ಚಾಣಕ್ಯ ನೀತಿಗಳು ಒಣಕಲು, ಸವಕಲು ಅಲ್ಲ: ಈ ಏಳು ಸಂಗತಿಗಳ ಬಗ್ಗೆ ಎಚ್ಚರಿಕೆಯಿಂದ ಇಲ್ಲದಿದ್ದರೆ ಜೀವನದಲ್ಲಿ ತೊಂದರೆ ತಪ್ಪಿದ್ದಲ್ಲ!
ಮನುಷ್ಯ ಭೋಗ ಮತ್ತು ವಿಲಾಸ ಜೀವನದಲ್ಲಿ ಸಿಲುಕಿದರೆ ತಲೆತಿರುಗುವಿಕೆ ಮೊದಲಿಟ್ಟುಕೊಳ್ಳುತ್ತದೆ. ಯಾರು ಭೋಗ-ವಿಲಾಸ ಜೀವನದಲ್ಲಿ ಮುಳುಗಿಬಿಡುತ್ತಾರೋ, ಯಾರು ತಮ್ಮ ಮೇಲೆ ನಿಯಂತ್ರಣ ಹೊಂದುವುದಿಲ್ವೋ ಅವರು ಮಾನಸಿಕ ಸಮತೋಲನ ಕಳೆದುಕೊಳ್ಳುತ್ತಾರೆ. ತತ್ಫಲವಾಗಿ ಶಾರೀರಿಕವಾಗಿಯೂ ಅವನತಿ ಹೊಂದುತ್ತಾರೆ.
ಆಚಾರ್ಯ ಚಾಣಕ್ಯ ತನ್ನ ಸಾರ್ವಕಾಲಿಕ ಸತ್ಯ ದರುಶನದ ಆಲೋಚನೆಗಳನ್ನು ಗ್ರಂಥಗಳ ರೂಪದಲ್ಲಿ ಬರೆದಿಟ್ಟು ಅಮರ ನೀತಿಗಳನ್ನು ಜನರಿಗಾಗಿ ಬರೆದಿಟ್ಟು ಹೋಗಿದ್ದಾನೆ. ಈ ಗ್ರಂಥಗಳಲ್ಲಿ ವ್ಯಾವಹಾರಿಕ ಜೀವನ ಮತ್ತು ಗೃಹಸ್ಥಶ್ರಾಮದ ಬಗ್ಗೆಯೂ ತಿಳಿವಳಿಕೆ ನೀಡಿದ್ದಾರೆ. ಜೀವನದುದ್ದಕ್ಕೂ ಪಾಲಿಸಬೇಕಾದ ಮಾರ್ಗಸೂಚಿಗಳು ಇವಾಗಿವೆ. ಚಾಣಕ್ಯ ನೀತಿಯಲ್ಲಿ (Chanakya Niti) ಏಳು ಪ್ರಮುಖ ಸಂಗತಿಗಳನ್ನು ಉಲ್ಲೇಖಿಸಲಾಗಿದೆ. ಹಾಗೆ ನೋಡಿದರೆ ಚಾಣಕ್ಯ ನೀತಿಯಲ್ಲಿ ಆಚಾರ್ಯ ಚಾಣಕ್ಯ ಎಲ್ಲ ನೀತಿಗಳನ್ನು ರಚಿಸಿದ್ದಾರೆ. ಅಂದು ಚಾಣಕ್ಯ ರಚಿಸಿರುವ ಎಲ್ಲಾ ನೀತಿಗಳೂ ಇಂದಿಗೂ ಜನಕ್ಕೆ ಹತ್ತಿರವಾಗಿದ್ದು, ಅವುಗಳನ್ನು ಆಲಿಸಿ, ಪಾಲಿಸಿದರೆ ಜೀವನ ಸುಮಧುರವಾಗಿರುತ್ತದೆ. ಚಾಣಕ್ಯ ನೀತಿಗಳನ್ನು ಯಾರೂ ಅಲ್ಲಗಳೆಯಲಾರರು. ಯಾರೂ ಧಿಕ್ಕರಿಸುತ್ತಾರೋ ಅವರ ಜೀವನದಲ್ಲಿ ಏರುಪೇರು ಕಂಡುಬರುವುದು ಖಚಿತ. ಚಾಣಕ್ಯನ ದೂರದರ್ಶಿತ್ವ ಎಷ್ಟು ದೂರವಾಗಿದ್ದುವೆಂದರೆ ಇಂದಿಗೂ ಎಂದೆಂದಿಗೂ ಅವರು ಹಚ್ಚಹಸಿರಿನಿಂದ ಕೂಡಿದ್ದಾಗಿವೆ. ಅವು ಒಣಕಲು, ಸವಕಲು ನೀತಿಗಳಲ್ಲ.
