ಭ್ರಷ್ಟಾಚಾರ ನಿಗ್ರಹ: ವಚನ ಭ್ರಷ್ಟರಾದರೇ ಸಿದ್ದರಾಮಯ್ಯ?

ಕ್ರಿಮಿನಲ್ ಸ್ವರೂಪದ ಜಡತ್ವವನ್ನು ರೂಢಿಸಿಕೊಂಡಿರುವ ಆಡಳಿತ ವ್ಯವಸ್ಥೆಯ ಆಳಕ್ಕೆ ಪಾತಾಳ ಗರಡಿಯನ್ನು ಇಳಿಸಿ ಜಾಲಾಡದೆ, ಕ್ಯಾನ್ಸರ್ ಸ್ವರೂಪದ ಭ್ರಷ್ಟಾಚಾರದ ಗಡ್ಡೆಗೆ ಮೇಜರ್ ಸರ್ಜರಿ ಮಾಡದೆ ಮುಖ್ಯ ಮಂತ್ರಿಯವರು ಕೇವಲ ಮುಲಾಮು ಸವರುತ್ತಿದ್ದಾರೆ. ಎಚ್ಚರಿಕೆಯ ಸಂದೇಶವನ್ನು ರವಾನಿಸುವುದರಲ್ಲಿಯೇ ಕಾಲಹರಣ ಮಾಡುತ್ತಿದ್ದಾರೆ. ಸರ್ಕಾರೀ ಕಚೇರಿಗಳಲ್ಲಿ ಬಸವಣ್ಣನ ಸಂದೇಶಗಳನ್ನು ತಗುಲಿ ಹಾಕಿ ಬಸವಣ್ಣನನ್ನು ನಗೆಪಾಟಲಿಗೆ ಗುರಿ ಮಾಡಲು ಹೊರಟಿದ್ದಾರೆ.

ಭ್ರಷ್ಟಾಚಾರ ನಿಗ್ರಹ: ವಚನ ಭ್ರಷ್ಟರಾದರೇ ಸಿದ್ದರಾಮಯ್ಯ?
ಸಿಎಂ ಸಿದ್ದರಾಮಯ್ಯ (ಒಳಚಿತ್ರದಲ್ಲಿ ಲೇಖಕ ಸಿ. ರುದ್ರಪ್ಪ)
Follow us
TV9 Web
| Updated By: ಡಾ. ಭಾಸ್ಕರ ಹೆಗಡೆ

Updated on:Feb 24, 2024 | 5:53 PM

ಜನನಾಯಕ ಸಿದ್ದರಾಮಯ್ಯನವರಿಗೆ (Siddaramaiah) ರಾಜ್ಯದ ಜನರು ವಿಧಾನಸಭೆ ಚುನಾವಣೆಯಲ್ಲಿ ತಮ್ಮ ಅಖಂಡ ಬೆಂಬಲವನ್ನು ಧಾರೆ ಎರೆದಿದ್ದರು. ಕೆಲವು ಸರ್ಕಾರಿ ಅಧಿಕಾರಿಗಳು (Government Officers) ಮತ್ತು ನೌಕರರ ಭ್ರಷ್ಟಾಚಾರ (Corruption) ಮತ್ತು ಅಟ್ಟಹಾಸಗಳಿಂದ ನಲುಗಿ ಹೋಗಿದ್ದ ರಾಜ್ಯದ ಜನರು ಮುಖ್ಯಮಂತ್ರಿ ಸಿದ್ದರಾಮಯ್ಯನವರಿಂದ ದಿಟ್ಟ ನಿರ್ಧಾರಗಳನ್ನು ನಿರೀಕ್ಷಿದ್ದರು. ಇದನ್ನು ಸರಿಯಾಗಿಯೇ ಗ್ರಹಿಸಿದ್ದ ಮುಖ್ಯಮಂತ್ರಿಯವರು ಮೊದಲನೇ ವಿಧಾನ ಮಂಡಲದ ಜಂಟಿ ಅಧಿವೇಶನದಲ್ಲಿಯೇ ರಾಜ್ಯಪಾಲರ ಭಾಷಣದಲ್ಲಿ “ರಾಜ್ಯದಲ್ಲಿ ಭ್ರಷ್ಟಾಚಾರ ಸಾಂಸ್ಥಿಕರಣಗೊಂಡಿದ್ದು, ಅದರ ಮೂಲೋಚ್ಚಾಟನೆಗೆ ಆಡಳಿತಾತ್ಮಕ ಮತ್ತು ಶಾಸನಾತ್ಮಕ ಕ್ರಮಗಳನ್ನು ಸರ್ಕಾರ ಕೈಗೊಳ್ಳಲಿದೆ” ಎಂಬ ಭರವಸೆಯನ್ನು ನೀಡಿದ್ದರು.

