ಇಂಡಿಯಾ-ಮಿಡಲ್ ಈಸ್ಟ್-ಯುರೋಪ್ ಎಕನಾಮಿಕ್ ಕಾರಿಡಾರ್ ಮತ್ತು ಜಾಗತಿಕ ರಾಜಕಾರಣ: ಆರ್ಥಿಕತೆಯ ಆಯಾಮಗಳು
ಭಾರತದ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ತಾನು ನವದೆಹಲಿಯಲ್ಲಿ ನಡೆದ ಜಿ-20 ಶೃಂಗಸಭೆಯಲ್ಲಿ ಪರಿಚಯಿಸಿದ ಇಂಡಿಯಾ - ಮಿಡಲ್ ಈಸ್ಟ್ - ಯುರೋಪ್ ಎಕನಾಮಿಕ್ ಕಾರಿಡಾರ್ ಕುರಿತು ಬಹಳಷ್ಟು ಆಶಾ ಭಾವನೆ ಹೊಂದಿದ್ದಾರೆ. ಭಾರತದಿಂದ ದಕ್ಷಿಣ ಯುರೋಪಿಗೆ ಯುನೈಟೆಡ್ ಅರಬ್ ಎಮಿರೇಟ್ಸ್, ಸೌದಿ ಅರೇಬಿಯಾ, ಜೋರ್ಡಾನ್, ಹಾಗೂ ಇಸ್ರೇಲ್ ಮೂಲಕ ಸುಗಮ ಸಾಗಾಣಿಕಾ ಮಾರ್ಗದ ನಿರ್ಮಾಣ ಜಾಗತಿಕವಾಗಿ ಭಾರತದ ಪ್ರಭಾವವನ್ನು ಹೆಚ್ಚಿಸಲಿದೆ.
ಭಾರತದ ಪ್ರಧಾನ ಮಂತ್ರಿ ನರೇಂದ್ರ ಮೋದಿ (Naredra Modi) ಯವರು ತಾನು ನವದೆಹಲಿಯಲ್ಲಿ ನಡೆದ ಜಿ-20 ಶೃಂಗಸಭೆಯಲ್ಲಿ ಪರಿಚಯಿಸಿದ ಇಂಡಿಯಾ – ಮಿಡಲ್ ಈಸ್ಟ್ – ಯುರೋಪ್ ಎಕನಾಮಿಕ್ ಕಾರಿಡಾರ್ (ಐಎಂಇಸಿ) ಕುರಿತು ಬಹಳಷ್ಟು ಆಶಾ ಭಾವನೆ ಹೊಂದಿದ್ದಾರೆ. ಆದರೆ, ಒಂದಷ್ಟು ಜನ ಈ ಯೋಜನೆಯಲ್ಲಿರುವ ಎಲ್ಲ ರಾಷ್ಟ್ರಗಳು ಚೀನಾದ ಬೆಲ್ಟ್ ಆ್ಯಂಡ್ ರೋಡ್ ಇನಿಷಿಯೇಟಿವ್ ವಿರುದ್ಧ ಇರುವ ಯೋಜನೆ ಎಂದು ಪರಿಗಣಿಸುತ್ತಿಲ್ಲ.
ಭಾರತದಿಂದ ದಕ್ಷಿಣ ಯುರೋಪಿಗೆ ಯುನೈಟೆಡ್ ಅರಬ್ ಎಮಿರೇಟ್ಸ್, ಸೌದಿ ಅರೇಬಿಯಾ, ಜೋರ್ಡಾನ್, ಹಾಗೂ ಇಸ್ರೇಲ್ ಮೂಲಕ ಸುಗಮ ಸಾಗಾಣಿಕಾ ಮಾರ್ಗದ ನಿರ್ಮಾಣ ಜಾಗತಿಕವಾಗಿ ಭಾರತದ ಪ್ರಭಾವವನ್ನು ಹೆಚ್ಚಿಸಲಿದೆ. ಅದರೊಡನೆ, ಇರಾನ್ ಮತ್ತು ರಷ್ಯಾ ಮೂಲಕ ಸಾಗುವ, ಆದರೆ ಅಭಿವೃದ್ಧಿ ನಡೆಸಲು ಅತ್ಯಂತ ಸವಾಲಿನದ್ದಾಗಿರುವ ‘ಇಂಟರ್ನ್ಯಾಷನಲ್ ನಾರ್ತ್ ಸೌತ್ ಟ್ರಾನ್ಸ್‌ಪೋರ್ಟ್ ಕಾರಿಡಾರ್’ ಮಾರ್ಗಕ್ಕೆ ಇನ್ನೊಂದು ಬದಲಿ ಆಯ್ಕೆಯಾಗಿರಲಿದೆ.
ಆ ಮಾರ್ಗದ ರೀತಿಯಲ್ಲದೆ, ಐಎಂಇಸಿ ಇಸ್ರೇಲ್ ಮತ್ತು ಪೂರ್ವ ಮೆಡಿಟರೇನಿಯನ್ ಪ್ರದೇಶಗಳನ್ನು ಒಳಗೊಂಡಂತೆ ನೂತನ ರಸ್ತೆಯೊಂದನ್ನು ನಿರ್ಮಿಸುವ ಉದ್ದೇಶ ಹೊಂದಿದೆ. ಚೀನಾದ ಕುರಿತು ಅಧ್ಯಯನ ನಡೆಸುವ ಸಿಗ್ನಲ್ ಗ್ರೂಪ್ ಎಂಬ ಥಿಂಕ್ ಟ್ಯಾಂಕ್ ಮುಖ್ಯಸ್ಥರಾದ ಕ್ಯಾರೈಸ್ ವಿಟ್ ಅವರು ಈ ಕುರಿತು ವಿವರಿಸುತ್ತಾ, “ಕೇವಲ ಎರಡು ದಶಕಗಳ ಹಿಂದೆ, ನಮ್ಮ ಭೂ ಪ್ರದೇಶ ಹಿಂದೂ ಮಹಾಸಾಗರ ಕೆಂಪು ಸಮುದ್ರವನ್ನು ಸಂಧಿಸುವ ಏಡನ್ ಜಲಸಂಧಿಗೆ ಮುಗಿದು ಹೋಗುತ್ತದೆ ಎಂದು ಭಾವಿಸಲಾಗಿತ್ತು” ಎಂದಿದ್ದರು.
