ಪ್ರೇತ ಎಂದರೇನು? ಗರುಡ ಪುರಾಣದಲ್ಲಿ ಹೇಳುವ ಪ್ರೇತಘಟ ದಾನದ ಫಲವೇನು? ಯಾವಾಗ ಈ ದಾನವನ್ನು ಮಾಡಬೇಕು?
ಪ್ರೇತ ಎಂದಾಕ್ಷಣ ನಮ್ಮ ಮನದಲ್ಲಿ ಒಂದು ಭಯಾನಕ ರೂಪವು ಮೂಡಿಬರುತ್ತದೆ ಅಲ್ಲವೇ? ಸ್ವಾಭಾವಿಕವಾಗಿ ನಮ್ಮ ಜೀವನದಲ್ಲಿ ಹಲವಾರು ಬಾರಿ ಪ್ರೇತಬಾಧೆ ಎಂಬಪದವನ್ನು ಕೇಳಿಯೂ ಇರುತ್ತೀರಿ. ಇದರಿಂದ ಹಲವಾರು ಜನರು ಸಮಸ್ಯೆಯನ್ನೂ ಅನುಭವಿಸಿರಬಹುದು.
ಪ್ರೇತ ಎಂದಾಕ್ಷಣ ನಮ್ಮ ಮನದಲ್ಲಿ ಒಂದು ಭಯಾನಕ ರೂಪವು ಮೂಡಿಬರುತ್ತದೆ ಅಲ್ಲವೇ? ಸ್ವಾಭಾವಿಕವಾಗಿ ನಮ್ಮ ಜೀವನದಲ್ಲಿ ಹಲವಾರು ಬಾರಿ ಪ್ರೇತಬಾಧೆ ಎಂಬಪದವನ್ನು ಕೇಳಿಯೂ ಇರುತ್ತೀರಿ. ಇದರಿಂದ ಹಲವಾರು ಜನರು ಸಮಸ್ಯೆಯನ್ನೂ ಅನುಭವಿಸಿರಬಹುದು. ಹಾಗಾದರೆ ಈ ಪ್ರೇತವೆಂದರೇನು? ಏನಿದರ ಸ್ವರೂಪ? ಇದರಿಂದ ತೊಂದರೆ ಇದೆಯಾ? ಎಂಬ ಸಂದೇಹಗಳು ಆಸ್ತಿಕರಲ್ಲಿ ಮೂಡುತ್ತದೆ. ಇನ್ನು ನಾಸ್ತಿಕರ ಮನದಲ್ಲಿ ಇದೆಲ್ಲ ಸುಳ್ಳು , ಈ ರೀತಿಯಾಗಿ ಇರಲು ಸಾಧ್ಯವೇ ಇಲ್ಲ ಎಂಬ ಮನೋಭೂಮಿಕೆ ಇರುತ್ತದೆ. ಪ್ರೇತವೆಂದರೆ ಪ್ರ ಇತಃ ಎಂದು ಪದವಿಭಾಗ. ಪ್ರ ಎಂದರೆ ಪ್ರ ಪ್ರೇರಣೆ ಎಂದರ್ಥ. ಅಂದರೆ ಕಳುಹಿಸಲ್ಪಟ್ಟದ್ದು ಎಂದು ಶಬ್ದಾರ್ಥ. ಇತಃ ಎಂದರೆ ಇಲ್ಲಿಂದ ಎಂದು ಅರ್ಥ. ಹಾಗಾದರೆ ಪ್ರೇತ ಶಬ್ದದ ಅರ್ಥ ಇಲ್ಲಿಂದ ಕಳುಹಿಸಲ್ಪಟ್ಟದ್ದು ಎಂದು. ಒಟ್ಟು ಅರ್ಥ ಇಲ್ಲಿಂದ ಕಳುಹಿಸಲ್ಪಟ್ಟ ನಮ್ಮ ಪಿತೃಗಳು ಎಂದು.