ಸರ್ಕಾರೀಕಚೇರಿಗಳು ಜನಸಾಮಾನ್ಯರನ್ನು ಕಾಡಿಸುವ, ಪೀಡಿಸುವ ಮತ್ತು ಸುಲಿಗೆಯ ತಾಣವಾಗಿವೆ. ಕೆಲವು ಅಧಿಕಾರಿಗಳು ಮತ್ತು ನೌಕರರಿಗೆ ಕಾನೂನಿನ ಮತ್ತು ಸಮಾಜದ ಅಂಜಿಕೆಯೂ ಇಲ್ಲ. ಲೋಕಾಯುಕ್ತ ದಾಳಿಯಲ್ಲಿ ಬಯಲಾಗುವ ಬಂಗಾರದ ಆಭರಣಗಳು,ನೋಟಿನ ಕಂತೆಗಳು, ಐಷಾರಾಮಿ ಕಾರುಗಳು ಮತ್ತು ಬಂಗಲೆಗಳ ಚಿತ್ರಗಳನ್ನು ನೋಡಿದರೆ ಬೆಚ್ಚಿ ಬೀಳುವಂತಾಗುತ್ತದೆ. ಆಡಳಿತದ ಪ್ರತಿ ಹಂತಗಳಲ್ಲಿಯೂ ನಾನಾ ರೀತಿಯ ಮಾಫಿಯಾಗಳು ಸಕ್ರಿಯವಾಗಿವೆ. ಕೆಲವು ಅಧಿಕಾರಿಗಳು ಮತ್ತು ನೌಕರರ ಕಿರುಕುಳದಿಂದ ಜನರು ಕಂಗಾಲಾಗಿದ್ದಾರೆ. ಹಳ್ಳಿಗಳಲ್ಲಿ ಕೆಲವು ಹಿರಿಯರು “ಇವರಿಗಿಂತ ಬ್ರಿಟಿಷರೇ ವಾಸಿ..ಇವರ ವಂಶ ನಿರ್ವಂಶರಾಗಲಿ ..” ಎಂದು ಶಾಪ ಹಾಕುವುದನ್ನು ನೋಡುತ್ತೇವೆ. ಇತ್ತೀಚಿಗೆ ಮುಖ್ಯಮಂತ್ರಿಯವರ ಜನಸ್ಪಂದನ ಕಾರ್ಯಕ್ರಮದಲ್ಲಿ ರಾಜ್ಯಾದಂತ 20 ಸಾವಿರ ಜನರು ಭಾಗವಹಿಸಿದ್ದರು. ಅಂದರೆ ತಳ ಹಂತದಲ್ಲಿ ಜನರ ಸಮಸ್ಯೆಗಳಿಗೆ ಆಡಳಿತ ವ್ಯವಸ್ಥೆ ಸ್ಪಂದಿಸುತ್ತಿಲ್ಲ ಎಂದೇ ಇದರ ಅರ್ಥ..! “ರಾಜ್ಯದಲ್ಲಿ ಶೇ 70 ರಷ್ಟು ಅಧಿಕಾರಿಗಳು ಭ್ರಷ್ಟರು” ಎಂದು ಭೂ ಕಬಳಿಕೆ ನಿಗ್ರಹ ಕಾರ್ಯ ಪಡೆಯ ಅಧ್ಯಕರಾಗಿದ್ದ ವಿ.ಬಾಲಸುಬ್ರಮಣಿಯನ್ ಸಂದರ್ಶನವೊಂದರಲ್ಲಿ ಹೇಳಿದ್ದಾರೆ.

ಈ ಹೊತ್ತಿನ ಅತ್ಯಂತ ಬಲಾಢ್ಯ ನಾಯಕರಾಗಿರುವ ಸಿದ್ದರಾಮಯ್ಯನವರು ಮುಖ್ಯಮಂತ್ರಿಯವರಾಗಿ ತಮಗೆ ದತ್ತಕವಾಗಿರುವ ಧೀಶಕ್ತಿಯನ್ನು ಬಳಸಿ, ಕಾರ್ಯಾಂಗ ಅಥವಾ ಸರ್ಕಾರೀ ಕಚೇರಿಗಳಲ್ಲಿ ನೆಲೆಸಿರುವ ದುಷ್ಟ ಶಕ್ತಿಗಳನ್ನು ಉಚ್ಚಾಟಿಸಬಹುದು ಎನ್ನುವ ಅಪಾರವಾದ ನಿರೀಕ್ಷೆಯನ್ನು ಜನರು ಇಟ್ಟುಕೊಂಡಿದ್ದರು. ರಾಜ್ಯಪಾಲರು ಇತ್ತೀಚಿಗೆ ವಿಧಾನ ಮಂಡಲದಲ್ಲಿ ಎರಡನೇ ಭಾಷಣವನ್ನು ಓದಿದ್ದಾರೆ. ಆದರೆ ಸುಮಾರು ಎಂಟು ತಿಂಗಳ ಹಿಂದೆ ಮೊದಲನೇ ಭಾಷಣದಲ್ಲಿ ನೀಡಿದ್ದ “ಆಡಳಿತಾತ್ಮಕ ಮತ್ತು ಶಾಸನಾತ್ಮಕ ಕ್ರಮಗಳ” ಭರವಸೆಯನ್ನು ಮುಖ್ಯಮಂತ್ರಿಯವರು ಈಡೇರಿಸುವ ಯಾವ ಲಕ್ಷಣಗಳೂ ಕಂಡು ಬರುತ್ತಿಲ್ಲ.

ಸುಮಾರು ಮೂರು ವಾರಗಳ ಹಿಂದೆ ಸಂಪುಟ ಸಭೆಯಲ್ಲಿ ಬಾಕಿ ಇರುವ ಕಡತಗಳ ಸಮಸ್ಯೆಯತ್ತ ಮುಖ್ಯಮಂತ್ರಿಯವರು ಗಮನ ಹರಿಸಿದ್ದರು. ಒಟ್ಟು 1.47 ಲಕ್ಷ ಕಡತಗಳ ವಿಲೇವಾರಿ ಬಾಕಿಯಿದೆ ಎನ್ನುವ ಸಂಗತಿಯನ್ನು ಮುಖ್ಯ ಕಾರ್ಯದರ್ಶಿಯವರು ತಿಳಿಸಿದ್ದರು. ಆಗ ಮುಖ್ಯಮಂತ್ರಿಯವರು ಕಡತಗಳನ್ನು ಸಮರೋಪಾದಿಯಲ್ಲಿ ವಿಲೇವಾರಿ ಮಾಡುವಂತೆ ಕಟ್ಟುನಿಟ್ಟಿನ ಸೂಚನೆಯನ್ನು ನೀಡಿದ್ದರು. ಕಡತ ಬಾಕಿಯಂತಹ ಪ್ರಮುಖ ವಿಷಯದತ್ತ ಗಮನ ಹರಿಸಲು ದಕ್ಷತೆಗೆ ಹೆಸರುವಾಸಿಯಾಗಿರುವ ಮುಖ್ಯಮಂತ್ರಿಯವರಿಗೆ ತಾವು ಅಧಿಕಾರಕ್ಕೆ ಬಂದ ನಂತರ ಸುಮಾರು ಎಂಟು ತಿಂಗಳು ಬೇಕಾಯಿತು ಎನ್ನುವುದೇ ಒಂದು ಸೋಜಿಗದ ಸಂಗತಿ. ಆರ್. ಗುಂಡೂ ರಾವ್ ಅವರೇ ಈಗ ಮುಖ್ಯಮಂತ್ರಿಯಾಗಿದ್ದರೆ ಮೂರು ತಿಂಗಳೊಳಗೆ ವಿಧಾನ ಸೌಧದ ನಾಲ್ಕೂ ಗೇಟುಗಳನ್ನು ಬಂದ್ ಮಾಡಿ ಒಂದು ಬೃಹತ್ ಕಡತ ಯಜ್ಞ ಮಾಡಿ ಎಲ್ಲಾ ಫೈಲುಗಳನ್ನು ವಿಲೇವಾರಿ ಮಾಡಿಬಿಡುತ್ತಿದ್ದರು. ಅವರು ಎಂಬತ್ತರ ದಶಕದ ಆರಂಭದಲ್ಲಿ ಮುಖ್ಯ ಮಂತ್ರಿಯಾಗಿದ್ದಾಗ ಅವರ ಕಡತ ಯಜ್ಞ ಜನಪ್ರಿಯವಾಗಿತ್ತು. ಕಡತ ಯಜ್ಞದ ಸಂದರ್ಭದಲ್ಲಿ ಬ್ರೋಕರ್ ಗಳು ವಿಧಾನಸೌಧವನ್ನು ಪ್ರವೇಶ ಮಾಡದಂತೆ ಅವರು ನಿರ್ಬಂಧಿಸುತ್ತಿದ್ದರು. ಶಾಸಕರು ಕೂಡಾ ಮುಖ್ಯಮಂತ್ರಿ ಗುಂಡೂರಾವ್ ಅವರ ಪೂರ್ವಾನುಮತಿಯೊಂದಿಗೆ ವಿಧಾನ ಸೌಧವನ್ನು ಪ್ರವೇಶಿಸಬೇಕಿತ್ತು.

