ಎಲ್ರೂ ಬದುಕಬೇಕಲ್ವಾ? : “ಸರ್ ಕರೆಯುತ್ತಾ ಇದ್ದಾರೆ” ಪ್ಯೂನ್ ಬಂದು ಹೇಳಿದಾಗ ಅವಡುಗಚ್ಚಿದಳು ಕಲ್ಪನಾ. “ಈ ಮನುಷ್ಯನ ಗೋಳು ತಡೆಯಲು ಆಗುತ್ತಿಲ್ಲ. ಬೇರೆ ಎಲ್ಲಾದರೂ ನೌಕರಿ ಹುಡುಕಲು ಶುರು ಮಾಡಬೇಕು. ಆದರೆ ಆಫೀಸಿನಿಂದ ತೆಗೆದುಕೊಂಡಿರುವ ಸಾಲದ ಗತಿ?” ಯೋಚಿಸುತ್ತಾ ಬಾಸ್ ಕ್ಯಾಬಿನ್ ತಲುಪಿದಳು. ಗಾಜಿನ ಬಾಗಿಲಿಂದ ಇಣುಕಿದಾಗ ಆತ ಯಾರದೋ ಜತೆ ಕರೆಯಲ್ಲಿ ಮಗ್ನನಾಗಿದ್ದ. ಎದುರಿಗೆ ಇದ್ದ ಡಬ್ಬಿಯಿಂದ ಹೆಚ್ಚಿದ ಸೇಬಿನ ಹಣ್ಣು ಚಮಚದಿಂದ ತಿನ್ನುತ್ತಾ ಮಾತಾಡುತ್ತಿದ್ದ. ಇವಳು ಬಾಗಿಲ ಹೊರಗೆ ನಿಂತು ಚಡಪಡಿಸಿದಳು. ತನ್ನನ್ನು ಬಾಸ್ ನೋಡಿರುವುದು ಖಂಡಿತ. ಎಷ್ಟೋ ಸಲ ಹೀಗೆ ಹೊರಗೆ ನಿಲ್ಲಿಸಿ ಕಾಯಿಸುವುದು ಅವನ ಸ್ವಭಾವ. ಅವನ ಕ್ಯಾಬಿನ್ ಒಳಗೆ ಹೋದರೂ ಆತ ಕೂರುವಂತೆ ಹೇಳುವುದಿಲ್ಲ. ಕಾಫಿ, ಟೀ ಮಾತಂತೂ ಇಲ್ಲವೇ ಇಲ್ಲ. ಒಂದು ರೀತಿ ಸ್ಯಾಡಿಸ್ಟ್ ಅನ್ನಲು ಅಡ್ಡಿಯಿಲ್ಲ. ಹೀಗೆ ಹಲವಾರು ಬಾರಿ ಬಾಸ್ ಕ್ಯಾಬಿನ್ ಬಳಿ ನಿಂತು ಕಾದಿದ್ದರೂ ಇಂದು ಅವಳು ತಾಳ್ಮೆಗೆಡುತ್ತಿದ್ದಾಳೆ. ಕಾರಣ, ಇಂದು ಮಗಳ ಹುಟ್ಟಿದ ಹಬ್ಬ. ಡಾ. ಸಹನಾ ಪ್ರಸಾದ್ (Dr. Sahana Prasad)
ಒಂಬತ್ತು ವರುಷದ ಪೋರಿಯನ್ನು ಬೇಬಿ ಸಿಟ್ಟಿಂಗ್ ಕೇಂದ್ರದಲ್ಲಿ ಬಿಟ್ಟಾಗಲೆ ಅದು ಮುಖ ಸಪ್ಪೆ ಮಾಡಿತ್ತು. ದೊಡ್ಡ ಪ್ಲಾಸ್ಟಿಕ್ ಕವರ್ ತುಂಬಿದ ಚಾಕೊಲೇಟ್, ಅವಳ ಹೊಸ ಫ್ರಾಕ್ ಬಗ್ಗೆ ಗಮನ ಸೆಳೆದು ಬಿಟ್ಟು ಬಂದಿದ್ದು