Reporter‘s Diary : ‘ಮೂರು ರಾತ್ರಿಗಳಾದರೂ ಈ ಮನೆಯ ಸೂರಡಿಯಲ್ಲಿ ಹಾಯಾಗಿ ನಿದ್ರಿಸುತ್ತೇನೆ’
Demolish : ಆಧುನಿಕತೆ ಹೆಸರಲ್ಲಿ ಅಭಿವೃದ್ಧಿಯ ಮಹಲನ್ನ ಕಟ್ಟುತ್ತಿದ್ದೇವೆ ಎಂಬ ಸರ್ಕಾರಗಳು, ಕೆಲವೊಮ್ಮೆ ಶ್ರೀಸಾಮಾನ್ಯನ ಬದುಕಿನ ಅಡಿಪಾಯವನ್ನೇ ಅಲ್ಲಾಡಿಸುತ್ತವೆ. ಇದಕ್ಕೆ ಉದಾಹರಣೆ ಶ್ರೀಪ್ರಕಾಶರ ಕಥೆ.
Reporter‘s Diary : ವರದಿಗಾರಿಕೆ ಎಂಬ ಸಮುದ್ರಯಾನ ಆರಂಭಿಸಿ ಸರಿಸುಮಾರು 17 ವರ್ಷಗಳಾಗಿವೆ. ಅದೆಷ್ಟೋ ಸಹ ಪ್ರಯಾಣಿಕರು ಬದಲಾಗಿದ್ದಾರೆ. ಪರಿಸ್ಥಿತಿ ತೀವ್ರವಾಗಿ ಬದಲಾಗಿದೆ. ವರದಿಗಾರಿಕೆ ಆರಂಭವಾದಾಗ ಇದ್ದ ಪರಿಸ್ಥಿತಿಗೂ ಇಂದಿನ ಪರಿಸ್ಥಿತಿಗೂ ಅಜಗಜಾಂತರ ವ್ಯತ್ಯಾಸವಿದೆ. ಸುದ್ದಿ ಮಾಡಿ ಸುಮ್ಮನಾಗುವಂತಹ ವಿಷಯಗಳನ್ನ ನೋಡಿದ್ದೇವೆ. ಆದರೆ ಕೆಲವು ವರದಿಗಳು ಮಾತ್ರ ನಮ್ಮನ್ನ ಪದೇ ಪದೇ ಕಾಡುತ್ತಲೇ ಇರುತ್ತವೆ. ಅಂತಹ ಎರಡು ಪ್ರಮುಖ ಸುದ್ದಿಗಳನ್ನ “ಡೈರಿ” ಯಲ್ಲಿ ನಮೂದಿಸುತ್ತಿದ್ದೇನೆ. ಬದುಕಿನ ತೀವ್ರತೆಯನ್ನ ಆಗಾಗ ನೆನಪಿಸುವ ಸುದ್ದಿಗಳಿವು. ಆಧುನಿಕತೆ ಹೆಸರಲ್ಲಿ ಅಭಿವೃದ್ಧಿಯ ಮಹಲನ್ನ ಕಟ್ಟುತ್ತಿದ್ದೇವೆ ಎಂಬ ಸರ್ಕಾರಗಳು, ಕೆಲವೊಮ್ಮೆ ಶ್ರೀಸಾಮಾನ್ಯನ ಬದುಕಿನ ಅಡಿಪಾಯವನ್ನೇ ಅಲ್ಲಾಡಿಸುತ್ತವೆ. ಇದಕ್ಕೆ ಉದಾಹರಣೆ ಶ್ರೀಪ್ರಕಾಶರ ಕಥೆ. ಇನ್ನು ರಾಮಸೇತು ನಿರ್ಮಿಸುವ ಸಂದರ್ಭದಲ್ಲಿ ಅಳಿಲೊಂದು ರಾಮನ ಕಾಲಡಿಗೆ ಸಿಲುಕಿ ಬಿಡುತ್ತಂದೆಯಂತೆ, ಅದನ್ನ ನೋಡಿದ ಶ್ರೀರಾಮ ನೀನೇಕೆ ಕೂಗಲಿಲ್ಲ ಎಂದು ಪ್ರಶ್ನಿಸುತ್ತಾನೆ. ಆಗ ಅಳಿಲು “ಭಗವಂತನೇ ತುಳಿದರೆ ಯಾರನ್ನ ಕರೆಯುವುದು?” ಎಂದು ಪ್ರಶ್ನಿಸುತ್ತದೆ. ಅಂಥದ್ದೇ ಇನ್ನೊಂದು ಕಥೆ ಆ ಹುಡುಗನದ್ದು. ಶ್ರೀಪ್ರಕಾಶ್ ಹಾಗೂ ಆ ಹುಡುಗನ ಬದುಕಿಗೊಮ್ಮೆ ಕರೆದೊಯ್ಯತ್ತೇನೆ ಬನ್ನಿ. ಪ್ರಮೋದ್ ಶಾಸ್ತ್ರಿ, ಹಿರಿಯ ವರದಿಗಾರ ಟಿವಿ9 ಕನ್ನಡ ಬೆಂಗಳೂರು
ಗೃಹ ಪ್ರವೇಶ
‘‘ಮನೆ ಗೃಹಪ್ರವೇಶ… ಮಿಸ್ ಮಾಡದೇ ಬಾರಪ್ಪ’’ ಅಂತಾ ನನ್ನ ತಂದೆ ಸ್ನೇಹಿತರಾದ ರಂಗರಾಜಯ್ಯನವರು ಕರೆದಾಗ, ನನಗೆ ಥಟ್ ಅಂತಾ ನೆನಪಾಗಿದ್ದು ಶ್ರೀಪ್ರಕಾಶ್. ಅಂದು ಶ್ರೀಪ್ರಕಾಶ್ ಕಾಲ್ ಮಾಡಿದಾಗ ರಾತ್ರಿ 9 ಆಗಿತ್ತು. ಬೆಳಿಗ್ಗೆ ಶಾರ್ಪ್ 8 ಗಂಟೆಗೆ ಸೈಟ್ಗೆ ಬರ್ತೀನಿ ಸರ್ ಅಂತಾ ಅರ್ಜೆಂಟ್ ಅರ್ಜೆಂಟ್ ಆಗಿ ಹೇಳಿ, ಪ್ರಕಾಶ್ ಮಾತು ಮುಗಿಸುವ ಮುನ್ನವೇ ಫೋನ್ ಕಟ್ ಮಾಡಿದ್ದೆ. ಬೆಳಿಗ್ಗೆ 8ಕ್ಕೆ ಇರಬೇಕಿತ್ತು. ಆದ್ರೆ ನಾನು ಅಲ್ಲಿದ್ದಾಗ 12.20 ಆಗಿತ್ತು. ಆಗಲೇ ನಾನು ನನ್ನ ಜೀವನದಲ್ಲಿ ಮೊದಲ ಬಾರಿಗೆ ಶ್ರೀಪ್ರಕಾಶ್ ಅವರ ಮುಖವನ್ನ ನೋಡಿದ್ದು. ಆರಡಿ ಮನುಷ್ಯ ಪ್ರಕಾಶ್. ಅಲ್ಲೇ ಮುಂದೇ ನಿಂತು ಮೇಸ್ತ್ರಿ ಮೇಯಪ್ಪನ್ ಗೆ ಹಿಗ್ಗಾಮುಗ್ಗಾ ತರಾಟೆಗೆ ತೆಗೆದುಕೊಳ್ತಾ ಇದ್ರು.
