ಜಿ20 ಡಿಜಿಟಲ್ ಮ್ಯೂಸಿಯಂ: ಬಾಂಗ್ಲಾದೇಶದ ಪಿತಾಮಹನ ಪ್ರತಿಮೆ- ಬಾಂಗ್ಲಾದೇಶದ ಪಿತಾಮಹ ಎಂದು ಪರಿಗಣಿಸಲಾದ ಬಾಂಗಬಂಧು ಶೇಖ್ ಮುಜಿಬುರ್ ರಹಮಾನ್ ಅವರ ಪ್ರತಿಮೆ ಇದು. 1920ರಲ್ಲಿ ಹುಟ್ಟಿ 1975ರವರೆಗೂ ಬದುಕಿದ್ದ ಇವರು ಬಾಂಗ್ಲಾ ಸ್ವಾಭಿಮಾನ ಚಳವಳಿ ರೂಪಿಸುವಲ್ಲಿ ಮಹತ್ವದ ಪಾತ್ರ ವಹಿಸಿದ್ದರು. ಪಾಕಿಸ್ತಾನದಿಂದ ಬಾಂಗ್ಲಾದೇಶವನ್ನು ಮುಕ್ತಿ ಹೊಂದಲು ಪ್ರೇರಣೆ ಮತ್ತು ಶಕ್ತಿಯಾಗಿದ್ದರು.
ಜಿ20 ಡಿಜಿಟಲ್ ಮ್ಯೂಸಿಯಂ: ಈಜಿಪ್ಟ್ನ ಚಿನ್ನದ ಮುಖಗವಸು- ವಿಶ್ವದಲ್ಲಿ ಅತ್ಯಂತ ಪ್ರಾಚೀನ ನಾಗರಿಕತೆಗಳನ್ನು ಹೊಂದಿದ ಸ್ಥಳದಲ್ಲಿ ಈಜಿಪ್ಟ್ ಕೂಡ ಒಂದು. ಇಲ್ಲಿಯ ಪುರಾತನ ದೊರೆಯಲ್ಲಿ ಟುಟನ್ಖಮುನ್ ಒಬ್ಬರು. ಈ ರಾಜನ ಗೋರಿ ಸಿಕ್ಕಿದ್ದು, ಅದರಲ್ಲಿ ಚಿನ್ನದ ಮುಖಗವಸು ಅಥವಾ ಮಾಸ್ಕ್ ಇತ್ತು. ಟುಟನ್ಖಮುನ್ ಸತ್ತ ಬಳಿಕ ಈಜಿಪ್ಟ್ನ ದೇವರಾದ ಓಸಿರಿಸ್ ರೀತಿಯಲ್ಲಿ ಕಾಣುವಂತೆ ಅಲಂಕರಿಸಲಾಗಿತ್ತು.
ಜಿ20 ಡಿಜಿಟಲ್ ಮ್ಯೂಸಿಯಂ: ಮಾರಿಷಸ್ನ ರವನ್ ಸಂಗೀತ ವಾದ್ಯ- ಮಾರಿಷಸ್ನ ಸಾಂಪ್ರದಾಯಿಕ ಸಂಗೀತ ಪ್ರಕಾರವಾದ ಸೆಗಾದಲ್ಲಿ ಬಳಸುವ ಒಂದು ವಾದ್ಯ ರವನ್ (Ravann). ಇಲ್ಲಿ ಗುಲಾಮರಾಗಿದ್ದ ವ್ಯಕ್ತಿಗಳು ತಮ್ಮಲ್ಲಿನ ಹತಾಶೆಯನ್ನು ಸಂಗೀತದ ಮೂಲಕ ತೋರ್ಪಡಿಸಲು ರವನ್ ಅನ್ನು ಬಳಸುತ್ತಿದ್ದರು.