ಸೌದಿ ಅರೇಬಿಯಾ ಮತ್ತು ಯುಎಇಗಳು ಈ ಐಎಂಇಸಿಯನ್ನು ಬೆಳೆಯುತ್ತಿರುವ ಮತ್ತು ಲಾಭದಾಯಕವಾಗಿರುವ ಭಾರತೀಯ ಮಾರುಕಟ್ಟೆಯನ್ನು ತಲುಪುವ ಮಾರ್ಗ ಎಂದು ಪರಿಗಣಿಸುತ್ತವೆ. ಅವುಗಳು ಇಂಧನದ ಮೇಲಿನ ತಮ್ಮ ಆದಾಯದ ಅವಲಂಬನೆಯನ್ನು ಕಡಿಮೆಗೊಳಿಸಿ, ಹಣ ಸಂಪಾದಿಸಲು ಹೊಸ ಮಾರ್ಗಗಳನ್ನು ಹುಡುಕುವ ಉದ್ದೇಶ ಹೊಂದಿವೆ.
“ಹಲವು ರಾಷ್ಟ್ರಗಳು ಜಗತ್ತಿನ ಮೇಲೆ ತಮ್ಮದೇ ಆದ ಪ್ರಭಾವ ಹೊಂದಲು ಪ್ರಯತ್ನಿಸುತ್ತಿರುವ ಇಂದಿನ ಪರಿಸ್ಥಿತಿಯಲ್ಲಿ, ಈ ರಾಷ್ಟ್ರಗಳು ಪರಸ್ಪರ ವಿವಿಧ ರೀತಿಯ ಸಂಬಂಧಗಳನ್ನು ಬೆಳೆಸಲು ಪ್ರಯತ್ನಿಸುತ್ತವೆ ಎನ್ನುವುದಕ್ಕೆ ಈ ಮಾರ್ಗ ಉದಾಹರಣೆಯಾಗಿದೆ” ಎನ್ನುತ್ತಾರೆ ಅಂತಾರಾಷ್ಟ್ರೀಯ ಸಂಬಂಧಗಳ ವಿಶ್ಲೇಷಕ, ಚೀನಾ ಮತ್ತು ಮಧ್ಯ ಪೂರ್ವದ ಬಿಕ್ಕಟ್ಟುಗಳ ಕುರಿತು ಬರೆಯುವ ಗೈ ಬರ್ಟನ್.
ಐಎಂಇಸಿ ಚೀನಾದ ವಿರುದ್ಧ ಇರಲಿದೆ ಎಂಬ ವಾದವನ್ನು ಗಲ್ಫ್ ದೇಶಗಳಲ್ಲಿ ಒಪ್ಪಲಾಗುತ್ತದೆ ಎನ್ನಲು ಸಾಧ್ಯವಿಲ್ಲ. ಅಮೆರಿಕಾ ಅಧ್ಯಕ್ಷ ಜೋ ಬಿಡೆನ್ ಅವರು ಇತ್ತೀಚಿನ ಜಿ-20 ಶೃಂಗಸಭೆಯಲ್ಲಿ ಐಎಂಇಸಿ ಯೋಜನೆಗೆ ತನ್ನ ಸಂಪೂರ್ಣ ಬೆಂಬಲ ವ್ಯಕ್ತಪಡಿಸಿದ್ದರೂ, ಈ ಒಪ್ಪಂದಕ್ಕೆ ಸಹಿ ಹಾಕಲು ಹೆಚ್ಚು ಉತ್ಸುಕತೆ ಹೊಂದಿರುವುದು ಭಾರತ, ಸೌದಿ ಅರೇಬಿಯಾ ಹಾಗೂ ಯುಎಇಗಳಾಗಿವೆ.
ಇದನ್ನೂ ಓದಿ: ಹಿಂದೂ ಮಹಾಸಾಗರದ ತಳದ ಸಂಪತ್ತನ್ನು ಭಾರತ – ಆಸ್ಟ್ರೇಲಿಯಾಗಳು ಯಾಕೆ ರಕ್ಷಿಸಬೇಕು?
ರಿಯಾದ್ ಈ ನೂತನ ಕಾರಿಡಾರ್ ಅನ್ನು ಜಾಗತಿಕ ವೇದಿಕೆಯಲ್ಲಿ ತನ್ನ ಪಾತ್ರವನ್ನು ರೂಪಾಂತರಗೊಳಿಸುವ ಮಾರ್ಗವಾಗಿ ಪರಿಗಣಿಸುತ್ತಿದೆ. ಸೌದಿ ಅರೇಬಿಯಾ ಕೇವಲ ತೈಲ ರಫ್ತುದಾರನಾಗಿರುವ ಬದಲಿಗೆ, ಪ್ರವಾಸೋದ್ಯಮ ಮತ್ತು ಹೂಡಿಕೆಯ ತಾಣವಾಗುವ ಗುರಿ ಹೊಂದಿದೆ ಎಂದು ಸೌದಿ ಅರೇಬಿಯಾದ ರಾಜಕೀಯ ವಿಶ್ಲೇಷಕ, ವಿದೇಶಾಂಗ ನೀತಿ ತಜ್ಞ ಅಜೀಜ್ ಅಲ್ ಘಾಷಿಯನ್ ಅಭಿಪ್ರಾಯ ಪಡುತ್ತಾರೆ.
ಸೌದಿ ಅರೇಬಿಯಾ ಮತ್ತು ಯುಎಇಗಳು ಪಳೆಯುಳಿಕೆ ಇಂಧನ ಮಾರಾಟ ನಡೆಸುವ ಪ್ರಮುಖ ರಾಷ್ಟ್ರಗಳಾಗಿದ್ದು, ಅವುಗಳ ಆರ್ಥಿಕತೆಯನ್ನು ಇನ್ನಷ್ಟು ವೈವಿಧ್ಯಮಯಗೊಳಿಸಲು ನೆರವಾಗಬಲ್ಲ ಈ ನೂತನ ಕಾರಿಡಾರ್ ನಿರ್ಮಾಣದ ಕುರಿತು ಅಪಾರ ಆಸಕ್ತಿ ಹೊಂದಿವೆ. ಅವುಗಳಿಗೆ ಇದೊಂದು ತಾರ್ಕಿಕ ನಡೆ ಎನಿಸಿದೆ.
