ಡಿಆರ್ಡಿಒದಿಂದ 70 ಟನ್ ಕ್ಷಿಪಣಿ ವ್ಯವಸ್ಥೆ: ರಕ್ಷಣಾ ಬತ್ತಳಿಕೆಗೆ ಸೇರ್ಪಡೆಯಾಗಲಿದೆಯೇ ಅಗ್ನಿ-VI?
ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆಯು (DRDO) 70 ಟನ್ನ ಕ್ಯಾನಿಸ್ಟರೈಸ್ಡ್ ಮಿಸೈಲ್ ಸಿಸ್ಟಂ (ಕ್ಷಿಪಣಿ ಉಡಾವಣೆಗೆ ಸಂಬಂಧಿಸಿದ ಒಂದು ವ್ಯವಸ್ಥೆ) ಅನ್ನು ಪರಿಚಯಿಸಿರುವುದು ಹಲವು ಪ್ರಶ್ನೆಗಳನ್ನು ಹುಟ್ಟುಹಾಕಿದೆ. ಬಹುಶಃ ಈ ವ್ಯವಸ್ಥೆಯು ‘ಅಗ್ನಿ-V ಎಂಕೆ-2’ ಅಥವಾ ‘ಅಗ್ನಿ-VI ಇಂಟರ್ ಕಾಂಟಿನೆಂಟಲ್ ಬಾಲಿಸ್ಟಿಕ್ ಮಿಸೈಲ್ಗಾಗಿ (ಐಸಿಬಿಎಂ)’ ಅಭಿವೃದ್ಧಿಪಡಿಸಿದ್ದಾಗಿರಬಹುದು.
ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆಯು (DRDO) 70 ಟನ್ನ ಕ್ಯಾನಿಸ್ಟರೈಸ್ಡ್ ಮಿಸೈಲ್ ಸಿಸ್ಟಂ (ಕ್ಷಿಪಣಿ ಉಡಾವಣೆಗೆ ಸಂಬಂಧಿಸಿದ ಒಂದು ವ್ಯವಸ್ಥೆ) ಅನ್ನು ಪರಿಚಯಿಸಿರುವುದು ಹಲವು ಪ್ರಶ್ನೆಗಳನ್ನು ಹುಟ್ಟುಹಾಕಿದೆ. ಬಹುಶಃ ಈ ವ್ಯವಸ್ಥೆಯು ‘ಅಗ್ನಿ-V ಎಂಕೆ-2’ ಅಥವಾ ‘ಅಗ್ನಿ-VI ಇಂಟರ್ ಕಾಂಟಿನೆಂಟಲ್ ಬಾಲಿಸ್ಟಿಕ್ ಮಿಸೈಲ್ಗಾಗಿ (ಐಸಿಬಿಎಂ)’ ಅಭಿವೃದ್ಧಿಪಡಿಸಿದ್ದಾಗಿರಬಹುದು.
‘ಕ್ಯಾನಿಸ್ಟರ್ ಮಿಸೈಲ್ ಸಿಸ್ಟಂ’ ಎಂಬುದು ಒಂದು ಕ್ಷಿಪಣಿ ವ್ಯವಸ್ಥೆ. ಇದರಲ್ಲಿ ಮಿಸೈಲ್, ಲಾಂಚರ್ ಹಾಗೂ ವಾರ್ಹೆಡ್ ಇರುತ್ತವೆ. ಲಾಂಚರ್ ಒಳಗೆ ಮಿಸೈಲ್ ಭದ್ರವಾಗಿದ್ದು, ತುದಿಯಲ್ಲಿ ವಾರ್ಹೆಡ್ ಇರುತ್ತದೆ. ಇದನ್ನು ಸರಳವಾಗಿ ಅರ್ಥೈಸಲು ಪೆನ್ನು, ರಿಫಿಲ್ ಹಾಗೂ ನಿಬ್ ಅನ್ನು ಉದಾಹರಣೆಯಾಗಿ ತೆಗೆದುಕೊಳ್ಳಬಹುದು! ಇದರಲ್ಲಿ ಪೆನ್ನಿನ ಹೊರಮೈ ಕ್ಯಾನಿಸ್ಟರ್ ಆದರೆ ರಿಫಿಲ್ ಮಿಸೈಲ್ ಎನ್ನಬಹುದು. ನಿಬ್ ಅನ್ನು ಸಿಡಿತಲೆ ಎನ್ನಬಹುದು. ಇದೀಗ 70 ಟನ್ನ ಕ್ಯಾನಿಸ್ಟರೈಸ್ಡ್ ಮಿಸೈಲ್ ಸಿಸ್ಟಂ ಅನ್ನು ಅಭಿವೃದ್ಧಿಪಡಿಸಿರುವುದು ಅಗ್ನಿ- VI ಮಿಸೈಲ್ ಅಭಿವೃದ್ಧಿಪಡಿಸುತ್ತಿರುವುದರ ಸೂಚಕವೇ ಎಂಬ ಪ್ರಶ್ನೆ ಮೂಡಿದೆ.
