India vs England Test: ಇಂಗ್ಲೆಂಡ್ನಲ್ಲಿ ಕೊಹ್ಲಿ ಹುಡುಗರ ದರ್ಬಾರ್: ಸರಣಿಯಲ್ಲಿ ಟೀಮ್ ಇಂಡಿಯಾದ್ದೇ ಮೇಲುಗೈ
India vs England 5th Test: 1-1 ಸಮಬಲಗೊಂಡಿದ್ದ ಸರಣಿಯ ನಾಲ್ಕನೇ ಪಂದ್ಯವು ಟೀಮ್ ಇಂಡಿಯಾ ಪಾಲಿಗೆ ನಿರ್ಣಾಯಕವಾಗಿತ್ತು. ಏಕೆಂದರೆ ಸೋಲನ್ನು ತಪ್ಪಿಸಿಕೊಳ್ಳಲು ನಾಲ್ಕನೇ ಟೆಸ್ಟ್ನಲ್ಲಿ ಜಯ ಅನಿವಾರ್ಯವಾಗಿತ್ತು.
ಮ್ಯಾಂಚೆಸ್ಟರ್ನ ಓಲ್ಡ್ ಟ್ರಾಫರ್ಡ್ ಮೈದಾನದಲ್ಲಿ ಸೆಪ್ಟೆಂಬರ್ 10 ರಿಂದ ಶುರುವಾಗಬೇಕಿದ್ದ ಭಾರತ-ಇಂಗ್ಲೆಂಡ್ (India vs England Test) ನಡುವಿನ 5ನೇ ಹಾಗೂ ಅಂತಿಮ ಟೆಸ್ಟ್ ಪಂದ್ಯ ರದ್ದಾಗಿದೆ. ಕೋವಿಡ್-19 ಭೀತಿ ಹಿನ್ನೆಲೆಯಲ್ಲಿ ಉಭಯ ತಂಡಗಳ ಕ್ರಿಕೆಟ್ ಮಂಡಳಿ ಈ ನಿರ್ಧಾರಕ್ಕೆ ಬಂದಿದೆ. ಅಷ್ಟೇ ಅಲ್ಲದೆ 5ನೇ ಟೆಸ್ಟ್ ಪಂದ್ಯವನ್ನು ಮುಂದಿನ ವರ್ಷ ನಡೆಯಲಿರುವ ಸರಣಿಯಲ್ಲಿ ಪೂರ್ಣಗೊಳಿಸಲು ಇಂಗ್ಲೆಂಡ್ ಕ್ರಿಕೆಟ್ ಬೋರ್ಡ್ (ECB) ಹಾಗೂ ಬಿಸಿಸಿಐ (BCCI) ನಿರ್ಧರಿಸಿದೆ. ಹೀಗಾಗಿ ಆ ಪಂದ್ಯದ ಬಳಿಕವಷ್ಟೇ ಸರಣಿಯ ಫಲಿತಾಂಶ ಹೊರಬೀಳಲಿದೆ.
ಸರಣಿಯ ಆರಂಭದಿಂದಲೂ ಟೀಮ್ ಇಂಡಿಯಾ ಭರ್ಜರಿ ಪ್ರದರ್ಶನ ನೀಡುತ್ತಾ ಬಂದಿತ್ತು. ನ್ಯಾಟಿಂಗ್ಹ್ಯಾಮ್ನಲ್ಲಿ ನಡೆದ ಮೊದಲ ಪಂದ್ಯದಲ್ಲಿ ಟಾಸ್ ಗೆದ್ದ ಇಂಗ್ಲೆಂಡ್ ತಂಡವು ಮೊದಲು ಬ್ಯಾಟಿಂಗ್ ಆಯ್ದುಕೊಂಡಿತು. ಆದರೆ ಟೀಮ್ ಇಂಡಿಯಾ ಬೌಲರುಗಳ ಮುಂದೆ ಕ್ರೀಸ್ ಕಚ್ಚಿ ನಿಲ್ಲಲು ಪರದಾಡಿದ ಇಂಗ್ಲೆಂಡ್ ಮೊದಲ ಇನಿಂಗ್ಸ್ನಲ್ಲಿ 183 ರನ್ಗೆ ಆಲೌಟ್ ಆಯಿತು. ಇನ್ನು ಕೆಎಲ್ ರಾಹುಲ್ ಅವರ 84 ರನ್ಗಳ ನೆರವಿನಿಂದ ಭಾರತ ಪ್ರಥಮ ಇನಿಂಗ್ಸ್ನಲ್ಲಿ 278 ರನ್ ಪೇರಿಸಿ ಮುನ್ನಡೆ ಸಾಧಿಸಿತು. 