ವಿಶ್ವಕಪ್ ವಿಜೇತ ಸೇರಿದಂತೆ 65 ಆಟಗಾರರಿಗೆ 2 ವರ್ಷ ನಿಷೇಧ ಹೇರಿದ ಬಿಸಿಸಿಐ
ಭಾರತ ಕ್ರಿಕೆಟ್‌ನಲ್ಲಿ ವಯಸ್ಸಿನ ವಂಚನೆ ತಡೆಯಲು ಬಿಸಿಸಿಐ ಕಠಿಣ ಕ್ರಮ ಕೈಗೊಂಡಿದೆ. ನಕಲಿ ದಾಖಲೆಗಳನ್ನು ಸಲ್ಲಿಸಿದ ಆರೋಪದ ಮೇಲೆ ಒಟ್ಟು 65 ಕ್ರಿಕೆಟಿಗರನ್ನು ನಿಷೇಧಿಸಿದೆ. ಇವರಲ್ಲಿ U-19 ವಿಶ್ವಕಪ್ ವಿಜೇತ ರವಿ ಕುಮಾರ್ ಮತ್ತು ರೋಹಿತ್ ಯಾದವ್ ಕೂಡ ಸೇರಿದ್ದಾರೆ. ಈ ಆಟಗಾರರು ಎರಡು ವರ್ಷಗಳ ಕಾಲ ದೇಶೀಯ ಪಂದ್ಯಾವಳಿಗಳಿಂದ ನಿಷೇಧಕ್ಕೊಳಗಾಗಿದ್ದಾರೆ.

ಭಾರತ ಕ್ರಿಕೆಟ್‌ನಲ್ಲಿ ವಯಸ್ಸಿನ ವಂಚನೆಯನ್ನು ತಪ್ಪಿಸುವ ಸಲುವಾಗಿ ಬಿಸಿಸಿಐ ಹಲವು ಕಟ್ಟುನಿಟ್ಟಿನ ನಿಯಮಗಳನ್ನು ಜಾರಿಗೆ ತಂದಿದೆ. ಅಲ್ಲದೆ ಆಟಗಾರರ ನಿಖರವಾದ ವಯಸ್ಸನ್ನು ಪತ್ತೆ ಹಚ್ಚುವ ಸಲುವಾಗಿ ಹಲವು ಪರೀಕ್ಷೆಗಳನ್ನು ನಡೆಸುವ ಮೂಲಕ ಯುವ ಆಟಗಾರರಿಗೆ ಅನ್ಯಾಯವಾಗದಂತೆ ನೋಡಿಕೊಳ್ಳುತ್ತಿದೆ. ಆದಾಗ್ಯೂ ಕೆಲವು ಆಟಗಾರರು ವಯಸ್ಸಿನ ವಂಚನೆ ಮೂಲಕ ತಂಡದಲ್ಲಿ ಸ್ಥಾನ ಪಡೆಯುತ್ತಿದ್ದಾರೆ. ಇದೀಗ ಅಂತಹವರ ವಿರುದ್ಧ ಬಿಸಿಸಿಐ ಕಠಿಣ ಕ್ರಮಕ್ಕೆ ಮುಂದಾಗಿದೆ. ಅದರಂತೆ ವಯಸ್ಸಿನ ವಂಚನೆ ಮತ್ತು ನಕಲಿ ದಾಖಲೆಗಳನ್ನು ನೀಡಿದ್ದ ಬರೋಬ್ಬರಿ 65 ಆಟಗಾರರಿಗೆ ಬಿಸಿಸಿಐ ನಿಷೇಧದ ಶಿಕ್ಷೆ ವಿಧಿಸಿದೆ. ಈ 65 ಆಟಗಾರರಲ್ಲಿ ವಿಶ್ವಕಪ್ ವಿಜೇತ ಭಾರತ ಅಂಡರ್-19 ತಂಡದಲ್ಲಿ ಆಡಿದ್ದ ಆಟಗಾರನೂ ಸೇರಿರುವುದು ಅಚ್ಚರಿಯ ಸಂಗತಿ.
65 ಆಟಗಾರರಿಗೆ ನಿಷೇಧದ ಶಿಕ್ಷೆ
ಈ 65 ಆಟಗಾರರು ಬಂಗಳಾ ಕ್ರಿಕೆಟ್ ಸಂಸ್ಥೆಯಲ್ಲಿ ನೋಂದಾಯಿತರಾಗಿದ್ದವರು ಎಂಬುದು ಮತ್ತೊಂದು ಗಮನಿಸಬೇಕಾದ ವಿಷಯವಾಗಿದೆ. ಬಂಗಾಳ ಕ್ರಿಕೆಟ್ ಸಂಸ್ಥೆ ಅಧಿಕೃತ ತನಿಖೆಯ ನಂತರ ಒಟ್ಟು 65 ಆಟಗಾರರ ನೋಂದಣಿ ಮತ್ತು ವರ್ಗಾವಣೆಯನ್ನು ನಿಷೇಧಿಸಿದೆ. ಈ ಕಠಿಣ ನಿರ್ಧಾರದ ಪರಿಣಾಮವಾಗಿ, ಎಲ್ಲಾ 65 ಕ್ರಿಕೆಟಿಗರು ಮುಂಬರುವ ಎರಡು ದೇಶೀಯ ಆವೃತ್ತಿಗಳಲ್ಲಿ ಅಂದರೆ 2026-27 ಮತ್ತು 2027-28ರ ದೇಶಿ ಸೀಸನ್ನ ಯಾವುದೇ ಪಂದ್ಯಾವಳಿಗಳಲ್ಲಿ ಭಾಗವಹಿಸಲು ಸಾಧ್ಯವಾಗುವುದಿಲ್ಲ.
