ಜೆಡಿಎಸ್ ಅಸ್ಥಿತ್ವಕ್ಕೆ ಬಂದು 25 ವರ್ಷ: ಬೆಂಗಳೂರಿನಲ್ಲಿ ಶಕ್ತಿ ಪ್ರದರ್ಶನ; ಬೆಳ್ಳಿಹಬ್ಬದ ಮೂಲಕ ಜಿಬಿಎ ಚುನಾವಣೆಗೆ ರಣಕಹಳೆ
ಪ್ರಾದೇಶಿಕ ಪಕ್ಷ ಜೆಡಿಎಸ್ ಅಸ್ಥಿತ್ವಕ್ಕೆ ಬಂದು 25 ವರ್ಷವಾಗಿದೆ. ಈ ಹಿನ್ನೆಲೆಯಲ್ಲಿ ಇಂದು ಬೆಂಗಳೂರಿನ ಕೊಮ್ಮಗಟದಲ್ಲಿ ಬೃಹತ್ ಸಮಾವೇಶ ಮಾಡಲಾಗಿದ್ದು, ಆ ಮೂಲಕ ದಳಪತಿಗಳು ಭರ್ಜರಿ ಶಕ್ತಿ ಪ್ರದರ್ಶನ ಮಾಡಿದ್ದಾರೆ. ಮಾಜಿ ಪ್ರಧಾನಿ ಹೆಚ್ಡಿ ದೇವೇಗೌಡ, ಕೇಂದ್ರ ಸಚಿವ ಹೆಚ್ಡಿ ಕುಮಾರಸ್ವಾಮಿ ನೇತೃತ್ವದಲ್ಲಿ ಸಾವಿರಾರು ಸಂಖ್ಯೆಯಲ್ಲಿ ಕಾರ್ಯಕರ್ತರನ್ನ ಸೇರಿಸಿ ಜಿಬಿಎ ಚುನಾವಣೆಗೆ ದಳಪತಿಗಳು ರಾಷ್ಟ್ರೀಯ ಪಕ್ಷಗಳಿಗಿಂತ ಮುಂಚಿತವಾಗಿ ರಣ ಕಹಳೆ ಊದಿದ್ದಾರೆ.

ಬೆಂಗಳೂರು, ಏಪ್ರಿಲ್ 11: ಗ್ರೇಟರ್ ಬೆಂಗಳೂರು ಪ್ರಾಧಿಕಾರ (GBA) ಚುನಾವಣೆಯನ್ನೇ ಟಾರ್ಗೆಟ್ ಮಾಡಿ ಬೆಂಗಳೂರಿನಲ್ಲಿ ಜೆಡಿಎಸ್ ಪಕ್ಷ ಶಕ್ತಿ ಪ್ರದರ್ಶನ ಮಾಡಿದೆ. ಜೆಡಿಎಸ್ (JDS) 25ನೇ ವರ್ಷದ ಬೆಳ್ಳಿ ಹಬ್ಬದ ಆಚರಣೆ ನೆಪದಲ್ಲಿ ಸುಮಾರು 50 ಸಾವಿರಕ್ಕೆ ಹೆಚ್ಚು ಕಾರ್ಯಕರ್ತರನ್ನ ಸೇರಿಸುವ ಮೂಲಕ ಬೆಂಗಳೂರಿನಲ್ಲಿ ಜೆಡಿಎಸ್ ಇದೆಯಾ ಎಂಬ ಟೀಕೆಗಳಿಗೆ ದಳಪತಿಗಳು ಉತ್ತರ ನೀಡಿದ್ದಾರೆ.
ಜೆಡಿಎಸ್ ಅಸ್ಥಿತ್ವಕ್ಕೆ ಬಂದು 25 ವರ್ಷ
ಪ್ರಾದೇಶಿಕ ಪಕ್ಷ ಜೆಡಿಎಸ್ ಅಸ್ಥಿತ್ವಕ್ಕೆ ಬಂದು 25 ವರ್ಷವಾಗಿದೆ. ಈ ಹಿನ್ನೆಲೆಯಲ್ಲಿ ಇಂದು ಬೆಂಗಳೂರಿನ ಕೊಮ್ಮಗಟದಲ್ಲಿ ಬೃಹತ್ ಸಮಾವೇಶ ಮಾಡಲಾಗಿದ್ದು, ಆ ಮೂಲಕ ದಳಪತಿಗಳು ಭರ್ಜರಿ ಶಕ್ತಿ ಪ್ರದರ್ಶನ ಮಾಡಿದ್ದಾರೆ. ಮಾಜಿ ಪ್ರಧಾನಿ ಹೆಚ್ಡಿ ದೇವೇಗೌಡ, ಕೇಂದ್ರ ಸಚಿವ ಹೆಚ್ಡಿ ಕುಮಾರಸ್ವಾಮಿ ನೇತೃತ್ವದಲ್ಲಿ ಸಾವಿರಾರು ಸಂಖ್ಯೆಯಲ್ಲಿ ಕಾರ್ಯಕರ್ತರನ್ನ ಸೇರಿಸಿ ಜಿಬಿಎ ಚುನಾವಣೆಗೆ ದಳಪತಿಗಳು ರಾಷ್ಟ್ರೀಯ ಪಕ್ಷಗಳಿಗಿಂತ ಮುಂಚಿತವಾಗಿ ರಣ ಕಹಳೆ ಊದಿದ್ದಾರೆ. ಮಾಜಿ ಪ್ರಧಾನಿ ದೇವೇಗೌಡರು ಸಮಾವೇಶ ಉದ್ಘಾಟಿಸಿದರೆ, ಇಡೀ ದಳಪತಿಗಳ ಸೈನ್ಯವೇ ಕಾಂಗ್ರೆಸ್ ಸರ್ಕಾರದ ವಿರುದ್ಧ ಯುದ್ಧ ಸಾರಿದೆ.