ಜಿ20 ಡಿಜಿಟಲ್ ಮ್ಯೂಸಿಯಂ: ನೆದರ್ಲ್ಯಾಂಡ್ಸ್ನ ಜಿಗ್ಜ್ಯಾಗ್ ಕುರ್ಚಿ- 20ನೇ ಶತಮಾನದಲ್ಲಿ ಜೀವಿಸಿದ್ದ ಡಚ್ ವಾಸ್ತುಶಿಲ್ಪಿ ಗೆರಿಟ್ ರೀಟ್ವೆಲ್ಡ್ ಅವರು ಜಿಗ್ ಜ್ಯಾಗ್ ಆಕಾರದ ಕುರ್ಚಿಯ ವಿನ್ಯಾಸ ಮಾಡಿದ್ದರು. ಕೇವಲ ನಾಲ್ಕು ಮರದ ಹಲಗೆಗಳ ಸಹಾಯದಿಂದ ಬಹಳ ಸರಳವಾಗಿ ಈ ಕುರ್ಚಿಯನ್ನು ತಯಾರಿಸಲಾಗುತ್ತದೆ. ವಿನೂತನ ಎನಿಸುವ ಇಂಥ ಸರಳ ಶೈಲಿಯ ಕುರ್ಚಿಯನ್ನು ಡಚ್ಚರ ವಾಸ್ತುಶಿಲ್ಪ ಕಲೆಯ ಪ್ರತೀಕವಾಗಿ ಪರಿಗಣಿಸಲಾಗಿದೆ.
ಜಿ20 ಡಿಜಿಟಲ್ ಮ್ಯೂಸಿಯಂ: ನೈಜೀರಿಯಾದ ರಾಣಿ ಇಡಿಯಾ ಪ್ರತಿಮೆ- ನೈಜೀರಿಯಾ ದೇಶದಲ್ಲಿ 16ನೇ ಶತಮಾನದಲ್ಲಿ ಆಳ್ವಿಕೆ ನಡೆಸಿದ್ದ ಬೆನಿನ್ ರಾಜಮನೆತನಕ್ಕೆ ಸೇರಿದ ರಾಣಿ ಇಡಿಯಾ ಅವರ ಶಿರದ ಕಂಚಿನ ಪ್ರತಿಮೆಯನ್ನು ಜಿ20 ಶೃಂಗಸಭೆ ಸ್ಥಳದಲ್ಲಿ ಇಡಲಾಗಿತ್ತು. ಹಾಗೆಯೇ, 15ನೇ ಶತಮಾನದಲ್ಲಿದ್ದ ಯೊರುಬಾ ಅರಸ ಇಫಾ ಅವರ ಕಂಚಿನ ಪ್ರತಿಮೆ ಇತ್ತು. 1938ರಲ್ಲಿ ಸಿಕ್ಕ 18 ಶಿಲ್ಪಗಳಲ್ಲಿ ಇದೂ ಒಂದಾಗಿತ್ತು. ಆಫ್ರಿಕನ್ ಕಲಾ ಪ್ರಕಾರದ ವಿಶೇಷತೆಯನ್ನು ಇದರಲ್ಲಿ ಕಾಣಬಹುದು.
ಜಿ20 ಡಿಜಿಟಲ್ ಮ್ಯೂಸಿಯಂ: ಓಮನ್ ದೇಶದ ಸಾಫ್ಟ್ ಸ್ಟೋನ್ ಬಾಕ್ಸ್- ಬಹಳ ಮೃದುವಾದ ಕಲ್ಲಿನಲ್ಲಿ ಸೂಕ್ಷ್ಮ ಕೆತ್ತನೆಗಳುಳ್ಳ ಕಬ್ಬಿಣ ಯುಗಕ್ಕೆ ಸೇರಿದ ವಸ್ತು ಇದು. ಓಮನ್ ಪ್ರದೇಶದಲ್ಲಿ ಆಗ ಇದ್ದ ಕಲಾವಿದರ ಕೈಕುಸುರಿ ಕಲೆ ಎಷ್ಟು ಅಮೋಘವಾಗಿತ್ತು ಎಂಬುದಕ್ಕೆ ಇದು ಒಂದು ನಿದರ್ಶನ. ದಂತಕಥೆ, ಜಾನಪದ ಕತೆ, ನಿತ್ಯದ ಜೀವನಾನುಭ ಇತ್ಯಾದಿ ಎಲ್ಲವೂ ಈ ಕಲಾಕೃತಿಯಲ್ಲಿ ಕಾಣಬಹುದು.
