ಸನಾತನ ಧರ್ಮದಲ್ಲಿ ನುಸುಳಿವೆ ಕೆಲ ತಪ್ಪು ತಿಳಿವಳಿಕೆಗಳು, ಕಾಶಿಯಾತ್ರೆ-ಕನ್ಯಾಧಾನ-ವರದಕ್ಷಿಣೆ ಇದರ ಅರ್ಥ ವಿವರಣೆ ಇಲ್ಲಿದೆ

ಸನಾತನ ಧರ್ಮದಲ್ಲಿ ನುಸುಳಿವೆ ಕೆಲ ತಪ್ಪು ತಿಳಿವಳಿಕೆಗಳು, ಕಾಶಿಯಾತ್ರೆ-ಕನ್ಯಾಧಾನ-ವರದಕ್ಷಿಣೆ ಇದರ ಅರ್ಥ ವಿವರಣೆ ಇಲ್ಲಿದೆ
ಸನಾತನ ಧರ್ಮದಲ್ಲಿ ನುಸುಳಿವೆ ಕೆಲ ತಪ್ಪು ತಿಳಿವಳಿಕೆಗಳು, ಕಾಶಿಯಾತ್ರೆ-ಕನ್ಯಾಧಾನ-ವರದಕ್ಷಿಣೆ ಇದರ ಅರ್ಥ ವಿವರಣೆ ಇಲ್ಲಿದೆ

Wedding: ಇಂತಹ ವ್ಯಕ್ತಿಯನ್ನು ಗುರುತಿಸಿ ಆತನ ಪಾಂಡಿತ್ಯವನ್ನು ಗೌರವಿಸಿ ಎಷ್ಟೋ ಕನ್ಯಾಪಿತೃಗಳು ತಮ್ಮ ಮಗಳನ್ನು ಆತನಿಗೆ ವಿವಾಹ ಮಾಡಿಕೊಡಲು ಇಚ್ಛಿಸುತ್ತಿದ್ದರು. ಅವರು ಮಾಡುತ್ತಿದ್ದ ಪಾದಪೂಜೆ ಆತನ ಪಾಂಡಿತ್ಯಕ್ಕೇ ಹೊರತು, ಕಾಶಿಗೆ ಹೋಗದಂತೆ ತಡೆಯಲು ಅಲ್ಲ. ಇದು ಕಾಶಿಯಿಂದ ತೇರ್ಗಡೆ ಹೊಂದಿ ಬಂದವನ ಪೂಜೆ. ಹೋಗದಂತೆ ತಡೆಯಲು ಅಲ್ಲ.

TV9kannada Web Team

| Edited By: Ghanashyam D M | ಡಿ.ಎಂ.ಘನಶ್ಯಾಮ

Apr 29, 2022 | 9:35 AM

ನಮ್ಮ ಸನಾತನ ಧರ್ಮದಲ್ಲಿ ವಿವಾಹ (Wedding) ಎಂದ ಕೂಡಲೇ ಈ ಮೂರು ಪದಗಳು ಮುಂಚೂಣಿಗೆ ಬರುತ್ತವೆ. 1. ಕಾಶೀಯಾತ್ರೆ (Kashi Yatre), 2. ಕನ್ಯಾದಾನ (Kanya adhana) ಮತ್ತು 3. ವರದಕ್ಷಿಣೆ (Varadakshine). ಈ ಮೂರನ್ನೂ ಒಂದೊಂದಾಗಿ ವಿಶ್ಲೇಷಿಸುವುದಾದರೆ…

1. ಕಾಶಿಯಾತ್ರೆ: ಹೀಗೆಂದರೆ ವಿವಾಹಕ್ಕೆ ಸ್ವಲ್ಪ ಮುನ್ನ ಭಾವೀ ಮಾವ ತನ್ನ ಭಾವೀ ಅಳಿಯನಿಗೆ ಕಾಲು ತೊಳೆಯುವುದು ಹಾಗೂ ಕಾಶಿಗೆ ಹೋಗದಂತೆ ತಡೆದು ತನ್ನ ಮಗಳನ್ನು ಕೊಡುತ್ತೇನೆಂದು ಪ್ರಲೋಭಿಸುವುದು- ಇದು ನಾವು ತಿಳಿದುಕೊಂಡಿರುವುದು ಮತ್ತು ಆಚರಿಸುತ್ತಿರುವುದು. ಆದರೆ ಇದು ಖಂಡಿತ ಹಾಗಲ್ಲ. ಇದಕ್ಕೆ ಬೇರೆಯೇ ಅರ್ಥವಿದೆ!