ಅಗ್ನಿ-V ಎಂಕೆ-2 ಕ್ಷಿಪಣಿಯು ಮೂಲ ಅಗ್ನಿ-V ಐಸಿಬಿಎಂ ಗಿಂತ ಸಣ್ಣದು, ಸುಧಾರಿತವಾಗಿದೆ. ಹೆಚ್ಚು ದೂರದ ಗುರಿಯನ್ನು ತಲುಪುವ ಉದ್ದೇಶದಿಂದ ಕ್ಷಿಪಣಿಯಲ್ಲಿ ಈ ಬದಲಾವಣೆಗಳನ್ನು ಮಾಡಲಾಗಿದೆ. ಇದರಲ್ಲಿ, ಪೇಲೋಡ್ ಭಾರವನ್ನು 50-55 ಟನ್ಗಳಿಂದ 40-45 ಟನ್ಗಳಿಗೆ ಇಳಿಕೆ ಮಾಡಲಾಗಿದೆ. ಇದರ ಪ್ರಯೋಜನವೆಂದರೆ, 70 ಟನ್ ತೂಕದ ಅಥವಾ 60-65 ಟನ್ ತೂಕದ ಲಾಂಚರ್ ಇದ್ದರೆ ಸಾಕಾಗುತ್ತದೆ.
ಈ ಅಂದಾಜಿನ ಪ್ರಕಾರ, 70 ಟನ್ ಕ್ಯಾನಿಸ್ಟರೈಸ್ಡ್ ಮಿಸೈಲ್ ಸಿಸ್ಟಂ ಅನ್ನು ಅಗ್ನಿ- VI ಐಸಿಬಿಎಂ ಬಳಕೆಗಾಗಿ ಅಭಿವೃದ್ಧಿಪಡಿಸಿರುವ ಸಾಧ್ಯತೆ ಹೆಚ್ಚಿದೆ. ಅಗ್ನಿ- VI ಕ್ಷಿಪಣಿಯು 10,000 – 12,000 ಕಿಲೋಮೀಟರ್ ಕ್ರಮಿಸಬಲ್ಲ ಸಾಮರ್ಥ್ಯದ್ದಾಗಿದೆ ಎಂದು ಅಂದಾಜಿಸಲಾಗಿದೆ. ಇದು ಭಾರತದ ರಕ್ಷಣಾ ಕ್ಷೇತ್ರದ ಬಲ ಹೆಚ್ಚಿಸಬಲ್ಲದ್ದಾಗಿದೆ. ಆದರೂ, ಡಿಆರ್ಡಿಒ ಅಥವಾ ಸರ್ಕಾರ ಅಗ್ನಿ- VI ರ ಕುರಿತ ನಿಖರ ಮಾಹಿತಿಯನ್ನು ಯಾಕೆ ರಹಸ್ಯವಾಗಿಡುತ್ತಿದೆ ಎಂಬುದೇ ಪ್ರಶ್ನೆಯಾಗಿದೆ.
ಮಾಹಿತಿಯನ್ನು ರಹಸ್ಯವಾಗಿಡುವ ಮೂಲಕ ಇತರ ದೇಶಗಳನ್ನು ಗೊಂದಲಕ್ಕೀಡು ಮಾಡುವುದು ಉದ್ದೇಶವಾಗಿದ್ದರೂ ಇರಬಹುದು. ಕ್ಷಿಪಣಿಯ ಸಾಮರ್ಥ್ಯದ ಬಗ್ಗೆ ಪಾಶ್ಚಿಮಾತ್ಯ ದೇಶಗಳಿಂದ ಆಕ್ಷೇಪ ವ್ಯಕ್ತವಾಗಬಹುದು ಅಥವಾ ರಾಜತಾಂತ್ರಿಕ ಸಮಸ್ಯೆ ಉದ್ಭವಿಸಬಹುದು ಎಂಬ ಕಾರಣಕ್ಕೆ ಸರ್ಕಾರ ಜಾಗರೂಕತೆಯ ಹೆಜ್ಜೆ ಇಡುತ್ತಿದ್ದರೂ ಇರಬಹುದು.
