಲ್ಲಿ ತನ್ನ ಉದ್ಯೋಗದಾತರಿಂದ ಅನುಭವಿಸಿದ ಅವಮಾನ ಅವರ ಹೋರಾಟಕ್ಕೆ ದನಿಯಾಗುವಂತೆ ಮಾಡಿತು. ಕೋಯಿಕ್ಕೋಡ್ ನ ಮಿಠಾಯಿ ತೆರುವ್ (Sweet Meat Street )ನಲ್ಲಿರುವ ಶಾಪಿಂಗ್ ಕಾಂಪ್ಲೆಕ್ಸ್‌ನ ಟೈಲರ್ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದ ವಿಜಿ ನಾನು ಮೂತ್ರ ಮಾಡಲು ಶೌಚಾಲಯಕ್ಕೆ ಹೋಗಬಹುದೇ ಎಂದು ಕೇಳಿದಾಗ ಈಗ ನೀವು ನಿಯಂತ್ರಿಸಿಕೊಳ್ಳಿ ಅಥವಾ ಕಡಿಮೆ ನೀರು ಕುಡಿಯಿರಿ ಎಂದಾಗಿದ್ದು ಅಂಗಡಿ ಮಾಲೀಕರ ಉತ್ತರ.

ಆ ಹೊತ್ತಿಗೆ ವಿಜಿ  ಸಾಮಾಜಿಕ ಹೋರಾಟಗಳಲ್ಲಿ ಧುಮುಕಿದ್ದರು. 1993 ರಲ್ಲಿ ಮಾಜಿ ಮಾವೋವಾದಿ ನಾಯಕರಾದ ಕೆ ಅಜಿತಾ ಅವರೊಂದಿಗೆ ಮಹಿಳೆಯರ ಸಮಸ್ಯೆಗಳನ್ನು ಆಲಿಸಲು ‘ಅನ್ವೇಷಿ’ ಎಂಬ ಸರ್ಕಾರೇತರ ಸಂಸ್ಥೆಯನ್ನು ಸ್ಥಾಪಿಸಿದರು. ಅಂಗಡಿ ಮಾಲೀಕರ ಈ ಉತ್ತರದಿಂದ ಬೇಸತ್ತ ವಿಜಿ, ಜನರನ್ನು ಒಗ್ಗೂಡಿಸಿ ಕೆಲಸ ಮಾಡಲು ಪ್ರಾರಂಭಿಸಿದರು. ವಿಜಿ ಜತೆ ಇದೇ ರೀತಿಯ ಅವಮಾನ, ನೋವು ಅನುಭವಿಸುತ್ತಿರುವ ಮಹಿಳೆಯರು ಸೇರಿಕೊಂಡು. ಮುಟ್ಟಿನ ಸಮಯದಲ್ಲಿ ನೈರ್ಮಲ್ಯದ ಕೊರತೆ ಮತ್ತು ದೀರ್ಘಕಾಲದ ಮೂತ್ರ ಹಿಡಿದಿಟ್ಟುಕೊಳ್ಳುವುದರಿಂದ ಮೂತ್ರಪಿಂಡದ ಕಾಯಿಲೆಗಳು ಮತ್ತು ಸೋಂಕುಗಳ ಬಗ್ಗೆ ಮಹಿಳೆಯರು ದೂರು ನೀಡಿದರು.