ಪ್ರಾಚೀನ ಕಾಲದಲ್ಲಿ ಒಬ್ಬ ವಟುವಿಗೆ ಉಪನಯನ ಆದ ಕೂಡಲೇ ಆತನನ್ನು ವಿದ್ಯಾಭ್ಯಾಸಕ್ಕಾಗಿ ಗುರುಕುಲಗಳಿಗೆ ಕಳುಹಿಸುತ್ತಿದ್ದರು. ಅಲ್ಲಿ ಈ ಸುಮಾರು ಎಂಟು ವರ್ಷ ವಯಸ್ಸಿನ ವಟು (ಬ್ರಹ್ಮಚಾರಿ) ತನ್ನ ಸಾಮರ್ಥ್ಯಕ್ಕೆ ಅನುಗುಣವಾಗಿ ಎಂಟು/ಹತ್ತು/ಹನ್ನೆರಡು ವರ್ಷ ಕಾಲ ವಿದ್ಯಾಭ್ಯಾಸ ಮಾಡುತ್ತಿದ್ದ. ಅಂದರೆ ಅಷ್ಟೊತ್ತಿಗೆ ಈ ಬಾಲಕ ಹದಿನಾರು/ಹದಿನೆಂಟು/ಇಪ್ಪತ್ತು ವರ್ಷ ವಯಸ್ಸಿನ ಪ್ರೌಢನಾಗಿರುತ್ತಿದ್ದ. ವಿದ್ಯೆ ಪೂರೈಸಿದ ನಂತರ ಆತ ಎಷ್ಟು ಕಲಿತಿದ್ದಾನೆ ಎನ್ನುವುದು ಪರೀಕ್ಷೆಯಾಗಬೇಕಲ್ಲವೇ? ಆಗಿನ ಕಾಲದಲ್ಲಿ ಕಾಶಿ ನಗರದಲ್ಲಿ ಮಹಾ ಮಹಾ ಪಂಡಿತರಿದ್ದರು. ಈ ಶಿಷ್ಯನಿಗೆ ವಿದ್ಯೆ ಹೇಳಿಕೊಟ್ಟ ಗುರು ಈ ಪರೀಕ್ಷೆಯಲ್ಲಿ ತೇರ್ಗಡೆ ಹೊಂದುವ ಸಲುವಾಗಿ ಕಾಶಿಗೆ ಕಳುಹಿಸಿಕೊಡುತ್ತಿದ್ದರು.

ಅಲ್ಲಿಗೆ ಈ ಶಿಷ್ಯ ಬ್ರಹ್ಮಚಾರಿ ಹಂತವನ್ನು ದಾಟಿ, ಸ್ನಾತಕ ಎನಿಸಿಕೊಳ್ಳುತ್ತಿದ್ದ. ವಿದ್ಯಾಭ್ಯಾಸ ಪೂರೈಸಿದ ಸ್ನಾತಕ ಕೂಡಲೇ ತನ್ನ ‌ಮನೆಗೆ ಹೋಗದೆ ತನ್ನನ್ನು ತಾನೇ ಪರೀಕ್ಷೆಗೆ ಒಡ್ಡಿಕೊಳ್ಳಲು ಕಾಶಿಗೆ ತೆರಳುತ್ತಿದ್ದ. ಕಾಶಿಯಲ್ಲಿನ ಪಂಡಿತರು ಈ ಸ್ನಾತಕನನ್ನು ಎಲ್ಲ ವಿಧದಲ್ಲಿ ಪರೀಕ್ಷಿಸಿ ಅದರಲ್ಲಿ ತೇರ್ಗಡೆ ಹೊಂದಿದರೆ ಮಾತ್ರ ಮುಂದಿನ ಜೀವನವನ್ನು ನಡೆಸಲು, ಅಂದರೆ ಗೃಹಸ್ಥನಾಗಲು ಅರ್ಹ‌ ಎಂದು ತೀರ್ಮಾನಿಸುತ್ತಿದ್ದರು.