ಎದುರಿಗಿದ್ದ ನನ್ನನ್ನ ನೋಡಿ. “ಸರ್ ಎರಡು “ಕರ್ನೆ”ಸಿಮೆಂಟ್ ಜಾಸ್ತಿ ಹಾಕಿದಾನೆ. ಸರಿಯಾಗಿ ಮಿಕ್ಸ್ ಮಾಡಿಲ್ಲ, ಮುಂದೆ ನಿಂತ್ರೆನೇ ಕೆಲಸ ಆಗೋದು..” ಅಂತಾ ಪುಟ್ಟಮಕ್ಕಳು ಚಾಡಿ ಹೇಳೋ ಹಾಗೇ ಹೇಳಿದ್ರು. ಮೊದಲೇ ಲೇಟ್ ಆಗಿ ಹೋಗಿದ್ದ ನಾನು ಅರ್ಧಂಬರ್ಧ ಹಲ್ಲು ಕಿರಿದು ಸುಮ್ಮನಾದೆ. ‘‘ನೋಡಿ ಸರ್… ಎರಡು ಫ್ಲೋರ್ ಇದೆ. ಗ್ರೌಂಡ್ ಫ್ಲೋರ್ ನಲ್ಲಿ ಪಾರ್ಕಿಂಗ್, ಮಗನಿಗೆ ಸಪರೇಟ್ ರೂಮ್ ಮಾಡಿಸಿದ್ದಿನಿ… ಇನ್ನೊಂದು ತಿಂಗಳು ಎಲ್ಲಾ ಕಂಪ್ಲೀಟ್ ರೆಡಿ ಆಗಿ ಬಿಡುತ್ತೆ. ಆಮೇಲೆ ಗೃಹಪ್ರವೇಶ…” ಅಂತಾ ಹೇಳಿದಾಗ, ನನಗೆ ನಿಜಕ್ಕೂ ಆ ಮನುಷ್ಯನ ನೋಡಿ ಅಚ್ಚರಿ ಮತ್ತು ಆಘಾತ ಎರಡೂ ಆಗಿತ್ತು. ಅಲ್ಲ ಸರ್… ಅಂತಾ ನಾನು ಬಾಯಿ ತೆರೆಯೋ ಮುನ್ನವೇ ಶ್ರೀಪ್ರಕಾಶ್ ಪಕ್ಕದಲ್ಲಿದ್ದವರ ಬಳಿ ಯಾವಾಗ ಡೆಮೋಲಿಷನ್ ಮಾಡ್ತಾರಂತೆ ಅಂತಾ ಕೇಳಿದ್ರು.
ಬೈ ದ ಬೈ ಜಯನಗರದ ಪ್ರಕಾಶ್ ತಮ್ಮ ಜೀವಮಾನದ ದುಡಿಮೆಯನ್ನೆಲ್ಲಾ ಕೂಡಿಟ್ಟು ಜಯದೇವ ಆಸ್ಪತ್ರೆ ಬಳಿಯ 9 ಬ್ಲಾಕ್ ನಲ್ಲಿ ಅದ್ಬುತವಾದ ಮನೆಯೊಂದನ್ನ ಕಟ್ಟಿಸುತ್ತ, ಜೂನ್ 27 ರಂದು ಮನೆಯ ಗೃಹಪ್ರವೇಶದ ಮುಹೂರ್ತ ಕೂಡ ಫಿಕ್ಸ್ ಮಾಡಿದರು. ದುರಂತ ಅಂದ್ರೆ ಈ ಮನೆ ಯಾವಾಗ ಬೇಕಾದ್ರೂ ನೆಲಸಮ ಆಗಬಹುದು. ಹೌದು ಗೆಳೆಯರೇ… ಎಲ್ಲವೂ ಅಂದುಕೊಂಡಂತೆ ಆದ್ರೆ ಮೆಟ್ರೋ ರೈಲು ಕೆಲ ವರ್ಷಗಳಲ್ಲಿ ಇದೇ ಮನೆಯ ಮೇಲೆ ಹಾದು ಹೋಗುತ್ತೆ. ಮೆಟ್ರೋ ಸ್ಟೇಷನ್ ಗಾಗಿ ಈ ನೂತನ ಮನೆಯಿರೋ ಜಾಗವನ್ನ ನೋಟಿಫೈ ಮಾಡಲಾಗಿದೆ. ಪ್ರಕಾಶ್ ರ ಕನಸಿನ ಮನೆ ನೆಲಕ್ಕುರಳತ್ತೆ. ಎಂಥ ಆಘಾತ… ಪ್ರಕಾಶ ಮತ್ತು ಅವರ ಪತ್ನಿ ಚಂದ್ರಿಕಾ ಕಣ್ಣಲ್ಲಿ ಕಣ್ಣಿಟ್ಟು ಕಟ್ಟಿಸಿರೋ ಮನೆ. ತಾವೇ ಖುದ್ದಾಗಿ ನಿಂತು, ಇಲ್ಲೇ ಅಡುಗೆ ಮನೆ ಇರಬೇಕು. ಇಲ್ಲೇ ರೂಮ್ ಇರಬೇಕು. ಇಲ್ಲೇ ಸ್ಟೆಪ್ಸ್ ಇರಬೇಕು. ಮಗನ ರೂಮ್ ಹೀಗೇ ಇರಬೇಕು ಅಂತಾ ಸ್ವತಹ ಇಂಜಿನಿಯರ್ ಕೂಡ ಆಗಿರೋ ಪ್ರಕಾಶ್ ರ ಪತ್ನಿ ಚಂದ್ರಿಕಾ ಡಿಸೈನ್ ಮಾಡಿರೋ ಮನೆ ಅದು…