70 ಟನ್ನ ಕ್ಯಾನಿಸ್ಟರೈಸ್ಡ್ ಮಿಸೈಲ್ ಸಿಸ್ಟಂಗೆ ಸಂಬಂಧಿಸಿದ ಫೋಟೊವೊಂದನ್ನು ಇತ್ತೀಚೆಗೆ ಬಿಡುಗಡೆ ಮಾಡಲಾಗಿದೆ. ಆದರೆ, ಚಿತ್ರದಲ್ಲಿರುವ ಕ್ಯಾನಿಸ್ಟರ್ನಲ್ಲಿ ನಕಲಿ ಕ್ಷಿಪಣಿಯನ್ನು ತೋರಿಸಲಾಗಿದೆ. ಇದು, ಐಸಿಬಿಎಂ ಲಾಂಚರ್ಗಳಿಗೆ ಭಾರತವು ರಹಸ್ಯ ತಾಣಗಳನ್ನು ಹೊಂದಿದೆಯೇ ಎಂಬ ಪ್ರಶ್ನೆಯನ್ನು ಹುಟ್ಟುಹಾಕಿದೆ.
ಈಗಾಗಲೇ ಇರುವ ಸಂಚಾರಿ ಉಡಾವಣಾ ವಾಹನಗಳ (ಮೊಬೈಲ್ ಲಾಂಚಿಂಗ್ ವೆಹಿಕಲ್ಸ್) ಜತೆ ಭಾರತವು ವಿಶೇಷ ಭೂಗತ ಸ್ಥಿರ ಉಡಾವಣಾ ನೆಲೆಗಳನ್ನು ಹೊಂದಿದೆಯೇ ಎಂಬ ಅನುಮಾನವೂ ವ್ಯಕ್ತವಾಗಿದೆ. ಈ ಎರಡು ರೀತಿಯ ವಿಧಾನವು ನಮ್ಮ ಭೂ-ಆಧಾರಿತ ಪರಮಾಣು ರಕ್ಷಣೆಯನ್ನು ಬಲಪಡಿಸಲಿದೆ. ರಹಸ್ಯ ಐಸಿಬಿಎಂ ಉಡಾವಣಾ ನೆಲೆಗಳಿಂದ ಅನೇಕ ಪ್ರಯೋಜನಗಳಿವೆ.
ರಹಸ್ಯ ಸ್ಥಿರ ಉಡಾವಣಾ ನೆಲೆಗಳು ದೇಶದ ವ್ಯೂಹಾತ್ಮಕ ರಕ್ಷಣಾ ವ್ಯವಸ್ಥೆಗೆ ಇನ್ನಷ್ಟು ಬಲ ನೀಡಲಿದ್ದು, ದೀರ್ಘ ಗುರಿಯ ಕ್ಷಿಪಣಿಗಳ ಉಡಾವಣೆಗೆ ಹೆಚ್ಚು ಸುರಕ್ಷತೆ ಒದಗಿಸಲಿದೆ.
ಸ್ಥಿರ ಉಡಾವಣಾ ನೆಲೆಗಳನ್ನು ಸ್ಥಿರ ಐಸಿಬಿಎಂ ಕ್ಷಿಪಣಿಗಳ ಉಡಾವಣೆ ಮಾಡಲು ಬಳಸಲಾಗುತ್ತದೆ. ವಿವಿಧ ಸ್ಥಳಗಳಿಗೆ ಸಾಗಿಸಬಹುದಾದ ಮೊಬೈಲ್ (ಸಂಚಾರಿ) ಲಾಂಚರ್ಗಳಿಗಿಂತ ಭಿನ್ನವಾಗಿ, ಸ್ಥಿರ ಲಾಂಚರ್‌ಗಳು ಭೂಗತ ಬಂಕರ್‌ಗಳಂತಹ ಸುರಕ್ಷಿತ ತಾಣಗಳಲ್ಲಿ ಒಂದೇ ಕಡೆ ಶಾಶ್ವತವಾಗಿ ನೆಲೆಗೊಂಡಿರುತ್ತವೆ. ಸಾಮಾನ್ಯವಾಗಿ ಭೂಗತ ಬಂಕರ್‌ಗಳಂತಹ ಸುರಕ್ಷಿತ ಮತ್ತು ಸುಸಂರಕ್ಷಿತ ಸೌಲಭ್ಯಗಳಲ್ಲಿ.
ಇದನ್ನೂ ಓದಿ: ಭಾರತದ ಈಶಾನ್ಯ ಗಡಿಯಲ್ಲಿ ಉದ್ವಿಗ್ನತೆ: ಮಯನ್ಮಾರ್ ಬಂಡುಕೋರರಿಂದ ದಾಳಿ
ಐಸಿಬಿಎಂ ಸ್ಥಿರಉಡಾವಣಾ ನೆಲೆಗಳ ಪ್ರಯೋಜನವೇನು ಎಂಬ ಮಾಹಿತಿ ಇಲ್ಲಿದೆ;
ಕಡಿಮೆ ವೆಚ್ಚದಾಯಕ, ಪರಿಣಾಮಕಾರಿ
ಆಧುನಿಕ ಐಸಿಬಿಎಂ ಉಡಾವಣಾ ನೆಲೆಗಳು ಸಾಂಪ್ರದಾಯಿಕ ಉಡಾವಣಾ ನೆಲೆಗಳಿಂದ ಕಡಿಮೆ ವೆಚ್ಚದ್ದಾಗಿದ್ದು, ಹೆಚ್ಚು ಪರಿಣಾಮಕಾರಿಯೂ ಆಗಿದೆ.