ಇಂತಹ ವ್ಯಕ್ತಿಯನ್ನು ಗುರುತಿಸಿ ಆತನ ಪಾಂಡಿತ್ಯವನ್ನು ಗೌರವಿಸಿ ಎಷ್ಟೋ ಕನ್ಯಾಪಿತೃಗಳು ತಮ್ಮ ಮಗಳನ್ನು ಆತನಿಗೆ ವಿವಾಹ ಮಾಡಿಕೊಡಲು ಇಚ್ಛಿಸುತ್ತಿದ್ದರು. ಅವರು ಮಾಡುತ್ತಿದ್ದ ಪಾದಪೂಜೆ ಆತನ ಪಾಂಡಿತ್ಯಕ್ಕೇ ಹೊರತು, ಕಾಶಿಗೆ ಹೋಗದಂತೆ ತಡೆಯಲು ಅಲ್ಲ. ಇದು ಕಾಶಿಯಿಂದ ತೇರ್ಗಡೆ ಹೊಂದಿ ಬಂದವನ ಪೂಜೆ. ಹೋಗದಂತೆ ತಡೆಯಲು ಅಲ್ಲ. ಆದರೆ ಈಗಿನ ನಂಬಿಕೆ, ಆಚರಣೆ ಏನಾಗಿದೆ ನೋಡಿ. ಅರ್ಥವಿಲ್ಲದ ಆಚರಣೆಯಾಗಿದೆ ಅಲ್ಲವೇ!

2. ಕನ್ಯಾದಾನ= ಕನ್ಯಾ ಆದಾನ ಖಂಡಿತವಾಗಿ ಇಲ್ಲಿ ಕನ್ಯಾದಾನದ ಪ್ರಮೇಯವೇ ಇಲ್ಲ. ದಾನ ಮಾಡಲು ಯಾವುದೇ ‌ಕನ್ಯೆ‌ ಒಂದು ವಸ್ತು, ಜಾಗ ಇತ್ಯಾದಿಗಳಲ್ಲ. ನಮ್ಮ ಜನರು ಮೌಢ್ಯದಿಂದ ಇದನ್ನು ಕನ್ಯಾದಾನ ಮಾಡಿಬಿಟ್ಟರು. ಇದಕ್ಕೆ ಒಂದು ಪ್ರಸಂಗವನ್ನು ಪ್ರಸ್ತಾಪಿಸುವುದಾದರೆ… ಅದೇ ಸೀತಾ ಕಲ್ಯಾಣ ಪ್ರಸಂಗ. (ಕೆಲವರು ತಪ್ಪು ತಪ್ಪಾಗಿ ಇದನ್ನು ಸೀತಾ ಸ್ವಯಂವರ ಎಂದೂ ಬಳಸುತ್ತಾರೆ. ಸೀತೆಗೆ ಸ್ವಯಂವರ ಎಂದಿಗೂ ನಡೆಯಲಿಲ್ಲ, ಇಂದುಮತಿ, ದಮಯಂತಿಯರ ಹಾಗೆ. ಸೀತೆ ಮತ್ತು ದ್ರೌಪದಿಯರದು ವೀರ್ಯಶುಲ್ಕ (Viryashulk) ಆಗಿತ್ತು.

ಜನಕ ಮಹಾರಾಜ ಸೀತಾ-ರಾಮರ ವಿವಾಹಕ್ಕೆ ಮುನ್ನ ಶ್ರೀರಾಮನೊಂದಿಗೆ ಹೀಗೆ ಹೇಳುತ್ತಾನೆ: ಇಯಂ ಸೀತಾ ಮಮ ಸುತಾ, ಸಹಧರ್ಮಚರೀ ತವ | ಪ್ರತೀಚ್ಛ ಚೈನಾಂ ಭದ್ರಂ ತೇ, ಪಾಣಿಂ ಗೃಹ್ಣೀಷ್ವ ಪಾಣಿನಾ ||

ಪತಿವ್ರತಾ ಮಹಾಭಾಗ ಛಾಯೇವಾನುಗತಾ ಸದಾ | ಇತ್ಯುಕ್ತ್ವಾ ಪ್ರಾಕ್ಷಿಪದ್ರಾಜಾ, ಮಂತ್ರಪೂತಂ ಜಲಂ ತದಾ ||

