- Kannada News Photo gallery Union Budget 2025, few measures expected on Feb 1st, experts reject probability of big market crash, news in Kannada
ಫೆ. 1ರ ಬಳಿಕ ಮಾರುಕಟ್ಟೆ ಕುಸಿಯುತ್ತದಾ? ಬಜೆಟ್ನಲ್ಲಿ ಸಂಭಾವ್ಯ ಘೋಷಣೆಗಳಿವು…
ನವದೆಹಲಿ, ಜನವರಿ 26: ಈ ಬಾರಿಯ ಬಜೆಟ್ನಲ್ಲಿ ಇಪಿಎಫ್ಒ ಪಿಂಚಣಿ ಏರಿಕೆ, ಆದಾಯ ತೆರಿಗೆ ವಿನಾಯಿತಿ ಮಿತಿಯನ್ನು ಏರಿಕೆ ಮಾಡುವ ಸಾಧ್ಯತೆ ಇದೆ. ಅತಿಶ್ರೀಮಂತರಿಗೆ ಹೆಚ್ಚು ತೆರಿಗೆ ಬೀಳುವ ನಿರೀಕ್ಷೆ ಇದೆ ಎನ್ನುತ್ತಾರೆ ರೈಟ್ ಹೊರೈಜಾನ್ನ ಫಂಡ್ ಮ್ಯಾನೇಜರ್ ಅನಿಲ್ ರೆಗೋ; ಹಾಗೆಯೇ, ಬಜೆಟ್ ಬಳಿಕ ಮಾರುಕಟ್ಟೆ ಬೀಳುವ ಸಾಧ್ಯತೆಯನ್ನು ಅವರು ತಳ್ಳಿ ಹಾಕಿದ್ದಾರೆ. ಈ ಬಗ್ಗೆ ಒಂದು ವರದಿ:
Updated on: Jan 26, 2025 | 1:04 PM

ಕಳೆದ ಆರು ತಿಂಗಳಿಂದಲೂ ಸಾಕಷ್ಟು ಅಲುಗಾಟದಲ್ಲಿರುವ ಷೇರು ಮಾರುಕಟ್ಟೆ ಫೆಬ್ರುವರಿ 1ರ ಬಜೆಟ್ ಬಳಿಕ ತೀವ್ರ ರೀತಿಯಲ್ಲಿ ಕುಸಿತ ಕಾಣಬಹುದು ಎನ್ನುವ ಸುದ್ದಿ ಹರಿದಾಡುತ್ತಿದೆ. ಈ ವಿಚಾರದ ಬಗ್ಗೆ ಮಾತನಾಡಿರುವ ರೈಟ್ ಹೊರೈಜಾನ್ಸ್ನ ಸಂಸ್ಥಾಪಕ ಮತ್ತು ಫಂಡ್ ಮ್ಯಾನೇಜರ್ ಆಗಿರುವ ಅನಿಲ್ ರೆಗೋ ಅವರ ಪ್ರಕಾರ, ಬಜೆಟ್ ಬಳಿಕ ಮಾರ್ಕೆಟ್ ಕರೆಕ್ಷನ್ ಸಣ್ಣ ಮಟ್ಟದಲ್ಲಿ ಆಗಬಹುದು. ಆದರೆ, ದೊಡ್ಡ ಮಟ್ಟದಲ್ಲಿ ಮಾರುಕಟ್ಟೆ ಕುಸಿಯುವ ಸಾಧ್ಯತೆಯನ್ನು ಅವರು ತಳ್ಳಿಹಾಕಿದ್ದಾರೆ.

ಷೇರು ಮಾರುಕಟ್ಟೆ ಈಗಾಗಲೇ ಸಾಕಷ್ಟು ಪ್ರತಿರೋಧ ತೋರಿದೆ. ಹೂಡಿಕೆದಾರರು ಸಕಾರಾತ್ಮಕವಾಗಿ ಭಾಗಿಯಾಗುತ್ತಿದ್ದಾರೆ. ಮೂಲಭೂತ ಅಂಶಗಳು ಉತ್ತಮಗೊಳ್ಳುತ್ತಿವೆ. ಹಲವು ಷೇರುಗಳ ಮೌಲ್ಯ ಅಧಿಕ ಮಟ್ಟದಲ್ಲಿದ್ದರೂ, ಅತಿರೇಕ ಎನಿಸುವ ಮಟ್ಟದಲ್ಲಿಲ್ಲ.

