ಸಮಾಜಮುಖೀ ವಿಜ್ಞಾನಿ ಡಾ. ಎಮ್ಎಸ್ ಸ್ವಾಮಿನಾಥನ್
Tribute To MS Swaminathan; ಖ್ಯಾತ ಕೃಷಿ ವಿಜ್ಞಾನಿ ಹಾಗೂ ಹಸಿರು ಕ್ರಾಂತಿಯ ಹರಿಕಾರ ಎಂ.ಎಸ್. ಸ್ವಾಮಿನಾಥನ್ ಚೆನ್ನೈನಲ್ಲಿ ಗುರುವಾರ ಇಹಲೋಕ ತ್ಯಜಿಸಿದ್ದಾರೆ. ದೇಶದ ವಿಜ್ಞಾನ ಕ್ಷೇತ್ರಕ್ಕೆ ಅವರ ಕೊಡುಗೆ ಮಹತ್ತರವಾದದ್ದು. ಖ್ಯಾತ ಸಂರಕ್ಷಣಾ ಜೀವಶಾಸ್ತ್ರಜ್ಞ ಶಿರಸಿಯ ಡಾ. ಕೇಶವ ಎಚ್. ಕೊರ್ಸೆ ಅವರು ಸ್ವಾಮಿನಾಥನ್ ಕುರಿತು ಸಲ್ಲಿಸಿರುವ ಅಕ್ಷರ ನಮನ ಇಲ್ಲಿದೆ.
ತೊಂಭತ್ತರ ದಶಕದ ಮಧ್ಯಭಾಗದಲ್ಲಿ ಮದ್ರಾಸಿನ ಎಮ್ಎಸ್ ಸ್ವಾಮಿನಾಥನ್ (MS Swaminathan) ಸಂಶೋಧನಾ ಸಂಸ್ಥೆಗೆ ಓರ್ವ ಸಂಶೋಧನಾ ವಿದ್ಯಾರ್ಥಿಯಾಗಿ ಸೇರಿದಾಗ ಅನುಭವಿಸಿದ ರೋಮಾಂಚನ ಈಗಲೂ ಹಸಿರಾಗಿದೆ. ಸಸ್ಯಶಾಸ್ತ್ರ, ಕೃಷಿ ವಿಜ್ಞಾನಿ, ಪರಿಸರ ವಿಜ್ನಾನ, ಜೆನೆಟಿಕ್ಸ್- ಯಾವುದೇ ಇರಲಿ, ಜೀವಶಾಸ್ತ್ರಕ್ಷೇತ್ರದಲ್ಲಿನ ಎಲ್ಲರಿಗೂ ಆರಾಧ್ಯ ದೇವತೆ ಎಂಬಷ್ಟು ಆಗಲೇ ಅಂತರಾಷ್ಟ್ರೀಯ ಗೌರವದ ವಿಜ್ಞಾನಿಯಾಗಿದ್ದರು ಈ ಸಂಸ್ಥೆಯ ಮುಖ್ಯಸ್ಥ ಡಾ. ಎ, ಎಸ್. ಸ್ವಾಮಿನಾಥನ್. ಅಂಥವರ ಬಳಿಯೇ ಕುಳಿತು ಕೆಲಸಮಾಡುವದೆಂದರೆ? ಒಂದು ವರ್ಷಕ್ಕೂ ಕಡಿಮೆಕಾಲ ಮಾತ್ರ ನಾನು ಅಲ್ಲಿದ್ದರೂ, ಅದು ನನ್ನ ಜೀವನದ ಅತ್ಯುತ್ತಮ ಘಳಿಗೆಗಳಾಗಿ ನನಗೆ ಒದಗಿವೆ. ಅವರು ಎಷ್ಟು ಮಹತ್ವದ ವಿಜ್ಞಾನಿಯಾಗಿದ್ದರೋ, ಅಷ್ಟೇ ಶ್ರೇಷ್ಟ ಸಹೃದಯಿ ಮನುಷ್ಯ ಸಹ ಆಗಿದ್ದರು. ಮೆಲುಮಾತು, ನಗುಮುಖ, ತಾಳ್ಮೆಯ ಮೂರ್ತಿ, ಗೌರವವರ್ಣ, ಸದಾ ಪರಹಿತ ಚಿಂತಕ- ಪ್ರೊ. ಎಮ್. ಎಸ್. ಸ್ವಾಮಿನಾಥನ್ ಇದೀಗ ಇಹಲೋಕ ತ್ಯಜಿಸಿದ್ದಾರೆ. ಇಪ್ಪತ್ತನೇ ಶತಮಾನವು ಸೃಷ್ಟಿಸಿದ ಭಾರತದ ಶ್ರೇಷ್ಟ ವಿಜ್ಞಾನಿಗಳಲೊಬ್ಬರಾದ ಎಮ್.ಎಸ್.ಎಸ್. ಅವರಿಗೆ ಗೌರ್ವಪೂರ್ಣ ಶೃದ್ಧಾಂಜಲಿ.