ಈ ಎರಡು ಶ್ಲೋಕಗಳ ಅರ್ಥ ಇಲ್ಲಿದೆ: ನನ್ನ ಮಗಳು ಸೀತೆ ನಿನಗೆ ಸಹ ಧರ್ಮಚಾರಿಣಿಯಾಗಿರುತ್ತಾಳೆ. ಇವಳನ್ನು ಸ್ವೀಕರಿಸು.‌ ನಿನಗೆ ಶುಭವಾಗಲಿ. ಈಕೆಯ ಪಾಣಿಗ್ರಹಣ ಮಾಡು. ಈ ನನ್ನ ಪುತ್ರಿಯು ಪತಿವ್ರತೆಯೂ, ಭಾಗ್ಯಶಾಲಿಯೂ ಆಗಿ ಅನುಗಾಲವೂ ನಿನ್ನನ್ನು ನೆರಳಿನಂತೆ ಅನುಸರಿಸುವಳು.

ನಾವು ಯಾವುದೇ ದಾನ ಕೊಡುವಾಗ/ಹೋಮ ಮಾಡುವಾಗ ಈ ರೀತಿ ಹೇಳಿ ದಾನ/ಹೋಮ ಮಾಡುತ್ತೇವೆ. ದದಾಮಿ, ನ ಮಮ ಅಥವಾ ಸ್ವಾಹಾಃ, ನ ಮಮ

ಇದರ ಅರ್ಥ= ಇದನ್ನು ನಾನು ದಾನ ಮಾಡುತ್ತಿದ್ದೇನೆ. ಇನ್ನು ಮುಂದೆ ಇದು ನನ್ನದಲ್ಲ. ಅಥವಾ ಇದನ್ನು ಆಹುತಿ ನೀಡುತ್ತಿದ್ದೇನೆ. ಇನ್ನು ಮುಂದೆ ಇದು ನನ್ನದಲ್ಲ.

ಗಮನಿಸಿ. ಈ ಮೇಲಿನ ಶ್ಲೋಕಗಳಲ್ಲಿ ದದಾಮಿ, ನ ಮಮ ಎಂಬ ಪದ ಪ್ರಯೋಗವಾಗಿದೆಯೇ, ಖಂಡಿತ ಇಲ್ಲ. ಅಂದರೆ ಜನಕ ಮಹಾರಾಜ ಶ್ರೀರಾಮನಿಗೆ ಕನ್ಯಾದಾನ ಮಾಡಲಿಲ್ಲ ಎಂದೇ ಅರ್ಥ.

ಮತ್ತೆ ಈ ಕನ್ಯಾದಾನ ಎನ್ನುವ ಪದ ಹಾಗೂ ಪದ್ಧತಿ ಹೇಗೆ ಚಾಲ್ತಿಗೆ ಬಂತು? ವಿವರ ಇಲ್ಲಿದೆ. ಇದು ಕನ್ಯಾದಾನವಲ್ಲ. ಸರಿಯಾದ ಪ್ರಯೋಗ ಕನ್ಯಾ + ಆಧಾನ = ಕನ್ಯಾಧಾನ. ಈ ಕನ್ಯಾಧಾನ (kanya adhana) ಪದ ಕಾಲಾನುಕ್ರಮದಲ್ಲಿ ಅಪಭ್ರಂಶ ಹೊಂದಿ ಕನ್ಯಾದಾನ ಆಗಿರುತ್ತದೆ. ಹಾಗೆಯೇ ಆಚರಣೆಗಳೂ ಸಹ. ಹಾಗಾದರೆ ಅಂದರೆ ಕನ್ಯಾಧಾನ ಎಂದರೇನು? ಆಧಾನ ಎಂದರೆ ನ್ಯಾಸವಾಗಿಡುವುದು ಎಂದು. ದಾನಕ್ಕೂ, ಆಧಾನಕ್ಕೂ ಇದೇ ವ್ಯತ್ಯಾಸ. ಒಮ್ಮೆ ದಾನ ಕೊಟ್ಟರೆ ಮುಗಿಯಿತು. ಅದು ಎಂದಿಗೂ ನನ್ನದಲ್ಲ. ನ್ಯಾಸ- ಹಾಗಲ್ಲ. ನಾನು ನನ್ನ ಮಗಳನ್ನು ನ್ಯಾಸ ಮಾಡಿದರೂ ಆಕೆ ಎಂದೆಂದಿಗೂ ನನ್ನ ಮಗಳೇ ಆಗಿರುತ್ತಾಳೆ. ನಮ್ಮಿಬ್ಬರ ಈ ಸಂಬಂಧವನ್ನು ಯಾರಿಂದಲೂ ಕಸಿದುಕೊಳ್ಳಲಾಗದು.