ಶುಭಾರಂಭಕ್ಕೆ ನಾಂದಿ
ಐಎಂಇಸಿ ಎನ್ನುವುದು ಕೇವಲ ವ್ಯಾಪಾರಕ್ಕೆ ಮಾತ್ರವೇ ಸೀಮಿತವಾದ ಮಾರ್ಗವಲ್ಲ. ಬದಲಿಗೆ, ಇದು ಪೂರೈಕೆ ಸರಪಳಿ ಒಟ್ಟಾಗಿ, ಉತ್ತಮವಾಗಿ ಕಾರ್ಯಾಚರಿಸುವಂತೆ ಮಾಡುವತ್ತ ಗಮನ ಹರಿಸುತ್ತದೆ. ಇದರ ಉದ್ದೇಶ ಈ ಮಾರ್ಗದುದ್ದಕ್ಕೂ ಇರುವ ದೇಶಗಳಲ್ಲಿ ಸರ್ಕಾರಗಳು ಮತ್ತು ಉದ್ಯಮಗಳ ನಡುವೆ ಸಹಯೋಗ ಹೊಂದುವುದನ್ನು ಉತ್ತೇಜಿಸುವುದೂ ಹೌದು.
ಈ ಪ್ರಸ್ತಾಪಿತ ಮಾರ್ಗದಲ್ಲಿ ಬರುವ ಬಂದರುಗಳು, ರೈಲ್ವೇ ಮಾರ್ಗಗಳು ಮತ್ತು ರಸ್ತೆಗಳ ಪಕ್ಕದಲ್ಲಿ ವಿದ್ಯುತ್ ಕೇಬಲ್‌ಗಳನ್ನು ಅಳವಡಿಸುವ ಯೋಜನೆ ರೂಪಿಸಲಾಗಿದೆ. ಈ ಕೇಬಲ್‌ಗಳು ಸೌದಿ ಅರೇಬಿಯಾ ಮತ್ತು ಯುಎಇಗಳಿಂದ ಭಾರತ ಮತ್ತು ಯುರೋಪಿಯನ್ ಒಕ್ಕೂಟಕ್ಕೆ ವಿದ್ಯುತ್ ಮತ್ತು ಹಸಿರು ಜಲಜನಕ ರವಾನಿಸುವ ಉದ್ದೇಶ ಹೊಂದಿವೆ. ಹಸಿರು ಜಲಜನಕ ನೈಸರ್ಗಿಕ ಅನಿಲಕ್ಕೆ ಹೆಚ್ಚು ಪರಿಸರ ಸ್ನೇಹಿ ಬದಲಿ ಆಯ್ಕೆಯಾಗಿದ್ದು, ಇದನ್ನು ಈ ಮಾರ್ಗದಲ್ಲಿರುವ ಹೆಚ್ಚು ಬಿಸಿಲು ಹೊಂದಿರುವ ರಾಷ್ಟ್ರಗಳ ಬೃಹತ್ ಸೋಲಾರ್ ಯೋಜನೆಗಳಿಂದ ಉತ್ಪಾದಿಸಲಾಗುತ್ತದೆ.
ಈ ಯೋಜನೆ ಹಾದುಹೋಗುವ ಪ್ರದೇಶಗಳಲ್ಲಿ ಉತ್ತಮ ಅಂತರ್ಜಾಲ ವ್ಯವಸ್ಥೆ ಹೊಂದುವ ಸಲುವಾಗಿ ಅತ್ಯಂತ ದೀರ್ಘವಾದ ಫೈಬರ್ ಆಪ್ಟಿಕ್ ಜಾಲವನ್ನು ನಿರ್ಮಿಸುವ ಸಲಹೆಯನ್ನೂ ನೀಡಲಾಗಿದೆ.
ಈ ತಿಂಗಳು ಜಿ-20 ಶೃಂಗಸಭೆಯ ಸಂದರ್ಭದಲ್ಲಿ, ಪ್ರಧಾನಿ ನರೇಂದ್ರ ಮೋದಿಯವರು ಈ ನೂತನ ಒಪ್ಪಂದವನ್ನು ಶ್ಲಾಘಿಸಿ, ಇದು ಇನ್ನೂ ದೊಡ್ಡ ಕನಸುಗಳನ್ನು ಕಾಣುವ ನಿಟ್ಟಿನಲ್ಲಿ ಭವಿಷ್ಯದ ತಲೆಮಾರುಗಳಿಗೆ ಪೂರಕವಾಗಿದೆ ಎಂದಿದ್ದರು.
ಅದಾದ ಬಳಿಕ, ಮೋದಿಯವರು ದೆಹಲಿಯಲ್ಲಿ ಸೌದಿ ಅರೇಬಿಯಾದ ಯುವರಾಜ, ಮೊಹಮ್ಮದ್ ಬಿನ್ ಸಲ್ಮಾನ್ ಅವರೊಂದಿಗೆ ಖಾಸಗಿ ಮಾತುಕತೆ ನಡೆಸಿದರು. ಈ ಸಂದರ್ಭದಲ್ಲಿ, ಇಬ್ಬರು ನಾಯಕರು ಭಾರತಕ್ಕೆ 100 ಬಿಲಿಯನ್ ಡಾಲರ್‌ಗಳ ಸೌದಿ ಹೂಡಿಕೆಯನ್ನು ಆದಷ್ಟು ಶೀಘ್ರವಾಗಿ ತರುವ ನಿಟ್ಟಿನಲ್ಲಿ ಪ್ರಕ್ರಿಯೆಯನ್ನು ವೇಗಗೊಳಿಸಲು ನಿರ್ಧರಿಸಿದರು. ಈ ಹೂಡಿಕೆ ಯೋಜನೆಯನ್ನು 2019ರಲ್ಲೇ ನಡೆಸಲಾಗಿತ್ತಾದರೂ, ಕೋವಿಡ್ ಸಾಂಕ್ರಾಮಿಕದ ಕಾರಣದಿಂದ ಅದು ಮುಂದೂಡಲ್ಪಟ್ಟಿತ್ತು.
ಈ ಮೊತ್ತದಲ್ಲಿ ಅಂದಾಜು 55 ಬಿಲಿಯನ್ ಡಾಲರ್‌ಗಳನ್ನು ಪಶ್ಚಿಮ ಭಾರತದ ಸಮುದ್ರ ತೀರದಲ್ಲಿ ಬೃಹತ್, ನೂತನ ತೈಲ ಸಂಸ್ಕರಣಾಗಾರ ಹಾಗೂ ಪೆಟ್ರೋಕೆಮಿಕಲ್ ಸೌಧ ನಿರ್ಮಾಣಕ್ಕೆ ಬಳಸಲಾಗುತ್ತದೆ. ಸೌದಿ ಅರೇಬಿಯಾ ಮತ್ತು ಯುಎಇ ಜೊತೆಗಿನ ಸಹಯೋಗದೊಂದಿಗೆ, ಭಾರತದಲ್ಲಿ ಕಾರ್ಯತಂತ್ರದ ತೈಲ ಸಂಗ್ರಹಾಗಾರ ಸ್ಥಾಪಿಸಲು ಉದ್ದೇಶಿಸಲಾಗಿದೆ.