Palithodi-Viji

ಪಳ್ಳಿತ್ತೋಡಿ ವಿಜಿ

2010 ರಲ್ಲಿ ವಿಜಿ “ಪೆಣ್​​ಕೂಟ್ಟ್” ಎಂಬ ಮಹಿಳಾ ಕಾರ್ಮಿಕರ ಗುಂಪನ್ನು ರಚಿಸಿದರು. ಅದೇ ವರ್ಷದಲ್ಲಿ ಕೋಯಿಕ್ಕೋಡ್ ಕಾರ್ಪೊರೇಶನ್​​​ಗೆ ಒತ್ತಾಯಿಸಿ ಮಿಠಾಯಿ ತೆರುವ್ ರಸ್ತೆಯಲ್ಲಿ ಶೌಚಾಲಯವನ್ನು ನಿರ್ಮಿಸುವಂತೆ ಒತ್ತಾಯಿಸಿದರು. ಒಂದು ದಶಕದ ನಂತರ ಕೊಚ್ಚಿಯಲ್ಲಿರುವ ಎಲ್ಲಾ ವಾಣಿಜ್ಯ ಕಟ್ಟಡಗಳು ಈಗ ಪ್ರತಿ ಮಹಡಿಯಲ್ಲಿ ಪ್ರತ್ಯೇಕ ಶೌಚಾಲಯಗಳನ್ನು ಹೊಂದಿವೆ. 2012 ರ ಹೊತ್ತಿಗೆ ಮಹಿಳಾ ಕಾರ್ಮಿಕರ ಜತೆ ಸೇರಿ ವಿಜಿ ಮತ್ತು ಪೆಣ್​​ಕೂಟ್ಟ್ “ಕುಳಿತುಕೊಳ್ಳುವ ಹಕ್ಕು” ಗಾಗಿ ಹೋರಾಟವನ್ನು ಆರಂಭಿಸಿದರು.

“ಶೌಚಾಲಯಕ್ಕಾಗಿ ಹೋರಾಟವು ಫಲಪ್ರದವಾಗಲು ಮೂರು ವರ್ಷಗಳನ್ನು ತೆಗೆದುಕೊಂಡರೆ, ಕುಳಿತುಕೊಳ್ಳುವ ಹಕ್ಕಿಗೆ ಆರು ವರ್ಷಗಳು ಬೇಕಾಯಿತು. ಆರಂಭದಲ್ಲಿ ವ್ಯಾಪಾರಿ ಸಂಘಗಳು ಮಹಿಳೆಯರು ಕುಳಿತುಕೊಳ್ಳಲು ಬಯಸಿದರೆ ಅವರು ಮನೆಯಲ್ಲಿ ಶಾಶ್ವತವಾಗಿ ಕುಳಿತುಕೊಳ್ಳಬಹುದು ಎಂದು ಹೇಳಿದರು. ಆದರೆ ನಾವು ಅವರ ಮೇಲೆ ಒತ್ತಡ ಹೇರಬೇಕಾಗಿ ಬಂತು ಅಂತಾರೆ ವಿಜಿ.

ಆ ಸಮಯದಲ್ಲಿ ಕೇರಳದಲ್ಲಿ ಜವಳಿ ಅಂಗಡಿಗಳಲ್ಲಿ ಗ್ರಾಹಕರು ಬರದೇ ಇರುವ ಹೊತ್ತಲ್ಲಿಯೂ ಅಂಗಡಿ ಮಾಲೀಕರು ಮಹಿಳಾ ಉದ್ಯೋಗಿಗಳಿಗೆ ಕುಳಿತುಕೊಳ್ಳಲು ಬಿಡುತ್ತಿರಲಿಲ್ಲ. ಊದಿಕೊಂಡ ಕಾಲುಗಳು ಮತ್ತು ಕಾಲುಗಳಲ್ಲಿ ರಕ್ತನಾಳಗಳು ಉಬ್ಬಿರುವ ಸಮಸ್ಯೆ ಮಹಿಳೆಯರಲ್ಲಿ ಕಾಣಿಸಿಕೊಂಡಿತು. 2012 ರಲ್ಲಿ ಕೋಯಿಕ್ಕೋಡ್ ನ ಒಂದು ಜವಳಿ ಘಟಕದಿಂದ ಮದುವೆಗೆ ಗ್ರಾಹಕರ ಗುಂಪೊಂದು ಸೀರೆ ಖರೀದಿಸುತ್ತಿದ್ದಾಗ ಗೋಡೆಯ ಮೇಲೆ ಒರಗಿದ್ದಕ್ಕಾಗಿ ಸೇಲ್ಸ್ ಗರ್ಲ್​​​ನ ಸಂಬಳವನ್ನು ಕಡಿತಗೊಳಿಸಿದ ದೂರು ನನಗೆ ಸಿಕ್ಕಿತ್ತು. ನಾವು ನಮ್ಮ ಹೋರಾಟವನ್ನು ಮತ್ತಷ್ಟು ತೀವ್ರಗೊಳಿಸಲು ಇದು ಪ್ರಚೋದನೆ ಆಯ್ತು ಎಂದು ವಿಜಿ ಹೇಳುತ್ತಾರೆ.