ಆಗಿತ್ತು. ಗಂಡ ಬೇರೆ ಊರಿನಲ್ಲಿ ಇಲ್ಲ. ಇನ್ನು ಈತ ಹೊಸ ಕೆಲಸ ಹಚ್ಚಿದರೆ ಏನು ಮಾಡುವುದು? ಸಂಜೆ ಪುಟ್ಟಿಗೆ ಹೊರಗಡೆ ಕರೆದೊಯ್ದು ಏನಾದರೂ ಕೊಡಿಸಬೇಕು. ಐಸ್ ಕ್ರೀಮ್ ಅಥವಾ ಚಾಟ್. ಯೋಚಿಸುತ್ತಾ ಸುಮಾರು ಸಮಯ ಸರಿಯಿತು. ಬಾಸ್ ಸನ್ನೆ ಮಾಡಿ ಬಾ ಎಂದಾಗ ಮನಸ್ಸಿನ ಎಲ್ಲಾ ಭಾವನೆಗಳನ್ನು ಅದುಮಿ ಒಳಗಡೆ ಅಡಿಯಿಟ್ಟಳು. ನಿರೀಕ್ಷಿಸಿದಂತೆ ಅವನು ಯಾವುದೋ ವಿಷಯ ತೆಗೆದು ದೂರಲು ಶುರು ಮಾಡಿದ. “ಹೀಗಾ ಮಾಡುವುದು ಕೆಲಸ. ಇಷ್ಟು ಸೀನಿಯರ್ ಆದ ನೀವೇ ಈ ರೀತಿಯ ಬೇಕಾಬಿಟ್ಟಿ ಕೆಲಸ ಮಾಡಿದರೆ, ನಾವು ಜೂನಿಯರ್ಸ್ ಗೆ ಏನು ಹೇಳುವುದು” ಅವನ ವಾಗ್ಬಾನಕ್ಕೆ ಇವಳು ಸುಸ್ತಾಗಿ ನಿಂತಿದ್ದಳು.
“ಇವತ್ತೇ ಮುಗಿಯಬೇಕು. ಬೆಳಗ್ಗೆ ಹೇಳಿದ ಕೆಲಸ. ಸರಿಯಾಗಿ ಗಮನ ಕೊಟ್ಟು ಮಾಡಿದಿದ್ದರೆ ಮುಗಿದೇ ಹೋಗುತ್ತಿತ್ತು. ಈಗ ಇದನ್ನು ಮುಗಿಸಿ ಹೊರಡಿ” ಅಸಹನೆ ತುಂಬಿ ತುಳುಕುತ್ತಿದ್ದ ಅವನ ನುಡಿಗಳು ಬಾಣದಂತೆ ತಟ್ಟಿದವು.
ಹೊರಬಂದು ಸಿಸ್ಟಂ ತೆಗೆದು ಕುಳಿತವಳಿಗೆ ಒಂದು ಚಹಾ ಬೇಕೇಬೇಕೆಂದೆನಿಸಿತು. ಕ್ಯಾಂಟೀನ್ ಕಡೆ ಹೆಜ್ಜೆ ಹಾಕಿದವಳು ಮನಸ್ಸು ಬದಲಾಯಿಸಿ ವಾಪಸ್ಸು ಬಂದಳು. ಬೇಬಿ ಸಿಟ್ಟಿಂಗ್ ಮೇಡಂಗೆ ಕರೆ ಮಾಡಿದಾಗ ಮಗಳು ಆರಾಮಾಗಿ ಆಟ ಆಡುತ್ತಾ ಇದಾಳೆ ಎಂದು ತಿಳಿದಾಗ ನೆಮ್ಮದಿಯ ಉಸಿರು ಬಿಟ್ಟಳು. ಶಾಲೆಗೆ ರಜೆ ಇದ್ದರೆ ಬೇಬಿ ಸಿಟ್ಟಿಂಗ್ ಗತಿ. “ನಾನೇನು ಬೇಬಿ ಅಲ್ಲ, ಅಲ್ಲಿಗೆ ಹೋಗೋಲ್ಲ, ಮನೆಯಲ್ಲೇ ಇರುತ್ತೇನೆ” ಎನ್ನುವ ಮಗಳನ್ನು ಒಬ್ಬಳೇ ಬಿಟ್ಟು ಇಡೀ ದಿನ ಕೆಲಸಕ್ಕೆ ಹೋಗಲು ಮನಸ್ಸು ಬರುತ್ತಿರಲಿಲ್ಲ. ಆದರೆ ವಿಧಿಯಿಲ್ಲ. ದಿನ ನಿತ್ಯ ಪತ್ರಿಕೆಗಳಲ್ಲಿ ಬರುವ ವಾರ್ತೆಗಳು ಹೆದರಿಕೆ ಉಂಟು ಮಾಡುತ್ತಿತ್ತು. ವಯಸ್ಸಿಗೆ ಬರುತ್ತಿರುವ ಮಗಳನ್ನು ಯಾವ ಧೈರ್ಯದ ಮೇಲೆ ಬಿಟ್ಟು ಹೋಗುವುದು? ಅವಳ ಯೋಚನೆ ಸಾಗಿದಂತೆ ಕಣ್ಣುಗಳು ಯಾಂತ್ರಿಕವಾಗಿ ಗಣಕ ಯಂತ್ರ ನೋಡುತ್ತಾ, ಬೆರಳುಗಳು ಕೀಲಿ ಮಣೆಯ ಮೇಲಾಡುತ್ತಿದ್ದವು .
ಆಗ ಕಾಫಿ ಕಪ್ ಹಿಡಿದು ಬಂದ ಧನಂಜಯ. ಅವನು ಜೂನಿಯರ್ ಸಹೋದ್ಯೋಗಿ. ಆಫೀಸಿನಲ್ಲಿ ಜನಪ್ರಿಯ. ಯಾರೊಂದಿಗೂ ವಿರಸ ಇಲ್ಲ. ಎಲ್ಲರೊಡನೆ ಸ್ನೇಹ, ಪ್ರೀತಿಯ ಮಾತುಗಳು. ಧಾರಾಳವಾಗಿ ಕಾಫಿ, ಚಹಾ ಪ್ರಾಯೋಜಿಸುವ ಆತ ಎಲ್ಲರಿಗೂ ಪ್ರಿಯ. “ತೊಗೊಳ್ಳಿ ಮೇಡಂ” ಎಂದು ಕಪ್ ನೀಡಿದವನ ಮುಖವನ್ನೇ ಅಚ್ಚರಿಯಿಂದ ದಿಟ್ಟಿಸಿದಳು. “ಬಾಸ್ ರೂಮಿನಿಂದ ಹೊರಗಡೆ ಬಂದ ಎಲ್ಲರಿಗೂ ಒಂದು ಕಪ್ ಕಾಫಿ ಬೇಕೇ ಬೇಕು”ಜೋರಾಗಿ ನಕ್ಕು ಕಂಪ್ಯೂಟರ್ ಮೇಲೆ ಕಣ್ಣಾಡಿಸಿದ. “ಇಲ್ಲಿ ತಪ್ಪಾಗಿದೆ” ಎಂದು ಒಂದೆರಡು ಕಡೆ ಬೆರಳು ತೋರಿಸಿದ. ಕಾಫಿ ಕುಡಿಯುತ್ತ ತನ್ನ ಅನ್ಯಮನಸ್ಕತೆಯನ್ನು ಹಳಿದುಕೊಂಡಳು. ಧನಂಜಯ ಸಹಾಯದಿಂದ ಕೆಲಸ ಸಮಪರ್ಕವಾಗಿ ಮುಗಿಸಿ ಹೊರಬಿದ್ದವಳಿಗೆ ನಿರಾಳ ಭಾವ.
ಇದನ್ನೂ ಓದಿ : New Column: ಆಗಾಗ ಅರುಂಧತಿ; ‘ನಿನ್ನನ್ನು ಕಂಡರೆ ಯಾರಿಗೂ ಆಗುವುದಿಲ್ಲ ಏಕೆ ಗೊತ್ತೆ?’
