ಮೈಸೂರು ಮೇಯರ್ ಆಯ್ಕೆ: ಕಾಂಗ್ರೆಸ್​​ನಲ್ಲಿ ಬಗೆಹರಿಯದ ಬಿಕ್ಕಟ್ಟು, ನಾನೇನೂ ತಪ್ಪು ಮಾಡಿಲ್ಲ ಎಂದ ತನ್ವೀರ್​ ಸೇಠ್​

ಮೈಸೂರು ಮೇಯರ್​ ಸ್ಥಾನದ ಗೊಂದಲದ ಬಗ್ಗೆ ಮಾಧ್ಯಮದವರ ಪ್ರಶ್ನೆಗೆ ಉತ್ತರಿಸಿರುವ ತನ್ವೀರ್ ಸೇಠ್, ಮೈತ್ರಿ ವಿಚಾರದಲ್ಲಿ ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರ್​ ಅನುಮತಿ ಇತ್ತು. ಈ ವಿಚಾರದಲ್ಲಿ ನಾನು ತಪ್ಪೇ ಮಾಡಿಲ್ಲ, ಸಿದ್ದರಾಮಯ್ಯಗೆ ಸಂದೇಶ ಕೊಡಲು ನಾನು ಯಾರು? ಪಕ್ಷ ಏನು ಹೇಳಿದೆಯೋ ಅದನ್ನಷ್ಟೇ ಮಾಡಿದ್ದೇನೆ ಎಂದಿದ್ದಾರೆ.

  • TV9 Web Team
  • Published On - 18:13 PM, 2 Mar 2021
ಮೈಸೂರು ಮೇಯರ್ ಆಯ್ಕೆ: ಕಾಂಗ್ರೆಸ್​​ನಲ್ಲಿ ಬಗೆಹರಿಯದ ಬಿಕ್ಕಟ್ಟು, ನಾನೇನೂ ತಪ್ಪು ಮಾಡಿಲ್ಲ ಎಂದ ತನ್ವೀರ್​ ಸೇಠ್​
ಡಿ.ಕೆ.ಶಿವಕುಮಾರ್​ ಮತ್ತು ತನ್ವೀರ್​ ಸೇಠ್​

ಮೈಸೂರು: ಮೇಯರ್ ಚುನಾವಣೆ ದೋಸ್ತಿ ವಿಚಾರವಾಗಿ ಕಾಂಗ್ರೆಸ್ ಪಕ್ಷದೊಳಗೆ ಆರಂಭವಾದ ಬಿಕ್ಕಟ್ಟು ಇದೀಗ ಪಕ್ಷಕ್ಕೆ ದೊಡ್ಡ ಮಟ್ಟದ ಹೊಡೆತ ನೀಡುವ ಮಟ್ಟಕ್ಕೆ ಬೆಳೆದು ನಿಂತಿದೆ. ಪಕ್ಷಸಂಘಟನೆ ಬಗ್ಗೆ ಕಾಂಗ್ರೆಸ್​ ಚಿಂತಿಸುತ್ತಿರುವ ಹೊತ್ತಿನಲ್ಲೇ ಸಿದ್ದರಾಮಯ್ಯ ಮತ್ತು ಡಿ.ಕೆ.ಶಿವಕುಮಾರ್​ ನಡುವೆ ಕಾಳಗ ಆರಂಭವಾಗಿರುವುದು ಪಕ್ಷಕ್ಕೇ ಮುಳುವಾಗುತ್ತಿದೆ. ಹೀಗಾಗಿ ಈ ಬಿಕ್ಕಟ್ಟು ಶಮನದ ಹೊಣೆಗಾರಿಕೆ ಈಗ ಡಿ.ಕೆ.ಶಿವಕುಮಾರ್ ಅವರ ಮೇಲೆಯೇ ಬಿದ್ದಿದ್ದು, ಸಿದ್ದರಾಮಯ್ಯ ಅವರನ್ನು ಹಣಿಯುವುದು ತಮ್ಮ ಉದ್ದೇಶವಲ್ಲ ಎಂಬ ಸ್ಪಷ್ಟನೆ ನೀಡಬೇಕಾಗಿ ಬಂದಿದೆ.

