ಒಂದೇ ದಿನ 3 ಪ್ರಶಸ್ತಿ: ಪಿಕಲ್‌ಬಾಲ್ ಟೂರ್ನಿಯಲ್ಲಿ ಇತಿಹಾಸ ನಿರ್ಮಿಸಿದ ಅರ್ಮಾನ್ ಭಾಟಿಯಾ
Pickleball Championship: ಪಿಕಲ್‌ಬಾಲ್ ಎಂಬುದು ಟೆನ್ನಿಸ್, ಬ್ಯಾಡ್ಮಿಂಟನ್ ಆಟಗಳ ಮಿಶ್ರ ರೂಪ. ಆದರೆ ಇಲ್ಲಿ ಬಳಸುವುದು ಟೇಬಲ್ ಟೆನ್ನಿಸ್ ಮಾದರಿಯ ರಾಕೆಟ್ ಅನ್ನು ಎಂಬುದು ವಿಶೇಷ. ಈ ಕ್ರೀಡೆಯು 1965 ರಲ್ಲಿ ಶುರುವಾದರೂ ಇತ್ತೀಚಿನ ದಿನಗಳಲ್ಲಿ ಪಿಕಲ್‌ಬಾಲ್ ಭಾರೀ ಜನಪ್ರಿಯತೆ ಪಡೆದುಕೊಳ್ಳುತ್ತಿದೆ.
ದಿಲ್ಲಿ ಲಾನ್ ಟೆನಿಸ್ ಅಸೋಸಿಯೇಷನ್ ಸ್ಟೇಡಿಯಂನಲ್ಲಿ ಇಂಡಿಯಾ ಮಾಸ್ಟರ್ಸ್ ಪಿಕಲ್‌ಬಾಲ್ ಚಾಂಪಿಯನ್ಶಿಪ್ನಲ್ಲಿ ಭಾರತೀಯ ತಾರೆ ಅರ್ಮಾನ್ ಭಾಟಿಯಾ ಹೊಸ ಇತಿಹಾಸ ನಿರ್ಮಿಸಿದ್ದಾರೆ. ಅದು ಕೂಡ ಮೂರು ವಿಭಾಗಗಳಲ್ಲಿ ಕಿರೀಟ ಮುಡಿಗೇರಿಸಿಕೊಳ್ಳುವ ಮೂಲಕ ಎಂಬುದು ವಿಶೇಷ. ಭಾನುವಾರ ನಡೆದ ಪುರುಷರ ಸಿಂಗಲ್ಸ್, ಪುರುಷರ ಡಬಲ್ಸ್ ಮತ್ತು ಮಿಶ್ರ ಡಬಲ್ಸ್ ವಿಭಾಗಗಳಲ್ಲಿ ಫೈನಲ್ ಆಡಿದ್ದ ಅರ್ಮಾನ್ ಭಾಟಿಯಾ, ಮೂರರಲ್ಲೂ ಗೆಲುವು ದಾಖಲಿಸಿದ್ದಾರೆ.
ಪುರುಷರ ಸಿಂಗಲ್ಸ್ ಫೈನಲ್ ಪಂದ್ಯದಲ್ಲಿ ಅರ್ಮಾನ್ ಭಾಟಿಯಾ ಟಾಪ್ ಶ್ರೇಯಾಂಕದ ಆಟಗಾರ ಡಸ್ಟಿನ್ ಬೋಯರ್ ಅವರನ್ನು ಎದುರಿಸಿದ್ದರು. ಪ್ರಶಸ್ತಿ ಸುತ್ತಿನಲ್ಲಿ ಅತ್ಯುತ್ತಮ ಕೌಶಲ್ಯ ಪ್ರದರ್ಶಿಸಿದ ಅರ್ಮಾನ್, ಡಸ್ಟಿನ್ ಬೋಯರ್ಗೆ ಸರಿಸಾಟಿಯಾಗಿ ನಿಂತರು. ಪರಿಣಾಮ ಪ್ರತಿ ಸೆಟ್ ಕೂಡ ರಣರೋಚಕ ಹೋರಾಟಕ್ಕೆ ಸಾಕ್ಷಿಯಾಯಿತು. ಅಂತಿಮವಾಗಿ 8-11, 11-9 ಮತ್ತು 11-8 ಅಂತರದಲ್ಲಿ ಬೋಯರ್ಗೆ ಸೋಲುಣಿಸಿ ಅರ್ಮಾನ್ ಪುರುಷರ ಸಿಂಗಲ್ಸ್ನಲ್ಲಿ ಚಾಂಪಿಯನ್ ಪಟ್ಟ ಅಲಂಕರಿಸಿದರು.