ಸ್ವರೂಪ ಹೇಗಿದೆ ಎಂದರೆ ಗರುಡ ಪುರಾಣದಲ್ಲಿ ಪ್ರಕಾರ ಮೂರುಪಿಂಡಗಳ ಅಳತೆ ಎಂದು ಹೇಳಲ್ಪಟ್ಟಿದೆ. ಸಾಮಾನ್ಯ ಒಂದು ಮೊಳ ಉದ್ದದ ಒಂದು ಪುಂಜದ ರೀತಿಯ ಸ್ವರೂಪ ಪ್ರೇತದ್ದು. ಇದರಿಂದ ತೊಂದರೆ ಇದೆಯೇ? ಎಂಬುದು ಸಂದೇಹ. ಈಗ ನಾವು ಒಂದು ಲೌಕಿಕ ಉದಾಹರಣೆಯನ್ನು ಗಮನಿಸೋಣ. ಅಂಚೆಯಲ್ಲಿ (ಪೋಸ್ಟ್ ನಲ್ಲಿ) ಒಂದು ಪತ್ರವನ್ನು ಸರಿಯಾಗಿ ವಿಳಾಸ ಬರೆಯದೇ ಕಳುಹಿಸುತ್ತೇವೆ. ಮತ್ತೊಂದು ಪತ್ರವನ್ನು ಸರಿಯಾದ ವಿಳಾಸ ಬರೆದು ಕಳುಹಿಸುತ್ತೇವೆ. ಈಗ ಅವರೆಡೂ ಪತ್ರ ಕಛೇರಿಯಿಂದ ಹೊರಡುತ್ತವೆ. ಅದರಲ್ಲೊಂದು ತನ್ನ ಗಮ್ಯಸ್ಥಾನಕ್ಕೆ ತಲುಪುತ್ತದೆ. ಮತ್ತೊಂದು ತನ್ನ ಗಮ್ಯಕ್ಕೆ ತಲುಪುವುದಿಲ್ಲ. ಪತ್ರ ತಲುಪದೇ ಇರುವ ಕಾರಣದಿಂದ ತೊಂದರೆ ಆಗುತ್ತದೆ ಅಲ್ಲವೇ? ಈಗ ಉದಾಹರಣೆಯಿಂದ ನಿಧಾನವಾಗಿ ಪುರಾಣದ ವಿಷಯಕ್ಕೆ ಬರೋಣ. ಇಲ್ಲಿ ಮರಣ ಹೊಂದಲ್ಪಟ್ಟ ನಮ್ಮ ಪಿತೃಗಳ ಕಾರ್ಯವನ್ನು ಸರಿಯಾಗಿ ಮಾಡಿ, ವಿಧಿಯ ಪ್ರಕಾರ ವ್ರತದಿಂದ ಇದ್ದರೆ ಆ ನಮ್ಮ ಹಿರಿಯರ ಜೀವಾತ್ಮ ಅವರ ಕರ್ಮಕ್ಕನುಗುಣವಾಗಿ ಪರಂಧಾಮವನ್ನು ಹೊಂದುತ್ತದೆ. ಅದೇ ನಾವು ಸರಿಯಾದ ರೀತಿಯಲ್ಲಿ ಕಾರ್ಯವನ್ನು ಮಾಡದೇ ಇದ್ದ ಪಕ್ಷದಲ್ಲಿ ಪರಂಧಾಮ ಸೇರಲಾಗದೆ ಪತಿತವಾಗುತ್ತದೆ. ಪತಿತವಾದ ಜೀವಾತ್ಮ ತನ್ನ ಕಾರ್ಯವನ್ನು ಮಾಡಿರಿ ಎಂಬ ಕಾರಣದಿಂದ ತಮ್ಮ ವಂಶಸ್ಥರನ್ನು ಉಪದ್ರವಿಸುವುದು ಸಹಜ.
ಇದನ್ನು ಓದಿ:Spiritual: ಪಿತೃಪಕ್ಷದಲ್ಲಿ ಸಂತಾನವಾದರೇ ದೋಷವಿದೆಯೇ ? ಪಿತೃಪಕ್ಷದಲ್ಲಿ ಸ್ವಪ್ನದಲ್ಲಿ ಪಿತೃ ದರ್ಶನವಾದರೆ ಏನು ಫಲ ?