ಚಾಣಕ್ಯ ತನ್ನ ಸಾರ್ವಕಾಲಿಕ ಸತ್ಯ ದರುಶನ ನೀತಿಗಳಲ್ಲಿ ಹೇಳಿರುವಂತೆ ಆಕಸ್ಮಾತ್ ಮನುಷ್ಯರು ಈ ಏಳು ಸಂಗತಿಗಳ ಬಳಿ ಸಾಗಿಬಂದರೆ ಮುಂದೆ ತೊಂದರೆಗಳು ತಪ್ಪಿದ್ದಲ್ಲ. ಅವು ಯಾವುವೆಂದರೆ ಹಣ, ಭೋಗ-ವಿಲಾಸ, ಹೆಣ್ಣು, ರಾಜ, ಸಮಯ, ಬೇಡುವವರು ಮತ್ತು ದುಷ್ಟ ಜನರ ಸಹವಾಸ. ಇವುಗಳಿಂದ ದೂರ ಉಳಿದಷ್ಟೂ ಕ್ಷೇಮ. ಇವುಗಳನ್ನು ಸರಿಯಾಗಿ ಸಂಭಾಳಿಸಬೇಕು. ಇವುಗಳ ಜೊತೆ ವ್ಯವಹಾರ ನಡೆಸುವಾಗ ಆಳವಾದ ಚಿಂತನೆ ನಡೆಸಿ, ವ್ಯವಹರಿಸಬೇಕು. ಇಲ್ಲವಾದಲ್ಲಿ ಸಂಕಷ್ಟಗಳು ತಪ್ಪಿದ್ದಲ್ಲ.
ಈ ಏಳು ಅಪಾಯಕಾರಿ ಸಂಗತಿಗಳಿಂದ ಬಚಾವಾಗಲು ಚಾಣಕ್ಯ ನೀತಿಯ 16ನೆಯ ಅಧ್ಯಾಯದಲ್ಲಿ ನಾಲ್ಕನೆಯ ಶ್ಲೋಕದಲ್ಲಿ ವರ್ಣಿಸಲಾಗಿದೆ.
ಹೊನ್ನು: ದುಡ್ಡು ಬರುವುದಕ್ಕೆ ಶುರುವಾಗುತ್ತಿದ್ದಂತೆ ಮನುಷ್ಯನ ತಲೆತಿರುಗುವಿಕೆಯೂ ಜೋರಾಗಿಬಿಡುತ್ತದೆ. ಶ್ಲೋಕದಲ್ಲಿ ಹೇಳಿರುವಂತೆ ಹಣ ಕೂಡಿಬಂದಷ್ಟೂ ಅಂತಹ ಧನಿಕರಲ್ಲಿ ಗರ್ವವೂ ಉತ್ಪತ್ತಿಯಾಗಿಬಿಡುತ್ತದೆ. ಚೋದ್ಯದ ಸಂಗತಿಯೆಂದರೆ ಈ ಭೂಮಿಯ ಮೇಲೆ ಹಣ ಸಂಪಾದನೆಯಾದ ಮೇಲೂ ಸರಳವಾಗಿ, ನಿಗರ್ವಿಯಾಗಿ ಉಳಿಯುವುದು ಯಾರಿಗೂ ಆಗುವುದಿಲ್ಲ. ಧನಿಕರಾಗುತ್ತಿದ್ದಂತೆ ಅದರ ಜೊತೆಗೆ ಅದಕ್ಕೆ ತಕ್ಕಂತೆ ಗರ್ವ, ದುರಹಂಕಾರದಂತಹ ಕೆಟ್ಟತನಗಳೂ ಹೆಮ್ಮರವಾಗಿ ಬೆಳೆದುಬಿಡುತ್ತವೆ.
ಭೋಗ-ವಿಲಾಸ: ಮನುಷ್ಯ ಭೋಗ ಮತ್ತು ವಿಲಾಸ ಜೀವನದಲ್ಲಿ ಸಿಲುಕಿದರೆ ತಲೆತಿರುಗುವಿಕೆ ಮೊದಲಿಟ್ಟುಕೊಳ್ಳುತ್ತದೆ. ಯಾರು ಭೋಗ-ವಿಲಾಸ ಜೀವನದಲ್ಲಿ ಮುಳುಗಿಬಿಡುತ್ತಾರೋ, ಯಾರು ತಮ್ಮ ಮೇಲೆ ನಿಯಂತ್ರಣ ಹೊಂದುವುದಿಲ್ವೋ ಅವರು ಮಾನಸಿಕ ಸಮತೋಲನ ಕಳೆದುಕೊಳ್ಳುತ್ತಾರೆ. ತತ್ಫಲವಾಗಿ ಶಾರೀರಿಕವಾಗಿಯೂ ಅವನತಿ ಹೊಂದುತ್ತಾರೆ.