ಕಾರ್ಪೊರೇಟ್ ಸಂಸ್ಥೆಗಳ ಆದಾಯ ಉತ್ತಮವಾಗಿಯೇ ಇದೆ. ವಿದೇಶೀ ಸಾಂಸ್ಥಿಕ ಹೂಡಿಕೆದಾರರ ಉಪಸ್ಥಿತಿ ಕಡಿಮೆ. ಇದು ಮಾರುಕಟ್ಟೆಯ ಆರೋಗ್ಯ ಸ್ಥಿತಿಗೆ ದ್ಯೋತಕವಾಗಿದೆ. ಕಿರು ಅವಧಿಯಲ್ಲಿ ಮಾರುಕಟ್ಟೆಯಲ್ಲಿ ವಿಚಲನೆಗಳಾದರೂ, ಬಜೆಟ್ನಲ್ಲಿ ಹಣಕಾಸು ಶಿಸ್ತು ಕಾಯ್ದುಕೊಂಡರೆ ಮತ್ತು ಇನ್ಫ್ರಾಸ್ಟ್ರಕ್ಚರ್ಗಳಲ್ಲಿ ಹೂಡಿಕೆಗೆ ಒತ್ತುಕೊಟ್ಟರೆ ದೀರ್ಘಾವಧಿಯಲ್ಲಿ ಮಾರುಕಟ್ಟೆ ಸರಾಗವಾಗಿರುತ್ತದೆ ಎನ್ನುವುದು ಅನಿಲ್ ರೆಗೋ ಅನಿಸಿಕೆ.

ಡೊನಾಲ್ಡ್ ಟ್ರಂಪ್ ಅವರು ಅಮೆರಿಕ ಅಧ್ಯಕ್ಷರಾಗಿರುವುದು ಭಾರತದ ಮಾರುಕಟ್ಟೆಯಲ್ಲಿ ಅನಿಶ್ಚಿತ ಪರಿಣಾಮ ತರುವ ಸಾಧ್ಯತೆ ಇದೆ. ಆದರೆ, ಭಾರತದಲ್ಲಿ ದೇಶೀಯವಾಗಿ ಉತ್ತಮವಾಗಿರುವ ಅಂಶಗಳು ಬಾಹ್ಯ ಆಘಾತಗಳನ್ನು ನಿಷ್ಕ್ರಿಯಗೊಳಿಸಬಲ್ಲುವು. ಅಮೆರಿಕದ ನೀತಿಗಳು ದೀರ್ಘಾವಧಿಯಲ್ಲಿ ಭಾರತದ ಮೇಲೆ ಬೀರಬಹುದಾದ ಪರಿಣಾಮ ಕಡಿಮೆಯೇ ಇರುತ್ತದೆ ಎನ್ನಲಾಗಿದೆ.

ಇಪಿಎಫ್ಒ ಕನಿಷ್ಠ ಪಿಂಚಣಿಯನ್ನು 1,000 ರೂನಿಂದ 5,000 ರೂಗೆ ಏರಿಸಬಹುದು. ಆದಾಯ ತೆರಿಗೆ ವಿನಾಯಿತಿ ಮಿತಿಯನ್ನು 10 ಲಕ್ಷ ರೂಗೆ ಏರಿಸಬಹುದು. ಅತಿ ಶ್ರೀಮಂತರಿಗೆ ಹೆಚ್ಚುವರಿ ಶೇ. 2ರಷ್ಟು ತೆರಿಗೆ ಹಾಕಬಹುದು. ಆ ಹಣವನ್ನು ಅಸಂಘಟಿತ ವಲಯದ ಕಾರ್ಮಿಕರ ಸಾಮಾಜಿಕ ಭದ್ರತೆಗೆ ಬಳಸಬಹುದು ಎಂದು ರೆಗೋ ಅಭಿಪ್ರಾಯಪಟ್ಟಿದ್ದಾರೆ.



















