ಭಾರತದ ಈಶಾನ್ಯ ಗಡಿಯಲ್ಲಿ ಉದ್ವಿಗ್ನತೆ: ಮಯನ್ಮಾರ್ ಬಂಡುಕೋರರಿಂದ ದಾಳಿ

Myanmar: ಭಾರತ ಪ್ರಸ್ತುತ ಮಯನ್ಮಾರ್ ಜೊತೆ ಗಡಿ ಹಂಚಿಕೊಂಡಿರುವ ತನ್ನ ರಾಜ್ಯಗಳಾದ ಮಣಿಪುರ ಮತ್ತು ಮಿಜೋರಾಂಗಳ ಸುರಕ್ಷತೆಯ ಕುರಿತು ಹೆಚ್ಚಿನ ಚಿಂತೆಗೊಳಗಾಗಿದೆ. ಅಕ್ಟೋಬರ್ 27ರಂದು, 3ಬಿಎಚ್ಎ ಮಯನ್ಮಾರ್ ಉತ್ತರದಲ್ಲಿರುವ ಶಾನ್ ಸ್ಟೇಟ್‌ನಲ್ಲಿ ತನ್ನ ಕಾರ್ಯಾಚರಣೆ ಆರಂಭಿಸಿತು.

ಭಾರತದ ಈಶಾನ್ಯ ಗಡಿಯಲ್ಲಿ ಉದ್ವಿಗ್ನತೆ: ಮಯನ್ಮಾರ್ ಬಂಡುಕೋರರಿಂದ ದಾಳಿ
ಮಯನ್ಮಾರ್ ಬಂಡುಕೋರರ ದಾಳಿ
Follow us
TV9 Web
| Updated By: ಗಂಗಾಧರ​ ಬ. ಸಾಬೋಜಿ

Updated on:Nov 24, 2023 | 7:13 PM

ಮಯನ್ಮಾರ್‌ನಲ್ಲಿ ಬಂಡಾಯ ಹೋರಾಟಗಾರರು ಸೇನಾ ಆಡಳಿತದ ವಿರುದ್ಧ ದಾಳಿ ನಡೆಸುತ್ತಿದ್ದು, ಸೇನೆಯ ಅಧಿಕಾರಕ್ಕೆ ಅಪಾಯ ತಂದೊಡ್ಡುತ್ತಿದ್ದಾರೆ. ಇದರಿಂದಾಗಿ ಈಶಾನ್ಯ ಭಾರತದ ರಾಜ್ಯಗಳ ಜನರು ಗಡಿ ಪ್ರದೇಶಗಳಿಗೂ ಉದ್ವಿಗ್ನತೆ ಹರಡಿದರೆ ಎಂದು ಆತಂಕ ಪಡುತ್ತಿದ್ದಾರೆ. ಭಾರತ ತನ್ನ ನೆರೆಯ ಮಯನ್ಮಾರ್‌ (Myanmar) ನಲ್ಲಿ ಹೆಚ್ಚುತ್ತಿರುವ ದ ತ್ರೀ ಬ್ರದರ್‌ಹುಡ್ ಅಲಯನ್ಸ್ (3ಬಿಎಚ್ಎ) ದಾಳಿಗಳ ಕುರಿತು ಸೂಕ್ಷ್ಮವಾದ ಕಣ್ಣಿಟ್ಟಿದೆ.

ತ್ರೀ ಬ್ರದರ್‌ಹುಡ್ ಅಲಯನ್ಸ್ (3ಬಿಎಚ್ಎ) ಎನ್ನುವುದು ಮಯನ್ಮಾರಿನ ಮೂರು ಪ್ರತ್ಯೇಕತಾವಾದಿ ಸಂಘಟನೆಗಳ ಒಕ್ಕೂಟವಾಗಿದೆ. ಈ ಒಕ್ಕೂಟ ಕಚಿನ್ ಇಂಡಿಪೆಂಡೆನ್ಸ್ ಆರ್ಮಿ (ಕೆಐಎ), ಅರಾಕನ್ ಆರ್ಮಿ (ಎಎ), ಹಾಗೂ ತಾಂಗ್ (Ta’ang) ನ್ಯಾಷನಲ್ ಲಿಬರೇಶನ್ ಆರ್ಮಿ (ಟಿಎನ್ಎಲ್ಎ) ಎಂಬ ಮೂರು ಸಂಘಟನೆಗಳನ್ನು ಒಳಗೊಂಡಿದೆ. ಈ 3ಬಿಎಚ್ಎ ಮಯನ್ಮಾರ್ ಒಳಗಿನ ಅವುಗಳ ಜನಾಂಗೀಯ ಗುಂಪುಗಳಿಗೆ ಸ್ವಾಯತ್ತತೆ ಅಥವಾ ಸ್ವಾತಂತ್ರ್ಯ ಸಂಪಾದಿಸುವ ಗುರಿಯನ್ನು ಹೊಂದಿವೆ. ಮಯನ್ಮಾರ್‌ನಲ್ಲಿ ನಡೆಯುತ್ತಿರುವ ಕದನದ ಪರಿಣಾಮಗಳು ಭಾರತದ ಭದ್ರತೆ ಹಾಗೂ ಸ್ಥಿರತೆಯ ಮೇಲೂ ಬೀರುವ ಸಾಧ್ಯತೆಗಳಿರುವುದರಿಂದ, ಭಾರತ ಈ ಕದನದ ಮೇಲೆ ಸೂಕ್ಷ್ಮವಾಗಿ ಕಣ್ಣಿಟ್ಟಿದೆ.

