ಸರ್ಫರಾಝ್ ಖಾನ್ ಯಾಕೆ ಆಯ್ಕೆಯಾಗಿಲ್ಲ? ಓವೈಸಿ ಪ್ರಶ್ನೆ
Sarfaraz Khan: ಸರ್ಫರಾಝ್ ಖಾನ್ ಟೀಮ್ ಇಂಡಿಯಾ ಪರ 6 ಟೆಸ್ಟ್ ಪಂದ್ಯಗಳನ್ನಾಡಿದ್ದಾರೆ. ಈ ವೇಳೆ 1 ಭರ್ಜರಿ ಶತಕ ಹಾಗೂ 3 ಅರ್ಧಶತಕಗಳೊಂದಿಗೆ ಒಟ್ಟು 371 ರನ್ ಕಲೆಹಾಕಿದ್ದಾರೆ. ಇದಾಗ್ಯೂ ಕಳೆದೊಂದು ವರ್ಷದಿಂದ ಸರ್ಫರಾಝ್ ಅವರಿಗೆ ಭಾರತ ತಂಡದಲ್ಲಿ ಸ್ಥಾನ ನೀಡಲಾಗುತ್ತಿಲ್ಲ. ಇದೀಗ ಭಾರತ ಎ ತಂಡಕ್ಕೂ ಆಯ್ಕೆ ಮಾಡದೇ ಬಿಸಿಸಿಐ ಆಯ್ಕೆಗಾರರು ಅಚ್ಚರಿ ಮೂಡಿಸಿದ್ದಾರೆ.

ಸೌತ್ ಆಫ್ರಿಕಾ ಎ ತಂಡದ ವಿರುದ್ಧದ ಟೆಸ್ಟ್ ಸರಣಿಗಾಗಿ ಭಾರತ ಎ ತಂಡವನ್ನು ಪ್ರಕಟಿಸಲಾಗಿದೆ. 15 ಸದಸ್ಯರುಗಳ ಈ ತಂಡದಲ್ಲಿ ಸರ್ಫರಾಝ್ ಖಾನ್ ಕಾಣಿಸಿಕೊಂಡಿಲ್ಲ. ಕಳೆದ ಕೆಲ ವರ್ಷಗಳಿಂದ ದೇಶೀಯ ಅಂಗಳದಲ್ಲಿ ಸ್ಥಿರ ಪ್ರದರ್ಶನ ನೀಡುತ್ತಾ ಬಂದಿದ್ದರೂ ಮುಂಬೈ ಬ್ಯಾಟರ್ನನ್ನು ಕಡೆಗಣಿಸಿರುವ ಬಗ್ಗೆ ಇದೀಗ ಆಲ್ ಇಂಡಿಯಾ ಮಜ್ಲಿಸ್-ಎ-ಇತ್ತೆಹಾದುಲ್ ಮುಸ್ಲಿಮೀನ್‌ನ ಅಧ್ಯಕ್ಷ ಮತ್ತು ಹೈದರಾಬಾದ್ ಸಂಸದ ಅಸಾದುದ್ದೀನ್ ಓವೈಸಿ ಪ್ರಶ್ನೆಗಳೆನ್ನೆತ್ತಿದ್ದಾರೆ.
ಪ್ರಥಮ ದರ್ಜೆ ಕ್ರಿಕೆಟ್ನಲ್ಲಿ ಸರ್ಫರಾಝ್ ಖಾನ್ 65 ಕ್ಕಿಂತ ಹೆಚ್ಚಿನ ಸರಾಸರಿಯಲ್ಲಿ 56 ಪಂದ್ಯಗಳಿಂದ 4759 ರನ್ ಕಲೆಹಾಕಿದ್ದಾರೆ. ಈ ವೇಳೆ ಅವರ ಬ್ಯಾಟ್ನಿಂದ 16 ಶತಕ ಹಾಗೂ 15 ಅರ್ಧಶತಕಗಳು ಮೂಡಿಬಂದಿವೆ. ಇನ್ನು ಟೀಮ್ ಇಂಡಿಯಾ ಪರ ಕಣಕ್ಕಿಳಿದಾಗಲೂ 150 ರನ್ಗಳ ಭರ್ಜರಿ ಶತಕ ಸಿಡಿಸಿದ್ದಾರೆ.
