AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಭಾರತೀಯರು ಒತ್ತಡದಲ್ಲಿದ್ದಾರೆ, ಅದಕ್ಕೆ ನನ್ನ ಬಗ್ಗೆ ಮಾತಾಡ್ತಿದ್ದಾರೆ!

India vs Pakistan: ಟಿ20 ವಿಶ್ವಕಪ್​ನ 27ನೇ ಪಂದ್ಯದಲ್ಲಿ ಭಾರತ ಮತ್ತು ಪಾಕಿಸ್ತಾನ್ ತಂಡಗಳು ಮುಖಾಮುಖಿಯಾಗಲಿದೆ. ಕೊಲಂಬೊದ ಆರ್​. ಪ್ರೇಮದಾಸ ಮೈದಾನದಲ್ಲಿ ನಡೆಯಲಿರುವ ಈ ಪಂದ್ಯವು ಟೀಮ್ ಇಂಡಿಯಾ ವರ್ಸಸ್ ಉಸ್ಮಾನ್ ತಾರಿಖ್ ಆಗಿ ಮಾರ್ಪಡುವ ಎಲ್ಲಾ ಲಕ್ಷಣಗಳು ಕಾಣಿಸುತ್ತಿದೆ. ಏಕೆಂದರೆ ಈ ಪಂದ್ಯಕ್ಕೂ ಮುನ್ನವೇ ಭಾರತೀಯ ಬ್ಯಾಟರ್​ಗಳು ನನ್ನ ಎಸೆತಗಳನ್ನು ಎದುರಿಸುವ ಒತ್ತಡದಲ್ಲಿದ್ದಾರೆ ಎಂದು ಉಸ್ಮಾನ್ ತಾರಿಖ್ ಬಹಿರಂಗ ಹೇಳಿಕೆ ನೀಡಿದ್ದಾರೆ.

ಭಾರತೀಯರು ಒತ್ತಡದಲ್ಲಿದ್ದಾರೆ, ಅದಕ್ಕೆ ನನ್ನ ಬಗ್ಗೆ ಮಾತಾಡ್ತಿದ್ದಾರೆ!
Usman Tariq
ಝಾಹಿರ್ ಯೂಸುಫ್
|

Updated on:Feb 12, 2026 | 8:59 AM

Share

ಪಾಕಿಸ್ತಾನ್ ಸ್ಪಿನ್ನರ್ ಉಸ್ಮಾನ್ ತಾರಿಖ್ ಸಖತ್ ಸುದ್ದಿಯಲ್ಲಿದ್ದಾರೆ. ಹೀಗೆ ಸುದ್ದಿಯಾಗಲು ಮುಖ್ಯ ಕಾರಣ ಅವರ ಬೌಲಿಂಗ್ ಶೈಲಿ. ವಿಭಿನ್ನ ಶೈಲಿಯಲ್ಲಿ ಚೆಂಡೆಸೆಯುವ ಆಕ್ಷನ್ ಹೊಂದಿರುವ ಉಸ್ಮಾನ್ ಅವರ ಬಗ್ಗೆ ಚರ್ಚೆಗಳು ಮುಂದುವರೆದಿದೆ. ಇದರ ನಡುವೆ ಭಾರತೀಯ ಕ್ರಿಕೆಟಿಗರಾದ ಆಕಾಶ್ ಚೋಪ್ರಾ, ಶ್ರೀವಾಸ್ತವ್ ಗೋಸ್ವಾಮಿ ಉಸ್ಮಾನ್ ತಾರಿಖ್ ಅವರ ಆಕ್ಷನ್ ಬಗ್ಗೆ ಪ್ರಶ್ನೆಗಳೆತ್ತಿದ್ದರು. ಇದೀಗ ಈ ಪ್ರಶ್ನೆಗೆ ಪಾಕ್ ಸ್ಪಿನ್ನರ್ ತಿರುಗೇಟು ನೀಡಿದ್ದಾರೆ.