ಭಾರತ ಪ್ರಸ್ತುತ ಮಯನ್ಮಾರ್ ಜೊತೆ ಗಡಿ ಹಂಚಿಕೊಂಡಿರುವ ತನ್ನ ರಾಜ್ಯಗಳಾದ ಮಣಿಪುರ ಮತ್ತು ಮಿಜೋರಾಂಗಳ ಸುರಕ್ಷತೆಯ ಕುರಿತು ಹೆಚ್ಚಿನ ಚಿಂತೆಗೊಳಗಾಗಿದೆ. ಅಕ್ಟೋಬರ್ 27ರಂದು, 3ಬಿಎಚ್ಎ ಮಯನ್ಮಾರ್ ಉತ್ತರದಲ್ಲಿರುವ ಶಾನ್ ಸ್ಟೇಟ್‌ನಲ್ಲಿ ತನ್ನ ಕಾರ್ಯಾಚರಣೆ ಆರಂಭಿಸಿತು.

ಪ್ರಸ್ತುತ ದಾಳಿಯನ್ನು ‘ಆಪರೇಶನ್ 1027’ ಎಂದು ಮಾಧ್ಯಮಗಳು ವರದಿ ಮಾಡಿದ್ದು, ಇದು ದಿನೇ ದಿನೇ ವ್ಯಾಪಕಗೊಳ್ಳುತ್ತಿದೆ. ಇದು ಈಗಾಗಲೇ 135 ಮಿಲಿಟರಿ ತಾಣಗಳನ್ನು ತನ್ನ ವಶಕ್ಕೆ ತೆಗೆದುಕೊಂಡಿದೆ.

ಇದನ್ನೂ ಓದಿ: Myanmar Air Strike: ಮ್ಯಾನ್ಮಾರ್​ ಮಿಲಿಟರಿಯಿಂದ ವೈಮಾನಿಕ ದಾಳಿ, ಹಲವು ಮಕ್ಕಳು ಸೇರಿ 100 ಮಂದಿ ಸಾವು

ಮಯನ್ಮಾರ್‌ನ ಪ್ರಮುಖ ಗಡಿಗಳಾದ, ಚೀನಾ – ಮಯನ್ಮಾರ್ ಗಡಿ, ಹಾಗೂ ಭಾರತದ ಮಿಜೋರಾಂ ರಾಜ್ಯದೊಡನೆ ಗಡಿ ಹಂಚಿಕೊಳ್ಳುವ ರಿಖಾವ್ದರ್ ಪಟ್ಟಣ ಈಗ ಮಯನ್ಮಾರ್ ಸೇನೆಯಾದ ತಾಮದವ್ ವಶದಿಂದ ತಪ್ಪಿ ಹೋಗಿದೆ ಎನ್ನಲಾಗಿದೆ.

ಅದರೊಡನೆ, ಮಯನ್ಮಾರ್‌ನ ಸಶಸ್ತ್ರ ಬಂಡಾಯದ ಪಡೆಗಳು ತಮ್ಮ ಸಮರವನ್ನು ಥೈಲ್ಯಾಂಡ್ ಗಡಿ ರಾಜ್ಯವಾದ ಕಾಯಾ ಹಾಗೂ ಭಾರತದ ಗಡಿ ರಾಜ್ಯಗಳಾದ ಚಿನ್ ಮತ್ತು ಸಗಾಯಿಂಗ್ ತನಕ ವ್ಯಾಪಿಸಿವೆ.