ಭ್ರಷ್ಟಾಚಾರದ ಆರೋಪಗಳನ್ನು ಎದುರಿಸುತ್ತಿರುವ ಅಧಿಕಾರಿಗಳ ಪ್ರಾಸಿಕ್ಯೂಷನ್ನಿಗೆ ಸರ್ಕಾರದ ಪೂರ್ವಾನುಮತಿಗೆ ಬಾಕಿ ಇರುವ ಕಡತಗಳನ್ನು ವಿಲೇವಾರಿ ಮಾಡುವಂತೆ ಲೋಕಾಯುಕ್ತರು ಇತ್ತೀಚಿಗೆ ಸರ್ಕಾರಕ್ಕೆ ಗಡುವು ವಿಧಿಸಿದ್ದರು. ಆಗ ಮುಖ್ಯಮಂತ್ರಿಯವರು ಎಚ್ಚೆತ್ತುಕೊಂಡು ಈ ದಿಸೆಯಲ್ಲಿ ಕೂಡಲೇ ಕಾರ್ಯ ಪ್ರವೃತ್ತರಾಗುವಂತೆ ಹಿರಿಯ ಅಧಿಕಾರಿಗಳಿಗೆ ಸೂಚಿಸಿದ್ದರು. ಒಬ್ಬ ದಕ್ಷ ಹಾಗೂ ನುರಿತ ಆಡಳಿತಗಾರರಾಗಿರುವ ಸಿದ್ದರಾಮಯ್ಯನವರು ಲೋಕಾಯುಕ್ತರು ಪತ್ರ ಬರೆಯುವವರೆಗೂ ಕಾಯಬೇಕಿತ್ತೇ?ನಾನು ಪದೇ ಪದೇ ಸಿದ್ದರಾಮಯ್ಯನವರು “ದಕ್ಷ ಆಡಳಿತಗಾರರು”ಎಂದು ಉಲ್ಲೇಖಿಸುತ್ತಿರುವುದಕ್ಕೆ ಕಾರಣವಿದೆ. ಸುಮಾರು 20 ವರ್ಷಗಳ ಹಿಂದೆ ಅಂದರೆ 2004 ರಲ್ಲಿ ಧರ್ಮಸಿಂಗ್ ಮುಖ್ಯಮಂತ್ರಿ ಮತ್ತು ಸಿದ್ದರಾಮಯ್ಯ ಉಪಮುಖ್ಯಮಂತ್ರಿಯಾಗಿದ್ದರು. ಅಂದು ಡಿಸಿ ಮತ್ತು ಸಿಇಓಗಳೊಂದಿಗೆ ಮೊದಲ ಸಭೆ. ಅಧಿಕಾರಿಗಳು ಆಯಾಯ ಜಿಲ್ಲೆಗಳ ಸ್ಥಿತಿ -ಗತಿಯನ್ನು ವಿವರಿಸಿದರು. ಒಬ್ಬ ಸಿಇಓ ನಮ್ಮ ಜಿಲ್ಲೆಯಲ್ಲಿ ಜಿಡಿಪಿ ದರ ವೃದ್ಧಿಯಾಗಿದೆ ಎಂದು ಹೇಳುತ್ತಿದ್ದಂತೆ ಸಿದ್ದರಾಮಯ್ಯಕೋಪದಿಂದ, ‘‘ನೀನು ದೊಡ್ಡ ಎಕನಾಮಿಸ್ಟ್ ರೀತಿ ಮಾತಾಡಬೇಡ; ನಿಮ್ಮ ಜಿಲ್ಲೆಯ ಮಳೆ ಬೆಳೆ ಸ್ಥಿತಿ ಗತಿ ಹೇಗಿದೆ? ರೈತರಿಗೆ ಬೀಜ, ಗೊಬ್ಬರ ಪೂರೈಸಿದ್ದೀಯಾ? ಜನರ ಪರಿಸ್ಥಿತಿ ಯಾವ ರೀತಿ ಇದೆ? ಎಲ್ಲರಿಗೂ ಪಡಿತರ / ಕುಡಿಯುವ ನೀರು ಪೂರೈಕೆಯಾಗುತ್ತಿದೆಯಾ? ಎಲ್ಲಾ ಜನ ಕಲ್ಯಾಣ ಕಾರ್ಯಕ್ರಮಗಳು ತಲುಪುತ್ತಿವೆಯೇ ಅನ್ನೋದನ್ನ ವಿವರಿಸಿ ಹೇಳು’’ ಎಂದು ಗದರಿಸಿದರು. ಧರ್ಮಸಿಂಗ್ ಸಮಾಧಾನ ಸ್ವಭಾವದವರಾಗಿದ್ದರಿಂದ ಆಗಿನ ಆಡಳಿತಕ್ಕೆ ಸ್ವಲ್ಪ ಬಿಗಿ ಬಂದಿದ್ದೇ ಖಡಕ್ ವ್ಯಕ್ತಿತ್ವದ ಸಿದ್ದರಾಮಯ್ಯನವರಿಂದ. ಅಧಿಕಾರಸ್ಥ ರಾಜಕೀಯ ನಾಯಕರು ದಕ್ಷರಾಗಿದ್ದರೆ ಮತ್ತು ನೈತಿಕವಾಗಿ ಗಟ್ಟಿಯಿದ್ದರೆ ಅಧಿಕಾರಿಗಳು ಹೇಗೆ ನಡೆದುಕೊಳ್ಳುತ್ತಾರೆ ಎನ್ನುವುದಕ್ಕೆ ಇನ್ನೊಂದು ಉದಾಹರಣೆ ಈ ರೀತಿಯಿದೆ: “ದೇವರಾಜ ಅರಸು ಸಂಪುಟದಲ್ಲಿ ಸಚಿವರಾಗಿದ್ದ ಎಚ್. ಎಂ. ಚನ್ನಬಸಪ್ಪನವರು ಡೀಸಿಗಳಿಗೆ ಫೋನ್ ಮಾಡಿದರೆ ಅವರು ಎದ್ದು ನಿಂತುಕೊಂಡು ಮಾತನಾಡುತ್ತಿದ್ದರಂತೆ”. ಇದನ್ನು ಒಮ್ಮೆ ಸದನದಲ್ಲಿ ಮಾಜಿ ಸ್ಪೀಕರ್ ರಮೇಶ್ ಕುಮಾರ್ ಅವರೇ ಉಲ್ಲೇಖಿಸಿದ್ದರು.