ಬಂದರುಗಳು ಮತ್ತು ಫ್ರೀ ಜೋನ್‌ಗಳನ್ನು ನಿರ್ವಹಿಸುವ ಡಿಪಿ ವರ್ಲ್ಡ್ ಸೇರಿದಂತೆ ವಿವಿಧ ಯುಎಇ ಕಂಪನಿಗಳು ಈಗಾಗಲೇ ಭಾರತ ಮತ್ತು ಮಧ್ಯ ಪೂರ್ವದ ನಡುವಿನ ಆಹಾರ ಕಾರಿಡಾರ್‌ಗಾಗಿ 7 ಬಿಲಿಯನ್ ಡಾಲರ್ ಮೌಲ್ಯದ ಸಾಗಾಣಿಕೆ ಮತ್ತು ವಿತರಣಾ ಜಾಲವನ್ನು ನಿರ್ಮಿಸಲು ಕಾರ್ಯಾಚರಿಸುತ್ತಿವೆ.
ಸೌದಿ ಅರೇಬಿಯಾ, ಯುಎಇ, ಕತಾರ್, ಕುವೈತ್, ಒಮಾನ್, ಹಾಗೂ ಬಹ್ರೇನ್‌ಗಳನ್ನು ಒಳಗೊಂಡಿರುವ ಗಲ್ಫ್ ಕೋ ಆಪರೇಶನ್ ಕೌನ್ಸಿಲ್ ಮತ್ತು ಭಾರತದ ನಡುವಿನ ವ್ಯಾಪಾರ ಗಣನೀಯವಾಗಿ ಹೆಚ್ಚಳ ಕಂಡಿದೆ. 2021-22ನೇ ಸಾಲಿನಲ್ಲಿ ಇದು 154.7 ಬಿಲಿಯನ್ ಡಾಲರ್‌ಗೆ ಏರಿಕೆ ಕಂಡಿದ್ದು, ಇದು ಹಿಂದಿನ ಆರ್ಥಿಕ ವರ್ಷಕ್ಕೆ ಹೋಲಿಸಿದರೆ 77% ಹೆಚ್ಚಳವಾಗಿದೆ.
ಇದೇ ಅವಧಿಯಲ್ಲಿ, ಚೀನಾ ಈ ಪ್ರದೇಶದೊಡನೆ 180 ಬಿಲಿಯನ್ ಡಾಲರ್ ಮೌಲ್ಯದ ದ್ವಿಮುಖ ವ್ಯಾಪಾರ ವಹಿವಾಟು ನಡೆಸಿತ್ತು.
ಉದ್ವಿಗ್ನ ಸಂಬಂಧಗಳು
ಸೌದಿ ಅರೇಬಿಯಾ ಮತ್ತು ಇಸ್ರೇಲ್‌ಗಳ ನಡುವೆ ಔಪಚಾರಿಕವಾದ ರಾಜತಾಂತ್ರಿಕ ಸಂಬಂಧ ಇಲ್ಲದಿರುವುದು ಐಎಂಇಸಿ ಯೋಜನೆಯ ಜಾರಿಗೆ ಇರುವ ಪ್ರಮುಖ ಭೌಗೋಳಿಕ ರಾಜಕೀಯ ಅಡ್ಡಿಯಾಗಿದೆ.
ಸೌದಿ ಅರೇಬಿಯಾ ಮತ್ತು ಇಸ್ರೇಲ್‌ಗಳು ಯಾವುದೇ ಭೂ ಗಡಿಯನ್ನು ಹೊಂದಿಲ್ಲವಾದರೂ, ಅವೆರಡರ ಮಧ್ಯೆ ಸೌದಿ ಅರೇಬಿಯಾ ಪ್ರಾಯೋಜಿತ, ಜೋರ್ಡಾನ್ ಮೂಲಕ ಹಾದುಹೋಗುವ ರೈಲ್ವೇ ಮಾರ್ಗ ಸಂಪರ್ಕ ಬೆಸೆಯಲಿದೆ. ಇಸ್ರೇಲ್ ಜೊತೆ 1994ರಲ್ಲಿ ಶಾಂತಿ ಒಪ್ಪಂದ ಮಾಡಿಕೊಂಡಿರುವ ಮತ್ತು ಸೌದಿ ಅರೇಬಿಯಾ ಜೊತೆ ನಿಕಟ ಸಂಬಂಧ ಹೊಂದಿರುವ ಜೋರ್ಡಾನ್ ಈ ಹೊಸ ಬಂಧದಲ್ಲಿ ಪ್ರಮುಖ ಪಾತ್ರ ನಿರ್ವಹಿಸಲಿದೆ.
ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಅವರು ಐಎಂಇಸಿ ಕುರಿತು ತನ್ನ ಆಸಕ್ತಿಯನ್ನು ವ್ಯಕ್ತಪಡಿಸಿದ್ದಾರೆ. ಅವರು ಈ ಯೋಜನೆಯನ್ನು ಪ್ರಾದೇಶಿಕ ಮತ್ತು ಜಾಗತಿಕ ಏಕೀಕರಣ ಮತ್ತು ಸಹಯೋಗಕ್ಕೆ ಅತ್ಯಂತ ಪ್ರಮುಖ ಸಹಕಾರ ಯೋಜನೆಯಾಗಿದೆ ಎಂದು ಶ್ಲಾಘಿಸಿದ್ದಾರೆ.
ಇಸ್ರೇಲ್ ಮತ್ತು ಸೌದಿ ಅರೇಬಿಯಾ ನಡುವೆಯಾವುದೇ ಅಧಿಕೃತ ಸಂಬಂಧ ಇಲ್ಲದಿದ್ದರೂ, ಐಎಂಇಸಿ ಯೋಜನೆ ಮುಂದುವರಿಯಬಹುದು. ಯಾಕೆಂದರೆ, ಇಸ್ರೇಲ್ ವಿಶ್ಲೇಷಕ ವಿಟ್ ಅವರು ಹೇಳುವ ಪ್ರಕಾರ, ಇಸ್ರೇಲ್ ಮತ್ತು ಸೌದಿ ಎರಡೂ ರಾಷ್ಟ್ರಗಳು ಕಳೆದ ಹಲವು ವರ್ಷಗಳಿಂದ ಮೌನವಾಗಿ, ಯಾವುದೇ ಅಧಿಕೃತ ಒಪ್ಪಂದವಿಲ್ಲದೆ ವ್ಯಾಪಾರ ವಹಿವಾಟು ನಡೆಸುತ್ತಾ ಬಂದಿವೆ.