ಇದುವರೆಗೆ ನನ್ನಿಂದ ರಕ್ಷಿತಳಾಗಿದ್ದ ನನ್ನ ಮಗಳು ಇನ್ನು ಮುಂದೆ ನಿನ್ನ ರಕ್ಷಣೆಗೆ ಒಳಪಡುವಳು. ಈಕೆಯನ್ನು ಸರಿಯಾಗಿ ರಕ್ಷಿಸಿಕೊಂಡು ಹೋಗಬೇಕು ಎನ್ನುವ ಎಚ್ಚರಿಕೆಯೂ ಇದೆ. ಯಾವುದೇ ದಾನದಲ್ಲಿ ಹೀಗಾಗುವುದಿಲ್ಲ. ಒಮ್ಮೆ ದಾನ ಕೊಟ್ಟರೆ ಮುಗಿಯಿತು. ದಾನ ಪಡೆದವನು ಅದನ್ನು ಹೇಗೆ ಬೇಕಾದರೂ ಬಳಸಬಹುದು. ರಾಮಾಯಣದ ಮೇಲಿನ ಎರಡು ಶ್ಲೋಕಗಳೂ ಇದೇ ಅರ್ಥವನ್ನು ಧ್ವನಿಸುತ್ತದೆಯಲ್ಲವೇ!?

ಸನಾತನ ಧರ್ಮದ ವಿವಾಹ ಆಚರಣೆಯಲ್ಲಿ ಮಗಳನ್ನು ಧಾರೆಯೆರೆದು ಕೊಟ್ಟ ಕನ್ಯಾ ಪಿತೃ ಅಳಿಯನಿಂದ ತನ್ನ ಮಗಳನ್ನು ಕುರಿತು ಕೆಲವೊಂದು ಭರವಸೆಗಳನ್ನು ಅಪೇಕ್ಷಿಸುತ್ತಾನೆ. ಅವುಗಳನ್ನು ವಿವಾಹ ಸಮಯದಲ್ಲಿ ಮಂತ್ರಪೂರ್ವಕ ಕೋರಲಾಗುತ್ತದೆ. ಕೆಲ ಮಂತ್ರಗಳ ಭಾವಗಳನ್ನು ಇಲ್ಲಿ ಉಲ್ಲೇಖಿಸುವುದಾದರೆ.. ಇವಳನ್ನು ನೀನು ಯಾವ ರೀತಿ ಪೋಷಿಸಬೇಕು, ಈವರೆಗೆ ನಾನು ಹೇಗೆ ಪೋಷಿಸಿದ್ದೇನೆ, ಇವಳ ಅಪೇಕ್ಷೆಗಳೇನು, ಯಾವುದರಲ್ಲಿ ಆಸಕ್ತಿ, ಅಭಿರುಚಿ ಇದೆ, ಇವಳ ಅಪೇಕ್ಷೆಗಳೇನಿವೆ, ಇವಳಿಗೆ ಅನುರೂಪವಾಗಿ ನೀನು ಯಾವ ರೀತಿ ಸಹಕರಿಸುತ್ತೀಯೆ, ಇವಳು ಈಗ ನಿನ್ನ ಪತ್ನಿಯೇ ಆಗಿದ್ದರೂ, ನನ್ನ ಮಗಳೂ ಆಗಿದ್ದಾಳೆ- ಇವೆಲ್ಲವನ್ನೂ ಕನ್ಯೆಯ ತಂದೆಯು ಅಳಿಯನಿಗೆ ತಿಳಿಸುತ್ತಾನೆ ಹಾಗೂ ಆತನಿಂದ ಭರವಸೆ ಪಡೆಯುತ್ತಾನೆ. ಆದರೆ ತಿಳಿಯಿರಿ ದಾನದಲ್ಲಿ ಇವು ‌ಯಾವುವೂ ಉದ್ಭವಿಸುವುದಿಲ್ಲ ಅಲ್ಲವಾ.