ಈಗ ಪ್ರಸ್ತುತ ವಿಷಯಕ್ಕೆ ಬರೋಣ. ಮುಖ್ಯಮಂತ್ರಿಯವರು ಮತ್ತು ಸಚಿವ ಸಂಪುಟ ಮನಸ್ಸು ಮಾಡಿದರೆ ಭ್ರಷ್ಟಾಚಾರದ ಆರೋಪ ಎದುರಿಸುತ್ತಿರುವ ಅಧಿಕಾರಿಗಳ ಪ್ರಾಷಿಕ್ಯೂಷನ್ನಿಗೆ ಸಕ್ಷಮ ಪ್ರಾಧಿಕಾರದ ಪೂರ್ವಾನುಮತಿ ಅಗತ್ಯವೆಂಬ ನಿರ್ಬಂಧವನ್ನೇ ರದ್ದು ಪಡಿಸಲು ಸಾಧ್ಯವಿದೆ ಎಂದು ಭೂ ಕಬಳಿಕೆ ನಿಗ್ರಹ ಕಾರ್ಯಪಡೆಯ ಅಧ್ಯಕ್ಷರಾಗಿದ್ದ ವಿ.ಬಾಲಸುಬ್ರಮಣಿಯನ್ ಸಂದರ್ಶನವೊಂದರಲ್ಲಿ ಅಭಿಪ್ರಾಯಪಟ್ಟಿದ್ದಾರೆ. “prior sanction is not required to prosecute a public servant ………..if the alleged acts do not form a part of his official duty..” ಎಂದು ಸುಪ್ರೀಂ ಕೋರ್ಟ್ ಜನವರಿ 17 ರಂದು ಸ್ಪಷ್ಟಪಡಿಸಿದೆ.” ಅಂದರೆ ಯಾವುದೇ ಅಧಿಕಾರಿಯ ತಪ್ಪುಗಳು ಅಥವಾ ಪ್ರಮಾದಗಳು ಅವರ ಕಾರ್ಯಭಾರದ ಅಥವಾ ಡ್ಯೂಟಿಯ ಭಾಗವಾಗಿದ್ದರೆ ಮಾತ್ರ ಪ್ರಾಸಿಕ್ಯೂಷನ್ನಿಗೆ ಪೂರ್ವಾನುಮತಿ ಅಗತ್ಯ.ಲಂಚ ಅಥವಾ ದುಡ್ಡು ತೆಗೆದುಕೊಳ್ಳುವುದು ಅವರ ಡ್ಯೂಟಿಯ ವ್ಯಾಪ್ತಿಗೆ ಬರುವುದಿಲ್ಲ. ಅದು ಡ್ಯೂಟಿಯಿಂದ ಹೊರಗಿನ ಕೃತ್ಯ. ಆದ್ದರಿಂದ ತನಿಖಾ ಸಂಸ್ಥೆಗಳು ಸರ್ಕಾರದ ಅನುಮತಿಗೆ ಕಾಯುವ ಅಗತ್ಯವಿಲ್ಲ ಎಂದು ವ್ಯಾಖ್ಯಾನಿಸುವ ಮೂಲಕ ಸರ್ಕಾರ ಈ ನಿರ್ಬಂಧವನ್ನು ರದ್ದುಪಡಿಸಲು ಸಾಧ್ಯವಿದೆ ಎಂದು ವಿ.ಬಾಲಸುಬ್ರಮಣಿಯನ್ ಅಭಿಪ್ರಾಯಪಡುತ್ತಾರೆ. ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ಪರಿಶುದ್ಧ ಆಡಳಿತ ನೀಡಬೇಕೆಂಬ ಕಾಳಜಿಯಿದ್ದರೆ ಈ ಪೂರ್ವಾನುಮತಿಯ ಪ್ರಹಸನವನ್ನು ಕೂಡಲೇ ನಿಲ್ಲಿಸಬೇಕಿತ್ತು.

