ಐದು ಬಾರಿಯ ಚಾಂಪಿಯನ್ ಚೆನ್ನೈ ಸೂಪರ್ ಕಿಂಗ್ಸ್ ಕೂಡ ಈ ಮೊದಲು ನಿರೀಕ್ಷಿಸಿದಂತೆ ತನ್ನ ತಂಡಕ್ಕೆ ಯಾವ ಆಟಗಾರ ಸೂಕ್ತ ಎಂಬುದನ್ನು ಅಳೆದು ತೂಗಿ 5 ಆಟಗಾರನನ್ನು ತಂಡದಲ್ಲೇ ಉಳಿಸಿಕೊಳ್ಳಲು ತೀರ್ಮಾನಿಸಿದೆ. ಅದರಲ್ಲೂ ತಂಡದ ಹಿರಿಯ ಆಟಗಾರ ಎಂಎಸ್ ಧೋನಿ ಐಪಿಎಲ್ನಲ್ಲಿ ಆಡುವ ಬಗ್ಗೆ ಹಲವಾರು ಊಹಪೋಹಗಳು ಎದ್ದಿದ್ದವು. ಆದರೀಗ ಆ ಊಹಾಪೋಹಗಳಿಗೆ ತೆರೆ ಎಳೆದಿರುವ ಫ್ರಾಂಚೈಸಿ, ಮುಂದಿನ ಆವೃತ್ತಿಯಲ್ಲಿ ಧೋನಿ ಆಡುವುದನ್ನು ಖಚಿತಪಡಿಸಿದೆ.
ಮೊದಲೇ ನಿರ್ಧರಿಸಿದಂತೆ ನಾಯಕ ರುತುರಾಜ್ ಗಾಯಕ್ವಾಡ್ರನ್ನು ಮೊದಲ ಆಯ್ಕೆಯಾಗಿ ಪರಿಗಣಿಸಿರುವ ಚೆನ್ನೈ ಫ್ರಾಂಚೈಸಿ, ಅವರಿಗೆ 18 ಕೋಟಿ ರೂಗಳನ್ನು ವ್ಯಯಿಸಿದೆ. ಈ ಮೂಲಕ ಮುಂದಿನ ಆವೃತ್ತಿಯಲ್ಲೂ ರುತುರಾಜ್ ತಂಡವನ್ನು ಮುನ್ನಡೆಸುವುದು ಖಚಿತವಾಗಿದೆ.
ಎರಡನೇ ಆಯ್ಕೆಯಾಗಿ ವಿದೇಶಿ ಆಟಗಾರನಿಗೆ ಮಣೆ ಹಾಕಿರುವ ಚೆನ್ನೈ, ಶ್ರೀಲಂಕಾದ ವೇಗದ ಬೌಲರ್ ಮತೀಶಾ ಪತಿರಾನ ಅವರನ್ನು 13 ಕೋಟಿ ರೂ ನೀಡಿ ತಂಡದಲ್ಲೇ ಉಳಿಸಿಕೊಂಡಿದೆ. ಈ ಡೆತ್ ಓವರ್ ಸ್ಪೆಷಲಿಸ್ಟ್ ಚೆನ್ನೈ ತಂಡದ ಬೌಲಿಂಗ್ ಜೀವಾಳವಾಗಿರುವ ಕಾರಣ ಫ್ರಾಂಚೈಸಿ ಇಷ್ಟು ಮೊತ್ತವನ್ನು ವ್ಯಯಿಸಿದೆ.
ಶಿವಂ ದುಬೆಯನ್ನು ಮೂರನೇ ಆಟಗಾರನಾಗಿ ಉಳಿಸಿಕೊಂಡಿರುವ ಚೆನ್ನೈ, ಈ ಸ್ಫೋಟಕ ಬ್ಯಾಟ್ಸ್ಮನ್ಗಾಗಿ 12 ಕೋಟಿ ರೂಗಳನ್ನು ವ್ಯಯಿಸಿದೆ. ದುಬೆ ಮಧ್ಯಮ ಕ್ರಮಾಂಕದ ಬ್ಯಾಟರ್ ಆಗಿದ್ದು, ಬಿಗ್ ಶಾಟ್ ಹೊಡೆಯುವಲ್ಲಿ ನಿಸ್ಸೀಮರು ಇದರೊಂದಿಗೆ ದುಬೆ ಬೌಲರ್ ಕೂಡ ಆಗಿದ್ದಾರೆ.
ನಾಲ್ಕನೇ ಆಯ್ಕೆಯಾಗಿ ತಂಡದ ಮಾಜಿ ನಾಯಕ ರವೀಂದ್ರ ಜಡೇಜಾರನ್ನು ಉಳಿಸಿಕೊಂಡಿರುವ ಚೆನ್ನೈ, ಈ ಸ್ಟಾರ್ ಆಲ್ರೌಂಡರ್ಗಾಗಿ ಬರೋಬ್ಬರಿ 18 ಕೋಟಿ ರೂಗಳನ್ನು ವ್ಯಯಿಸಿದೆ.
ಕೊನೆಯ ಹಾಗೂ ಐದನೇ ಆಯ್ಕೆಯಾಗಿ ತಂಡದ ಮಾಜಿ ನಾಯಕ ಎಂಎಸ್ ಧೋನಿಯನ್ನು ಉಳಿಸಿಕೊಂಡಿರುವ ಸಿಎಸ್ಕೆ, ಮಹೀಯನ್ನು ಉಳಿಸಿಕೊಳ್ಳುವುದಕ್ಕಾಗಿ ಕೇವಲ 4 ಕೋಟಿ ರೂಗಳನ್ನು ಖರ್ಚು ಮಾಡಿದೆ. ಅಂದರೆ ಧೋನಿಯನ್ನು ಅನ್ಕ್ಯಾಪ್ಡ್ ಆಟಗಾರನಾಗಿ ಚೆನ್ನೈ ಆಯ್ಕೆ ಮಾಡಿದೆ.
Published On - 5:44 pm, Thu, 31 October 24