ಕಡಿಮೆ ಸ್ಥಳ, ಹೆಚ್ಚಿನ ರಕ್ಷಣೆ
ಆಧುನಿಕ ಸ್ಥಿರ ಉಡಾವಣಾ ನೆಲೆಗಳಿಗೆ ಕಡಿಮೆ ಸ್ಥಳ ಸಾಕಾಗುತ್ತದೆ. ಇದು ದಟ್ಟವಾದ ಜನನಿಬಿಡ ಪ್ರದೇಶಗಳಲ್ಲಿ ವ್ಯೂಹಾತ್ಮಕ ನಿಯೋಜನೆಯನ್ನು ಅನುಮತಿಸುವುದರ ಜತೆಗೆ, ಸೌಲಭ್ಯದ ಭದ್ರತೆಯನ್ನೂ ಹೆಚ್ಚಿಸುತ್ತದೆ.
ಪರಮಾಣು ರಕ್ಷಣಾ ಸಾಮರ್ಥ್ಯದ ವೃದ್ಧಿ
ಭೂಗತ ಸ್ಥಿರ ಉಡಾವಣಾ ನೆಲೆಗಳು ವೈಮಾನಿಕ ದಾಳಿ ಭೀತಿಯಿಂದ ರಕ್ಷಣೆ ಒದಗಿಸುವುದರ ಜತೆಗೆ, ನಮ್ಮ ಪರಮಾಣು ರಕ್ಷಣಾ ಸಾಮರ್ಥ್ಯವನ್ನು ವೃದ್ಧಿಸಲಿದೆ.
ರಕ್ಷಣಾ ಕ್ಷೇತ್ರಕ್ಕೊಂದು ಬ್ಯಾಕಪ್
ಭೂಗತ ಸ್ಥಿರ ಉಡಾವಣಾ ನೆಲೆಗಳು ರಕ್ಷಣಾ ವ್ಯವಸ್ಥೆಗೆ ಹೆಚ್ಚುವರಿ ಬ್ಯಾಕಪ್ ಆಗಿ ಕಾರ್ಯನಿರ್ವಹಿಸಲಿವೆ. ಈಗಾಗಲೇ ಇರುವ ಸಂಚಾರಿ ಉಡಾವಣಾ ನೆಲೆಗಳೊಂದಿಗೆ ಅನೇಕ ಉಡಾವಣಾ ಆಯ್ಕೆಗಳು ದೊರೆತಂತೆಯೂ ಆಗುತ್ತದೆ.
ಒಟ್ಟಾರೆಯಾಗಿ 70 ಟನ್ನ ಕ್ಯಾನಿಸ್ಟರೈಸ್ಡ್ ಮಿಸೈಲ್ ಸಿಸ್ಟಂ ಅನ್ನು ಅಭಿವೃದ್ಧಿಪಡಿಸಿರುವುದು ಭಾರತದ ರಕ್ಷಣಾ ಕ್ಷೇತ್ರದಲ್ಲಿ ದೊಡ್ಡ ಹೆಜ್ಜಯಾಗಿದೆ. ಮುಂಬರುವ ದಿನಗಳಲ್ಲಿ ಈ ಕ್ಷೇತ್ರದಲ್ಲಿ ಇನ್ನಷ್ಟು ಅತ್ಯಾಧುನಿಕತೆಯನ್ನು ನಿರೀಕ್ಷಿಸಬಹುದಾಗಿದೆ. ಇದು, ಬಲಿಷ್ಠವಾದ ರಕ್ಷಣಾ ವ್ಯವಸ್ಥೆಯನ್ನು ರೂಪಿಸುವ ನಿಟ್ಟಿನಲ್ಲಿ ನಮ್ಮ ದೇಶದ ದಿಟ್ಟ ನಿಲುವನ್ನು ದೃಢೀಕರಿಸುತ್ತದೆ.
ಗಿರೀಶ್ ಲಿಂಗಣ್ಣ (ಲೇಖಕರು ಬಾಹ್ಯಾಕಾಶ ಮತ್ತು ರಕ್ಷಣಾ ವಿಶ್ಲೇಷಕ)