95 ರನ್ಗಳ ಹಿನ್ನಡೆಯೊಂದಿಗೆ ಇನಿಂಗ್ಸ್ ಆರಂಭಿಸಿದ ಇಂಗ್ಲೆಂಡ್ ದ್ವಿತೀಯ ಇನಿಂಗ್ಸ್ನಲ್ಲಿ 303 ರನ್ಗಳಿತು. ದ್ವಿತೀಯ ಇನಿಂಗ್ಸ್ನಲ್ಲಿ ಕೇವಲ 208 ರನ್ಗಳ ಟಾರ್ಗೆಟ್ ಪಡೆದ ಭಾರತದ ಗೆಲುವು ಖಚಿತವಾಗಿತ್ತು. ಆದರೆ ಐದನೇ ದಿನದಾಟದ ವೇಳೆ ಮಳೆಯಾಗಿದ್ದರಿಂದ ಪಂದ್ಯವನ್ನು ಪೂರ್ಣಗೊಳಿಸಲಾಗಲಿಲ್ಲ. ಹೀಗಾಗಿ ಮೊದಲ ಟೆಸ್ಟ್ ಪಂದ್ಯವು ಡ್ರಾನಲ್ಲಿ ಅಂತ್ಯವಾಯಿತು. ಈ ಪಂದ್ಯದಲ್ಲಿ ಟೀಮ್ ಇಂಡಿಯಾ ವೇಗಿ ಜಸ್ಪ್ರೀತ್ ಬುಮ್ರಾ ಒಟ್ಟು 9 ವಿಕೆಟ್ ಉರುಳಿಸಿ ಯಶಸ್ವಿ ಬೌಲರ್ ಎನಿಸಿಕೊಂಡಿದ್ದರು.
ಮೊದಲ ಟೆಸ್ಟ್ನಲ್ಲಿ ಕೈ ಜಾರಿದ ಗೆಲುವನ್ನು ಪಡೆಯಲು ಟೀಮ್ ಇಂಡಿಯಾ ದ್ವಿತೀಯ ಟೆಸ್ಟ್ನಲ್ಲಿ ಬಲಿಷ್ಠ ಪಡೆಯೊಂದಿಗೆ ಕಣಕ್ಕಿಳಿಯಿತು. ಕ್ರಿಕೆಟ್ ಕಾಶಿ ಲಾರ್ಡ್ಸ್ ಮೈದಾನದಲ್ಲಿ ನಡೆದ ಈ ಪಂದ್ಯದಲ್ಲೂ ಟಾಸ್ ಗೆದ್ದಿದ್ದು ಇಂಗ್ಲೆಂಡ್ ನಾಯಕ ಜೋ ರೂಟ್. ಆದರೆ ಈ ಬಾರಿ ಮೊದಲು ಬೌಲಿಂಗ್ ಆಯ್ದುಕೊಂಡರು. ಇಂಗ್ಲೆಂಡ್ ನಾಯಕನ ನಿರ್ಧಾರವನ್ನು ಪ್ರಶ್ನಿಸುವಂತೆ ಬ್ಯಾಟ್ ಬೀಸಿದ ಟೀಮ್ ಇಂಡಿಯಾ ಆರಂಭಿಕರಾದ ರೋಹಿತ್ ಶರ್ಮಾ (83) ಹಾಗೂ ಕೆಎಲ್ ರಾಹುಲ್ (129) ಭರ್ಜರಿ ಇನಿಂಗ್ಸ್ ಆಡಿದರು. ಆರಂಭಿಕರ ಅತ್ಯುತ್ತಮ ಆಟದ ನೆರವಿನಿಂದ ಭಾರತ ಮೊದಲ ಇನಿಂಗ್ಸ್ನಲ್ಲಿ 364 ರನ್ಗಳಿಸಿತು. ಇದಕ್ಕುತರವಾಗಿ ಇನಿಂಗ್ಸ್ ಆರಂಭಿಸಿದ ಇಂಗ್ಲೆಂಡ್ ನಾಯಕ ಜೋ ರೂಟ್ (180) ಅವರ ಭರ್ಜರಿ ಶತಕದ ನೆರವನಿಂದ 391 ರನ್ ಕಲೆಹಾಕಿತು. 