ಕುಮಾರಸ್ವಾಮಿ ಸರ್ಕಾರ ತೆಗೆದಿದ್ದು ಕಾಂಗ್ರೆಸ್: ಹೆಚ್ಡಿ ದೇವೇಗೌಡ ಕಿಡಿ
ಒಂದೆಡೆ 93ರ ಹರೆಯದಲ್ಲೂ ಗರ್ಜಿಸಿದ ಹೆಚ್ಡಿ ದೇವೇಗೌಡ, ಕಾಂಗ್ರೆಸ್ ಸರ್ಕಾರದ ವಿರುದ್ಧ ಕಿಡಿಕಾರಿದರು. ಮುಸ್ಲಿಂ ಲೀಡರ್ ಗೆಲ್ಲಿಸುವುದಕ್ಕೆ ದರಿದ್ರ ನಾರಾಯಣ ರ‍್ಯಾಲಿ ಮಾಡಿದೆ. ಆ ರ‍್ಯಾಲಿಗೆ ಸಿದ್ದರಾಮಯ್ಯ ಬರಲಿಲ್ಲ. ಕುಮಾರಸ್ವಾಮಿ ಸರ್ಕಾರ ತೆಗೆದಿದ್ದು ಕಾಂಗ್ರೆಸ್ನವರು. ಇವರೆಲ್ಲಾ ಮೋದಿಯವರನ್ನ ನೋಡಿ ಕಲಿಬೇಕು. ನಿತೀಶ್ ಕುಮಾರ್ 20 ವರ್ಷ ಬಿಹಾರ ಸಿಎಂ ಆಗಿದ್ದರು. ಅವರಿಗೆ ಶಕ್ತಿ ಕೊಟ್ಟಿದ್ದು ಮೋದಿ. ಮೋದಿಯವರು ಜೊತೆಗೆ ಬನ್ನಿ ಎಂದು ಕರೆದರು, ನಾನು ಓಕೆ ಎಂದೆ. ನಮಗೆ ಕಾಂಗ್ರೆಸ್ ಜೊತೆ ಇದ್ದು ಏಟಿನ ಮೇಲೆ ಏಟು ತಿಂದಿದ್ದೇವೆ. ಹಾಗಾಗಿ ಮೋದಿ ಜೊತೆಗೆ ಹೋಗಲು ಕುಮಾರಸ್ವಾಮಿಗೆ ಒಪ್ಪಿಗೆ ಕೊಟ್ಟೆ. ಈಗ ಕೇಂದ್ರ ಸಚಿವರಾಗಿ ಕೆಲಸ ಮಾಡಲು ಅವಕಾಶ ಕೊಟ್ಟಿದ್ದಾರೆ. ಆದರೆ ಕರ್ನಾಟಕದಲ್ಲಿ ಸರ್ಕಾರ ಕುಮಾರಸ್ವಾಮಿಗೆ ಸಹಕಾರ ಕೊಡುತ್ತಿಲ್ಲ ಅಂತ ವಾಗ್ದಾಳಿ ಮಾಡಿದ್ದಾರೆ.
