Dragon Glimpse: ‘ಡ್ರ್ಯಾಗನ್’ ಸಿನಿಮಾದಲ್ಲಿ ವಿಲನ್ಗಳ ರಾಶಿ; ಗಮನ ಸೆಳೆದ ಗ್ಲಿಂಪ್ಸ್
ಪ್ರಶಾಂತ್ ನೀಲ್ ನಿರ್ದೇಶನದ, ಜೂನಿಯರ್ ಎನ್ಟಿಆರ್ ನಟನೆಯ ಬಹುನಿರೀಕ್ಷಿತ 'ಡ್ರ್ಯಾಗನ್' ಚಿತ್ರದ ನಾಲ್ಕು ನಿಮಿಷಗಳ ಗ್ಲಿಂಪ್ಸ್ ಬಿಡುಗಡೆಯಾಗಿದೆ. 60ರ ಕಾಲಘಟ್ಟದಲ್ಲಿ ಸಾಗುವ ಕಥೆಯು ಬ್ರಿಟಿಷರ ಆಫೀಮು ವ್ಯಾಪಾರ ಹಿನ್ನೆಲೆ ಹೊಂದಿದೆ. ಕೆಜಿಎಫ್ ಮಾದರಿಯಲ್ಲಿ ಡಾರ್ಕ್ ಶೇಡ್, ಕ್ರೂರ ವಿಲನ್ಗಳು ಹಾಗೂ NTR ರಗಡ್ ಪಾತ್ರದಲ್ಲಿ ಮಿಂಚಿದ್ದಾರೆ. ರುಕ್ಮಿಣಿ ವಸಂತ್, ಅನಿಲ್ ಕಪೂರ್ ಸಹ ಇದ್ದು, ಜೂನ್ 11, 2027ಕ್ಕೆ ಬಿಡುಗಡೆ ನಿರೀಕ್ಷಿಸಲಾಗಿದೆ.
Updated on: May 20, 2026 | 7:42 AM

ಸ್ಯಾಂಡಲ್ವುಡ್ ಖ್ಯಾತ ನಿರ್ದೇಶಕ ಪ್ರಶಾಂತ್ ನೀಲ್ ಹಾಗೂ ಟಾಲಿವುಡ್ ನಟ ಜೂನಿಯರ್ ಎನ್ಟಿಆರ್ ಕಾಂಬಿನೇಷನ್ನ ಬಹುನಿರೀಕ್ಷಿತ ಸಿನಿಮಾದ ಮೊದಲ ಅಧಿಕೃತ ಗ್ಲಿಂಪ್ಸ್ ಬಿಡುಗಡೆಯಾಗಿದೆ. ಈ ಚಿತ್ರಕ್ಕೆ ‘ಡ್ರ್ಯಾಗನ್’ ಎಂದು ಶೀರ್ಷಿಕೆ ಇಡಲಾಗಿದ್ದು, ಪ್ರೇಕ್ಷಕರಲ್ಲಿ ಕುತೂಹಲ ಮೂಡಿಸಿದೆ.

ಸಾಮಾನ್ಯವಾಗಿ ಸಿನಿಮಾಗಳ ಟೀಸರ್ ಒಂದು ನಿಮಿಷ ಇರುತ್ತದೆ. ಆದರೆ ಪ್ರಶಾಂತ್ ನೀಲ್ ಬರೋಬ್ಬರಿ ನಾಲ್ಕು ನಿಮಿಷಗಳ ಸುದೀರ್ಘ ಗ್ಲಿಂಪ್ಸ್ ರಿಲೀಸ್ ಮಾಡಿದ್ದಾರೆ. ಈ ವಿಡಿಯೋ ಜೂನಿಯರ್ ಎನ್ಟಿಆರ್ ಅವರ ಜನ್ಮದಿನದ ವಿಶೇಷ ಉಡುಗೊರೆಯಾಗಿ ಹೊರಬಂದಿದೆ.