ಮಣಕೊಂಬು ಸಾಂಬಶಿವನ್ ಸ್ವಾಮಿನಾಥನ್ (7 ಅಗಸ್ಟ್ 1925 – 28 ಸೆಪ್ಟೆಂಬರ್ 2023) ಭಾರತ ಕಂಡ ಅಪ್ರತಿಮ ಕೃಷಿ ವಿಜ್ಞಾನಿ, ತಳಿಶಾಸ್ತ್ರಜ್ಞ, ಪರಿಸರ ಶಾಸ್ತ್ರಜ್ಞ, ಕೃಷಿ ಹಾಗೂ ವಿಜ್ನಾನ ಆಡಳಿತಗಾರ ಹಾಗೂ ನೀತಿನಿರೂಪಕ. ಗಾಂಧೀ ಹಾಗೂ ಟಾಗೋರ್ ಅವರಿಂದ ಪ್ರೇರಿತರಾಗಿದ್ದ, ಸ್ವಾತಂತ್ರ ಚಳುವಳಿಯಲ್ಲಿ ತೊಡಗಿಸಿಕೊಡ ಗೌರವಾನ್ವಿತ ಕುಟುಂಬದಲ್ಲಿ ಜನಿಸಿದವರು. ಅವರ ಬಹುತೇಕ ಶಿಕ್ಷಣ ಭಾರತದಲ್ಲೇ ಸಾಗಿದ್ದು ಉಲ್ಲೇಖನೀಯ. ಆನಂತರ ವಿದೇಶದಲ್ಲಿ ಹೆಚ್ಚಿನ ಸಂಶೋಧನಾ ಪದವಿ, ಅನುಭವಗಳಿಸಿ, ಪುನಃ ದೇಶಕ್ಕೆ ಮರಳಿ ಇಲ್ಲಿನ ಕೃಷಿ ಸಂಶೋಧನಾ ಕಾರ್ಯ ಮುಂದುವರಿಸಿದರು. ಕೃಷಿಯಲ್ಲಿ ಆಧುನಿಕ ತಂತ್ರಜ್ನಾನ ಅಳವಡಿಸಲು ಅವರು ಮಾಡಿದ ಸಂಶೋಧನೆ ಹಾಗೂ ಸಾಂಸ್ಥಿಕ ಪ್ರಯತ್ನದಿಂದಾಗಿಯೇ, ಅರವತ್ತು-ಎಪ್ಪತ್ತರ ದಶಕದಲ್ಲಿ ದೇಶವು ತೀವೃ ಆಹಾರ ಕೊರತೆಯಿಂದ ಪಾರಾಯಿತು ಎಂಬುದು ನಿರ್ವಿವಾದ. ಹಾಗೆಂದೇ ಅವರನ್ನು ಹಸಿರು ಕ್ರಾಂತಿಯ ಹರಿಕಾರ ಎಂದು ಈಗಲೂ ಗೌರವಿಸುವದು. ಇದು ಆ ಕಾಲಘಟ್ಟದಲ್ಲಿ ಅಭಿವೃದ್ಧಿಶೀಲ ರಾಷ್ಟ್ರವೊಂದಕ್ಕೆ ಅಸಾಧ್ಯವೆನ್ನಬಹುದಾದ ಸಾಧನೆಯಾಗಿತ್ತು. ಇದಕ್ಕಾಗಿಯೇ, 1987ರಲ್ಲಿ ಅವರನ್ನು ವಿಶ್ವ ಆಹಾರ ಪ್ರಶಸ್ತಿ ನೀಡಿ ಗೌರವಿಸಿದ್ದು.