3. ವರದಕ್ಷಿಣೆ: ಇದನ್ನೂ ಪರಿಶೀಲಿಸೋಣ. ಪ್ರಾಚೀನ ಕಾಲದಲ್ಲಿ ಶಾಸ್ತ್ರ ಸಮ್ಮತವಲ್ಲದ ಕನ್ಯಾಶುಲ್ಕ ಪ್ರಚಲಿತವಿತ್ತೇ ಹೊರತು ವರದಕ್ಷಿಣೆ ಎನ್ನುವುದು ಇರಲಿಲ್ಲ. ಅಲ್ಲಿಗೆ ವರದಕ್ಷಿಣೆ ಎನ್ನುವುದೂ ಅಪಭ್ರಂಶವೇ. ಇದರ ನಿಜ‌ ಸ್ವರೂಪ ವರಹ ದಕ್ಷಿಣೆ. ವರಹ ಎಂದರೆ ಹಿಂದಿನ ಕಾಲದಲ್ಲಿ ನಾಲ್ಕೂ ಕಾಲು ರೂಪಾಯಿ. ಸಾಲಂಕೃತ ಕನ್ಯೆಯನ್ನು ಒಂದು ವರಹ ದಕ್ಷಿಣೆಯೊಂದಿಗೆ ಧಾರೆ ಎರೆದುಕೊಡಲಾಗುತ್ತಿತ್ತು. ಈಗಿನ ಕಾಲದಲ್ಲಿ ನಾವು ತಾಂಬೂಲದೊಂದಿಗೆ ದಕ್ಷಿಣೆ ಇಡುತ್ತೇವಲ್ಲಾ ಹಾಗೆ. ಒಂದು ವರಹಕ್ಕಿಂತಲೂ ಹೆಚ್ಚು ದಕ್ಷಿಣೆ ನೀಡುವುದು ನಿಷಿದ್ಧವಾಗಿತ್ತು.

ಒಂದು ವರಹವೇ ಏಕೆ? ಎಂಬ ಸಂದೇಹ ಉದ್ಭವವಾದರೆ ಅದಕ್ಕೆ ಉತ್ತರ ಹೀಗಿದೆ… ಪ್ರಾಚೀನ ಕಾಲದಲ್ಲಿ ಬಳಸುತ್ತಿದ್ದ ಹಣದ ಮಾನ ಅಥವಾ ಅಳತೆ ವರಹ. ಇದಕ್ಕೆ ವರಹ ಎಂದು ಏಕೆ ಕರೆಯುತ್ತಿದ್ದರು? ಪರಮಾತ್ಮ ನಾರಾಯಣನು ಸಮುದ್ರದಲ್ಲಿ ಮುಳುಗಿಸಲಾಗಿದ್ದ ಭೂಮಿಯನ್ನು ವರಾಹಾವತಾರ ಎತ್ತಿ ಉದ್ಧರಿಸುತ್ತಾನೆ. ನಾನು ಕೊಡುತ್ತಿರುವ ಒಂದು ವರಹ ದಕ್ಷಿಣೆ ವರಾಹಸ್ವಾಮಿ ಉದ್ಧರಿಸಿದ ಇಡೀ ಭೂಮಂಡಲಕ್ಕೆ ಸಮಾನ ‌ಎನ್ನುವ ಭಾವನೆ (ನಂಬಿಕೆ) ಇದರಲ್ಲಿದೆ. ಭೂಮಂಡಲಕ್ಕಿಂತಲೂ ಹೆಚ್ಚು ಬೆಲೆಯುಳ್ಳ ವಸ್ತು ಯಾವುದೂ ಇಲ್ಲವಲ್ಲಾ, ಅದಕ್ಕೆ. ನಾನು ನೀಡುವ ದಕ್ಷಿಣೆಯಷ್ಷೇ ನನ್ನದಲ್ಲ(ನ ಮಮ). ಆದರೆ ಮಗಳು ಮಾತ್ರ ಎಂದೆಂದಿಗೂ ನನ್ನ ಮಗಳೇ ಆಗಿರುತ್ತಾಳೆ. ಪ್ರಾಚೀನ ಕಾಲದಲ್ಲಷ್ಟೇ ಅಲ್ಲ.