ಪ್ರಸ್ತುತ ಸನ್ನಿವೇಶದಲ್ಲಿ, ಐಎಂಇಸಿ ಯೋಜನೆಗೂ ಆ ಎರಡು ರಾಷ್ಟ್ರಗಳ ನಡುವಿನ ಅಧಿಕೃತ ಸಂಬಂಧದ ಅವಶ್ಯಕತೆ ಇಲ್ಲದಿರುವುದರಿಂದ, ಈ ಯೋಜನೆ ಸಹಜವಾಗಿಯೇ ಮುಂದುವರಿಯಬಹುದು.
ಸೌದಿ ವಿಶ್ಲೇಷಕರಾದ ಅಲ್ ಘಷಿಯನ್ ಅವರು, ಎಕನಾಮಿಕ್ ಕಾರಿಡಾರ್ ನಿರ್ಮಾಣದಿಂದ ಜೆರುಸಲೇಮ್ ಮತ್ತು ರಿಯಾದ್ ನಡುವೆ ತಕ್ಷಣವೇ ಸೌಹಾರ್ದ ಸಂಬಂಧ ಬರುವ ಅವಶ್ಯಕತೆ ಇಲ್ಲವೆಂದಿದ್ದು, ಅವುಗಳು ಪ್ರಸ್ತುತ ಅಮೆರಿಕಾದ ಜೊತೆ ತ್ರಿಪಕ್ಷೀಯ ಮಾತುಕತೆಗಳಲ್ಲಿ ತೊಡಗಿವೆ ಎಂದಿದ್ದಾರೆ. ಆದ್ದರಿಂದ, ಯಾವುದೇ ಗಡಿಬಿಡಿಯ ಅವಶ್ಯಕತೆಯಿಲ್ಲದೆ, ಭವಿಷ್ಯದಲ್ಲಿ ಸರಿಯಾದ ಸಮಯ ಬಂದಾಗ ಎರಡೂ ರಾಷ್ಟ್ರಗಳ ನಡುವಿನ ಸಂಬಂಧ ಉತ್ತಮಗೊಳ್ಳಬಹುದು ಎನ್ನುತ್ತಾರೆ.
ಇಂತಹ ಭಾರೀ ಪ್ರಮಾಣದ, ವಿಪುಲ ಅವಕಾಶಗಳಿರುವ ಯೋಜನೆಯನ್ನು ಕೈಗೆತ್ತಿಕೊಳ್ಳುವಾಗ, ಇದಕ್ಕಾಗಿ ರಾಜಕೀಯ ನಾಯಕರು ನಿರಂತರವಾದ, ಸ್ಥಿರ ಬದ್ಧತೆಯನ್ನು ಪ್ರದರ್ಶಿಸಬೇಕಾಗುತ್ತದೆ ಎಂದು ಸಿಗ್ನಲ್ ಗ್ರೂಪ್ ನಿರ್ದೇಶಕರಾದ ಕ್ಯಾರೈಸ್ ವಿಟ್ ಅಭಿಪ್ರಾಯ ಪಡುತ್ತಾರೆ.
ಅವರ ಪ್ರಕಾರ ಇಸ್ರೇಲ್ ಮತ್ತು ಸೌದಿ ಅರೇಬಿಯಾಗಳ ನಡುವಿನ ಉದ್ವಿಗ್ನ ಸಂಬಂಧ ಮಾತ್ರವೇ ಈ ಯೋಜನೆಯನ್ನು ಬಲಹೀನಗೊಳಿಸುವುದಿಲ್ಲ. ಅವರು, ಪ್ರತಿಯೊಂದು ರಾಷ್ಟ್ರವೂ ಹೊಂದಿರುವ ವಿಭಿನ್ನ ದೃಷ್ಟಿಕೋನ, ವೈವಿಧ್ಯಮಯ ಗುರಿಗಳು ಯೋಜನೆ ಇನ್ನಷ್ಟು ಕಷ್ಟಕರವಾಗುವಂತೆ ಮಾಡುತ್ತವೆ ಎಂದಿದ್ದಾರೆ. ಈ ಯೋಜನೆಯ ಪ್ರಮಾಣ, ಇದು ಒದಗಿಸಬಲ್ಲ ಭಾರೀ ಅವಕಾಶಗಳನ್ನು ಗಮನಿಸಿದಾಗ, ಇದಕ್ಕೆ ನಿರಂತರ ರಾಜಕೀಯ ಬೆಂಬಲ ಅತ್ಯವಶ್ಯಕವಾಗಿದೆ.
ಐಎಂಇಸಿ ಯೋಜನೆಯ ಕಾರಣದಿಂದ, ಇಸ್ರೇಲ್‌ಗೆ ಭಾರತದೊಡನೆ ರಕ್ಷಣಾ ವಿಭಾಗದ ಸಹಯೋಗ ಮಾತ್ರವಲ್ಲದೆ, ವಿವಿಧ ರೀತಿಯ ಸಹಯೋಗಗಳು, ಸಂವಹನ ಹೊಂದಲು ಸಾಧ್ಯವಾಗುತ್ತದೆ ಎನ್ನುತ್ತಾರೆ ವಿಟ್. ಈ ಯೋಜನೆಯ ಕಾರಣದಿಂದ, ಇಸ್ರೇಲ್ ಪಾಲಿಗೆ ಉದ್ಯಮ, ವ್ಯಾಪಾರ ಮತ್ತು ಹೂಡಿಕೆ ವಲಯಗಳಲ್ಲಿ ಅಪಾರ ಅವಕಾಶಗಳನ್ನು ಸೃಷ್ಟಿಯಾಗಬಹುದು ಎಂದು ಅವರು ನಂಬಿಕೆ ಇಟ್ಟಿದ್ದಾರೆ.