ಈ ಆಂತರಿಕ ಕದನದ ಕಾರಣದಿಂದ, ಮಿಲಿಟರಿ ಯೋಧರೂ ಸೇರಿದಂತೆ, ಮಯನ್ಮಾರ್‌ನ ಸಾವಿರಾರು ಜನರು ಕಳೆದ ವಾರ ಮಿಜೋರಾಂನಲ್ಲಿ ಆಶ್ರಯ ಪಡೆದಿದ್ದಾರೆ. ಆ ಬಳಿಕ, ಸೈನಿಕರನ್ನು ಬೇರೊಂದು ಗಡಿ ಪ್ರದೇಶಕ್ಕೆ ಕರೆದೊಯ್ದು ಅವರನ್ನು ಮಯನ್ಮಾರ್‌ಗೆ ಕಳುಹಿಸಲಾಯಿತು.

ಭಾರತ ಈ ಹಿಂಸಾಚಾರಗಳು ಕೊನೆಯಾಗಬೇಕೆಂದು ಆಗ್ರಹಿಸಿದೆ. ಭಾರತದ ವಿದೇಶಾಂಗ ಸಚಿವಾಲಯದ ವಕ್ತಾರರಾದ ಅರಿಂದಮ್ ಬಾಗ್ಚಿ ಮಾಧ್ಯಮಗಳೊಂದಿಗೆ ಮಾತನಾಡುತ್ತಾ, “ನಾವು ಮಯನ್ಮಾರ್‌ನಲ್ಲಿ ಶಾಂತಿ, ಸ್ಥಿರತೆ ಹಾಗೂ ಪ್ರಜಾಪ್ರಭುತ್ವ ಮರಳಬೇಕೆಂದು ಆಗ್ರಹಿಸುತ್ತಿದ್ದೇವೆ” ಎಂದಿದ್ದಾರೆ.

“ಚಿನ್ ರಾಜ್ಯದ ರಿಖಾವ್ದರ್ ಪ್ರದೇಶದಲ್ಲಿ ಕದನ ನಡೆಯುತ್ತಿದೆ. ಇದು ಮಿಜೋರಾಂ ರಾಜ್ಯದ ಜೊಖಾವ್ತರ್ ಬಳಿ, ಭಾರತ – ಮಯನ್ಮಾರ್ ಗಡಿ ಪ್ರದೇಶದ ಬಳಿ ಇರುವುದರಿಂದ, ಮಯನ್ಮಾರ್‌ನ ಜನತೆ ಭಾರತದೊಳಗೆ ಪ್ರವೇಶಿಸುತ್ತಿದ್ದಾರೆ. ನಮ್ಮ ಗಡಿಯ ಬಳಿ ಇಂತಹ ಘಟನೆಗಳು ನಮಗೆ ಹೆಚ್ಚು ಕಳವಳ ಉಂಟುಮಾಡುತ್ತವೆ” ಎಂದು ಬಾಗ್ಚಿ ಹೇಳಿದ್ದಾರೆ.

ಈ ವಿಚಾರವನ್ನು ಅತ್ಯಂತ ಸೂಕ್ಷ್ಮವಾಗಿ ಗಮನಿಸುತ್ತಿರುವ ತಜ್ಞರ ಪ್ರಕಾರ, ಈ ಗಲಭೆಯಲ್ಲಿ ಇನ್ನೂ ಏನಾದರೂ ಹೆಚ್ಚಳ ಉಂಟಾದರೆ, ಮಿಜೋರಾಂ ಮಯನ್ಮಾರ್ ಜೊತೆ 510 ಕಿಲೋಮೀಟರ್ ವ್ಯಾಪ್ತಿಯ ಗಡಿ ಹಂಚಿಕೊಳ್ಳುವ ಕಾರಣದಿಂದ ಭಾರತಕ್ಕೆ ಇನ್ನಷ್ಟು ತೊಂದರೆದಾಯಕವಾಗಬಹುದು.