ಬೆಂಗಳೂರಿನ ಜನರನ್ನ ಪ್ರತಿದಿನ ಸರ್ಕಾರ ಲೂಟಿ ಮಾಡುತ್ತಿದೆ: ನಿಖಿಲ್ ಕುಮಾರಸ್ವಾಮಿ ಆಕ್ರೋಶ
ಸಮಾವೇಶದಲ್ಲಿ ರಾಜ್ಯ ಸರ್ಕಾರದ ವಿರುದ್ದ ವಾಗ್ದಾಳಿ ಮಾಡಿದ ಜೆಡಿಎಸ್ ಯುವ ಘಟಕದ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಜಿಬಿಎ ಮಾಡಿರುವುದೇ ಸರ್ಕಾರದ ಸಾಧನೆಯಾಗಿದೆ. ಬೆಂಗಳೂರಿನ ಅಭಿವೃದ್ಧಿಗಾಗಿ ಹಲವಾರು ದೇವೇಗೌಡ್ರು, ಕುಮಾರಸ್ವಾಮಿ ಹಲವು ಯೋಜನೆಗಳನ್ನ ಮಾಡಿದ್ದರು. ಇದನ್ನ ಜನರು ಮರೆಯಬಾರದು. ಕಾಂಗ್ರೆಸ್ ತಂದಿರುವ ಜಿಬಿಎ ಅಂದರೆ ಏನು ಗೊತ್ತಾ ಎಂದು ಪ್ರಶ್ನಿಸಿದ ನಿಖಿಲ್, ಜಿ ಅಂದರೆ ಗಾರ್ಬೇಜ್, ಬಿ ಅಂದರೆ ಬ್ಯಾಡ್ ರೋಡ್ ಮತ್ತು ಎ ಅಂದರೆ ಅಕೌಂಟ್ ಸ್ಕ್ಯಾಮ್. ಇವಿಷ್ಟೇ ಕಾಂಗ್ರೆಸ್ ಸಾಧನೆ. ಅಷ್ಟೇ ಅಲ್ಲ ಬೆಂಗಳೂರಿನ ಸಮಸ್ಯೆ ಹೇಳಿದ ಉದ್ಯಮಿಗಳಿಗೆ ಡಿಸಿಎಂ ಡಿಕೆ ಶಿವಕುಮಾರ್ ಬೆದರಿಕೆ ಹಾಕಿದ್ದಾರೆ ಎಂದು ಅವರ ವಿರುದ್ಧ ಗುಡುಗಿದರು.
ಗ್ರಹಣ ಬಿಡಿಸಲು ನನ್ನ ನಾಯಕತ್ವಕ್ಕೆ ಅವಕಾಶ ಕೊಡಿ: ಹೆಚ್ಡಿ ಕುಮಾರಸ್ವಾಮಿ
ಇನ್ನು ಕೇಂದ್ರ ಸಚಿವ ಹೆಚ್ಡಿ ಕುಮಾರಸ್ವಾಮಿ ಬೆಂಗಳೂರಿನ ಅಭಿವೃದ್ಧಿಯ ರಿಪೋರ್ಟ್ ಕಾರ್ಡ್ ಬಿಡುಗಡೆ ಮಾಡಿದರು. ಮೆಟ್ರೋ, ಫ್ಲೈ ಓವರ್, ಕಾವೇರಿ ಯೋಜನೆ ತಂದಿದ್ದು ದೇವೇಗೌಡರು ಮತ್ತು ನಾವು. ಆದರೆ ಈ ಸರ್ಕಾರ ಸ್ಕೈಡೆಕ್ ಹೆಸರಲ್ಲಿ ಲೂಟಿ ಮಾಡುತ್ತಿದೆ. ಬೆಂಗಳೂರಿಗೆ ಹಿಡಿದಿರುವ ಗ್ರಹಣ ಬಿಡಿಸಲು ನನ್ನ ನಾಯಕತ್ವಕ್ಕೆ ಒಂದು ಅವಕಾಶ ಕೊಡಿ ಎಂದು ಹೆಚ್ಡಿ ಕುಮಾರಸ್ವಾಮಿ ಭಾವುಕವಾಗಿ ಮನವಿ ಮಾಡಿದರು.
ಇದನ್ನೂ ಓದಿ: ಮುಂಬರುವ ಚುನಾವಣೆಯಲ್ಲಿ ಸ್ಪರ್ಧಿಸುವ ಬಗ್ಗೆ ನಿಖಿಲ್ ಕುಮಾರಸ್ವಾಮಿ ಅಚ್ಚರಿ ಮಾತು
ಜಿಬಿಎ ಎಲೆಕ್ಷನ್ ಘೋಷಣೆಗೂ ಮುಂಚಿತವಾಗಿಯೇ ಬೆಂಗಳೂರಿನ ಗದ್ದುಗೆ ಹಿಡಿಯುವುದಕ್ಕೆ ದಳಪತಿಗಳು ಕಸರತ್ತು ಆರಂಭಿಸಿದ್ದು, ಪ್ರತಿ ವಾರ್ಡ್ನಲ್ಲೂ ಒಂದು ಗಂಟೆ ಕೆಲಸ ಮಾಡಬೇಕಿದೆ ಎಂಬ ಸಂದೇಶ ನೀಡಿದ್ದಾರೆ. ಒಟ್ಟಿನಲ್ಲಿ ರಾಷ್ಟ್ರೀಯ ಪಕ್ಷಗಳಿಗಿಂತ ಮುಂಚಿತವಾಗಿ ಬೆಂಗಳೂರಿನಲ್ಲಿ ಬೃಹತ್ ಸಮಾವೇಶದ ಮೂಲಕ ಸಂಘಟನೆಗೆ ಚಾಲನೆ ನೀಡಿದ ದಳಪತಿಗಳಿಗೆ ಮುಂಬರುವ ಚುನಾವಣೆಗಳಲ್ಲಿ ಮತದಾರ ಎಷ್ಟರಮಟ್ಟಿಗೆ ಕೈಹಿಡಿಯುತ್ತಾನೆ ಕಾದು ನೋಡಬೇಕಾಗಿದೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.