ಆದರೆ ಆಸ್ಟ್ರೇಲಿಯಾ ಪ್ರವಾಸದ ನಂತರ ಸರ್ಫರಾಝ್ ಖಾನ್ ಅವರನ್ನು ಭಾರತೀಯ ತಂಡದಿಂದ ಕೈಬಿಡಲಾಯಿತು. ಬಾರ್ಡರ್-ಗವಾಸ್ಕರ್ ಟ್ರೋಫಿಯಲ್ಲಿ ತಂಡದ ಭಾಗವಾಗಿದ್ದರೂ, ಅವರಿಗೆ ಯಾವುದೇ ಪಂದ್ಯಗಳಲ್ಲಿ ಆಡಲು ಅವಕಾಶ ನೀಡಿರಲಿಲ್ಲ. ಇದಾದ ಬಳಿಕ ತಂಡದಿಂದ ಕೈಬಿಡಲಾಯಿತು.
ಇಂಗ್ಲೆಂಡ್ ಪ್ರವಾಸದಲ್ಲಿ ಅವರು ಭಾರತ ಎ ಪರ ಕಣಕ್ಕಿಳಿದಿದ್ದ ಸರ್ಫರಾಝ್ ಖಾನ್ 92 ರನ್ ಬಾರಿಸಿ ಮಿಂಚಿದ್ದರು. ಅಷ್ಟೇ ಅಲ್ಲದೆ ಟೀಮ್ ಇಂಡಿಯಾ ವಿರುದ್ಧದ ಇಂಟ್ರಾ-ಸ್ಕ್ವಾಡ್ ಪಂದ್ಯದಲ್ಲಿ ಸ್ಫೋಟಕ ಶತಕ ಸಿಡಿಸಿದ್ದರು. ಆ ಬಳಿಕ ಗಾಯಗೊಂಡಿದ್ದ ಸರ್ಫರಾಝ್ ಖಾನ್ ಕೆಲ ಕಾಲ ಮೈದಾನದಿಂದ ಹೊರಗುಳಿದಿದ್ದರು.
ಅಷ್ಟೇ ಅಲ್ಲದೆ ಇತ್ತೀಚೆಗೆ ತೂಕ ಇಳಿಸಿ ಹೊಸ ಲುಕ್ನಲ್ಲಿ ಕಾಣಿಸಿಕೊಂಡಿದ್ದರು. ಈ ಮೂಲಕ ಮತ್ತೊಮ್ಮೆ ಟೆಸ್ಟ್ ತಂಡದಲ್ಲಿ ಸ್ಥಾನ ಪಡೆಯುವ ನಿರೀಕ್ಷೆಯಲ್ಲಿದ್ದರು. ಆದರೀಗ ಭಾರತ ಎ ತಂಡದಿಂದಲೇ ಸರ್ಫರಾಝ್ ಖಾನ್ ಅವರನ್ನು ಹೊರಗಿಡಲಾಗಿದೆ.
ಅತ್ತ ಕಳೆದ ಬಾರಿ ಭಾರತ ಎ ತಂಡದ ಪರ ಕಣಕ್ಕಿಳಿದಾಗ ಅರ್ಧಶತಕ ಬಾರಿಸಿ ಮಿಂಚಿದ್ದರೂ, ಈ ಬಾರಿ ಆಯ್ಕೆ ಮಾಡಿಲ್ಲವೇಕೆ ಎಂದು ಹೈದರಾಬಾದ್‌ನ ಸಂಸತ್ ಸದಸ್ಯ ಅಸಾದುದ್ದೀನ್ ಓವೈಸಿ ಸೋಷಿಯಲ್ ಮೀಡಿಯಾದಲ್ಲಿ ಪ್ರಶ್ನೆಗಳೆನ್ನೆತ್ತಿದ್ದಾರೆ.