ಕೇಂದ್ರ ಸರ್ಕಾರ 2014 ರಿಂದ ಇದುವರೆಗೆ 400 ಭ್ರಷ್ಟ ಮತ್ತು ಅದಕ್ಷ ಅಧಿಕಾರಿಗಳನ್ನು ಕಡ್ಡಾಯವಾಗಿ ನಿವೃತ್ತಿಗೊಳಿಸಿದೆ. ನಮ್ಮ ರಾಜ್ಯದಲ್ಲಿಯೂ ಬೊಕ್ಕಸಕ್ಕೆ ಮತ್ತು ಸಮಾಜಕ್ಕೆ ಭಾರವಾಗಿರುವ ಅಧಿಕಾರಿಗಳನ್ನು ಕೆಸಿಎಸ್ಆರ್ 285 ನೇ ಕಲಂ ಪ್ರಕಾರ ಕಡ್ಡಾಯವಾಗಿ ನಿವೃತ್ತಿಗೊಳಿಸಲು ಸಾಧ್ಯವಿದೆ. ಅದಕ್ಕೂ ಮೊದಲು ಕ್ರಿಮಿನಲ್ ಮತ್ತು ಭ್ರಷ್ಟತೆಯ ಪ್ರವೃತ್ತಿಯನ್ನು ಬೆಳೆಸಿಕೊಂಡು ಸಮಾಜಕ್ಕೆ ಕಂಟಕಪ್ರಾಯರಾಗುತ್ತಿರುವ ಅಧಿಕಾರಿಗಳನ್ನು ಪತ್ತೆ ಹಚ್ಚುವ ಕಾರ್ಯವನ್ನು ಈ ವೇಳೆಗಾಗಲೇ ಆರಂಭಿಸಬೇಕಿತ್ತು.

ಇನ್ನೂ ಒಂದು ಪ್ರಮುಖ ವಿಷಯವನ್ನೂ ಪ್ರಸ್ತಾಪಿಸಬೇಕು. ಅಧಿಕಾರಿಗಳು ಮತ್ತು ನೌಕರರು ಉತ್ಸಾಹದಿಂದ ಮತ್ತು ಉತ್ತಮ ಉದ್ದೇಶದೊಂದಿಗೆ ಕೆಲಸ ಮಾಡುವ ಭರದಲ್ಲಿ ಎಡವುದು ಸಹಜ. ಅದನ್ನು ಬೋನಾಫೈಡ್ ಎರರ್ ಅಥವಾ ಅಮಾಯಕ ತಪ್ಪು ಅಥವಾ ಕ್ಷಮಾರ್ಹ ತಪ್ಪು ಎನ್ನುತ್ತಾರೆ. ಆದರೆ ಕೆಲವು ಅಧಿಕಾರಿಗಳ ಗಂಭೀರ ಸ್ವರೂಪದ ಕೃತ್ಯಗಳಿಂದ ಬೊಕ್ಕಸಕ್ಕೆ ಭಾರಿ ಪ್ರಮಾಣದ ಹಾನಿ ಅಥವಾ ಸಾವು ನೋವು ಸಂಭವಿಸುತ್ತದೆ. ಅದೊಂದು ಕ್ರಿಮಿನಲ್ ನಿರ್ಲಕ್ಷ. ಅದರ ಹೊಣೆಯನ್ನು ಸರ್ಕಾರ ವಹಿಸಿಕೊಳ್ಳಬಾರದು.ಅದಕ್ಕೆ ನೇರವಾಗಿ ಆ ನಿರ್ದಿಷ್ಟ ಅಧಿಕಾರಿ ಅಥವಾ ಅಧಿಕಾರಿಗಳನ್ನೇ ಹೊಣೆಗಾರರನ್ನಾಗಿ ಮಾಡಬೇಕು. ಆದರೆ ಆಗುತ್ತಿರುವುದೇನು? ಅವರನ್ನು ಕೇವಲ ಅಮಾನತು ಮಾಡಿ ಸುಮ್ಮನಿದ್ದುಬಿಡುತ್ತಾರೆ. ಅಮಾನತು ಒಂದು ಶಿಕ್ಷೆಯೇ ಅಲ್ಲ. ಒಂದು ಉದಾಹರಣೆ: ಅತ್ತಿಬೆಲೆಯಲ್ಲಿ ನಾಲ್ಕು ತಿಂಗಳ ಹಿಂದೆ 17 ಯುವಕರು ಭೀಕರ ಪಟಾಕಿ ದುರಂತದಲ್ಲಿ ಜೀವಂತವಾಗಿ ದಹನವಾಗಿದ್ದರು.ಅಲ್ಲಿಗೆ ಭೇಟಿ ನೀಡಿದ್ದ ಮುಖ್ಯಮಂತ್ರಿಯವರು ಮತ್ತು ಗೃಹ ಸಚಿವರು ಮೇಲ್ನೋಟಕ್ಕೆ ಅಧಿಕಾರಿಗಳ ವೈಫಲ್ಯವನ್ನು ಗುರ್ತಿಸಿದ್ದರು. ಅಂದರೆ ಭಾರೀ ಪ್ರಮಾಣದ ಸಾವು ನೋವಿಗೆ ಅಧಿಕಾರಿಗಳು ಕೂಡ ಪರೋಕ್ಷವಾಗಿ ಕಾರಣ.ಆದ್ದರಿಂದ ಉದ್ದೇಶಪೂರ್ವಕವಲ್ಲದ ಕೊಲೆ ಪ್ರಕರಣವನ್ನು ಅವರ ವಿರುದ್ಧ ದಾಖಲಿಸಬೇಕಿತ್ತು. ಆದರೆ ಅವರನ್ನು ಕೇವಲ ಅಮಾನತು ಮಾಡಲಾಗಿದೆ. ಕ್ರಿಮಿನಲ್ ನಿರ್ಲಕ್ಷ ಪ್ರಕರಣಗಳಲ್ಲಿ ಅಧಿಕಾರಿಗಳ ವಿರುದ್ಧ ಎಫ್​ಐಆರ್ ದಾಖಲಿಸುವುದನ್ನು ಮುಖ್ಯಮಂತ್ರಿಯವರು ಕಡ್ಡಾಯಗೊಳಿಸಬೇಕಿತ್ತು.