ಈ ಬಗ್ಗೆ ಸಂದರ್ಶನವೊಂದರಲ್ಲಿ ಮಾತನಾಡಿದ ಉಸ್ಮಾನ್ ತಾರಿಖ್, ಭಾರತೀಯರು ನನ್ನ ಬೌಲಿಂಗ್ ಆಕ್ಷನ್ ಬಗ್ಗೆ ಏನು ಹೇಳುತ್ತಾರೆ ಎಂಬುದು ನನಗೆ ಮುಖ್ಯವಲ್ಲ. ಅದನ್ನೆಲ್ಲಾ ನಾ ಕ್ಯಾರೇ ಮಾಡಲ್ಲ. ಅವರು ನನ್ನ ಬಗ್ಗೆ ಮಾತನಾಡುತ್ತಿದ್ದಾರೆ ಎಂದರೆ ಅವರು ಒತ್ತಡದಲ್ಲಿದ್ದಾರೆ ಎಂದರ್ಥ ಅಷ್ಟೇ ಎಂದಿದ್ದಾರೆ.

ಉಸ್ಮಾನ್ ತಾರಿಖ್ ಅವರ ವಿಶಿಷ್ಟ ಬೌಲಿಂಗ್ ಶೈಲಿಯನ್ನು (ಬೌಲಿಂಗ್ ಮಾಡುವಾಗ ಮಧ್ಯದಲ್ಲಿ ಸ್ವಲ್ಪ ಹೊತ್ತು ನಿಲ್ಲುವುದು) ಭಾರತದ ಮಾಜಿ ಕ್ರಿಕೆಟಿಗರು ಮತ್ತು ಅಭಿಮಾನಿಗಳು ಟೀಕಿಸಿದ್ದರು. ಇದಕ್ಕೆ ಪ್ರತಿಕ್ರಿಯಿಸಿದ ಅವರು, “ಭಾರತೀಯ ಬ್ಯಾಟರ್‌ಗಳು ಒತ್ತಡದಲ್ಲಿದ್ದಾರೆ, ಅದಕ್ಕಾಗಿಯೇ ಅವರು ನನ್ನ ಬೌಲಿಂಗ್ ಬಗ್ಗೆ ಮಾತನಾಡುತ್ತಿದ್ದಾರೆ” ಎಂದು ತಿರುಗೇಟು ನೀಡಿದ್ದಾರೆ.

ಇದೇ ವೇಳೆ ತನ್ನ ಬೌಲಿಂಗ್ ಆ್ಯಕ್ಷನ್ ವಿರುದ್ಧ ಕೇಳಿ ಬರುತ್ತಿರುವ ಆರೋಪಗಳಿಗೆ ಸ್ಪಷನೆ ನೀಡಿರುವ ಅವರು, ಈ ಹಿಂದೆಯೇ ಪಾಕಿಸ್ತಾನ ಕ್ರಿಕೆಟ್ ಮಂಡಳಿ (PCB) ಹಾಗೂ ಐಸಿಸಿ ನನ್ನ ಬೌಲಿಂಗ್ ಟೆಸ್ಟ್​ ನಡೆಸಿ ಕ್ಲೀನ್ ಚಿಟ್ ನೀಡಿದೆ. ಹೀಗಾಗಿ ಈ ಆರೋಪಗಳಿಗೆ ಯಾವುದೇ ಅರ್ಥವಿಲ್ಲ.

