ಒಂದೇ ಒಂದು ಮ್ಯಾಚ್ ಆಡದೇ ಸೆಮಿಫೈನಲ್ಗೇರಿದ ಪಾಕಿಸ್ತಾನ್!
ಏಷ್ಯನ್ ಗೇಮ್ಸ್ ಟಿ20 ಕ್ರಿಕೆಟ್ ಟೂರ್ನಿಯಲ್ಲಿ ಸಾಹಿಬ್‌ಝಾದ ಫರ್ಹಾನ್ ನೇತೃತ್ವದ ಪಾಕಿಸ್ತಾನ್ ತಂಡವು ನೇರವಾಗಿ ಸೆಮಿಫೈನಲ್‌ಗೆ ಪ್ರವೇಶಿಸಿದೆ. ವಿಶೇಷವೆಂದರೆ, ಸೆಮೀಸ್ ತಲುಪುವ ಮುನ್ನ ಪಾಕ್ ಪಡೆ ಟೂರ್ನಿಯಲ್ಲಿ ಒಂದೇ ಒಂದು ಪಂದ್ಯವನ್ನೂ ಆಡಿಲ್ಲ! ಅಂದರೆ, ಮೈದಾನಕ್ಕಿಳಿದು ಯಾವುದೇ ಮ್ಯಾಚ್ ಆಡದೆಯೇ ತಂಡವು ನೇರವಾಗಿ ಸೆಮಿಫೈನಲ್‌ಗೆ ಎಂಟ್ರಿ ಕೊಟ್ಟಂತಾಗಿದೆ.

ಜಪಾನ್‌ನ ನಾಗೋಯಾದಲ್ಲಿ ನಡೆಯುತ್ತಿರುವ ಏಷ್ಯನ್ ಗೇಮ್ಸ್ 2026ರ ಕ್ರಿಕೆಟ್ ಟೂರ್ನಿಯಲ್ಲಿ ಪಾಕಿಸ್ತಾನ್ ತಂಡ ಸೆಮಿಫೈನಲ್‌ಗೆ ಪ್ರವೇಶಿಸಿದೆ. ಅದು ಸಹ ಮೈದಾನಕ್ಕಿಳಿಯದೇ ಎಂಬುದು ವಿಶೇಷ. ಸೋಮವಾರ (ಸೆ.28) ಜಪಾನ್‌ನ ಕೊರೊಗಿ ಸ್ಪೋರ್ಟ್ಸ್ ಪಾರ್ಕ್ ಮೈದಾನದಲ್ಲಿ ನಡೆಯಬೇಕಿದ್ದ ಮೊದಲ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಪಾಕಿಸ್ತಾನ್ ಮತ್ತು ಹಾಂಗ್ ಕಾಂಗ್ ತಂಡಗಳು ಮುಖಾಮುಖಿಯಾಗಬೇಕಿತ್ತು. ಆದರೆ ಮಳೆಯ ಕಾರಣ ಈ ಪಂದ್ಯವು ರದ್ದಾಗಿದೆ.
ಪಾಕ್ ಪಾಲಿಗೆ ವರವಾದ ನಿಯಮ:
ಮುಂಜಾನೆಯಿಂದಲೇ ಜಪಾನ್‌ನಲ್ಲಿ ಜಿಟಿಜಿಟಿ ಮಳೆ ಮುಂದುವರಿದಿದ್ದರಿಂದ ಮೈದಾನ ಸಂಪೂರ್ಣವಾಗಿ ಒದ್ದೆಯಾಗಿತ್ತು. ಪಂದ್ಯದ ಟಾಸ್ ಪ್ರಕ್ರಿಯೆಯೂ ಸಾಧ್ಯವಾಗದಷ್ಟು ಹವಾಮಾನ ಹದಗೆಟ್ಟಿತ್ತು. ಕನಿಷ್ಠ 5 ಓವರ್‌ಗಳ ಶಾರ್ಟ್ ಪಂದ್ಯವನ್ನು ನಡೆಸಲು ಅಂಪೈರ್‌ಗಳು ಮತ್ತು ಮೈದಾನದ ಸಿಬ್ಬಂದಿ ಇನ್ನಿಲ್ಲದ ಪ್ರಯತ್ನ ನಡೆಸಿದರಾದರೂ, ಮಳೆ ಬಿಡುವು ನೀಡದ ಕಾರಣ ಅಂತಿಮವಾಗಿ ಪಂದ್ಯವನ್ನು ರದ್ದುಗೊಳಿಸಲು ತೀರ್ಮಾನಿಸಲಾಯಿತು.
ಏಷ್ಯನ್ ಗೇಮ್ಸ್‌ನ ಅಧಿಕೃತ ಕ್ರಿಕೆಟ್ ನಿಯಮಾವಳಿಗಳ ಪ್ರಕಾರ, ನಾಕೌಟ್ ಹಂತದ ಪಂದ್ಯಗಳು ಮಳೆಯಿಂದಾಗಿ ರದ್ದಾದರೆ, ಐಸಿಸಿ ರ‍್ಯಾಂಕಿಂಗ್‌ನಲ್ಲಿ ಉನ್ನತ ಸ್ಥಾನದಲ್ಲಿರುವ ತಂಡವು ಮುಂದಿನ ಹಂತಕ್ಕೆ ಅರ್ಹತೆ ಪಡೆಯುತ್ತದೆ. ಹಾಂಕಾಂಗ್ ತಂಡಕ್ಕಿಂತ ಪಾಕಿಸ್ತಾನವು ರ‍್ಯಾಂಕಿಂಗ್‌ನಲ್ಲಿ ಮುಂಚೂಣಿಯಲ್ಲಿರುವ ಕಾರಣ, ಯಾವುದೇ ಆಟವಾಡದೆಯೇ ಪಾಕ್ ತಂಡ ಸೆಮಿಫೈನಲ್‌ಗೆ ಅರ್ಹತೆಗಿಟ್ಟಿಸಿಕೊಂಡಿದೆ.