ದೇಶದಲ್ಲಿ ಉದ್ಯೋಗ ಭದ್ರತೆ ಇರುವುದು ಸರ್ಕಾರೀ ಅಧಿಕಾರಿಗಳು ಮತ್ತು ನೌಕರರಿಗೆ ಮಾತ್ರ.ಸರ್ಕಾರಗಳು ಮತ್ತು ರಾಜಕೀಯ ಆಡಳಿತಗಾರರು ಬದಲಾಗುತ್ತಾರೆ.ಆದರೆ ದೇಶವನ್ನು ನಿರ್ಮಾಣ ಮಾಡಲು ಭದ್ರವಾದ ಮತ್ತು ಶಾಶ್ವತವಾದ ಅಧಿಕಾರಶಾಹಿ ಅಗತ್ಯ ಎಂದು ನಮ್ಮ ಪೂರ್ವಿಕರು ಭಾವಿಸಿದ್ದರು. ಆದರೆ ಈಗ ಅವರ ಉದ್ಯೋಗ ಭದ್ರತೆಯೇ ದೇಶಕ್ಕೆ ಒಂದು ಶಾಪವಾಗಿದೆ. ಕೆಲಸ ಮಾಡದಿದ್ದರೂ ಪ್ರತಿ ತಿಂಗಳು ಸಂಬಳ ಬರುತ್ತದೆ ಎಂಬ ಧೋರಣೆಯೇ ಆಡಳಿತ ವ್ಯವಸ್ಥೆಯಲ್ಲಿ ಅರಾಜಕತೆಗೆ ಕಾರಣವಾಗಿದೆ. ಅದರ ಬದಲು ಕಾರ್ಪೊರೇಟ್ ಕ್ಷೇತ್ರದಂತೆ ಸರ್ಕಾರೀ ಅಧಿಕಾರಿಗಳು ಮತ್ತು ನೌಕರರಿಗೂ ಗುತ್ತಿಗೆ ಪದ್ದತಿಯನ್ನು ತರುವುದು ಸೂಕ್ತ. ಅವರ ಕಾರ್ಯಕ್ಷಮತೆಗೆ ಅನುಗುಣವಾಗಿ ಪ್ರತಿ ಮೂರು ವರ್ಷಗಳಿಗೊಮ್ಮೆ ಅವರ ಉದ್ಯೋಗದ ಕರಾರನ್ನು ನವೀಕರಿಸಬಹುದು. ಹೊಸ ಹೊಸ ತಂತ್ರಜ್ಞಾನಗಳ ಅವಿಷ್ಕಾರದಿಂದಾಗಿ ಆಡಳಿತ ಯಂತ್ರದ ನಿರಂತರತೆಗೆ ಯಾವುದೇ ಧಕ್ಕೆಯಾಗುವುದಿಲ್ಲ. ಇದಕ್ಕೆ ಸಂವಿಧಾನದ ತಿದ್ದುಪಡಿಯ ಅಗತ್ಯವಿದೆ.ಇದರ ಸಾಧಕ ಬಾಧಕ ಗಳ ಬಗ್ಗೆ ದೇಶದ ವಿರೋಧಿ ರಂಗದ ರಾಷ್ಟ್ರೀಯ ನಾಯಕರೂ ಆಗಿರುವ ಸಿದ್ದರಾಮಯ್ಯನವರು ಒಂದು ರಾಷ್ಟ್ರೀಯ ಚರ್ಚೆಗೆ ಕರೆ ನೀಡಬೇಕಿದೆ. ರಾಜ್ಯದ ಮುಖ್ಯ ಕಾರ್ಯದರ್ಶಿಗಳಾಗಿ ನಿವೃತ್ತರಾಗುವ ಕೆಲವು ಹಿರಿಯ ಐಎಎಸ್ ಅಧಿಕಾರಿಗಳು ಕೂಡ ಏಳೇಳು ಜನ್ಮಕ್ಕಾಗುವಷ್ಟು ಅಕ್ರಮ ಸಂಪತ್ತನ್ನು ಭ್ರಷ್ಟಾಚಾರದ ಮೂಲಕ ಕಬಳಿಸುತ್ತಿದ್ದಾರೆ ಎಂಬ ಆತಂಕವನ್ನು ನಿವೃತ್ತ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ವಿ. ಬಾಲಸುಬ್ರಮಣಿಯನ್ ‘ಕಲ್ಯಾಣ ಕೆಡುವ ಹಾದಿ’ ಎಂಬ ತಮ್ಮ ಕೃತಿಯಲ್ಲಿ ವ್ಯಕ್ತಪಡಿಸಿದ್ದಾರೆ. ರಾಜ್ಯದ ಕೆಲವು ಐಎಎಸ್ ಅಧಿಕಾರಿಗಳಿಗೆ ಹೈಕೋರ್ಟ್ ಕೂಡ ಈ ಹಿಂದೆ ಛೀಮಾರಿ ಹಾಕಿದೆ. ಕೆಲವು ಐಎಎಸ್ ಅಧಿಕಾರಿಗಳು ನಿವೃತ್ತರಾಗುವ ವೇಳೆಗೆ ಕನಿಷ್ಠ 500 ಕೋಟಿ ರೂ.ಬೆಲೆ ಬಾಳುತ್ತಾರೆ ಎಂದು ಮಾಜಿ ಶಾಸಕ ಸಾರಾ ಮಹೇಶ್ ಸದನದಲ್ಲಿಯೇ ಆರೋಪಿಸಿದ್ದರು.ಆದರೆ ಐಎಎಸ್, ಐಪಿಎಸ್ ಅಧಿಕಾರಿಗಳನ್ನು ವಜಾ ಮಾಡುವ ಅಧಿಕಾರ ರಾಜ್ಯಗಳಿಗೆ ಇಲ್ಲ. ಅವರಿಗೆ ಸಾಂವಿಧಾನಿಕ ರಕ್ಷಣೆಯಿದೆ.ಅವರ ವಿರುದ್ಧ ಕ್ರಮ ಕೈಗೊಳ್ಳುವ ಅಧಿಕಾರ ಆಯಾಯ ರಾಜ್ಯಗಳಿಗೆ ದೊರೆಯುವಂತೆ ಸೂಕ್ತ ಸಂವಿಧಾನ ತಿದ್ದುಪಡಿ ಕಾರ್ಯ ಸಾಧ್ಯವೇ?-ಇಂತಹ ಒಂದು ರಾಷ್ಟ್ರೀಯ ಚರ್ಚೆಗೆ ಕರೆ ನೀಡುವ ಬಗ್ಗೆ ಮುಖ್ಯಮಂತ್ರಿಗಳು ಪರಿಶೀಲಿಸಬಹುದು.

