ಐವರಿಲ್ಲ… ಈಗ ಭಾರತವನ್ನು ಸೋಲಿಸುವುದು ತುಂಬಾ ಸುಲಭ ಎಂದ ಪಾಕ್ ಕ್ರಿಕೆಟಿಗ
Asia Cup 2025: ಏಷ್ಯಾಕಪ್ ಟಿ20 ಟೂರ್ನಿಯು ಸೆಪ್ಟೆಂಬರ್ 9 ರಿಂದ ಶುರುವಾಗಲಿದೆ. ಭಾರತ ತಂಡವು ಸೆಪ್ಟೆಂಬರ್ 10 ರಂದು ಯುಎಇ ವಿರುದ್ಧ ಕಣಕ್ಕಿಳಿಯುವ ಮೂಲಕ ಏಷ್ಯಾಕಪ್ ಅಭಿಯಾನ ಆರಂಭಿಸಲಿದೆ. ಅಲ್ಲದೆ ಸೆಪ್ಟೆಂಬರ್ 14 ರಂದು ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನ್ ತಂಡವನ್ನು ಎದುರಿಸಲಿದೆ.

ಈ ಬಾರಿಯ ಏಷ್ಯಾಕಪ್ನಲ್ಲಿ ಟೀಮ್ ಇಂಡಿಯಾವನ್ನು ಪಾಕಿಸ್ತಾನ್ ಸುಲಭವಾಗಿ ಸೋಲಿಸಬಹುದು. ಏಕೆಂದರೆ ಭಾರತ ತಂಡದಲ್ಲಿ ಐವರು ಪ್ರಮುಖ ಆಟಗಾರರಿಲ್ಲ. ಹೀಗಾಗಿ ಇನ್ಮುಂದೆ ಟೀಮ್ ಇಂಡಿಯಾ ಸೋಲಿಸುವುದು ತುಂಬಾ ಸುಲಭ… ಹೀಗಂದಿರುವುದು ಮತ್ಯಾರೂ ಅಲ್ಲ, ಪಾಕಿಸ್ತಾನ್ ಕ್ರಿಕೆಟಿಗ ಅಹ್ಮದ್ ಶೆಹ್ಝಾದ್.
ಭಾರತ ತಂಡದ ದಿಗ್ಗಜ ಕ್ರಿಕೆಟಿಗರು ಈಗಾಗಲೇ ನಿವೃತ್ತಿ ಘೋಷಿಸಿದ್ದಾರೆ. ಮಹೇಂದ್ರ ಸಿಂಗ್ ಧೋನಿ, ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ, ರವಿಚಂದ್ರನ್ ಅಶ್ವಿನ್ ಹಾಗೂ ರವೀಂದ್ರ ಜಡೇಜಾ ಪ್ರಸ್ತುತ ತಂಡದಲ್ಲಿಲ್ಲ. ಇತ್ತ ಪ್ರಮುಖ ಆಟಗಾರರು ಇಲ್ಲದ ಕಾರಣ ಭಾರತ ತಂಡವನ್ನು ಸೋಲಿಸುವುದು ತುಂಬಾ ಸುಲಭ ಎಂದು ಅಹ್ಮದ್ ಶೆಹ್ಝಾದ್ ಹೇಳಿದ್ದಾರೆ.
ಅಹ್ಮದ್ ಶೆಹ್ಝಾದ್ ಪ್ರಕಾರ, ಪಾಕಿಸ್ತಾನ್ ವಿರುದ್ಧ ಟೀಮ್ ಇಂಡಿಯಾ ಗೆಲ್ಲುವಲ್ಲಿ ಧೋನಿ, ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ, ಅಶ್ವಿನ್ ಹಾಗೂ ಜಡೇಜಾ ಪ್ರಮುಖ ಪಾತ್ರವಹಿಸುತ್ತಿದ್ದರು. ಇದೀಗ ಈ ಆಟಗಾರರೆಲ್ಲರೂ ತಂಡದಿಂದ ಹೊರಗುಳಿದಿದ್ದಾರೆ.
ಇಲ್ಲಿ ಧೋನಿ ಹಾಗೂ ಅಶ್ವಿನ್ ನಿವೃತ್ತಿ ಘೋಷಿಸಿದರೆ, ವಿರಾಟ್ ಕೊಹ್ಲಿ, ರೋಹಿತ್ ಶರ್ಮಾ ಹಾಗೂ ರವೀಂದ್ರ ಜಡೇಜಾ ಟಿ20 ಕ್ರಿಕೆಟ್ಗೆ ವಿದಾಯ ಹೇಳಿದ್ದಾರೆ. ಹೀಗಾಗಿ ಈ ಐವರು ಪ್ರಮುಖ ಆಟಗಾರರು ಏಷ್ಯಾಕಪ್ ಟೂರ್ನಿಯಲ್ಲಿ ಕಾಣಿಸಿಕೊಳ್ಳುವುದಿಲ್ಲ.
