Ratha Saptami 2023: ರಥಸಪ್ತಮಿಯ ವಿಶೇಷವೇನು? ಈ ದಿನದಂದು ಯಾರ ಆರಾಧನೆ ಮಾಡಬೇಕು? ಹೇಗೆ?
ಸೂರ್ಯನು ಕರ್ಕ ರಾಶಿಯಿಂದ ಹೊರಟು ಮಕರ ರಾಶಿಗೆ ಪ್ರವೇಶ ಮಾಡಿದಾಗ ಉತ್ತರಾಯಣ ಆರಂಭ ಆಗುತ್ತದೆ. ಉತ್ತರಾಯಣದ ಕಾಲಮಾನ ಆರು ತಿಂಗಳು. ಈ ಕಾಲ ಅತ್ಯಂತ ಪುಣ್ಯಕಾಲ. ಸೂರ್ಯನು ಈ ಸಮಯದಲ್ಲಿ ಉತ್ತರದಿಕ್ಕಿನಲ್ಲಿ ಸಂಚರಿಸುವುದಲ್ಲದೇ ಭೂಮಿಗೆ ಹತ್ತಿರವಾಗಿರುತ್ತಾನೆ.
ಜಗತ್ತಿನ ಚಲನವಲನ ಆರಂಭವಾಗುವುದು ಸ್ವಾಭಾವಿಕವಾಗಿ ಸೂರ್ಯನನ್ನು ಆಧರಿಸಿ. ಅಂತಹ ಸೂರ್ಯನ ಚಲನೆಗೂ ಒಂದು ಕಾಲ, ನಿಯಮವೆಂಬುದು ಇದೆ. ಅದನ್ನು ಜ್ಯೋತಿಷ್ಯ ಶಾಸ್ತ್ರದಲ್ಲಿ ಹೇಳಲಾಗಿದೆ. ಅದನ್ನೇ ತಿಥಿ ಪಕ್ಷ ಮಾಸ ಋತು ಅಯನವೆಂದು ವಿಭಾಗಿಸಿದ್ದಾರೆ. ಸೂರ್ಯನು ಕರ್ಕ ರಾಶಿಯಿಂದ ಹೊರಟು ಮಕರ ರಾಶಿಗೆ ಪ್ರವೇಶ ಮಾಡಿದಾಗ ಉತ್ತರಾಯಣ ಆರಂಭ ಆಗುತ್ತದೆ. ಉತ್ತರಾಯಣದ ಕಾಲಮಾನ ಆರು ತಿಂಗಳು. ಈ ಕಾಲ ಅತ್ಯಂತ ಪುಣ್ಯಕಾಲ. ಸೂರ್ಯನು ಈ ಸಮಯದಲ್ಲಿ ಉತ್ತರದಿಕ್ಕಿನಲ್ಲಿ ಸಂಚರಿಸುವುದಲ್ಲದೇ ಭೂಮಿಗೆ ಹತ್ತಿರವಾಗಿರುತ್ತಾನೆ. ಆದ ಕಾರಣ ಈ ಕಾಲಮಾನದಲ್ಲಿ ದೇವತಾ ಉತ್ಸವಗಳಿಗೆ ಮದುವೆ ಮುಂಜಿಗಳ ಆಚರಣೆಗೆ ಪ್ರಾಶಸ್ತ್ಯ ಹೆಚ್ಚು(ಇಲ್ಲಿ ಆಳವಾಗಿ ಚಿಂತನೆ ನಡೆಸಬೇಕಾದ ವಿಚಾರವಿದೆ). ಮಕರಸಂಕ್ರಾಂತಿಯ ನಂತರ ಬರುವ ಮೊದಲ ಹಬ್ಬವೇ ಈ ರಥಸಪ್ತಮಿ. ಮಾಘ ಮಾಸದ ಶುದ್ಧ / ಶುಕ್ಲ ಪಕ್ಷದ ಸಪ್ತಮಿಯನ್ನು ರಥಸಪ್ತಮಿ ಎಂದು ಕರೆಯುತ್ತಾರೆ. ಈ ದಿನ ಸೂರ್ಯ ಜನ್ಮದಿನವೆಂಬ ಪ್ರತೀತಿಯೂ ಇದೆ. ಸೂರ್ಯನ ರಥಕ್ಕೆ ಏಳು ಕುದುರೆಗಳು. ಸೂರ್ಯನು ತನ್ನ ಏಳು ಕುದುರೆಗಳಿರುವ ರಥವೇರಿ ಜಗತ್ತಿಗೆ ಗೋಚರವಾದ ದಿನ ಮಾಘ ಸಪ್ತಮಿ. ತಿಥಿಯೂ ಸಪ್ತಮಿ ಅವನ ರಥದ ಕುದುರೆಗಳೂ ಸಪ್ತ (ಏಳು) ಈ ಕಾರಣದಿಂದ ಮಾಘ ಮಾಸದ ಸಪ್ತಮಿಗೆ ರಥಸಪ್ತಮಿ ಎಂದು ಹೆಸರು ಬಂದಿದೆ.