ಇಸ್ರೇಲಿ ಕಂಪನಿಗಳು ಈಗಾಗಲೇ ವಿಶಾಲವಾದ, ನೀರಿನ ಕೊರತೆ ಇರುವ ದಕ್ಷಿಣ ಏಷ್ಯಾದ ರಾಷ್ಟ್ರಗಳಿಗೆ ಬೆಳೆ ಹೆಚ್ಚಿಸುವಂತಹ ತಂತ್ರಜ್ಞಾನಗಳ ಅಭಿವೃದ್ಧಿಯಲ್ಲಿ ಹೆಚ್ಚಿನ ಸಾಧನೆ ತೋರಿವೆ.
ವಾಷಿಂಗ್ಟನ್ ಪಾತ್ರ
ಅಮೆರಿಕಾ ಅಧ್ಯಕ್ಷ ಬಿಡೆನ್ ಅವರಿಗೆ, ಐಎಂಇಸಿ ಯೋಜನೆ ಅವರ ಪಾರ್ಟ್‌ನರ್ಶಿಪ್ ಫಾರ್ ಗ್ಲೋಬಲ್ ಇನ್‌ಫ್ರಾಸ್ಟ್ರಕ್ಚರ್ ಇನ್ವೆಸ್ಟ್‌ಮೆಂಟ್ ಯೋಜನೆಗೆ ಮಹತ್ವದ್ದಾಗಿದೆ. ಅವರ ಪಾರ್ಟ್‌ನರ್ಶಿಪ್ ಫಾರ್ ಗ್ಲೋಬಲ್ ಇನ್‌ಫ್ರಾಸ್ಟ್ರಕ್ಚರ್ ಇನ್ವೆಸ್ಟ್‌ಮೆಂಟ್ ಯೋಜನೆಯನ್ನು ಚೀನಾದ ಬೆಲ್ಟ್ ಆ್ಯಂಡ್ ರೋಡ್ ಇನಿಷಿಯೇಟಿವ್‌ಗೆ ಅಮೆರಿಕಾದ ಪ್ರತ್ಯುತ್ತರ ಎಂದು ಪರಿಗಣಿಸಲಾಗಿದೆ. ಇದು ಮೂಲಭೂತ ಸೌಕರ್ಯಗಳ ಅಭಿವೃದ್ಧಿಯ ಮೂಲಕ, ಜಾಗತಿಕ ವ್ಯಾಪಾರವನ್ನು ವೃದ್ಧಿಸುವ ಗುರಿ ಹೊಂದಿದೆ.
ಅಂತಾರಾಷ್ಟ್ರೀಯ ಸಂಬಂಧಗಳ ತಜ್ಞರಾದ ಬರ್ಟನ್ ಅವರು, ನೂತನ ಐಎಂಇಸಿ ಯೋಜನೆಯನ್ನು ಚೀನಾಗೆ ಪ್ರತ್ಯುತ್ತರ ಎನ್ನುವುದು ಭಾರತ ಮತ್ತು ಅಮೆರಿಕಾಗಳ ದೃಷ್ಟಿಕೋನವೇ ಹೊರತು, ಇದರಲ್ಲಿ ಭಾಗಿಯಾಗಿರುವ ಮಧ್ಯ ಪೂರ್ವ ರಾಷ್ಟ್ರಗಳ ಉದ್ದೇಶ ಎನ್ನಲು ಸಾಧ್ಯವಿಲ್ಲ.
ಐಎಂಇಸಿ ಒಪ್ಪಂದ ಸಹಿ ಸಮಾರಂಭದಲ್ಲಿ, ಅಮೆರಿಕಾ ಅಧ್ಯಕ್ಷರು ಸೌದಿಯ ಯುವರಾಜ ಸಲ್ಮಾನ್ ಹಾಗೂ ಯುಎಇ ಅಧ್ಯಕ್ಷರಾದ ಮೊಹಮ್ಮದ್ ಬಿನ್ ಜಾ಼ಯೆದ್ ಅಲ್ – ನಹ್ಯಾನ್ ಅವರೊಡನೆ ಸೌಹಾರ್ದತೆ ಪ್ರದರ್ಶಿಸಿದರು. ಇದು ಇತ್ತೀಚಿನ ವರ್ಷಗಳಲ್ಲಿ ಮೂರು ರಾಷ್ಟ್ರಗಳ ನಡುವೆ ಇದ್ದ ಉದ್ವಿಗ್ನತೆಯ ನಿವಾರಣೆಯಂತೆ ಕಂಡುಬಂದಿತ್ತು.
ಅವರ ನಡುವಿನ ಭಿನ್ನಾಭಿಪ್ರಾಯಗಳು ವಿಶಾಲ ವಿಚಾರಗಳನ್ನು ಒಳಗೊಂಡಿದ್ದು, ಅದರಲ್ಲಿ ವಾಷಿಂಗ್ಟನ್ ಯಾವ ಹಂತದ ತನಕ ಇರಾನ್ ಮತ್ತು ಅದರ ಸಹಯೋಗಿಗಳಿಂದ ಗಲ್ಫ್ ಚಕ್ರಾಧಿಪತಿಗಳನ್ನು ರಕ್ಷಿಸಲಿದೆ ಎನ್ನುವುದು, ಚೀನಾದೊಡನೆ ರಿಯಾದ್ ಮತ್ತು ಅಬು ಧಾಬಿ ಹೊಂದಿರುವ ಆರ್ಥಿಕ ಸಂಬಂಧಗಳು, ಹಾಗೂ ಉಕ್ರೇನ್ ಸಮರದ ನಡುವೆ, ರಷ್ಯಾದೊಡನೆ ಒಪೆಕ್ – ಪ್ಲಸ್ ತೈಲ ಉತ್ಪಾದನಾ ಒಪ್ಪಂದವನ್ನು ತೊರೆಯಲು ಸೌದಿ ಅರೇಬಿಯಾ ನಿರಾಕರಿಸಿರುವುದು ಸೇರಿವೆ.
2020ರಲ್ಲಿ ಅಮೆರಿಕಾ ಅಧ್ಯಕ್ಷೀಯ ಚುನಾವಣಾ ಪ್ರಚಾರದ ಸಂದರ್ಭದಲ್ಲಿ, ಬಿಡೆನ್ ಅವರು 2018ರಲ್ಲಿ ಇಸ್ತಾಂಬುಲ್‌ನ ಸೌದಿ ದೂತಾವಾಸ ಕಚೇರಿಯಲ್ಲಿ ಪತ್ರಕರ್ತ ಜಮಾಲ್ ಖಶೋಗ್ಗಿ ಹತ್ಯೆಗೆ ಸಂಬಂಧಿಸಿದಂತೆ ಸೌದಿ ಅರೇಬಿಯಾವನ್ನು ಬಹಿಷ್ಕರಿಸಿದ ರೀತಿ ನೋಡಬೇಕೆಂದು ಕರೆ ನೀಡಿದ್ದರು. ಇದರ ಪರಿಣಾಮವಾಗಿ, ಎರಡೂ ದೇಶಗಳ ನಡುವಿನ ರಾಜತಾಂತ್ರಿಕ ಸಂಬಂಧಕ್ಕೆ ಹೊಡೆತ ಬಿದ್ದಿತ್ತು.