ಈ ಪ್ರಕರಣದಲ್ಲಿ ದಶಕ ಕಾಲ ವಿಜಿ ನ್ಯಾಯಾಲಯದ ಪ್ರಕರಣಗಳಿಂದ ಹಿಡಿದು ಪೊಲೀಸ್ ಠಾಣೆಗಳು ಮತ್ತು ಕಾರ್ಮಿಕ ಕಚೇರಿಗಳಿಗೆ ನಿರಂತರ ಸಮನ್ಸ್ ವರೆಗೆ ನಿರಂತರ ಒತ್ತಡವನ್ನು ಎದುರಿಸಬೇಕಾಯಿತು. ಒಂದು ಹಂತದಲ್ಲಿ ವಿಜಿ  ವಿರುದ್ಧ ಮೂರು ಪ್ರಕರಣಗಳು ದಾಖಲಾಯಿತು. ಇದರಲ್ಲಿ ಒಂದು ಪ್ರಕರಣ-ಬಲವಂತವಾಗಿ ಮುಚ್ಚಿದ ಶೌಚಾಲಯ ತೆರೆದಿದ್ದಕ್ಕೆ, ಎರಡು -ಕೆಲಸಗಾರರಲ್ಲಿ ಅಶಾಂತಿ ಸೃಷ್ಟಿಸಿದ ಆರೋಪದ ಮೇಲೆ ಇವೆರಡನ್ನೂ ನ್ಯಾಯಾಲಯ ವಜಾಗೊಳಿಸಿತು. ಇದರ ಜತೆಗೆ ಇತರ ಅಧಿಕಾರಶಾಹಿ ಸವಾಲುಗಳು ಕೂಡ ಇದ್ದವು, ಉದಾಹರಣೆಗೆ ಸರ್ಕಾರವು “ಪೆಣ್​​ಕೂಟ್ಟ್” ನೊಂದಿಗೆ ತೊಡಗಿಸಿಕೊಳ್ಳಲು ನಿರಾಕರಿಸಿತು. ಅದು ನೋಂದಾಯಿತ ಒಕ್ಕೂಟವಲ್ಲ ಎಂದು ಹೇಳಿತು. ಹಾಗಾಗಿ ನಾನು ಅಸಂಘಟಿತ ಮೇಖಲಾ ತೋಳಿಲಾಳಿ ಯೂನಿಯನ್ (ಅಸಂಘಟಿತ ವಲಯದ ನೌಕರರ ಸಂಘ) ವನ್ನು ತೆರೆಯಬೇಕಾಗಿಬಂತು. ಇದು ಇನ್ನೂ ಎಲ್ಲಾ ಮಹಿಳಾ ಟ್ರೇಡ್ ಯೂನಿಯನ್ ಆಗಿದ್ದು ಮಹಿಳೆಯರಿಗಾಗಿ ದನಿಯೆತ್ತುತ್ತಿದ್ದೆ ಎಂದು ವಿಜಿ ಹೇಳಿದ್ದಾರೆ.