ಇದನ್ನೂ ಓದಿ : Reporter’s Diary : ಸನ್ಯಾಸಿಯಾಗಲು ಹೊರಟವನು ಇಂದು ಐಎಎಸ್ ಅಧಿಕಾರಿಯಾಗಲು ಹೊರಟಿದ್ದಾನೆ
ಆ ಮನೆ ಕೇವಲ ಕಲ್ಲು ಮಣ್ಣು ಸಿಮೆಂಟ್ ನಿಂದ ಕಟ್ಟಿದ್ದಲ್ಲ, ಪ್ರಕಾಶ್ ಕುಟುಂಬದ ಬೆವರು, ರಕ್ತ, ಕಣ್ಣೀರು , ಕನಸು ಎಲ್ಲದರ ಹದವಾದ ಮಿಶ್ರಣ ಅದು… ಹೀಗಿದ್ದಾಗ, ಗೃಹ ಪ್ರವೇಶ ಆಗ್ತಾ ಇದ್ದಂತೆ ಮನೆ ಮುರಿದು ಬೀಳುತ್ತೆ ಅನ್ನೋ ವಿಷಯ ಕಿವಿಗೆ ಬೀಳ್ತಾ ಇದ್ದಂತೆ ಪ್ರಕಾಶ್ ಕುಸಿದು ಬಿದ್ದಿದ್ರು. ಹದಿನೈದು ದಿನ ಅಕ್ಷರಶಃ ಹಾಸಿಗೆ ಹಿಡಿದಿದ್ರು. ಸಾಲ ಕೊಟ್ಟ ಬ್ಯಾಂಕ್ ಅದಾಗಲೇ ವಾಪಾಸ್ಸಾತಿ ಬಗ್ಗೆ ಕಿರಿಕಿರಿ ಶುರು ಮಾಡಿಬಿಟ್ಟಿತ್ತು. ಗಟ್ಟಿಗ ಪ್ರಕಾಶ್, ಸುಮ್ಮನೆ ಕುಳಿತಿಲ್ಲ, ಅರ್ಧಕ್ಕೆ ನಿಂತಿದ್ದ ಮನೆಯನ್ನ ಪೂರ್ಣ ಮಾಡ್ತಾ ಇದಾರೆ. ಜೂನ್ 27ಕ್ಕೆ ಆಗದೇ ಇದ್ರೆ ಏನಂತೆ, ಇನ್ನೊಂದು ದಿನವಾದ್ರೂ ಅದ್ಭುತ ಮುಹೂರ್ತದಲ್ಲೇ ಗೃಹ ಪ್ರವೇಶ ಮಾಡೇ ಮಾಡ್ತೀನಿ, ಮೂರು ರಾತ್ರಿಯಾದ್ರೂ, ಈ ಮನೆಯ ಸೂರಡಿಯಲ್ಲಿ ಕಣ್ಮುಚ್ಚಿ ಹಾಯಾಗಿ ನಿದ್ರಿಸುತ್ತೇನೆ ಅಂತಿದ್ದಾರೆ. ಈ ಮಾತುಗಳನ್ನ ಹೇಳುವಾಗ ಪ್ರಕಾಶ್ ರ ಕಣ್ಣಾಲಿಗಳು ಒದ್ದೆಯಾಗಿದ್ವು, ನೋವಿನಿಂದ ಹಿಡಿದಿಟ್ಟ ಕೆನ್ನೆಯ ಮೇಲೆ ಹನಿ ಹರಿದಿತ್ತು.
ವರದಿಗೆ ತೆರಳಿದ್ದ ನಾನು ಒಲ್ಲದ ಮನಸ್ಸಿನಿಂದಲೇ ಪ್ರಶ್ನೆ ಕೇಳ್ತಾ ಇದ್ದೆ….ಹೇಳಲು ನನ್ನ ಬಳಿ ಏನು ಇರಲಿಲ್ಲ.. Sorry sir.. ಅಂತಾ ಹೇಳಿ ಅಲ್ಲಿಂದ ಹೊರಡುವಾಗ ನಿಜಕ್ಕೂ ಹೃದಯ ಭಾರವಾಗಿತ್ತು. ಮೆಟ್ರೋ ರೈಲಿನ ಬಗ್ಗೆ ಸಣ್ಣದೊಂದು ಕೋಪ ನನ್ನಲ್ಲಿ ಮನೆ ಮಾಡಿತ್ತು.
