ಗಂಡಾಂತ ದೋಷ ಎಂದರೇನು ? ಇದರ ಸ್ವರೂಪವೇನು? ಈ ಕಾಲದಲ್ಲಿ ಮಾಡಲ್ಪಟ್ಟ ಕರ್ಮ ಸಫಲವಾಗುವುದೇ?
ಗಂಡಾಂತ ಎಂದರೇನು ಎಂದು ತಿಳಿದುಕೊಳ್ಳೋಣ ಕೆಲವು ರಾಶಿಗಳ ಕೆಲವು ನಕ್ಷತ್ರಗಳ ಕೆಲವು ತಿಥಿಗಳ ಕೊನೆಯ ಭಾಗವು ಶುಭಕರ್ಮಗಳಿಗೆ ಮತ್ತು ಹೊಸಕಾರ್ಯಗಳ ಆರಂಭಕ್ಕೆ ಒಳ್ಳೆಯದಲ್ಲ ಮತ್ತು ಈ ಸಮಯದಲ್ಲಿ ಶಿಶುವಿನ ಜನನವಾದರೆ ಶಾಂತಿಯನ್ನು ಮಾಡಿಕೊಳ್ಳುವುದು ಉತ್ತಮ.
ಅದೆಷ್ಟೋ ಸಲ ಕಾರ್ಯವಾಯಿತು ಎನ್ನುವಾಗ ಮಾಡುತ್ತಿರುವ ಕಾರ್ಯ ಕೈ ತಪ್ಪುತ್ತದೆ ಅಲ್ಲವೇ ಅದಕ್ಕೇ ಈ ಗಂಡಾಂತ ದೋಷವೇ ಕಾರಣ” ಸ್ವಾಭಾವಿಕವಾಗಿ ದೋಷ ಎಂದಾಕ್ಷಣ ನಮ್ಮ ಮನಸ್ಸಿನಲ್ಲಿ ಏನೇನೋ ವಿಚಿತ್ರ ಭಾವಗಳು ಹಾದುಹೋಗುತ್ತವೆ. ಆದರೆ ಇಲ್ಲಿ ಅಂದರೆ ಗಂಡಾಂತ ದೋಷ ವಿಚಾರದಲ್ಲಿ ದೋಷ ಎಂಬ ಪದವು ಯೋಗ್ಯವಲ್ಲದ ಸಮಯ ಎಂಬ ಅರ್ಥದಲ್ಲಿ ಬಳಸಲಾಗಿದೆ.
ಗಂಡಾಂತ ದೋಷ ಮುಖ್ಯವಾಗಿ ಮೂರುವಿಧ. 1.ರಾಶಿ ಗಂಡಾಂತ 2. ತಿಥಿ ಗಂಡಾಂತ 3. ನಕ್ಷತ್ರ ಗಂಡಾಂತ ಎಂಬುದಾಗಿ. ಈಗ ಗಂಡಾಂತ ಎಂದರೇನು ಎಂದು ತಿಳಿದುಕೊಳ್ಳೋಣ ಕೆಲವು ರಾಶಿಗಳ ಕೆಲವು ನಕ್ಷತ್ರಗಳ ಕೆಲವು ತಿಥಿಗಳ ಕೊನೆಯ ಭಾಗವು ಶುಭಕರ್ಮಗಳಿಗೆ ಮತ್ತು ಹೊಸಕಾರ್ಯಗಳ ಆರಂಭಕ್ಕೆ ಒಳ್ಳೆಯದಲ್ಲ ಮತ್ತು ಈ ಸಮಯದಲ್ಲಿ ಶಿಶುವಿನ ಜನನವಾದರೆ ಶಾಂತಿಯನ್ನು ಮಾಡಿಕೊಳ್ಳುವುದು ಉತ್ತಮ. ಅವು ಕರ್ಮಹಾನಿಯನ್ನು ಮಾಡುತ್ತವೆ. ಅಂತಹ ಘಳಿಗೆಯನ್ನು ಗಂಡಾಂತ ಸಮಯ ಅಥವಾ ಅದರಿಂದುಂಟಾಗುವ ಫಲವನ್ನು ಗಂಡಾಂತದೋಷ ಎಂಬುದಾಗಿ ಹೇಳುತ್ತಾರೆ.