ಆದರೆ, ತೊಂಬತ್ತರ ದಶಕದ ಹೊತ್ತಿಗೆ ಹಸಿರುಕ್ರಾಂತಿಯ ಮಿತಿ ಮತ್ತು ಅಪಾಯಗಳು ಅರಿವಾಗಲು ಆರಂಭವಾದವು. ಅವರ ವಿರುದ್ಧ ಟೀಕೆಗಳೂ ಬಂದವು. ಆದರೆ, ಅವರು ಅದನ್ನು ಒಪ್ಪಿ, ಅದನ್ನು ಮೀರುವ ಸಂಶೋಧನೆ-ಶಿಕ್ಷಣದಲ್ಲಿ ತೊಡಗಿಸಿಕೊಂಡರು. ಇದು ನಿಜಕ್ಕೂ ಭಾರತೀಯ ವಿಜ್ಞಾನಿಗಳಲ್ಲಿ ಅಪರೂಪವಾಗಿದ್ದ ಗುಣ. ತಮ್ಮ ಸಂಶೋಧನಾ ಜೀವನದ ಈ ಎರಡನೇ ಇನಿಂಗ್ಸಿನಲ್ಲಿ, ಅವರು ನಿತ್ಯ ಹಸಿರುಕ್ರಾಂತಿ ಎಂಬ ಕಲ್ಪನೆ ನೀಡಿ, ದೇಶದೆಲ್ಲೆಡೆ ಬಹು ಆಯಾಮಗಳ ಸಂಶೋಧನಾ ಪ್ರಯತ್ನಗಳಿಗೆ ಪ್ರೇರಣೆ ನೀಡಿದರು. ಸ್ವಾಮಿನಾಥನ್ ಸಂಸ್ಥೆಗೆ ನಾನು ಸೇರುವ ಹೊತ್ತಿಗೆ ಈ ನಿಟ್ಟಿನಲ್ಲಿ ಅವರ ಪ್ರಯತ್ನ ಸಾಗಿತ್ತು. ಕೃಷಿಕರ ಹಾಗೂ ಸಮುದಾಯದ ಪಾರಂಪರಿಕ ಕೌಶಲ್ಯ ಪೋಷಿಸುತ್ತ, ಪರಿಸರ-ಜೀವವೈವಿಧ್ಯವನ್ನು ಕಾಪಾಡಿಕೊಳ್ಳುತ್ತ, ಕೃಷಿಯನ್ನು ಸುಸ್ಥಿರಗೊಳಿಸುವ ದೃಷ್ಟಿಕೋನವದು. ಇದು ಇವತ್ತಿಗೂ ತೀರಾ ಅಗತ್ಯವಾದ ಚಿಂತನೆ. ಹೀಗಾಗಿ, ಎಮ್.ಎಸ್.ಎಸ್. ಅವರನ್ನು ಈಗ ಶ್ರೇಷ್ಠ ಆರ್ಥಿಕ ಕೃಷಿ-ಪರಿಸರ ತಜ್ಞ ಎಂದು ವರ್ಣಿಸುವದು ಸೂಕ್ತವಾಗಿಯೇ ಇದೆ.
ಹಸಿರುಕ್ರಾಂತಿ ವಿಜ್ಞಾನ-ತಂತ್ರಜ್ಞಾನದ ಸಂಶೋಧನೆಗಳನ್ನು ಸಮರ್ಥವಾಗಿ ಮುನ್ನಡೆಸಲು ಪ್ರತ್ಯೇಕ ಸಂಶೋಧನಾ ಸಂಸ್ಥೆಯೊಂದನ್ನು ಸ್ಥಾಪಿಸಲು, 1970ರಲ್ಲಿಯೇ ವಿಜ್ಞಾನಿ ಸಿ.ವಿ. ರಾಮನ್ ಅವರಿಗೆ ಸಲಹೆ ನೀಡಿದ್ದರಂತೆ. ಅದು ಅವರ ಮನದೊಳಗೆ ಸುಪ್ತವಾಗಿರಬೇಕು. 1988ರಲ್ಲಿ ಅವರಿಗೆ ವಿಶ್ವ ಆಹಾರ ಪ್ರಶಸ್ತಿ ಬಂದಾಗ, ತನ್ನಲ್ಲಿದ್ದ ಹಣದ ಜೊತೆಗೆ ಆ ಪ್ರಶಸ್ತಿ ಮೊತ್ತವನ್ನೂ ಸೇರಿಸಿ ಚೆನ್ನೈನಲ್ಲಿ ಎಮ್.ಎಸ್.ಸ್ವಾಮಿನಾಥನ್ ಸಂಶೋಧಾನಾ ಸಂಸ್ಥೆ ಸ್ಥಾಪಿಸಿದರು. ಇದು ಈಗ ಎಷ್ಟು ವಿಶ್ವಮಾನ್ಯವಾಗಿ ಬೆಳೆದಿದೆಯೆಂದರೆ, 1996ರಲ್ಲಿ ಅದಕ್ಕೆ ಪ್ರಸಿದ್ಧ ಬ್ಲೂ-ಪ್ಲಾನೆಟ್ ಪ್ರಶಸ್ತಿ ಲಭಿಸಿದೆ. ಪರಿಸರ ಸಂರಕ್ಷಣೆ ಹಾಗೂ ಸಾಮಾಜಿಕ ಅಭ್ಯುದಯ ಸಾಧಿಸುವ ಸುಸ್ಥಿರ ಅಭಿವೃದ್ಧಿ ಕಲ್ಪನೆಯನ್ನು ನಮ್ಮ ನೆಲದಲ್ಲಿ ಪ್ರಯೋಗಸಿದ್ಧ ಮಾಡಿದ ಅವರ ಪರಿಶ್ರಮದ ಪ್ರತೀಕವದು.