ಕೇರಳದಾದ್ಯಂತ ಹೋರಾಟವು ಬಲಗೊಳ್ಳತೊಡಗಿದಂತೆ 2014 ರಲ್ಲಿ ತ್ರಿಶೂರ್‌ನಲ್ಲಿ ಮಹಿಳಾ ಜವಳಿ ಶೋರೂಂ ಉದ್ಯೋಗಿಗಳ ಪ್ರಮುಖ ಆಂದೋಲನ ಸೇರಿದಂತೆ ರಾಜ್ಯದಾದ್ಯಂತ ಬೆಂಬಲ ಹರಿದುಬರತೊಡಗಿತು. ಅದೇ ವರ್ಷ ವಿಜಿ ರಾಜ್ಯ ಸರ್ಕಾರ, ರಾಜ್ಯ ಮಹಿಳಾ ಆಯೋಗ ಮತ್ತು ನಂತರ ಮಾನವ ಹಕ್ಕುಗಳ ಆಯೋಗಕ್ಕೆ ಮನವಿ ಸಲ್ಲಿಸಿದರು. ಎರಡು ವರ್ಷಗಳ ನಂತರ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗವು ಜವಳಿ ಅಂಗಡಿಗಳಲ್ಲಿ ಮಹಿಳಾ ಕಾರ್ಮಿಕರ ಕಳಪೆ ಕೆಲಸದ ಸ್ಥಿತಿಯ ಬಗ್ಗೆ ರಾಜ್ಯದಿಂದ ವರದಿಯನ್ನು ಕೇಳಿತು. 2018 ರ ಹೊತ್ತಿಗೆ ರಾಜ್ಯ ಸರ್ಕಾರವು ಕುಳಿತುಕೊಳ್ಳುವ ಹಕ್ಕನ್ನು ತರಲು ತಿದ್ದುಪಡಿಯನ್ನು ತಂದಿತು.ಜನವರಿ 2019 ರಲ್ಲಿ ರಾಜ್ಯ ವಿಧಾನಸಭೆಯು ಕಾನೂನನ್ನು ಅಂಗೀಕರಿಸಿತು. 2018 ರಲ್ಲಿ ಬಿಬಿಸಿ ವಿಶ್ವದ ಅತ್ಯಂತ ಶಕ್ತಿಶಾಲಿ ಮಹಿಳೆಯರ ಪಟ್ಟಿಯಲ್ಲಿ ವಿಜಿಯನ್ನು ಹೆಸರಿಸಿದೆ.

ಕೇರಳದಲ್ಲಿ ಮಹಿಳೆಯರು ಮತ್ತು ಕಾರ್ಮಿಕ ಕಾರ್ಯಕರ್ತರು ಕಾನೂನಿಗೆ ತಿದ್ದುಪಡಿ ಮಾಡಿದ ನಂತರ ದೂರುಗಳಲ್ಲಿ ಇಳಿಕೆಯಾಗಿದೆ ಎಂದು ಹೇಳುತ್ತಾರೆ. ತಿದ್ದುಪಡಿ ಜಾರಿಗೆ ಬಂದ ನಂತರ ದೂರುಗಳು ಶೇ 80ರಷ್ಟು ಕಡಿಮೆಯಾಯಿತು. ಬದಲಾಗುತ್ತಿರುವ ಸಮಯಗಳು ಮತ್ತು ಕೆಲಸದ ಮಾದರಿಗಳೊಂದಿಗೆ ಮಹಿಳಾ ಶೋಷಣೆಯನ್ನು ಕೊನೆಗೊಳಿಸಲು ನಮಗೆ ಹೊಸ ಕಾನೂನುಗಳು ಬೇಕಾಗುತ್ತವೆ ಎಂದು ಮಹಿಳಾ ಕಾರ್ಮಿಕರ ನಡುವೆ ಕೆಲಸ ಮಾಡುವ ಕಾರ್ಯಕರ್ತೆ ಕೆ ವಲ್ಸಲಾ ಹೇಳಿದರು. ನಂತರ ಕಳೆದ ಎರಡು ವರ್ಷಗಳಲ್ಲಿ, ಹಿರಿಯ ಪೊಲೀಸ್ ಅಧಿಕಾರಿಗಳು ಹೊಸ ಕಾನೂನಿನ ಉಲ್ಲಂಘನೆಯ 16 ಪ್ರಕರಣಗಳನ್ನು ದಾಖಲಿಸಲಾಗಿದೆ ಅದರಲ್ಲಿ 8 ಅನ್ನು ಹಿಂಪಡೆಯಲಾಗಿದೆ ಮತ್ತು ಉಳಿದವು ನ್ಯಾಯಾಲಯದಲ್ಲಿದೆ ಎಂದು ಹೇಳಿದರು.