ಇದನ್ನೂ ಓದಿ: ಗಗನಯಾನ ಯೋಜನೆಯೆಡೆಗೆ ಮೊದಲ ಹೆಜ್ಜೆ: ಮೊದಲ ಅಭಿವೃದ್ಧಿ ಪರೀಕ್ಷಾ ಯೋಜನೆ ಟಿವಿ-ಡಿ1ಗೆ ಭಾರತ ಸನ್ನದ್ಧ

ಮಯನ್ಮಾರ್‌ನಲ್ಲಿ ತನ್ನ ಹೆಚ್ಚಿನ ಆದ್ಯತೆಗಳನ್ನು ಕಾಪಾಡಿಕೊಳ್ಳುವ ಉದ್ದೇಶದಿಂದ, ಭಾರತ ಸರ್ಕಾರ ಅವಳಿ ರಕ್ಷಣಾ ಕಾರ್ಯತಂತ್ರಗಳನ್ನು ಅಭಿವೃದ್ಧಿ ಪಡಿಸಿದೆ ಎಂದು ಲಂಡನ್ನಿನ ಎಸ್ಒಎಎಸ್ ವಿಶ್ವವಿದ್ಯಾಲಯದ ಉಪನ್ಯಾಸಕರೊಬ್ಬರು ಅಭಿಪ್ರಾಯ ಪಟ್ಟಿದ್ದಾರೆ. ಈ ಕಾರ್ಯತಂತ್ರದಡಿ ಭಾರತ ತನ್ನ ಗಡಿ ಭದ್ರತೆಯನ್ನು ಹೆಚ್ಚಿಸಿಕೊಂಡು, ಮಯನ್ಮಾರ್ ಮಿಲಿಟರಿ ಆಡಳಿತಕ್ಕೆ ಬೆಂಬಲ ವ್ಯಕ್ತಪಡಿಸಿದೆ.

ದಕ್ಷಿಣ ಏಷ್ಯಾದ ಕಾರ್ಯತಂತ್ರದ ವಿಚಾರಗಳಲ್ಲಿ ತಜ್ಞರಾಗಿರುವ ಅವರ ಪ್ರಕಾರ, ಮಣಿಪುರದಲ್ಲಿ ಎದುರಾಗಿರುವ ಪರಿಸ್ಥಿತಿಗೆ ಮಯನ್ಮಾರ್ ಜೊತೆಗೆ ನೇರ ಸಂಬಂಧವಿದೆ. ಆದ್ದರಿಂದ ಭಾರತ ತನ್ನ ಪೂರ್ವದ ನೆರೆ ರಾಷ್ಟ್ರವಾದ ಮಯನ್ಮಾರ್ ವಿಚಾರದಲ್ಲಿ ಸದ್ಯದ ಪರಿಸ್ಥಿತಿಯಲ್ಲಿ ತನ್ನ ಕಾರ್ಯ ವಿಧಾನವನ್ನು ಬದಲಾಯಿಸುವ ಸಾಧ್ಯತೆಗಳಿಲ್ಲ.

“ಒಂದು ವೇಳೆ ಪ್ರಸ್ತುತ ಮಿಲಿಟರಿ ಆಡಳಿತ ವಿರೋಧಿ ಹೋರಾಟಗಾರರು ಮಯನ್ಮಾರ್ ರಾಜಧಾನಿ ನೇಪಿಯಡಾವ್ ತನಕ ಮುಂದೊತ್ತಿ ಬಂದರೆ, ಆಗ ಭಾರತ ಅದರ ನಾಯಕತ್ವದೊಡನೆಯೂ ಸಮಾನ ಸಹಯೋಗ ಹೊಂದಬೇಕಾಗಿ ಬರಬಹುದು. ಆದರೆ ಅದು ಸಾಧ್ಯವಾಗುತ್ತದೆ ಎಂದು ಈಗಲೇ ಖಾತ್ರಿಪಡಿಸಲು ಸಾಧ್ಯವಿಲ್ಲ” ಎಂದು ಅವರು ಅಭಿಪ್ರಾಯ ಪಟ್ಟಿದ್ದಾರೆ.

ಭಾರತದ ಉಪ ರಾಷ್ಟ್ರೀಯ ಭದ್ರತಾ ಸಲಹೆಗಾರ ವಿಕ್ರಮ್ ಮಿಸ್ರಿ ಅವರು ಬಂಡುಕೋರರ ನಡುವಿನ ಕದನ ವಿರಾಮದ ಎಂಟನೇ ವಾರ್ಷಿಕ ಆಚರಣೆಯಲ್ಲಿ ಭಾಗವಹಿಸಲು ಅಕ್ಟೋಬರ್ 15ರಂದು ಮಯನ್ಮಾರ್‌ಗೆ ತೆರಳಿದ್ದರು. ಜನಾಂಗೀಯ ಬಿಕ್ಕಟ್ಟುಗಳನ್ನು ನಿವಾರಿಸುವ ಸಲುವಾಗಿ ಈ ಒಪ್ಪಂದವನ್ನು ಮರಳಿ ಜಾರಿಗೆ ತರಬೇಕು ಎಂದು ಅವರು ಅಭಿಪ್ರಾಯ ಪಟ್ಟರು.