ಸ್ತ್ರೀ ಸಂಗ: ಮಹಿಳೆಯರ ಸಹವಾಸದಿಂದಲೂ ಜೀವನದಲ್ಲಿ ದುಃಖ ಬರುವುದು ಸಹಜ. ಅದರಿಂದ ಮುಂದೆ ತೊಂದರೆಗೆ ಸಿಲುಕುವುದು ಖಚಿತ. ಅದು ಪ್ರೇಮದ ಫಲವಾಗಿರಬಹುದು ಅಥವಾ ಅನ್ಯ ಸಂಬಂಧಗಳಿಂದಾಗಿಯೂ ತೊಂದರೆ ಎದುರಿಸಬೇಕಾಗುತ್ತದೆ.
ರಾಜನ ಆಳ್ವಿಕೆ: ರಾಜನ ಆಳ್ವಿಕೆ ಎಂಬುದು ಸಮಚಿತ್ತದಿಂದ, ಸಮತೋಲನದಿಂದ ಕೂಡಿರಬೇಕು. ಅದು ನ್ಯಾಯಯುತವಾಗಿರಬೇಕು. ಅವರು ಯಾರದೋ ಒಬ್ಬರ ಮೇಲೆ ಕೃಪೆ ಬೀರುವಂತಿರಬಾರದು. ಇಂತಹ ರಾಜ, ನಾಯಕ ಜನರಿಗೆ ಪ್ರೀತಿ ಪಾತ್ರನಾಗಿರುತ್ತಾನೆ. ತಪ್ಪು ಯಾರೇ ಮಾಡಿರಲಿ, ತಾನು ಹೆಚ್ಚಾಗಿ ಪ್ರೀತಿಸುವ ವ್ಯಕ್ತಿಯೇ ತಪ್ಪು ಮಾಡಿದ್ದರೂ ಅವರಿಗೆ ಶಿಕ್ಷೆ ಕೊಡುವುದರಲ್ಲಿ ರಾಜ/ ನಾಯಕನಾದವನು ತಾರತಮ್ಯ ಮಾಡಬಾರದು, ಹಿಂಜರಿಯಬಾರದು.
ಕಾಲ, ಸಾವು: ಹುಟ್ಟಿದ ಮೇಲೆ ಸಾವು ನಿಶ್ಚಿತ. ಜೀವನದ ಅಸಲೀಯತ್ತು ಯಾವುದೆಂದರೆ ಅದು ಸಾವು ಎಂಬುದೇ ಆಗಿರುತ್ತದೆ. ಈ ಕಾಲನಿಂದ ಯಾರೂ ಇದುವರೆಗೂ ತಪ್ಪಿಸಿಕೊಂಡಿಲ್ಲ ಎಂಬುದನ್ನು ಅರಿತು ಜೀವನ ನಡೆಸಬೇಕು.
ಯಾಚನೆ, ಬೇಡುವ ದುರ್ಗುಣ: ಯಾಚನೆ ಅಥವಾ ಬೇಡುವುದು ಒಂದು ದುರ್ಗುಣವಾಗಿದೆ. ಅದರಿಂದ ಗೌರವ ಸಿಗುವುದಿಲ್ಲ. ವಸ್ತುಗಳು, ಸೇವೆಗಳು ಅಥವಾ ದುಡ್ಡನ್ನು ಯಾಚಿಸುವ ಗುಣ ಯಾರಲ್ಲಿ ಇರುತ್ತದೋ ಅಂತಹವರು ಎಂದು ಗೌರವ ಆದರಗಳಿಗೆ ಪಾತ್ರವಾಗುವುದಿಲ್ಲ.
ದುಷ್ಟರು: ಯಾವ ವ್ಯಕ್ತಿಗಳು ದುರ್ಗುಣಗಳನ್ನು ಹೊಂದಿರುತ್ತಾರೋ ಅವರು ಎಂದಿಗೂ ಬದಲಾಗುವುದಿಲ್ಲ. ಒಮ್ಮೆ ದುಷ್ಟರು ಮತ್ತು ದುರ್ಗುಣ ವ್ಯಕ್ತಿಗಳ ಸಹವಾಸ ಮಾಡಿದಿರೆಂದರೆ ಮತ್ತೆ ಅವರು ಒಳ್ಳೆಯ ಮನುಷ್ಯರಾಗಿ ಬದಲಾಗುವುದಿಲ್ಲ. ಒಂದು ವೇಳೆ ಬದಲಾದಂತೆ ನಟಿಸಿದರೂ ಮತ್ತೆ ಯಾವುದೋ ಮಾಯದಲ್ಲಿ ತಪ್ಪು ಕೆಲಸ ಮಾಡಿ, ಅದೇ ದುರ್ಮಾರ್ಗದಲ್ಲಿ ನಡೆಯುತ್ತಾರೆ. ಆದ್ದರಿಂದ ಆಚಾರ್ಯ ಚಾಣಕ್ಯ ಹೇಳಿದಂತೆ ಜೀವನದಲ್ಲಿ ಎಚ್ಚರಿಕೆಯಿಂದ ನಡೆಯಬೇಕು.
(chanakya niti in kannada acharya chanakya preaches 7 things to be free from troubles in life)