ಈ ಬಗ್ಗೆ ಎಕ್ಸ್ನಲ್ಲಿ ಟ್ವೀಟ್ ಮಾಡಿರುವ ಓವೈಸಿ, “ಸರ್ಫರಾಝ್ ಖಾನ್ ಅವರನ್ನು ಭಾರತ ಎ ತಂಡಕ್ಕೆ ಏಕೆ ಆಯ್ಕೆ ಮಾಡಲಿಲ್ಲ?” ಎಂದು ಕೇಳಿದ್ದಾರೆ. ಇದೀಗ ಈ ಟ್ವೀಟ್ ವೈರಲ್ ಆಗಿದ್ದು, ಇದರ ಬೆನ್ನಲ್ಲೇ ಸರ್ಫರಾಝ್ ಅವರನ್ನು ಕೈ ಬಿಟ್ಟಿರುವ ಬಗ್ಗೆ ಚರ್ಚೆಗಳು ಶುರುವಾಗಿದೆ.
ಭಾರತ ಎ ತಂಡ (ಮೊದಲ ಪಂದ್ಯಕ್ಕೆ): ರಿಷಭ್ ಪಂತ್ (ನಾಯಕ), ಆಯುಷ್ ಮ್ಹಾತ್ರೆ, ಎನ್ ಜಗದೀಸನ್ (ವಿಕೆಟ್ ಕೀಪರ್), ಸಾಯಿ ಸುದರ್ಶನ್ (ಉಪನಾಯಕ), ದೇವದತ್ ಪಡಿಕ್ಕಲ್, ರಜತ್ ಪಾಟಿದಾರ್, ಹರ್ಷ್ ದುಬೆ, ತನುಷ್ ಕೋಟ್ಯಾನ್, ಮಾನವ್ ಸುತಾರ್, ಅನ್ಶುಲ್ ಕಂಬೋಜ್, ಯಶ್ ಠಾಕೂರ್, ಆಯುಷ್ ಬದೋನಿ, ಸರಾಂಶ್ ಜೈನ್.
ಇದನ್ನೂ ಓದಿ: ಬ್ಯಾಕ್ ಟು ಬ್ಯಾಕ್ ಶತಕ ಸಿಡಿಸಿದ ಸರ್ಫರಾಝ್ ಖಾನ್
ಭಾರತ ಎ ತಂಡ (ಎರಡನೇ ಪಂದ್ಯಕ್ಕೆ): ರಿಷಭ್ ಪಂತ್ (ನಾಯಕ), ಕೆಎಲ್ ರಾಹುಲ್, ಧ್ರುವ್ ಜುರೆಲ್ (ವಿಕೆಟ್ ಕೀಪರ್), ಸಾಯಿ ಸುದರ್ಶನ್ (ಉಪನಾಯಕ), ದೇವದತ್ ಪಡಿಕ್ಕಲ್, ರುತುರಾಜ್ ಗಾಯಕ್ವಾಡ್, ಹರ್ಷ್ ದುಬೆ, ತನುಷ್ ಕೋಟ್ಯಾನ್, ಮಾನವ್ ಸುತಾರ್, ಖಲೀಲ್ ಅಹ್ಮದ್, ಗುರ್ನೂರ್ ಬ್ರಾರ್, ಅಭಿಮನ್ಯು ಈಶ್ವರನ್, ಪ್ರಸಿದ್ಧ್ ಕೃಷ್ಣ, ಮೊಹಮ್ಮದ್ ಸಿರಾಜ್, ಆಕಾಶ್ ದೀಪ್.