2021ರ ಸೇನಾ ದಂಗೆ ತನ್ನ ಪ್ರತಿರೋಧಿಗಳ ವಿರುದ್ಧ ಭಾರೀ ಪ್ರಮಾಣದಲ್ಲಿ ದಾಳಿ ನಡೆಸಿ, ಅವರೊಡನೆ ಹೊಸ ಚಕಮಕಿಗೆ ನಾಂದಿ ಹಾಡಿತ್ತು. ಈ ದಂಗೆಯ ಟೀಕಾಕಾರರು 2015ರ ನೇಷನ್‌ವೈಡ್ ಸೀಸ್‌ಫೈರ್ ಅಗ್ರಿಮೆಂಟ್ (ಎನ್‌ಸಿಎ) ಈಗಾಗಲೇ ನಶಿಸಿದೆ ಎಂದಿದ್ದಾರೆ.

ಈ ಕುರಿತು ಗಮನ ಹರಿಸುವುದಾದರೆ, 2015ರ ಎನ್‌ಸಿಎ ಮತ್ತು 2021ರ ದಂಗೆ ಎರಡರಲ್ಲೂ ಮಯನ್ಮಾರ್ ಸೇನಾ ನಾಯಕತ್ವದ ಪಾತ್ರ ಮಹತ್ವದ್ದಾಗಿದೆ. 2015ರಲ್ಲಿ, ಸೇನಾ ಆಡಳಿತ ವಿವಿಧ ಜನಾಂಗೀಯ ಸಶಸ್ತ್ರ ಗುಂಪುಗಳೊಡನೆ ಮಾತುಕತೆ ನಡೆಸಿ, ನೇಷನ್‌ವೈಡ್ ಸೀಸ್‌ಫೈರ್ ಅಗ್ರಿಮೆಂಟ್ (ಎನ್‌ಸಿಎ) ಸಹಿ ಹಾಕುವಲ್ಲಿ ಮಹತ್ವದ ಪಾತ್ರ ವಹಿಸಿತ್ತು. ಈ ಒಪ್ಪಂದ ಶಾಂತಿ ಸ್ಥಾಪನೆಯೆಡೆಗೆ ಒಂದು ಮಹತ್ವದ ಹೆಜ್ಜೆ ಎಂದು ಪರಿಗಣಿಸಲಾಗಿತ್ತು. ಆ ಮೂಲಕ ದಶಕಗಳ ಕಾಲ ನಡೆದ ಕದನಗಳನ್ನು ಅಂತ್ಯಗೊಳಿಸಿ, ಹೆಚ್ಚು ಮೌಲ್ಯಯುತವಾದ, ಪ್ರಜಾಪ್ರಭುತ್ವ ಪರವಾದ ರಾಜಕೀಯ ನಡೆಯೆಡೆಗೆ ಹಾದಿ ಮಾಡಿಕೊಡಲಿದೆ ಎಂದು ಭಾವಿಸಲಾಗಿತ್ತು.

ಆದರೆ, 2021ರ ವೇಳೆಗೆ ಮಯನ್ಮಾರ್ ಸೇನೆ ದಂಗೆ ನಡೆಸಿ, ಪ್ರಜಾಸತ್ತಾತ್ಮಕವಾಗಿ ಆಯ್ಕೆಗೊಂಡ ಸರ್ಕಾರವನ್ನು ಕಿತ್ತೊಗೆದು, ಅಧಿಕಾರ ವಹಿಸಿಕೊಂಡಿತು. ಈ ದಂಗೆಯ ಬಳಿಕ, ಪ್ರಜಾಪ್ರಭುತ್ವದ ದಮನ ನಡೆಸಲಾಗಿತ್ತು. ಇದಕ್ಕೆ ಪ್ರತಿಕ್ರಿಯೆಯಾಗಿ ದೇಶಾದ್ಯಂತ ವಿವಿಧ ಪ್ರದೇಶಗಳಲ್ಲಿ ಪ್ರತಿಭಟನೆಗಳನ್ನು ನಡೆಸಲಾಯಿತು. ಕ್ಷಿಪ್ರ ದಂಗೆಯ ಮೂಲಕ ಅಧಿಕಾರ ವಹಿಸಿಕೊಂಡ ಬಳಿಕ ಮಯನ್ಮಾರ್ ಸೇನೆ ತೋರಿದ ವರ್ತನೆಗೆ ವ್ಯಾಪಕ ಖಂಡನೆ ವ್ಯಕ್ತವಾಯಿತು. ಅವರು ಈ ದಂಗೆ ಎನ್‌ಸಿಎ ಆಡಳಿತದಡಿ ಸಾಧಿಸಿದ ಪ್ರಗತಿಯನ್ನು ಹಾಳುಗೆಡವಿ, ಮಯನ್ಮಾರ್ ದೇಶವನ್ನು ಬಿಕ್ಕಟ್ಟು ಮತ್ತು ಪ್ರಕ್ಷುಬ್ಧತೆಗೆ ತಳ್ಳಿತು ಎಂದು ಆರೋಪಿಸಿದ್ದಾರೆ.

