‘ಮದ್ಯಪಾನ’ದಿಂದ ಡೇವಿಡ್ ವಾರ್ನರ್ ನಾಯಕತ್ವಕ್ಕೆ ಕುತ್ತು!
David Warner: ಮೈದಾನದಲ್ಲಿ ಅಬ್ಬರಿಸುತ್ತಿದ್ದ ಆಸ್ಟ್ರೇಲಿಯಾದ ಮಾಜಿ ಓಪನರ್ ಡೇವಿಡ್ ವಾರ್ನರ್ ಈಗ ಆಫ್-ಫೀಲ್ಡ್ ವಿವಾದವೊಂದರಿಂದ ಭಾರಿ ಸಂಕಷ್ಟಕ್ಕೆ ಸಿಲುಕಿದ್ದಾರೆ. ಏಪ್ರಿಲ್ ತಿಂಗಳಿನಲ್ಲಿ ನಡೆದಿದ್ದ ಮದ್ಯಪಾನ ಮಾಡಿ ವಾಹನ ಚಾಲನೆ ಪ್ರಕರಣದಲ್ಲಿ ವಾರ್ನರ್ ನ್ಯಾಯಾಲಯದ ಮುಂದೆ ಅಧಿಕೃತವಾಗಿ ತಪ್ಪು ಒಪ್ಪಿಕೊಂಡಿದ್ದಾರೆ. ಈ ಪ್ರಕರಣದ ಕಾರಣದಿಂದಾಗಿ ಅವರನ್ನು ನಾಯಕತ್ವದಿಂದ ಕೆಳಗಿಳಿಸುವ ಸಾಧ್ಯತೆಯಿದೆ.

ಆಸ್ಟ್ರೇಲಿಯಾ ಕ್ರಿಕೆಟ್ ತಂಡದ ಮಾಜಿ ಆರಂಭಿಕ ದಾಂಡಿಗ ಡೇವಿಡ್ ವಾರ್ನರ್ ಮತ್ತೊಮ್ಮೆ ಕಾನೂನು ಸಂಕಷ್ಟಕ್ಕೆ ಸಿಲುಕಿದ್ದಾರೆ. ಈ ವರ್ಷದ ಏಪ್ರಿಲ್ ತಿಂಗಳಿನಲ್ಲಿ ನಡೆದಿದ್ದ ‘ಮದ್ಯಪಾನ ಮಾಡಿ ವಾಹನ ಚಾಲನೆ’ ಪ್ರಕರಣಕ್ಕೆ ಸಂಬಂಧಿಸಿದಂತೆ ವಾರ್ನರ್ ಪರ ವಕೀಲರು ಜುಲೈ 22ರಂದು ಸಿಡ್ನಿಯ ನ್ಯಾಯಾಲಯದಲ್ಲಿ ತಮ್ಮ ತಪ್ಪನ್ನು ಅಧಿಕೃತವಾಗಿ ಒಪ್ಪಿಕೊಂಡಿದ್ದಾರೆ. ಈ ಬೆಳವಣಿಗೆಯಿಂದಾಗಿ ಮುಂಬರುವ ಬಿಗ್ ಬ್ಯಾಷ್ ಲೀಗ್ ಸೀಸನ್‌ನಲ್ಲಿ ಸಿಡ್ನಿ ಥಂಡರ್ ತಂಡದ ನಾಯಕತ್ವವನ್ನು ಕಳೆದುಕೊಳ್ಳುವ ಭೀತಿ ಎದುರಾಗಿದೆ.
ಘಟನೆಯ ಹಿನ್ನಲೆ:
ಏಪ್ರಿಲ್ 5 ರಂದು ಸಿಡ್ನಿಯ ಮರೌಬ್ರಾ ಉಪನಗರದಲ್ಲಿ ಡೇವಿಡ್ ವಾರ್ನರ್ ತಮ್ಮ ವ್ಯಾನ್ ಚಲಾಯಿಸುತ್ತಿದ್ದರು. ರಸ್ತೆಯಲ್ಲಿ ಪೊಲೀಸರು ನಡೆಸುತ್ತಿದ್ದ ಡ್ರಿಂಕ್ ಅ್ಯಂಡ್ ಡ್ರೈವ್ ಟೆಸ್ಟ್ ಕಂಡು ವಾರ್ನರ್ ತಮ್ಮ ವಾಹನವನ್ನು ಸ್ವಲ್ಪ ದೂರದಲ್ಲೇ ನಿಲ್ಲಿಸಿದ್ದರು.
ಅನುಮಾನಗೊಂಡು ಪೊಲೀಸರು ತಪಾಸಣೆ ನಡೆಸಿದಾಗ ವಾರ್ನರ್ ಮದ್ಯಪಾನ ಮಾಡಿರುವುದು ದೃಢಪಟ್ಟಿತು. ತಕ್ಷಣವೇ ಅವರನ್ನು ಮರೌಬ್ರಾ ಪೊಲೀಸ್ ಠಾಣೆಗೆ ಕರೆದೊಯ್ದು ಮರುಪರೀಕ್ಷೆ ನಡೆಸಿದಾಗ, ಅವರ ರಕ್ತದಲ್ಲಿ ಆಲ್ಕೋಹಾಲ್ ಪ್ರಮಾಣ 0.104 BAC ಇರುವುದು ಪತ್ತೆಯಾಯಿತು. ಇದು ಆಸ್ಟ್ರೇಲಿಯಾದ ಕಾನೂನುಬದ್ಧ ಮಿತಿ (0.05) ಗಿಂತ ಎರಡೂವರೆ ಪಟ್ಟು ಹೆಚ್ಚು ಇತ್ತು.