ಈ ಬಗ್ಗೆ ಬೆಂಗಳೂರಿನಲ್ಲಿ ಪ್ರತಿಕ್ರಿಯಿಸಿರುವ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್, ತನ್ವೀರ್ ಸೇಠ್ ನಿನ್ನೆ ಸಿಕ್ಕಿರಲಿಲ್ಲ, ಅವರು ಇಂದು ಬರುತ್ತಾರೆ. ಅವರ ಜೊತೆಗೆ ಈ ವಿಚಾರವನ್ನು ಮಾತನಾಡಲಿದ್ದೇನೆ. ಮೈಸೂರು ಪಾಲಿಕೆ ಮೇಯರ್ ಸ್ಥಾನ ನಮಗೆ ಸಿಗಬೇಕಾಗಿತ್ತು. ಏಕೆ ಕೈತಪ್ಪಿತು ಎಂಬ ಬಗ್ಗೆ ವರದಿಯನ್ನು ಕೇಳಿದ್ದೇನೆ. ನಮ್ಮ ಪಕ್ಷದೊಳಗೆ ಏನೇ ಸಮಸ್ಯೆಗಳಿದ್ದರೂ ಅದನ್ನು ಪಕ್ಷದ ಚೌಕಟ್ಟಿನಲ್ಲಿಯೇ ಮಾತನಾಡಬೇಕು. ಅದರ ಹೊರತಾಗಿ ಬಹಿರಂಗವಾಗಿ ಹೇಳಿಕೆ ನೀಡಿದರೆ ಕ್ರಮ ಕೈಗೊಳ್ಳುತ್ತೇವೆ. ಅದು ಅಖಂಡ (ಶ್ರೀನಿವಾಸಮೂರ್ತಿ) ಇರಬಹುದು ಅಥವಾ ಯಾರೇ ಇರಬಹುದು ಕ್ರಮ ಕೈಗೊಳ್ಳದೇ ಬಿಡುವುದಿಲ್ಲ, ನೊಟೀಸ್ ಕೂಡ ಕೊಡ್ತೇವೆ ಎಂದು ತಿಳಿಸಿದ್ದರು.

ಅದಾದ ನಂತರ ಡಿ.ಕೆ.ಶಿವಕುಮಾರ್ ಅವರನ್ನು ಭೇಟಿ ಮಾಡಿರುವ ಕಾಂಗ್ರೆಸ್ ಶಾಸಕ ತನ್ವೀರ್ ಸೇಠ್, ಮೈಸೂರು ಮೇಯರ್ ಚುನಾವಣೆ ಸಂಬಂಧ ಲಿಖಿತ ರೂಪದ ಸ್ಪಷ್ಟನೆ ನೀಡಿರುವುದು ತಿಳಿದು ಬಂದಿದೆ. ಹಾಗೂ ಈ ಬಗ್ಗೆ ಮಾತನಾಡಿರುವ ತನ್ವೀರ್ ಸೇಠ್, ಕಾಂಗ್ರೆಸ್ ಶಿಸ್ತು ಸಮಿತಿ ನೋಟಿಸ್ ಜಾರಿ ಮಾಡಿದೆ. ಆ ನೋಟಿಸ್​ಗೆ ಉತ್ತರ ನೀಡಿದ್ದೇನೆ. ಅದೇ ರೀತಿ ಸುರ್ಜೇವಾಲ ಅವರು ನೋಟಿಸ್ ಜಾರಿ ಮಾಡುವಂತೆ ಆದೇಶ ಮಾಡಿದ್ದಾರೆ. ಎಐಸಿಸಿಯಿಂದ ಬಂದ ಮಧುಯಕ್ಷಿ ಗೌಡಗೆ ನಡೆದ ಘಟನೆ ಬಗ್ಗೆ ವಿವರಣೆ ನೀಡಿದ್ದೇನೆ. ಎಐಸಿಸಿ ನೀಡುವ ನೋಟಿಸ್​ಗೂ ನಾನು ಉತ್ತರ ನೀಡುವೆ ಎಂದು ಹೇಳಿದ್ದಾರೆ.