2021ರಲ್ಲಿ ಯುದ್ಧ ಆರಂಭಗೊಂಡ ಬಳಿಕ, ನವದೆಹಲಿ ಸ್ಟೇಟ್ ಅಡ್ಮಿನಿಸ್ಟ್ರೇಶನ್ ಕೌನ್ಸಿಲ್ (ಎಸ್ಎಸಿ) ಎಂಬ ಮಯನ್ಮಾರ್ ಸೇನಾ ಸರ್ಕಾರದ ಜೊತೆಗೆ ರಚನಾತ್ಮಕ ಸಂಬಂಧ ಹೊಂದಲು ಪ್ರಯತ್ನಿಸುತ್ತಿದೆ.

ಮೇ ತಿಂಗಳ ವಿಶ್ವಸಂಸ್ಥೆಯ ವರದಿಯೊಂದರ ಪ್ರಕಾರ, ಭಾರತ ಸರ್ಕಾರಿ ಸ್ವಾಮ್ಯದ ಸಂಸ್ಥೆಗಳು ಮತ್ತು ಭಾರತದ ಖಾಸಗಿ ಸಂಸ್ಥೆಗಳು ಮಯನ್ಮಾರ್ ಸೇನೆಗೆ ಫೆಬ್ರವರಿ 2021ರ ಬಳಿಕ 51 ಮಿಲಿಯನ್ ಡಾಲರ್ (46.5 ಮಿಲಿಯನ್ ಯೂರೋ) ಮೌಲ್ಯದ ಆಯುಧಗಳು, ಉಭಯ ಬಳಕೆಯ ವಸ್ತುಗಳು, ಹಾಗೂ ಕಚ್ಚಾ ವಸ್ತುಗಳನ್ನು ಕಳುಹಿಸಿಕೊಟ್ಟಿವೆ.

ಭಾರತ ಮತ್ತು ಮಯನ್ಮಾರ್ ನೆರೆಹೊರೆಯ ರಾಷ್ಟ್ರಗಳಾಗಿದ್ದು, ವಿವಿಧ ವಿಚಾರಗಳಿಗೆ ಸಂಬಂಧಿಸಿದಂತೆ ಪರಸ್ಪರ ಸಹಕಾರ ಹೊಂದಿವೆ. ಮಯನ್ಮಾರ್ ಆಡಳಿತಕ್ಕೆ ಆಯುಧ ಮಾರಾಟಕ್ಕೆ ಸಂಬಂಧಿಸಿದಂತೆ ಪ್ರಶ್ನಿಸಿದಾಗ, ಅರಿಂದಮ್ ಬಾಗ್ಚಿ “ನಾವು ನಮ್ಮ ದೇಶದ ಆಸಕ್ತಿಗೆ ಸೂಕ್ತವಾದ ರೀತಿಯಲ್ಲಿ ಕ್ರಮಗಳನ್ನು ಕೈಗೊಳ್ಳುತ್ತೇವೆ” ಎಂದಿದ್ದಾರೆ.