ಬ್ರಿಟಿಷರು ಭಾರತಕ್ಕೆ ವ್ಯಾಪಾರಕ್ಕಾಗಿ ಬಂದ ಇತಿಹಾಸದ ಹಿನ್ನೆಲೆಯೊಂದಿಗೆ ವಿಡಿಯೋ ಆರಂಭವಾಗುತ್ತದೆ. ಹತ್ತಿ, ಉಕ್ಕು ಮತ್ತು ಮಸಾಲೆ ಪದಾರ್ಥಗಳನ್ನು ಹುಡುಕುತ್ತಾ ಬಂದ ವಿದೇಶಿಯರನ್ನು ಭಾರತದಲ್ಲಿ 250 ವರ್ಷಗಳ ಕಾಲ ಸುದೀರ್ಘವಾಗಿ ಉಳಿಯುವಂತೆ ಮಾಡಿದ್ದು ಕೇವಲ ಒಂದು ಅಪರೂಪದ ಗಿಡ ಎಂದು ವಿವರಿಸಲಾಗುತ್ತದೆ.

ಜಗತ್ತಿನ ಅತ್ಯಂತ ಅಮಲು ಪದಾರ್ಥವಾದ ಹೆರಾಯಿನ್ ತಯಾರಿಸಲು ಆ ಗಿಡದ ಅಫೀಮು ಸಹಾಯ ಮಾಡುತ್ತದೆ. ಬ್ರಿಟಿಷರು ಹೋದ ನಂತರ ಈ ಕರಾಳ ವ್ಯಾಪಾರವು ಅಫ್ಗನ್ ಟ್ರೇಡಿಂಗ್ ಕಂಪನಿ ಮತ್ತು ಗೋಲ್ಡನ್ ಟ್ರೇಡಿಂಗ್ ಕಂಪನಿ ಎಂದು ಎರಡು ಭಾಗವಾಗಿ ದೊಡ್ಡ ಯುದ್ಧಕ್ಕೆ ಕಾರಣವಾಗುತ್ತದೆ.

ಈ ಚಿತ್ರದ ಇಡೀ ಕಥೆಯು 1967ರ ಕಾಲಘಟ್ಟದಲ್ಲಿ ಸಾಗಲಿದ್ದು, ಕೆಜಿಎಫ್ ಚಿತ್ರದ ಮಾದರಿಯಲ್ಲಿಯೇ ಇಲ್ಲೂ ಕೂಡ ಕ್ರೂರ ವಿಲನ್ಗಳ ಸಾಮ್ರಾಜ್ಯವನ್ನು ಸೃಷ್ಟಿಸಲಾಗಿದೆ. ಗ್ಲಿಂಪ್ಸ್ ತುಂಬಾ ನೀಲ್ ಅವರ ಎಂದಿನ ಡಾರ್ಕ್ ಶೇಡ್ ಎದ್ದು ಕಾಣುತ್ತಿದ್ದು, ಹಿನ್ನೆಲೆ ಸಂಗೀತ ಗಮನ ಸೆಳೆಯುತ್ತದೆ.

ಸೃಷ್ಟಿಕರ್ತ ಆರು ದಿನಗಳಲ್ಲಿ ಇಡೀ ಪ್ರಪಂಚವನ್ನು ನಿರ್ಮಿಸಿ ಏಳನೇ ದಿನ ವಿಶ್ರಾಂತಿ ಪಡೆದಾಗ ವಿಲನ್ ಜನನವಾಯಿತು ಎಂದು ವಿಡಿಯೋದಲ್ಲಿ ಹೇಳಲಾಗುತ್ತದೆ. ಇಲ್ಲಿ ಜೂನಿಯರ್ ಎನ್ಟಿಆರ್ ಅವರನ್ನು ಸಂಪೂರ್ಣವಾಗಿ ವಿಲನ್ ಶೇಡ್ ಹೊಂದಿರುವ ರಗಡ್ ಪಾತ್ರದಲ್ಲಿ ಅತ್ಯಂತ ರಾ ಆಗಿ ತೋರಿಸಲಾಗಿದೆ.

ಟ್ರೇಲರ್ ಮಾದರಿಯ ಈ ಝಲಕ್ನಲ್ಲಿ ಕನ್ನಡತಿ ರುಕ್ಮಿಣಿ ವಸಂತ್ ಕಾಣಿಸಿಕೊಂಡಿದ್ದಾರೆ. ನಾಯಕ ಎನ್ಟಿಆರ್ ಶತ್ರುಗಳಿಗೆ ಎಚ್ಚರಿಕೆ ನೀಡುತ್ತಾ, ‘ನನ್ನ ಕನಸಿನಲ್ಲಿ ನಾನು ಕೊಂದವರ ಮುಖ ಬರುವುದಿಲ್ಲ, ಕೇವಲ ಬದುಕುಳಿದ ವೈರಿಗಳ ಮುಖ ಬರುತ್ತದೆ, ನನ್ನ ಕನಸಲ್ಲಿ ಬರಬೇಡಿ’ಎಂದು ಅಬ್ಬರಿಸುತ್ತಾರೆ.