ಇದು ಶ್ರೀಪ್ರಕಾಶರ ಕಥೆಯಾದರೆ, ಇಲ್ಲೊಂದು ಹುಡುಗನ ಬದುಕು ನೆನದರೆ ಮುಂದೇನು ಎಂಬ ಪ್ರಶ್ನೆ ಕಾಡುತ್ತೆ.
LUCK ತುರ್ತಾಗಿ ಬೇಕಿದೆ
ನಾನು ಆ ದಿನ ಬಿಬಿಎಂಪಿ ಕಚೇರಿ ಬಳಿ ನಿಂತಿದ್ದೆ. ಆಫೀಸ್ನಿಂದ ಕೂಡಲೇ ಕೆ ಸಿ ಜನರೆಲ್ ಆಸ್ಪತ್ರೆ ಗೆ ಹೊರಡುವಂತೆ ಸೂಚನೆ ಬಂದಿತ್ತು. ಕೇವಲ 20 ನಿಮಿಷಿದಲ್ಲಿ ನನ್ನ ಕಾರ್ ಆಸ್ಪತ್ರೆ ಮುಂದೆ ನಿಂತಿತ್ತು. ಒಳಗೆ ಹೋಗಿ ನೋಡಿದಾಗ ನಿದ್ದೆಯಿಂದ ಆಗತಾನೇ ಎದ್ದು ಬಂದಂತಹ ಮುಖ. ಮುಂದೆ ನಿಂತಿದ್ದ ನನ್ನೆಡೆ ಅಮಾಯಕ ನೋಟ ಬೀರ್ತಾ ಇರೋ ಹುಡುಗ ನನಗೆ ಸಂಬಂಧಿಯೇನು ಅಲ್ಲ. ಆದ್ರೆ ಆತನ ಹತ್ತಿರಕ್ಕೆ ಇರಲೇಬೇಕು ಅಂತಾ ಅವನ ಕತೆ ಕೇಳಿದಾಗಲೇ ನನಗೆ ಅನಿಸಿತು. ಎಲ್ಲವೂ ಸರಿ ಇದ್ರೆ ಈ ಪೋರ ಅಪ್ಪ ಅಮ್ಮನ ಜೊತೆ ಆಟವಾಡಿಕೊಂಡು ಇರ್ತಾ ಇದ್ದ. ಆದ್ರೆ ಮೇ 9ರಂದು ಈತನ ಹೆತ್ತ ತಾಯಿಯೇ ಈತನಿಗೆ ವಿಷ ಉಣಿಸಿ ನೇಣು ಹಾಕಿಕೊಂಡು ಬಿಟ್ಲು. ರಣನೋವಿನಲ್ಲಿ ಒದ್ದಾಡ್ತಾ ಇದ್ರೂ ಈ ಪುಟಾಣಿ ಮನೆ ಆಚೆ ಬಂದು “ಅಮ್ಮ ಮಾತಾಡ್ತಾ ಇಲ್ಲ ಹೆಲ್ಪ್ ಮಾಡಿ” ಅಂತಾ ಅಂಗಲಾಚುತ್ತಲೇ , ಮೂರ್ಛೆ ಬಿದ್ದ. ಸತತ 11 ದಿನಗಳ ಕಾಲ ಸಾವಿಗೆ ಸವಾಲ್ ಹಾಕಿದ ಈತ ಕೊನೆಗೂ ಗೆದ್ದೇ ಬಿಟ್ಟ.