View this post on Instagram
ಮೊದಲ ಪ್ರಶಸ್ತಿಯನ್ನು ಗೆದ್ದ ಸ್ವಲ್ಪ ವಿರಾಮದ ಬಳಿಕ, ಅರ್ಮಾನ್ ಮಿಶ್ರ ಡಬಲ್ಸ್ ಫೈನಲ್ನಲ್ಲಿ ಕಣಕ್ಕಿಳಿದಿದ್ದರು. ನೆದರ್ಲೆಂಡ್ಸ್‌ನ ರೂಸ್ ವ್ಯಾನ್ ರೀಕ್ ಜೊತೆಗೂಡಿ ಆಡಿದ ಅರ್ಮಾನ್ ಅಂತಿಮ ಹಣಾಹಣಿಯಲ್ಲಿ ಡ್ಯಾನಿ ಟೌನ್‌ಸೆಂಡ್ ಮತ್ತು ಜಾರ್ಜ್ ವಾಲ್ ಜೋಡಿಯನ್ನು ಎದುರಿಸಿದರು. ಈ ಜೋಡಿ ವಿರುದ್ಧ 11-5, 10-11 ಮತ್ತು 11-1 ಪಾಯಿಂಟ್ಸ್ ಅಂಕಗಳಿಂದ ಗೆಲ್ಲುವ ಮೂಲಕ ಅರ್ಮಾನ್ ಭಾಟಿಯಾ ಮಿಶ್ರ ಡಬಲ್ಸ್ನಲ್ಲೂ ಗೆಲುವಿನ ನಗೆ ಬೀರಿದರು.
View this post on Instagram
ಇನ್ನು ಪುರುಷರ ಡಬಲ್ಸ್ ಫೈನಲ್ ಸ್ವಲ್ಪ ತಡವಾಗಿ ಆರಂಭವಾಯಿತು. ಇದರಲ್ಲಿ ಭಾರತದ ಜೊತೆಗಾರ ಹರ್ಷ್ ಮೆಹ್ತಾ ಜೊತೆಗೂಡಿ ಅರ್ಮಾನ್ ಭಾಟಿಯಾ ಆಸ್ಟ್ರೇಲಿಯಾದ ಮಿಚೆಲ್ ಹಾರ್ಗ್ರೀವ್ಸ್ ಮತ್ತು ರೋಮನ್ ಇಸ್ಟ್ರೇಜಾ ಜೋಡಿಯನ್ನು ಸೋಲಿಸಿದರು. ಅರ್ಮಾನ್ ಮತ್ತು ಹರ್ಷ್ 11-4 ಮತ್ತು 11-2 ರಿಂದ ಎರಡು ಬ್ಯಾಕ್ ಟು ಬ್ಯಾಕ್ ಸೆಟ್‌ಗಳನ್ನು ಗೆದ್ದು ಈ ಪ್ರಶಸ್ತಿಯನ್ನು ತಮ್ಮದಾಗಿಸಿಕೊಂಡರು. ಈ ಮೂಲಕ ಅರ್ಮಾನ್ ಭಾಟಿಯಾ ಕೆಲವೇ ಗಂಟೆಗಳ ಒಳಗೆ ಮೂರು ಪ್ರಶಸ್ತಿಗಳನ್ನು ಮುಡಿಗೇರಿಸಿಕೊಂಡರು.
View this post on Instagram
750 ಆಟಗಾರರು ಭಾಗಿ:
ದೆಹಲಿಯಲ್ಲಿ 4 ದಿನಗಳ ಕಾಲ PWR ಇಂಡಿಯಾ ಮಾಸ್ಟರ್ಸ್ ಪಿಕಲ್‌ಬಾಲ್ ಪಂದ್ಯಾವಳಿಯಲ್ಲಿ ಸುಮಾರು 750 ಆಟಗಾರರು ಭಾಗವಹಿಸಿದ್ದರು. ಇವರೆಲ್ಲರೂ 50 ಸಾವಿರ ಡಾಲರ್ ಅಂದರೆ ಭಾರತೀಯ ಮೌಲ್ಯ ಸುಮಾರು 42 ಲಕ್ಷ ರೂಪಾಯಿ ಬಹುಮಾನ ಮೊತ್ತಕ್ಕಾಗಿ ಪೈಪೋಟಿ ನಡೆಸಿದ್ದರು. ಅಮೆರಿಕದ ನಂಬರ್ ಒನ್ ಆಟಗಾರ್ತಿ ಸೋಫಿಯಾ ಸೆವಿಂಗ್ ಮತ್ತು ಅಗ್ರ ಶ್ರೇಯಾಂಕದ ಡಸ್ಟಿನ್ ಬೋಯರ್ ಅವರಂತಹ ಆಟಗಾರರು ಈ ಕೂಟದಲ್ಲಿ ಮಿಂಚಿದರು. ಭಾರತದ ಅರ್ಮಾನ್ ಭಾಟಿಯಾ ಮತ್ತು ಆದಿತ್ಯ ರುಹೇಲಾ ಅವರಂತಹ ಯುವ ಸ್ಪರ್ಧಿಗಳು ಭರ್ಜರಿ ಪ್ರದರ್ಶನದೊಂದಿಗೆ ಇಡೀ ವಿಶ್ವದ ಗಮನ ಸೆಳೆದಿದ್ದಾರೆ.