ಈ ಕಥೆಯಲ್ಲಿ ಎಲ್ಲರೂ ವಿಲನ್ಗಳೇ ಆಗಿದ್ದಾರೆ. ವಿಲನ್ಗಳ ಅಟ್ಟಹಾಸ ಮಿತಿಮೀರಿದಾಗ ಅವರನ್ನು ತಡೆಯಲು ಒಬ್ಬ ನಾಯಕ ಬರಲೇಬೇಕು ಎಂಬ ಅದ್ಭುತ ಸಂಭಾಷಣೆ ಇದೆ. ಬಾಲಿವುಡ್ ಹಿರಿಯ ನಟ ಅನಿಲ್ ಕಪೂರ್ ಈ ಚಿತ್ರದಲ್ಲಿ ಒಂದು ಪ್ರಮುಖ ಪಾತ್ರದಲ್ಲಿ ನಟಿಸುತ್ತಿದ್ದಾರೆ.

ರವಿ ಬಸ್ರೂರ್ ಸಂಗೀತವಿರುವ ಈ ಬಿಗ್ ಬಜೆಟ್ ಸಿನಿಮಾವನ್ನು ಜೂನ್ 11, 2027 ರಂದು ವಿಶ್ವಾದ್ಯಂತ ಚಿತ್ರಮಂದಿರಗಳಲ್ಲಿ ಅದ್ಧೂರಿಯಾಗಿ ಬಿಡುಗಡೆ ಮಾಡಲು ಚಿತ್ರತಂಡ ನಿರ್ಧರಿಸಿದೆ. ಸದ್ಯ ಈ ಗ್ಲಿಂಪ್ಸ್ ಸಿನಿಮಾ ಪ್ರೇಮಿಗಳಲ್ಲಿ ಚಿತ್ರದ ಮೇಲಿನ ನಿರೀಕ್ಷೆಯನ್ನು ದುಪ್ಪಟ್ಟು ಮಾಡಿದೆ.

ಪತ್ರಿಕೋದ್ಯಮಕ್ಕೆ ಕಾಲಿಟ್ಟು 9 ವರ್ಷ. ಸಂಯುಕ್ತ ಕರ್ನಾಟಕ, ವಿಜಯವಾಣಿ, ನ್ಯೂಸ್18 ಕನ್ನಡದಲ್ಲಿ ಕೆಲಸ ಮಾಡಿದ ಅನುಭವ ಇದೆ. ಈಗ ಟಿವಿ9 ಕನ್ನಡ ಡಿಜಿಟಲ್ನಲ್ಲಿ ಬರಹ ಕೃಷಿ ಮುಂದುವರಿಸಿದ್ದೇನೆ. ಸಿನಿಮಾ ರಂಗದ ಬಗ್ಗೆ ಮೊದಲಿನಿಂದಲೂ ಆಸಕ್ತಿ. ಅದರ ಜೊತೆ ಬರವಣಿಗೆಯೂ ಸೇರಿತು. ಈಗ ಅದುವೇ ಕಾಯಕ. ಸಿನಿಮಾ ವಿಮರ್ಶೆ, ಚಿತ್ರರಂಗದ ಗಾಸಿಪ್, ಹೊಸ ಸಿನಿಮಾ ಬಗ್ಗೆ ಅಪ್ಡೇಟ್ ನನ್ನ ಕಡೆಯಿಂದ. ಟ್ರಾವೆಲಿಂಗ್ ಕಡೆ ಹೆಚ್ಚು ಆಸಕ್ತಿ. ಓದುವುದು ಎಂದರೆ ಹುಚ್ಚು. ಸಿನಿಮಾ ನೋಡುವುದೂ ಆಸಕ್ತಿಗಳಲ್ಲಿ ಒಂದು. ಹಲವು ಸಿನಿಮಾ ನೋಡಿ ಈಗಾಗಲೇ ವಿಮರ್ಶೆ ಮಾಡಿ ನಿಮ್ಮ ಮುಂದಿಟ್ಟಿದ್ದೇನೆ.
Read More