ಈಗ ಹೇಳಿ ಪ್ರೇತವೆಂದರೆ ಭಯ ಬೇಕೇ ಎಂದು? ಮರಣ ಹೊಂದುವುದು ಕೇವಲ ದೇಹ ಮಾತ್ರ. ಅದರಲ್ಲಿರುವ ಜೀವಾತ್ಮ ಇನ್ನೊಂಡೆಗೆ ಸೇರುವಲ್ಲಿಯ ತನಕದ ಸ್ಥಿತಿಯೇ ಪ್ರೇತ. ಅದರ ವಿಮೋಚನೆ ಸರಿಯಾಗಿ ಆಗಲಿಲ್ಲವೆಂದರೆ ಅದರಿಂದಾಗುವ ಕಿರಿ ಕಿರಿ ಏನಿದೆ; ಅದುವೇ ಬಾಧೆಯ ರೀತಿ ಕಾಡುತ್ತದೆ. ಆದ್ದರಿಂದ ಹಿರಿಯರ ಕಾರ್ಯವನ್ನು ಶ್ರದ್ಧೆಯಿಂದ ಕ್ರಮವಾಗಿ ವ್ರತನಿಷ್ಠನಾಗಿ ಮಾಡಬೇಕು ಎಂದು ಶಾಸ್ತ್ರ ಹೇಳುವುದು. ಆ ಕಾರಣದಿಂದಲೇ ಪಿತೃಕಾರ್ಯಕ್ಕೆ ಶ್ರಾದ್ಧ ಎನ್ನುವುದು. ಇನ್ನು ಪ್ರೇತಘಟವೆಂದರೇನು ಎಂದು ನೋಡೋಣ ಘಟಂ ಪ್ರೇತಸ್ಯ ನಿರ್ವಪೇತ್ ಎಂದು ಗರುಡ ಪುರಾಣದಲ್ಲಿ ಹೇಳಿದೆ . ಅಂದರೆ ಪ್ರೇತದ ಕುರಿತಾಗಿ ಒಂದು ಘಟದ ಸ್ಥಾಪನೆಯನ್ನು ಮಾಡಬೇಕು ಎಂದರ್ಥ. ಅದರ ಸ್ವರೂಪ ಮತ್ತು ಯಾವ ರೀತಿ ಕೊಡಬೇಕು ಎಂಬುದರ ಕುರಿತಾಗಿ ಪುರಾಣವು ಈರೀತಿಯಾಗಿ ಹೇಳುತ್ತದೆ. –
ಘಟಂ ಪ್ರೇತ ವಿಮುಕ್ತಿಕಮ್ ಪ್ರೇತದ ಪ್ರೇತತ್ವ ಕಳಚಿ ಮುಕ್ತಿಯೆಂಬ ಪರಂಧಾಮವನ್ನು ಸೇರುವ ಸಲುವಾಗಿ ಈ ಘಟ ಸ್ಥಾಪನೆ ಮಾಡಬೇಕು ಮತ್ತು ಆಚಾರವಂತ ಧರ್ಮಿಷ್ಠನಿಗೆ ಇದರ ದಾನ ಮಾಡಬೇಕು. ಇದಕ್ಕೆ ಕ್ರಮವಾಗಿ ಬ್ರಹ್ಮನನ್ನು ಘಟದ ಮೂಲಕ್ಕೆ ಆವಾಹನೆ ಮಾಡಿ ಪೂಜಿಸಬೇಕು, ಮಧ್ಯ ಭಾಗಕ್ಕೆ ರುದ್ರನನ್ನು, ಮುಖ ಭಾಗಕ್ಕೆ ಅಥವಾ ಮೇಲ್ಭಾಗಕ್ಕೆ ವಿಷ್ಣುವನ್ನು ಅವಾಹನೆ ಮಾಡಿ ಪೂಜಿಸಬೇಕು. ಪೂರ್ವಾದಿ ದಿಕ್ಕುಗಳಲ್ಲಿ ಇಂದ್ರಾದಿ ದಿಕ್ಪಾಲರನ್ನು ಆವಾಹಿಸಿ ಪೂಜಿಸುವುದು. ಈ ಕಲಶವು ಚಿನ್ನ / ಬೆಳ್ಳಿ / ತಾಮ್ರ ಯಾವುದಾದರೂ ಒಂದರಿಂದ ಮಾಡಲ್ಪಡಬೇಕು. ಉತ್ತಮವಾದಂತೆ ಸಾಫಲ್ಯ ಅಧಿಕ. ಇದರಲ್ಲಿ ಹಾಲು ಮತ್ತು ತುಪ್ಪವನ್ನಿಟ್ಟು ಪೂಜಿಸಿ ದಾನ ಮಾಡಬೇಕು. ಈ ಪ್ರೇತಘಟದ ದಾನವು ಎಲ್ಲಾ ಅಶುಭಗಳನ್ನು ನಾಶಮಾಡುವ ಶಕ್ತಿಯನ್ನು ಹೊಂದಿದೆ. ಈ ದಾನವನ್ನು ಮರಣಪಟ್ಟ ಹತ್ತನೇ ದಿನ ಅಥವಾ ಹನ್ನೊಂದನೇಯ ದಿನ ಸತ್ಪಾತ್ರರಿಗೆ ನೀಡಬೇಕು. ಇಂದರಿಂದ ನಾವು ಕಳುಹಿಸುವ ನಮ್ಮ ಹಿರಿಯ ಜೀವಾತ್ಮಕ್ಕೆ ಮತ್ತು ಇಲ್ಲಿರುವ ನಮಗೆ ಕ್ಷೇಮ ಮತ್ತು ಮಂಗಲವಾಗುತ್ತದೆ.
ಡಾ.ಕೇಶವ ಕಿರಣ ಬಿ
ಧಾರ್ಮಿಕ ಚಿಂತಕರು ಮತ್ತು ಸಲಹೆಗಾರರು
ಅಧ್ಯಾತ್ಮಕ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 10:38 am, Mon, 23 January 23