ಕ್ರಿಮಿನಲ್ ಸ್ವರೂಪದ ಜಡತ್ವವನ್ನು ರೂಢಿಸಿಕೊಂಡಿರುವ ಆಡಳಿತ ವ್ಯವಸ್ಥೆಯ ಆಳಕ್ಕೆ ಪಾತಾಳ ಗರಡಿಯನ್ನು ಇಳಿಸಿ ಜಾಲಾಡದೆ, ಕ್ಯಾನ್ಸರ್ ಸ್ವರೂಪದ ಭ್ರಷ್ಟಾಚಾರದ ಗಡ್ಡೆಗೆ ಮೇಜರ್ ಸರ್ಜರಿ ಮಾಡದೆ ಮುಖ್ಯ ಮಂತ್ರಿಯವರು ಕೇವಲ ಮುಲಾಮು ಸವರುತ್ತಿದ್ದಾರೆ. ಕೇವಲ ಮಾತಿನ ಚಾಟಿ ಬೀಸುವುದರಲ್ಲೇ ಎಚ್ಚರಿಕೆಯ ಸಂದೇಶವನ್ನು ರವಾನಿಸುವುದರಲ್ಲಿಯೇ ಕಾಲಹರಣ ಮಾಡುತ್ತಿದ್ದಾರೆ. ಗೊಂಡಾರಣ್ಯದಂತಿರುವ ಸರ್ಕಾರೀ ಕಚೇರಿಗಳಲ್ಲಿ ಬಸವಣ್ಣನ ಸಂದೇಶಗಳನ್ನು ತಗುಲಿ ಹಾಕಿ ಬಸವಣ್ಣನನ್ನು ನಗೆಪಾಟಲಿಗೆ ಗುರಿ ಮಾಡಲು ಮುಖ್ಯಮಂತ್ರಿಯವರು ಹೊರಟಿದ್ದಾರೆ.

ಇದನ್ನೂ ಓದಿ: ನಮ್ಮ ತೆರಿಗೆ ನಮ್ಮ ಹಕ್ಕು ಅಭಿಯಾನ ಓಕೆ: ಆಗದಿರಲಿ ಭಾರತದ ಸಮಗ್ರತೆಗೆ ಧಕ್ಕೆ

ಅವರು ಭ್ರಷ್ಟಾಚಾರದ ಮೂಲೋಚ್ಚಾಟನೆಗೆ ಆಡಳಿತಾತ್ಮಕ ಮತ್ತು ಶಾಸನಾತ್ಮಕ ಕ್ರಮಗಳ ಭರವಸೆಯನ್ನು ನೀಡಿ ಮಾತಿಗೆ ತಪ್ಪಿದ್ದಾರೆ. ವಚನ ಭ್ರಷ್ಟರಾಗಿದ್ದಾರೆ. ಅವರ ಮೇಲೆ ಅಪಾರವಾದ ವಿಶ್ವಾಸವನ್ನು ಇಟ್ಟುಕೊಂಡಿದ್ದವರಿಗೆ ಭ್ರಮನಿರಸನವಾಗಿದೆ.

ಒಂದು ಸಂಗತಿ ನೆನಪಾಗುತ್ತಿದೆ. ಸೊರಬದಲ್ಲಿ ಐಬಿ ಕಟ್ಟಡ ಎತ್ತರದಲ್ಲಿತ್ತು. ಅದನ್ನು ಪ್ರತಿನಿಧಿಸುತ್ತಿದ್ದ ಎಸ್. ಬಂಗಾರಪ್ಪನವರು ಆಗಾಗ ಒಂದು ಒಡ್ಡೋಲಗದಂತಹ ಸಭೆ ಮಾಡುತ್ತಿದ್ದರು. ಎಡಭಾಗದಲ್ಲಿ ನೂರಾರು ಗ್ರಾಮಸ್ಥರು ಬಲ ಭಾಗದಲ್ಲಿ ಅಧಿಕಾರಿಗಳು ಕುಳಿತುಕೊಳ್ಳುತ್ತಿದ್ದರು.ಗ್ರಾಮಸ್ಥರು ದೂರುಗಳನ್ನು ಹೇಳುತ್ತಿದ್ದಂತೆ ಬಂಗಾರಪ್ಪನವರು ಸಂಬಂಧಿಸಿದ ಅಧಿಕಾರಿಯನ್ನು ಎದ್ದು ನಿಲ್ಲಿಸಿ ಆತನಿಗೆ ಹಿಗ್ಗಾ ಮುಗ್ಗಾ ಬಯ್ಯುತ್ತಿದ್ದರು. ಸಾರ್ವಜನಿಕವಾಗಿ ಅವಮಾನ ಮಾಡುತ್ತಿದ್ದರು. ಸಭೆಯ ನಂತರ ಜನರು ನೋಡಿ ನಮ್ಮ ಸಾಹೇಬರು ಅವರಿಗೆ ಹೇಗೆ ಚಳಿ ಬಿಡಿಸಿದರು ಎಂದು ಹೊಗಳುತ್ತಾ ಊರಿಗೆ ಮರಳುತ್ತಿದ್ದರು.

ಆದ್ದರಿಂದ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಆರು ಲಕ್ಷ ಸರ್ಕಾರೀ ಅಧಿಕಾರಿಗಳು ಮತ್ತು ನೌಕರರನ್ನು ಹದ್ದುಬಸ್ತಿನಲ್ಲಿ ಇಟ್ಟರೆ ಆರು ಕೋಟಿ ಜನರು ಅವರನ್ನು ಮೆಚ್ಚುತ್ತಾರೆ.

ಆಡಳಿತ ಯಂತ್ರದ ಶುದ್ಧೀಕರಣವೆಂಬ ಒಂದು ಸಂಪೂರ್ಣ ಕ್ರಾಂತಿಯ ಕಹಳೆಯನ್ನು ಮೊಳಗಿಸಲು ಇದು ಸಕಾಲ. ಈ ಮೂಲಕ ಅವರು ಮುಂದಿನ ಪೀಳಿಗೆಗೆ ಒಳ್ಳೆಯದನ್ನು ಬಿಟ್ಟು ಹೋಗಲು ಮತ್ತು ಒಬ್ಬ ನಿಜವಾದ ಮುತ್ಸದ್ದಿಯಾಗಲು ಸಾಧ್ಯ..!