ಕೇರಳದಲ್ಲಿ ಕಾನೂನಿನ ಹೊರತಾಗಿಯೂ ತಮಿಳುನಾಡಿನ ಮಸೂದೆಯ ಮೂಲ ಕಥೆಯು ಸಾಕಷ್ಟು ನಿರಂತರವಾದ ಚಳುವಳಿಯಲ್ಲ.  1967 ರಲ್ಲಿ ಸಿಎನ್ ಅಣ್ಣಾದೊರೈ ಮುಖ್ಯಮಂತ್ರಿಯಾಗಿದ್ದಾಗ ದ್ರಾವಿಡ ಮುನ್ನೇಟ್ರ ಕಳಗಂನ ಮೊದಲ ಅಧಿಕಾರಾವಧಿಯಲ್ಲಿ ಎರಡು ವರ್ಷಗಳ ನಂತರ ಅಣ್ಣಾ ದೊರೈ ನಿಧನರಾದಾಗ ಎಂ ಕರುಣಾನಿಧಿ ಅಧಿಕಾರ ವಹಿಸಿಕೊಂಡರು. ಉದ್ಯೋಗದಾತರು, ಉದ್ಯೋಗಿಗಳು ಮತ್ತು ರಾಜ್ಯ ಸರ್ಕಾರದ ಪ್ರತಿನಿಧಿಗಳನ್ನು ಹೊಂದಿರುವ ಸಂಸ್ಥೆ ರಾಜ್ಯ ಕಾರ್ಮಿಕ ಸಲಹಾ ಮಂಡಳಿ (SLAB) ರಚನೆಯಾಯಿತು. ನಂತರದ ದಶಕಗಳಲ್ಲಿ ನಿರ್ದಿಷ್ಟವಾಗಿ ಎಂಭತ್ತರ ದಶಕದಲ್ಲಿ SLAB ಒಂದು ಶಕ್ತಿಯುತ ಸಂಸ್ಥೆಯಾಗಿದ್ದು, ಅಲ್ಲಿ ರಾಜ್ಯದ ಕ್ರಮಗಳು, ಶಾಸನಗಳು ಮತ್ತು ನಿಬಂಧನೆಗಳು ಎಳೆಎಳೆಯಾಗಿ ಚರ್ಚಿಸಲ್ಪಟ್ಟವು, ಆದರೆ ನಂತರ ಅದು ಅತಿಯಾಯಿತು.

ಟಿಎಂ ಮೂರ್ತಿ, ತಮಿಳುನಾಡಿನ AITUC ಯ ಪ್ರಧಾನ ಕಾರ್ಯದರ್ಶಿ ಮತ್ತು SLAB ಸದಸ್ಯರ ಉದ್ಯೋಗಿಗಳ ಪ್ರತಿನಿಧಿಯಾಗಿ ಸಾಮಾನ್ಯವಾಗಿ ಮಂಡಳಿಯು ವರ್ಷಕ್ಕೆ ನಾಲ್ಕು ಬಾರಿ ಭೇಟಿಯಾಗಲು ಉದ್ದೇಶಿಸಿದೆ.ಆದರೆ ಕಳೆದ ಒಂದು ದಶಕದಲ್ಲಿ ಮೂರು ಸಭೆಗಳನ್ನು ನಡೆಸಲಾಗಿದೆ ಎಂದು ಹೇಳಿದರು.

2019 ರಲ್ಲಿ ಅಖಿಲ ಭಾರತ ಅಣ್ಣಾ ದ್ರಾವಿಡ ಮುನ್ನೇಟ್ರ ಕಳಗಂನಿಂದ ನಡೆಸಲ್ಪಡುವ ತಮಿಳುನಾಡು ಸರ್ಕಾರವು ಅಂತರಾಷ್ಟ್ರೀಯ ಕಾರ್ಮಿಕ ಸಂಘಟನೆಯ ನಿಯೋಗವು “SLAB ನ ಕಾರ್ಯವನ್ನು ಅರ್ಥಮಾಡಿಕೊಳ್ಳಲು” ರಾಜ್ಯಕ್ಕೆ ಭೇಟಿ ನೀಡುತ್ತಿದೆ ಎಂಬ ಸುದ್ದಿಯನ್ನು ಪಡೆಯಿತು. “ಆದ್ದರಿಂದ ಅದು ಕಾರ್ಯನಿರ್ವಹಿಸುತ್ತಿದೆ ಎಂದು ತೋರಿಸಲು ಅವರು ಸೆಪ್ಟೆಂಬರ್ 2019 ರಲ್ಲಿ ಸಭೆಯನ್ನು ಕರೆದರು. ನಾವು ಆ ಅವಕಾಶವನ್ನು ಬಳಸಿಕೊಂಡಿದ್ದೇವೆ” ಎಂದು ಮೂರ್ತಿ ಹೇಳುತ್ತಾರೆ.