ವಿದ್ಯಾಮಾಧವಪಂಡಿತರು ತಮ್ಮ ಮುಹೂರ್ತಮಾಧವೀ ಎಂಬ ಗ್ರಂಥದಲ್ಲಿ ಹೀಗೆ ಹೇಳಿದ್ದಾರೆ –
ರಾಶಿ ತಿಥಿ ತಾರಕಾಣಾಂ ಗಂಡಾಂತಂ ಜಲಧಿ ವಿಷಯ ನವಮಾಂತೇ |
ತತ್ರ ಉಭಯತೋ ನಾಡ್ಯಃ ಶಶಿ ಗುಣ ಶರ ಸಂಮಿತಾಃ ತ್ಯಾಜ್ಯಾಃ ||
ರಾಶಿ ಗಂಡಾಂತವು ನಾಲ್ಕು ರಾಶಿಗಳ ಕೊನೆಯಲ್ಲಿ , ತಿಥಿ ಗಂಡಾಂತವು ಐದು ತಿಥಿಗಳ ಕೊನೆಯಲ್ಲಿ, ನಕ್ಷತ್ರ ಗಂಡಾಂತವು ಮೂರು ನಕ್ಷತ್ರಗಳ ಕೊನೆಯಲ್ಲಿ ಮತ್ತು ಮೂರು ನಕ್ಷತ್ರಗಳ ಆರಂಭದಲ್ಲಿ ಸಂಭವಿಸುತ್ತದೆ.
1. ರಾಶಿ ಗಂಡಾಂತ
ಕರ್ಕಾಟಕ ರಾಶಿಯ ಕೊನೆಯ ಒಂದು ಘಳಿಗೆ. ವೃಶ್ಚಿಕ ರಾಶಿಯ ಕೊನೆಯ ಒಂದು ಘಳಿಗೆ. ಧನೂ ರಾಶಿಯ ಕೊನೆಯ ಒಂದು ಘಳಿಗೆ. ಮೀನ ರಾಶಿಯ ಕೊನೆಯ ಒಂದು ಘಳಿಗೆ. ಇವುಗಳು ರಾಶಿ ಗಂಡಾಂತ ಸಮಯವಾಗಿದೆ. ನಮ್ಮ ಕುಂಡಲಿಯಲ್ಲಿ ಈ ಸಮಯವು ಲಗ್ನವಾಗಿರುವಾಗ ಶಿಶುವಿನ ಜನನವಾದರೆ ಅಥವಾ ಶುಭಕಾರ್ಯಗಳ ಆರಂಭ ಮಾಡಿದರೆ ರಾಶಿಗಂಡಾಂತ ದೋಷವು ಸಂಭವಿಸುವುದು.
2. ತಿಥಿ ಗಂಡಾಂತ
ಪಂಚಮೀ ತಿಥಿಯ ಕೊನೆಯ ಮೂರು ಘಳಿಗೆ. ಷಷ್ಠೀ ತಿಥಿಯ ಮೊದಲ ಮೂರು ಘಳಿಗೆ. ದಶಮೀ ತಿಥಿಯ ಕೊನೆಯ ಮೂರು ಘಳಿಗೆ. ಏಕಾದಶೀ ತಿಥಿಯ ಮೊದಲ ಮೂರು ಘಳಿಗೆ ಮತ್ತು ಪೂರ್ಣಿಮಾ ಅಥವಾ ಅಮಾವಾಸ್ಯೆಯ ಕೊನೆಯ ಮೂರು ಘಳಿಗೆ ತಿಥಿಗಂಡಾಂತ ಎಂಬುದಾಗಿ ಕರೆಯಲ್ಪಡುತ್ತದೆ. ಈ ಸಮಯದಲ್ಲೂ ಜನನವಾದರೆ ತನ್ನಿಮಿತ್ತ ದಾನವನ್ನು ಮಾಡಿದರೆ ಉತ್ತಮ ಹಾಗೂ ಶುಭಕಾರ್ಯರಂಭ ಈ ಸಮಯದಲ್ಲಿ ಉತ್ತಮವಲ್ಲ.
3. ನಕ್ಷತ್ರ ಗಂಡಾಂತ
ಆಶ್ಲೇಷಾ ನಕ್ಷತ್ರದ ಕೊನೆಯ ಐದು ಘಳಿಗೆ. ಮೆಘಾ ನಕ್ಷತ್ರದ ಆರಂಭದ ಐದು ಘಳಿಗೆ. ಜ್ಯೇಷ್ಠಾ ನಕ್ಷತ್ರದ ಕೊನೆಯ ಐದು ಘಳಿಗೆ. ಮೂಲ ನಕ್ಷತ್ರದ ಆರಂಭದ ಐದು ಘಳಿಗೆ. ರೇವತಿಯ ಕೊನೆಯ ಮತ್ತು ಅಶ್ವಿನೀ ನಕ್ಷತ್ರದ ಮೊದಲ ಐದು ಘಳಿಗೆಗಳು. ಈ ಸಮಯವು ನಕ್ಷತ್ರ ಗಂಡಾಂತವಾಗಿದ್ದು ಶುಭಕರ್ಮಗಳಿಗೆ ಯೋಗ್ಯವಲ್ಲ ಮತ್ತು ಈ ಕಾಲದಲ್ಲಿ ಶಿಶುವಿನ ಜನನವಾದರೆ ಗಂಡಾಂತ ಜನನ ಶಾಂತಿಯನ್ನು ಮಾಡುವುದು ಅತ್ಯುತ್ತಮ.