ಮಗಳನ್ನು ಪಾರ್ಕ್ ಸುತ್ತಿಸಿ, ಮಾಲ್ ಗೆ ಕರೆದುಕೊಂಡು ಐಸ್ ಕ್ರೀಮ್, ಭೇಲ್ ಪುರಿ ಕೊಡಿಸಿ ಮನೆಗೆ ಬಂದಾಗ ಸುಸ್ತು ಏಕದಂ ಹೊಡೆಯಿತು. ಮನಸ್ಸಿಗೆ ಕಿರಿಕಿರಿ. ಬಾಸ್ ತನ್ನನ್ನು ಕಾಣುವ ಬಗೆ ನೆನಪಿಗೆ ಬಂದು ಮೈ ಉರಿಯಿತು. ಆದಷ್ಟು ಬೇಗ ಸಾಲ ತೀರಿಸಿ ರಾಜೀನಾಮೆ ಕೂಡಲೇ ಬೇಕು ಎಂದು ನಿರ್ಧರಿಸಿ ಮಲಗಿದಾಗ ಮನಸ್ಸು ಹಾಯೆನಿಸಿತು.
“ತುಂಬಾ ಥ್ಯಾಂಕ್ಸ್ ರೀ, ನೆನ್ನೆ ಮಗಳ ಹುಟ್ಟು ಹಬ್ಬದ ದಿನ. ಅವಳ ಜತೆ ಇಡೀ ದಿನ ಕಳೆಯೋಕ್ಕೆ ಆಗಲ್ಲ. ಸಂಜೆ ಬೇಗ ಹೋಗಲು ಅನುಮತಿ ಕೇಳೋಣ ಅಂತಿದ್ದೆ, ಆದರೆ ಇನ್ನೂ ಹೆಚ್ಚುವರಿ ಕೆಲಸ ಬಿತ್ತು” ಅಲವತ್ತಿಕೊಂಡಳು. ಅವಳ ಮುಖವನ್ನೇ ದಿಟ್ಟಿಸಿದ ಧನಂಜಯ. “ಹೆಚ್ಚುವರಿ ಕೆಲಸ?” ಎಂದವನ ಮಾತಿಗೆ ಉತ್ತರ ಕೊಡಲು ಆಗಲಿಲ್ಲ ಅವಳಿಗೆ. ತನ್ನ ಸೀಟಿನ ಬಳಿ ಬಂದಾಗ ಅವನ ಮಾತನ್ನು ಮೆಲುಕು ಹಾಕಿದಳು. ಬಾಸ್ ಸುಮಾರು ಜನರ ಹತ್ತಿರ ಕೆಟ್ಟದಾಗಿ ವರ್ತಿಸುತ್ತಾರೆ. ಕೆಲವರ ಹತ್ತಿರ ಬಹಳ ನಯವಾಗಿ, ಪ್ರೀತಿಯಿಂದ ಮಾತನಾಡುತ್ತಾರೆ. ಅದರಲ್ಲಿ ಧನಂಜಯ ಕೂಡ ಒಬ್ಬ. ನಮಿತಾ, ಸುನೈನಾ ಕೂಡ ಅವರ ಪ್ರೀತಿಗೆ ಪಾತ್ರರು. ಎಲ್ಲರೂ “ಮದುವೆಯಾಗದ ಹೆಣ್ಣುಗಳು ಬಾಸ್ ಗೆ ಪ್ರಿಯರು” ಎಂದು ಮಾತಾಡಿದಾಗ ನಾನೂ ನಾಲಿಗೆ ಚಪಲ ತೀರಿಸಿಕೊಂಡಿದ್ದೆ.
ಆದರೆ ಒಳ ಮನಸ್ಸು ಬಾಸ್ ಆ ರೀತಿಯವರಲ್ಲ ಎಂದು ಹೇಳಿತ್ತು. ಹೌದು, ಆತನಿಗೆ ತಾಳ್ಮೆ ಕಡಿಮೆ, ಮಾತು ಒರಟು. ಆದರೆ ಕೆಟ್ಟ ಚಾಳಿಗಳಿಲ್ಲ.