ಸಭೆಯಲ್ಲಿ ಅವರು ಮಾಡಿದ ಹಲವಾರು ಪ್ರಸ್ತಾಪಗಳಲ್ಲಿ ಕುಳಿತುಕೊಳ್ಳುವ ಹಕ್ಕಿದೆ. “ಇದಕ್ಕೆ ಯಾವುದೇ ಚಳುವಳಿ ಅಥವಾ ಬೇಡಿಕೆಯಿಲ್ಲದಿದ್ದರೂ, ನಾವು ಮಾನವ ಹಕ್ಕುಗಳ ಆಧಾರದ ಮೇಲೆ ಕೇರಳದ ನಿರ್ದೇಶನವನ್ನು ಅನುಸರಿಸಬೇಕೆಂದು ನಾವು ಇತರ ಸದಸ್ಯರೊಂದಿಗೆ ಹಂಚಿಕೊಂಡಿದ್ದೇವೆ.” ಖಚಿತವಾಗಿ, SLAB ಶೀಘ್ರದಲ್ಲೇ ಈ ಪ್ರಸ್ತಾವನೆಯನ್ನು ಅಂಗೀಕರಿಸಲಾಗಿದೆ ಮತ್ತು ರಾಜ್ಯ ಸರ್ಕಾರವು ಅದನ್ನು ಪರಿಗಣಿಸುತ್ತಿದೆ ಎಂಬ ಪ್ರತಿಕ್ರಿಯೆಯನ್ನು ಪಡೆಯಿತು. ಮೇನಲ್ಲಿ ಹೊಸ ಸರ್ಕಾರ ರಚನೆಯಾಗುವವರೆಗೂ ಅದು ನಿಂತು ಹೋಯಿತು.

ಜುಲೈನಲ್ಲಿ ಒಂಬತ್ತು ಕಾರ್ಮಿಕ ಸಂಘಗಳು ಜುಲೈನಲ್ಲಿ ಹೊಸ ಕಾರ್ಮಿಕ ಸಚಿವ ಸಿ.ವಿ.ಗಣೇಶನ್ ಅವರೊಂದಿಗೆ ಅನೌಪಚಾರಿಕ ಸಭೆ ನಡೆಸಿದರು. “ನಾವು ಉದ್ಯೋಗಿಗಳಿಗೆ ಆಸನಗಳನ್ನು ಒದಗಿಸುವ ಉಪಕ್ರಮವನ್ನು ಒಳಗೊಂಡಂತೆ 14 ಪ್ರಸ್ತಾಪಗಳನ್ನು ಸಲ್ಲಿಸಿದ್ದೇವೆ” ಎಂದು ರಾಜ್ಯಸಭಾ ಸಂಸದ ಮತ್ತು ಡಿಎಂಕೆ ಪ್ರತಿನಿಧಿಸುವ ಕಾರ್ಮಿಕ ಪ್ರಗತಿಪರ ಒಕ್ಕೂಟದ ಪ್ರಧಾನ ಕಾರ್ಯದರ್ಶಿ ಎಂ ಷಣ್ಮುಗಂ ಹೇಳಿದರು.