ತಪ್ಪೊಪ್ಪಿಕೊಂಡ ವಾರ್ನರ್:
“ಸ್ನೇಹಿತರ ಮನೆಯಲ್ಲಿ 3 ಗ್ಲಾಸ್ ವೈನ್ ಕುಡಿದ ಬಳಿಕ ಉಬರ್ ಬುಕ್ ಮಾಡುವ ಬದಲು ತಾವೇ ಕಾರು ಚಲಾಯಿಸಲು ನಿರ್ಧರಿಸಿದ್ದು ವಾರ್ನರ್ ಮಾಡಿದ ದೊಡ್ಡ ತಪ್ಪು. ತಮ್ಮ ನಡೆ ಅತ್ಯಂತ ಮೂರ್ಖತನ ಹಾಗೂ ಬೇಜವಾಬ್ದಾರಿತನದಿಂದ ಕೂಡಿತ್ತು ಎಂಬುದನ್ನು ವಾರ್ನರ್ ಒಪ್ಪಿಕೊಂಡಿದ್ದಾರೆ ಎಂದು ಅವರ ವಕೀಲ ಬಾಬಿ ಹಿಲ್ ಕೋರ್ಟ್ಗೆ ತಿಳಿಸಿದ್ದಾರೆ.
ಆಗಸ್ಟ್ 18 ರಂದು ಅಂತಿಮ ತೀರ್ಪು:
ವೇವರ್ಲಿ ಸ್ಥಳೀಯ ನ್ಯಾಯಾಲಯದಲ್ಲಿ ನಡೆದ ವಿಚಾರಣೆಗೆ ಡೇವಿಡ್ ವಾರ್ನರ್ ಗೈರಾಗಿದ್ದರು. ಹೀಗಾಗಿ ನ್ಯಾಯಾಲಯವು ಆಗಸ್ಟ್ 18 ಕ್ಕೆ ಅಂತಿಮ ಶಿಕ್ಷೆಯ ಪ್ರಮಾಣ ಪ್ರಕಟಿಸುವುದಾಗಿ ತಿಳಿಸಿದೆ. ಆಸ್ಟ್ರೇಲಿಯಾದ ಸಂಚಾರ ನಿಯಮಗಳ ಅಡಿಯಲ್ಲಿ ಅವರ ಡ್ರೈವಿಂಗ್ ಲೈಸನ್ಸ್ ಅನ್ನು 6 ತಿಂಗಳುಗಳ ಕಾಲ ನಿಷೇಧಿಸುವ ಸಾಧ್ಯತೆಯಿದೆ. ಹಾಗೆಯೇ ಗರಿಷ್ಠ A$2,200 (ಸುಮಾರು ₹1.21 ಲಕ್ಷಕ್ಕೂ ಅಧಿಕ) ದಂಡ ವಿಧಿಸಬಹುದು.
ನಾಯಕತ್ವಕ್ಕೆ ಕುತ್ತು:
2018 ರ ಬಾಲ್-ಟ್ಯಾಂಪರಿಂಗ್ ಹಗರಣದ ಬಳಿಕ ಕ್ರಿಕೆಟ್ ಆಸ್ಟ್ರೇಲಿಯಾ ವಾರ್ನರ್ ಮೇಲಿದ್ದ ಜೀವಿತಾವಧಿ ನಾಯಕತ್ವದ ನಿಷೇಧವನ್ನು 2024 ರಲ್ಲಿಷ್ಟೇ ತೆರವುಗೊಳಿಸಿತ್ತು. ಅದರ ಬೆನ್ನಲ್ಲೇ ಅವರು ಸಿಡ್ನಿ ಥಂಡರ್ ತಂಡದ ನಾಯಕರಾಗಿ ನೇಮಕಗೊಂಡಿದ್ದರು. ಆದರೆ ಈಗಿನ ಪ್ರಕರಣ ಸಿಡ್ನಿ ಥಂಡರ್ ಫ್ರಾಂಚೈಸಿಗೆ ಭಾರಿ ಮುಜುಗರ ತಂದಿಟ್ಟಿದೆ.
ಇದನ್ನೂ ಓದಿ: RCB ಆಟಗಾರರಿಗೆ ಅನ್ಯಾಯ: ಬಿಸಿಸಿಐ ವಿರುದ್ಧ ಮಾಜಿ ಕ್ರಿಕೆಟಿಗ ಕಿಡಿ
ಹೀಗಾಗಿ ಮುಂಬರುವ ಬಿಗ್ ಬ್ಯಾಷ್ ಲೀಗ್ ಸೀಸನ್ ಆರಂಭಕ್ಕೂ ಮುನ್ನವೇ ಡೇವರಡ್ ವಾರ್ನರ್ ಅವರನ್ನು ನಾಯಕತ್ವದಿಂದ ಕೆಳಗಿಳಿಸಲು ಸಿಡ್ನಿ ಥಂಡರ್ ಮಂಡಳಿ ಗಂಭೀರ ಚಿಂತನೆ ನಡೆಸಿದೆ. ಅಂದರೆ ಮುಂಬರುವ ಬಿಬಿಎಲ್ನಲ್ಲಿ ವಾರ್ನರ್ ಕೇವಲ ಆಟಗಾರನಾಗಿ ಕಣಕ್ಕಿಳಿಯಬಹುದು.
Published On - 3:04 pm, Thu, 23 July 26