ಯೋಚಿಸುತ್ತಾ ಕುಳಿತವಳಿಗೆ ತಾನು ಯಾವಾಗಲೂ ಬೇರೆ ವಿಚಾರಗಳ ಬಗ್ಗೆ ಚಿಂತಿಸುತ್ತಾ ಕೆಲಸ ಮಾಡುತ್ತೇನೆ, ಆದುದರಿಂದ ತಪ್ಪುಗಳು ಆಗುತ್ತವೆ. ಬಾಸ್ ಬೈತಾರೆ ಎನ್ನುವ ಮನೋಭಾವದಿಂದಲೇ ಅವರ ಕ್ಯಾಬಿನ್ ಕಡೆಗೆ ಹೋಗುತ್ತೇನೆ. ನನ್ನ ಮುಖ ನೋಡೇ ಅವರಿಗೆ ಗೊತ್ತಾಗಿ ಕೋಪ ಭುಗಿಲ್ ಎನ್ನುತ್ತದೆ. ಅದೇ ಧನಂಜಯ, ನಮಿತಾ, ಸುನೈನಾ ಬೈಸಿಕೊಂಡಿದ್ದು ಒಮ್ಮೆಯೂ ಕೇಳಿಲ್ಲ.
ತಲೆ ಕೆಡವಿಕೊಂಡ ಅವಳು ಕೆಲಸದ ಕಡೆ ಗಮನವಿಟ್ಟು ಬೇಗ ಮುಗಿಸಿದಳು. ಬಾಸ್ ಗೆ ಮೇಲ್ ಕಳುಹಿಸಿ ಕ್ಯಾಂಟೀನ್ ಕಡೆ ನಡೆದಳು. ಚಹಾ ಕುಡಿದು ಬರುವಷ್ಟರಲ್ಲಿ ಬಾಸ್ ಹೇಳಿ ಕಳಿಸಿದರು. ಆತ್ಮ ವಿಶ್ವಾಸದಿಂದ ತಲೆ ಎತ್ತಿ ಒಳ ನಡೆದಳು. ಮಾಮೂಲಿನಂತೆ ಟೇಬಲ್ ಬಳಿ ನಿಲ್ಲದೆ, ಅಲ್ಲೇ ಖುರ್ಚಿಯಲ್ಲಿ ಹೇಳಿಕೊಳ್ಳದೆ ಕುಳಿತಳು. ಅಚ್ಚರಿಗೊಂಡರೂ ತೋರ್ಪಡಿಸಿಕೊಳ್ಳದೆ ಪ್ರಶ್ನೆಗಳನ್ನು ಕೇಳತೊಡಗಿದ. ಹೆದರದೆ ಒಂದೊಂದಕ್ಕೂ ನಿಧಾನವಾಗಿ ಉತ್ತರ ಕೊಟ್ಟ ತನ್ನ ಬಗ್ಗೆ ತನಗೇ ಹೆಮ್ಮೆಯಿತ್ತು.
ಯಾವುದೋ ಪಾಯಿಂಟ್ ತಪ್ಪು ಎಂದವನ ಮಾತಿಗೆ ಸಮಜಾಯಿಷಿ ಕೊಟ್ಟಾಗ ಆತ “ನೀವು ತಪ್ಪು ಮಾಡುವುದು ಜಾಸ್ತಿ, ಅದಕ್ಕೆ ಅನುಮಾನ ನನಗೆ” ಎಂದ. ಕೋಪ ಉಕ್ಕಿದರೂ ಅವನ ಮಾತಿನಲ್ಲಿ ಇರುವ ಸತ್ಯತೆ ಗುರುತಿಸಿ “ಈಗಿನದು ಹೇಳಿ ಸರ್. ಇದು ಸರಿಯಾಗಿದೆ. ನನಗೆ ವಿಶ್ವಾಸವಿದೆ” ಎಂದವಳ ಕಡೆ ಗೌರವದಿಂದ ನೋಡಿದ.
ಪ್ರತಿಕ್ರಿಯೆಗಾಗಿ : tv9kannadadigital@gmail.com
ಇದನ್ನೂ ಓದಿ : New Column: ‘ಎಲ್ರೂ ಬದುಕಬೇಕಲ್ವಾ?’ ಏ. 27ರಿಂದ ಡಾ. ಸಹನಾ ಪ್ರಸಾದ್ ಅಂಕಣ ಪ್ರಾರಂಭ