ಹಲವು ವರ್ಷಗಳಿಂದ ಉದ್ಯೋಗಿಗಳ ಒಕ್ಕೂಟಗಳು ರಾಜ್ಯದಲ್ಲಿ ಪ್ರಕರಣದ ಆಧಾರದ ಮೇಲೆ ಹಕ್ಕುಗಳಿಗಾಗಿ ಹೋರಾಡುತ್ತಿವೆ ಎಂದು ಅವರು ಹೇಳಿದರು ಉದಾಹರಣೆಗೆ ತಮಿಳುನಾಡು ಕೈಮಗ್ಗ ನೇಕಾರರ ಸಹಕಾರ ಸಂಘದ ಶೋ ರೂಂಗಳಲ್ಲಿ, ಇದನ್ನು ಜನಪ್ರಿಯವಾಗಿ ಕೋ-ಆಪ್ಟೆಕ್ಸ್ ಎಂದು ಕರೆಯಲಾಗುತ್ತದೆ. “ಇದನ್ನು ರಾಜ್ಯಾದ್ಯಂತ ಸಾರ್ವತ್ರಿಕವಾಗಿ ಜಾರಿಗೊಳಿಸಬೇಕೆಂದು ನಾವು ಬಯಸಿದ್ದೇವೆ” ಎಂದು ಷಣ್ಮುಗಂ ಹೇಳಿದರು. ಎರಡು ತಿಂಗಳ ನಂತರ, ಮಸೂದೆಯನ್ನು ಅಂಗೀಕರಿಸಲಾಯಿತು.

ಮಸೂದೆಯು 2010 ರ ಜನಪ್ರಿಯ ಚಲನಚಿತ್ರ “ಅಂಞಾಡಿ ತೆರು” (ಮಾರ್ಕೆಟ್ ಸ್ಟ್ರೀಟ್) ನ ಸಂಭಾಷಣೆಗಳನ್ನು ಮರಳಿ ತಂದಿದೆ ಇದು “ಸೆಂಥಿಲ್ ಮುರುಗನ್ ಸ್ಟೋರ್ಸ್” ಎಂಬ ಜವಳಿ ಅಂಗಡಿಯಲ್ಲಿ ಕೆಲಸ ಮಾಡುವ ಕಾರ್ಮಿಕರ ಶೋಷಿತ ಜೀವನವನ್ನು ತೆರೆಯ ಮೇಲೆ ತೋರಿಸಿತ್ತು.

ನಿರ್ದೇಶಕ ವಸಂತ ಬಾಲನ್ ಅವರು ಒಂದು ರಾತ್ರಿ ರಂಗನಾಥನ್ ಬೀದಿಯನ್ನು (ರಂಗನಾಥನ್ ವೀದಿ)   ವೀಕ್ಷಿಸಿದರು ಮತ್ತು ಕಾರ್ಮಿಕರನ್ನು ಹೇಗೆ ನಡೆಸಿಕೊಳ್ಳುತ್ತಿದ್ದಾರೆ ಎಂಬುದಕ್ಕೆ ಸಾಕ್ಷಿಯಾಗಿದ್ದರು ಎಂದು ಹೇಳಿದರು. “ನಾನು ಎಂಟು ತಿಂಗಳು ಬೀದಿಯಲ್ಲಿರುವ ಲಾಡ್ಜ್‌ನಲ್ಲಿ ಉಳಿದು ಕೆಲಸಗಾರರನ್ನು ಕರೆತಂದು ಅವರ ಕಹಿ ಅನುಭವಗಳನ್ನು ನನ್ನೊಂದಿಗೆ ಹಂಚಿಕೊಂಡೆ. ಇದು ತನಿಖಾ ಪತ್ರಿಕೋದ್ಯಮದ ಕೆಲಸದಂತಿತ್ತು. ಏಕೆಂದರೆ ಅವರು ಮಾತನಾಡುತ್ತಿದ್ದಾರೆ ಎಂದು ಜನರಿಗೆ ತಿಳಿದಿದ್ದರೆ ಅವರನ್ನು ವಜಾ ಮಾಡಲಾಗುತ್ತಿತ್ತು. ಅವರಿಗೆ ಆಗ ಯಾವುದೇ ಬೆಂಬಲವಿರಲಿಲ್ಲ ಮತ್ತು ಈಗ ಬೆಂಬಲವಿಲ್ಲ. ಅವರಿಗೆ ಸ್ಟೂಲ್ ಅಥವಾ ಫ್ಯಾನ್ ಅಥವಾ ನೀರು ನೀಡುವಂತೆ ಸೂಚಿಸುವ ಕಾನೂನನ್ನು ಸರ್ಕಾರ ತರಬೇಕಾಗಿರುವುದು ವಿಷಾದಕರ. ಅವರನ್ನು ಗೌರವದಿಂದ ಕಾಣಬೇಕು – ಅದು ಚಿತ್ರದ ಉದ್ದೇಶವಾಗಿತ್ತು, ”ಎಂದು ವಸಂತ ಬಾಲನ್ ಹೇಳಿದರು.