ಇದೀಗ ಯುವ ಪಡೆಯನ್ನು ಒಳಗೊಂಡಿರುವ ಟೀಮ್ ಇಂಡಿಯಾವನ್ನು ಸೋಲಿಸುವುದು ನನ್ನ ಪ್ರಕಾರ ತುಂಬಾ ಸುಲಭ. ಅದರಂತೆ ಮುಂದಿನ ಏಷ್ಯಾಕಪ್ನಲ್ಲಿ ಪಾಕಿಸ್ತಾನ್ ತಂಡ ಟೀಮ್ ಇಂಡಿಯಾವನ್ನು ಬಗ್ಗು ಬಡಿಯಲಿದೆ ಎಂದು ಅಹ್ಮದ್ ಶೆಹ್ಝಾದ್ ಅಭಿಪ್ರಾಯಪಟ್ಟಿದ್ದಾರೆ.
ಭಾರತ-ಪಾಕ್ ಪಂದ್ಯ ಯಾವಾಗ?
ಭಾರತ ಮತ್ತು ಪಾಕಿಸ್ತಾನ್ ನಡುವಣ ಪಂದ್ಯವು ಸೆಪ್ಟೆಂಬರ್ 14 ರಂದು ನಡೆಯಲಿದೆ. ದುಬೈನಲ್ಲಿ ನಡೆಯಲಿರುವ ಈ ಹೈವೋಲ್ಟೇಜ್ ಪಂದ್ಯಕ್ಕಾಗಿ ಇಡೀ ವಿಶ್ವವೇ ಕಾತುರದಿಂದ ಕಾಯುತ್ತಿದೆ. ಇದೀಗ ಈ ಪಂದ್ಯದಲ್ಲಿ ಪಾಕಿಸ್ತಾನ್ ತಂಡ ಸುಲಭವಾಗಿ ಜಯಗಳಿಸಲಿದೆ ಎಂದು ಅಹ್ಮದ್ ಶೆಹ್ಝಾದ್ ಭವಿಷ್ಯ ನುಡಿದಿದ್ದಾರೆ.
ಏಷ್ಯಾಕಪ್ಗೆ ಭಾರತ-ಪಾಕಿಸ್ತಾನ್ ತಂಡಗಳು:
ಭಾರತ ತಂಡ: ಸಂಜು ಸ್ಯಾಮ್ಸನ್ (ವಿಕೆಟ್ ಕೀಪರ್), ಅಭಿಷೇಕ್ ಶರ್ಮಾ, ತಿಲಕ್ ವರ್ಮಾ, ಸೂರ್ಯಕುಮಾರ್ ಯಾದವ್ (ನಾಯಕ), ಶುಭ್ಮನ್ ಗಿಲ್ (ಉಪನಾಯಕ), ಹಾರ್ದಿಕ್ ಪಾಂಡ್ಯ, ಶಿವಂ ದುಬೆ, ಅಕ್ಷರ್ ಪಟೇಲ್, ಜಸ್ಪ್ರೀತ್ ಬುಮ್ರಾ, ಅರ್ಷದೀಪ್ ಸಿಂಗ್, ವರುಣ್ ಚಕ್ರವರ್ತಿ, ಜಿತೇಶ್ ಶರ್ಮಾ (ವಿಕೆಟ್ ಕೀಪರ್), ಕುಲ್ದೀಪ್ ಯಾದವ್, ಹರ್ಷಿತ್ ರಾಣಾ, ರಿಂಕು ಸಿಂಗ್.
ಇದನ್ನೂ ಓದಿ: ಬರೋಬ್ಬರಿ 463 ರನ್ಗಳು… ವಿಶ್ವ ದಾಖಲೆ ನಿರ್ಮಿಸಿದ ಮ್ಯಾಥ್ಯೂ ಬ್ರೀಟ್ಝ್ಕೆ
ಪಾಕಿಸ್ತಾನ್ ತಂಡ: ಸಲ್ಮಾನ್ ಅಲಿ ಅಘಾ (ನಾಯಕ), ಅಬ್ರಾರ್ ಅಹ್ಮದ್, ಫಹೀಮ್ ಅಶ್ರಫ್, ಫಖರ್ ಝಮಾನ್, ಹ್ಯಾರಿಸ್ ರೌಫ್, ಹಸನ್ ಅಲಿ, ಹಸನ್ ನವಾಝ್, ಹುಸೇನ್ ತಲತ್, ಖುಷ್ದಿಲ್ ಶಾ, ಮೊಹಮ್ಮದ್ ಹ್ಯಾರಿಸ್ (ವಿಕೆಟ್ ಕೀಪರ್), ಮೊಹಮ್ಮದ್ ನವಾಜ್, ಮೊಹಮ್ಮದ್ ವಾಸಿಂ ಜೂನಿಯರ್, ಸಾಹಿಬ್ಝಾದ್ ಫರ್ಹಾನ್, ಶಾಹೀನ್ ಅಫ್ರಿದಿ, ಸಲ್ಮಾನ್ ಮಿರ್ಝಾ, ಸೈಮ್ ಅಯ್ಯೂಬ್ ಮತ್ತು ಸುಫಿಯಾನ್ ಮುಖಿಮ್.