ಯುವರಾಜ ಸಲ್ಮಾನ್ ನಿರಂತರವಾಗಿ ಈ ಘಟನೆಗೂ ತನಗೂ ಯಾವುದೇ ಸಂಬಂಧವಿಲ್ಲ ಎನ್ನುತ್ತಾ ಬಂದಿದ್ದರು. ಸೌದಿಯ ಏಜೆಂಟ್‌ಗಳು ಬಂಧಿಸಿದ ಖಶೋಗ್ಗಿ ಕೊಲೆಗಾರರನ್ನು ನ್ಯಾಯಾಲಯಗಳು ದೋಷಿ ಎಂದು ತೀರ್ಪು ನೀಡಿದ್ದು, ಅವರು ಜೈಲು ಶಿಕ್ಷೆ ಅನುಭವಿಸುತ್ತಿದ್ದಾರೆ.
ಸೌದಿ ವಿಶ್ಲೇಷಕರಾದ ಅಲ್ ಘಾಷಿಯನ್ ಅವರು “ಐಎಂಇಸಿ ಜ್ಞಾಪಕ ಪತ್ರ ಇಬ್ಬರು ನಾಯಕರ ನಡುವಿನ ವೈಯಕ್ತಿಕ ಸಂಬಂಧ ಉತ್ತಮಗೊಳ್ಳುತ್ತಿದೆ ಎನ್ನುವಂತೆ ಕಾಣುತ್ತದಾದರೂ, ಪರಿಸ್ಥಿತಿ ಸಂಪೂರ್ಣವಾಗಿ ಸರಿಹೋಗಿದೆ ಎಂದು ನಾನು ಭಾವಿಸುವುದಿಲ್ಲ” ಎಂದಿದ್ದಾರೆ.
ಇದನ್ನೂ ಓದಿ: ಭಾರತದ ಮಹತ್ವಾಕಾಂಕ್ಷಿ ಗಗನಯಾನ ಯೋಜನೆ: ಮಾನವರನ್ನು ಬಾಹ್ಯಾಕಾಶಕ್ಕೊಯ್ಯಲು ಸಿದ್ಧವಾಗುತ್ತಿದೆ ಭಾರತ
“ಸೌದಿಗಳು ಮತ್ತು ಅಮೆರಿಕನ್ನರು ತಾವು ಒಪ್ಪಂದ ಹೊಂದಿರುವ ಸಮಾನ ಹಿತಾಸಕ್ತಿಗಳನ್ನು ಮಾತ್ರವೇ ಆದ್ಯತೆಯಾಗಿಸಬೇಕೆಂದು ತೀರ್ಮಾನಿಸಿದ್ದು, ರಷ್ಯಾ ವಿವಾದ, ನಾಯಕರ ನಡುವಿನ ವೈಯಕ್ತಿಕ ಅಸಮಾಧಾನಗಳನ್ನು ಆದ್ಯತೆಯಾಗಿಸದಿರಲು ನಿರ್ಧರಿಸಿದ್ದಾರೆ” ಎಂದು ಅವರು ವಿವರಿಸುತ್ತಾರೆ.
ಘಷಿಯಾನ್ ಅವರ ಪ್ರಕಾರ, ಅಮೆರಿಕಾ ತನ್ನದೇ ಆದ ಗುರಿಗಳನ್ನು ಹೊಂದಿದ್ದರೂ, ತನ್ನ ಪ್ರಾದೇಶಿಕ ಗುರಿಗಳಲ್ಲಿ ಸಾಕಷ್ಟನ್ನು ವಿಶಾಲ ಗಾತ್ರ ಹೊಂದಿರುವ, ರಾಜಕೀಯ ಪ್ರಭಾವ ಹೊಂದಿರುವ ಸೌದಿ ಅರೇಬಿಯಾದ ಬೆಂಬಲವಿಲ್ಲದೆ ಪೂರ್ಣಗೊಳಿಸಲು ಸಾಧ್ಯವಿಲ್ಲ ಎಂದು ಅರ್ಥೈಸಿಕೊಂಡಿದೆ. ಭಾರತವೂ ತಾನು ಈ ಲೆಕ್ಕಾಚಾರದ ಒಂದು ಭಾಗವಾಗುವ ಆಸಕ್ತಿ ಹೊಂದಿದೆ.
ಅನಿಶ್ಚಿತತೆಯ ಹಾದಿ
ಕಳೆದ ಒಂದು ದಶಕದ ಅವಧಿಯಲ್ಲಿ, ಚೀನಾ ತನ್ನ ಮಹತ್ವಾಕಾಂಕ್ಷಿ ಬೆಲ್ಟ್ ಆ್ಯಂಡ್ ರೋಡ್ ಇನಿಷಿಯೇಟಿವ್ ಆರಂಭಿಸಿದ ಬಳಿಕ, ಭಾರತ ಯುರೋಪ್‌ಗೆ ಪರ್ಯಾಯ ಮಾರ್ಗ ಹೊಂದುವಲ್ಲಿ ಸಾಕಷ್ಟು ಸವಾಲುಗಳನ್ನು ಎದುರಿಸಿದೆ. ಭಾರತ ಐಎಂಇಸಿ ಯೋಜನೆಯ ಮೂಲಕ ದಕ್ಷಿಣ ಏಷ್ಯಾ ರಾಷ್ಟ್ರಗಳಲ್ಲಿ ಮತ್ತು ಮಧ್ಯ ಪೂರ್ವದಲ್ಲಿ ಚೀನಾ ನಿಯಂತ್ರಿತ ಬಂದರುಗಳ ಜಾಲದ ಮೇಲಿನ ಅವಲಂಬನೆಯನ್ನು ಕಡಿಮೆಗೊಳಿಸಲು ಉದ್ದೇಶಿಸಿದೆ.