ಇದನ್ನೂ ಓದಿ : Reporter’s Diary: ‘ಯಡಿಯೂರಪ್ಪನವರ ಜೈಲುಪ್ರಸಂಗ’ ಓರ್ವ ಪತ್ರಕರ್ತನಾಗಿ ಆ ದಿನ ನನಗೆ ಖುಷಿಯೂ ಇರಲಿಲ್ಲ ದುಃಖವೂ
ಆದ್ರೆ ಕ್ರೂರಿ ವಿಧಿ ಇಷ್ಟಕ್ಕೆ ಸುಮ್ಮನಾಗಿಲ್ಲ ಈತನ ಕಟಕು ತಂದೆ ಅದಾಗಲೇ ಪತ್ನಿಗೆ ಗುಡ್ ಬೈ ಹೇಳಿ ಹಿಂದಿರೂಗಿಯೂ ನೋಡದೇ ದೂರ ಹೋಗಿದ್ದ. ಮೊಮ್ಮಗ ಅಂದ್ರೆ ಪ್ರಾಣ ಬಿಡಬೇಕಿದ್ದ ಅಜ್ಜ ಅಜ್ಜಿ, ಈತನ ತಾಯಿಯ ಮೃತ ದೇಹದ ಮೇಲಿದ್ದ ಚಿನ್ನಾಭರಣವನ್ನ ಹೊತ್ತೊಯ್ದು ಹೇಸಿಗೆ ಹುಟ್ಟಿಸಿದ್ದಾರೆ. ಸದ್ಯಕ್ಕೆ ಐದರ ಹರೆಯದ ಈ ಪೋರನಿಗೆ ಯಾರೂ ಇಲ್ಲ. ಆಸ್ಪತ್ರೆಯ ಶವಗಾರದ ಪಕ್ಕದಲ್ಲೇ ಇರೋ ಕೊಠಡಿಯ ಹಾಸಿಗೆಯ ಮೇಲೆಯೇ ಅನಾಥ ಬದುಕು ಸಾಗಿಸ್ತಾ ಇದಾನೆ. ಈತನ ಉಸ್ತುವಾರಿ ವಹಿಸೋಣ ಅಂದ್ರೆ ಕಾನೂನು ಬೇರೆಯದ್ದೇ ಮಾತನಾಡುತ್ತೆ. ಇದೇ ಕಾರಣಕ್ಕೆ ಪೊಲೀಸರು ಮತ್ತು ಆಸ್ಪತ್ರೆ ಮುಖ್ಯಸ್ಥರ ನಿರ್ಣಯ ಕೈಗೊಳ್ಳುವಲ್ಲಿ “ಅಂಗವಿಕಲ”ರಾಗಿದ್ದಾರೆ.
ಬೈ ದ ಬೈ ಈ ನತದೃಷ್ಟ ಬಾಲಕನ ಹೆಸರು “ಹರ್ಷ”. ಮುಂದೇನು ಸರ್ ಎಂದು ಆಸ್ಪತ್ರೆ ಮುಖ್ಯಸ್ಥರನ್ನ ನಾನು ಕೇಳಿದಾಗ,” ನೋಡೋಣ ಬನ್ನಿ ಪ್ರಮೋದ್, ನಾನು ಸಹ ಏನೂ ಹೇಳುವ ಸ್ಥಿತಿಯಲ್ಲಿ ಇಲ್ಲ. ದೇವರು ಈ ಹುಡುಗನಿಗೆ ಇನ್ನೂ ಮೋಸ ಮಾಡಿದರೆ ನಾನಂತೂ ಅವನಿಗೆ ಕೈ ಮುಗಿಯೋಲ್ಲ” ಎಂದು ಭಾರದ ದನಿಯಲ್ಲೇ ಹೇಳಿದರು. ಪೋಲಿಸ್ ಹಿರಿಯ ಅಧಿಕಾರಿಗಳು ಆ ಬಾಲಕನ ಸಂಬಂಧಿಕರ ಹುಡುಕಾಟದಲ್ಲಿದ್ದರು. ಲೈಫ್ ನಲ್ಲಿ ಅದೇಷ್ಟೋ ಮಂದಿ ತುಂಬಾ ” LUCKY” ಅಂತಾ ಕೇಳಿದ್ದೇನೆ. ಅಂತಹವರಲ್ಲಿ ನನ್ನದೊಂದು ಸಣ್ಣ ಮನವಿ. ನಿಮ್ಮ ಪಾಲಿನ ಕೆಲ “ಲಕ್” ಅನ್ನ ಈ ಹುಡುಗನಿಗೆ ಕೊಡಲು ಸಾಧ್ಯವೇ? ಹಾಗಾದರೂ ಈ ಬಡ ಜೀವ ಬದುಕು ಕಟ್ಟಿಕೊಳ್ಳಲಿ.
ಪ್ರತಿಕ್ರಿಯೆಗಾಗಿ : tv9kannadadigital@gmail.com
Published On - 5:43 pm, Mon, 4 July 22