27 ರನ್ಗಳ ಹಿನ್ನಡೆಯೊಂದಿಗೆ ದ್ವಿತೀಯ ಇನಿಂಗ್ಸ್ ಆರಂಭಿಸಿದ ಭಾರತ ರಹಾನೆ (61) ಅರ್ಧಶತಕ ಹಾಗೂ ಮೊಹಮ್ಮದ್ ಶಮಿ ಅವರ ಅತ್ಯಮೂಲ್ಯ 56 ರನ್ಗಳ ನೆರವಿನಿಂದ 8 ವಿಕೆಟ್ಗೆ 298 ರನ್ಗಳಿಸಿ ಡಿಕ್ಲೇರ್ ಘೋಷಿಸಿತು. 271 ರನ್ಗಳ ಗುರಿ ಪಡೆದ ಇಂಗ್ಲೆಂಡ್ ತಂಡವು ಅಂತಿಮ ದಿನದಾಟದಲ್ಲಿ ಪಂದ್ಯವನ್ನು ಡ್ರಾ ಮಾಡಿಕೊಳ್ಳಲು ಹೊರಟರೆ ಟೀಮ್ ಇಂಡಿಯಾ ವೇಗಿಗಳು ಇಡೀ ಪಂದ್ಯದ ಚಿತ್ರಣ ಬದಲಿಸಿಬಿಟ್ಟರು. ಬುಮ್ರಾ (3 ವಿಕೆಟ್) ಹಾಗೂ ಮೊಹಮ್ಮದ್ ಸಿರಾಜ್ (4 ವಿಕೆಟ್) ದಾಳಿಗೆ ತತ್ತರಿಸಿದ ಇಂಗ್ಲೆಂಡ್ ತಂಡವು 120 ರನ್ಗಳಿಗೆ ಆಲೌಟ್ ಆಯಿತು. ಇದರೊಂದಿಗೆ ಟೀಮ್ ಇಂಡಿಯಾ ಲಾರ್ಡ್ಸ್ ಮೈದಾನದಲ್ಲಿ 151 ರನ್ಗಳ ಐತಿಹಾಸಿಕ ಗೆಲುವು ದಾಖಲಿಸಿತು.
ಲಾರ್ಡ್ಸ್ನಲ್ಲಿ ಭರ್ಜರಿ ಗೆಲುವು ದಾಖಲಿಸಿದ್ದ ಟೀಮ್ ಇಂಡಿಯಾಗೆ ಹೆಡಿಂಗ್ಲೆಯಲ್ಲಿ ಇಂಗ್ಲೆಂಡ್ ತಂಡವು ಶಾಕ್ ನೀಡಿತು. ಗೆಲುವಿನ ಹುಮ್ಮಸ್ಸಿನಲ್ಲಿದ್ದ ಭಾರತ ತಂಡವನ್ನು ಮೊದಲ ಇನಿಂಗ್ಸ್ನಲ್ಲಿ ಕೇವಲ 78 ರನ್ಗಳಿಗೆ ಆಲೌಟ್ ಮಾಡಿತು. ಅಷ್ಟೇ ಅಲ್ಲದೆ ಇಂಗ್ಲೆಂಡ್ ತಂಡವು ಮೊದಲ ಇನಿಂಗ್ಸ್ನಲ್ಲಿ ಜೋ ರೂಟ್ (121) ಅವರ ಭರ್ಜರಿ ಶತಕದ ನೆರವಿನಿಂದ 432 ರನ್ಗಳ ಬೃಹತ್ ಮೊತ್ತ ಪೇರಿಸಿತು. ಇನ್ನು ಭಾರತ ತಂಡವನ್ನು ದ್ವಿತೀಯ ಇನಿಂಗ್ಸ್ನಲ್ಲಿ 278 ರನ್ಗಳಿಗೆ ಆಲೌಟ್ ಮಾಡಿ ಇನಿಂಗ್ಸ್ ಹಾಗೂ 76 ರನ್ಗಳ ಭರ್ಜರಿ ವಿಜಯ ಸಾಧಿಸಿ ಲಾರ್ಡ್ಸ್ ಸೋಲಿಗೆ ಸೇಡು ತೀರಿಸಿಕೊಂಡಿತು. ಈ ಪಂದ್ಯದಲ್ಲಿ ಓಲಿ ರಾಬಿನ್ಸನ್ ಒಟ್ಟು 7 ವಿಕೆಟ್ ಪಡೆದು ಮಿಂಚಿದ್ದರು. ಇದರೊಂದಿಗೆ ಐದು ಪಂದ್ಯ ಸರಣಿಯು 1-1 ಅಂತರದಿಂದ ಸಮಬಲಗೊಂಡಿತು.