ಕಳೆದ ಶತಮಾನದ ದ್ವಿತೀಯಾರ್ಧದಲ್ಲಿ ದೇಶದ ಕೃಷಿಶಿಕ್ಷಣ, ಸಂಶೋಧನೆ, ಸರ್ಕಾರಿ ಕೃಷಿನೀತಿ ಇವೆಲ್ಲಕ್ಕೂ ಸಮರ್ಥ ನೇತೃತ್ವ ನೀಡಿ, ಮೂರು ತಲೆಮಾರಿಗೆ ಮಾರ್ಗದರ್ಶನ ನೀಡಿದ ಶ್ರೇಷ್ಠ ವಿಜ್ಞಾನಿ ಅವರು. ಸಿ.ವಿ. ರಾಮನ್, ಹೋಮಿ ಬಾಬಾ, ವಿಕ್ರಂ ಸಾರಾಭಾಯ್, ಎಸ್. ಚಂದ್ರಶೇಖರ್, ಜಗದೀಶಚಂದ್ರ ಬೋಸ್, ಹರಗೋವಿಂದ ಖೊರಾನಾ ಮುಂತಾದ ಶ್ರೇಷ್ಟರ ಸಾಲಿನಲ್ಲಿ ಇರಿಸಬಹುದಾದ ಹೆಸರು. ಭಾರತದಂಥ ಅಭಿವೃದ್ಧಿಶೀಲ ದೇಶವು ಕೃಷಿ ಸಂಶೋಧನೆಯಲ್ಲಿ ಅಭಿವೃದ್ಧಿಹೊಂದಿದ ದೇಶಗಳ ಸಾಲಲ್ಲಿ ಇಂದು ನಿಲ್ಲಲು ಸಾಧ್ಯವಾಗಿದ್ದರೆ, ಅದರಲ್ಲಿ ಅವರ ಕೊಡುಗೆ ಬಹಳಷ್ಟಿದೆ. ಪದ್ಮಭೂಷಣ, ಹಲವಾರು ವಿಶ್ವವಿದ್ಯಾಲಗಳ ಗೌರವ ಡಾಕ್ಟೋರೇಟ್, ಶಾಂತಿಸ್ವರೂಪ ಭಟ್ನಾಗರ್ ಪ್ರಶಸ್ತಿ, ಸೇರಿದಂತೆ ಹಲವು ಜಾಗತಿಕ ಮೌಲ್ಯದ ಪ್ರಶಸ್ತಿ-ಗೌರವಗಳು ಅವರಿಗೆ ಸಂದಿರುವದು ಉಚಿತವಾಗಿಯೇ ಇದೆ.