ಈ ದಿನದಂದು ಹಲವಾರು ದೇವಾಲಯಗಳಲ್ಲಿ ರಥೋತ್ಸವ ನಡೆಯುತ್ತದೆ. ಎಲ್ಲಾ ದೇವತಾರಾಧನೆಗೂ ಈ ದಿನ ಅತ್ಯಂತ ಪ್ರಶಸ್ತ. ಅದರಲ್ಲೂ ಜಗತ್ತಿಗೇ ಆತ್ಮದಂತಿರುವ ಸೂರ್ಯನ ಆರಾಧನೆ ಈ ದಿನದಂದು ಮಾಡುವುದರಿಂದ ವಿಶೇಷ ಫಲಗಳಿವೆ. ರಥಸಪ್ತಮಿಯಂದು ಸೂರ್ಯೋದಯಕ್ಕಿಂತ ಮೊದಲೇ ಸ್ನಾನಾದಿಗಳನ್ನು ಮುಗಿಸಿ ಸೂರ್ಯೋದಯದ ಕಾಲಕ್ಕೆ ಪೂರ್ವಾಭಿಮುಖವಾಗಿ ಸೂರ್ಯನಮಸ್ಕಾರ ಮಾಡಿದರೆ ಅತ್ಯಂತ ಉತ್ತಮ. ಹಾಗಯೇ ಈ ಕಾಲದಲ್ಲಿ ಆದಿತ್ಯಹೃದಯ ಪಾರಾಯಣ ಅಥವಾ ಶ್ರವಣ ಮಾಡುವುದರಿಂದ ವ್ಯಾಧಿಗಳ ಶಮನಕ್ಕೆ ಸಹಕಾರವಾಗುತ್ತದೆ. ಅಲ್ಲದೇ ಸೂರ್ಯದಯಕ್ಕಿಂತ ಪೂರ್ವದಲ್ಲಿ ಸೂರ್ಯನ ಸಾರಥಿಯಾದ ಅರುಣನ ಮತ್ತು ಸೂರ್ಯ ಸಂಬಂಧಿತವಾದ ಅರುಣಪ್ರಶ್ನ ಎಂಬ ಮಂತ್ರ ಭಾಗವನ್ನು ಬಲ್ಲವರಿಂದ ಪಾರಾಯಣ ಅಥವಾ ಧ್ವನಿ ಮಾಧ್ಯಮದ ಮೂಲಕ ಹಚ್ಚಿಕೊಂಡು ಶ್ರವಣ ಮಾಡುವುದರಿಂದ ಕಣ್ಣಿನ ತೊಂದರೆ, ಹ್ರದಯದ ಕಾಯಿಲೆ ಹೀಗೆ ಕೆಲವು ಕಾಯಿಲೆಗಳ ಉಪಶಮನಕ್ಕೆ ಸಹಕಾರವಾಗುತ್ತದೆ. ಆ ಮಂತ್ರದಲ್ಲೇ ಬರುವ ಮಾತು ಇದು –ಹೃದ್ರೋಗಂ ಮಮ ಸೂರ್ಯ | ಹರಿಮಾಣಂ ಚ ನಾಶಯ ” ಅಂದರೆ ನನ್ನ ಎದೆಯ ಸಂಬಂಧಿತವಾದ ರೋಗವನ್ನು ಸಂಪೂರ್ಣವಾಗಿ ಗುಣವಾಗುವಂತೆ ಅನುಗ್ರಹಿಸು ಎಂದು.
ಇದನ್ನು ಓದಿ:Ratha Saptami 2021: ರಥ ಸಪ್ತಮಿ ಹಿನ್ನೆಲೆ; ಅರಮನೆ ಆವರಣದಲ್ಲಿ ಸಾಮೂಹಿಕ ಸೂರ್ಯ ನಮಸ್ಕಾರ
ಇದೆಲ್ಲಾ ಕಷ್ಟ ನನಗೆ. ನಾನೇನು ಮಾಡಲಿ? ಏನಾದರೂ ಮಾಡಲೇ ಬೇಕು ಎನ್ನುವ ಮನಸ್ಸುಳ್ಳವರು ಈ ದಿನದಂದು ಕನಿಷ್ಠ ಏಳು ಸೂರ್ಯನಮಸ್ಕಾರವನ್ನಾದರೂ ಮಾಡಿ. ಅದೂ ಕಷ್ಟವೆಂದರೆ ಸೂರ್ಯೋದಯಕ್ಕಿಂತ ಮೊದಲೇ ಸ್ನಾನಾದಿಗಳನ್ನು ಮುಗಿಸಿ ಸೂರ್ಯನ ನಾಮಸ್ಮರಣೆಯನ್ನು ಶ್ರದ್ಧೆಯಿಂದೆ ಮಾಡಿರಿ ನಿಮಗೆ ಕ್ಷೇಮವಾಗುವುದು. ರಥಸಪ್ತಮಿಯಂದು ಸೂರ್ಯನ ಆರಾಧನೆಗೆ ಭಾರಿ ವಿಶೇಷ. ಉಳಿದಂತೆ ತಮ್ಮ ಇಷ್ಟದೇವರ ಪೂಜೆಯನ್ನೂ ವಿಶೇಷವಾಗಿ ಮಾಡಬಹುದು. ಹಾಗೆಯೇ ಸೂರ್ಯಗಾಯತ್ರಿಯನ್ನು ಈ ದಿನ ಕನಿಷ್ಠ ನೂರಾಎಂಟು ಸಲ ಜಪಿಸಿ. ಇದೇ ಬರುವ ಶನಿವಾರ 28/1/2023 ರಂದು ರಥಸಪ್ತಮಿಯನ್ನು ಉತ್ತಮವಾಗಿ ಆಚರಿಸೋಣ ಶುಭವಾಗಲಿ.
ಡಾ.ಕೇಶವ ಕಿರಣ ಬಿ
ಧಾರ್ಮಿಕ ಚಿಂತಕರು ಮತ್ತು ಸಲಹೆಗಾರರು
ಅಧ್ಯಾತ್ಮಕ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 10:40 am, Thu, 26 January 23