ಸ್ವತಂತ್ರ ಸಂಶೋಧನಾ ವೇದಿಕೆಯಾದ ಮಂತ್ರಾಯದ ಸ್ಥಾಪಕರು ಮತ್ತು ಅಧ್ಯಕ್ಷರಾದ ಶಾಂತೀ ಮಾರಿಯೆಟ್ ಡಿಸೋಜಾ಼ ಅವರು ಮಾಧ್ಯಮಗಳೊಡನೆ ಮಾತನಾಡುತ್ತಾ, ಭಾರತದ ವಿದೇಶಾಂಗ ಸಚಿವಾಲಯ ಪ್ರಸ್ತುತ ಮಯನ್ಮಾರ್ ಸೇನಾ ಆಡಳಿತಕ್ಕೆ ನೀಡಿರುವ ಬೆಂಬಲವನ್ನು ಮರುಪರಿಶೀಲಿಸುವ ಯಾವುದೇ ಸಾಧ್ಯತೆಗಳು ಕಂಡುಬರುತ್ತಿಲ್ಲ ಎಂದಿದ್ದಾರೆ.

ಮಯನ್ಮಾರ್‌ನ ನ್ಯಾಷನಲ್ ಯುನಿಟಿ ಗವರ್ನ್‌ಮೆಂಟ್ ಹಲವು ಬಾರಿ ನವದೆಹಲಿಯ ಬಳಿ ಮಯನ್ಮಾರ್ ಸೇನಾ ಸರ್ಕಾರಕ್ಕೆ ನೀಡಿರುವ ಬೆಂಬಲವನ್ನು ಹಿಂಪಡೆಯುವಂತೆ ಮನವಿ ಮಾಡಿಕೊಂಡಿದೆ. ಆದರೆ ಈ ಮನವಿಯನ್ನು ಭಾರತ ಇನ್ನೂ ಪುರಸ್ಕರಿಸಿಲ್ಲ.

“ಭಾರತ ಸಾಮಾನ್ಯವಾಗಿ ಒಂದು ರೀತಿಯಲ್ಲಿ ಅಸ್ಪಷ್ಟವಾದ ಕಾದು ನೋಡುವ ತಂತ್ರವನ್ನು ಅನುಸರಿಸುತ್ತಿದೆ. ಭಾರತ ಇಂದಿಗೂ ಮಿಲಿಟರಿ ಆಡಳಿತ ಕ್ರಮೇಣ ಜಯಶಾಲಿಯಾಗಲಿದೆ ಎಂದು ಭಾವಿಸಿದ್ದು, ಈಗ ನಡೆಯುತ್ತಿರುವ ದಂಗೆಕೋರರ ದಾಳಿ ತಾತ್ಕಾಲಿಕ ಎಂದು ಭಾವಿಸಿದೆ” ಎಂದು ಡಿಸೋಜಾ಼ ಅಭಿಪ್ರಾಯ ಪಡುತ್ತಾರೆ.

“ಅದರೊಡನೆ ಭಾರತ ಖಂಡಿತವಾಗಿಯೂ ಈ ಕದನ ತನ್ನ ಈಶಾನ್ಯ ರಾಜ್ಯಗಳ ಮೇಲೂ ಪರಿಣಾಮ ಬೀರುವ ಸಾಧ್ಯತೆಗಳಿವೆ ಎಂದು ಚಿಂತೆ ಹೊಂದಿದೆ. ಆದ್ದರಿಂದ ಭಾರತ ಈ ಯುದ್ಧವನ್ನು ಕಡಿಮೆಗೊಳಿಸಲು ಬಂಡುಕೋರರಿಗಿಂತ ಮಿಲಿಟರಿ ಗೆಲುವು ನಿರ್ಣಾಯಕವಾಗಬಹುದು ಎಂದು ಭಾವಿಸಿದೆ” ಎಂದಿದ್ದಾರೆ.

ಗಿರೀಶ್ ಲಿಂಗಣ್ಣ (ಲೇಖಕರು ಬಾಹ್ಯಾಕಾಶ ಮತ್ತು ರಕ್ಷಣಾ ವಿಶ್ಲೇಷಕ)