ಇವೆಲ್ಲದರ ನಡುವೆ ಈ ಗೊಂದಲದ ಬಗ್ಗೆ ಮಾಧ್ಯಮದವರ ಪ್ರಶ್ನೆಗೆ ಉತ್ತರಿಸಿರುವ ತನ್ವೀರ್ ಸೇಠ್, ಮೈತ್ರಿ ವಿಚಾರದಲ್ಲಿ ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರ್​ ಅನುಮತಿ ಇತ್ತು ಎಂದಿದ್ದಾರೆ. ಈ ವಿಚಾರದಲ್ಲಿ ನಾನು ತಪ್ಪೇ ಮಾಡಿಲ್ಲ, ಸಿದ್ದರಾಮಯ್ಯಗೆ ಸಂದೇಶ ಕೊಡಲು ನಾನು ಯಾರು? ಪಕ್ಷ ಏನು ಹೇಳಿದೆಯೋ ಅದನ್ನಷ್ಟೇ ಮಾಡಿದ್ದೇನೆ ಎಂದು ತಿಳಿಸಿದ್ದಾರೆ.

ಇನ್ನೊಂದೆಡೆ ಈ ಬಗ್ಗೆ ಹೆಚ್ಚೇನೂ ಮಾತನಾಡದ ಡಿ.ಕೆ.ಸುರೇಶ್, ನಾನು ನಮ್ಮ ನಾಯಕರ ಭೇಟಿಗೆ ಬರೋದು ಹೊಸತಲ್ಲ. ಬಿಡದಿ ಕೈಗಾರಿಕೆ ಕಾರ್ಮಿಕರ ಬಿಕ್ಕಟ್ಟಿನ ಬಗ್ಗೆ ಅಧಿವೇಶನದಲ್ಲಿ ಪ್ರಸ್ತಾಪಿಸುವಂತೆ ಚರ್ಚಿಸಲು ಬಂದಿದ್ದೆ ಅಷ್ಟೇ. ಮೈಸೂರು ಮೇಯರ್​ ಆಯ್ಕೆ ವಿಚಾರ ನನಗೆ ಗೊತ್ತಿಲ್ಲ. ಇಂದಿನ ಸಭೆಯಲ್ಲಿ ಅದ್ಯಾವುದೂ ಪ್ರಸ್ತಾಪವಾಗಿಲ್ಲ. ಆ ವಿಚಾರ ಮಾತನಾಡುವಷ್ಟು ದೊಡ್ಡವನು ನಾನಲ್ಲ ಎಂದು ಹೇಳಿದ್ದಾರೆ.

ಇದನ್ನೂ ಓದಿ:
ಜಾತಿಯಾಧಾರಿತ ಮತಬೇಟೆಗೆ ಬಿಜೆಪಿಯಿಂದ ಹೊಸ ತಂತ್ರ; ತಮಿಳುನಾಡು ತಿರುಪತ್ತೂರಿನಲ್ಲಿ ಕುರುಬ ಸಮಾವೇಶ

ನೀವು ಶೋಭಕ್ಕನಿಗೆ ಸೀಮೆ ಎಣ್ಣೆ ಕಳುಹಿಸಿಕೊಡಿ.. ಮನೆಯಲ್ಲಿ ಅಡುಗೆ ಮಾಡಿಕೊಳ್ಳಲಿ -ಡಿ.ಕೆ ಶಿವಕುಮಾರ್ ಟಾಂಗ್