ಇದೀಗ ಭಾರತೀಯರು ನನ್ನ ಬೌಲಿಂಗ್ ಆ್ಯಕ್ಷನ್ ಟೀಕಿಸುತ್ತಿರುವುದು ಅವರು ಒತ್ತಡದಲ್ಲಿರುವ ಕಾರಣ. ಫೆಬ್ರವರಿ 15 ರಂದು ಭಾರತ ಮತ್ತು ಪಾಕಿಸ್ತಾನ್ ಮುಖಾಮುಖಿಯಾಗಲಿದೆ. ಈ ಪಂದ್ಯಕ್ಕೂ ಮುನ್ನವೇ ಭಾರತೀಯ ಬ್ಯಾಟರ್​ಗಳು ಒತ್ತಡದಲ್ಲಿದ್ದಾರೆ. ಅದಕ್ಕಾಗಿಯೇ ಅವರು ನನ್ನ ಬೌಲಿಂಗ್ ಬಗ್ಗೆ ಚರ್ಚಿಸುತ್ತಿದ್ದಾರೆ ಎಂದು ಉಸ್ಮಾನ್ ತಾರಿಖ್ ಹೇಳಿದ್ದಾರೆ.

ಇನ್ನು ಉಸ್ಮಾನ್ ತಾರಿಖ್ ಅವರ ಬೌಲಿಂಗ್ ಆ್ಯಕ್ಷನ್ ಬಗ್ಗೆ ಮೊದಲಿಗೆ ಪ್ರಶ್ನೆಗಳನ್ನೆತ್ತಿದ್ದು ಆಸ್ಟ್ರೇಲಿಯಾದ ಕ್ಯಾಮರೋನ್ ಗ್ರೀನ್. ಪಾಕ್ ವಿರುದ್ಧದ ಟಿ20 ಸರಣಿಯ 2ನೇ ಪಂದ್ಯದಲ್ಲಿ ತಾರಿಖ್ ಎಸೆತದಲ್ಲಿ ಔಟಾದ ಬಳಿಕ ಗ್ರೀನ್ ಅವರ ಬೌಲಿಂಗ್ ಆ್ಯಕ್ಷನ್ ಬಗ್ಗೆ ಅಸಮಾಧಾನ ವ್ಯಕ್ತಪಡಿಸುತ್ತಿರುವ ವಿಡಿಯೋ ವೈರಲ್ ಆಗಿತ್ತು.

ಇದನ್ನೂ ಓದಿ: ಪಾಕ್ ಸ್ಪಿನ್ನರ್​ನ ಬೌಲಿಂಗ್ ಆ್ಯಕ್ಷನ್ ಕಾನೂನು ಬದ್ಧವೇ? ಅಂಪೈರ್ ಹೇಳಿದ್ದೇನು?

ಇದೀಗ ಟಿ20 ವಿಶ್ವಕಪ್​ನಲ್ಲೂ ಪೋಝ್ ಎಸೆತಗಳ ಮೂಲಕ ಉಸ್ಮಾನ್ ತಾರಿಖ್ ಬ್ಯಾಟರ್​ಗಳನ್ನು ಕಾಡುತ್ತಿದ್ದಾರೆ. ಹೀಗಾಗಿಯೇ ಇದೀಗ ಪಾಕಿಸ್ತಾನ್ ಸ್ಪಿನ್ನರ್​ನ ಬೌಲಿಂಗ್ ಆ್ಯಕ್ಷನ್ ಬಗ್ಗೆ ಚರ್ಚೆಗಳು ನಡೆಯುತ್ತಿದೆ. ಇದಾಗ್ಯೂ ತನ್ನ ಬೌಲಿಂಗ್​ಗೆ ಐಸಿಸಿ ಕಡೆಯಿಂದಲೇ ಕ್ಲೀನ್ ಚಿಟ್ ಸಿಕ್ಕಿದ್ದು, ಹೀಗಾಗಿ ಈ ಬಗ್ಗೆ ಚರ್ಚಿಸುವುದರಲ್ಲಿ ಅರ್ಥವಿಲ್ಲ ಎಂದು ಉಸ್ಮಾನ್ ತಾರಿಖ್ ಸ್ಪಷ್ಪಪಡಿಸಿದ್ದಾರೆ.

Published On - 8:58 am, Thu, 12 February 26