ವಿಶ್ವಕಪ್ ತಂಡದಲ್ಲಿದ್ದ ರವಿ ಕುಮಾರ್
ಎರಡು ವರ್ಷಗಳ ನಿಷೇಧದ ಶಿಕ್ಷೆಗೊಳಗಾದವರಲ್ಲಿ ವೇಗದ ಬೌಲರ್ ರವಿ ಕುಮಾರ್ ಮತ್ತು ಲೆಗ್-ಸ್ಪಿನ್ನರ್ ರೋಹಿತ್ ಯಾದವ್ ಕೂಡ ಸೇರಿದ್ದಾರೆ. ಇವರಿಬ್ಬರು 2022 ರ 19 ವರ್ಷದೊಳಗಿನವರ ಭಾರತ ವಿಶ್ವಕಪ್ ತಂಡದಲ್ಲಿ ಆಡಿದ್ದರು. ಅದರಲ್ಲೂ ಅಲಿಗಢದ ಎಡಗೈ ವೇಗದ ಬೌಲರ್ ರವಿ ಕುಮಾರ್ ವೆಸ್ಟ್ ಇಂಡೀಸ್‌ನಲ್ಲಿ ನಡೆದ 2022 ರ 19 ವರ್ಷದೊಳಗಿನವರ ವಿಶ್ವಕಪ್‌ನಲ್ಲಿ ಭಾರತದ ಪ್ರಶಸ್ತಿ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಇಂಗ್ಲೆಂಡ್ ವಿರುದ್ಧದ ಫೈನಲ್‌ನಲ್ಲಿ ಅವರು 34 ರನ್‌ಗಳಿಗೆ 4 ವಿಕೆಟ್‌ಗಳನ್ನು ಪಡೆದಿದ್ದರು. ಹಾಗೆಯೇ ಟೂರ್ನಿಯಾದ್ಯಂತ ಆಡಿದ ಆರು ಪಂದ್ಯಗಳಲ್ಲಿ 10 ವಿಕೆಟ್‌ಗಳನ್ನು ಉರುಳಿಸಿದ್ದರು.
ಬಂಗಳಾ ಕ್ರಿಕೆಟ್ ಸಂಸ್ಥೆಯ ಅಧಿಕೃತ ದಾಖಲೆಗಳ ಪ್ರಕಾರ, ರವಿ ಕುಮಾರ್ ಅವರ ಜನನ ಪ್ರಮಾಣಪತ್ರದಲ್ಲಿ 45 ತಿಂಗಳ ಗಮನಾರ್ಹ ವ್ಯತ್ಯಾಸ ಕಂಡುಬಂದಿದೆ. ಇದರಿಂದಾಗಿ 2021-22 ರಿಂದ 2025-26 ರವರೆಗಿನ ಅವರ 19 ವರ್ಷದೊಳಗಿನವರ, 23 ವರ್ಷದೊಳಗಿನವರ ಮತ್ತು ಹಿರಿಯರ ತಂಡದ ಭಾಗವಹಿಸುವಿಕೆಯ ದಾಖಲೆಗಳನ್ನು ಅಮಾನ್ಯಗೊಳಿಸಿದೆ.
IPL 2027: ಇಂಪ್ಯಾಕ್ಟ್ ಪ್ಲೇಯರ್ ನಿಯಮದ ಬಗ್ಗೆ ಬಿಸಿಸಿಐ ಮಹತ್ವದ ನಿರ್ಧಾರ
ಆಸೀಸ್ ಪ್ರವಾಸಕ್ಕೆ ಆಯ್ಕೆಯಾಗಿದ್ದ ರೋಹಿತ್
ರವಿ ಕುಮಾರ್ ಜೊತೆಗೆ ಇತ್ತೀಚೆಗೆ ಆಸ್ಟ್ರೇಲಿಯಾ ವಿರುದ್ಧದ ನಿರ್ಣಾಯಕ ಸರಣಿಗಾಗಿ ಭಾರತದ ಅಂಡರ್-19 ತಂಡಕ್ಕೆ ಆಯ್ಕೆಯಾಗಿದ್ದ ಲೆಗ್-ಸ್ಪಿನ್ನರ್ ರೋಹಿತ್ ಯಾದವ್ ಅವರನ್ನು ಬಿಸಿಸಿಐ ಎರಡು ವರ್ಷಗಳ ಕಾಲ ನಿಷೇಧಿಸಿದೆ. ಸಿಎಬಿ ಪ್ರಕಾರ, ರೋಹಿತ್ ಅವರ ಎರಡೂವರೆ ವರ್ಷಗಳ ದಾಖಲೆಗಳಲ್ಲಿ ವ್ಯತ್ಯಾಸಗಳು ಪತ್ತೆಯಾಗಿವೆ. ಈ ಬಗ್ಗೆ ಮಂಡಳಿಯು ಎಲ್ಲಾ ರಾಜ್ಯ ಮಂಡಳಿಗಳಿಗೆ ಎಚ್ಚರಿಕೆಯನ್ನು ನೀಡಿದೆ. ಇವರಲ್ಲದೆ ಇನ್ನು ಹಲವು ಕ್ರಿಕೆಟಿಗರ ವಯಸ್ಸಿನಲ್ಲಿ ಸಾಕಷ್ಟು ವ್ಯತ್ಯಾಸಗಳು ಕಂಡುಬಂದಿವೆ. ಹೀಗಾಗಿ ವಯಸ್ಸಿನ ವಂಚನೆಯಲ್ಲಿ ಸಿಕ್ಕಿಬಿದ್ದಿರುವ ಈ ಆಟಗಾರರನ್ನು ಎರಡು ವರ್ಷ ಕ್ರಿಕೆಟ್ನಿಂದ ನಿಷೇಧಿಸಲಾಗಿದೆ.