1-1 ಸಮಬಲಗೊಂಡಿದ್ದ ಸರಣಿಯ ನಾಲ್ಕನೇ ಪಂದ್ಯವು ಟೀಮ್ ಇಂಡಿಯಾ ಪಾಲಿಗೆ ನಿರ್ಣಾಯಕವಾಗಿತ್ತು. ಏಕೆಂದರೆ ಸೋಲನ್ನು ತಪ್ಪಿಸಿಕೊಳ್ಳಲು ನಾಲ್ಕನೇ ಟೆಸ್ಟ್ನಲ್ಲಿ ಜಯ ಅನಿವಾರ್ಯವಾಗಿತ್ತು. ಅದರಂತೆ ಓವಲ್ ಮೈದಾನದಲ್ಲಿ ಕಣಕ್ಕಿಳಿದ ಟೀಮ್ ಇಂಡಿಯಾಗೆ ಮೊದಲ ಇನಿಂಗ್ಸ್ನಲ್ಲಿ ಆಘಾತ ನೀಡುವಲ್ಲಿ ರೂಟ್ ಪಡೆ ಯಶಸ್ವಿಯಾಯಿತು. ಭಾರತವನ್ನು ಇಂಗ್ಲೆಂಡ್ ಬೌಲರುಗಳು ಕೇವಲ 191 ರನ್ಗಳಿಗೆ ಆಲೌಟ್ ಮಾಡಿತು. ಇದಕ್ಕುತ್ತರವಾಗಿ ಇಂಗ್ಲೆಂಡ್ ತಂಡವು 290 ರನ್ಗಳಿಸಿ 99 ರನ್ಗಳ ಮುನ್ನಡೆ ಕಾಯ್ದುಕೊಂಡಿತು. ಅದರಂತೆ ದ್ವಿತೀಯ ಇನಿಂಗ್ಸ್ ಆರಂಭಿಸಿದ ಭಾರತಕ್ಕೆ ಮತ್ತೆ ನೆರವಾಗಿದ್ದು ಆರಂಭಿಕರು.
ರೋಹಿತ್ ಶರ್ಮಾ ಹಾಗೂ ಕೆಎಲ್ ರಾಹುಲ್ ಅತ್ಯುತ್ತಮವಾಗಿ ಇನಿಂಗ್ಸ್ ಆರಂಭಿಸಿದರು. ಅದರಲ್ಲೂ ಹಿಟ್ಮ್ಯಾನ್ 127 ರನ್ ಬಾರಿಸಿ ದೀರ್ಘ ಇನಿಂಗ್ಸ್ ಕಟ್ಟಿದರು. ಪೂಜಾರ (61), ಪಂತ್ (50) ಹಾಗೂ ಶಾರ್ದೂಲ್ ಠಾಕೂರ್ (60) ಅರ್ಧಶತಕ ಬಾರಿಸಿದರು. ಹೀಗೆ ಎರಡನೇ ಇನಿಂಗ್ಸ್ನಲ್ಲಿ ಸಂಪೂರ್ಣ ಮೇಲುಗೈ ಸಾಧಿಸಿದ ಭಾರತ 466 ರನ್ ಕಲೆಹಾಕಿತು. ಈ ಮೂಲಕ ಇಂಗ್ಲೆಂಡ್ಗೆ 367 ರನ್ಗಳ ಟಾರ್ಗೆಟ್ ನೀಡಿತು. ಒಂದು ಹಂತದಲ್ಲಿ ಡ್ರಾನಲ್ಲಿ ಅಂತ್ಯಗೊಳ್ಳಲಿದೆ ಎಂದು ಅಂದುಕೊಂಡಿದ್ದ ಪಂದ್ಯದಲ್ಲಿ ಟೀಮ್ ಇಂಡಿಯಾ ಬೌಲರುಗಳು ಮ್ಯಾಜಿಕ್ ಮಾಡಿದರು. ಅಂತಿಮ ದಿನದಾಟದಲ್ಲಿ 10 ವಿಕೆಟ್ ಉರುಳಿಸಿ ಇಂಗ್ಲೆಂಡ್ ತಂಡವನ್ನು 210 ರನ್ಗಳಿಗೆ ಆಲೌಟ್ ಮಾಡಿತು. ಈ ಪಂದ್ಯದಲ್ಲಿ 6 ವಿಕೆಟ್ ಕಬಳಿಸಿದ ಉಮೇಶ್ ಯಾದವ್ ಹಾಗೂ ಶಾರ್ದೂಲ್ ಠಾಕೂರ್ ( 2 ಅರ್ಧಶತಕ, 3 ವಿಕೆಟ್) ಗೆಲುವಿನ ರೂವಾರಿ ಎನಿಸಿಕೊಂಡಿದ್ದರು. ಇದರೊಂದಿಗೆ ಟೀಮ್ ಇಂಡಿಯಾ ನಾಲ್ಕನೇ ಟೆಸ್ಟ್ ಪಂದ್ಯವನ್ನು 157 ರನ್ಗಳಿಂದ ಗೆದ್ದುಕೊಂಡು ಸರಣಿಯಲ್ಲಿ 2-1 ಅಂತರ ಸಾಧಿಸಿತು.
ಇದೀಗ ಟೀಮ್ ಇಂಡಿಯಾ ಕೋಚ್ ಹಾಗೂ ಸಿಬ್ಬಂದಿಗಳಲ್ಲಿ ಕೊರೋನಾ ಸೋಂಕು ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಮ್ಯಾಂಚೆಸ್ಟರ್ನಲ್ಲಿ ನಡೆಯಬೇಕಿದ್ದ 5ನೇ ಟೆಸ್ಟ್ ಪಂದ್ಯವು ರದ್ದಾಗಿದೆ. ಐದನೇ ಟೆಸ್ಟ್ ಪಂದ್ಯ ಆಡುವವರೆಗೂ ಸರಣಿಯು 2-1 ಅಂತರದಲ್ಲೇ ಇರಲಿದೆ. ಆ ಬಳಿಕವಷ್ಟೇ ಪಂದ್ಯದ ಫಲಿತಾಂಶವನ್ನು ನಿರ್ಧರಿಸಲಾಗುತ್ತದೆ. ಅದರಂತೆ ಇಂಗ್ಲೆಂಡ್ ಮತ್ತು ಭಾರತ ನಡುವಿನ ಐದನೇ ಟೆಸ್ಟ್ ಅನ್ನು ಮುಂದಿನ ವರ್ಷಕ್ಕೆ ಅನಿರ್ದಿಷ್ಟಾವಧಿಗೆ ಮುಂದೂಡಲಾಗಿದೆ.
ಇದನ್ನೂ ಓದಿ: MS Dhoni: 3 ವಿಶ್ವಕಪ್ ಮೇಲೆ ಬಿಸಿಸಿಐ ಕಣ್ಣು: ಟೀಮ್ ಇಂಡಿಯಾದ ಮುಂದಿನ ಕೋಚ್ ಧೋನಿ?
ಇದನ್ನೂ ಓದಿ: ವಿಚ್ಛೇದಿತ ಮಹಿಳೆಯರನ್ನು ಪ್ರೀತಿಸಿ ಮದುವೆಯಾದ ಭಾರತೀಯ ಕ್ರಿಕೆಟಿಗರು ಇವರೇ
ಇದನ್ನೂ ಓದಿ: Shardul Thakur: ಮುಂಬೈ ಲೋಕಲ್ ಟ್ರೈನ್ ಹುಡುಗ ಇದೀಗ ಟೀಮ್ ಇಂಡಿಯಾ ಸೆನ್ಸೇಷನ್
ಇದನ್ನೂ ಓದಿ: IPL 2022: ಐಪಿಎಲ್ನ 2 ಹೊಸ ತಂಡಗಳಿಗಾಗಿ 6 ನಗರಗಳ ಆಯ್ಕೆ
(india vs england test series 2021 results)