ಇದನ್ನೂ ಓದಿ:Spiritual: ಗ್ರಹಣದಿಂದ ಈ ರಾಶಿಯವರಿಗೆ ಯಾವೆಲ್ಲ ಸಮಸ್ಯೆಗಳು ಎದುರಾಗಬಹುದು? ಇಲ್ಲಿದೆ ಮಾಹಿತಿ
ಜ್ಯೋತಿಷ ಶಾಸ್ತ್ರದಲ್ಲಿ ಹೇಳಿದಂತೆ
ಗಂಡಾಂತಂ ತ್ರಿವಿಧಂ ತ್ಯಜೇತ್ ಯಾತ್ರಾ ಜನ್ಮೋದ್ವಾಹಕಾಲೇಷು ಅನಿಷ್ಟಮ್ |
ಶುಭ ಕರ್ಮ ಹಂತೃ ಸರ್ವಕರ್ಮಸು ವರ್ಜಯೇತ್ ಜನನೇ ನಿಧನಪ್ರದಮ್ ||
ತಾತ್ಪರ್ಯ ಹೀಗಿದೆ ಮೂರೂ ಗಂಡಾಂತಗಳು ಯಾತ್ರೆಗೆ ಶುಭಕರ್ಮಗಳಿಗೆ ಹಾಗೂ ಎಲ್ಲಾ ಕರ್ಮಗಳಿಗೆ ಅಶುಭವನ್ನು ಉಂಟು ಮಾಡುತ್ತದೆ ಅಲ್ಲದೇ ಕಾರ್ಯ ಸಫಲತೆಗೆ ವಿಘ್ನವುಂಟಾಗುತ್ತದೆ. ಅದೆಷ್ಟೋ ಸಲ ಕೆಲಸ ಆಯಿತು ಎನ್ನುವಾಗ ಆ ಕೆಲಸ ಕೈತಪ್ಪುದೆ ಅಲ್ಲವೇ ಅದೂ ಇದರ ಫಲವೇಆಗಿದೆ. ಮತ್ತು ಈ ಕಾಲದಲ್ಲಿ ಜನನವಾದರೆ ಮೃತ್ಯು ಕಂಟಕ ಸದೃಶವಾದ ರೋಗಗಳು ಸಂಭವಿಸುವುದು ಕಂಡುಬರುತ್ತದೆ. ಆದ್ದರಿಂದ ಇಂತಹ ದೋಷಗಳನ್ನು ಪರಿಹರಿಕೊಳ್ಳುವುದು ಉತ್ತಮ.
ಜನನವೆನ್ನುವುದು ನೈಸರ್ಗಿಕ ಕ್ರಿಯೆ. ಅದು ನಮ್ಮ ಕೈಗೆ ನಿಲುಕದ್ದು. ಹಾಗಾದರೆ ಈ ಸಮಯದಲ್ಲಿ ಜನನವಾದರೆ ತಪ್ಪೇ ? ಅದಕ್ಕೇನು ದಾರಿ ಎಂದು ಕೇಳಿದರೆ ಅದಕ್ಕುತ್ತರ ಹೀಗಿದೆ ಶಾಸ್ತ್ರದಲ್ಲಿ ಪರಿಹಾರವಿಲ್ಲದ ಸಮಸ್ಯೆ ಅಥವಾ ದೋಷವಿಲ್ಲ. ನಾವು ಅತ್ಯಂತ ಶ್ರದ್ಧೆಯಿಂದ ಪೂಜಿಸುವ ಗೋವಿನ ಮೂಲಕ ಆ ಮಗುವಿಗೆ ಅರ್ಥಾತ್ ಗಂಡಾಂತ ದೋಷವಿರುವ ಮಗುವಿಗೆ ಗೋಪ್ರಸವ ಶಾಂತಿ” ಎಂಬುದಾಗಿ ಮಾಡಿಕೊಂಡು ದೋಷ ನಿವಾರಣೆ ಮಾಡಿಕೊಳ್ಳುವ ವಿಧಾನವಿದೆ. ಇದನ್ನು ಬಲ್ಲವರಿಂದ ಮಾಡಿಸಿಕೊಂಡು ಕ್ಷೇಮವನ್ನು ಹೊಂದಬಹುದು.
ಈ ಗಂಡಾಂತ ಸಮಯದಲ್ಲಿ ಸ್ತ್ರೀ ಪುರುಷ ಮಿಲನವೂ ಯೋಗ್ಯವಲ್ಲ. ಇದು ವಿಪತ್ತನ್ನುಂಟು ಮಾಡುತ್ತದೆ. ಶ್ರದ್ಧೆಯಿಂದ ನವಗ್ರಹರ ಪ್ರಾರ್ಥನೆ ಮಾಡಿರಿ ಸನ್ಮಂಗಲವಾಗುವುದು.
ಡಾ. ಗೌರಿ ಕೇಶವಕಿರಣ ಬಿ
ಧಾರ್ಮಿಕಚಿಂತಕರು
Published On - 9:38 am, Mon, 22 May 23