IND vs AUS: ರೋಚಕ ಘಟ್ಟದತ್ತ ಬಾಕ್ಸಿಂಗ್ ಡೇ ಟೆಸ್ಟ್; ಇನ್ನೂ ಬೇಗನೆ ಆರಂಭವಾಗಲಿದೆ 4ನೇ ದಿನದಾಟ
Boxing Day Test: ಮೆಲ್ಬೋರ್ನ್ನಲ್ಲಿ ನಡೆಯುತ್ತಿರುವ ಬಾಕ್ಸಿಂಗ್ ಡೇ ಟೆಸ್ಟ್ನಲ್ಲಿ ಭಾರತ ತಂಡ ಆತಿಥೇಯರಿಗೆ ತಕ್ಕ ತಿರುಗೇಟು ನೀಡಿದೆ. ಯುವ ಆಲ್ರೌಂಡರ್ ನಿತೀಶ್ ರೆಡ್ಡಿ ಅವರ ಅದ್ಭುತ ಶತಕದ ಇನ್ನಿಂಗ್ಸ್ ತಂಡವನ್ನು ಸೋಲಿನಿಂದ ಪಾರು ಮಾಡಿದೆ. ಮೂರನೇ ದಿನದಾಟ ಮಂದ ಬೆಳಕಿನಿಂದಾಗಿ ಮುಂಚಿತವಾಗಿ ಮುಗಿದಿದ್ದರಿಂದ, ನಾಲ್ಕನೇ ದಿನದ ಆಟ ಅರ್ಧಗಂಟೆ ಮುಂಚಿತವಾಗಿ ಆರಂಭವಾಗಲಿದೆ.
ಮೆಲ್ಬೋರ್ನ್ನಲ್ಲಿ ಭಾರತ ಮತ್ತು ಆಸ್ಟ್ರೇಲಿಯಾ ನಡುವೆ ನಡೆಯುತ್ತಿರುವ ಬಾಕ್ಸಿಂಗ್ ಡೇ ಟೆಸ್ಟ್ ರೋಚಕ ಘಟ್ಟ ತಲುಪಿದೆ. 4ನೇ ಟೆಸ್ಟ್ನ ಮೊದಲ ದಿನದಿಂದಲೂ ಹಿನ್ನಡೆ ಅನುಭವಿಸಿದ್ದ ಟೀಂ ಇಂಡಿಯಾ ಮೂರನೇ ದಿನದಾಟದಲ್ಲಿ ಯುವ ಆಲ್ರೌಂಡರ್ ನಿತೀಶ್ ರೆಡ್ಡಿ ಬಾರಿಸಿದ ಸ್ಮರಣೀಯ ಶತಕದಿಂದಾಗಿ ಆತಿಥೇಯರಿಗೆ ತಕ್ಕ ತಿರುಗೇಟು ನೀಡಿದೆ. ಮಂದ ಬೆಳಕಿನಿಂದಾಗಿ ಮೂರನೇ ದಿನದಾಟವನ್ನು ನಿಗದಿತ ಸಮಯಕ್ಕೆ ಮುನ್ನವೇ ಅಂತ್ಯಗೊಳಿಸಲಾಗಿದ್ದು, ನಾಲ್ಕನೇ ದಿನದಾಟವನ್ನು ನಿಗದಿತ ಸಮಯಕ್ಕೂ ಮುನ್ನ ಆರಂಭಿಸಲು ತೀರ್ಮಾನಿಸಲಾಗಿದೆ. ಅಂದರೆ ನಿಗದಿಪಡಿಸಿದ ಸಮಯದ ಪ್ರಕಾರ 4ನೇ ದಿನದಾಟ ಭಾರತೀಯ ಕಾಲಮಾನ ಮುಂಜಾನೆ 5 ಗಂಟೆಗೆ ಆರಂಭವಾಗಬೇಕಿತ್ತು. ಆದರೀಗ ನಾಲ್ಕನೇ ದಿನದಾಟ ಅರ್ಧ ಗಂಟೆ ಮುಂಚೆ ಅಂದರೆ ಬೆಳಿಗಿನ ಜಾವ 4:30 ಕ್ಕೆ ಆರಂಭವಾಗಲಿದೆ ಎಂದು ಕ್ರಿಕೆಟ್ ಆಸ್ಟ್ರೇಲಿಯಾ ಹಾಗೂ ಪ್ರಸಾರದ ಹಕ್ಕು ಖರೀದಿಸಿರುವ ಸ್ಟಾರ್ ಸ್ಪೋರ್ಟ್ಸ್ ತನ್ನ ಸೋಶಿಯಲ್ ಮೀಡಿಯಾ ಖಾತೆಯಲ್ಲಿ ಮಾಹಿತಿ ನೀಡಿದೆ.
ಇನ್ನು ಟೀಂ ಇಂಡಿಯಾ ಪರ ದಿಟ್ಟ ಹೋರಾಟ ನೀಡುತ್ತಿರುವ ಯುವ ಆಲ್ರೌಂಡರ್ ನಿತೀಶ್ 105 ರನ್ ಗಳಿಸಿ ಕ್ರೀಸ್ನಲ್ಲಿದ್ದು ಅವರಿಗೆ ವೇಗಿ ಮೊಹಮ್ಮದ್ ಸಿರಾಜ್ ಸಾಥ್ ನೀಡುತ್ತಿದ್ದಾರೆ. ಆಸ್ಟ್ರೇಲಿಯಾ ಗಳಿಸಿದ 474 ರನ್ಗಳಿಗೆ ಉತ್ತರವಾಗಿ ಭಾರತ ತಂಡ ಮೂರನೇ ದಿನದಾಟದಂತ್ಯಕ್ಕೆ ಸ್ಕೋರ್ ಬೋರ್ಡ್ನಲ್ಲಿ 9 ವಿಕೆಟ್ ಕಳೆದುಕೊಂಡು 358 ರನ್ ಕಲೆಹಾಕಿದೆ. ಆದಾಗ್ಯೂ ಟೀಂ ಇಂಡಿಯಾ ಮೊದಲ ಇನ್ನಿಂಗ್ಸ್ನಲ್ಲಿ ಇನ್ನೂ 116 ರನ್ ಹಿಂದಿದೆ.