ಅವರ ಪತ್ನಿ ಡಾ. ಮೀನಾ ಸ್ವಾಮಿನಥನ್ (1933 -2022) ಪ್ರಸಿದ್ದ ಸಮಾಜಶಾಸ್ತ್ರಜ್ಞೆ ಹಾಗೂ ಶಿಕ್ಷಣತಜ್ಞೆಯಾಗಿದ್ದರು. ಅವರ ಮೂವರು ಹೆಣ್ಣುಮಕ್ಕಳು ತಮ್ಮತಮ್ಮ ಕ್ಷೇತ್ರದಲ್ಲಿ ಅಪಾರ ಸಾಧನೆಗೈದು ವ್ಯಾಪಕ ಗೌರವಗಳಿಸಿದ್ದಾರೆ. ಅವರೆಂದರೆ: ವಿಶ್ವ ಆರೋಗ್ಯ ಸಂಸ್ಥೆಯಲ್ಲಿ ಉನ್ನತ ಹುದ್ದೆಯಲ್ಲಿರುವ ಪ್ರಸಿದ್ದ ಮಕ್ಕಳತಜ್ನ ವೈದ್ಯೆ ಸೌಮ್ಯಾ ಸ್ವಾಮಿನಾಥನ್, ಪ್ರಸಿದ್ಧ ಸಂಖ್ಯಾಶಾಸ್ತ್ರಜ್ನೆ ಡಾ. ಮಧುರಾ ಸ್ವಾಮಿನಾಥನ್, ಹಾಗೂ ಮಹಿಳಾ ಅಭಿವೃದ್ಧಿ ಶಿಕ್ಷಣತಜ್ನೆ ನಿತ್ಯಾ ಸ್ವಾಮಿನಾಥನ್. ಕುಟುಂಬ. ವೃತ್ತಿ, ಸಾಮಾಜಿಕ ಜೀವನ- ಎಲ್ಲದರಲ್ಲೂ ಸಾರ್ಥಕ ಬದುಕು ಎಮ್.ಎಸ್.ಎಸ್. ಅವರದ್ದು.
ಇದನ್ನೂ ಓದಿ: MS Swaminathan: ಖ್ಯಾತ ಕೃಷಿ ವಿಜ್ಞಾನಿ, ಹಸಿರು ಕ್ರಾಂತಿಯ ಹರಿಕಾರ ಎಂಎಸ್ ಸ್ವಾಮಿನಾಥನ್ ನಿಧನ
ವಿನೋಭಾ ಅವರ ಭೂದಾನ ಚಳುವಳಿಯಲ್ಲಿ ತಮ್ಮ ಕುಟುಂಬದ ಬಹುತೇಕ ಕೃಷಿಭೂಮಿಯನ್ನು ತಮ್ಮ ಯೌವನದಲ್ಲೇ ದಾನಮಾಡಿದ ವಿಶಾಲ ಮನಸ್ಸಿನವರು ಸ್ವಾಮಿನಾಥನ್. ಇದೀಗ, ತಮ್ಮ ಸ್ವಂತದ್ದನ್ನೆಲ್ಲ ರಾಷ್ಟ್ರದ ಹೆಮ್ಮೆಯಾಗಿರುವ ಎಮ್.ಎಸ್. ಸ್ವಾಮಿನಾಥನ್ ಸಂಶೋಧನಾ ಸಂಸ್ಥೆಗೆ ಧಾರೆಯೆರೆದು ಇಹಲೋಕ ತ್ಯಜಿಸಿದ್ದಾರೆ. ಸರ್ಕಾರಿ ನಿಲುವು ತಪ್ಪಾಗಿದ್ದಾಗಲೂ ಅದನ್ನು ಖಂಡಿಸಲಿಲ್ಲವೆಂದೋ, ಕುಲಾಂತರಿ ತಂತಜ್ಞಾನದ” ಪರವಾಗಿದ್ದರು ಎಂಬ ಕಾರಣಗಳನ್ನೋ ಹೆಕ್ಕಿತೆಗೆದು ಅವರನ್ನು ಟೀಕಿಸುವವರು, ಅದಕ್ಕೂ ಮೀರಿದ ಅವರ ಒಟ್ಟೂ ಜೀವನದ ಆದರ್ಶ, ಕಾಣ್ಕೆ ಹಾಗೂ ಕೊಡುಗೆಗಳನ್ನು ಈಗಲಾದರೂ ಗುರುತಿಸಿ ಗೌರವಿಸುವಂತಾಗಲಿ ಎಂದು ಹಾರೈಸುತ್ತೇನೆ.
ಡಾ. ಕೇಶವ ಎಚ್. ಕೊರ್ಸೆ
(ಲೇಖಕರು – ಸಂರಕ್ಷಣಾ ಜೀವಶಾಸ್ತ್ರಜ್ಞ, ಶಿರಸಿ)