Published On - 7:12 pm, Fri, 24 November 23

ನಾಸಿಕ್‌ನಲ್ಲಿ 11 ವರ್ಷದ ಬಾಲಕಿ ಮೇಲೆ ಬೀದಿನಾಯಿಗಳ ದಾಳಿ; ವಿಡಿಯೋ ಇಲ್ಲಿದೆ
ನಾಸಿಕ್‌ನಲ್ಲಿ 11 ವರ್ಷದ ಬಾಲಕಿ ಮೇಲೆ ಬೀದಿನಾಯಿಗಳ ದಾಳಿ; ವಿಡಿಯೋ ಇಲ್ಲಿದೆ
ಕಷ್ಟ ಬಂದರೆ ಪ್ರಸಾದ ತಿಂದು ಬದುಕ್ತೀನಿ, ಯಾರ ಜತೆಗೂ ಹೋಗಿ ಇರಲ್ಲ: ರಚಿತಾ
ಕಷ್ಟ ಬಂದರೆ ಪ್ರಸಾದ ತಿಂದು ಬದುಕ್ತೀನಿ, ಯಾರ ಜತೆಗೂ ಹೋಗಿ ಇರಲ್ಲ: ರಚಿತಾ
ದಲಿತ ಸಮುದಾಯದ ಸಮಸ್ಯೆಗಳ ಚರ್ಚೆಗೆ ಮೀಟಿಂಗ್ ಕರೆದಿದ್ದಾರೆ: ಮಹಾದೇವಪ್ಪ
ದಲಿತ ಸಮುದಾಯದ ಸಮಸ್ಯೆಗಳ ಚರ್ಚೆಗೆ ಮೀಟಿಂಗ್ ಕರೆದಿದ್ದಾರೆ: ಮಹಾದೇವಪ್ಪ
ಕಾಂಗ್ರೆಸ್ 135 ಸ್ಥಾನ ಪಡೆಯುವಲ್ಲಿ ಶಿವಕುಮಾರ್ ಪಾತ್ರ ದೊಡ್ಡದು: ವಿಶ್ವನಾಥ್
ಕಾಂಗ್ರೆಸ್ 135 ಸ್ಥಾನ ಪಡೆಯುವಲ್ಲಿ ಶಿವಕುಮಾರ್ ಪಾತ್ರ ದೊಡ್ಡದು: ವಿಶ್ವನಾಥ್
ಚುನಾಯಿತ ಪ್ರತಿನಿಧಿಗಳ ಅನುಪಸ್ಥಿತಿಯಲ್ಲಿ ಪಾಲಿಕೆ ಅಧಿಕಾರಿಗಳದ್ದೇ ಪಾರಮ್ಯ
ಚುನಾಯಿತ ಪ್ರತಿನಿಧಿಗಳ ಅನುಪಸ್ಥಿತಿಯಲ್ಲಿ ಪಾಲಿಕೆ ಅಧಿಕಾರಿಗಳದ್ದೇ ಪಾರಮ್ಯ
ಧಾರ್ಮಿಕ ಕೇಂದ್ರಗಳಲ್ಲಿ ಎಲ್ಲರೂ ಸರಿಸಮಾನರು : ಉಪರಾಷ್ಟ್ರಪತಿ
ಧಾರ್ಮಿಕ ಕೇಂದ್ರಗಳಲ್ಲಿ ಎಲ್ಲರೂ ಸರಿಸಮಾನರು : ಉಪರಾಷ್ಟ್ರಪತಿ
ನಾನೇ ಸಿಎಂ ಕನಿಷ್ಠ ಸಾವಿರ ಸಲ ಸಿದ್ದರಾಮಯ್ಯ ಹೇಳಿದ್ದಾರೆ: ಅರ್ ಅಶೋಕ
ನಾನೇ ಸಿಎಂ ಕನಿಷ್ಠ ಸಾವಿರ ಸಲ ಸಿದ್ದರಾಮಯ್ಯ ಹೇಳಿದ್ದಾರೆ: ಅರ್ ಅಶೋಕ
ವಿಷಯ ಗೊತ್ತಾಗುತ್ತಿದ್ದಂತೆಯೇ ಯಶ್ ಸೂರಣಗಿಗೆ ಧಾವಿಸಿ ಬಂದಿದ್ದರು
ವಿಷಯ ಗೊತ್ತಾಗುತ್ತಿದ್ದಂತೆಯೇ ಯಶ್ ಸೂರಣಗಿಗೆ ಧಾವಿಸಿ ಬಂದಿದ್ದರು
ಜೈಲಿಂದ ಬಂದ ಬಳಿಕ ದರ್ಶನ್ ಜೊತೆ ಮಾತನಾಡಿದರಾ ರಚಿತಾ ರಾಮ್?
ಜೈಲಿಂದ ಬಂದ ಬಳಿಕ ದರ್ಶನ್ ಜೊತೆ ಮಾತನಾಡಿದರಾ ರಚಿತಾ ರಾಮ್?
‘ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ’ ಕೋರ್ಟ್ ಕೇಸ್: ವಿಚಾರಣೆಗೆ ಬಂದ ರಮ್ಯಾ
‘ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ’ ಕೋರ್ಟ್ ಕೇಸ್: ವಿಚಾರಣೆಗೆ ಬಂದ ರಮ್ಯಾ