ನಾಲ್ಕನೇ ದಿನದ ಆಟ ಬೇಗನೇ ಆರಂಭ
ಮೇಲೆ ಹೇಳಿದಂತೆ ಮೆಲ್ಬೋರ್ನ್ನಲ್ಲಿ ಭಾರತ ಮತ್ತು ಆಸ್ಟ್ರೇಲಿಯಾ ನಡುವೆ ನಡೆಯುತ್ತಿರುವ ಬಾಕ್ಸಿಂಗ್ ಡೇ ಟೆಸ್ಟ್ನ ನಾಲ್ಕನೇ ದಿನ ಬೇಗನೇ ಆರಂಭವಾಗಲಿದೆ. ಮೂರನೇ ದಿನ ಮಂದ ಬೆಳಕಿನಿಂದಾಗಿ ಅಂಪೈರ್ಗಳು ದಿನದ ಆಟವನ್ನು ಅವಧಿಗೂ ಮುನ್ನವೇ ಮುಗಿಸಲು ನಿರ್ಧರಿಸಿದರು. ಹೀಗಾಗಿ ನಾಲ್ಕನೇ ದಿನ ಸಮಯವನ್ನು ಸರಿದೂಗಿಸುವ ಸಲುವಾಗಿ ಅರ್ಧ ಗಂಟೆ ಮುಂಚಿತವಾಗಿ ಆಟವನ್ನು ಪ್ರಾರಂಭಿಸಲಾಗುತ್ತದೆ. ಅದೇನೆಂದರೆ, ಭಾರತೀಯ ಕಾಲಮಾನದ ಪ್ರಕಾರ, ಮೆಲ್ಬೋರ್ನ್ ಟೆಸ್ಟ್ನ ನಾಲ್ಕನೇ ದಿನದ ಆಟವು ಬೆಳಿಗ್ಗೆ 4.30 ಕ್ಕೆ ಪ್ರಾರಂಭವಾಗಲಿದೆ.
Absolute cinema! 🎥😮💨
As #NitishKumarReddy brought up his maiden Test century in the #BoxingDayTest, relive the nail-biting drama that unfolded leading up to his milestone moment!#AUSvINDOnStar 👉 4th Test, Day 4, SUN, 29th DEC, 4:30 AM pic.twitter.com/N0YMj54MYU
— Star Sports (@StarSportsIndia) December 28, 2024
ನಿತೀಶ್-ಸುಂದರ್ ಜೊತೆಯಾಟ
ಭಾರತ ತಂಡಕ್ಕೆ ಮೂರನೇ ದಿನದ ಆರಂಭ ಉತ್ತಮವಾಗಿರಲಿಲ್ಲ. ರಿಷಬ್ ಪಂತ್ ಮತ್ತೊಮ್ಮೆ ಉತ್ತಮ ಆರಂಭದ ಲಾಭ ಪಡೆಯಲು ವಿಫಲರಾಗಿ ಬೇಡದ ಶಾಟ್ ಆಡುವ ಮೂಲಕ ವಿಕೆಟ್ ಒಪ್ಪಿಸಿ ಪೆವಿಲಿಯನ್ ಸೇರಿಕೊಂಡರು. ಪಂತ್ ಪೆವಿಲಿಯನ್ಗೆ ಮರಳಿದ ನಂತರ ನಿತೀಶ್ ಮತ್ತು ಜಡೇಜಾ 30 ರನ್ಗಳ ಜೊತೆಯಾಟವನ್ನಾಡಿದರು. ಆದರೆ, ಜಡೇಜಾ ಕೂಡ ಕ್ರೀಸ್ನಲ್ಲಿ ಉಳಿಯಲು ಸಾಧ್ಯವಾಗದೆ 17 ರನ್ಗಳಿಗೆ ಸುಸ್ತಾದರು. ಇದಾದ ನಂತರ ನಿತೀಶ್ ಮತ್ತು ವಾಷಿಂಗ್ಟನ್ ಸುಂದರ್ ಜೊತೆಗೂಡಿ ಇವರಿಬ್ಬರೂ ಎಂಟನೇ ವಿಕೆಟ್ಗೆ 127 ರನ್ಗಳ ಮಹತ್ವದ ಜೊತೆಯಾಟ ನೀಡಿದರು. ಸುಂದರ್ 50 ರನ್ಗಳ ಮಹತ್ವದ ಇನ್ನಿಂಗ್ಸ್ ಆಡಿ ಪೆವಿಲಿಯನ್ ಸೇರಿಕೊಂಡರೆ, ಶತಕದ ಇನ್ನಿಂಗ್ಸ್ ಆಡಿ ಅಜೇಯರಾಗಿ ಉಳಿದಿರುವ ನಿತೀಶ್ ತಮ್ಮ ಇನ್ನಿಂಗ್ಸ್ನಲ್ಲಿ 176 ಎಸೆತಗಳನ್ನು ಎದುರಿಸಿ 10 ಬೌಂಡರಿ ಹಾಗೂ ಒಂದು ಸಿಕ್ಸರ್ ಸಹಾಯದಿಂದ 105 ರನ್ ಕಲೆಹಾಕಿದ್ದಾರೆ.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 3:05 pm, Sat, 28 December 24