ಒಂದೂ ಪಂದ್ಯ ಆಡದೆ ಸೆಮಿಫೈನಲ್‌ಗೆ!
ವಿಶೇಷವೆಂದರೆ, ಏಷ್ಯನ್ ಗೇಮ್ಸ್ ನಿಯಮಗಳ ಪ್ರಕಾರ ಭಾರತ, ಪಾಕಿಸ್ತಾನ್, ಶ್ರೀಲಂಕಾ ಮತ್ತು ಬಾಂಗ್ಲಾದೇಶ್ ತಂಡಗಳು ತಮ್ಮ ಉನ್ನತ ರ‍್ಯಾಂಕಿಂಗ್ ಬಲದಿಂದಾಗಿ ಟೂರ್ನಿಯಲ್ಲಿ ನೇರವಾಗಿ ಕ್ವಾರ್ಟರ್ ಫೈನಲ್ ಹಂತಕ್ಕೆ ಪ್ರವೇಶ ಪಡೆದಿದ್ದವು.
ಸಾಹಿಬ್‌ಝಾದ ಫರ್ಹಾನ್ ನಾಯಕತ್ವದ ಪಾಕಿಸ್ತಾನ್ ತಂಡವು ಟೂರ್ನಿಯಲ್ಲಿ ತನ್ನ ಮೊದಲ ಪಂದ್ಯದಲ್ಲೇ ಹಾಂಗ್ ಕಾಂಗ್ ತಂಡವನ್ನು ಎದುರಿಸಬೇಕಿತ್ತು. ಆದರೆ, ಪ್ರಕೃತಿಯ ಕೃಪೆಯಿಂದಾಗಿ ತಂಡವು ಬ್ಯಾಟ್ ಅಥವಾ ಬಾಲ್ ಮುಟ್ಟದೆಯೇ ಅಕ್ಟೋಬರ್ 1 ರಂದು ನಡೆಯಲಿರುವ ಸೆಮಿಫೈನಲ್ ಸಮರಕ್ಕೆ ಸಜ್ಜಾಗಿದೆ.
ಪಾಕಿಸ್ತಾನ್ ಟಿ20 ತಂಡ: ಸಾಹಿಬ್‌ಝಾದ ಫರ್ಹಾನ್ (ನಾಯಕ), ಅಬ್ದುಲ್ ಸಮದ್ (ಉಪನಾಯಕ), ಸೈಮ್ ಅಯೂಬ್, ಹೈದರ್ ಅಲಿ, ಹಸನ್ ನವಾಝ್, ಸಾದ್ ಮಸೂದ್, ಉಸ್ಮಾನ್ ಖಾನ್ (ವಿಕೆಟ್ ಕೀಪರ್), ಅರಾಫತ್ ಮಿನ್ಹಾಸ್, ಮಾಝ್ ಸದಾಕತ್, ಅಬ್ರಾರ್ ಅಹ್ಮದ್, ಸುಫ್ಯಾನ್ ಮುಖೀಮ್, ಅಹ್ಮದ್ ದಾನಿಯಾಲ್, ಆಕಿಫ್ ಜಾವೇದ್, ಅಲಿ ರಾಝ, ಮೊಹಮ್ಮದ್ ಸಲ್ಮಾನ್ ಮಿರ್ಝ.
ಇದನ್ನೂ ಓದಿ: ವಿರಾಟ್ ಕೊಹ್ಲಿಗೆ ಯಾವುದೇ ಸಲಹೆ ನೀಡಲ್ಲ: ಗೆಲುವಿನ ಬಳಿಕ ಗಿಲ್ ಮಾತು!
ಹಾಂಗ್ ಕಾಂಗ್ ಟಿ20 ತಂಡ: ನಿಝಾಕತ್ ಖಾನ್, ಅಂಶುಮಾನ್ ರಾತ್, ಬಾಬರ್ ಹಯಾತ್, ಹಫೀಜ್ ಖಾನ್, ಶಿವ ಮಾಥುರ್, ಶಾಹಿದ್ ವಾಸಿಫ್ (ವಿಕೆಟ್ ಕೀಪರ್), ಯಾಸಿಮ್ ಮುರ್ತಝ (ನಾಯಕ), ನಸ್ರುಲ್ಲಾ ರಾಣಾ, ಎಹ್ಸಾನ್ ಖಾನ್, ಆಯುಷ್ ಶುಕ್ಲಾ, ಮೊಹಮ್ಮದ್ ಘಜನ್ಫರ್, ಮೊಹಮ್ಮದ್ ವಹೀದ್, ರಜಬ್ ಹುಸೇನ್, ಹಸನ್ ಖಾನ್, ಅನಸ್ ಖಾನ್.