2021ರ ಕೊನೆಯ ಭಾಗದಲ್ಲಿ, ಮಧ್ಯ ಪೂರ್ವ ಹಾಗೂ ಉತ್ತರ ಆಫ್ರಿಕಾಗಳು ಚೀನಾದ ಬೆಲ್ಟ್ ಆ್ಯಂಡ್ ರೋಡ್ ಇನಿಷಿಯೇಟಿವ್ ಅಡಿಯಲ್ಲಿ 123 ಬಿಲಿಯನ್ ಡಾಲರ್ ಹೂಡಿಕೆ ಪಡೆದುಕೊಂಡಿವೆ.
ದೆಹಲಿಯ ಮಹತ್ವಾಕಾಂಕ್ಷಿ ಇಂಟರ್ನ್ಯಾಷನಲ್ ನಾರ್ತ್ ಸೌತ್ ಟ್ರಾನ್ಸ್‌ಪೋರ್ಟ್ ಕಾರಿಡಾರ್ ಯೋಜನೆ ಭಾರತ ಮತ್ತು ಯುರೋಪನ್ನು ಇರಾನಿನ ಚಾಬಹಾರ್ ಬಂದರು, ಸಮುದ್ರ ರಹಿತ ಮಧ್ಯ ಏಷ್ಯಾ, ಹಾಗೂ ರಷ್ಯಾ ಮೂಲಕ ಸಂಪರ್ಕಿಸುವ ಗುರಿ ಹೊಂದಿದ್ದು, ಇರಾನ್ ಮೇಲೆ ಅಂತಾರಾಷ್ಟ್ರೀಯ ಆರ್ಥಿಕ ನಿರ್ಬಂಧಗಳು ಮತ್ತು ಉಕ್ರೇನ್ ಯುದ್ಧದ ಕಾರಣದಿಂದ ಹಲವು ಅಡಚಣೆಗಳನ್ನು ಎದುರಿಸಿತು.
ಐಎಂಇಸಿಗೆ ಸಂಬಂಧಿಸಿದಂತೆ, ಇದರಲ್ಲಿ ಯಾವೆಲ್ಲ ಖಾಸಗಿ ಕಂಪನಿಗಳು ಭಾಗವಹಿಸಲಿವೆ, ಅವುಗಳು ಕೈಗೊಳ್ಳಬೇಕಾದ ಕಾರ್ಯಗಳು ಯಾವ ರೀತಿಯವು, ಸಾರ್ವಜನಿಕ ಮತ್ತು ಖಾಸಗಿ ಪಾಲ್ಗೊಳ್ಳುವಿಕೆಯ ಚೌಕಟ್ಟುಗಳ ಕುರಿತು ಇನ್ನೂ ಹಲವಾರು ಅನಿಶ್ಚಿತತೆಗಳಿವೆ.
“ಈ ವಿಚಾರಗಳಿಗೆ ಸಂಬಂಧಿಸಿದಂತೆ, ಹಲವು ಆಯಾಮಗಳು ಅನಿಶ್ಚಿತವಾಗಿವೆ” ಎನ್ನುತ್ತಾರೆ ಬ್ರಸೆಲ್ಸ್ ಸ್ಕೂಲ್ ಆಫ್ ಗವರ್ನೆನ್ಸ್‌ನಲ್ಲಿ ಅಂತರಾಷ್ಟ್ರೀಯ ಸಂಬಂಧಗಳ ಉಪನ್ಯಾಸಕರಾಗಿರುವ, ಲೇಖಕರೂ ಆದ ಬರ್ಟನ್.
ಈ ಸಮಸ್ಯೆಗಳನ್ನು ಪರಿಹರಿಸುವ ನಿಟ್ಟಿನಲ್ಲಿ, ಎರಡು ತಿಂಗಳ ಕ್ರಿಯಾ ತಂಡವನ್ನು ಸ್ಥಾಪಿಸಲಾಗಿದೆಯಾದರೂ, ಈ ಯೋಜನೆಯ ಯಶಸ್ಸು ಖಾಸಗಿ ಹೂಡಿಕೆಯ ಮೇಲೆ ಅವಲಂಬಿತವಾಗಿರುವುದರಿಂದ ಫಲಶೃತಿ ಕಷ್ಟಕರ ಎಂದು ಅವರು ಅಭಿಪ್ರಾಯ ಪಡುತ್ತಾರೆ.
ಬರ್ಟನ್ ಪ್ರಕಾರ, ಇದರಲ್ಲಿ ಪಾಲ್ಗೊಳ್ಳುವ ಆಸಕ್ತಿ ಹೊಂದಿರುವ ಕಂಪನಿಗಳು ಸಂಭಾವ್ಯ ಅಪಾಯಗಳು ಮತ್ತು ಸಂಭಾವ್ಯ ಲಾಭಗಳು ಎರಡನ್ನೂ ಲೆಕ್ಕಾಚಾರ ಹಾಕಿ, ಬಳಿಕವೇ ನಿರ್ಧಾರ ಕೈಗೊಳ್ಳಬೇಕಾಗುತ್ತದೆ. ಇದು ಆಯಾ ರಾಷ್ಟ್ರಗಳು ಕೈಗೊಂಡಿರುವ ಜಾಗತಿಕ ರಾಜಕಾರಣದ ಲೆಕ್ಕಾಚಾರದಿಂದ ಭಿನ್ನವಾಗಿರುತ್ತದೆ.
ಅವರ ಪ್ರಕಾರ, ಖಾಸಗಿ ವಲಯದ ಆರ್ಥಿಕ ನೇತೃತ್ವದ ಮೇಲೆ ಅವಲಂಬಿತವಾಗಿರುವುದು ಹಲವು ಸವಾಲುಗಳನ್ನು ಉಂಟುಮಾಡಬಲ್ಲದು. ಇದು ಕೇವಲ ಆರ್ಥಿಕ ಸವಾಲುಗಳು ಮಾತ್ರವಲ್ಲದೆ, ಜಾಗತಿಕ ರಾಜಕಾರಣದ ದೃಷ್ಟಿಯಿಂದಲೂ ಸವಾಲೆಸೆಯಲಿದೆ.
ಗಿರೀಶ್ ಲಿಂಗಣ್ಣ
(ಲೇಖಕರು ಬಾಹ್ಯಾಕಾಶ ಮತ್ತು ರಕ್ಷಣಾ ವಿಶ್ಲೇಷಕ)
ಮತ್ತಷ್ಟು ಅಭಿಮತ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 11:02 pm, Sat, 23 September 23