ಹೆಸರು ಹೇಳಲು ಇಚ್ಛಿಸದ ತಮಿಳುನಾಡು ಕಾರ್ಮಿಕ ಇಲಾಖೆಯ ಹಿರಿಯ ಅಧಿಕಾರಿಯೊಬ್ಬರು ಕಳೆದ ವರ್ಷದ ಸಭೆಯ ಮಿನಿಟ್ಸ್ ಬಗ್ಗೆ ಮಾತನಾಡಿದ್ದು,”ರಾಜ್ಯ ಕಾರ್ಮಿಕ ಸಲಹಾ ಮಂಡಳಿಯು ಟ್ರೇಡ್ ಯೂನಿಯನ್‌ಗಳು ಮತ್ತು ಉದ್ಯೋಗಿ ಯೂನಿಯನ್‌ಗಳ ಪ್ರತಿನಿಧಿಗಳನ್ನು ಹೊಂದಿದೆ. ಎಲ್ಲಾ ಉದ್ಯೋಗಿಗಳಿಗೆ ಆಸನಗಳನ್ನು ಒದಗಿಸಬೇಕೆಂದು ಎಲ್ಲರೂ ಒಮ್ಮತದಿಂದ ಒಪ್ಪಿಕೊಂಡಿದ್ದಾರೆ. ಆದರೆ ಅದು ಆ ಹಂತದಿಂದ ಕದಲಲಿಲ್ಲ ಮತ್ತು ಹೊಸ ಸರ್ಕಾರವು ಅಧಿಕಾರ ವಹಿಸಿಕೊಂಡಾಗ ಅದು ಒಳ್ಳೆಯ ಉಪಕ್ರಮ ಎಂದು ಅವರು ಭಾವಿಸಿದರು. ಅದನ್ನು ಆದಷ್ಟು ಬೇಗ ಪರಿಚಯಿಸಬೇಕು. ಮಸೂದೆಯನ್ನು ಗೆಜೆಟ್‌ನಲ್ಲಿ ಸೂಚಿಸುವ ಮೂಲಕ ಕಾಯ್ದೆಯಾದ ನಂತರ, ಪ್ರತಿ ಜಿಲ್ಲೆಗಳ ಕಾರ್ಮಿಕ ನಿರೀಕ್ಷಕರು ಅದನ್ನು ಜಾರಿಗೊಳಿಸಲಾಗಿದೆಯೇ ಎಂದು ಪರಿಶೀಲಿಸಲು ಅಂಗಡಿಗಳನ್ನು ಪರೀಕ್ಷಿಸಲು ಪ್ರಾರಂಭಿಸುತ್ತಾರೆ ಎಂದು ಅಧಿಕಾರಿ ಹೇಳಿದರು.

ಇದನ್ನೂ ಓದಿ:ಸೇಡು ತೀರಿಸಿಕೊಳ್ಳಲು ಮತ್ತೆ ಬಂದ ಮಂಗ; 22 ಕಿ. ಮೀ ದೂರ ಬಿಟ್ಟು ಬಂದರೂ ಆಟೋ ಚಾಲಕನ ಮೇಲಿನ ದ್ವೇಷ ತೀರಿಲ್ಲ

(Workers stand up for the ‘right to sit’ After Kerala Tamil Nadu government bill that mandates seating facilities for shop workers)

Read Full Article

Click on your DTH Provider to Add TV9 Kannada