ಲೇಖನ: ಸಿ. ರುದ್ರಪ್ಪ

ಇನ್ನಷ್ಟು ಅಭಿಮತ ಲೇಖನಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 12:56 pm, Sat, 24 February 24

ಹೆಚ್​ಎಂಪಿ ವೈರಸ್ ವಿಷಯದಲ್ಲಿ ನಮ್ಮ ಸರ್ಕಾರ ಅಲರ್ಟ್ ಆಗಿದೆ: ಶಿವಕುಮಾರ್
ಹೆಚ್​ಎಂಪಿ ವೈರಸ್ ವಿಷಯದಲ್ಲಿ ನಮ್ಮ ಸರ್ಕಾರ ಅಲರ್ಟ್ ಆಗಿದೆ: ಶಿವಕುಮಾರ್
ತನ್ನ ತಂದೆ ಬಗ್ಗೆ ಮಾತಾಡಿದ ಬಿಜೆಪಿ ನಾಯಕನ ಹೇಳಿಕೆಗೆ ಕಣ್ಣೀರು ಹಾಕಿದ ಅತಿಶಿ
ತನ್ನ ತಂದೆ ಬಗ್ಗೆ ಮಾತಾಡಿದ ಬಿಜೆಪಿ ನಾಯಕನ ಹೇಳಿಕೆಗೆ ಕಣ್ಣೀರು ಹಾಕಿದ ಅತಿಶಿ
ರಾಮಚಂದ್ರಪ್ಪನಿಂದ ಪೀಡಿತ ಮತ್ತೊಬ್ಬ ಮಹಿಳೆ ತನ್ನ ವೇದನೆ ಹೇಳಿಕೊಂಡಿದ್ದಾರೆ
ರಾಮಚಂದ್ರಪ್ಪನಿಂದ ಪೀಡಿತ ಮತ್ತೊಬ್ಬ ಮಹಿಳೆ ತನ್ನ ವೇದನೆ ಹೇಳಿಕೊಂಡಿದ್ದಾರೆ
ಹೆಚ್ಎಂಪಿವಿ 2001ರಿಂದ ಭಾರತದಲ್ಲಿದೆ, ನಿಶ್ಶಕ್ತರು ಇದರ ಟಾರ್ಗೆಟ್: ದಿನೇಶ್
ಹೆಚ್ಎಂಪಿವಿ 2001ರಿಂದ ಭಾರತದಲ್ಲಿದೆ, ನಿಶ್ಶಕ್ತರು ಇದರ ಟಾರ್ಗೆಟ್: ದಿನೇಶ್
ಹೆಚ್ಎಂಪಿ ವೈರಸ್ ಯಾವ ವೇರಿಯಂಟ್ ಅಂತ ನಾನು ಹೇಳಲಾಗಲ್ಲ: ಅಶ್ವಥ್ ನಾರಾಯಣ
ಹೆಚ್ಎಂಪಿ ವೈರಸ್ ಯಾವ ವೇರಿಯಂಟ್ ಅಂತ ನಾನು ಹೇಳಲಾಗಲ್ಲ: ಅಶ್ವಥ್ ನಾರಾಯಣ
ಸಂತೋಷ್ ಲಾಡ್ ತಮ್ಮ ಪಟಾಲಂನೊಂದಿಗೆ ಅಸ್ಪತ್ರೆಗೆ ಬಂದಿದ್ದು ಸರಿಯಲ್ಲ
ಸಂತೋಷ್ ಲಾಡ್ ತಮ್ಮ ಪಟಾಲಂನೊಂದಿಗೆ ಅಸ್ಪತ್ರೆಗೆ ಬಂದಿದ್ದು ಸರಿಯಲ್ಲ
ಎನ್ಕೌಂಟರ್ ನಡೆದ ಬಳಿಕ ಸಾಕಷ್ಟು ಬದಲಾವಣೆ ಆಗಿದೆ: ನಕ್ಸಲ್ ಸುಂದರಿಯ ಸಂಬಂಧಿ
ಎನ್ಕೌಂಟರ್ ನಡೆದ ಬಳಿಕ ಸಾಕಷ್ಟು ಬದಲಾವಣೆ ಆಗಿದೆ: ನಕ್ಸಲ್ ಸುಂದರಿಯ ಸಂಬಂಧಿ
ನಿಯಂತ್ರಣ ಕಳೆದುಕೊಂಡು ರಸ್ತೆಯ ಬದಿಯಲ್ಲಿ ಕುಳಿತ ಐವರ ಮೇಲೆ ಹರಿದ ಕಾರು
ನಿಯಂತ್ರಣ ಕಳೆದುಕೊಂಡು ರಸ್ತೆಯ ಬದಿಯಲ್ಲಿ ಕುಳಿತ ಐವರ ಮೇಲೆ ಹರಿದ ಕಾರು
ಆನೇಕಲ್: ಸಿಲಿಂಡರ್ ಸ್ಫೋಟ ತೀವ್ರತೆಗೆ ಮನೆ ಗೋಡೆ ಕಿಟಕಿ ಛಿದ್ರ, ಇಬ್ಬಗೆ ಗಾಯ
ಆನೇಕಲ್: ಸಿಲಿಂಡರ್ ಸ್ಫೋಟ ತೀವ್ರತೆಗೆ ಮನೆ ಗೋಡೆ ಕಿಟಕಿ ಛಿದ್ರ, ಇಬ್ಬಗೆ ಗಾಯ
ನಾ ಡಿಸೋಜ ಅಂತಿಮ ದರ್ಶನ, ಅಂತ್ಯಕ್ರಿಯೆ ಬಗ್ಗೆ ಪುತ್ರ ನವೀನ್ ಮಾಹಿತಿ
ನಾ ಡಿಸೋಜ ಅಂತಿಮ ದರ್ಶನ, ಅಂತ್ಯಕ್ರಿಯೆ ಬಗ್ಗೆ ಪುತ್ರ ನವೀನ್ ಮಾಹಿತಿ