ಜಿ20 ಡಿಜಿಟಲ್ ಮ್ಯೂಸಿಯಂ: ಸಿಂಗಾಪುರದ ಜಲಕ್ರಾಂತಿ ನ್ಯೂವಾಟರ್- ಸಿಂಗಾಪುರ ದೇಶದ ಜಲ ಸಂರಕ್ಷಣಾ ಕಾರ್ಯಕ್ಕೆ ಪ್ರತೀಕವಾಗಿ ನ್ಯೂವಾಟರ್ (NEWater) ಮತ್ತು ನ್ಯೂಬ್ರಿವ್ (NEWBrew) ಇದೆ. ಈ ದೇಶದಲ್ಲಿ ತ್ಯಾಜ್ಯ ನಿರ್ವಹಣೆ ವ್ಯವಸ್ಥೆ ಬಲವಾಗಿದೆ. ಮೆಂಬ್ರೇನ್ ಟೆಕ್ನಾಲಜಿ ಬಳಸಿ ನೀರು ಶುದ್ಧೀಕರಿಸುವ ವಿಧಾನ ಕಂಡುಹಿಡಿಯಲಾಯಿತು. ಅದನ್ನು ನ್ಯೂವಾಟರ್ ಎಂದು ಕರೆಯಲಾಗುತ್ತದೆ.
ಜಿ20 ಡಿಜಿಟಲ್ ಮ್ಯೂಸಿಯಂ: ಸ್ಪೇನ್ನ ಕೈಬೀಸಣಿಕೆ- ಸ್ಪೇನ್ ದೇಶದಲ್ಲಿ 16ನೇ ಶತಮಾನದಿಂದ ತರಹಾವೇರಿ ವಿನ್ಯಾಸದ ಕೈಬೀಸಣಿಕೆಗಳು ಅಸ್ತಿತ್ವದಲ್ಲಿವೆ. ಅಬೇನಿಕೋಸ್ ಎಂದು ಕರೆಯಲಾಗುವ ಈ ಹ್ಯಾಂಡ್ ಫ್ಯಾನ್ಗಳಲ್ಲಿ ಸೂಕ್ಷ್ಮ ಕಸೂತಿ ಕೆಲಸಗಳನ್ನು ಕಾಣಬಹುದು. ಸ್ಪೇನ್ ದೇಶದ ಮಹಿಳೆಯರ ಶಕ್ತಿಯ ಸಂಕೇತ ಇದೆಂದು ಪರಿಗಣಿಸಲಾಗುತ್ತದೆ.
ಜಿ20 ಡಿಜಿಟಲ್ ಮ್ಯೂಸಿಯಂ: ಯುಎಇ ದೇಶದ ಚಿನ್ನದ ಕುದುರೆ ಲಗಾಮು- ಒಂದನೇ ಶತಮಾನದ್ದೆನ್ನಲಾದ ಚಿನ್ನದ ಕುದುರೆ ಲಗಾಮೊಂದನ್ನು ಭಾರತ್ ಮಂಟಪಂನಲ್ಲಿ ಪ್ರದರ್ಶನಕ್ಕಿಡಲಾಗಿತ್ತು. ಶಾರ್ಜಾ ಆಮೀರರ ಕುದುರೆಯ ಲಗಾಮು ಇದಾಗಿದೆ. ಸೌದಿ ಅರೇಬಿಯಾ ಸುತ್ತಮುತ್ತಲ ಪ್ರದೇಶದಲ್ಲಿ ಕುದುರೆಗಳು ಇದ್ದವೆಂಬುದಕ್ಕೆ ಸಾಕ್ಷಿಯಾಗಿ ಚಿನ್ನದ ಲಗಾಮು ಇದೆ.
Published On - 3:36 pm, Mon, 11 September 23