ಇತಿಹಾಸದಲ್ಲಿಯೂ ಅನೇಕ ರಾಜರುಗಳು ತಮ್ಮ ನಾಣ್ಯಗಳನ್ನು ‘ವರಹ’ವೆಂದೇ ಟಂಕಿಸುತ್ತಿದ್ದರು. ವಿಜಯನಗರ ಅರಸರ ಕಾಲದ ನಾಣ್ಯಗಳಲ್ಲಿ ವರಾಹ (ಹಂದಿಯ) ಚಿತ್ರವಿರುತ್ತಿತ್ತು. ಈ ವರಹ ದಕ್ಷಿಣೆಯೇ ಕಾಲಾನುಕ್ರಮದಲ್ಲಿ ಶಾಸ್ತ್ರ ಸಮ್ಮತವಲ್ಲದ ವರದಕ್ಷಿಣೆಯಾಗಿ ಪರಿವರ್ತನೆಯಾಗಿದೆ!

ಈ ವಿಚಾರವನ್ನು ಸಮರ್ಥಿಸಲು ಇನ್ನೂ ಒಂದು ವಿಷಯ ಪ್ರಸ್ತಾಪಿಸಬಹುದು. ಈಗಿನ ಕಾಲದಲ್ಲಿ ಮದುವೆಯಾದ ಕೂಡಲೇ ಹೆಣ್ಣು ತಾನು ಜನಿಸಿದ ಕುಲದ ಹೆಸರನ್ನು ತ್ಯಜಿಸಿ, ತನ್ನ ಹೆಸರಿನ ಮುಂದೆ ಗಂಡನ ಹೆಸರನ್ನು ಸೇರಿಸಿಕೊಳ್ಳುವುದು ಒಂದು ಪದ್ಧತಿಯಾಗಿದೆ. ಇದು ಶುದ್ಧಾಂಗ ತಪ್ಪು. ಇದು ಕೇವಲ ಪಾಶ್ಚಿಮಾತ್ಯರ ಅಂಧಾನುಕರಣೆ!

ಇದಕ್ಕೆ ಉದಾಹರಣೆ. ಸೀತೆ ಜಾನಕಿ ಅಥವಾ ಮೈಥಿಲಿ ಎಂದು ಕರೆಸಿಕೊಂಡಳೇ ವಿನಾ ಎಂದೂ ‘ರಾಮಿ’ ಆಗಲಿಲ್ಲ. ಸೀತಾರಾಮ ಎಂಬ ಪದ ಬಳಕೆಯಲ್ಲಿದೆ, ಇದು ರಾಮನಿಗೆ ಅನ್ವಯವಾಗುತ್ತದೆಯೇ ಹೊರತು ಸೀತೆಗಲ್ಲ. ಕೃಷ್ಣೆ- ದ್ರೌಪದಿ ಅಥವಾ ಪಾಂಚಾಲಿ ಎನ್ನಿಸಿಕೊಂಡಳೇ ಹೊರತು ಪಾಂಡವಿ ಆಗಲಿಲ್ಲ. ಪೃಥೆಯು ಕುಂತಿಯಾದಳೇ ವಿನಾ ಪಾಂಡವಿ ಆಗಲಿಲ್ಲ. ಗಾಂಧಾರಿ ಗಾಂಧಾರಿಯಾಗಿಯೇ ಉಳಿದಳು. ಧೃತರಾಷ್ಟ್ರನ ಹೆಸರನ್ನು ತನ್ನ ಹೆಸರಿನ ಮುಂದೆ ತರಲಿಲ್ಲ. ರುಕ್ಮಿಣಿ ಎಂದೂ ತನ್ನ ಹೆಸರಿನ ಮುಂದೆ ಕೃಷ್ಣನ ಹೆಸರನ್ನು ಸೇರಿಸಿಕೊಳ್ಳಲಿಲ್ಲ. ತನ್ನ ಹೆಸರಿನ ಮುಂದೆ ಗಂಡನ ಹೆಸರನ್ನು ಸೇರಿಸಿಕೊಳ್ಳುವ ಪದ್ಧತಿ ನಮ್ಮದಲ್ಲ, ಇದೆಲ್ಲಾ ತಿಳಿದುಕೊಳ್ಳಿ. (ಬರಹ – ವಾಟ್ಸಪ್ ಸಂದೇಶ)

Follow us on

Most Read Stories

Click on your DTH Provider to Add TV9 Kannada